Search
Saturday 4 April 2020
  • :
  • :

ರಾಧಾಕುಂಡ ಮಹಿಮೆ

ರಾಧಾಕುಂಡವು ಶ್ರೀಮತಿ ರಾಧಾರಾಣಿಯ ಪ್ರೇಮ ಸ್ವರೂಪವೆಂದು ಪ್ರಸಿದ್ಧವಾಗಿದೆ. ರಾಧಾಕುಂಡದ ಧವಳ ಕೀರ್ತಿಯನ್ನು ವೇದಗಳ ಆದ್ಯಂತ ಶ್ರುತಪಡಿಸಲಾಗಿದೆ. ವೃಂದಾವನದ ಭೂಮಿಯನ್ನು ಚಿಂತಾಮಣಿಯಿಂದ ಮಾಡಲಾಗಿದೆ ಮತ್ತು ಕಲ್ಪವೃಕ್ಷಗಳಿಂದ ಆವರಿಸಲಾಗಿದೆ. ಅಲ್ಲಿ ಸದಾ ಕೋಗಿಲೆಗಳ ಮಧುರ ಕೂಜನವನ್ನೂ ಮತ್ತು ದುಂಬಿಗಳ ಝೇಂಕಾರವನ್ನೂ ಕೇಳಬಹುದು. ಕಮಲಪುಷ್ಪಗಳು ತಮ್ಮ ಮತ್ತೇರಿಸುವಂತಹ ಸೌರಭವನ್ನು ಗಾಳಿಯಲ್ಲೆಲ್ಲ ತುಂಬಿರುತ್ತವೆ.

ಆದರೆ ರಾಧಾಕುಂಡದ ನಿಜವಾದ ಸ್ವರೂಪವನ್ನು ಲೋಕೋತ್ತರವಾದ ದರ್ಶನದಿಂದ ಮಾತ್ರ ಗ್ರಹಿಸಬಹುದು. ಶ್ರೀ ವೃಂದಾವನವು ಈ ಐಹಿಕ ಜಗತ್ತಿನಲ್ಲಿರುವಂತೆ ತೋರಿದರೂ, ಅದು ಈ ಅಶಾಶ್ವತವಾದ ಜಗತ್ತಿನಾಚೆಗೆ ಶಾಶ್ವತವಾಗಿ ಅಸ್ತಿತ್ವದಲ್ಲಿದೆ. ಐಹಿಕ ಜಗತ್ತು ನಾಶವಾದ ಮೇಲೂ ಶ್ರೀ ವೃಂದಾವನ ಧಾಮದ ಅಸ್ತಿತ್ವವು ಮುಂದುವರಿಯುತ್ತದೆ. ಶ್ರೀ ಕೃಷ್ಣನ ಲೀಲೆಗಳು ನಡೆದ ಎಲ್ಲ ಸ್ಥಳಗಳಲ್ಲಿ ರಾಧಾಕುಂಡದ ಸ್ಥಾನವು ಸರ್ವೋಚ್ಚವಾಗಿದೆ. ಏಕೆಂದರೆ ರಾಧಾ ಗೋವಿಂದರು ಯಾವ ಬಾಹ್ಯ ಅಡ್ಡಿ ಅಡಚಣೆಗಳೂ ಇಲ್ಲದೆ ಇಲ್ಲಿ ಅತ್ಯುನ್ನತ ಆತ್ಮೀಯತೆಯನ್ನು ಅನುಭವಿಸುತ್ತಾರೆ.

ಮಥುರೆಯು ವೈಕುಂಠಕ್ಕಿಂತ ಶ್ರೇಷ್ಠವಾದದ್ದು. ಏಕೆಂದರೆ ಪ್ರಭು ಕೃಷ್ಣನು ಇಲ್ಲಿ ಅವತರಿಸಿದ. ವೃಂದಾವನವು ಮಥುರೆಗಿಂತ ಶ್ರೇಷ್ಠವಾದದ್ದು. ಏಕೆಂದರೆ ಕೃಷ್ಣನು ಇಲ್ಲಿ ರಾಸಲೀಲೆಯನ್ನು ನಡೆಸಿದ. ಗೋವರ್ಧನಗಿರಿಯು ವೃಂದಾವನಕ್ಕಿಂತ ಶ್ರೇಷ್ಠವಾದದ್ದು. ಏಕೆಂದರೆ ಕೃಷ್ಣನು ಅದನ್ನು ಎತ್ತಿದ ಮತ್ತು ಅನೇಕ ಆನಂದದಾಯಕವಾದ ಲೀಲೆಗಳನ್ನು ಅಲ್ಲಿ ನಡೆಸಿದ. ಆದರೆ ಸರ್ವೋತ್ಕೃಷ್ಟವಾದ ರಾಧಾಕುಂಡವು ಇವೆಲ್ಲವುಗಳಿಗಿಂತ ಶ್ರೇಷ್ಠ ಸ್ಥಾನದಲ್ಲಿದೆ. ಏಕೆಂದರೆ ಅದು ರಾಧಾಕೃಷ್ಣರ ಸ್ವರ್ಗೀಯವಾದ ಅಮೃತೋಪಮ ಪ್ರೇಮದಿಂದ ತುಂಬಿ ತುಳುಕುತ್ತಿದೆ.

ಶ್ರೀ ರಾಧೆಯು ಅತ್ಯುನ್ನತ ಸ್ಥಾನದಲ್ಲಿರುವ ಭಕ್ತೆ ಮತ್ತು ರಾಧಾಕುಂಡವು ಅತ್ಯಂತ ಉದಾತ್ತವಾದ ಸ್ಥಾನ. ರಾಧಾಕುಂಡವು ಏಕೆ ಅಷ್ಟು ಉದಾತ್ತವಾದದ್ದು? ಆ ಸರೋವರವು ಅಷ್ಟು ಉದಾತ್ತವಾಗಿರುವುದು ಏಕೆಂದರೆ ಅದು ಶ್ರೀಮತಿ ರಾಧಾರಾಣಿಗೆ ಸೇರಿದ್ದು ಮತ್ತು ಅವಳು ಶ್ರೀಕೃಷ್ಣನ ಅತ್ಯಂತ ಪ್ರೀತಿಪಾತ್ರಳು.

