Search
Thursday 6 August 2020
  • :
  • :

ಸುವರ್ಣಾವತಾರ ಭಾಗ – 4

ಶ್ರೀ ಜಗನ್ನಾಥ ಮಿಶ್ರ ಮತ್ತು ಶ್ರೀಮತಿ ಶಚಿದೇವಿ ಅವರ ಆನಂದಕ್ಕೆ ಪಾರವೇ ಇಲ್ಲ. ಮಗುವಿನ ಸುಂದರ ಮುಖ ನೋಡುತ್ತಾ ಅಮಿತ ಸಂತಸದಿಂದ ಬೀಗಿದರು. ಪರವಶಗೊಂಡ ಮಹಿಳೆಯರು ಏನೂ ತೋಚದಂತೆ ಮೂಕಸ್ಮಿತರಾಗಿ ಮಗುವಿನ ಸುತ್ತ ನೆರೆದರು. ಭಾವೋದ್ರೇಕದಿಂದ  ಹರ್ಷೋದ್ಗಾರಗೈದರು. ಬಂಧುಗಳು, ಮಿತ್ರರು ನವಜಾತನನ್ನು ನೋಡಲು ನಾ ಮುಂದು ತಾ ಮುಂದು ಎಂದು ಓಡೋಡಿ ಬಂದರು. ಶ್ರೀ ಜಗನ್ನಾಥ ಮಿಶ್ರರ ಗೃಹವು ಜಯೋನ್ಮತ್ತೆಯ ದೃಶ್ಯವನ್ನು ಬಿಂಬಿಸುತ್ತಿತ್ತು.

ಸೀತಾ ಠಾಕೂರಾಣಿ ಕರೆದರು ‘ನಿಮಾಯ್’

