Search
Friday 29 October 2021
  • :
  • :

ಸೃಷ್ಟಿಯಲ್ಲಿ ನಾವು ಏಕಾಂಗಿಯೇ?

ಆಕ್ಟೋಬರ್ ೨೦೧೭ರಲ್ಲಿ ನಿಗೂಢ ವಸ್ತುವೊಂದು ಆಗಸದಲ್ಲಿ ಕಾಣಿಸಿಕೊಂಡಿತು. ಅದನ್ನು `ಓಮುವಾಮುವಾ’ (ಹವಾಯಿ ಭಾಷೆಯ ಬೇಹುಗಾರ) ಎಂದು ಕರೆದ ಅಮೇರಿಕೆಯ ವಿಜ್ಞಾನಿಗಳು ನಿರಂತರ ಹನ್ನೊಂದು ದಿನ ಅದರ ಅಧ್ಯಯನ ನಡೆಸಿದರು. ನಮ್ಮ ತಾರಾ ಮಂಡಲದ ಆಚೆಯಿಂದ ಬಂದ ಮೊದಲ ವಸ್ತು ಅದುವಾದರೂ, ಬಹುಪಾಲು ವಿಜ್ಞಾನಿಗಳು ಹೆಚ್ಚು ತಲೆ ಕೆಡಿಸಿಕೊಳ್ಳದೆ, ಅದು ಒಂದು ಧೂಮಕೇತು ಅಥವಾ ಕ್ಷುದ್ರಗ್ರಹವಿರಬೇಕು ಎಂದು ಕೈ ತೊಳೆದುಕೊಂಡರು. ಆದರೆ ಹಾರ್ವರ್ಡ ವಿಶ್ವವಿದ್ಯಾಲಯದ ಖಗೋಳವಿಜ್ಞಾನ ವಿಭಾಗದ ಮುಖ್ಯಸ್ಥ, ಭೌತಶಾಸ್ತ್ರಜ್ಞ ಅಬ್ರಾಹಂ ಲೆಬ್ ಹಾಗೆ ಭಾವಿಸಲಿಲ್ಲ. ಅವರೆಂದರು, “ಓಮುವಾಮುವಾವನ್ನು ಈ ಭೂಮಿಗೆ ಸೇರದ ನಾಗರಿಕತೆಯೊಂದು ಸೃಷ್ಟಿಸಿದೆ.” ವಸ್ತುವಿನ ಆಕಾರ, ಪ್ರಕಾಶಮಾನತೆ ಮತ್ತು ಮುಖ್ಯವಾಗಿ ಅದರ ಪಥವನ್ನು ವೀಕ್ಷಿಸಿದರೆ ಅದು ನಕ್ಷತ್ರದ ಬೆಳಕನ್ನು ಬಳಸಿಕೊಂಡು ವಾಹನವನ್ನು ಮುನ್ನೂಕುವ ಲೈಟ್ ಸೇಲ್ ನಂತಹುದು ಎಂದು ಅವರು ಮತ್ತೂ ಹೇಳಿದರು.