“ರಾಧಾಕುಂಡವು ಕೃಷ್ಣನ ಪಾಲಿಗೆ ರಾಧೆಯಷ್ಟೇ ಪ್ರಿಯವಾದದ್ದು ಎಂದು ಮಹರ್ಷಿಗಳು ಹೇಳಿದ್ದಾರೆ. ದಿಟದಲ್ಲಿ ರಾಧಾಕುಂಡ ಮತ್ತು ಶ್ರೀಮತಿ ರಾಧಾರಾಣಿ ಅವರ ಬಗೆಗೆ ಕೃಷ್ಣನಿಗಿರುವ ಪ್ರೀತಿಯು ಎಲ್ಲ ರೀತಿಯಲ್ಲೂ ಸಮಾನವಾದದ್ದು.”

ಯಥಾ ರಾಧಾ ಪ್ರಿಯಾ ವಿಷ್ಣೋಸ್ತಸ್ಯಾಃ ಕುಂಡಮ್ ಪ್ರಿಯಂ ತಥಾ |

ಸರ್ವ ಗೋಪಿಷು ಸೈವೈಕಾ ವಿಷ್ಣೋರ್ ಅತ್ಯಂತ ವಲ್ಲಭಾ ||

“ಶ್ರೀಮತಿ ರಾಧಾರಾಣಿಯು ಕೃಷ್ಣನಿಗೆ ಪ್ರಿಯವಾದವಳು. ರಾಧಾಕುಂಡ ಎಂದು ಹೆಸರಾದ ಅವಳ ಕುಂಡವು ಅದೇ ರೀತಿಯಲ್ಲಿ  ಅವನಿಗೆ ಪ್ರಿಯವಾದದ್ದು. ಅದು ಕೃಷ್ಣನಿಗೆ ಅಚ್ಚುಮೆಚ್ಚಿನ ಸ್ಥಳ. ಎಲ್ಲ ಗೋಪಿಯರಲ್ಲಿ ಶ್ರೀಮತಿ ರಾಧಾರಾಣಿಯು ಕೃಷ್ಣನಿಗೆ ಅತ್ಯಂತ ಪ್ರಿಯವಾದವಳು.”

ರಾಧಾಕುಂಡವು ಎಲ್ಲ ಲೀಲಾ ಸ್ಥಾನಗಳಲ್ಲಿ ಶಿಖರಪ್ರಾಯವಾದದ್ದು. ರಾಧಾಕುಂಡವು ಅತ್ಯುನ್ನತ ಪರಿಪೂರ್ಣತೆಯ ಸ್ಥಳ. ಏಕೆಂದರೆ ರಾಧಾಕುಂಡದಲ್ಲಿ ಮಾತ್ರ, ರಾಧಾಕೃಷ್ಣರು ಅತ್ಯಂತ ನಿಕಟವಾದ ಮತ್ತು ಪ್ರೀತಿಪಾತ್ರರಾದ ತಮ್ಮ ಗೋಪೀ ಗೆಳತಿಯರೊಡನೆ ಅತ್ಯಂತ ಆನಂದಪರವಶವಾದ ಮಾಧುರ್ಯರಸದ ಸವಿಯನ್ನು ಸವಿಯುತ್ತಾರೆ. ಈ ಕಾರಣದಿಂದಾಗಿ, ರಾಧಾಕುಂಡವು ಐಹಿಕ ವಿಶ್ವದಲ್ಲಿಯೇ ಅಲ್ಲದೆ ಆಧ್ಯಾತ್ಮಿಕ ಆಕಾಶದಲ್ಲೂ ಅತ್ಯಂತ ಪರಿಶುದ್ಧವಾದದ್ದು, ಅತ್ಯಂತ ಪವಿತ್ರವಾದದ್ದು ಮತ್ತು ಉನ್ನತವಾದ ಸ್ಥಳವಾಗಿದೆ.

ಈ ಜಗತ್ತಿನಲ್ಲಿ ರಾಧಾಕುಂಡದ ಆಗಮನ

ಗೂಳಿಯ ವೇಷವನ್ನು ಧರಿಸಿದ್ದ ಅರಿಷ್ಟಾಸುರ ಎಂಬ ರಾಕ್ಷಸನನ್ನು ಕೊಂದ ಮೇಲೆ ಕೃಷ್ಣನು ರಾಧಾರಾಣಿಯೊಡನೆ ವಿನೋದಮಯವಾದ ಸಂಭಾಷಣೆಯನ್ನು ನಡೆಸಿದ. ವಿಶ್ವನಾಥ ಚಕ್ರವರ್ತಿ ಠಾಕುರರು ಶ್ರೀಮದ್ ಭಾಗವತವನ್ನು ಕುರಿತ ತಮ್ಮ ಸಾರಾರ್ಥ ದರ್ಶಿನೀ ಎಂಬ ಗ್ರಂಥದಲ್ಲಿ ಇದನ್ನು ಬಣ್ಣಿಸಿದ್ದಾರೆ:

“ಓ ಕೃಷ್ಣ, ಅರಿಷ್ಟಾಸುರ ಎಂಬ ಗೂಳಿಯನ್ನು ಕೊಂದವನೇ, ನಮ್ಮನ್ನೀಗ ಮುಟ್ಟಬೇಡ!”