ಶ್ರೀ ಚೈತನ್ಯ ಮಹಾಪ್ರಭು ಆವಿರ್ಭವಿಸಿದ ಕೆಲ ದಿನಗಳ ನಂತರ, ಒಂದು ದಿನ ಅದ್ವೈತ ಆಚಾರ್ಯರ ಪತ್ನಿ ಸೀತಾದೇವಿ ಈ ಅನುರೂಪವಾದ ಮಗುವನ್ನು ನೋಡಲು ಬಂದರು. ಇಡೀ ಜಗತ್ತಿನ ಗೌರವಕ್ಕೆ ಪಾತ್ರರಾದ ಸೀತಾದೇವಿ ತಮ್ಮ ಪತಿಯ ಅನುಮತಿ ಪಡೆದು, ಎಲ್ಲ ಬಗೆಯ ಉಡುಗೊರೆ ಪಿಡಿದು, ಶಚಿದೇವಿಯ ಸುಂದರ ಪುತ್ರನನ್ನು ಕಾಣಲು ಕಾತರಿಸಿ ಬಂದರು. ವಸ್ತ್ರಗಳಿಂದ ಮುಚ್ಚಿದ್ದ ಪಲ್ಲಕ್ಕಿಯಲ್ಲಿ ಬಂದ ಅವರೊಂದಿಗೆ ಸೇವಕಿಯರಿದ್ದರು. ಹೊಸ ಹುಲ್ಲು, ಭತ್ತ, ಗೋರೋಚನ, ಅರಿಶಿನ, ಕುಂಕುಮ ಮತ್ತು ಶ್ರೀ ಗಂಧದಂತಹ ಅನೇಕ ಮಂಗಳಕರ ವಸ್ತುಗಳೊಂದಿಗೆ ಶ್ರೀ ಜಗನ್ನಾಥ ಮಿಶ್ರ ಅವರ ಮನೆ ಪ್ರವೇಶಿಸಿದರು. ಈ ಎಲ್ಲ ಉಡುಗೊರೆಗಳು ದೊಡ್ಡ ಬುಟ್ಟಿಯನ್ನೇ ತುಂಬಿತ್ತು. ಅನೇಕ ರೀತಿಯ ತಿನಿಸು, ಉಡುಪು, ಮತ್ತಿತರ ಉಡುಗೊರೆಯೊಂದಿಗೆ ಶಚಿದೇವಿ ಮನೆಗೆ ಬಂದ ಸೀತಾ ಠಾಕೂರಾಣಿ ನವಜಾತನನ್ನು ನೋಡಿ ಚಕಿತರಾದರು. ಬಣ್ಣದ ವ್ಯತ್ಯಾಸ ಒಂದು ಬಿಟ್ಟರೆ ಮಗುವು ಗೋಕುಲದ ಕೃಷ್ಣನೇ ಎಂದು ಅವರು ಉದ್ಗರಿಸಿದರು. ಅಲೌಕಿಕ ದೈಹಿಕ ತೇಜಸ್ಸು , ಮಂಗಳಕರ ಚಿಹ್ನೆಗಳೊಂದಿಗೆ ಆವರಿಸಿದ್ದ ಅದ್ಭುತ ಅವಯವಗಳು ಹಾಗೂ ಚಿನ್ನದ ಹೊಳಪಿನ ರೂಪವನ್ನೇ ಹೋಲುವ ಮಗುವನ್ನು ಕಂಡು ಸೀತಾದೇವಿ ಪುಳಕಿತರಾದರು. ಮಾತೆಯ ಪ್ರೀತಿ ವಾತ್ಸಲ್ಯ ಕಾರಣ ಅವರಿಗೆ ಹೃದಯ ಕರಗಿದಂತಾಯಿತು . ಹೊಸ ಹುಲ್ಲು ಮತ್ತು ಭತ್ತವನ್ನು ಮಗುವಿನ ಶಿರದ ಮೇಲಿರಿಸಿ ‘ದೀರ್ಘಾಯುಷ್ಮಂತನಾಗು’ ಎಂದು ಹರಸಿದರು. ದೆವ್ವಗಳ ಭಯದ ಕಾರಣ ಅವರು ಮಗುವಿಗೆ ನಿಮಾಯ್ ಎಂದು ಹೆಸರಿಟ್ಟರು. ಅಂತಹ ಅಮಂಗಳಕರ ಜೀವಿಗಳು ಬೇವಿನ ಮರದ ಬಳಿ ಸುಳಿಯುವುದಿಲ್ಲ ಎಂಬ ನಂಬಿಕೆ ಇದೆ. ಬೇವು ಪೂತಿನಾಶಕ ಶಕ್ತಿ (ಆಂಟಿಸೆಪ್ಟಿಕ್) ಹೊಂದಿದೆ ಎಂದು ವೈದ್ಯಕೀಯವಾಗಿಯೇ ಅಂಗೀಕಾರವಾಗಿದೆ. ಈ ಮೊದಲೆಲ್ಲ ಮನೆ ಮುಂದೆ ಬೇವಿನ ಮರ ಬೆಳೆಸುವುದು ಸಂಪ್ರದಾಯವಾಗಿತ್ತು. ಬೇವಿನ ಮರದ ಈ ಎಲ್ಲ ಪೂತಿನಾಶಕ ಗುಣ ಹಾಗೂ ಶ್ರೀ ಚೈತನ್ಯರು ಬೇವಿನ ಮರದಡಿ ಹುಟ್ಟಿದ್ದರಿಂದ ಸೀತಾದೇವಿ ಮಗುವಿಗೆ ನಿಮಾಯ್ ಎಂದು ಹೆಸರಿಸಿದರು.

