Search
Sunday 17 January 2021
  • :
  • :

ಶ್ರೀ ಅಹೋಬಲ ನರಸಿಂಹ

ಶ್ರೀ ನರಸಿಂಹಾವತಾರದ ಹಿನ್ನೆಲೆ

ಬ್ರಹ್ಮದೇವನ ಮಾನಸ ಪುತ್ರರಾದ ಸನಕ, ಸನಂದನ, ಸನಾತನ, ಸನತ್ಕುಮಾರ ಮುನಿಗಳು ವಿಷ್ಣುವಿನ ದರ್ಶನಕ್ಕಾಗಿ ವೈಕುಂಠಕ್ಕೆ ಬರುತ್ತಾರೆ. ದ್ವಾರಪಾಲಕರಾದ ಜಯ ವಿಜಯರು ಅವರನ್ನು ಒಳಗೆ ಬಿಡದೆ ಮುನಿಗಳ ಶಾಪಕ್ಕೆ ಗುರಿಯಾಗುತ್ತಾರೆ. ವಿಷ್ಣುವಿನ ಕರುಣೆಯಿಂದಾಗಿ ಶಾಪಗ್ರಸ್ತ ಜಯ, ವಿಜಯರಿಗೆ ಒಂದು ಆಯ್ಕೆ ಸಿಗುತ್ತದೆ – ವಿಷ್ಣುಭಕ್ತರಾಗಿ ಭೂಲೋಕದಲ್ಲಿ ೭ ಜನ್ಮಗಳನ್ನು ಸವೆಸುವುದು ಅಥವಾ ವಿಷ್ಣು ದ್ವೇಷಿಗಳಾಗಿ ಕೇವಲ ೩ ಜನ್ಮಗಳನ್ನು ಕಳೆಯುವುದು. ಭಗವಂತನ ಸಾನ್ನಿಧ್ಯ ಬೇಗನೆ ಪಡೆಯಬೇಕೆಂಬ ಉದ್ದೇಶದಿಂದ ಅವರು ೩ ಜನ್ಮಗಳನ್ನೆತ್ತುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲನೆಯ ಜನ್ಮದಲ್ಲಿ ಹಿರಣ್ಯಾಕ್ಷ – ಹಿರಣ್ಯಕಶಿಪುಗಳಾಗಿ, ಎರಡನೆಯ ಜನ್ಮದಲ್ಲಿ ರಾವಣ- ಕುಂಭಕರ್ಣರಾಗಿ ಹಾಗೂ ಮೂರನೆಯ ಜನ್ಮದಲ್ಲಿ ದಂತವಕ್ರ- ಶಿಶುಪಾಲರಾಗಿ ಜನಿಸಿ ಶ್ರೀಹರಿಯ ದ್ವೇಷಿಗಳಾಗಿ ಬಾಳಿ, ಶ್ರೀ ಹರಿಯಿಂದಲೇ ವಸಲ್ಪಟ್ಟು ಮತ್ತೆ ತಮ್ಮ ಸ್ವಾಮಿಯ ಸಾನ್ನಿಧ್ಯ ಪಡೆದ ಕತೆ ಲೋಕ ವಿದಿತ.

ಜಯ – ವಿಜಯರು ಮೊದಲನೆಯ ಜನ್ಮದಲ್ಲಿ, ಭೂಲೋಕದಲ್ಲಿ ಕಶ್ಯಪ ಮತ್ತು ದಿತಿಯ ಮಕ್ಕಳಾಗಿ ಜನಿಸಿ, ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬ ಹೆಸರು ಪಡೆಯುತ್ತಾರೆ. ಇವರು ದೊಡ್ಡವರಾದಂತೆಲ್ಲಾ, ಇವರ ಉಪಟಳವು ದಿನೇ ದಿನೇ ಹೆಚ್ಚಾಗಿ ಪರಾಕಾಷ್ಠೆಯತ್ತ ಹೋಗುತ್ತದೆ.

ಇದೇ ಸಮಯದಲ್ಲಿ ಭೂದೇವಿಯನ್ನು ಹಿರಣ್ಯಾಕ್ಷನು ಪಾತಾಳಕ್ಕೆಳೆದೊಯ್ಯುತ್ತಾನೆ. ಆಗ ಭೂದೇವಿ ನಾರಾಯಣನಿಗೆ ಮೊರೆಯಿಡುತ್ತಾಳೆ. ಯೋಗ ನಿದ್ರೆಯಲ್ಲಿದ್ದ ಶ್ರೀಮನ್ನಾರಾಯಣನು ಎಚ್ಚರಗೊಂಡು ಭೂದೇವಿಯ ರಕ್ಷಣೆಗೆ ಧಾವಿಸುತ್ತಾನೆ. ವರಾಹರೂಪಿ ಪರಮಾತ್ಮನು ಭೂದೇವಿಯನ್ನು ತನ್ನ ಕೋರೆದಾಡೆಯ ಮೇಲಿರಿಸಿಕೊಂಡು ನೀರನಿಂದ ಹೊರಕ್ಕೆ ತಂದು, ಹಿರಣ್ಯಾಕ್ಷನೊಂದಿಗೆ ಭೀಕರ ಕಾಳಗ ಮಾಡುತ್ತಾನೆ. ಅಂತ್ಯದಲ್ಲಿ ಹಿರಣ್ಯಾಕ್ಷನ ವಧೆಯಾಗುತ್ತದೆ.

ತನ್ನ ಸೋದರನ ಸಾವಿನಿಂದ ಕಂಗೆಟ್ಟ ಹಿರಣ್ಯಕಶಿಪು ತಾನು ದುರ್ಬಲನಾಗಿ ಹೋದೆನೆಂದು ಗ್ರಹಿಸಿ ಹೆಚ್ಚಿನ ಶಕ್ತಿ ಪಡೆಯಲು ಮಂದರ ಪರ್ವತಕ್ಕೆ ಸಾಗಿ ಅಲ್ಲಿ ಬ್ರಹ್ಮದೇವನನ್ನು ಕುರಿತು ಉಗ್ರ ತಪಸ್ಸು ಮಾಡಲು ಪ್ರಾರಂಭಿಸುತ್ತಾನೆ.

ಹಿರಣ್ಯಾಕ್ಷನ ಕಾಟದಿಂದ ಸೋತು ಸುಣ್ಣವಾಗಿದ್ದ ಇಂದ್ರಾದಿ ದೇವತೆಗಳಿಗೆ ದಾನವರನ್ನು ಬಗ್ಗುಬಡಿಯಲು ಇದೊಂದು ಸುವರ್ಣಾವಕಾಶವೆನಿಸುತ್ತದೆ. ಅವರು ದಾನವರ ಮೇಲೆ ಯುದ್ಧ ಹೂಡಿ ದೈತ್ಯರಾಜನ ಅರಮನೆಯನ್ನು ಕೊಳ್ಳೆ ಹೊಡೆಯುತ್ತಾರೆ. ಇಂದ್ರನು ಹಿರಣ್ಯಕಶಿಪುವಿನ ಮಡದಿ ಕಯಾದುವಿನ ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವನ್ನು ಸಾಯಿಸಬಯಸುತ್ತಾನೆ. ಆದರೆ ನಾರದರು ಇದಕ್ಕೆ ಅಡ್ಡಬಂದು, ಇಂದ್ರನಿಗೆ ಬುದ್ಧಿ ಹೇಳುತ್ತಾರೆ. ಕಯಾದುವಿನ ಗರ್ಭದಲ್ಲಿ ಬೆಳೆಯುತ್ತಿರುವುದು `ಪರಮ ಭಾಗವತೋತ್ತಮ ಶಿಶು’ ಎಂದು ಮನದಟ್ಟು ಮಾಡಿಕೊಡುತ್ತಾರೆ. ನಾರದರು, ಕಯಾದುವನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದು ಆಕೆಗೆ ಭಾಗವತ ಧರ್ಮದ ರಹಸ್ಯವನ್ನು ಉಪದೇಶಿಸುತ್ತಾರೆ. ಅದು ಗರ್ಭದಲ್ಲಿದ್ದ ಪ್ರಹ್ಲಾದನ ಮನಸ್ಸಿಗೆ ಚೆನ್ನಾಗಿ ನಾಟುತ್ತದೆ.