ಪ್ರಸ್ತುತಕ್ಕೆ ಈಗ ಗಮನ ಹರಿಸೋಣ. “ನಾನು ಮಂಗಳ ಗ್ರಹದಲ್ಲಿ ಸುರಕ್ಷಿತವಾಗಿದ್ದೇನೆ. `ಪರ್ಸಿವರೆನ್ಸ’ (ದೃಢ ಯತ್ನ) ನಿಮ್ಮನ್ನು ಎಲ್ಲಿಗೆ ಬೇಕಾದರು ಕರೆದೊಯ್ಯತ್ತದೆ” ಎಂದು ನಾಸಾ ಸಂಸ್ಥೆ ಮಂಗಳಕ್ಕೆ ಕಳೆಸಿದ `ಪರ್ಸಿವರೆನ್ಸ’ ನೌಕೆ ಫೆಬ್ರವರಿ, ೧೯, ೨೦೨೧ರಂದು ಟ್ವೀಟ್ ಮಾಡಿತು. `ಬಂಜರು’ ಕೆಂಪು ಗ್ರಹಕ್ಕೆ ನಾಸಾ ಸಂಸ್ಥೆ ಹಿಂದೆ ಅನೇಕ ನೌಕೆಗಳನ್ನು ಕಳೆಸಿದ್ದರೂ, ಪ್ರತಿ ಯಾತ್ರೆ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದರೂ, ಪ್ರಸ್ತುತದ ನೌಕೆ ವಿಶೇಷವಾದುದು. `ಹಿಂದೆ ಆಗಿಹೋದ ಸೂಕ್ಷ್ಮಜೀವಿಗಳ’ (ಮೈಕ್ರೋಬ್) ಉಳಿಕೆಗಳನ್ನು ಶೋಧಿಸಲು ಸಜ್ಜಾಗಿರುವ ಈ ನೌಕೆ, ವಿಜ್ಞಾನಿಗಳು ಅಧ್ಯಯನ ಮಾಡಲೆಂದು, ಅಲ್ಲಿಂದ ಸ್ವಲ್ಪ ಕಲ್ಲುಗಳನ್ನು ಭೂಮಿಗೆ ೨೦೩೦ರ ಆದಿ ಭಾಗದ ಹೊತ್ತಿಗೆ ತರಸಿಕೊಡುವ ಪ್ರಯತ್ನವನ್ನೂ ಪ್ರಾರಂಭಿಸಲಿದೆ. ಇದೆಲ್ಲದರ ಹಿಂದಿನ ಕೋಟಿ ರೂಪಾಯಿಯ ಸವಾಲು? “ಮಂಗಳನ ಅಂಗಳದಲ್ಲಿ ಹಿಂದೆಂದಾದರೂ ಜೀವ ಅಂಕುರಿಸಿತ್ತೇ?”

ಕ್ಷೀರಪಥ ನಕ್ಷತ್ರಪುಂಜದಲ್ಲಿರುವ (ಮಿಲ್ಕಿ ವೇ ಗ್ಯಾಲಕ್ಸಿ) ಕೋಟಿ ಕೋಟಿ ಸೂರ್ಯರಲ್ಲಿ ನಮ್ಮ ಸೂರ್ಯ ಒಂದು ಅಷ್ಟೇ. ಮತ್ತು ಇತರ ಕೋಟಿ ಕೋಟಿ ನಕ್ಷತ್ರಪುಂಜಗಳಲ್ಲಿ ನಮ್ಮ ಕ್ಷೀರಪಥ ನಕ್ಷತ್ರಪುಂಜವು ಒಂದು, ಅಷ್ಟೆ. ಬ್ರಹ್ಮಾಂಡದ ವಿಶಾಲತೆಯನ್ನು ಪರಿಗಣಿಸಿ ಕೆಲವು ವಿಜ್ಞಾನಿಗಳು `ನಮಗೆ ಗೊತ್ತೇ ಇಲ್ಲದಂತೆ ಬೇರೆ ಎಲ್ಲೋ ಕೂಡ ಜೀವಿಗಳಿರುವ ಸಾಧ್ಯತೆಗಳಿರಬಹುದಲ್ಲವೇ?’ ಎಂದು ಈಗ ಕೇಳುತ್ತಿದ್ದಾರೆ. ಬೃಹತ್ತಾದ ಇಡೀ ಸೃಷ್ಟಿಯಲ್ಲಿ ನಾವು ಮಾತ್ರ ಇರುವುದು ಎಂದು ಕಲ್ಪಿಸಿಕೊಳ್ಳುವುದು ಸ್ವಲ್ಪ ದುರಹಂಕಾರದ ಮಾತಾಗದೇ? ಆದರೆ ಕೆಲವರು, ಜೀವವು ಅಷ್ಟು ಸಾಮಾನ್ಯವಾಗಿದ್ದರೆ, ನಮಗೆ ಕಾಣುತ್ತಿರಲಿಲ್ಲವೆ ಎಂದು ವಾದಿಸಬಹುದು. ಇದಕ್ಕೆ ಉತ್ತರವಾಗಿ ಪ್ರೊ. ಲೆಬ್ ತಮ್ಮ ಹೊಸ ಪುಸ್ತಕ `ಭೂಮ್ಯತೀತ : ಭೂಮಿಯ ಆಚೆಗೆ ಬುದ್ಧಿ ಜೀವನದ ಮೊದಲ ಚಿಹ್ನೆ’ (ಎಕ್ಸ್ ಟ್ರಾ ಟೆರೆಸ್ಟ್ರಿಯಲ್: ದಿ ಫಸ್ಟ್ ಸೈನ್ ಆಫ್ ಇಂಟಲಿಜೆಂಟ್ ಲೈಫ್ ಬಿಯಾಂಡ್ ಅರ್ತ) ದಲ್ಲಿ ಹೇಳುತ್ತಾರೆ – “ಬೇರೆ ಕಡೆ ಜೀವದ ಪುರಾವೆಯ ಅನುಪಸ್ಥಿತಿ, ಜೀವದ ಅನುಪಸ್ಥಿತಿಯ ಪುರಾವೆ ಎಂದಲ್ಲ.” ಇತರ ತಾರಾ ಮಂಡಲಗಳಲ್ಲಿ ಇರಬಹುದಾದ ಜೀವಿಗಳ ಕುರಿತಾಗಲಿ, ಬಹಳ ಹಿಂದೆಯೇ ಅಳಿದು ಹೋದ ಜೀವಿಗಳನ್ನು ಕುರಿತಾಗಲಿ ಸಾಂದರ್ಭಿಕ ಪುರಾವೆ ಸಿಕ್ಕರೂ ಕೂಡ, ಅದು ನಮ್ಮ ಕ್ಲಿಷ್ಟವಾದ ಸಮಸ್ಯೆಗಳಿಗೆ ಸ್ಪಷ್ಟ ದೃಷ್ಟಿಕೋನವನ್ನು ಒದಗಿಸಲು, ಹೊಸ ತಂತ್ರಜ್ಞಾನಗಳ ಸಂಶೋಧನೆಗೆ ಸಹಾಯ ಮಾಡಲು, ಮತ್ತು ಭವಿಷ್ಯದ ಕಾಣದ ಅಪಾಯಗಳ ಬಗೆಗೂ ಅರಿವು ಮೂಡಿಸಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಅಷ್ಟೇ ಅಲ್ಲದೆ, ನಮಗೆ ಅನುಕೂಲಕರವಾದ ಗ್ರಹ ಸಿಕ್ಕರೆ ಅಲ್ಲೇಕೆ ವಾಸ ಹೂಡಬಾರದು ಎಂಬ ಆಲೋಚನೆಯೂ ಉಂಟು. ನಮ್ಮ ಬ್ರಹ್ಮಾಂಡದ ವಿಶಾಲತೆಯನ್ನು ಗಮನಿಸಿದರೆ, ಇತರ ಕಡೆಯೂ ಜೀವ ಇರುವುದು ಹೆಚ್ಚೂ ಕಮ್ಮಿ ಖಚಿತ ಎಂದು ವಿಜ್ಞಾನಿಗಳು ನಂಬುತ್ತಾರೆ. ನಾವು ನಮ್ಮ ಕಣ್ಣುಗಳನ್ನು ತೆರೆದು ನೋಡುವ ಮನಸ್ಸು ಮಾಡಬೇಕಷ್ಟೆ ಎನ್ನುತ್ತಾರೆ.