ಗೋಪಿಯರ ಈ ಮಾತುಗಳನ್ನು ಕೇಳಿ ಕೃಷ್ಣನು ಉತ್ತರಿಸುತ್ತಾನೆ, “ಓ ಮುಗ್ಧ ತರುಣಿಯರೆ, ಅರಿಷ್ಟ ಒಬ್ಬ ಭಯಂಕರ ರಾಕ್ಷಸ. ಅವನನ್ನು ನಾನು ಸೋಲಿಸಿದ್ದು ಒಳ್ಳೆಯದೇ ಆಯಿತು.”

ಗೋಪಿಯರು  ಹೇಳಿದರು, “ಓ ಕೃಷ್ಣ ಆದರೂ ಅವನೊಂದು ಗೂಳಿ, ಬ್ರಾಹ್ಮಣನಾದ ವೃತ್ರಾಸುರನನ್ನು ಕೊಂದ ಇಂದ್ರನು ಪ್ರಾಯಶ್ಚಿತ್ತ ಮಾಡಿಕೊಂಡಂತೆ ನೀನೂ ಕೂಡ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕು.”

“ಹಾಗಾದರೆ ಈ ಪಾಪಕ್ಕೆ ಪ್ರಾಯಶ್ಚಿತ್ತವೇನು?” ಎಂದು ಕೃಷ್ಣನು ಕೇಳಿದ.

“ಮೂರು ಲೋಕಗಳಲ್ಲಿಯೂ ಇರುವ ಪ್ರತಿಯೊಂದು ಪವಿತ್ರ ತೀರ್ಥ ಸ್ಥಳವನ್ನೂ ಸಂದರ್ಶಿಸುವ ಮೂಲಕ ನೀನು ನಿನ್ನನ್ನು ಪರಿಶುದ್ಧಗೊಳಿಸಿಕೊಳ್ಳಬಹುದು” ಎಂದು ಗೋಪಿಯರು ಉತ್ತರಿಸಿದರು.

ಕೃಷ್ಣನು ಕೋಪದಿಂದ ಉತ್ತರಿಸಿದ, “ಸಮಸ್ತ ಬ್ರಹ್ಮಾಂಡದಾದ್ಯಂತ ನಾನು ಏಕೆ ಅಲೆದಾಡಬೇಕು? ನಾನು ಈ ಕೂಡಲೇ ಅಗಣಿತವಾದ ಸಮಸ್ತ ತೀರ್ಥ ಯಾತ್ರಾಸ್ಥಳಗಳನ್ನೂ ಇಲ್ಲಿಗೇ ಕರೆತರುತ್ತೇನೆ ಮತ್ತು ಅವುಗಳಲ್ಲಿ ನನ್ನ ಸ್ನಾನವನ್ನು ಮಾಡುತ್ತೇನೆ. ನೋಡುತ್ತಿರಿ.” ಈ ರೀತಿಯಲ್ಲಿ ಹೇಳುತ್ತಾ ಪ್ರಭು ಮುಕುಂದನು ತನ್ನ ಪಾದದ ಹಿಮ್ಮಡಿಯಿಂದ ನೆಲವನ್ನು ಅಪ್ಪಳಿಸಿದನು.

ಕೃಷ್ಣನು ಕರೆಕೊಟ್ಟನು, “ಪಾತಾಳಲೋಕದಿಂದ ಬರುವ ಭೋಗವತಿ, ಮತ್ತು ಎಲ್ಲ ಪವಿತ್ರ ತೀರ್ಥಸ್ಥಳಗಳೇ, ದಯವಿಟ್ಟು ಇಲ್ಲಿಗೆ ಬನ್ನಿ!” ಪರಮಪ್ರಭುವಿನ ಈ ನುಡಿಗಳನ್ನು ಕೇಳುತ್ತಲೇ ಎಲ್ಲ ಪವಿತ್ರ ತೀರ್ಥ ಸ್ಥಳಗಳು ಪ್ರತ್ಯಕ್ಷವಾಗಿ ಅಲ್ಲಿಗೆ ಬಂದು ಪ್ರಭುವಿನ ಮುಂದೆ ಕಾಣಿಸಿಕೊಂಡವು. ಅನಂತರ ಕೃಷ್ಣನು ಗೋಪಿಯರಿಗೆ ಹೇಳಿದ: “ಇಗೋ! ಇಲ್ಲಿ ನೋಡಿ, ಎಲ್ಲ ಪವಿತ್ರ ತೀರ್ಥ ಸ್ಥಳಗಳೂ ಬಂದಿವೆ.”

ಆದರೆ ಗೋಪಿಯರು, “ನಾವು ಖಂಡಿತವಾಗಿಯೂ ನಿನ್ನನ್ನು ನಂಬುವುದಿಲ್ಲ.” ಎಂದು ಅವನ ಮಾತಿಗೆ ಪ್ರತಿಕ್ರಿಯಿಸಿದರು.

ಆಗ ಆ ಪವಿತ್ರ ತೀರ್ಥ ಸ್ಥಳಗಳೇ ಕೈ ಮುಗಿದುಕೊಂಡು ಹೇಳಿದವು, “ನಾನು ಕ್ಷಾರ ಸಮುದ್ರ.” “ನಾನು ಕ್ಷೀರ ಸಮುದ್ರ.” “ನಾನು ಶೋಣಾ ನದಿ.” “ನಾನು ತಾಮ್ರಪರ್ಣೀ ನದಿ.” “ನಾನು ಪುಷ್ಕರ ಪವಿತ್ರ ಕ್ಷೇತ್ರ.” “ನಾನು ಸರಸ್ವತೀ ನದಿ.” “ನಾನು ಗೋದಾವರಿ ನದಿ.” “ನಾನು ಸೂರ್ಯಪುತ್ರಿಯಾದ ಯಮುನಾ ನದಿ.” “ನಾನು ಅಯೋಧ್ಯೆಯಿಂದ ಬಂದ ಸರಯೂ ನದಿ.” “ನಾನು ಪ್ರಯಾಗದ ಸಂಗಮ.” “ನಾನು ರೇವಾ ನದಿ, ನಮ್ಮ ನೀರನ್ನು ನೋಡಿ ಅನಂತರ ನಂಬಿ!”