ಶ್ರೀ ಚೈತನ್ಯರ ಜಾತಕ

ಶ್ರೀಮತಿ ಶಚಿದೇವಿ ಅವರ ತಂದೆ ಶ್ರೀ ನೀಲಾಂಬರ ಚಕ್ರವರ್ತಿಯವರು ಮಗುವಿನ ಜ್ಯೋತಿಶ್ಶಾಸ್ತ್ರ ನಕ್ಷೆಯ ಪ್ರತಿ ಗೃಹದಲ್ಲೂ ಗೂಢ ಮತ್ತು ಅದ್ಭುತ ಚಿಹ್ನೆಗಳನ್ನು ಕಂಡರು. ಮಗುವಿನ ಸೌಂದರ್ಯ ಮತ್ತು ದೇಹದ ಮೇಲೆ ಎಲ್ಲ ದೈವಿಕ ಚಿಹ್ನೆಗಳನ್ನು ಕಂಡು ಅವರು ದಿಗ್ಮೂಢರಾದರು. ದಂಗಾಗಿಹೋದರು. ಸ್ವತಃ ಜ್ಯೋತಿಶಾಸ್ತ್ರ ಪಂಡಿತರಾದ ಚಕ್ರವರ್ತಿಯವರು ನೆರೆದಿದ್ದವರಿಗೆ ಮಗುವಿನ ಜಾತಕ ನಕ್ಷೆಯಲ್ಲಿನ ವಿಶೇಷಗಳ ವಿವರಣೆ ನೀಡಲಾರಂಭಿಸಿದರು. ಮಗುವಿನ ಉನ್ನತ ನಕ್ಷೆಯನ್ನು ಪರಿಶೀಲಿಸಿದಷ್ಟೂ ಅವರಿಗೆ ಮಗುವಿನ ವೈಭವ ಸ್ಥಾನವನ್ನು ವರ್ಣಿಸುವುದು ಕಷ್ಟವೆನ್ನಿಸಿತು. ‘ವಾಸ್ತವವಾಗಿ ಮಗುವಿನ ಜಾತಕದಲ್ಲಿ ಕಂಡುಬರುವ ಗುಣಗಳು ರಾಜನಿಗೂ ಹೊರತಾದುದು. ನಿಜ ಹೇಳಬೇಕೆಂದರೆ ಅವು ವರ್ಣನಾತೀತ. ಮಗುವು ದೇವತೆಗಳ ಗುರು ಬೃಹಸ್ಪತಿಯ ಜ್ಞಾನವನ್ನು ಜಯಿಸುತ್ತಾನೆ. ಅತಿ ಶ್ರೇಷ್ಠ ವಿದ್ವಾಂಸನಾಗುತ್ತಾನೆ. ಎಲ್ಲ ದೈವಿಕ ಗುಣಗಳಿಗೆ ಅವನು ಸ್ವಾಭಾವಿಕ ಕೋಠಿಯಾಗುತ್ತಾನೆ.’

ಅಲ್ಲಿ ನೆರೆದಿದ್ದವರಲ್ಲಿ ಬ್ರಾಹ್ಮಣ ವೇಷದ ಶ್ರೇಷ್ಠ ಸಂತರೊಬ್ಬರಿದ್ದರು. ಶ್ರೀಚೈತನ್ಯರ ಭವಿಷ್ಯವಾಣಿ ಮಾಡಿದರು. ಆ ಬ್ರಾಹ್ಮಣರು ನುಡಿದರು: ಈ ಮಗುವು ದೇವೋತ್ತಮ ಶ್ರೀ ನಾರಾಯಣನೇ ಆಗಿದ್ದಾನೆ. ಅವನು ಎಲ್ಲ ಧರ್ಮಗಳ ಪರಮ ಸತ್ವವನ್ನು ಸ್ಥಾಪಿಸುವನು. ಅವನು ಅದ್ಭುತವಾದ ಬೋಧನಾ ಪ್ರವರ್ತಕನಾಗುವನು ಮತ್ತು ಇಡೀ ಜಗತ್ತಿಗೇ ಅದನ್ನು ತಲುಪಿಸುವನು.  ಬ್ರಹ್ಮ , ಶಿವ ಮತ್ತು ಶ್ರೀಲ ಸುಖದೇವ ಗೋಸ್ವಾಮಿ ಅವರೂ ಸದಾ ಅಪೇಕ್ಷಿಸುವಂತಹ ಉಡುಗೊರೆಯನ್ನು ಅವನು ಎಲ್ಲರಿಗೂ ಅನುಗ್ರಹಿಸುತ್ತಾನೆ. ಅವನನ್ನು ನೋಡಿದ ಮೇಲೆ ಜನರು ಎಲ್ಲ ಜೀವಿಗಳ ಬಗೆಗೂ ಕರುಣಾಮಯಿಗಳಾಗುತ್ತಾರೆ ಹಾಗೂ ಲೌಕಿಕ ಸಂತೋಷ, ನೋವುಗಳಿಗೆ ನಿಷ್ಕರುಣರಾಗುತ್ತಾರೆ. ಇದು ಇಡೀ ಜಗತ್ತಿಗೆ ಅತಿ ದೊಡ್ಡ ಅನುಗ್ರಹ , ಉಪಕಾರ. ಸಾಮಾನ್ಯರ ವಿಷಯವಿರಲಿ, ಕಟ್ಟಾ ನಾಸ್ತಿಕರೂ ಈ ಮಗುವಿನ ಪಾದಕಮಲವನ್ನು ಪೂಜಿಸುತ್ತಾರೆ. ಇಡೀ ಸೃಷ್ಟಿಯಲ್ಲೇ ಇವನ ವೈಭವ ಕೊಂಡಾಡಲಾಗುತ್ತದೆ. ಬದುಕಿನ ಎಲ್ಲ ಸ್ತರದ ಜನರೂ ಅವನನ್ನು ಪೂಜಿಸಲು ಬರುತ್ತಾರೆ.

