Search
Friday 29 October 2021
  • :
  • :

ಶ್ರೀ ಭೂವರಾಹ ಸ್ವಾಮಿ ಮಹಿಮೆ

ದೇವರು ವರಾಹ ರೂಪವನ್ನು ತಾಳಿದರೂ, ಪರಿಶುದ್ಧವಾದ, ಲೋಕೋತ್ತರವಾದ, ಭಕ್ತರ ಹೃದಯಗಳನ್ನು ಮರುಳುಗೊಳಿಸುವಂತಹ ದೇವರಾಗಿಯೇ ಉಳಿಯುತ್ತಾನೆ.

ಗ್ರೀಕ್ ಸಾಹಿತ್ಯದಲ್ಲಿ ಅಟ್ಲಾಸ್ ಎಂಬ ಅತಿಮಾನುಷ ವ್ಯಕ್ತಿಯ ಕಥೆ ಬರುತ್ತದೆ. ಭೂಮಿಯನ್ನೇ ಹೊತ್ತುಕೊಂಡ ಅವನು ಅದರ ಭಾರದಡಿಯಲ್ಲಿ ಸದಾ ಹೆಣಗಾಡುತ್ತಿರುತ್ತಾನೆ. ಆದರೆ ಪರಮ ಪ್ರಭುವು ತನ್ನ ವರಾಹಾವತಾರದಲ್ಲಿ, ಆನೆಯೊಂದು ಲೀಲಾಜಾಲವಾಗಿ ಕಮಲ ಪುಷ್ಪವೊಂದನ್ನು ಎತ್ತಿಕೊಳ್ಳುವ ಹಾಗೆ, ಭೂದೇವಿಯನ್ನು ತನ್ನ ದಂತಗಳ ಮೇಲೆ ಕೂಡಿಸಿಕೊಳ್ಳುತ್ತಾನೆ. ಭೂದೇವಿಯನ್ನು ಸಂರಕ್ಷಿಸಲು ದೇವರ ಈ ಅವತಾರವು ಎರಡು ಬಾರಿ ಕಾಣಿಸಿಕೊಂಡಿತು. ಮೊದಲನೆಯ ಸಲ ಭೂದೇವಿಯು ಗರ್ಭೋದಕ ಸಾಗರದ ಆಳದಲ್ಲಿ ನಿಸ್ಸಹಾಯಕವಾಗಿ ಇದ್ದಾಗ,  ಎರಡನೆಯ ಸಲ ಅತ್ಯಂತ ಪ್ರತಾಪಶಾಲಿ ರಾಕ್ಷಸನಾದ ಹಿರಣ್ಯಾಕ್ಷನು ಅಗೆಯುವುದರಿಂದ ತನ್ನ ಸಮತೋಲನವನ್ನೇ ಕಳೆದುಕೊಂಡು ಮತ್ತೆ ಗರ್ಭೋದಕ ಸಾಗರದಲ್ಲಿ ಬಿದ್ದಾಗ. ಭಗವಂತನನ್ನು ಭೂದೇವಿಯ ಪತಿ ಮತ್ತು ರಕ್ಷಕ ಎಂದು ಸಂಭ್ರಮಾಚರಣೆ ಮಾಡಲಾಗುತ್ತಿದೆ. ಅವರಿಬ್ಬರನ್ನೂ ಭೂಮಿ-ವರಾಹ ಎಂದು ಆರಾಧಿಸಲಾಗುತ್ತದೆ.

ಶ್ವೇತ ವರಾಹ ಅವತಾರ

ಸೃಷ್ಟಿಯ ಪ್ರಾರಂಭದಲ್ಲಿ ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮನು, ಮನುಕುಲದ ಆದಿ ಪಿತೃವಾದ ತನ್ನ ಮಗ ಸ್ವಾಯಂಭುವ ಮನುವಿಗೆ ಮಾನವ ಸಂತಾನವನ್ನು ಸೃಷ್ಟಿಸುವಂತೆಯೂ, ಅವರನ್ನು ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯೆಂಬ ಪಥದಲ್ಲಿ ನಡೆಸಬೇಕೆಂದೂ ಆಜ್ಞೆ ಮಾಡಿದನು. ಆದರೆ ಮಾನವರ ಧಾಮವಾಗಬೇಕಾಗಿದ್ದ ಭೂಮಿಯು ಗರ್ಭೋದಕ ಸಾಗರದಲ್ಲಿ ಮುಳುಗಿಬಿಟ್ಟಿರುವುದನ್ನು ಕಂಡ ಮನುವು ಅದನ್ನು ಮೇಲೆತ್ತಬೇಕೆಂದು ತನ್ನ ತಂದೆಯನ್ನು ಕೇಳಿಕೊಂಡನು. ಬ್ರಹ್ಮನು ಈ ಕಾರ್ಯವನ್ನು ಕುರಿತು ಚಿಂತಿಸುತ್ತಿರುವಾಗ ಒಂದು ಪುಟಾಣಿ ವರಾಹವು ಅವನ ಮೂಗಿನ ಹೊಳ್ಳೆಯಿಂದ ಹೊರಬಂದಿತು. ಬ್ರಹ್ಮನು ಅದೇನೆಂದು ಅರಿತುಕೊಳ್ಳುವಷ್ಟರಲ್ಲಿಯೇ ಅದು ಗಗನದಲ್ಲಿ ಒಂದು ಬೃಹದ್ ಆನೆಯ ಗಾತ್ರಕ್ಕೆ ತನ್ನ ಮೈಯನ್ನು ಉಬ್ಬಿಸಿಕೊಂಡಿತು. ಮೊದಲಿಗೆ ಆ ದಿಗ್ಭ್ರಮೆ ಹಿಡಿಸುವಂತಹ ವರಾಹವನ್ನು ನೋಡಿ ಬ್ರಹ್ಮನು ಕಕ್ಕಾಬಿಕ್ಕಿಯಾದರೂ, ಅನಂತರ ಅದು ದೇವೋತ್ತಮ ಪರಮ ಪುರುಷನ ಒಂದು ಅವತಾರವೇ ಇರಬೇಕು ಎಂದು ಅರ್ಥಮಾಡಿಕೊಂಡನು. ವರಾಹಾವತಾರಿಯ ಭಯಂಕರವಾದ ಗುಟುರಿನಿಂದ ಆನಂದಪರವಶನಾದ ಬ್ರಹ್ಮನು, ಪ್ರಭುವು ತನ್ನೆಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತಾನೆ ಎಂದು ಸಮಾಧಾನ ತಾಳಿದನು.

