ನಂಜನಗೂಡಿನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ಹೆಮ್ಮರಗಾಲದ ಪ್ರಸಿದ್ಧ ಶ್ರೀ ಸಂತಾನ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಹೆಡತಲೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಸ್ಥಾನವಿದೆ. ಈ ಗ್ರಾಮದ ಜನಸಂಖ್ಯೆ ಆರು ಸಾವಿರಕ್ಕೆ ಮೀರಿರಬಹುದು. ಈ ಗ್ರಾಮದಲ್ಲಿ ೮೦೦ ವರ್ಷದ ಹಿಂದಿನ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯವಿದೆ. ಇದನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ತ್ರಿಕೂಟಾಚಲ ದೇವಾಲಯ. ಈ ದೇವಾಲಯವನ್ನು ಕ್ರಿ.ಶ. ೧೨೯೨ರಲ್ಲಿ ೩ನೇ ಬಲ್ಲಾಳ ಕಟ್ಟಿಸಿದನೆಂದು ತಿಳಿದುಬಂದಿದೆ. ಇಲ್ಲಿ ಮೂರು ಗರ್ಭಗುಡಿಗಳಿವೆ. ಪೂರ್ವಾಭಿಮುಖವಾಗಿರುವ ಮೂಲಗರ್ಭ ಗುಡಿಯಲ್ಲಿ ಶ್ರೀ ಲಕ್ಷ್ಮೀಕಾಂತಸ್ವಾಮಿಯವರ ವಿಗ್ರಹ ವಿರಾಜಿಸುತ್ತಿದೆ. ಇದರ ಎಡ ಪಾರ್ಶ್ವದಲ್ಲಿ ದಕ್ಷಿಣಾಭಿಮುಖವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ಗಂಭೀರವಾದ ದೃಷ್ಟಿಮುದ್ರೆಗಳುಳ್ಳ ಮೂರ್ತಿ ಕಂಗೊಳಿಸುತ್ತಿದೆ. ಇದರ ಎದುರುಗಡೆಯಲ್ಲಿ ಉತ್ತರಾಭಿಮುಖವಾಗಿ ಶ್ರೀವೇಣು- ಗೋಪಾಲಸ್ವಾಮಿಯವರ ನಯನ ಮನೋಹರವಾದ ಮೂರ್ತಿಯನ್ನು ನೋಡುತ್ತೇವೆ. ಇದರ ಎಡಪಾರ್ಶ್ವದಲ್ಲಿ ಕಣ್ಣುಗಳಿಗೆ ಉತ್ಸವವಾದ ಆಂಡಾಳ್ದೇವಿಯ ವಿಗ್ರಹವು ವಿಶಿಷ್ಟ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಆಚಾರ್ಯರುಗಳ ವಿಗ್ರಹಗಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿಯವರ ಬಲಪಾರ್ಶ್ವದಲ್ಲಿ ದಕ್ಷಿಣಾಭಿಮುಖವಾಗಿ ವಿರಾಜಿಸುತ್ತಿವೆ. ಈ ಎಲ್ಲ ವಿಗ್ರಹಗಳನ್ನು ಕಪ್ಪು ಶಿಲೆಯಲ್ಲಿ ನಿರ್ಮಿಸಲಾಗಿದೆ. ದೇವಾಲಯವು ಗರ್ಭಗುಡಿ, ಸುಕನಾಸಿ ಮತ್ತು ನವರಂಗವನ್ನು ಹೊಂದಿರುತ್ತದೆ. ದೇವಾಲಯದಲ್ಲಿ ಈ ಗ್ರಾಮದವರೇ ಆದ ಶ್ರೀ ವೈಷ್ಣವ ಬ್ರಾಹ್ಮಣ ಮನೆತನದವರು ಸ್ವಾಮಿಯ ಕೈಂಕರ್ಯವನ್ನು ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಈ ದೇವಾಲಯದ ಮುಂಭಾಗದಲ್ಲಿ ಹೊರಗಡೆ ಒಂದು ವಸಂತ ಕೊಳವಿದೆ. ಇದಕ್ಕೆ ನಾಲ್ಕು ಕಡೆಯೂ ಮೆಟ್ಟಿಲುಗಳಿದ್ದು ಇಳಿಯಲು ಅನುಕೂಲವಿದೆ.
ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯ – ಹೆಡತಲೆ
Apr 10, 2019Krishnappa H Vಪುಣ್ಯ ಕ್ಷೇತ್ರ0Like