ಈ ಪವಿತ್ರ ಜಲಗಳಲ್ಲಿ ಸ್ನಾನವನ್ನು ಮಾಡಿದ ಮೇಲೆ ಪ್ರಭು ಹರಿಯು ತೀರ ಗರ್ವಿಷ್ಠನಾಗಿ ಹೆಮ್ಮೆಯಿಂದ ಘೋಷಿಸಿದ, “ಈಗ ನಾನು ಪರಿಶುದ್ಧನಾದೆ! ಸಮಸ್ತ ಪುಣ್ಯಸ್ಥಳಗಳಿಂದಲೂ ಕೂಡಿದ ಒಂದು ಸರೋವರವನ್ನು ನಾನು ಸೃಷ್ಟಿಸಿದ್ದೇನೆ. ಇದಕ್ಕೆ ಪ್ರತಿಯಾಗಿ, ನೀವು ಗೋಪಿಯರು ಈ ಭೂಮಿಯ ಮೇಲೆ ಜನ್ಮ ತಾಳಿ ಒಂದಾದರೂ ಧರ್ಮಶ್ರದ್ಧೆಯ ಕೆಲಸವನ್ನು ಮಾಡಿದ್ದೀರಾ?”

ಇದನ್ನು ಕೇಳಿ ಶ್ರೀಮತಿ ರಾಧಾರಾಣಿಯು ತನ್ನ ಗೆಳತಿಯರನ್ನು ಕುರಿತು ಹೇಳಿದಳು: “ಈಗ ನಾನೂ ಕೂಡ ಅತ್ಯಂತ ಚಿತ್ತಾಕರ್ಷಕವಾದ ಸುಂದರವಾದ ಸರೋವರವನ್ನು ಮಾಡುತ್ತೇನೆ. ನೀವೆಲ್ಲರೂ ನನಗೆ ದಯವಿಟ್ಟು ಸಹಾಯ ಮಾಡಿ!”

ಶ್ರೀಕೃಷ್ಣನ ಸರೋವರದ ಪಶ್ಚಿಮ ಭಾಗದಲ್ಲಿ ಅರಿಷ್ಟಾಸುರನ ಗೊರಸುಗಳು ಒಂದು ಗುಂಡಿಯನ್ನು ಮಾಡಿರುವುದನ್ನು ಗೋಪಿಯರು ನೋಡಿದರು. ಆ ಸ್ಥಳದಲ್ಲಿ ಎಲ್ಲ ಗೋಪಿಯರೂ ಶ್ರೀಮತಿ ರಾಧಾರಾಣಿಗೆ ಮೃದುವಾದ ಮಣ್ಣು ಹೆಂಟೆಗಳನ್ನು ಕೀಳಲು, ಹೀಗೆ ಕೈಗಳಿಂದ  ಮತ್ತು ಅವರ ಬಳೆಗಳಿಂದ ಕಿತ್ತ ಮಣ್ಣನ್ನು ಸ್ವಲ್ಪ ದೂರದಲ್ಲಿ ಎಸೆಯಲು ಸಹಾಯ ಮಾಡಿದರು. ಕೇವಲ ನಲವತ್ತೆಂಟು ನಿಮಿಷಗಳಲ್ಲಿ ಒಂದು ಸ್ವರ್ಗೀಯವಾದ ಕೊಳವು ಅಲ್ಲಿ ಕಣ್ದೆಗೆಯಿತು.

ಆಶ್ಚರ್ಯಚಕಿತನಾದ ಕೃಷ್ಣನು, ಅವರು ನಿರ್ಮಿಸಿದ ಸರೋವರವನ್ನು ನೋಡಿ ಮೃದುವಾಗಿ ಮುಗುಳ್ನಕ್ಕನು. “ಓ ಕಮಲಾಕ್ಷಿ, ನೀನು ಮತ್ತು ನಿನ್ನ ಗೆಳತಿಯರು ನನ್ನ ಕುಂಡದಿಂದ ನೀರನ್ನು ತೆಗೆದುಕೊಂಡು ಬಂದು ಈ ಕೊಳವನ್ನು ತುಂಬಿಸಬಹುದು.”

ರಾಧೆಯು ಉತ್ತರಿಸಿದಳು, “ಇಲ್ಲ, ಇಲ್ಲ, ಇಲ್ಲ! ಇದು ನಮಗೆ ಒಪ್ಪಿತವಿಲ್ಲ. ಏಕೆಂದರೆ ನಿನ್ನ ಕುಂಡದಲ್ಲಿರುವ ನೀರು ಭಯಂಕರವಾದ ಗೋಹತ್ಯಾ ಪಾಪದಿಂದ ಕಲುಷಿತವಾಗಿದೆ. ನಾನೇ ಈ ಸರೋವರವನ್ನು ಸ್ವತಃ ತುಂಬಿಸುತ್ತೇನೆ. ನನ್ನ ಲಕ್ಷಾಂತರ ಗೆಳತಿಯರೊಡಗೂಡಿ ಕೋಟ್ಯಂತರ ಬಿಂದಿಗೆಗಳಲ್ಲಿ ಮಾನಸೀ ಗಂಗೆಯಿಂದ ಪವಿತ್ರವಾದ ನೀರನ್ನು ತರುತ್ತೇನೆ. ಈ ರೀತಿಯಲ್ಲಿ ಎಲ್ಲ ಲೋಕಗಳಲ್ಲಿಯೂ ಇದರ ಖ್ಯಾತಿಯು ಪಸರಿಸಿ ಅಸಮಾನವಾಗುವಂತೆ ಮಾಡುತ್ತೇನೆ.”