ಇತ್ತ ಹಿರಣ್ಯಕಶಿಪುವಿನ ತಪಸ್ಸಿಗೆ ಪ್ರತ್ಯಕ್ಷನಾದ ಬ್ರಹ್ಮದೇವನು, ಚಿರಂಜೀವತ್ವ ಬಿಟ್ಟು ಬೇರೇನಾದರೂ ವರವನ್ನು ಬೇಡಿಕೊಳ್ಳಲು ಹೇಳಿದಾಗ, ಹಿರಣ್ಯಕಶಿಪು ವಿಚಿತ್ರವಾದ ವರವೊಂದನ್ನು ಬೇಡಿಕೊಳ್ಳುತ್ತಾನೆ. ಅದೇನೆಂದರೆ – ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಯಾವ ಜೀವಿಯಿಂದಲೂ, ಅಷ್ಟೇ ಏಕೆ, ಮನೆಯ ಒಳಗೆ, ಹೊರಗೆ, ಹಗಲು, ರಾತ್ರಿ ಹೊತ್ತುಗಳಲ್ಲಿ ದೇವ, ದಾನವ, ಮಾನವರಿಂದ ಮರಣವಾಗಬಾರದೆಂದು – ಇದಕ್ಕೆ ಬ್ರಹ್ಮದೇವನ ಒಪ್ಪಿಗೆ ಸಿಗುತ್ತದೆ. ತನ್ನ ಸೋದರನ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ದೇವತೆಗಳಾದಿಯಾಗಿ ಎಲ್ಲರನ್ನು ಹಿಂಸಿಸತೊಡಗುತ್ತಾನೆ. ಯಜ್ಞಯಾಗಾದಿಗಳು ನಿಂತುಹೋಗುತ್ತವೆ. ಸ್ವರ್ಗಾಪತಿ ಇಂದ್ರ ಪದಚ್ಯುತನಾಗುತ್ತಾನೆ. ದೇವತೆಗಳು ಅಸಹಾಯಕರಾಗುತ್ತಾರೆ. ಋಷಿಗಳು, ಪಿತೃಗಳು, ಸಿದ್ಧರು, ವಿದ್ಯಾಧರರು, ನಾಗರು, ಮನುಗಳು, ಚಾರಣರು, ಯಕ್ಷರು, ಕಿಂಪುರುಷರಾದಿಯಾಗಿ ಎಲ್ಲರೂ ಬಾಧೆಗೊಳಗಾಗುತ್ತಾರೆ. ಮೂರು ಲೋಕಕ್ಕೆ ತಾನೇ ಒಡೆಯನೆಂದು ಹಿರಣ್ಯಕಶಿಪು ಬೀಗುತ್ತಾನೆ. ಪರಮ ಹರಿದ್ವೇಷಿಯಾಗುತ್ತಾನೆ.

ಈ ವೇಳೆಗೆ ಹಿರಣ್ಯಕಶಿಪುವಿನ ಅರಮನೆಯಲ್ಲಿ ಬೆಳೆಯುತ್ತಿದ್ದ ಬಾಲಕ ಪ್ರಹ್ಲಾದನಿಗೆ ದೈತ್ಯಗುರುಗಳಾದ, ಶುಕ್ರಾಚಾರ್ಯರ ಪುತ್ರರಾದ ಶಂಡ ಮತ್ತು ಅಮರ್ಕರೆಂಬ ಇಬ್ಬರು ಗುರುಗಳು ಪಾಠ ಹೇಳಿಕೊಡುತ್ತಿರುತ್ತಾರೆ. ಅವರು ಹೇಳಿಕೊಡುತ್ತಿದ್ದ ಧರ್ಮ, ಅರ್ಥ, ಕಾಮ ಮುಂತಾದ ಲೌಕಿಕ ಮತ್ತು ಅರ್ಥನೀತಿಗಳನ್ನು ಚಾಚೂ ತಪ್ಪದೆ ಗುರುಗಳಿಗೆ ಪ್ರಹ್ಲಾದನು ಒಪ್ಪಿಸಿದರೂ ಮೋಕ್ಷದ ಮಾರ್ಗದ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿರುತ್ತಾನೆ. ನಾನು, ನನ್ನದು ಎಂಬ `ಅಹಂ’ನಿಂದ ಅಧಃಪತನಕ್ಕೆ ಈಡಾಗುವ ಬದಲು  ಭಗವಂತನಾದ ಶ್ರೀ ಹರಿಯನ್ನೇ ಶರಣು ಹೊಂದುವುದು ಸರಿಯಾದ ಮಾರ್ಗ ಎಂದು ವಾದಿಸುತ್ತಾನೆ. ಭಕ್ತಿಯಿಂದಲೇ ಮುಕ್ತಿ ಎಂದು ನವವಿಧ ಭಕ್ತಿಗಳಿಂದ ಪರಮಾತ್ಮನನ್ನು ಸೇವಿಸಬಹುದೆಂದು ತಿಳಿಸುತ್ತಾನೆ. ಶ್ರೀ ಹರಿಯ ಸರ್ವೋತ್ತಮತ್ವವನ್ನು ಸಾರಿ ಹೇಳುವ ಮಗ ಪ್ರಹ್ಲಾದನ ಬಗ್ಗೆ ಹಿರಣ್ಯಕಶಿಪು ಉರಿದು ಬೀಳುತ್ತಾನೆ. ಕೆಂಡ ಕಾರುತ್ತಾನೆ. ಬುದ್ಧಿ ಹೇಳುತ್ತಾನೆ, ಬುದ್ಧಿ ಮಾತು ಕೇಳದ ಮಗನನ್ನು ಛೇಡಿಸುತ್ತಾನೆ. ಚಿತ್ರಹಿಂಸೆ ಕೊಡಲು ಪ್ರಾರಂಭಿಸುತ್ತಾನೆ. ಆನೆಗಳಿಂದ ತುಳಿಸುತ್ತಾನೆ. ಸರ್ಪಗಳಿಂದ ಕಚ್ಚಿಸುತ್ತಾನೆ. ಬೆಟ್ಟದಿಂದ ಕೆಳಕ್ಕೆ ತಳ್ಳಿದರೂ ಸಾಯದ ಮಗನಿಗೆ ವಿಷ ಕುಡಿಸುತ್ತಾನೆ. ಆಗಲೂ ಸಾಯದ ಮಗನನ್ನು ಕಂಡು ಕ್ರೋಧೋನ್ಮತ್ತನಾಗುತ್ತಾನೆ. ಅಣುರೇಣು ತೃಣಕಾಷ್ಠದಲ್ಲಿಯೂ ಪರಿಪೂರ್ಣ ಶ್ರೀ ಹರಿ ಇದ್ದಾನೆ ಎಂಬ ಪ್ರಹ್ಲಾದನ ನುಡಿ ಕೇಳಿದಾಗ `ನಿನ್ನ ಹರಿ ಸರ್ವವ್ಯಾಪಿಯಾಗಿದ್ದರೆ, ಅರಮನೆಯ ಈ ಕಂಬದಲ್ಲೂ ಇರಲೇಬೇಕು. ಅದು ಹೇಗೆ ಅವನು ಬಂದು ನಿನ್ನನ್ನು ಕಾಪಾಡುವನೋ ನಾನೂ ನೋಡುತ್ತೇನೆ’ ಎಂದು ಕ್ರೋಧದಿಂದ ಆರ್ಭಟಿಸಿ ಕಂಬವನ್ನು ಒದ್ದು  ಖಡ್ಗದಿಂದ ಹೊಡೆಯುತ್ತಾನೆ – ಇದು ನರಸಿಂಹ ದೇವರ ಪ್ರಾದುರ್ಭಾವಕ್ಕೂ, ಹಿರಣ್ಯಕಶಿಪುವಿನ ಅಂತ್ಯಕ್ಕೂ ಕಾರಣವಾಗುತ್ತದೆ.

ಭಯಂಕರ ಶಬ್ದ ಮಾಡುತ್ತಾ ನರಮೃಗವೇಷಧಾರಿ ಶ್ರೀ ಹರಿ ಕಂಬ ಸೀಳಿ ಹೊರಬರುತ್ತಿದ್ದಂತೆ ಮೂರು ಲೋಕದಲ್ಲಿಯೂ ಅಲ್ಲೋಲ ಕಲ್ಲೋಲವಾಗುತ್ತದೆ. ದೇವತೆಗಳು ಗಾಬರಿಗೊಳ್ಳುತ್ತಾರೆ. ಬ್ರಹ್ಮ, ರುದ್ರ ಇಂದ್ರಾದಿಗಳು ಆ ಸ್ಥಳಕ್ಕೆ ಓಡಿ ಬರುತ್ತಾರೆ. ರೌದ್ರರೂಪಿ ನರಸಿಂಹನು ಹಿರಣ್ಯಕಶಿಪುವಿನ ಕರುಳನ್ನು ಬಗಿದು ಆರ್ಭಟಿಸುತ್ತಿರುವುದನ್ನು ಕಂಡು ಅವರಿಗೆ ಏನು ಮಾಡಬೇಕೆಂದು ತೋಚದೆ ಶಾಂತನಾಗಲು ಕೋರಿ ಸ್ತೋತ್ರಗೈಯುವಂತೆ ಪ್ರಹ್ಲಾದನನ್ನು  ಕೇಳುತ್ತಾರೆ.

ಪ್ರಹ್ಲಾದ ಕ್ಷೇಮವಾಗಿದ್ದಾನೆಂದು ತಿಳಿದ ನರಸಿಂಹ ದೇವರ ಕೋಪ ಇಳಿಯುತ್ತದೆ. ಮಹಾಲಕ್ಷ್ಮಿಯ ಸಾನ್ನಿಧ್ಯ ಮುದ ಕೊಡುತ್ತದೆ. ದೈತ್ಯನ ವಧೆಯ ಸುದ್ದಿಯನ್ನು ತಿಳಿದು ದೇವತಾ ಸ್ತ್ರೀಯರ ಮುಖವರಳಿ, ಅವರು ಪುಷ್ಪವೃಷ್ಟಿ ಮಾಡುತ್ತಾರೆ. ದೇವದುಂದುಭಿಗಳು ಮೊಳಗುತ್ತವೆ. ಗಂಧರ್ವರು ಸಂತೋಷದಿಂದ ಗಾನಮಾಡುತ್ತಾರೆ. ಅಪ್ಸರೆಯರು ನೃತ್ಯಗೈಯುತ್ತಾರೆ. ಎಲ್ಲೆಲ್ಲೂ ಸಂತೋಷದ ಹೊಳೆ ಹರಿಯುತ್ತದೆ.