ಗರ್ಭೋದಕ ಸಾಗರದ ಹೂಳಿನಿಂದ ಭೂಮಾತೆಯನ್ನು ಉದ್ಧಾರ ಮಾಡಲು ಪ್ರಭುವು ವರಾಹದ ರೂಪದಲ್ಲಿ ಅವತರಿಸಿದರೂ, ಅವನು ಪರಿಶುದ್ಧನಾಗಿಯೂ, ಎಲ್ಲ ಐಹಿಕ ಕಲ್ಮಷಗಳಿಂದ ಶಾಶ್ವತವಾಗಿ ಲೋಕೋತ್ತರನೂ ಆಗಿ ಉಳಿದನು. ದಿಟದಲ್ಲಿ ವರಾಹ ಅವತಾರಿಯಾದ ಪ್ರಭುವು ವೇದಗಳ ಸಾಕಾರ ರೂಪ ಎಂದು ಪ್ರಸಿದ್ಧನಾಗಿದ್ದಾನೆ. ಪ್ರಭು ಕೃಷ್ಣನ ಉಸಿರೇ ಎಲ್ಲ ವೇದಗಳ ಮೂಲ ಆಕರ. ವೈದಿಕ ಜ್ಞಾನದ ಪ್ರಥಮ ಗ್ರಾಹಿಯಾಗಿ ಬ್ರಹ್ಮನು ಪ್ರಭುವಿನ ಉಸಿರನ್ನು ತಾನು ಒಳಗೆ ಎಳೆದುಕೊಂಡನು. ಪ್ರಭು ವರಾಹನು ಬ್ರಹ್ಮನ ಉಸಿರಿನೊಡನೆ ಹೊರಬಂದುದರಿಂದ, ಅವನು ವೇದಗಳ ಸಾಕಾರ ರೂಪವಾಗಿದ್ದಾನೆ.

ಬೃಹದಾಕಾರವಾಗಿ ವಿಸ್ತರಿಸಿಕೊಂಡ ಅನಂತರ ಪ್ರಭು ವರಾಹನು ಆಕಾಶದೊಳಕ್ಕೆ ಹಾರಿದನು. ಅವನು ತನ್ನ ಬಾಲವನ್ನು ಝಳಪಿಸುತ್ತ, ಎಲ್ಲ ಬೆಳಕಿಗೆ ಆಕರವಾದ ತನ್ನ ಕಣ್ಣ ನೋಟದಿಂದ ಇಡೀ ವಿಶ್ವವನ್ನು ಜಾಜ್ವಲ್ಯಮಾನಗೊಳಿಸಿದನು.