ಪ್ರಭು ಕೃಷ್ಣನು ಸನ್ನೆ ಮಾಡುತ್ತಿದ್ದಂತೆಯೇ ಅವನ ಕುಂಡದಲ್ಲಿದ್ದ ಎಲ್ಲ ಪವಿತ್ರ ಸ್ಥಳಗಳೂ ಒಂದು ದಿವ್ಯ ರೂಪವನ್ನು ತಾಳಿ ಇದ್ದಕ್ಕಿದ್ದಂತೆಯೇ ಅಲ್ಲಿ ಕಾಣಿಸಿಕೊಂಡವು. ಆ ದಿವ್ಯಾಕೃತಿಯು ವೃಷಭಾನುವಿನ ಪುತ್ರಿಗೆ ಶಿರಬಾಗಿ, ಕೈಗಳನ್ನು ಜೋಡಿಸಿ, ಕಣ್ಣೀರನ್ನು ಸುರಿಸುತ್ತಾ ಭಕ್ತಿಯಿಂದ ಹೀಗೆ ಪ್ರಾರ್ಥಿಸಲಾರಂಭಿಸಿತು.

“ಓ ದೇವಿ! ಎಲ್ಲ ಧರ್ಮಶಾಸ್ತ್ರಗಳಲ್ಲಿ ಪಾರಂಗತರಾದವರು ಕೂಡ ನಿನ್ನ ಮಹಿಮೆಗಳನ್ನು ಗ್ರಹಿಸಲಾರರು. ಅಷ್ಟೇಕೆ ಪ್ರಭು ಬ್ರಹ್ಮ, ಪ್ರಭು ಶಿವ ಅಥವಾ ಶ್ರೀ ಲಕ್ಷ್ಮೀ ಕೂಡ ಗ್ರಹಿಸಲಾರರು. ಸಮಸ್ತ ಮಾನವರ ಪರಿಶ್ರಮದ ಪರಮ ಗಂತವ್ಯನಾದ ಕೃಷ್ಣನು ಮಾತ್ರ ಸ್ವತಃ ನಿನ್ನನ್ನು ನಿಜವಾಗಿ ತಿಳಿದಿದ್ದಾನೆ. ನೀನು ಬಳಲಿದಾಗ ಒಸರುವ ಬೆವರನ್ನು ತಾನು ಒರೆಸಲು ನಿರ್ಬಂಧಿತನಾಗುತ್ತಾನೆ.

“ಅವನ ಆದೇಶದ ಪ್ರಕಾರ ನಾವು ಕೂಡಲೇ ಇಲ್ಲಿಗೆ ಬಂದಿದ್ದೇವೆ. ಅವನು ತನ್ನ ಹಿಮ್ಮಡಿಯ ತಾಡನದಿಂದ ಸೃಷ್ಟಿಸಿದ ಈ ಅತ್ಯಂತ ಉತ್ಕೃಷ್ಟವಾದ ಕೊಳದಲ್ಲಿ ನಾವು ನೆಲೆಸಿದ್ದೇವೆ. ನಿನಗೆ ನಮ್ಮ ವಿಷಯದಲ್ಲಿ ಸಂತುಷ್ಟಿಯಾದರೆ, ನಿನ್ನ ಕರುಣಾಪೂರಿತವಾದ ಕೃಪಾ ಕಟಾಕ್ಷ ನಮ್ಮ ಮೇಲೆ ಬಿದ್ದರೆ ಆಗ ನಮ್ಮ ಆಶಾವೃಕ್ಷಗಳು ಫಲವನ್ನು ಬಿಡುತ್ತವೆ.”

ಪವಿತ್ರ ತೀರ್ಥ ಯಾತ್ರಾ ಸ್ಥಳಗಳ ಪೂರ್ಣ ಸಮುದಾಯದ ಈ ಪ್ರಾರ್ಥನೆಯನ್ನು ಕೇಳಿ ರಾಧಾರಾಣಿಯು ಅವರ ವಿಷಯದಲ್ಲಿ ಸಂತುಷ್ಟಳಾಗಿ ಅವರನ್ನು ಕೇಳಿದಳು, “ನಿಮ್ಮ ಅಪೇಕ್ಷೆ ಏನು ಎಂದು ದಯವಿಟ್ಟು ತಿಳಿಸಿ.”

ಆಗ ಅವರು ಹೀಗೆ ಹೇಳಿದರು, “ನಿನ್ನ ಕುಂಡಕ್ಕೆ ಬರಲು ನೀನು ನಮಗೆ ಆದೇಶವನ್ನಿತ್ತರೆ ನಮ್ಮ ಜೀವನವು ಯಶಸ್ವಿಯಾಗುತ್ತದೆ. ನಾವು ಬಯಸುತ್ತಿರುವ ಆಶೀರ್ವಾದವು ಇದೇ ಆಗಿದೆ.”

ವೃಷಭಾನುವಿನ ಪುತ್ರಿಯು ತನ್ನ ಪ್ರೀತಿಪಾತ್ರನ ಮುಖ ಕಮಲದ ಕಡೆಗೆ ಕಟಾಕ್ಷವನ್ನು ಬೀರುತ್ತಾ ಮುಗುಳ್ನಕ್ಕಳು. ಅನಂತರ ಅವಳು ಸಾಕಾರ ರೂಪ ತಳೆದಿದ್ದ ಪವಿತ್ರ ತೀರ್ಥ ಸ್ಥಳಗಳಿಗೆ “ನೀವೆಲ್ಲರೂ ದಯವಿಟ್ಟು ಬನ್ನಿ” ಎಂದು ಕರೆದಳು.