ಇವನು ಶುದ್ಧ ಭಾಗವತ ಧರ್ಮ, ಸನಾತನ ಧರ್ಮ , ದೇವೋತ್ತಮ ಪರಮ ಪುರುಷ ಶ್ರೀ ಶ್ರೀ ರಾಧಾ ಕೃಷ್ಣನ ಜೊತೆಗಿನ ಬಾಂಧವ್ಯದ ಹಿನ್ನೆಲೆಯಲ್ಲಿ ಎಲ್ಲ ಚಿರಂತನ ಆತ್ಮಗಳ ಸಾಕಾರ ಮೂರ್ತಿಯೇ. ಬ್ರಾಹ್ಮಣರ, ಹಸುಗಳ, ಭಕ್ತರ ಪೋಷಕ, ತನ್ನ ಮಾತಾ ಪಿತೃಗಳ ಪ್ರೀತಿಯ, ನಿಷ್ಠಾವಂತ ಪುತ್ರ. ಶ್ರೀಮನ್ ನಾರಾಯಣನು ಧಾರ್ಮಿಕ ತತ್ವಗಳ ಪುನರ್ ಸ್ಥಾಪನೆಗೆ ಅವತರಿಸಿದಂತೆ ಶ್ರೇಷ್ಠ ಕಾರ್ಯಗಳಿಗಾಗಿ ಈ ಮಗುವು ಜನ್ಮ ನೀಡಿದೆ. ಈ ಮಗುವಿನ ಉನ್ನತ ಭವಿಷ್ಯ ಮತ್ತು ಗೂಢ ಲಕ್ಷಣಗಳ ಪ್ರಾಮುಖ್ಯವನ್ನು ಯಾರು ವಿವರಿಸಬಲ್ಲರು? ಶ್ರೀ ಜಗನ್ನಾಥ ಮಿಶ್ರರೇ, ನೀವೆಷ್ಟು ಅದೃಷ್ಟವಂತರು. ಈ ಮಗುವಿನ ಪ್ರಖ್ಯಾತ ತಂದೆಯಾದ ನಿಮಗೆ ವಂದಿಸುವೆ’.

ತಮ್ಮ ಮಗನ ವರ್ಣನೆಯಿಂದ ಶ್ರೀ ಜಗನ್ನಾಥ ಮಿಶ್ರ ಅವರು ಭಾವೋತ್ಕರ್ಷಗೊಂಡರು. ತಕ್ಷಣ ಆ ಬ್ರಾಹ್ನಣರಿಗೆ ಉಡುಗೊರೆ ನೀಡಬೇಕೆನಿಸಿತು. ಜಗನ್ನಾಥರು ಬಡ ಬ್ರಾಹ್ಮಣ. ಆದರೂ ಅತ್ಯುತ್ಸಾಹದಿಂದ ಶ್ರೀ ಮಿಶ್ರ ಅವರು ಆ ಬ್ರಾಹ್ಮಣರ ಕಾಲಿಗೆರಗಿ ಆನಂದಭಾಷ್ಪ ಹರಿಸಿದರು. ಆ ಬ್ರಾಹ್ಮಣ ಕೂಡ ಶ್ರೀ ಮಿಶ್ರ ಅವರ ಕಾಲಿಗೆರಗಿದರು. ನೆರೆದಿದ್ದವರೆಲ್ಲ ಹರ್ಷಾತಿರೇಕದಿಂದ ‘ಹರಿ’ ‘ಹರಿ’ ಎಂದು ಪಠಿಸತೊಡಗಿದರು. ಮಗುವಿನ ಭವಿಷ್ಯ ಕುರಿತಂತೆ ಅಭೂತಪೂರ್ವ ಮಾತುಗಳನ್ನು ಕೇಳಿ ಬಂಧುಗಳೂ ಮಿತ್ರರೂ ಮಗುವನ್ನು ಕೊಂಡಾಡಿದರು. ಶುಭ ಹಾರೈಸಿದರು.

