Search
Friday 7 August 2020
  • :
  • :

ಶ್ರೀ ಶ್ರೀಪಾದರಾಜರ ಮಠ

ಮುಳಬಾಗಿಲು ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ದರುಶನ ಪಡೆಯಲೆಂದು ಬರುವ ಅನೇಕ ಭಕ್ತರ ಪಾಲಿಗೆ ಈ ಸನ್ನಿಧಾನದ ಪ್ರಶಾಂತ ವಾತಾವರಣವು ಶಾಂತಿ ಮತ್ತು ಸಂತೃಪ್ತಿಯ ಚಿಲುಮೆಯಾಗಿದೆ.

ಶ್ರೀಪಾದರಾಜರ ಮಠ ಮತ್ತು ವೃಂದಾವನವು ಮುಳಬಾಗಿಲು ಊರಿನಿಂದ ಒಂದು ಮೈಲಿಯಷ್ಟು ದೂರವಿದ್ದು, ಬೆಂಗಳೂರು-ಚೈನ್ನೈ ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿ ಬರುತ್ತದೆ. ಮನೋಹರ ಪ್ರಕೃತಿಯ ಮಡಿಲಲ್ಲಿ ಶ್ರೀಪಾದರಾಜರ ಮಠವಿದೆ ಮತ್ತು ಅವರ ವೃಂದಾವನದ ಪಕ್ಕದಲ್ಲೇ ಅವರ ಆಪ್ತ ಶಿಷ್ಯರಾಗಿದ್ದ ವ್ಯಾಸರಾಯರ ವೃಂದಾವನವೂ ಇದೆ. ಅಲ್ಲಿಯೇ ಶ್ರೀಪಾದರಾಜರು ಸ್ಥಾಪಿಸಿದ ಹನುಮಂತನ ದೇವಸ್ಥಾನ ಮತ್ತು ನರಸಿಂಹ ದೇವಸ್ಥಾನಗಳಿವೆ.

ನರಸಿಂಹಕ್ಷೇತ್ರಕ್ಕೆ ಬಂದ ಗಂಗೆ:

ಶ್ರೀಪಾದರಾಜರ ವೃಂದಾವನವಿರುವುದು ನರಸಿಂಹ ತೀರ್ಥವೆಂಬ ಸ್ಥಳದ ಬಳಿ. ಈ ನರಸಿಂಹ ತೀರ್ಥವು ಧರ್ಮ, ತತ್ತ್ವಜ್ಞಾನ ಮತ್ತು ಭಕ್ತಿಯ ತ್ರಿವೇಣಿ ಸಂಗಮವಾಗಿದೆ. ನರಸಿಂಹ ತೀರ್ಥದ ಬಗ್ಗೆ ಕುತೂಹಲಕಾರಿ ಕಥೆಯೊಂದು ಹೀಗಿದೆ:

ಶ್ರೀಪಾದರಾಜರು ಇಳಿವಯಸ್ಸಿನಲ್ಲಿದ್ದಾಗಲೊಮ್ಮೆ ಅವರಿಗೆ ಗಂಗಾಸ್ನಾನದ ಬಯಕೆಯಾಯಿತು. ಆದರೆ ಅಷ್ಟು ದೂರ ಪ್ರಯಾಣಿಸುವಷ್ಟು ಸುಸ್ಥಿರ ದೇಹಸ್ಥಿತಿಯಲ್ಲಿ ಅವರಿರಲಿಲ್ಲ. ಆಗ ಸ್ವತಃ ಗಂಗೆಯೇ ಅವರಿಗೆ ಕಾಣಿಸಿಕೊಂಡು, ತಾನೇ ನರಸಿಂಹ ತೀರ್ಥಕ್ಕೆ ಬರುವುದಾಗಿ ವಾಗ್ದಾನವಿತ್ತಳು. ಅಂದಿನಿಂದ ಇಂದಿನವರೆಗೆ, ನರಸಿಂಹ ತೀರ್ಥದಲ್ಲಿ ಸ್ನಾನ ಮಾಡುವುದು ಗಂಗಾಸ್ನಾನಕ್ಕೆ ಸಮ ಎಂದು ಪರಿಗಣಿಸುವ ಪರಿಪಾಠ ಬೆಳೆದುಬಂದಿದೆ.