ರಾಧಾರಾಣಿಯ ಗೆಳತಿಯರು ಅವಳ ಅಭಿಪ್ರಾಯಕ್ಕೆ ಸಮ್ಮತಿ ವ್ಯಕ್ತಪಡಿಸಿದರು. ಅವರೆಲ್ಲರೂ ಸಂತೋಷ ಸಾಗರದಲ್ಲಿ ಮುಳುಗಿದರು.  ಎಲ್ಲ ಚರಾಚರ ಸೃಷ್ಟಿಗಳೂ ಈ ಸಂತೋಷದಲ್ಲಿ ಪಾಲ್ಗೊಂಡವು. ಈ ರೀತಿಯಲ್ಲಿ ವೃಷಭಾನುವಿನ ಪುತ್ರಿಯ ಅನುಗ್ರಹವನ್ನು ಪಡೆದ ಮೇಲೆ ಶ್ರೀ ಕೃಷ್ಣನ ಕುಂಡದಲ್ಲಿದ್ದ ಶ್ರೇಷ್ಠವಾದ ಪವಿತ್ರ ತೀರ್ಥ ಸ್ಥಳಗಳು  ಬಲಾತ್ಕಾರವಾಗಿ ಕುಂಡದ ಏರಿಯನ್ನು ಒಡೆದು ಕ್ಷಿಪ್ರವಾಗಿ ರಾಧಾಕುಂಡವನ್ನು ತಮ್ಮ ನೀರಿನಿಂದ ತುಂಬಿದವು.

ಅನಂತರ ಪ್ರಭು ಹರಿಯು ಹೇಳಿದನು, “ನನ್ನ ಪ್ರೀತಿಪಾತ್ರಳೆ, ನಿನ್ನ ಈ ಕುಂಡವು ಈ ಲೋಕದಲ್ಲಿ ನನ್ನ ಕುಂಡಕ್ಕಿಂತ ಕೀರ್ತಿಶಾಲಿಯಾಗಲಿ. ನಾನು ಜಲಕ್ರೀಡೆಯಾಡಲು ಮತ್ತು ಸ್ನಾನ ಮಾಡಲು ಸದಾ ಇಲ್ಲಿಗೇ ಬರುತ್ತೇನೆ. ನೀನು ಹೇಗೆ ನನಗೆ ಅತ್ಯಂತ ಪ್ರಿಯಳಾಗಿದ್ದೀಯೋ ಹಾಗೆಯೇ ಈ ಕುಂಡ ಕೂಡ ನನಗೆ ಇನ್ನು ಮುಂದೆ ಸದಾ ಪ್ರಿಯವಾಗಿರುತ್ತದೆ.”

ರಾಧೆಯು ಉತ್ತರಿಸಿದಳು, “ನಾನೂ ಕೂಡ ನಿರಂತರವಾಗಿ ನನ್ನ ಗೆಳತಿಯರೊಡನೆ ನಿನ್ನ ಕುಂಡದಲ್ಲಿ ಸ್ನಾನ ಮಾಡಲು ಬರುತ್ತೇನೆ. ನೀನು ಅರಿಷ್ಟಾಸುರನನ್ನು ದಂಡಿಸಿದ ಈ ಸ್ಥಳದ ಬಗೆಗೆ ಮುಂದೆ ಯಾರು ಸುಸ್ಪಷ್ಟ ಭಕ್ತಿಯನ್ನು ಇಟ್ಟುಕೊಳ್ಳುತ್ತಾರೋ, ಯಾರು ಈ ಕುಂಡದಲ್ಲಿ ಸ್ನಾನವನ್ನು ಮಾಡುತ್ತಾರೋ ಅಥವಾ ನೆಲೆಸುತ್ತಾರೋ ಅವರು ನಿಶ್ಚಿತವಾಗಿಯೂ ನನಗೆ ಬಹಳ ಪ್ರಿಯರಾಗುತ್ತಾರೆ. ಅವರು ನೂರಾರು ಅರಿಷ್ಟಾಸುರರನ್ನು ಕೊಲ್ಲಲು ಸಾಧ್ಯವಾಗಲಿ.”

ವಜ್ರನಾಭ ರಾಜನಿಂದ ರಾಧಾಕುಂಡದ ಜೀರ್ಣೋದ್ಧಾರ

ಶ್ರೀಕೃಷ್ಣನು ಈ ಲೋಕವನ್ನು ತೊರೆದು ಹೋದ ಮೇಲೆ ರಾಧಾಕುಂಡದ ಮೂಲ ದಿವ್ಯ ರೂಪ ಮತ್ತು ಸೌಂದರ್ಯವು ಕಣ್ಮರೆಯಾಯಿತು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಜನಸಾಮಾನ್ಯರ ಲೌಕಿಕ ದೃಷ್ಟಿಯಿಂದ ಅದು ಮಾಯವಾಯಿತು. ಪ್ರಭು ಕೃಷ್ಣನ ಮರಿ ಮೊಮ್ಮಗನು, ಪ್ರಭುವು ತನ್ನ ದ್ವಾರಕಾಲೀಲೆಯನ್ನು ಮುಕ್ತಾಯಗೊಳಿಸಿದ ಮೇಲೆ, ಹಸ್ತಿನಾಪುರವನ್ನು ನೋಡಲು ಬಂದ. ಆ ಸಮಯದಲ್ಲಿ ಯುಧಿಷ್ಠಿರ ಮಹಾರಾಜನು ವಜ್ರನಾಭನಿಗೆ ಮಥುರೆಯ ರಾಜನಾಗಿ ಪಟ್ಟಾಭಿಷೇಕ ಮಾಡಿದ.