ಹೀಗೆ ತಮ್ಮ ಸ್ವಾಮಿಯಿಂದಲೇ ಸಂಹಾರಗೊಂಡ ಹಿರಣ್ಯಾಕ್ಷ-ಹಿರಣ್ಯಕಶಿಪು ರೂಪಿ ಜಯ-ವಿಜಯರಿಗೆ ಒಂದು ರಾಕ್ಷಸ ಜನ್ಮದ ಪೊರೆ ಕಳಚುತ್ತದೆ. ಪ್ರಹ್ಲಾದನ ಧರ್ಮ ಸಾಮ್ರಾಜ್ಯ ಪ್ರಾರಂಭವಾಗುತ್ತದೆ.

ಹಿಂದೆ, ಮಾರ್ಕಂಡೇಯ ಮುನಿ ಇಲ್ಲಿ ತಪಸ್ಸು ಮಾಡಿ ಅಹೋಬಲ ನರಸಿಂಹನ ದರ್ಶನ ಪಡೆದದ್ದರಿಂದ ಇದನ್ನು ಮಾರ್ಕಂಡೇಯ (ಅಹೋಬಲ) ಕ್ಷೇತ್ರವೆಂದೂ ಕರೆಯುತ್ತಾರೆ. ನರಸಿಂಹದೇವರು ಪ್ರತ್ಯಕ್ಷರಾದಾಗ ಮಾರ್ಕಂಡೇಯ ಮುನಿ ಕೇಳಿದ್ದಾದರೂ ಏನೂ? “ಸ್ವಾಮಿ, ನೀನು ಈ ಕ್ಷೇತ್ರದಲ್ಲಿ ಅನುಗಾಲವೂ ಸನ್ನಿಹಿತನಾಗಿರಬೇಕು. ಅಲ್ಲದೆ, ಬ್ರಹ್ಮ ,ಶಂಭು, ಇಂದ್ರಾದಿ ದೇವತೆಗಳೂ ನಿನ್ನ ಜೊತೆಯಲ್ಲಿ ಇಲ್ಲಿ ಸನ್ನಿಹಿತರಾಗಿರಬೇಕು. ಇಲ್ಲಿಗೆ ಬರುವ ಮನುಜರ ಪಾಪವನ್ನು ಕಳೆದು, ಅವರ ಜನ್ಮ ಪಾವನಗೊಳಿಸಬೇಕು. ಸುಜ್ಞಾನವನ್ನೀಯಬೇಕು” ಎಂದು.

ಇಂತಹ ಪುಣ್ಯಕ್ಷೇತ್ರ ದರ್ಶನವನ್ನೇ ನಾವೀಗ ಮಾಡಲು ಹೊರಟಿರುವುದು.

ಅಹೋಬಲ ನರಸಿಂಹ ಕ್ಷೇತ್ರ

ಅಹೋಬಲ ಕ್ಷೇತ್ರವು ಶ್ರೀ ನರಸಿಂಹ ಸ್ವಾಮಿಯು ಅವತರಿಸಿದ ಕ್ಷೇತ್ರ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿದೆ. ನಂದ್ಯಾಲದಿಂದ ಸುಮಾರು ೬೦ ಕಿ.ಮೀ.ಗಳಷ್ಟು ದೂರದಲ್ಲಿದೆ. ನಂದ್ಯಾಲದಿಂದ ಆಳ್ಳಗಡ್ಡಕ್ಕೆ ೪೨ ಕಿ.ಮೀ. ಆಳ್ಳಗಡ್ಡದಿಂದ ಕೆಳಗಿನ ಅಹೋಬಲಕ್ಕೆ ಸುಮಾರು ೨೪ ಕಿ.ಮೀ. ಈ ಕ್ಷೇತ್ರವು ಸುಮಾರು ೨೫೦ ಮೈಲಿಗಳಷ್ಟು ಉದ್ದಕ್ಕೆ ದಕ್ಷಿಣೋತ್ತರವಾಗಿ ಹರಡಿರುವ ಪೂರ್ವಘಟ್ಟದ ಬೆಟ್ಟಸಾಲಿನ ಮಧ್ಯಭಾಗವಾಗಿದೆ. ಪೌರಾಣಿಕವಾಗಿ ಇದು ಘಟ್ಟಪ್ರದೇಶದ ಮೇಲೆ ಮೈಚಾಚಿ ಮಲಗಿರುವ ಆದಿಶೇಷನ ನಡುಭಾಗವನ್ನು (ಮಧ್ಯ) ಪ್ರತಿನಿಸುತ್ತದೆ. ತಿರುಮಲೆಯು ಆದಿಶೇಷನ ಹೆಡೆಯ ಭಾಗವನ್ನು, ಶ್ರೀಶೈಲವು ಬಾಲದ ಭಾಗವನ್ನು ಪ್ರತಿನಿಸುತ್ತವೆ.

ಈ ಕ್ಷೇತ್ರದಲ್ಲೇ ಎರಡು ಭಾಗಗಳನ್ನು ಗಮನಿಸಬಹುದು ೧) ಕೆಳಗಿನ ಅಹೋಬನ ೨) ಮೇಲಿನ ಅಹೋಬಲ.

ಕೆಳಗಿನ ಅಹೋಬಲ

ಅಹೋಬಲವು ಪುಣ್ಯಕ್ಷೇತ್ರವಾಗಿದ್ದು, ಆಳ್ಳಗಡ್ಡದಿಂದ ವಾಹನ ಸೌಕರ್ಯವಿದೆ.  ಬಸ್ಸು ನೇರವಾಗಿ ಕೆಳಗಿನ ಅಹೋಬಲದ ನರಸಿಂಹಸ್ವಾಮಿ ದೇವಾಲಯದ ಸಮೀಪದವರೆಗೂ ಹೋಗುತ್ತದೆ.

ಕೆಳ ಅಹೋಬಲದಲ್ಲಿ ಭವ್ಯವಾದ ಪುರಾತನ ಪ್ರಹ್ಲಾದ ವರದ ನರಸಿಂಹ ಸ್ವಾಮಿ ದೇವಾಲಯವಿದೆ. (ಇದು ನವನರಸಿಂಹರ ಪಟ್ಟಿಗೆ ಸೇರುವುದಿಲ್ಲ)

ಭವಿಷ್ಯೋತ್ತರ ಪುರಾಣದ ಶ್ರೀ ವೆಂಕಟಗಿರಿ ಮಹಾತ್ಮೆಯಲ್ಲಿ ತಿರುಪತಿಯ ಶ್ರೀನಿವಾಸನು ತನ್ನ ಕುಲದೈವವಾದ ಅಹೋಬಲ ನರಸಿಂಹಸ್ವಾಮಿಗೆ ವಿವಾಹಪೂರ್ವ ಪ್ರಥಮ ಪೂಜೆ ಸಲ್ಲಿಸಲು ಗರುಡವಾಹನನಾಗಿ ಪದ್ಮಾವತಿ ಸಮೇತ ಇಲ್ಲಿಗೆ ಬಂದು ನರಸಿಂಹಸ್ವಾಮಿಯ ದರ್ಶನ ಮಾಡಿದನು. ಸ್ವಾಮಿಯ ಎಡಭಾಗದಲ್ಲಿ ಶ್ರೀನಿವಾಸ ದೇವರ ಪ್ರತಿಮೆ ಇದೆ. ೬೪ ಕಂಬಗಳ ಕಲ್ಯಾಣ ಮಂಟಪವನ್ನು ಇಲ್ಲಿ ಕಾಣಬಹುದು. ಶ್ರೀ ರಾಮಾನುಜ ಮತ್ತು ಆಳ್ವಾರರ ಪ್ರತಿಮೆಗಳು ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ಇದೊಂದು ಪ್ರಸಿದ್ಧ ಶ್ರೀ ವೈಷ್ಣವ ಕ್ಷೇತ್ರವಾಗಿದೆ.

ಮೇಲಿನ ಅಹೋಬಲ

ಕೆಳಗಿನ ಅಹೋಬಲದಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಮೇಲಿನ ಅಹೋಬಲ ತಲಪಲು ರಿಕ್ಷಾ,ಟಾಕ್ಸಿ ಇತ್ಯಾದಿ ವಾಹನಗಳ ವ್ಯವಸ್ಥೆ ಇದೆ. ಮೇಲಿನ ಅಹೋಬಲ ತಲಪಲು ಇನ್ನೂ ೧ ಕಿ.ಮೀ. ದೂರ ಇರುವಂತೆಯೆ ಕಾರಂಜ ನರಸಿಂಹ ದೇವಾಲಯ ಸಿಗುತ್ತದೆ. ಮುಂದೆ ಪ್ರಯಾಣಿಸಿದಾಗ ಸಿಗುವುದೇ `ಎಗುವ ಅಹೋಬಲ’ ಅಥವಾ ಮೇಲಿನ ಅಹೋಬಲ ಬೆಟ್ಟ. ಅಲ್ಲಿನ ವಾಹನ ನಿಲ್ದಾಣ ತಲಪುತ್ತಿದ್ದಂತೆಯೆ, ಇಬ್ಭಾಗವಾಗಿರುವ ಬೃಹತ್ ಕೋಟೆಯ ಗೋಡೆಯು ನಮ್ಮ ಗಮನ ಸೆಳೆಯುತ್ತದೆ. ಸ್ವಲ್ಪ ಪಕ್ಕಕ್ಕೆ ಬಂದರೆ ಸ್ವಾಮಿ ಪುಷ್ಕರಣಿ, ಛತ್ರಗಳು ಕಾಣಿಸುತ್ತವೆ. ಪುಷ್ಕರಣಿಯನ್ನು ಬಳಸಿ ಸ್ವಲ್ಪ ಮುಂದೆ ಹೋದರೆ, ಅಹೋಬಲ ದೇವಸ್ಥಾನಕ್ಕೆ ಹೋಗಲು ಮೆಟ್ಟಿಲುಗಳು ಕಂಡು ಬರುತ್ತವೆ. ಈ ಮೆಟ್ಟಿಲುಗಳ ಸಮೀಪದಲ್ಲೇ `ಬ್ರಾಹ್ಮಣ ನಿತ್ಯ ಅನ್ನದಾನ ಸತ್ರಮು’ ಇದೆ. ಮೆಟ್ಟಿಲುಗಳನ್ನೇರಿ ಬಲಕ್ಕೆ ತಿರುಗಿದರೆ ಅಹೋಬಲ ನರಸಿಂಹ ಸ್ವಾಮಿಯ ದೇವಸ್ಥಾನದ ಮುಖ್ಯದ್ವಾರ ಕಾಣಿಸುತ್ತದೆ. ಇದೇ `ಅಹೋಬಲ ನರಸಿಂಹ’ನ ತಾಣ. ಇಲ್ಲಿ ದರ್ಶನ ಮುಗಿಸಿ, ಮುಂದೆ ದೇವಸ್ಥಾನದ ಪಕ್ಕದಲ್ಲೇ ಇರುವ ದಾರಿಯಲ್ಲಿ ಮುಂದುವರಿದು ಕ್ರೋಡ‌, ಮಾಲೋಲ, ಪ್ರಹ್ಲಾದನ ಶಾಲೆ, ಜ್ವಾಲಾ ನರಸಿಂಹ ದೇಗುಲಗಳನ್ನು ಹಾಗೂ ಉಗ್ರಸ್ತಂಭವನ್ನು ಸಂದರ್ಶಿಸಬಹುದು.