ಪ್ರಭು ವರಾಹನು ತನ್ನ ಪ್ರಬಲವಾದ ಘ್ರಾಣಶಕ್ತಿಯಿಂದ ಭೂಮಿಯನ್ನು ಹುಡುಕುತ್ತಾ ಮೂಸಿ ನೋಡಲಾರಂಭಿಸಿದನು. ಗರ್ಭೋದಕ ಸಾಗರದ ತಳದಲ್ಲಿ ಭೂದೇವಿಯು ಇರುವುದನ್ನು ಕಂಡು ಅವನು ತನ್ನ ಅಗಾಧವಾದ ಕೋರೆಹಲ್ಲುಗಳಿಂದ ಮೇಲೆತ್ತಿದನು. ಈ ಮಹಾಸಾಹಸವನ್ನು ಕಂಡ ಮುನಿಗಳು ಪ್ರಭುವನ್ನು ಮಹೀಧರಃ (ಭೂಮಿಯ ಸಂರಕ್ಷಕ) ಎಂದು ಕೊಂಡಾಡಿದರು. ಈ ಶಬ್ದಕ್ಕೆ “ಮಹಾಪರ್ವತ” ಎಂಬ ಅರ್ಥವೂ ಇದೆ. ಇದು ಇಲ್ಲಿ ಯುಕ್ತಿ ಯುಕ್ತವಾಗಿದೆ. ಏಕೆಂದರೆ ಪ್ರಭು ವರಾಹನ ಅಮೋಘ ದೇಹದ ಮೇಲೆ ಭೂಮಿಯು ನಿಂತಿರುವುದು ಮೋಡದಿಂದ ಅಲಂಕೃತವಾದ ಪರ್ವತ ಶಿಖರದಂತೆ ತೋರುತ್ತಿತ್ತು. ಮುನಿಗಳು ಈ ಇಡೀ ದೃಶ್ಯವನ್ನು ವಿಭ್ರಮಃ ಎಂದು ವರ್ಣಿಸಿದರು. ಈ ಶಬ್ದಕ್ಕೆ “ಸೌಂದರ್ಯ” ಮತ್ತು “ಮಾಯೆ” ಎಂಬ ಎರಡು ಅರ್ಥಗಳೂ ಇವೆ. ಅದು ಸುಂದರ ಎನ್ನುವುದರಲ್ಲಿ ಅನುಮಾನವೇ ಇಲ್ಲ, ಆದರೆ ಮಾಯೆ ಏಕೆ? ಪ್ರಭುವು ತನ್ನ ಕೋರೆ ಹಲ್ಲುಗಳಿಂದ ಭೂಮಿಯನ್ನು ಎತ್ತಿದನಾದರೂ ಅದನ್ನು ಲೀಲಾಜಾಲವಾಗಿ ಮಾಡಿದ – ಅವನು ಅಸಂಖ್ಯಾತವಾದ ವಿಶ್ವಗಳಿಗೆ ಲೀಲಾಜಾಲವಾಗಿ ಆಧಾರವನ್ನು ಒದಗಿಸಿದಂತೆ.

ಪ್ರಭು ವರಾಹನು ನೀರಿನಿಂದ ಹೊರ ಹೊಮ್ಮುತ್ತಿದ್ದಂತೆಯೇ ತನ್ನ ದೇಹವನ್ನು ಒಮ್ಮೆ ಬಲವಾಗಿ ಕೊಡವಿದನು. ಉನ್ನತೋನ್ನತ ಗ್ರಹವ್ಯೂಹಗಳಲ್ಲಿರುವ ಮುನಿಗಳ ಮೇಲೆ ಆ ನೀರು ತುಂತುರಾಗಿ ಸಿಡಿಯಿತು. ಆ ಮುನಿಗಳು ಇದರಿಂದ ತಾವು ಪರಿಶುದ್ಧವಾದೆವೆಂದು ಭಾವಿಸಿದರು. ಏಕೆಂದರೆ ಆ ನೀರು ಪ್ರಭುವಿನ ಪವಿತ್ರವಾದ ದೇಹವನ್ನು ಸೋಕಿತ್ತು. ಆ ಪ್ರಭುವಿನ ಪಾದಕಮಲಗಳೇ ನಿಷ್ಕಳಂಕವಾದ ಗಂಗೆಯನ್ನು ಸೃಷ್ಟಿಸಿದ್ದವು.

ಹನ್ನೆರಡನೆಯ ಶತಮಾನದ ವೈಷ್ಣವ ಕವಿ ಜಯದೇವನು ಶ್ರೀ ವರಾಹನನ್ನು ಹೀಗೆ ಕೀರ್ತಿಸುತ್ತಾನೆ:  ಕ್ಷಿತಿರಿಹ ವಿಪುಲತರೇ ತಿಷ್ಠತಿ ತವ ಪೃಷ್ಠೇ, ಧರಣಿಧರಣ ಕಿಲ ಚಕ್ರ ಗರಿಷ್ಠೇ ಕೇಶವ ಧೃತ ಶೂಕರ ರೂಪ ಜಯ ಜಗದೀಶ ಹರೇ!! “ಓ ಕೇಶವ! ಓ ಜಗದೀಶ, ವರಾಹ ರೂಪವನ್ನು ತಾಳಿರುವ ಓ ಪ್ರಭು ಹರಿಯೆ! ನಿನಗೆ ಜಯವಾಗಲಿ! ವಿಶ್ವದ ತಳಭಾಗದಲ್ಲಿ ಗರ್ಭೋದಕ ಸಾಗರದಲ್ಲಿ ಮುಳುಗಿದ್ದ ಭೂಮಿಯು, ಚಂದ್ರನ ಮೇಲಿನ ಒಂದು ಕಲೆಯಂತೆ ನಿನ್ನ ಕೋರೆಹಲ್ಲಿನ ಮೇಲೆ ಸ್ಥಿರವಾಗಿ ನಿಂತಿದೆ.”