ಶ್ರೀಪಾದರಾಜರ ಜೀವನದ ಸಂಕ್ಷಿಪ್ತ ಚಿತ್ರಣ:

ಕರ್ನಾಟಕದಲ್ಲಿ ೧೩ನೇ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರು ಬಿತ್ತಿದ ವೈಷ್ಣವ ಭಕ್ತಿಬೀಜ, ನರಹರಿ ತೀರ್ಥರ ಕಾಲದಲ್ಲಿ ಮೊಳಕೆಯೊಡೆಯಿತಾದರೂ ಅದು ಚಿಗುರಿ ಹೆಮ್ಮರವಾಗತೊಡಗಿದ್ದು ಶ್ರೀಪಾದರಾಜರ ಕಾಲದಿಂದಲೇ. ಇಂದು ನಾವು ಬಹುವಾಗಿ ಕೊಂಡಾಡುವ, ಸಾಹಿತ್ಯಕ್ಷೇತ್ರಕ್ಕೆ ಕನ್ನಡ ನೀಡುವ ಕೊಡುಗೆಗಳಲ್ಲೊಂದಾದ ಹರಿದಾಸ ಸಾಹಿತ್ಯ ಲಭ್ಯವಾದುದು ಶ್ರೀಪಾದರಾಜರು ಪಟ್ಟಶ್ರಮದಿಂದ. ಶ್ರೀ ವ್ಯಾಸರಾಯರಂತಹ ಶಿಷ್ಯರುಗಳನ್ನು ತಯಾರು ಮಾಡಿ, ಭವ್ಯ ಪರಂಪರೆಯ ನಿರ್ಮಾಣ ಒಂದಕ್ಕೆ ನಾಂದಿ ಹಾಡಿದವರು ಇವರು.

ಶ್ರೀಪಾದರಾಜರು ಹುಟ್ಟಿದ್ದು ಕ್ರಿ.ಶ. ೧೪೦೪ರಲ್ಲಿ, ಚನ್ನಪಟ್ಟಣದ ಬಳಿಯ ಅಬ್ಬೂರಿನಲ್ಲಿ. ಅವರ ತಂದೆ ಶೇಷಗಿರಿ ಆಚಾರ್ಯ ಹಾಗೂ ತಾಯಿ ಗಿರಿಯಮ್ಮ ಎಂದು. ಶ್ರೀಪಾದರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ ಎಂದಾಗಿತ್ತು. ನೂರು ವರ್ಷಗಳ ಕಾಲ ಜೀವಿಸಿದ್ದ ಮುನಿಗಳು ಹಲವಾರು ಅತಿಮಾನುಷ ಮಹಿಮೆಗಳನ್ನು ಮಾಡಿ ತೋರಿಸಿ ಜನರ ಮನವನ್ನು ಗೆದ್ದರು.