ಶ್ರೀಕೃಷ್ಣನು ವ್ರಜಮಂಡಲದಲ್ಲಿ ಲೀಲೆಗಳನ್ನು ನಡೆಸಿದ ಸ್ಥಳಗಳನ್ನು ಅನಾವರಣಗೊಳಿಸಬೇಕೆಂದು ಸ್ಥಳೀಯ ಸಾಧುಗಳು ವಜ್ರನಾಭ ಮಹಾರಾಜನಲ್ಲಿ ಕೇಳಿಕೊಂಡರು ಎಂದು ಹೇಳಲಾಗಿದೆ. ವಜ್ರನಾಭ ಮಹಾರಾಜನು ವ್ರಜಮಂಡಲದ ಉದ್ದಗಲಕ್ಕೂ ಸಂಚಾರ ಮಾಡಿದ. ಆದರೆ ದುರದೃಷ್ಟವಶಾತ್ ಒಂದು ಲೀಲಾ ಸ್ಥಾನವನ್ನು ಕೂಡ ಅವನಿಂದ ಪತ್ತೆ ಹಚ್ಚಲಾಗಲಿಲ್ಲ. ಭಗ್ನ ಹೃದಯಿಯಾಗಿ, ಆತಂಕಗೊಂಡವನಾಗಿ ವಜ್ರನಾಭ ಮಹಾರಾಜನು ಯಮುನಾ ನದಿಯ ದಡದಲ್ಲಿ ಕುಳಿತು ಹತಾಶೆಯಿಂದ ಕಣ್ಣೀರಿಟ್ಟನು.

ಆಗ ಇದ್ದಕ್ಕಿದ್ದಂತೆಯೇ ವ್ರಜದ ಪವಿತ್ರವಾದ ಕಲ್ಪವೃಕ್ಷವು ರಾಜನೊಡನೆ ಮಾತನಾಡಿತು. ರಾಧಾ ಮತ್ತು ಕೃಷ್ಣರ ದಿವ್ಯ ಲೀಲಾ ವಿನೋದಗಳು ನಡೆದ ಸ್ಥಳಗಳನ್ನು ಕರಾರುವಾಕ್ಕಾಗಿ ಪತ್ತೆ ಹಚ್ಚುವುದು ಹೇಗೆ ಎಂದು ಅದು ರಾಜನಿಗೆ ತಿಳಿಸಿತು. ಅತ್ಯಾನಂದಗೊಂಡ ರಾಜನು ತನ್ನ ಅಧೀನದಲ್ಲಿದ್ದ ಎಲ್ಲ ಸೌಕರ್ಯಗಳನ್ನು ಬಳಸಿಕೊಂಡು ಈ ಶೋಧನೆಯ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿದ.

ವೃಂದಾವನದ ಪ್ರಖ್ಯಾತ ಅರ್ಚಾ ವಿಗ್ರಹಗಳಾದ ಮದನ  ಮೋಹನ (ಈಗ ಕರೋಲಿಯಲ್ಲಿದೆ), ಗೋವಿಂದಜೀ (ಈಗ ಜೈಪುರದಲ್ಲಿದೆ), ಗೋಪೀನಾಥ, ಕೇಶವಜೀ (ಮೂಲ ವಿಗ್ರಹ ಮಥುರಾದ ಜನ್ಮಸ್ಥಾನದಲ್ಲಿದೆ), ಹರಿದೇವ (ಮಾನಸೀ ಗಂಗಾದಲ್ಲಿ), ಶ್ರೀ ಗೋಪಾಲ (ಈಗ ಶ್ರೀನಾಥಜೀ), ಶ್ರೀ ಸಾಕ್ಷಿಗೋಪಾಲ, ಗೋಪೀಶ್ವರ ಮಹಾದೇವ, ವೃಂದಾದೇವಿ ಮತ್ತು ಇನ್ನೂ ಅನೇಕ ಮೂರ್ತಿಗಳನ್ನು ಅವನು ಪ್ರತಿಷ್ಠಾಪಿಸಿದ! ರಾಜನು ನಿರ್ಮಿಸಿದ ಗೋವಿಂದ ದೇವನ ವಿಗ್ರಹವು ಪರಮ ಪ್ರಭುವಿಗೆ ಎಷ್ಟೊಂದು ತದ್ವತ್ತಾಗಿತ್ತೆಂದರೆ, ವಜ್ರನಾಭನ ತಾಯಿ ಉಷಾದೇವಿ, ಅವನ ದರ್ಶನವನ್ನು ಪಡೆಯುವಾಗ ಲಜ್ಜೆಯಿಂದ ತನ್ನ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಳು. ೪೫೦೦ ವರ್ಷಗಳ ಅನಂತರ ಇವೇ ವಿಗ್ರಹಗಳನ್ನು ಆರು ಜನ ಗೋಸ್ವಾಮಿಗಳು ಪುನಃ ಕಂಡು ಹಿಡಿದರು ಮತ್ತು ಅದ್ದೂರಿಯಿಂದ ಪೂಜಿಸಿದರು.

ಈ ಸಮಯದಲ್ಲಿ (ಸುಮಾರು ೫೦೦೦ ವರ್ಷಗಳ ಹಿಂದೆ), ವಜ್ರನಾಭ ರಾಜನು, ಶ್ರೀಕೃಷ್ಣನು ಅರಿಷ್ಟಾಸುರನನ್ನು ಕೊಂದ ಜಾಗದ ಸ್ಮರಣಾರ್ಥವಾಗಿ ಶ್ಯಾಮಕುಂಡದಲ್ಲಿ ಒಂದು ಸ್ನಾನಘಟ್ಟವನ್ನು ಪುನಃ ಕಂಡುಹಿಡಿದು ಅದರ ನಿರ್ಮಾಣ ಮಾಡಿದ. ಸಾಮಾನ್ಯವಾಗಿ ಕಣ್ಣಿಗೆ ಬೀಳದಿದ್ದರೂ, ಶ್ಯಾಮ ಕುಂಡವು ಬತ್ತಿದಾಗ, ಮಧ್ಯಭಾಗದಲ್ಲಿ ಒಂದು ಆಳವಾದ ಪುಟ್ಟ  ಕುಂಡವನ್ನು ವೃತ್ತಾಕಾರವಾಗಿ ಆವರಿಸಿರುವ ಗೋಡೆಯನ್ನು ನೋಡಬಹುದು. ಇದನ್ನು ವಜ್ರಕುಂಡ ಎಂದು ಕರೆಯುತ್ತಾರೆ. ಇದು ರಾಜನು ಅಗೆಸಿ ಮಾಡಿಸಿದ ಮೂಲ ಕುಂಡ.