ರಕ್ತ ವರಾಹ ಅವತಾರ

ಎರಡನೆಯ ವರಾಹ ಅವತಾರವು ಆದಿ ದೈತ್ಯ ಅಥವಾ ದಿತಿಯ ನಾಸ್ತಿಕ ಪುತ್ರ ಹಿರಣ್ಯಾಕ್ಷನನ್ನು ಹತ್ಯೆ ಮಾಡಲು ಕಾಣಿಸಿಕೊಂಡಿತು. ಶ್ರೀಮದ್ ಭಾಗವತದಲ್ಲಿ ಈ ಪ್ರಸಂಗವನ್ನು ವರ್ಣಿಸಲಾಗಿದೆ. ಒಂದು ಸಲ ದಿತಿಯು ಪರಮ ಪ್ರಭುವಿನ ಆರಾಧನೆಗೆ ಮೀಸಲಾದ ಮುಚ್ಚಂಜೆಯ ಸಮಯದಲ್ಲಿ ತನ್ನನ್ನು ಕೂಡುವಂತೆ ತನ್ನ ಪತಿ ಕಶ್ಯಪ ಮುನಿಯ ಮನ ಒಲಿಸಿದಳು. ದಿತಿ ಮತ್ತು ಕಶ್ಯಪರು ಧರ್ಮಸೂತ್ರಗಳ ಕಟ್ಟುನಿಟ್ಟಾದ ಪರಿಪಾಲಕರಾಗಿದ್ದರೂ ಈ ರೀತಿಯಲ್ಲಿ ಅದನ್ನು ಉಲ್ಲಂಘನೆ ಮಾಡಿದ್ದರಿಂದ, ದಿತಿಯ ಗರ್ಭದಲ್ಲಿ ನಾಸ್ತಿಕರಾದ ಅವಳಿಜವಳಿ ಪುತ್ರರು ಜನಿಸಿದರು. ಅವಳು ಗರ್ಭಿಣಿಯಾಗಿದ್ದ ಸಮಯದಲ್ಲಿ ಸೂರ್ಯನು ಮಂಕಾದ. ಅವಳು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದಾಗ ಭೂಕಂಪಗಳು ಮತ್ತು ಧೂಮಕೇತುಗಳು ಅಮಂಗಳವನ್ನು ಮುನ್ನುಡಿದವು. ಕಾಳ ಮೇಘಗಳು ಹೇಸಿಕೆಯ ಮಳೆಗರೆದವು. ಹಸುಗಳು ತಮ್ಮ ಕೆಚ್ಚಲಿನಿಂದ ರಕ್ತವನ್ನು ಕರೆದವು.

ಈ ವಿಪ್ಲವಗಳಿಂದ ದಿಗ್ಭ್ರಮೆಗೊಂಡ ದೇವತೆಗಳು ಬ್ರಹ್ಮನ ಮೊರೆಹೊಕ್ಕರು. ಅವನು ಈ ಇಬ್ಬರು ರಾಕ್ಷಸರ ಜನನಕ್ಕೆ ಕಾರಣವಾದ ಇತಿಹಾಸವನ್ನು ಅವರಿಗೆ ನಿರೂಪಿಸಿದನು. ಒಂದು ಸಲ ಕುಮಾರರು ಎಂದು ಪ್ರಸಿದ್ಧರಾದ ಬ್ರಹ್ಮನ ನಾಲ್ವರು ಪುತ್ರರು ಅವಿನಾಶಿಯಾದ ವೈಕುಂಠಧಾಮದಲ್ಲಿ ಪ್ರಭು ವಿಷ್ಣುವನ್ನು ನೋಡಲು ಹೋದರು. ಇಬ್ಬರು ದ್ವಾರಪಾಲಕರಾದ ಜಯ ಮತ್ತು ವಿಜಯ ಅವರ ಪ್ರವೇಶಕ್ಕೆ ತಡೆಯೊಡ್ಡಿದರು. ದ್ವಾರಪಾಲಕರ ಈ ಅಪಮಾನಕಾರಿ ನಡವಳಿಕೆಯಿಂದ ಆಶ್ಚರ್ಯಚಕಿತರಾದ ಕುಮಾರರು ಅವರಿಗೆ ಐಹಿಕ ಜಗತ್ತಿನಲ್ಲಿ ಜನ್ಮವೆತ್ತುವಂತೆ ಶಾಪವನ್ನಿತ್ತರು. ದ್ವಾರಪಾಲಕರು ಉದ್ಧಟರಾಗಿದ್ದರೂ ಪ್ರಭುವಿನ ಭಕ್ತರಾಗಿದ್ದರು. ಅವರನ್ನು ಮತ್ತಷ್ಟು ದುಃಸ್ಥಿತಿಯಿಂದ ರಕ್ಷಿಸಲು ಅಲ್ಲಿಗೆ ಆಗಮಿಸಿದ ಪ್ರಭುವು ಮುನಿಗಳನ್ನು ಸಮಾಧಾನಪಡಿಸಿದನು.