ಅನಂತರ ಸಂಗೀತಗಾರರು ಆಗಮಿಸಿದರು. ಮೃದಂಗ, ಕೊಳಲು, ಶೆಹನಾಯ್ ವಾದನಗಳಿಂದ ಇಂಪಾದ ಸಂಗೀತ ಪಸರಿಸಿತು. ಉನ್ನತ ಗ್ರಹಗಳಿಂದ ಬಂದಿದ್ದ ಮಹಿಳೆಯರು ಯಾರ ಗಮನಕ್ಕೂ ಬಾರದಂತೆ ಈ ಲೋಕದ ಸ್ತ್ರೀಯರೊಂದಿಗೆ ಮುಕ್ತವಾಗಿ ಬೆರೆತು ಸಂತೋಷದಲ್ಲಿ ಭಾಗಿಯಾದರು. ದೇವತೆಗಳ ಮಾತೆ ಅದಿತಿಯು ಮಂಗಳಕರವಾದ ಹುಲ್ಲು ಮತ್ತು ಭತ್ತವಿದ್ದ ಬಲಗೈಯನ್ನು ಮಗುವಿನ ಶಿರದಮೇಲಿಟ್ಟು, ಮುಗುಳ್ನಗುತ್ತ, ‘ಚಿರಂಜೀವಿಯಾಗು’ ಎಂದು ಹರಸಿದರು. ‘ಈ ಲೌಕಿಕ ಜಗತ್ತಿನಲ್ಲಿ ಶಾಶ್ವತವಾಗಿರು ಮತ್ತು ನಿನ್ನ ಲೀಲೆಯನ್ನು ವಿಷದಪಡಿಸು.’ ಎಂದು ತಮ್ಮ ಹಾರೈಕೆಯನ್ನು ವಿವರಿಸಿದರು.

ಶ್ರೀಮತಿ ಶಚಿದೇವಿ ಮತ್ತಿತರ ಮಹಿಳೆಯರು ಈ ದೇವ ಸ್ರ್ತೀಯರ ಅನುಪಮ ಸೌಂದರ್ಯ ಕಂಡರೂ ಅವರ ಪರಿಚಯ ಕೇಳಲು ಹಿಂಜರಿದರು. ದೇವತಾ ಸ್ತ್ರೀಯರು ಗೌರವದಿಂದ ಶಚಿದೇವಿ ಪಾದಗಳಿಗೆರಗಿ ದೂಳು ಪಡೆದು ಹಚ್ಚಿಕೊಂಡರು.

ಶ್ರೀ ಚೈತನ್ಯರ ಆರಂಭದ ಲೀಲೆ

ಮಗುವಾಗಿ ಶ್ರೀಚೈತನ್ಯರು ಪದೇ ಪದೆ ಗಟ್ಟಿಯಾಗಿ ಅಳುತ್ತಿದ್ದರು. ಆದರೆ ಅವರ ಈ ಅಳುವಿನ ಮುಖ್ಯ ಉದ್ದೇಶವೆಂದರೆ ದೇವರ ಪೂಜ್ಯ ನಾಮ ಸ್ಮರಣೆ. ಮಹಿಳೆಯರು ಮಗುವನ್ನು ಸಮಾಧಾನ ಪಡಿಸಲು ನಾನಾ ರೀತಿ ಪ್ರಯತ್ನಿಸದರೂ ಅಳು ನಿಲ್ಲುತ್ತಿರಲ್ಲಿಲ್ಲ. ಆದರೆ ಈ ಸ್ತ್ರೀಯರು ಹರಿ ಹರಿ ಎಂದು ಪಠಿಸತೊಡಗಿದ ಕೂಡಲೇ ಮಗುವಿನ ಚಂದ್ರಮೊಗದಲ್ಲಿ ನಸುನಗೆ ಕಾಣಿಸುತ್ತಿತ್ತು. ಹರಿನಾಮ ಪಠಣ ಮಗುವಿಗೆ ಖುಷಿ ನೀಡುವುದೆಂದು ಅರಿವಾಗುತ್ತಿದ್ದಂತೆ ಅವರೆಲ್ಲ ಅವನಿದ್ದ ಕೋಣೆ ಒಳಗೆ ಸೇರಿ ಚಪ್ಪಾಳೆ ತಟ್ಟುತ್ತಾ ಹರಿನಾಮ ಸಂಕೀರ್ತನೆಯಲ್ಲಿ ತೊಡಗುತ್ತಿದ್ದರು. ಈ ರೀತಿ ಶ್ರೀಮತಿ ಶಚಿದೇವಿ ಅವರ ಮನೆ ಮಗುವಿನ ಅಲೌಕಿಕ ನಾಮ ಸಂಕೀರ್ತನೆಯಿಂದ ದ್ವನಿಸುತ್ತಿತ್ತು. ಯಾರ ಅರಿವಿಗೂ ಬಾರದಂತೆ ಶ್ರೀ ಜಗನ್ನಾಥ ಮಿಶ್ರ ಅವರ ಮನೆಯಲ್ಲಿ ಶ್ರೀಚೈತನ್ಯರ ಬಾಲ್ಯವು ಗೋಪಾಲ ಕೃಷ್ಣನ ಲೀಲೆಯ ಪಡಿಯಚ್ಚಾಗಿತ್ತು. ಯಾರೂ ಇಲ್ಲದಾಗ ಅವನು ಉದ್ದೇಶಪೂರ್ವಕವಾಗಿ ಹಾಲು, ಬೆಣ್ಣೆ ಅಥವಾ ತೈಲವನ್ನು ನೆಲದ ಮೇಲೆ ಸುರಿಯುತ್ತಿದ್ದ. ತಾಯಿ ಶಚಿದೇವಿ ಬರುತ್ತಿದ್ದಾಳೆಂದು ತಿಳಿದ ಕೂಡಲೇ ಅವನು ತಕ್ಷಣ ಮಲಗಿ ಅಳಲಾರಂಭಿಸುತ್ತಿದ್ದ.