ನವ ನರಸಿಂಹ ದೇವಾಲಯಗಳು

೧. ಶ್ರೀ ಭಾರ್ಗವ ನರಸಿಂಹ

ಕೆಳಗಿನ ಅಹೋಬಲದಿಂದ ೨ಕಿ.ಮೀ. ದೂರದಲ್ಲಿರುವ ಭಾರ್ಗವ ನರಸಿಂಹನನ್ನು ರಿಕ್ಷಾದಲ್ಲಿ ಅಥವಾ ನಡೆದುಕೊಂಡು ಹೋಗಿ ದರ್ಶನ ಮಾಡಬಹುದು. ಮುಖ್ಯ ರಸ್ತೆಯಿಂದ ಮಣ್ಣು ಕಲ್ಲಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋಗಬೇಕಾಗುತ್ತದೆ. ದೇವಸ್ಥಾನ ಪ್ರವೇಶಿಸಲು ೧೩೨ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಮೆಟ್ಟಿಲ ಬಳಿಯಲ್ಲೇ ಸುಂದರವಾದ ಅಕ್ಷಯ ತೀರ್ಥವೆಂಬ ಕೊಳವಿದೆ.

ಹಿರಣ್ಯಕಶಿಪುವನ್ನು ವಸಿದ ಮಹಾವಿಷ್ಣುವಿನ ರೂಪವನ್ನು ನೋಡಬೇಕೆಂದು ಪರಶುರಾಮನು ಅಕ್ಷಯ ತೀರ್ಥದ ಬಳಿ ಧ್ಯಾನಿಸಿದಾಗ ಆವಿರ್ಭವಿಸಿದ ನರಸಿಂಹ ರೂಪವಿದು.

ವಸಿಷ್ಠರೂ ಇಲ್ಲಿ ಪೂಜೆ ಸಲ್ಲಿಸಿದ್ದಾರೆಂದು ಸ್ಥಳೀಯರ ನಂಬಿಕೆ. ಭಾರ್ಗವ ನರಸಿಂಹ ಸ್ವಾಮಿಯು ಚತುರ್ಭುಜನಾಗಿದ್ದು, ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರ ಹೊಂದಿದ್ದು ಉಳಿದೆರಡು ಕೈಗಳಿಂದ ಅಸುರನ ಹೊಟ್ಟೆಯನ್ನು ಬಗಿಯುತ್ತಿದ್ದಾನೆ. ಒಂದು ವಿಶೇಷವೇನೆಂದರೆ ನರಸಿಂಹಸ್ವಾಮಿಯ ತೊಡೆಯ ಮೇಲೆ ಹಿಡಿದಿಡಲ್ಪಟ್ಟಿರುವ ಹಿರಣ್ಯ ಕಶಿಪುವಿನ ತಲೆಯ ದಿಕ್ಕು ಇಲ್ಲಿ ಅದಲು ಬದಲಾಗಿರುವುದು. ಸಮೀಪದಲ್ಲೇ ನಮಸ್ಕರಿಸುತ್ತಿರುವ ಪ್ರಹ್ಲಾದನ ಮೂರ್ತಿ ಇದೆ.

ಭಾರ್ಗವಾಖ್ಯ ತಪಸ್ವೀಶ ಭಾವನಾ ಭಾವಿತಾತ್ಮನೇ |
ಅಕ್ಷಯ್ಯ ತೀರಸ್ಥ ಭಾರ್ಗವಾಯಾಸ್ತು ಮಂಗಳಂ ||

ಭೃಗು ವಂಶದ ಭಾರ್ಗವನೆಂಬ ತಪಸ್ವಿಯ ತಪೋಧ್ಯಾನಗಳಿಗೆ ಒಲಿದ ಅಕ್ಷಯತೀರ್ಥದ ದಂಡೆಯಲ್ಲಿರುವ ಭಾರ್ಗವ ನರಸಿಂಹನಿಗೆ ಮಂಗಳವಾಗಲಿ.

೨. ಶ್ರೀ ಛತ್ರವಟ ನರಸಿಂಹ ಸ್ವಾಮಿ

ಯೋಗಾನಂದ ನರಸಿಂಹ ದೇವಾಲಯವಿರುವ ದಿಕ್ಕಿನಲ್ಲಿ ನಾಲ್ಕು ಕಿ.ಮೀ.ಗಳಷ್ಟು ದೂರ ಕ್ರಮಿಸಿದರೆ ಛತ್ರವಟ ನರಸಿಂಹ ಸ್ವಾಮಿಯ ಮಂದಿರ ದೊರಕುತ್ತದೆ.

ನವ ನರಸಿಂಹಮೂರ್ತಿಗಳಲ್ಲಿ ಇದು ಅತ್ಯಂತ ದೊಡ್ಡದಷ್ಟೇ ಅಲ್ಲದೆ ಅತ್ಯಂತ ಸುಂದರವಾಗಿರುವ ಮೂರ್ತಿ. ಪದ್ಮಾಸನಸ್ಥಿತನಾಗಿರುವ ಸ್ವಾಮಿಯ ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರವಿದೆ. ಮೂರನೇ ಕೈ ಒರಗಿಕೊಳ್ಳುವ ಭಂಗಿಯಲ್ಲಿದ್ದು ನಾಲ್ಕನೆಯ ಕೈ ಎಡತೊಡೆಯ ಮೇಲಿದ್ದು (ತಾಳಮುದ್ರೆ) ಸಂಗೀತ ಸವಿಯುತ್ತಿರುವಂತಿದೆ. ತಲೆಯಲ್ಲಿ ಕಿರೀಟ, ಕೊರಳಲ್ಲಿ ಹಾರ, ವಕ್ಷಸ್ಥಳದಲ್ಲಿ ಲಕ್ಷ್ಮೀದೇವಿ ಇದ್ದಾಳೆ.

ದೇವಲೋಕದ ಹಾಹಾ – ಹೂಹೂ ಎಂಬ ಶಾಪಗ್ರಸ್ತರಾಗಿದ್ದ ಇಬ್ಬರು ಗಂಧರ್ವರು ಮೇರು ಪರ್ವತದಿಂದ ಇಲ್ಲಿಗೆ ಬಂದು ಸ್ವಾಮಿಗೆ ಸಂಗೀತ, ನೃತ್ಯ ಸೇವೆ ಮಾಡಿ ಶಾಪ ವಿಮೋಚನೆಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರೆಂದು ಪ್ರತೀತಿ.

ಇಂದ್ರಾದಿ ದೇವತೆಗಳು ಇಲ್ಲಿಗೆ ಬಂದು ಹಿರಣ್ಯಕಶಿಪುವಿನ ವಧೆಗಾಗಿ ತಮ್ಮ ಅಳಲನ್ನು ಈ ಜಾಗದಲ್ಲಿ ಮಹಾವಿಷ್ಣುವಿನ ಬಳಿ ತೋಡಿಕೊಂಡಿದ್ದರಿಂದ ಈ ಕ್ಷೇತ್ರವನ್ನು ದೇವತಾ ಆರಾಧನಾ ಕ್ಷೇತ್ರವೆಂದು ಕರೆಯುತ್ತಾರೆ.

ದೇವತೆಗಳೂ, ಗಂಧರ್ವರೂ ಅಪ್ಸರೆಯರೂ ಮನುಷ್ಯರೂಪದಿಂದ ಇಂದಿಗೂ ಇಲ್ಲಿ ಭಗವಂತನ ಸೇವೆ ಮಾಡುತ್ತಿರುವರೆಂದು ಜನರ ನಂಬಿಕೆ. ಸಂಗೀತಗಾರರು ಇಲ್ಲಿಗೆ ಬಂದು ತಮ್ಮ ಸಂಗೀತ ಸುಧೆಯನ್ನು ಇಲ್ಲಿ ಹರಿಸಿ ಕೃತಾರ್ಥರಾಗುತ್ತಾರೆ.