ಶಕ್ತಿಶಾಲಿಯಾದ ಎದುರಾಳಿಗಳೊಡನೆ ಹೋರಾಡಬೇಕೆಂಬ ತನ್ನ ಆಸೆಯನ್ನು ಈಡೇರಿಸಿಕೊಳ್ಳಲೆಂದೇ ಈ ಇಡೀ ಪ್ರಸಂಗವನ್ನು ಪ್ರಭುವು ಏರ್ಪಡಿಸಿದನು ಎಂದು ವೈದಿಕ ಧರ್ಮಗ್ರಂಥಗಳು ನಮಗೆ ಹೇಳುತ್ತವೆ. ಆದ್ದರಿಂದ ಅವನು ಮುನಿಗಳ ಶಾಪವನ್ನು ಏನೂ ಬದಲಾಯಿಸಲಿಲ್ಲ, ಮತ್ತು ಜಯ ಹಾಗೂ ವಿಜಯರು, ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ ಎಂದು ದಿತಿಯ ಗರ್ಭದಲ್ಲಿ ಜನಿಸಿದರು. ಹಿರಣ್ಯಕಶಿಪು ಎಂಬ ಶಬ್ದವು ಸಂಪತ್ತು ಮತ್ತು ಲೈಂಗಿಕ ಉಪಭೋಗದ ಮೇಲಿನ ವ್ಯಾಮೋಹವನ್ನು ಸೂಚಿಸುತ್ತದೆ. ಅವನನ್ನು ಸಂತುಷ್ಟಗೊಳಿಸಲೆಂದು ಸೋದರ ಹಿರಣ್ಯಾಕ್ಷನು ವಿಶ್ವದ ಪ್ರಮುಖ ರಾಜರನ್ನೆಲ್ಲ ಸೋಲಿಸಿ ಅವರ ಸಂಪತ್ತನ್ನು ದೋಚಿದನು. ಹಿರಣ್ಯಾಕ್ಷ ಅಥವಾ ಸದಾ ಚಿನ್ನಕ್ಕಾಗಿ ಅರಸುವ ಕಣ್ಣುಳ್ಳವನು ಎಂಬ ತನ್ನ ಹೆಸರನ್ನು ಸಾರ್ಥಕಪಡಿಸಿಕೊಳ್ಳಲು ಅವನು ಸಂಪತ್ತನ್ನು ಸೂರೆಮಾಡಲು ಭೂಮಿಯನ್ನು ಅಗೆದನು. ಅದರಿಂದ ಭೂಮಿಯ ಸಮತೋಲನವು ತಪ್ಪಿ ಅವಳು ಗರ್ಭೋದಕ ಸಾಗರದಲ್ಲಿ ಬಿದ್ದಳು.

ಒಂದು ದಿನ ಹಿರಣ್ಯಾಕ್ಷನು ಗರ್ಭೋದಕದೊಳಕ್ಕೆ ಧುಮ್ಮಿಕ್ಕಿ ವರುಣನೊಡನೆ ಹೋರಾಡಲು ಅವನೆಡೆಗೆ ಈಜಿಕೊಂಡು ಹೋದನು. ಜಲಮಯ ಜಗತ್ತಿನ ಒಡೆಯನಾದ ವರುಣನು ಅವನೊಡನೆ ಹೋರಾಡಲು ನಿರಾಕರಿಸಿ, ಬದಲಿಗೆ ಪ್ರಭು ವಿಷ್ಣುವಿನೊಡನೆ ಹೋರಾಡಬೇಕೆಂದೂ, ಅವನು ಹಿರಣ್ಯಾಕ್ಷನ ಹೆಮ್ಮೆಯನ್ನು ಒಮ್ಮೆಲೆ ಸುಪ್ತಿಯಲ್ಲಿಡುತ್ತಾನೆಂದೂ ತಿಳಿಸಿದನು.

ಆಗಷ್ಟೇ ಪ್ರಭು ವರಾಹನು ಭೂಮಾತೆಯನ್ನು ಗರ್ಭೋದಕ ಸಾಗರದಿಂದ ಪಾರು ಮಾಡಿದ್ದ. ಭೂಲೋಕವು ಪ್ರಭು ವರಾಹನ ಕೋರೆ ಹಲ್ಲುಗಳ ಮೇಲೆ ಸ್ಥಿತವಾಗಿರುವುದನ್ನು ನೋಡಿ ಹಿರಣ್ಯಾಕ್ಷನು ಕೋಪೋದ್ರೇಕದಿಂದ ಅವನನ್ನು ನಿಂದಿಸಿದನು.

“ಓ ಭೂಜಲಚರ ಕ್ರೂರ ಪಶುವೆ, ಈ ಭೂಲೋಕವು ನಮ್ಮ ಸ್ವತ್ತು. ಈ ಲೋಕವನ್ನು ನೀನು ನಮಗೆ ಮರಳಿ ನೀಡದಿದ್ದರೆ ಇಲ್ಲಿ ನೀನು ಜೀವಂತವಾಗಿ ಇರಲಾರೆ. ಇಂದು ನಾನು ನನ್ನ ಗದೆಯಿಂದ ನಿನ್ನ ತಲೆಯನ್ನು ಪುಡಿಗುಟ್ಟುತ್ತೇನೆ!”