ಶಚಿದೇವಿ ಅವನನ್ನು ಸಮಾಧಾನಪಡಿಸುತ್ತ ಹರಿನಾಮ ಪಠಿಸುತ್ತಿದ್ದರು. ನೆಲದ ಮೇಲೆ ಚೆಲ್ಲಿದ್ದ ವಸ್ತುಗಳನ್ನು ಕಂಡು ಚಕಿತರಾಗಿ ‘ಯಾರು ಅಕ್ಕಿ, ಗೋ, ಬೇಳೆಯನ್ನು ಹರಡಿರುವುದು? ಹಾಲು ಮೊಸರಿದ್ದ ಮಡಕೆಗಳೇಕೆ ಒಡೆದಿವೆ?’ ಎಂದು ಅವರು ಕೇಳುತ್ತಿದ್ದರು. ಅದನ್ನು ಮಾಡಿದವರಾರೆಂದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅಲ್ಲಿದದ್ದು ನಾಲ್ಕು ತಿಂಗಳ ಮಗು ಮಾತ್ರ. ಕುತೂಹಲದಿಂದ ಎಲ್ಲರೂ ಕೋಣೆಯೊಳಗೆ ಬಂದರೂ ಯಾರಿಗೂ ಅಪರಾಯನ್ನು ಪತ್ತೆ ಹಚ್ಚಲಾಗಲಿಲ್ಲ.

ಯಾರೋ ಉದ್ಗರಿಸಿದರು : ‘ದೆವ್ವ ಬಂದಿರಬೇಕು. ಮಂತ್ರಗಳ ಪ್ರಭಾವದ ಕಾರಣ ಅವು ಮಗುವಿಗೆ ಏನೂ ಅಪಾಯ ತಂದೊಡ್ಡಿಲ್ಲ. ಮಗುವಿಗೆ ಏನೂ ಮಾಡಲಾಗದ ಅಸಹಾಯಕತೆ, ಕೋಪದಿಂದ ಎಲ್ಲವನ್ನೂ ಚೆಲ್ಲಿ ಓಡಿಹೋಗಿದೆ’. ಈ ಪ್ರಸಂಗವು ಶ್ರೀ ಮಿಶ್ರ ಅವರನ್ನು ಸ್ವಲ್ಪ ಕಂಗೆಡೆಸಿದರೂ ಇದು ದೈವ ಸಂಕಲ್ಪವೆಂದು ಭಾವಿಸಿ ಏನೂ ಪ್ರತಿಕ್ರಿಯಿಸಲಿಲ್ಲ. ಆದರೂ ಅಪಾಯ ಕಂಡಿದ್ದರೂ ಮಿಶ್ರ ದಂಪತಿ ಮಗುವಿನ ಮುಖ ನೋಡಿ ತಮ್ಮ ದುಃಖ ಮರೆತರು.