ಶ್ರೀಪಾದರಾಜರು ಶ್ರೀಪದ್ಮನಾಭ ತೀರ್ಥ ಪರಂಪರೆಗೆ ಸೇರಿದ ಶ್ರೀಸ್ವರ್ಣವರ್ಣ ತೀರ್ಥ ಸ್ವಾಮಿಗಳಿಂದ ಸಂನ್ಯಾಸ ದೀಕ್ಷೆ ಪಡೆದುಕೊಂಡರು. ಅಲ್ಲದೇ ಶ್ರೀ ವಿಭುದೇಂದ್ರ ತೀರ್ಥ ಸ್ವಾಮೀಜಿಯವರ ಆಶ್ರಯದಲ್ಲಿ ದ್ವೈತ ವೇದಾಂತ ವಿದ್ಯೆಯನ್ನು ಕಲಿತರು. ಕುಂಭಕೋಣಂ, ರಾಯಚೂರು, ಶ್ರೀರಂಗಂ ಮತ್ತಿತರ ಸ್ಥಳಗಳಲ್ಲಿ ತಮ್ಮ ಪ್ರವಚನಗಳು ಮತ್ತು ವಾಕ್ಯಾರ್ಥ ಸಭೆಗಳ ಮೂಲಕ ಅನೇಕ ಪಂಡಿತರನ್ನು ಮಂತ್ರಮುಗ್ಧರಾಗಿಸಿದರು. ವೇದ ವಿಜ್ಞಾನದಲ್ಲಿ ಅವರಿಗಿದ್ದ ಪ್ರಭುತ್ವವೇ ಅಂಥದ್ದು. ಅಂತೆಯೇ ೧೫ನೇ ಶತಮಾನದಲ್ಲಿ ಎಲ್ಲ ಸಂತರೂ ಲಕ್ಷ್ಮೀನಾರಾಯಣರನ್ನು `ಶ್ರೀಪಾದರಾಜ ಗುರು ಸಾರ್ವಭೌಮರು’ ಎಂದು ಕರೆದರು. ಅಲ್ಲದೇ ಮುಳಬಾಗಿಲು ಊರಿನಲ್ಲಿ ಶ್ರೀಪಾದರಾಜರು ಮತ್ತು ವಿದ್ಯಾರಣ್ಯರ ನಡುವೆ ಚರ್ಚಾಕೂಟವೊಂದು ಏರ್ಪಟ್ಟಿತು. ಈ ಚರ್ಚಾಕೂಟಕ್ಕೆ ವೇದಾಂತ ದೇಶಿಕರೇ ನಿರ್ಣಾಯಕರಾಗಿದ್ದರು. ಅಲ್ಲಿಗೆ ಹೋಗುವ ಮೊದಲು ಶ್ರೀಪಾದರಾಜರು ಬಂಡೆಯೊಂದರ ಮೇಲೆ ಅಂಗಾರದಲ್ಲಿಯೇ ನರಸಿಂಹನ ಚಿತ್ರವನ್ನು ಬಿಡಿಸಿದರು. ಅವರು ಚರ್ಚಾಕೂಟದಲ್ಲಿ ವಿದ್ಯಾರಣ್ಯರನ್ನು ಗೆದ್ದು ಮರಳಿ ಬರುವಷ್ಟರಲ್ಲಿ ಅವರು ನರಸಿಂಹನ ಚಿತ್ರ ಬಿಡಿಸಿದ್ದ ಸ್ಥಳದಲ್ಲಿ ನರಸಿಂಹನ ಮೂರ್ತಿ ಉದ್ಭವವಾಗಿತ್ತು. ಹೀಗೆ ಅವರು ತಮ್ಮ ಮಠವನ್ನು ಅಲ್ಲಿಯೇ ಸ್ಥಾಪಿಸುವಂತೆ ಅವರಿಗೆ ದೈವಸಂಕಲ್ಪವಾಯಿತು.  ಅನಂತರ ಅವರು ಶ್ರೀಪಾದರಾಜ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಅದನ್ನು ದಕ್ಷಿಣದ ನಳಂದಾ ವಿಶ್ವವಿದ್ಯಾಲಯವೆಂದೇ ಕರೆಯಲಾಗುತ್ತಿತ್ತು. ಇಲ್ಲಿನ ಶ್ರೀಪಾದರಾಜ ಗುರುಕುಲದಲ್ಲಿ ೧೦,೦೦೦ ಕ್ಕೂ ಹೆಚ್ಚು ಶಿಷ್ಯರು ವಿದ್ಯಾಭ್ಯಾಸ ಮಾಡಿದರು.

ಶ್ರೀಪಾದರಾಜರು ತಮ್ಮ ಮಹಾನ್ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ಮತ್ತು ಇತರ ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾ ಭಂಡಾರದ ಪಿತಾಮಹರೆಂದೇ ಪ್ರಖ್ಯಾತರಾದರು. ಆದ್ದರಿಂದಲೇ ಅವರ ಕಾಲವನ್ನು ಭಾರತೀಯ ಜ್ಞಾನ ಪರಂಪರೆಯ ಸುವರ್ಣಯುಗವೆಂದು ಕರೆಯುತ್ತಾರೆ.

ಶ್ರೀಪಾದರಾಜರು ವೃಂದಾವನ ಪ್ರವೇಶಿಸಿದ್ದು ಕ್ರಿ.ಶ.೧೫೦೪ರಲ್ಲಿ. ಇಂದಿಗೂ ಭಕ್ತರು ಮನಃಪೂರ್ವಕವಾಗಿ ಅವರ ವೃಂದಾವನಕ್ಕೆ ಸೇವೆ ಸಲ್ಲಿಸುತ್ತಾರೆ.
Leave a Reply

Your email address will not be published. Required fields are marked *