ಮೊಸಳೆಯು ಆಕ್ರಮಣ ಮಾಡಿದಾಗ ಕೊಳದಿಂದ ಬುದುಗ್ಗನೆ ಮೇಲೇಳುವ ಸಲಗನಂತೆ ಪ್ರಭು ವರಾಹನು ನೀರಿನಿಂದ ಮೇಲೆದ್ದನು.

ರಾಕ್ಷಸನು ಪ್ರಭುವನ್ನು ಬೆನ್ನತ್ತಿ ಅರಚಿದನು, “ಓ ಹೇಡಿ, ಎದುರಾಳಿಗೆ ಹೆದರಿ ಪಲಾಯನ ಮಾಡಲು ನಿನಗೆ ನಾಚಿಕೆಯಾಗುವುದಿಲ್ಲವೇ”

ಸರ್ವಶಕ್ತನಾದ ಪ್ರಭುವು ತನ್ನ ಪರಮ ಶಕ್ತಿಯನ್ನು ಭೂಮಿಗೆ ಧಾರೆಯೆರೆದು ಅವಳನ್ನು ತೇಲಲು ಬಿಟ್ಟನು.

ಅನಂತರ ಪ್ರಭುವು ಹೀಗೆ ನುಡಿದನು, “ಓ ಜಂಬ ಕೊಚ್ಚಿಕೊಳ್ಳುತ್ತಿರುವ ಹಿರಣ್ಯಾಕ್ಷ, ನಿನ್ನಂತಹ ನಾಯಿಗಳನ್ನು ತರಿದು ಹಾಕಲು ಉದ್ದಿಷ್ಟನಾದ ನಾನು ಖಂಡಿತವಾಗಿಯೂ ಕ್ರೂರ ವರಾಹವೇ ಹೌದು. ಸಾಕು ನಿನ್ನ ಅಟಾಟೋಪ. ಶಕ್ತಿಯಿದ್ದರೆ ಬಾ ನನ್ನೊಡನೆ ಸೆಣಸು.”

ಹೀಗೆ ಪಂಥಾಹ್ವಾನವನ್ನು ಪಡೆದ ಹಿರಣ್ಯಾಕ್ಷನು ನಾಗರಹಾವಿನಂತೆ ಪ್ರಕ್ಷುಬ್ಧನಾದನು. ಅವನು ಪ್ರಭುವಿನ ಕಡೆಗೆ ಮುನ್ನುಗ್ಗಿ ತನ್ನ ಗದೆಯಿಂದ ಪ್ರಹಾರ ಮಾಡಿದನು. ಪ್ರಭುವು ಈ ಆಘಾತವನ್ನು ಲೀಲಾಜಾಲವಾಗಿ ತಪ್ಪಿಸಿಕೊಂಡನು. ಹಿರಣ್ಯಾಕ್ಷ ಮತ್ತು ಪ್ರಭುವು ಪರಸ್ಪರ ಮತ್ತೆ ಮತ್ತೆ ಹೊಡೆದರು. ಆದರೆ ಇಬ್ಬರೂ ತಮ್ಮ ಪ್ರತಿಸ್ಪರ್ಧಿಯ ಪಟ್ಟುಗಳನ್ನು ಕೌಶಲದಿಂದ ತಪ್ಪಿಸಿಕೊಂಡರು. ಈ ಘೋರವಾದ ಕಾಳಗದಲ್ಲಿ ಇಬ್ಬರೂ ರಕ್ತವನ್ನು ಸುರಿಸಿದರು. ಕೋಪೋದ್ರಿಕ್ತರಾದ ಪ್ರತಿಸ್ಪರ್ಧಿಗಳಿಗೆ ಪ್ರತಿಬಾರಿ ಗಾಯವಾದಾಗಲೂ ಕೋಪವು ಉಲ್ಬಣಿಸುತ್ತಿತ್ತು. ಅವರು ಒಂದು ಹಸುವಿಗಾಗಿ ಹೋರಾಡುತ್ತಿರುವ ಗೂಳಿಗಳಂತೆ ಕಾಣುತ್ತಿದ್ದರು.