ಮಗುವಿನ ನಾಮಕರಣ

ಶ್ರೀ ಚೈತನ್ಯರು ನೆಡೆಯಲಾರಂಭಿಸಿದಾಗ ಅವರ ಪುಟ್ಟ ಪಾದಗಳ ಗುರುತಿನಲ್ಲಿ ಶ್ರೀ ವಿಷ್ಣುವಿನ ವಿಶೇಷ ಚಿಹ್ನೆಗಳಾದ ಧ್ವಜ, ಸಿಡಿಲು, ಶಂಖ, ಚಕ್ರ, ಮತ್ಸ್ಯ ಕಾಣುತ್ತಿತ್ತು. ಈ ಗುರುತುಗಳನ್ನು ಕಂಡಾಗ ಅವನ ತಂದೆ ಅಥವಾ ತಾಯಿಗೆ ಅದು ಯಾರ ಗುರುತುಗಳೆಂದು ತಿಳಿಯುತ್ತಿರಲಿಲ್ಲ. ಈ ರೀತಿ ಆಶ್ಚರ್ಯ ಚಕಿತರಾಗಿ ತಮ್ಮ ಮನೆಯಲ್ಲಿ ಇಂತಹ ಚಿಹ್ನೆಗಳು ಹೇಗೆ ಸಾಧ್ಯವಾಯಿತೆಂದು ಚಿಂತಿಸತೊಡಗಿದರು. ಜಗನ್ನಾಥ ಮಿಶ್ರರು ನುಡಿದರು : ‘ಖಂಡಿತ ಬಾಲಕೃಷ್ಣನು ಸಾಲಗ್ರಾಮ ಶಿಲೆಯ ಜೊತೆಗಿದ್ದಾನೆ. ತನ್ನ ಬಾಲ್ಯದ ರೂಪ ತಳೆದು ಅವನು ಈ ಕೋಣೆಯಲ್ಲಿ ಆಡುತ್ತಿದ್ದಾನೆ.’ ತಾಯಿ ಶಚಿ ಹಾಗೂ ತಂದೆ ಮಿಶ್ರ ಹೀಗೆ ಮಾತನಾಡುತ್ತಿದ್ದಾಗ ಮಗು ನಿಮಾಯ್ ಎದ್ದು ಅಳತೊಡಗಿದ. ಆಗ ತಾಯಿಯು ಮಗುವನ್ನು ತೊಡೆಯಮೇಲೆ ಮಲಗಿಸಿಕೊಂಡು ಮೊಲೆಯುಡಿಸಿದಳು. ಆಗ ಅವಳು ಮಗುವಿನ ಪಾದಕಮಲಗಳಲ್ಲಿ ಎಲ್ಲ ಗುರುತುಗಳನ್ನು ಕಂಡಳು. ತಕ್ಷಣ ಮಿಶ್ರ ಅವರನ್ನು ಕರೆದು ತೋರಿಸಿದಳು. ಮಗುವಿನ ಪಾದಗಳಲ್ಲಿ ಅದ್ಭುತ ಗುರುತುಗಳನ್ನು ಕಂಡು ಆನಂದಿಸಿದ ಮಿಶ್ರ ಅವರು ಖಾಸಗಿಯಾಗಿ ನೀಲಾಂಬರ ಚಕ್ರವರ್ತಿಯವರನ್ನು ಕರೆದರು. ಚಕ್ರವರ್ತಿ ಆ ಎಲ್ಲ ಗುರುತುಗಳನ್ನು ನೋಡಿದರು. ನಸುನಗುತ್ತಾ ಹೇಳಿದರು: ‘ಜ್ಯೋತಿಶಾಸ್ತ್ರದ ಲೆಕ್ಕಾಚಾರದಂತೆ ಇದನ್ನು ನಾನು ಮೊದಲೇ ಸ್ಪಷ್ಟಪಡಿಸಿಕೊಂಡಿದ್ದೆ. ಅದನ್ನು ಬರೆದು ಕೊಂಡೂ ಇದ್ದೆ. ಈ ಮಗುವಿನ ಪಾದಗಳಲ್ಲಿ  ಶ್ರೀಮನ್ ನಾರಾಯಣನ ಎಲ್ಲ ಲಕ್ಷಣಗಳೂ ಇವೆ. ಇವನು ಮೂರು ಲೋಕಗಳನ್ನು ಉದ್ಧರಿಸುವವನು. ವೈಷ್ಣವ ಪಂಥವನ್ನು ಬೋಸುವ ಇವನು ತಂದೆ ತಾಯಿ ಕುಟುಂಬಗಳೆರಡನ್ನೂ ಕೀರ್ತಿಗೊಳಿಸುತ್ತಾನೆ. ಮಗುವಿಗೆ ನಾಮಕರಣ ಮಾಡುವ ವಿ ನಡೆಸಬೇಕೆಂದು ಸೂಚಿಸುವೆ. ನಾವು ಹಬ್ಬದಂತೆ ಇದನ್ನು ಆಚರಿಸಬೇಕು, ಬ್ರಾಹ್ಮಣರನ್ನು ಕರೆಯಬೇಕು. ಇಂದೇ ಶುಭ ದಿನವಾಗಿರುವುದರಿಂದ ಎಲ್ಲ ಏರ್ಪಾಟು ಆಗಲಿ. ಭವಿಷ್ಯದಲ್ಲಿ ಮಗು ಇಡೀ ವಿಶ್ವವನ್ನೇ ರಕ್ಷಿಸಿ ಪೋಷಿಸುತ್ತಾನೆ. ಆದುದರಿಂದ ಅವನನ್ನು ವಿಶ್ವಂಭರ ಎಂದು ಕರೆಯಬೇಕು.’ ನೀಲಾಂಬರ ಚಕ್ರವರ್ತಿಗಳ ಭವಿಷ್ಯವಾಣಿ ಕೇಳಿ ಶಚಿ ಮಾತಾ ಹಾಗೂ ಮಿಶ್ರ ಅವರು ನಾಮಕರಣ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾದರು. ಎಲ್ಲ ಬ್ರಾಹ್ಮಣರು ಮತ್ತು ಅವರ ಪತ್ನಿಯರನ್ನು ಆಹ್ವಾನಿಸಿದರು.