ಆದಾಗ್ಯೂ ವಿಜ್ಞಾನಿಗಳು ಕಿಂಚಿತ್ತೂ ಪೂರ್ವಗ್ರಹ ಪೀಡಿತರಾಗದೆ ಭಾರತದ ಪುರಾತನ ವೈದಿಕ ಸಾಹಿತ್ಯದತ್ತ ಸ್ವಲ್ಪ ಗಮನ ಹರಿಸಿದರೆ ಸಾಕು, ಅಲ್ಲಿ ಅವರು ಈ ಬ್ರಹ್ಮಾಂಡ ಸೃಷ್ಟಿಯ ಕುರಿತಂತೆ ನಿಜವಾದ ಅಮೂಲ್ಯ ಮಾಹಿತಿಯನ್ನು ಕಾಣಬಹುದು. ಭಾರತದ ಶ್ರೇಷ್ಠ ಮಹರ್ಷಿಗಳಾದ ಶ್ರೀ ವ್ಯಾಸದೇವ ಅವರು ಅನೇಕ ಗ್ರಂಥಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ಶ್ರೀಮದ್ ಭಾಗವತವು ಕೊನೆಯ ಕೊಡುಗೆ. ಭಾಗವತದ ೧೨ ಗ್ರಂಥಗಳ ಪೈಕಿ ೫ನೆಯ ಗ್ರಂಥದಲ್ಲಿ ಅವರು ಭೌತಿಕ ಮತ್ತು ಆಧ್ಯಾತ್ಮಿಕ ಲೋಕಗಳೆರಡರ ಬಗೆಗೂ ವಿವರವಾದ ಚಿತ್ರಣವನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಆ ಲೋಕಗಳಲ್ಲಿನ ಜನಜೀವನವನ್ನು ಕುರಿತೂ ವಿವರಿಸಿದ್ದಾರೆ. ಈ ಇಡೀ ಮಹಾಕಾವ್ಯವು ವ್ಯಾಸರ ಪುತ್ರ ಋಷಿ ಶುಕ ಮತ್ತು ಸಾವಿನ ಹೊಸ್ತಿಲಲ್ಲಿದ್ದ ರಾಜ ಪರೀಕ್ಷಿತನ ನಡುವೆ ನಡೆದ ಸಂವಾದದ ರೂಪದಲ್ಲಿದೆ. ವಿದ್ವಾಂಸರ ಗೌರವಾದರಗಳಿಗೆ ಪಾತ್ರವಾದ ಭಾಗವತವು ಕಳೆದ ಐದು ಸಾವಿರ ವರ್ಷಗಳಿಂದಲೂ ಆಧ್ಯಾತ್ಮಿಕ ಭಾರತದ ಪಥವನ್ನು ಬೆಳಗುತ್ತಿದೆ.

ಅಧಿಕೃತ ಭಾಗವತ ಪರಂಪರೆಯ ಪ್ರಕಾರ ಒಟ್ಟು ಸೃಷ್ಟಿಯಲ್ಲಿ ಭೌತಿಕ ಲೋಕವು ಕಾಲು ಭಾಗ ಮಾತ್ರ. ಉಳಿದ ಮುಕ್ಕಾಲು ಭಾಗ ಆಧ್ಯಾತ್ಮಿಕ ಲೋಕದಿಂದ ಮಾಡಲ್ಪಟ್ಟಿದೆ. ಆಧ್ಯಾತ್ಮಿಕ ಲೋಕಗಳಲ್ಲಿ ವಾಸಿಸುತ್ತಿರುವವರು ಮುಕ್ತ ಆತ್ಮರು. ಭೌತಿಕ ಲೋಕದ ಪ್ರತಿಯೊಂದು ಗ್ರಹವೂ ಜೀವಿಗಳಿಂದ ತುಂಬಿದೆ ಮತ್ತು ಕರ್ಮಾನುಸಾರ ವಿವಿಧ ಭೌತಿಕ ದೇಹ ಪಡೆದು ಆ ಗ್ರಹಗಳಲ್ಲಿ ಭೌತಿಕವಲ್ಲದ ಜೀವಿಗಳು ವಾಸಿಸುವರು. ಆಯಾ ಗ್ರಹಗಳ ಹವಾಮಾನ, ವಾಯುಗುಣಗಳಿಗೆ ಅನುಗುಣವಾಗಿ ಅಲ್ಲಿನ ನಿವಾಸಿಗಳು ತಮ್ಮ ತಮ್ಮ ಶರೀರವನ್ನು ಹೊಂದಿದ್ದಾರೆ. ಭೂಮಿಯ ಮೇಲೆ ಕೂಡ ಮೀನು ಜಲದಲ್ಲಿ ಜೀವಿಸಲು ತಕ್ಕುನಾದ ದೇಹವನ್ನು ಮತ್ತು ಪಕ್ಷಿಯು ವಾಯುವಿನಲ್ಲಿ ಸಂಚರಿಸುವಂತಹ ಶರೀರವನ್ನು ಹೊಂದಿವೆಯಲ್ಲವೇ? ಆದುದರಿಂದ ಸೂರ್ಯ ಲೋಕದ ವಾಸಿಯು ಬೆಂಕಿಯ ದೇಹ ಹೊಂದಿರಬಹುದು ಮತ್ತು ಚಂದ್ರ ಅಥವಾ ಮಂಗಳ ಲೋಕದ ನಿವಾಸಿಯು ಅಲ್ಲಿರಲು ತಕ್ಕ ಶರೀರ ಹೊಂದಿರಬಹುದು. ಆದುದರಿಂದ ಜೀವನ ಅವಲಂಬನೆಗೆ ಭೂಮಿಯಲ್ಲಿರುವಂತಹ ಸ್ಥಿತಿಯೇ ಸೂಕ್ತವಾದುದು ಎಂದು ಹೇಳುವುದು ಮೂರ್ಖತನವಾದೀತು.