ಸಂಜೆಯು ಸಮೀಪಿಸುತ್ತಿದ್ದಂತೆ ರಾಕ್ಷಸನ ಶಕ್ತಿಯು ಅಧಿಕವಾಗುತ್ತದೆಂದು ಭೀತನಾದ ಬ್ರಹ್ಮನು, ಅವನನ್ನು ಕೂಡಲೇ ಕೊಲ್ಲುವಂತೆ ಪ್ರಭು ವರಾಹನಲ್ಲಿ ಬೇಡಿಕೊಂಡನು. ಆಗ ಪ್ರಭುವು ತನ್ನ ಗದೆಯನ್ನು ರಾಕ್ಷಸನ ಗದ್ದಕ್ಕೆ ಗುರಿಯಾಗಿ ಹಿಡಿದನು. ಆದರೆ ಅವನು ಪ್ರಭುವಿನ ಕೈಯಿಂದ ಗದೆಯನ್ನು ಕಿತ್ತುಕೊಂಡನು. ಆಗ ವರಾಹನು ತನ್ನ ಅವಿನಾಶಿಯಾದ ಸುದರ್ಶನ ಚಕ್ರವನ್ನು ಆಹ್ವಾನಿಸಿದನು. ಅದನ್ನು ನೋಡಿದ ರಾಕ್ಷಸನು ತನ್ನ ಗದೆ ಮತ್ತು ಬೆಂಕಿಯುಗುಳುವ ತ್ರಿಶೂಲವನ್ನು ಪ್ರಭುವಿನ ಕಡೆಗೆ ಬೀಸಿದನು. ಹಿಂಸ್ರ ಪಕ್ಷಿಯು ತನ್ನ ಶಿಕಾರಿಯ ಮೇಲೆ ಎರಗುವಂತೆ ಪ್ರಭುವು ಅದನ್ನು ಮಾರ್ಗಮಧ್ಯದಲ್ಲಿಯೇ ತಡೆಗಟ್ಟಿ, ತನ್ನ ಮೊನಚಾದ ಸುದರ್ಶನ ಚಕ್ರದಿಂದ ತ್ರಿಶೂಲವನ್ನು ಚೂರು ಚೂರು ಮಾಡಿದನು. ತನ್ನ ಆಯುಧಗಳು ನಾಶವಾದುದನ್ನು ನೋಡಿ ಹಿರಣ್ಯಾಕ್ಷನು ಪ್ರಭು ವರಾಹನ ವಿಶಾಲವಾದ ವಕ್ಷದ ಮೇಲೆ ಗುದ್ದಿದನು. ರಾಕ್ಷಸನ ಮುಷ್ಟಿಗಳು ಕಲ್ಲನ್ನೇ ಪುಡಿ ಪುಡಿ ಮಾಡುವಷ್ಟು ಸಮರ್ಥವಾಗಿದ್ದರೂ ಪ್ರಭುವಿನ ಪಾಲಿಗೆ ಆ ಆಘಾತಗಳು ಹೂಮಾಲೆಯಂತೆ ತೋರಿದವು.

ಈಗ ರಾಕ್ಷಸನು ಮಾಯಾಯುದ್ಧವನ್ನು ಪ್ರಾರಂಭಿಸಿದ. ಭೂತಗಳು, ಚಂಡಮಾರುತ ಮಳೆ, ಸುಂಟರಗಾಳಿ, ಭೀತಿಹುಟ್ಟಿಸುವಂತಹ ಮೋಡಗಳು ಮತ್ತು ಬಂಡೆಗಲ್ಲುಗಳ ಸುರಿಮಳೆಯ ಮಾಯಾಜಾಲವನ್ನೇ ಅವನು ಸೃಷ್ಟಿಸಿದ. ಆದರೆ ಪ್ರಭುವಿನ ಸುದರ್ಶನ ಚಕ್ರವು ಈ ಮಾಯಾಜಾಲವನ್ನು ಚದುರಿಸಿತು. ಅನಂತರ ಹಿರಣ್ಯಾಕ್ಷನು ಪ್ರಭು ವರಾಹನನ್ನು ತನ್ನ ತೋಳುಗಳಿಂದ ನುಗ್ಗುನುರಿ ಮಾಡಲು ಪ್ರಯತ್ನಿಸಿದ. ಆದರೆ ಪ್ರಭುವು ಕಾಲ ಅಥವಾ ಸ್ಥಳದಿಂದ ಪರಿಮಿತಗೊಳ್ಳಲಾರದವನಾಗಿದ್ದು ರಾಕ್ಷಸನ ಈ ಹಿಡಿತದಿಂದ ತಪ್ಪಿಸಿಕೊಂಡ. ಹಿರಣ್ಯಾಕ್ಷನು ಕೊನೆಯ ಒಂದು ಆಕ್ರಮಣಕ್ಕೆ ಪ್ರಯತ್ನಿಸಿದಾಗ ಪ್ರಭುವು ಅವನ ಕಿವಿಯ ಕೆಳಭಾಗದಲ್ಲಿ ಒಂದು ಹೊಡೆತವನ್ನು ಕೊಟ್ಟ. ಪ್ರಭುವಿನ ಈ ಪೆಟ್ಟು ಅನುದ್ದಿಷ್ಟವಾಗಿದ್ದರೂ, ಹಿರಣ್ಯಾಕ್ಷನು ತತ್ತರಿಸಿದನು. ಅವನ ಕಣ್ಣುಗುಡ್ಡೆಗಳು ಹೊರಬಂದವು. ಬೇರು ಕಿತ್ತ ಮರದಂತೆ ಅವನು ಕುಸಿದು ಬಿದ್ದನು. ನೆಲವನ್ನು ತೋಡಿ ಆನೆಯು ಕೆಂಪಾಗುವಂತೆ, ರಾಕ್ಷಸನ ರಕ್ತ ಸಿಂಚನದಿಂದ ಪ್ರಭುವಿನ ಕಪೋಲಗಳು ಕೆಂಪಾದವು.