ಹಾಹಾ ಹೂಹ್ವಾಖ್ಯ ಗಂಧರ್ವ ನೃತ್ಯಗೀತ ಹೃತಾತ್ಮನೇ |
ಭವ ಹಂತೃತಟಚ್ಛತ್ರವಟ ಸಿಂಹಾಯ ಮಂಗಳಂ ||

ಹಾಹಾ ಹೂಹೂ ಎಂಬ ಗಂಧರ್ವರ ನೃತ್ಯಗೀತಗಳಿಗೆ ಮನಸೋತ ಭವನಾಶಿನಿ ನದಿಯ ದಡದಲ್ಲಿ ಛತ್ರಿಯ ಕಡ್ಡಿಗಳಂತೆ ಹರಡಿನಿಂತ ವಟ ವೃಕ್ಷದಡಿಯಲ್ಲಿ ಪದ್ಮಪೀಠದ ಮೇಲೆ ಆಸೀನನಾಗಿರುವ ಛತ್ರವಟ ನರಸಿಂಹ ದೇವನಿಗೆ ಮಂಗಳವಾಗಲಿ.

೩. ಶ್ರೀ ಯೋಗಾನಂದ ನರಸಿಂಹ

ಕೆಳಗಿನ ಅಹೋಬಲದಿಂದ ಸುಮಾರು ೨ ಕಿ.ಮೀ. ಆಗ್ನೇಯ ದಿಕ್ಕಿನಲ್ಲಿ ಯೋಗಾನಂದ ನರಸಿಂಹ ಸ್ವಾಮಿಯ ಮಂದಿರವಿದೆ. ಇಲ್ಲಿ ಸ್ವಾಮಿಯು ಯೋಗಮುದ್ರೆಯಲ್ಲಿದ್ದು ಮಂದಸ್ಮಿತನಾಗಿರುವುದರಿಂದ ಈ ಮೂರ್ತಿಯನ್ನು ಯೋಗಾನಂದ ನರಸಿಂಹನೆನ್ನುತ್ತಾರೆ.

ಪದ್ಮಾಸೀನನಾಗಿರುವ ಸ್ವಾಮಿಯ ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರವಿದೆ. ಉಳಿದೆರಡು ಕೈಗಳು ಮಂಡಿಯ ಮೇಲಿವೆ. ಮೂರ್ತಿಯು ೨ ಅಡಿಗಳಷ್ಟು ಎತ್ತರವಿದ್ದು ಮಡಿಚಿಕೊಂಡಿರುವ ಕಾಲುಗಳ ಸುತ್ತ ಯೋಗ ಪಟ್ಟಿ ಇದೆ.

ಚತುರಾನನ ಚೇತೋಬ್ಜ ಚಿತ್ರಭಾನು ಸ್ವರೂಪಿಣೇ |
ವೇದಾದ್ರಿ ಗಹ್ವರ ಸ್ಥಾಯ ಯೋಗಾನಂದಾಯ ಮಂಗಳಂ ||

ಚತುರ್ಮುಖ ಬ್ರಹ್ಮನ ಹೃದಯ ಕಮಲವನ್ನು ಅರಳಿಸುವ ಸೂರ್ಯನಂತಿರುವ, ವೇದವೆಂಬ ಪರ್ವತದ ರಹಸ್ಯಾರ್ಥವೆಂಬ ಗುಹೆಯಲ್ಲಿ ನೆಲಸಿರುವ ಯೋಗಾನಂದ ನರಸಿಂಹನಿಗೆ ಮಂಗಳವಾಗಲಿ.

೪. ಶ್ರೀ ಕಾರಂಜಿ ನರಸಿಂಹ (ಸಾರಂಗ ನರಸಿಂಹ)

ಮೇಲಿನ ಅಹೋಬಲ ತಲಪಲು ಇನ್ನೂ ೧ ಕಿ.ಮೀ. ದೂರ ಇರುವಂತೆಯೇ ಕಾರಂಜಿ ನರಸಿಂಹ ದೇವಾಲಯವು ಕಂಡುಬರುತ್ತದೆ.

ಕಾರಂಜಿ ವೃಕ್ಷದಡಿಯಲ್ಲಿರುವ ಈ ದೇವಸ್ಥಾನದಲ್ಲಿ , ಆದಿಶೇಷನ ಹೆಡೆಯ ಚಪ್ಪರದಡಿಯಲ್ಲಿ ಕಾರಂಜಿ ನರಸಿಂಹ ಮೂರ್ತಿಯು ಕಂಡುಬರುತ್ತದೆ. ಮೇಲಿನ ಎರಡು ಕೈಗಳಲ್ಲಿ ಒಂದರಲ್ಲಿ ಚಕ್ರ ಮತ್ತು ಇನ್ನೊಂದರಲ್ಲಿ ಬಿಲ್ಲು  (ಸಾರಂಗ) ಇರುವುದರಿಂದ ಈ ನರಸಿಂಹ ದೇವರಿಗೆ ಸಾರಂಗ ನರಸಿಂಹನೆಂಬ ಹೆಸರು ಕೂಡ ಬಂದಿದೆ. ಈ ಸ್ಥಳ ವಿಶೇಷ ಹೀಗಿದೆ.

  1. ಗೋಭಿಲ ಮುನಿಯು ದೂರ್ವಾಸರಿಂದ ಶಾಪಗ್ರಸ್ತನಾಗಿ ಅಜ್ಞಾನಿಯಾಗಿ ಎಲ್ಲೆಲ್ಲೋ ಅಲೆಯುತ್ತ ಕೊನೆಗೆ ಈ ಕ್ಷೇತ್ರಕ್ಕೆ ಬರುತ್ತಾನೆ. ಭಕ್ತಿಯಿಂದ ನರಸಿಂಹ ಮಹಾ ಮಂತ್ರವನ್ನು ಜಪಿಸಿ, ಸ್ವಾಮಿಯ ಅನುಗ್ರಹದಿಂದಾಗಿ ಮೊದಲಿನಂತೆ ಅಪಾರ ಜ್ಞಾನ ಪಡೆಯುತ್ತಾನೆ. ಯಾರು ಜ್ಞಾನವನ್ನು ಬಯಸುತ್ತಾರೋ ಅವರಿಲ್ಲಿ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಾರೆ.
  2. ಇನ್ನೊಂದು ಕತೆಯ ಪ್ರಕಾರ ಆಂಜನೇಯನು ಇಲ್ಲಿ ಪೂಜೆ ಸಲ್ಲಿಸಿದಾಗ ನರಸಿಂಹ ದೇವನು ಪ್ರತ್ಯಕ್ಷನಾಗುತ್ತಾನೆ. ಶ್ರೀರಾಮಚಂದ್ರನಲ್ಲದೆ ಬೇರೆ ದೇವತೆಗಳನ್ನು ನಾನು ಗುರ್ತಿಸಲಾರೆ ಎಂದು ಆಂಜನೇಯನು ಹೇಳಿದಾಗ ನರಸಿಂಹ ದೇವನು ಬಿಲ್ಲನ್ನು ಧರಿಸಿ ತಾನೆ ಶ್ರೀರಾಮ ಎಂದು ಮನದಟ್ಟು ಮಾಡಿಕೊಡುತ್ತಾನೆ.

ಇಲ್ಲಿನ ನರಸಿಂಹ ದೇವರಿಗೆ ಹಣೆಗಣ್ಣು (ಮೂರನೆಯ ಕಣ್ಣು) ಇದೆ.

ಗೋ ಭೂ ಹಿರಣ್ಯ ನಿರ್ವಿಣ್ಣ ಗೋಭಿಲ ಜ್ಞಾನದಾಯಿನೇ |
ಪ್ರಭಂಜನ ಜನಾಸೀರ ಕಾರಂಜಾಯಾಸ್ತು ಮಂಗಲಂ ||

ಗೋವುಗಳು, ಭೂಮಿ ಹಾಗೂ ಚಿನ್ನದ ಬಗ್ಗೆ ವೈರಾಗ್ಯತಾಳಿದ ಗೋಭಿಲ ಮುನಿಗೆ ಜ್ಞಾನ ನೀಡಿದ, ವಾಯು ಮತ್ತು ಇಂದ್ರ ದೇವರ ಸಹಯೋಗದಲ್ಲಿರುವ ಕಾರಂಜಿ ನರಸಿಂಹ ದೇವರಿಗೆ ಮಂಗಳವಾಗಲಿ.

೫. ಅಹೋಬಲ ನರಸಿಂಹ ಸ್ವಾಮಿ

ಅಹೋಬಲ ನರಸಿಂಹ ಸ್ವಾಮಿಯ ಸನ್ನಿ ಇರುವುದು ಪಶ್ಚಿಮ ವಾಹಿನಿಯಾದ ಭವನಾಶಿನಿ ನದಿಯ ಗಜತೀರ್ಥದ ಎಡದಂಡೆಯ ಮೇಲೆ ಹಿರಣ್ಯಕಶಿಪುವಿನ ವಧೆಗಾಗಿ ಶ್ರೀ ಮಹಾವಿಷ್ಣುವು ಅವನ ಅರಮನೆಯ ಕಂಬವೊಂದನ್ನು ಸೀಳಿಕೊಂಡು ನರಸಿಂಹ ರೂಪದಿಂದ ಹೊರಬಂದು ಅಸುರನ ಒಡಲನ್ನು ತನ್ನ ಉಗುರುಗಳಿಂದ ಬಗಿದು ವಸಿದಾಗ ಅಲ್ಲಿ ಸೇರಿದ್ದ ದೇವತೆಗಳು ಅಚ್ಚರಿಗೊಂಡು,

ಅಹೋವೀರ್ಯಂ, ಅಹೋಶೌರ್ಯ, ಅಹೋಬಾಹು ಪರಾಕ್ರಮಂ |
ನರಸಿಂಹಂ ಪರಂ ದೈವಂ ಅಹೋಬಲಂ ! ಅಹೋಬಲಂ ||

ಎಂದು ಉದ್ಗರಿಸಿದರಂತೆ. ಹೀಗಾಗಿ ಈ ಕ್ಷೇತ್ರಕ್ಕೆ ಅಹೋಬಲ ಕ್ಷೇತ್ರವೆಂದು ಹೆಸರು ಬಂದಿತು.