ನನ್ನ ಮೇಜಿನ ಮೇಲೆ ಒಂದು ಪುಟ್ಟ ಇರುವೆಯು ತನ್ನ ದ್ವಿ ಆಯಾಮದ ಲೋಕದಲ್ಲಿ ಹರಿದಾಡುತ್ತಿದೆ. ಅದರ ಸಮೀಪದಲ್ಲಿಯೇ ನಾನು ಇದ್ದರೂ ಅದು ಅರಿಯದು. ಇರುವೆಯು ನಮ್ಮ ಮೂರು ಆಯಾಮದ ಲೋಕದೊಳಗೆ ಜೀವಿಸುತ್ತಿದ್ದರೂ ಅದಕ್ಕೆ ಅದರ ಅರಿವಿಲ್ಲ. ಇದು ನನಗೆ `ಜುರಾಸಿಕ್’ ಸಿನಿಮಾದ ದೃಶ್ಯವೊಂದನ್ನು ನೆನಪಿಸುತ್ತದೆ. ಅದರಲ್ಲಿನ ಪಾತ್ರವೊಂದು ಡೈನೋಸಾರ್‌ನ ಬೃಹತ್ ಹೆಜ್ಜೆ ಗುರುತಿನ ಒಳಗೆ ಇಳಿದುಹೋಗಿ ಅದನ್ನು ಒಂದು ಸಾಮಾನ್ಯ ಕುಳಿ ಎಂದು ಭಾವಿಸುತ್ತಾನೆ. ನನ್ನನ್ನು ಅಚ್ಚರಿಗೊಳಿಸುವ ವಿಷಯವೆಂದರೆ ನಮ್ಮ ಈ ಭೂಮಿಯ ಮೇಲೆ ಕೂಡ ಹೊಸ ಹೊಸ ಜೀವಜಾತಿಗಳನ್ನು ಕಂಡುಹಿಡಿಯುವ ನಮ್ಮ ಸಂಶೋಧನೆಗೆ ಕೊನೆಯೇ ಇಲ್ಲ ಎನ್ನುವುದು. ವಿಜ್ಞಾನಿಗಳು ಕೆಲವು ತಿಂಗಳಿಗೊಮ್ಮೆ ಹೊಸ ಜಾತಿಯ ಪಕ್ಷಿ, ಮೀನು ಅಥವಾ ಕಪ್ಪೆಯನ್ನು ಕಂಡುಹಿಡಿಯುತ್ತಲೇ ಇರುತ್ತಾರೆ. ಅದಿರಲಿ, ನಾವು ನಮ್ಮ ಶರೀರವನ್ನಾದರೂ ಚೆನ್ನಾಗಿ ಅರಿತುಕೊಂಡಿದ್ದೇವೆಯೇ? ಇತ್ತೀಚೆಗೆ, ಅಂದರೆ ೨೦೨೦ರಲ್ಲಿ, ನೆದರ್ಲ್ಯಾಂಡ್ನ ವಿಜ್ಞಾನಿಗಳು ಅಸಾಧ್ಯವೆನ್ನಿಸುವ ಅತ್ಯಂತ ಪುಟ್ಟ ಗ್ರಂಥಿಗಳ (ಗ್ಲಾಂಡ್ಸ್) ಗುಂಪನ್ನು ಪತ್ತೆ ಮಾಡಿದರು. `ಟುಬರಿಯಲ್ ಗ್ಲಾಂಡ್ಸ್’ ಎಂದು ಅದನ್ನು ಕರೆದರು. ಅದು ತಲೆಬುರುಡೆಯಲ್ಲಿ ಮೂಗು ಮತ್ತು ಗಂಟಲು ಸಂಧಿಸುವ ಸ್ಥಳದಲ್ಲಿ ಅಡಗಿಕೊಂಡಿತ್ತು. ಆದುದರಿಂದ ವಿನಯಶೀಲರಾಗಿ, ನಾವು ಎಲ್ಲವನ್ನೂ ಅರ್ಥಮಾಡಿಕೊಂಡಿಲ್ಲ ಎನ್ನುವುದನ್ನು ಸ್ವೀಕರಿಸಬೇಕು, ಮತ್ತು ಶ್ರೀಲ ವ್ಯಾಸರ ಶ್ರೀಮದ್ ಭಾಗವತದ ವೈದಿಕ ವಿಶ್ವವಿಜ್ಞಾನದ ಕುರಿತು ನಾವು ಅಪಶಬ್ದ ಅಥವಾ ದೋಷಾರೋಪ ಮಾಡುವುದು ಸಲ್ಲ. ಆಧುನಿಕ ವಿಜ್ಞಾನ ಪಥದ ಜ್ಞಾನ ಸಂಗ್ರಹದ ಆರೋಹಣ ವಿಧಾನವು ಕಷ್ಟಕರ, ಮಂದ ಮತ್ತು ತೃಪ್ತಿಕರವಾದ ಫಲಿತಾಂಶದ ಬಗೆಗೆ ಖಚಿತತೆ ಇಲ್ಲದ್ದಾಗಿದೆ. ಅದೇ ಅವರೋಹಣ ವಿಧಾನದಲ್ಲಿ ಸಿದ್ಧ – ಜ್ಞಾನ ಸ್ವೀಕರಿಸುವುದು ಸುಲಭ ಮತ್ತು ಸುರಕ್ಷಿತವಾದುದು. ಅವರೋಹಣ ವಿಧಾನದಿಂದ ಪಡೆದ ಸತ್ಯವನ್ನು ಪರಿಶೀಲಿಸುವ, ಸಾಕ್ಷಾತ್ಕಾರ ಮಾಡಿಕೊಳ್ಳುವ ಅದರದೇ ಆದಂತಹ ಪ್ರಕ್ರಿಯೆಯೂ ಉಂಟು. ಇದು ಸುಮ್ಮನೆ ಅಂಧ ಶ್ರದ್ಧೆಯ ವಿಚಾರವಲ್ಲ. ಅದು ನಮ್ಮ ಜಡ ಇಂದ್ರಿಯಗಳಿಗೆ ಗೋಚರಿಸದ ಸೂಕ್ಷ್ಮ ಸತ್ಯಗಳನ್ನು ತಿಳಿದುಕೊಳ್ಳಲು, ಸರಿಯಾದ ಪ್ರಕ್ರಿಯೆ ಪಾಲಿಸಲು, ಮನುಕುಲಕ್ಕೆ ಒಡ್ಡಲಾದ ಸವಾಲು. ಮತ್ತು ಈ ಅವರೋಹಣ ಪಂಥ ಸುರಕ್ಷಿತ ಏಕೆಂದರೆ ವೈದಿಕ ಜ್ಞಾನವು `ಅಪೌರುಷೇಯ.’ ಅಂದರೆ ಮಾನವ ನಿರ್ಮಿತವಲ್ಲದ ದಿವ್ಯ ಶಬ್ದ. ವಿಜ್ಞಾನಿಗಳು ತಮ್ಮ ಸಂಶೋಧನೆಯ ಕಾರ್ಯದಲ್ಲಿ ಭಾಗವತದಿಂದ ಸಂಕೇತಗಳನ್ನು ತೆಗೆದುಕೊಂಡರೆ ಒಳಿತಾಗುವುದು. ಭಾಗವತದ ಆದೇಶದ ಪ್ರಕಾರ, ಅವರ ಪ್ರಯತ್ನಗಳ ಪರಿಪೂರ್ಣತೆಯು ಅದು ಪ್ರಸ್ತುತ ಪಡಿಸುವ ಸತ್ಯವನ್ನು ದೃಢಪಡಿಸುವುದೇ ಆಗಿದೆ.
Leave a Reply

Your email address will not be published. Required fields are marked *