ಮುನಿಗಳ ಸ್ತೋತ್ರ

ಉನ್ನತೋನ್ನತ ಗ್ರಹವ್ಯೂಹಗಳ ಮುನಿಗಳು ಪ್ರಭು ವರಾಹನನ್ನು ಮಾಯಾಮಯ ಎಂದು ಕೊಂಡಾಡಿದರು: ಅವನು ಸರ್ವಜ್ಞನಾಗಿ ಭೂಮಾತೆಯ ಇರವನ್ನು ಕಂಡುಹಿಡಿದ, ಉಪಕಾರ ಬುದ್ಧಿಯಿಂದ ಅವಳನ್ನು ಸ್ವಸ್ಥಾನದಲ್ಲಿ ಪುನಃ ಸ್ಥಾಪಿಸಿದ ಮತ್ತು ಲೀಲಾಜಾಲವಾಗಿ ಹಿರಣ್ಯಾಕ್ಷನ ಮಾಯೆಯನ್ನು ಸೋಲಿಸಿದ.

ಪ್ರಭು ವರಾಹನು ಎಲ್ಲ ಯಜ್ಞಗಳ ಅಜೇಯ ಭೋಕ್ತಾರ ಎಂದೂ ಮುನಿಗಳು ಪ್ರಶಂಸೆ ಮಾಡಿದರು. ಪ್ರಭು ಕೃಷ್ಣನು ಭಗವದ್ಗೀತೆಯಲ್ಲಿ (೫.೨೯) ಇದನ್ನು ದೃಢೀಕರಿಸುತ್ತಾನೆ. ಅಲ್ಲಿ ಅವನು ತನ್ನನ್ನು ಭೋಕ್ತಾರಮ್ ಯಜ್ಞ ತಪಸಾಮ್ ಅಥವಾ ಎಲ್ಲ ಯಜ್ಞಗಳು ಮತ್ತು ತಪಸ್ಸುಗಳ ಅಂತಿಮ ಫಲಾನುಭವಿ ಎಂದು ವರ್ಣಿಸಿಕೊಳ್ಳುತ್ತಾನೆ. ಶ್ರೀ ಈಶೋಪನಿಷತ್ತಿನ ಒಂದನೇ ಮಂತ್ರದಿಂದ ನಮಗೆ ತಿಳಿದು ಬರುವುದೇನೆಂದರೆ ಪ್ರತಿಯೊಂದೂ ಪರಮ ಪ್ರಭುವಿನ ಸ್ವತ್ತು, ಆದ್ದರಿಂದ ಭಕ್ತನು ಪ್ರತಿಯೊಂದನ್ನೂ ಅವನ ಸೇವೆಯಲ್ಲಿ ವಿನಿಯೋಗಿಸುವ ಮೂಲಕ ಪ್ರಭುವನ್ನು ಸಂತುಷ್ಟಿಗೊಳಿಸಲು ಪ್ರಯತ್ನಿಸುತ್ತಾನೆ. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ಪರಮ ಪ್ರಭುವಿನ ಸ್ವತ್ತನ್ನು ಉಪಭೋಗಿಸಲು ಯಾರಾದರೂ ಮೂರ್ಖತನದಿಂದ ಆಸೆಪಟ್ಟರೆ ಅವನು ಹಿರಣ್ಯಾಕ್ಷನಂತೆ ನಾಶವಾಗಿ ಹೋಗುತ್ತಾನೆ.

ಪ್ರಭು ವರಾಹನ ತ್ವಚೆಯು ವೈದಿಕ ಸ್ತೋತ್ರಗಳಿಗೆ ಸಂವಾದಿಯಾಗಿರುವವೆಂದೂ ಮತ್ತು ಅವನ ದೇಹದ ಮೇಲಿರುವ ರೋಮಗಳು ವೈದಿಕ ಧರ್ಮಾಚರಣೆಯು ಪರಿಶುಭ್ರವಾದ ದರ್ಭೆಗಳಿಗೆ ಸಂವಾದಿಯಾಗಿರುವವೆಂದೂ ಮುನಿಗಳು ವರ್ಣಿಸಿದರು. ಹೀಗೆ ಪ್ರಭು ವರಾಹನ ದಿವ್ಯ ದೇಹವು ಹೇಗೆ ಸ್ವತಃ ವೈದಿಕ ಯಜ್ಞವಾಗಿದೆಯೆಂದು ಅವರು ಅಭಿವ್ಯಕ್ತಿಸಿದರು. ಪ್ರಭು ವರಾಹನನ್ನು ಯಾರು ಸಂತೃಪ್ತಿ ಪಡಿಸುತ್ತಾರೋ ಅವರು ಸಮಸ್ತ ವೈದಿಕ ಜ್ಞಾನ, ಯಜ್ಞ, ತಪಸ್ಸು ಮತ್ತು ವೈರಾಗ್ಯಗಳೆಂಬ ಪರಮ ಗುರಿಯನ್ನು ಆಗಲೇ ಸಾಧಿಸಿರುತ್ತಾರೆ.
Leave a Reply

Your email address will not be published. Required fields are marked *