ಇಲ್ಲಿ  ನರಸಿಂಹ ದೇವರು, ಬಿಲದಲ್ಲಿ (ಗುಹೆ)ರುವುದರಿಂದ ಈ ಕ್ಷೇತ್ರವನ್ನು ಅಹೋಬಿಲಂ ಎಂದು ಅನಂತರದವರು ಕರೆದಿದ್ದಾರೆ.

ಅಹೋಬಲ ನರಸಿಂಹ ದೇವರು ಸಾಲಿಗ್ರಾಮವಾಗಿದ್ದು, ಉಗ್ರ ನರಸಿಂಹನಾಗಿದ್ದಾನೆ.  ಪಕ್ಕದಲ್ಲಿಯೇ ಪ್ರಹ್ಲಾದನು ಕೈಗಳನ್ನು ಮುಗಿದು ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಈ ಸಾಲಿಗ್ರಾಮ ಮೂರ್ತಿಗೆ ಎರಡು ಭುಜಗಳಿವೆ. ಈ ದೇವಾಲಯದಲ್ಲಿ ಚೆಂಚುಲಕ್ಷ್ಮೀ, ಶ್ರೀ ಚಕ್ರ ಇವುಗಳನ್ನೂ ನೋಡಬಹುದು.

ಈ ದೇವಾಲಯವು ಬೆಟ್ಟದ ಮಧ್ಯಭಾಗದಲ್ಲಿದ್ದು ಭವ್ಯವಾಗಿದೆ. ನವನರಸಿಂಹ ಮೂರ್ತಿಗಳಲ್ಲಿ ಅತ್ಯಂತ ಮುಖ್ಯ ಮೂರ್ತಿಯಾಗಿದ್ದು, ಕ್ಷೇತ್ರ ಮಹಿಮೆಗೆ ಕಾರಣವಾಗಿದೆ. ಅಹೋಬಲ ನರಸಿಂಹನು ಭಕ್ತರ ಆರಾಧ್ಯ ದೈವವಾಗಿದ್ದಾನೆ.

ಶ್ರೀ ರಾಮಚಂದ್ರನು ಸೀತೆಯನ್ನು ಹುಡುಕುತ್ತಾ, ಅಹೋಬಲ ಕ್ಷೇತ್ರ ಮಾರ್ಗವಾಗಿ ಬಂದು ನರಸಿಂಹಸ್ವಾಮಿಯ ದರ್ಶನ ಮಾಡಿ  ಶ್ಲೋಕಗಳಿಂದ ಸ್ತುತಿಸಿದ್ದನೆಂಬುದರ ಸಂಕೇತವಾಗಿ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾದೇವಿಯರ ವಿಗ್ರಹಗಳನ್ನೂ ಕಾಣಬಹುದು.

ಶ್ರೀ ಶಠಾರಿ ಯತೀಂದ್ರಾದಿ ಯೋಗಿ ಹೃತ್ಪದ್ಮ ಭಾನವೇ |
ಸರ್ವತ್ರ ಪರಿಪೂರ್ಣಾಯಽಹೋಬಿಲೇಕಾಯ ಮಂಗಳಂ ||         

ಶ್ರೀ ಶಠಾರಿ ಯೋಗಿಗಳೇ ಮುಂತಾದ ಯೋಗಿಗಳ ಹೃದಯ ಕಮಲಗಳನ್ನು ಅರಳಿಸಿರುವ ಸೂರ್ಯನಂತಿರುವ, ಎಲ್ಲೆಡೆ ತುಂಬಿ ಪರಿಪೂರ್ಣನಾದ ಅಹೋಬಲ ಕ್ಷೇತ್ರದ ಒಡೆಯನಿಗೆ ಮಂಗಳವಾಗಲಿ.

೬. ಶ್ರೀ ವರಾಹ ನರಸಿಂಹ (ಕ್ರೋಢ ನರಸಿಂಹ)

ಮೇಲಿನ ಅಹೋಬಲದಿಂದ ೨ ಕಿ.ಮೀ. ದೂರದಲ್ಲಿ ವೇದಾದ್ರಿ ಮತ್ತು ಗರುಡಾದ್ರಿಗಳ ಮಧ್ಯೆ ವರಾಹ ನರಸಿಂಹನ ದೇಗುಲವಿದೆ. ಇದರಲ್ಲಿ ಎರಡು ಮೂರ್ತಿಗಳಿವೆ ೧)ಹಿರಣ್ಯಾಕ್ಷನನ್ನು ಕೊಂದು ವೇದಗಳನ್ನು ಕಾಪಾಡಿದ ವರಾಹರೂಪಿ ನರಸಿಂಹದೇವರು. ಈ ಮೂರ್ತಿಗೆ ವರಾಹ ಮುಖ, ಮನುಷ್ಯನ ದೇಹ, ಎರಡು ಕೈಗಳು ಮತ್ತು ಸಿಂಹದ ಬಾಲವಿದೆ. ತನ್ನ ಮೂರ್ತಿಯಿಂದ ದೇವಿಯನ್ನು ಪ್ರೀತಿಯಿಂದ ಸ್ಪರ್ಶಿಸುತ್ತಿರುವಂತಿದೆ. ೨)ಇನ್ನೊಂದು ಮೂರ್ತಿಯು ಶ್ರೀ ಲಕ್ಷ್ಮೀನೃಸಿಂಹನದಾಗಿದೆ.

ವರಾಹಕುಂಡೇ ಮೇದಿನ್ಯೈ ವಾರಾಹಾರ್ಥ ಪ್ರದಾಯಿನೇ |
ದಂತ ಲಗ್ನ ಹಿರಣ್ಯಾಕ್ಷ ದಂಷ್ಟ್ರಸಿಂಹಾಯ ಮಂಗಲಂ ||

ವರಾಹ ಕುಂಡದಲ್ಲಿ ಭೂದೇವಿಯ ಇಷ್ಟಾರ್ಥವನ್ನು ಕೊಟ್ಟು ಹಿರಣ್ಯಾಕ್ಷನ ಕೋರೆದಾಡುಗಳನ್ನು ತನ್ನ ಮೂತಿಗೆ ಜೋಡಿಸಿಕೊಂಡ ಕ್ರೋಢನರಸಿಂಹನಿಗೆ ಮಂಗಳವಾಗಲಿ.

೭. ಶ್ರೀ ಮಾಲೋಲ ನರಸಿಂಹ (ಲಕ್ಷ್ಮೀಪ್ರಿಯ ನರಸಿಂಹ)

ವೇದಾದ್ರಿ ಬೆಟ್ಟದಲ್ಲಿ ಸಮತಟ್ಟಾದ ಪ್ರದೇಶದಲ್ಲಿ ಪ್ರಸನ್ನಚಿತ್ತನಾಗಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಸ್ಥಾನವಿದೆ. ಈ ಮೂರ್ತಿಯೇ ಮಾಲೋಲ (ಲಕ್ಷ್ಮೀಲೋಲ) ನರಸಿಂಹ. ಈ ದೇವಸ್ಥಾನವನ್ನು ಮಾರ್ಕಂಡ ಲಕ್ಷ್ಮೀಕ್ಷೇತ್ರವೆಂದೂ ಕರೆಯುತ್ತಾರೆ.

ಮೂರ್ತಿಯ ಎಡಗಾಲು ಮಡಿಚಿದ್ದು ತೊಡೆಯ ಮೇಲೆ ಲಕ್ಷ್ಮೀದೇವಿ ಕುಳಿತಿದ್ದಾಳೆ. ಬಲಗಾಲು ಕೆಳಕ್ಕೆ ಚಾಚಿದೆ. ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರವಿದೆ. ಮೂರನೇ ಕೈ ಅಭಯ ನೀಡುತ್ತಿದೆ. ನಾಲ್ಕನೇ ಕೈ ಲಕ್ಷ್ಮೀದೇವಿಯ ಸೊಂಟ ಬಳಸಿದೆ. ಇದು ಪ್ರಸನ್ನ ಮೂರ್ತಿಯಾಗಿದೆ.

ತನ್ನ ಕೋಪಜ್ವಾಲೆಯಿಂದ ಹಿರಣ್ಯಕಶಿಪುವನ್ನು ವಸಿ ಉಗ್ರ ರೂಪಿಯೇ ಆಗಿದ್ದ  ನರಸಿಂಹನ ಕೋಪವನ್ನು ತಣಿಸಿ ಶಾಂತಮೂರ್ತಿಯನ್ನಾಗಿ ಮಾಡಿದ ಲಕ್ಷ್ಮೀದೇವಿಯ ಕ್ಷೇತ್ರವಿದು. ಭಕ್ತರ ಅಭೀಷ್ಟ ಇಲ್ಲಿ ಪೂರೈಸುತ್ತದೆ ಎಂದು ಪ್ರತೀತಿ.