ಶುಭ ಗಳಿಗೆಯಲ್ಲಿ, ಎಲ್ಲ  ಗ್ರಹಗಳೂ ಸೂಕ್ತವಾಗಿದ್ದಾಗ, ಭಗವದ್ಗೀತೆ, ಶ್ರೀಮದ್ ಭಾಗವತ ಮತ್ತು ವೇದಗಳನ್ನು ಬ್ರಾಹ್ಮಣರು ಪಠಿಸುತ್ತಿದ್ದಾಗ ನಾಮಕರಣ ಮಾಡಲಾಯಿತು. ದೇವತೆಗಳು ಮಾನವರೂ ಈ ಶುಭ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.ಅವರು ಶಂಖನಾದಗೈಯುತ್ತಾ ಶ್ರೀಹರಿಯ ವಿವಿಧ ನಾಮ ಸಂಕೀರ್ತನೆ ಮಾಡಿದರು. ಅಕ್ಕಿ, ಭತ್ತ, ಪುಸ್ತಕ, ಹುರಿದ ಊತ್ತ, ನಾಣ್ಯ, ಚಿನ್ನ ಬೆಳ್ಳಿಯನ್ನು ಮಗುವಿನ ಹತ್ತಿರ ಇರಿಸಲಾಯಿತು. ಮಗುವಿನ ಪ್ರವೃತ್ತಿ ನೋಡಲು ಈ ಪ್ರಯತ್ನ. ಮಿಶ್ರ ಮಗುವಿಗೆ ಉತ್ತೇಜನ ನೀಡಿದರು: ‘ನನ್ನ ಪ್ರೀತಿಯ ವಿಶ್ವಂಭರ, ನಿನಗೆ ಇಷ್ಟವಾದುದನ್ನು ತೆಗೆದುಕೋ. ‘ಶಚಿದೇವಿಯ ಪುತ್ರ ಎಲ್ಲವನ್ನೂ ತಿರಸ್ಕರಿಸಿ ಶ್ರೀಮದ್ ಭಾಗವತ ಅನ್ನು ತೆಗೆದುಕೊಂಡು ಅಪ್ಪಿಕೊಂಡ. ಮಹಿಳೆಯರು ಮಗುವನ್ನು ಕೊಂಡಾಡಿದರು. ಪ್ರತಿಯೊಬ್ಬರೂ ಸಂತಸದಿಂದ ’ ಇವನೊಬ್ಬ ದೊಡ್ಡ ವಿದ್ವಾಂಸನಾಗುತ್ತಾನೆ’ ಎಂದು ಉದ್ಗರಿಸಿದರು. ಅವನೊಬ್ಬ ಉತ್ಕೃಷ್ಟ ವೈಷ್ಣವ ಭಕ್ತನಾಗತ್ತಾನೆ  ಎಂದು ಉದ್ಗರಿಸಿದರು.

(ಮುಂದುವರಿಯುವುದು)

 
Leave a Reply

Your email address will not be published. Required fields are marked *