ವಾರಿಜಾವಿರತ ಭಯೈಃ ವಾಣೀಪತಿ ಮುಖೈಃ ಸುರೈಃ |
ಮಹಿತಾಯ ಮಹೋದಾರ ಮಾಲೋಲಾಯಸ್ತು ಮಂಗಳಂ ||

ಉಗ್ರರೂಪಿ ನರಸಿಂಹ ದೇವರ ಸಮೀಪಕ್ಕೆ ಹೋಗಲು ಹೆದರಿದ ಬ್ರಹ್ಮಾದಿ ದೇವತೆಗಳ ಭಯವನ್ನು ವಾರಿಜೆಯಾದ ಲಕ್ಷ್ಮೀದೇವಿಯು ನಿವಾರಿಸುತ್ತಾಳೆ. ಬಳಿಕ ಬ್ರಹ್ಮಾದಿಗಳು ಲಕ್ಷ್ಮೀಲೋಲನನ್ನು ಪೂಜಿಸುತ್ತಾರೆ. ಅಂತಹ ಮಾಲೋಲ ನರಸಿಂಹನಿಗೆ ಮಂಗಳವಾಗಲಿ.

೮. ಶ್ರೀ ಜ್ವಾಲಾ ನರಸಿಂಹ

ತನ್ನ ಭಕ್ತನ ರಕ್ಷಣೆಗಾಗಿ ಸಹನೆ ಮೀರಿ ಜ್ವಾಲಾಮುಖಿಯಂತೆ ಸೋಟಿಸಿ ಪ್ರತ್ಯಕ್ಷನಾದ ನರಸಿಂಹ ಸ್ವರೂಪಿಯೆ `ಜ್ವಾಲಾ’ ನರಸಿಂಹ ಸ್ವಾಮಿ!

ಈ ದೇಗುಲದಲ್ಲಿ ಮೂರು ಮೂರ್ತಿಗಳಿವೆ.

  1. ಕಂಬವನ್ನು ಸೀಳಿ ಹೊರಬರುತ್ತಿರುವ ಚತುರ್ಭುಜ ನರಸಿಂಹ
  2. ರಕ್ಕಸನ ಉದರವನ್ನು ಬಗಿಯುತ್ತಿರುವ ಅಷ್ಟಭುಜ ನರಸಿಂಹ
  3. ಕತ್ತಿಯನ್ನೆತ್ತಿ ತನ್ನತ್ತ ನುಗ್ಗಿ ಬರುತ್ತಿರುವ ಅಸುರನನ್ನು ಹಿಡಿದು ಬಲಗೈನಿಂದ ಬಾರಿಸುತ್ತಿರುವ ನರಸಿಂಹ.

ಗಾಬರಿಗೊಂಡು ಪಕ್ಕದಲ್ಲೇ ದೂರದಲ್ಲಿ ನಿಂತಿರುವ ಪ್ರಹ್ಲಾದನ ಮೂರ್ತಿಯನ್ನೂ ಕಾಣಬಹುದು.

ಈ ಜ್ವಾಲಾ ನರಸಿಂಹ ಮೂರ್ತಿಯ ವಿಗ್ರಹವು ಏಕಶಿಲಾ ವಿಗ್ರಹವಾಗಿದ್ದು ನೋಡಲು ಎರಡು ಕಣ್ಣುಗಳು ಸಾಲದು. ಸ್ವಾಮಿಯ ದರ್ಶನ ಮಾತ್ರದಿಂದಲೇ ಆಯಾಸವೆಲ್ಲವೂ ಪರಿಹಾರವಾಗಿ ಹೋಗುತ್ತದೆ. ದಿವ್ಯ ಆನಂದವುಂಟಾಗುತ್ತದೆ. ಮನಸ್ಸಿನಲ್ಲಿ ಸಾರ್ಥಕತೆ ಮೂಡುತ್ತದೆ.

ಈ ದೇಗುಲದ ಬಳಿಯೇ `ರಕ್ತಕುಂಡ’ವೆಂಬ ಕೊಳವಿದೆ. ಇದರ ನೀರು ರಕ್ತಛಾಯೆಯನ್ನು ಹೊಂದಿದೆ. ನರಸಿಂಹ ರೂಪೀ ಪರಮಾತ್ಮನು ರಕ್ಕಸನನ್ನು ಕೊಂದು ಕೈತೊಳೆದುಕೊಂಡ ಜಾಗವಿದು ಎಂದು ಹೇಳುತ್ತಾರೆ.

ಹಿರಣ್ಯಸ್ತಂಭ ಸಂಭೂತ ಪ್ರಖ್ಯಾತ ಪರಮಾತ್ಮನೇ |         
ಪ್ರಹ್ಲಾದಾರ್ತಿ ಮುಖೋ ಜ್ವಾಲಾನರಸಿಂಹಾಯ ಮಂಗಳಂ ||

ಹಿರಣ್ಯಕಶಿಪುವಿನ ಅರಮನೆಯ ಕಂಬದಿಂದ ಉದ್ಭವಿಸಿದ ಪ್ರಖ್ಯಾತ ಪರಮಾತ್ಮನಾದ, ಪ್ರಹ್ಲಾದನ ಕಷ್ಟಗಳನ್ನು ಪರಿಹರಿಸಿದ ಜ್ವಾಲಾನರಸಿಂಹನಿಗೆ ಮಂಗಳವಾಗಲಿ.

ಉಗ್ರಸ್ತಂಭ

ಇಲ್ಲಿಂದ ಇನ್ನೂ ಮೇಲಕ್ಕೆ ಕ್ರಮಿಸಿದರೆ, ಅಚಲಛಾಯ ಮೇರು ಪರ್ವತ ಸಿಗುತ್ತದೆ. ಹಿಂದೊಮ್ಮೆ ಹಿರಣ್ಯಕಶಿಪುವಿನ ಅರಮನೆಯ ಕಂಬವನ್ನು ಸೀಳಿಬಂದ ಜ್ವಾಲಾ ನರಸಿಂಹನಿಗೆ ಮೂಕ ಸಾಕ್ಷಿಯೋ ಎನ್ನುವಂತೆ ನಿಂತಿರುವ ಕಂಬವೊಂದನ್ನು ಕಾಣಬಹುದು.

ಸತ್ಯಂ ವಿಧಾತಂ ನಿಜಭೃತ್ಯ ಭಾಷಿತಮ್ ವ್ಯಾಪ್ತಿಂ ಚ ಭೂತೇಷ್ವಖಿಲೇಷು ಚಾತ್ಮನಃ |
ಅದೃಶ್ಯತಾತ್ಯದ್ಭುತರೂಪಮುದ್ವಹನ್ ಸ್ತಂಭೇ ಸಭಾಯಾಂ ನ ಮೃಗಂ ನ ಮಾನುಷಮ್ ||

ತನ್ನ ಭಕ್ತನ ಮಾತನ್ನು ಸತ್ಯವಾಗಿಸಲು, ಎಲ್ಲ ಚೇತನ- ಅಚೇತನಾದಿಗಳಲ್ಲಿಯೂ ತನ್ನ ವ್ಯಾಪಕತ್ವವನ್ನು ಲೋಕಕ್ಕೆ ಪ್ರಕಟಪಡಿಸಲು ಆ ಕಂಬವನ್ನು ಸೀಳಿಕೊಂಡು ಮೃಗವೂ ಅಲ್ಲದ ಮನುಷ್ಯ ರೂಪವೂ ಅಲ್ಲದ, ಎರಡೂ ಕೂಡಿರುವ ಅದ್ಭುತವಾದ ರೂಪದಲ್ಲಿ ಶ್ರೀಹರಿಯು ಕಾಣಿಸಿಕೊಂಡನು.

೯. ಶ್ರೀ ಪಾವನ ನರಸಿಂಹ ಸ್ವಾಮಿ

ಮೇಲಿನ ಅಹೋಬಲದಿಂದ ೭ ಕಿ.ಮೀ. ದೂರದಲ್ಲಿ ಅಥವಾ ಕೆಳಗಿನ ಅಹೋಬಲದಿಂದ ಸುಮಾರು ೧೬ ಕಿ.ಮೀ. ದೂರದಲ್ಲಿ ದುರ್ಗಮವಾದ ಕಾಡುಪ್ರದೇಶದಲ್ಲಿ ಶ್ರೀ ಪಾವನ ನರಸಿಂಹ ದೇವಾಲಯವಿದೆ.

ಇಲ್ಲಿಗೆ ಮೇಲಿನ ಅಹೋಬಲದಿಂದ ನಡೆದುಕೊಂಡು ಅಥವಾ ಕೆಳಗಿನ ಅಹೋಬಲದಿಂದ ಜೀಪು ಅಥವಾ ಟ್ರಾಕ್ಟರ್‌ನಲ್ಲಿ ತಲಪಬಹುದು. ರಸ್ತೆಯು  ಬಂಡೆ ಕಲ್ಲುಮಯವಾಗಿದ್ದು ಅತ್ಯಂತ ದುಸ್ತರವಾಗಿದೆ. ಹೀಗಿದ್ದರೂ, ಪತಿತರ ಪಾಪಗಳನ್ನು ಪರಿಹರಿಸುವ ಈ ಪಾವನ ನರಸಿಂಹನ ದರ್ಶನ ಮಾಡಲು ಭಕ್ತರು ತಂಡೋಪತಂಡವಾಗಿ ಇಲ್ಲಿಗೆ ಬಂದು ನಾನಾ ವಿಧ ಕಾಣಿಕೆಗಳನ್ನು ತಮ್ಮ ಯೋಗ್ಯತಾನುಸಾರ ಸ್ವಾಮಿಗೆ ಅರ್ಪಿಸಿ ಅವನ ಕೃಪೆಗೆ ಪಾತ್ರರಾಗಬಯಸುತ್ತಾರೆ. ಇಲ್ಲಿನ ಮೂರ್ತಿಯ ಒಂದು ಕೈಯಲ್ಲಿ ಶಂಖ, ಇನ್ನೊಂದು ಕೈಯಲ್ಲಿ ಚಕ್ರ, ಕೆಳ ಬಲಗೈ ಅಭಯ ಕೊಡುತ್ತಿದ್ದು , ಕೆಳ ಎಡಗೈ ಲಕ್ಷ್ಮೀದೇವಿಯ ಸೊಂಟ ಬಳಸಿದೆ. ಗರ್ಭಗುಡಿಯ ಸಮೀಪದಲ್ಲೇ ಬಾಲಕೃಷ್ಣ, ನವನೀತ ಕೃಷ್ಣ ಮತ್ತು ಪ್ರಾಣದೇವರುಗಳ ಮೂರ್ತಿಗಳಿವೆ. ಇವರ ಎದುರಿಗೆ ರುದ್ರದೇವರು ಸನ್ನಿಹಿತರಾಗಿದ್ದಾರೆ.

ಭಾರದ್ವಾಜ ಮುನಿಯು ಇಲ್ಲಿ ನರಸಿಂಹ ದೇವರನ್ನು ಪೂಜಿಸಿ ತನ್ನ ಪಾಪಗಳಿಂದ ವಿಮುಕ್ತನಾದನೆಂದು ನಂಬಿಕೆ.

ಭಾರದ್ವಾಜ ಮಹಾಯೋಗೀ ಮಹಾ ಪಾತಕ ಹಾರಿಣೀ |
ತಾಪನೀಯ ರಹಸ್ಯಾರ್ಥ ಪಾವನಾಯಾಸ್ತು ಮಂಗಳಂ ||

ಭಾರದ್ವಾಜ ಮುನಿಯ ಮಹಾಪಾಪಗಳನ್ನು ಪರಿಹರಿಸಿದ ತಾಪನೀಯ ಉಪನಿಷತ್ತಿನ ರಹಸ್ಯಾರ್ಥ ಸ್ವರೂಪಿಯಾದ ಪಾವನ ನರಸಿಂಹ ದೇವನಿಗೆ ಮಂಗಳವಾಗಲಿ.

ಪ್ರಹ್ಲಾದನ ಶಾಲೆ

ಮಾಲೋಲ ದೇಗುಲದಿಂದ ೧ ಕಿ.ಮೀ. ದೂರದಲ್ಲಿ ಪ್ರಹ್ಲಾದನ ಶಾಲೆ ಇದೆ. ಪ್ರಹ್ಲಾದನು ಶಂಡ-ಅಮರ್ಕರ ಬಳಿ ವಿದ್ಯೆ ಕಲಿತ ಸ್ಥಳವಿದು. ನರಸಿಂಹ ಸ್ವಾಮಿಯು ಪ್ರಹ್ಲಾದನಿಗೆ ಯೋಗ ವಿದ್ಯೆಯನ್ನು ಈ ಸ್ಥಳದಲ್ಲಿಯೇ ಹೇಳಿಕೊಟ್ಟನೆಂಬ ಪ್ರತೀತಿ ಇದೆ. ಇಲ್ಲಿರುವ ಗುಹೆಯಲ್ಲಿ ನರಸಿಂಹ ದೇವರು ಯೋಗ ಭಂಗಿಯಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು.

ಅಹೋಬಲ ತಲಪುವ ಬಗೆ

ಬೆಂಗಳೂರಿನಿಂದ ಕೆಳಗಿನ ಅಹೋಬಲ ೩೭೭ ಕಿ.ಮೀ. ದೂರದಲ್ಲಿದೆ.

ರೈಲು ಮಾರ್ಗದಲ್ಲಿ ಸಂಚರಿಸಿದರೆ, ಬೆಂಗಳೂರಿನಿಂದ ನಂದ್ಯಾಲಕ್ಕೆ (ಪ್ರಶಾಂತಿ ಎಕ್ಸ್‌ಪ್ರೆಸ್) ಪ್ರಯಾಣಿಸಬೇಕು. ಅಲ್ಲಿಂದ ಬಸ್ಸಿನಲ್ಲಿ ಆಳ್ಳಗಡ್ಡ (೪೨ ಕಿ.ಮೀ.), ಅನಂತರ ಇನ್ನೊಂದು ಬಸ್ಸಿನಲ್ಲಿ ಕೆಳಗಿನ ಅಹೋಬಲ (೨೪ ಕಿ.ಮೀ) ಸೇರಬಹುದು. ಅಲ್ಲಿಂದ ೮ ಕಿ.ಮೀ ದೂರದಲ್ಲಿ ಮೇಲಿನ ಅಹೋಬಲ ಇದೆ. ಅದನ್ನು ಆಟೋ ಅಥವಾ ಬಸ್ಸಿನಲ್ಲಿ ತಲಪಬಹುದು.

ಬಸ್ಸಿನಲ್ಲಿ ಪ್ರಯಾಣಿಸಲು ಇಷ್ಟಪಟ್ಟರೆ, ಎ.ಪಿ.ಎಸ್.ಆರ್.ಟಿ.ಸಿ.ಯ ಮೂಲಕ ಬೆಂಗಳೂರಿನಿಂದ ಆಳ್ಳಗಡ್ಡವನ್ನು ನೇರವಾಗಿ ತಲಪಬಹುದು. (ಮಾರ್ಗ – ಮದನಪಲ್ಲಿ, ಕಡಪ, ಮೈದುಕೂರು). ಆಳ್ಳಗಡ್ಡದಿಂದ ಬೇರೊಂದು ಬಸ್ಸಿನಲ್ಲಿ ಅಹೋಬಲಕ್ಕೆ ಹೋಗಬೇಕಾಗುತ್ತದೆ.

ದೇವಸ್ಥಾನ ದರ್ಶನ (ಸಾಮೀಪ್ಯಕ್ಕನುಗುಣವಾಗಿ)

ಪ್ರಹ್ಲಾದವರದ ನರಸಿಂಹನ ದರ್ಶನ ಮಾಡಿ, ಕೆಳಗಿನ ಅಹೋಬಲ ನಿಂದ ಪ್ರಾರಂಭಿಸಿ ೧)ಭಾರ್ಗವ ೨) ಛತ್ರವಟ ೩)ಯೋಗಾನಂದ ಇವುಗಳನ್ನು ಕ್ರಮವಾಗಿ ಒಂದೇ ಹಂತದಲ್ಲಿ ನೋಡಬಹುದು. ಅಲ್ಲಿಂದ ಮುಂದೆ  ೪) ಕಾರಂಜಿ ದೇವಸ್ಥಾನವು ಮೇಲಿನ ಅಹೋಬಲಕ್ಕೆ ಹೋಗುವ ಮಾರ್ಗದಲ್ಲಿ  ೧ ಕಿ.ಮೀ. ಮುಂಚೆ ಸಿಗುತ್ತದೆ. ಅದಾದನಂತರ ೫) ಅಹೋಬಲ ದೇವಸ್ಥಾನ ದೊರಕುತ್ತದೆ. (ಈ ಕ್ಷೇತ್ರದ ಪ್ರಧಾನ ದೇವರು). ಅಹೋಬಲ ದೇವಸ್ಥಾನದಿಂದ  ೬) ಕ್ರೋಢ ೭) ಜ್ವಾಲಾ ೮) ಮಾಲೋಲ ಮತ್ತು  ೯) ಪಾವನ.  ಪಾವನ ನರಸಿಂಹ ದೇವಸ್ಥಾನಕ್ಕೆ ಎರಡು ಮಾರ್ಗಗಳಿವೆ.  ಎ) ನಡೆಯಲು ಸಾಮರ್ಥ್ಯವಿದ್ದರೆ, ಅಹೋಬಲ ದೇವಸ್ಥಾನ ಪಕ್ಕದಿಂದ ೭ ಕಿ.ಮೀ. ನಡೆದು ವಾಪಸ್ಸು ನಡೆದು ಬರುವುದು. ಅಥವಾ ಬಿ) ಜೀಪಿನಲ್ಲಿ ೧೬ ಕಿ.ಮೀ.  ದುರ್ಗಮವಾದ ರಸ್ತೆಯಲ್ಲಿ ಪ್ರಯಾಣಸಿ ಪುನಃ ವಾಪಸ್ಸು ಬರುವುದು.

ಅಥವಾ ಹೀಗೂ ಮಾಡಬಹುದು: ಮೇಲಿನ ಅಹೋಬಲದಿಂದ ಪ್ರಾರಂಭಿಸಿ ನೇರವಾಗಿ ೧) ಅಹೋಬಲ ನರಸಿಂಹ  ೨) ಕ್ರೋಢ ೩) ಮಾಲೋಲ  ೪) ಜ್ವಾಲಾ  ೫) ಕಾರಂಜಿ ನೋಡಿ ವಿಶ್ರಾಂತಿ, ಮಾರನೆಯ ದಿನ ಬೆಳಗ್ಗೆ  ೬) ಪಾವನ  ೭) ಯೋಗಾನಂದ  ೮) ಛತ್ರವಟ ೯) ಭಾರ್ಗವ ಹಾಗೂ ೧೦) ಪ್ರಹ್ಲಾದ ವರದ.
Leave a Reply

Your email address will not be published. Required fields are marked *