ಶ್ರೀ ಚೈತನ್ಯರು ಪ್ರಕಾಶಿಸಿದ ರಾಧಾಕುಂಡ

ಶ್ರೀ ಚೈತನ್ಯರು ರಾಧಾಕುಂಡವನ್ನು ಸಂದರ್ಶಿಸಿದ ಅದ್ಭುತ ವಿವರಣೆಯನ್ನು ಭಕ್ತಿ ರತ್ನಾಕರ ಗ್ರಂಥದಲ್ಲಿ ಈ ರೀತಿ ಕೊಡಲಾಗಿದೆ. “ವ್ರಜಮಂಡಲದ ಪರಿಕ್ರಮವನ್ನು ಮುಗಿಸಿದ ಮೇಲೆ ಶ್ಯಾಮಕುಂಡದ ಹತ್ತಿರ ಬಂದು ತಮಾಲ ವೃಕ್ಷದ ಕೆಳಗೆ ಶ್ರೀ ಚೈತನ್ಯರು ಕುಳಿತಿದ್ದರು. ಯಾರಿಗೂ ರಾಧಾಕುಂಡ ಮತ್ತು ಶ್ಯಾಮಕುಂಡದ ನೆಲೆ ಗೊತ್ತಿಲ್ಲದಿದ್ದರೂ ಮಹಾಪ್ರಭುಗಳು ಆ ಕುಂಡಗಳನ್ನು ಎರಡು ಬತ್ತದ ಹೊಲಗಳ ನಡುವೆ ಪ್ರಕಾಶಿಸಿದರು. ಅನಂತರ ಅವರು ಆ ಕುಂಡಗಳಲ್ಲಿದ್ದ ಸ್ವಲ್ಪ ನೀರಿನಲ್ಲೇ ಸ್ನಾನಮಾಡಿ ಅಲ್ಲಿನ ಮಣ್ಣಿನಿಂದ ತಿಲಕವನ್ನು ಧರಿಸಿ ಆ ಎರಡು ಕುಂಡಗಳನ್ನು ನಾನಾ ಬಗೆಯಲ್ಲಿ ವೈಭವೀಕರಿಸಿದರು.”

 

 

ರಾಧಾಕುಂಡಾಷ್ಟಕಂ

(ಶ್ರೀಲ ರಘುನಾಥ ದಾಸ  ಗೋಸ್ವಾಮಿ  ವಿರಚಿತ )

ವೃಷಭ ದನುಜ ನಾಸಾನ್ ನರ್ಮ ಧರ್ಮೋಕ್ತಿ ರಙ್ಗೈಃರ್

ನಿಖಿಲ ನಿಜ ಸುಖೀಭಿಃ ಯತ್ ಸ್ವ ಹಸ್ತೇನ ಪೂರ್ಣಮ್ |

ಪ್ರಕಟಿತಮ್ ಅಪಿ ವೃಂದಾರಣ್ಯ ರಾಜ್ಞಾ ಪ್ರಮೋದೈಃ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ಗೂಳಿಯ ರೂಪದಲ್ಲಿದ್ದ ಅರಿಷ್ಟಾಸುರನನ್ನು ಕೊಂದು ಕೃಷ್ಣನು ಧರ್ಮಶ್ರದ್ಧೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ ವಿಚಾರವಾಗಿ ಉದ್ಭವಿಸಿದ ದೈವ ದಂಪತಿಯ ವಿನೋದ ಕಲಹದ ಅನಂತರ ಕಾಣಿಸಿಕೊಂಡ ರಾಧಾಕುಂಡವನ್ನು, ವೃಂದಾವನದ ರಾಣಿಯಾದ ಶ್ರೀಮತಿ ರಾಧಾರಾಣಿ ಮತ್ತು ಅವಳ ಗೆಳತಿಯರು ತಮ್ಮ ಸುಂದರವಾದ ಕೈಗಳಿಂದ ಅಗೆದು ನಿರ್ಮಿಸಿದರು. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮೇವ ಆಶ್ರಯವಾಗಿರಲಿ.

ವ್ರಜ ಭವಿ ಮುರ ಶತ್ರೋಃ ಪ್ರೇಯಸೀನಾಂ ನಿಕಾಮೈಃ

ಅಸುಲಭಮ್ ಅಪಿ ತೂರ್ಣಮ್ ಪ್ರೇಮ ಕಲ್ಪ ದ್ರುಮಂ ತಮ್ |

ಜನಯತಿ ಹೃದಿ ಭೂಮೌ ಸ್ನಾತುರುಚ್ಬೈಃ ಪ್ರಿಯಮ್ ಯತ್

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ಇಲ್ಲಿ ಯಾರೇ ಸ್ನಾನ ಮಾಡಲಿ ಅವರ ಹೃದಯದಲ್ಲಿ ಪ್ರೇಮ ಕಲ್ಪ ದ್ರುಮದ ಬೀಜವನ್ನು ಬಿತ್ತಲಾಗುತ್ತದೆ. ವ್ರಜಭೂಮಿಯಲ್ಲಿ ಕೃಷ್ಣನ ಪ್ರಿಯ ಗೆಳತಿಯರಿಗೇ ಇದನ್ನು ಸಾಸುವುದು ಅಪರೂಪ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮೇವ ಆಶ್ರಯವಾಗಿರಲಿ.

ಅಘ ರಿಪುರಪಿ ಯತ್ನಾದ್ ಅತ್ರ ದೇವ್ಯಾಃ ಪ್ರಸಾದ

ಪ್ರಸರ ಕೃತ ಕಟಾಕ್ಷ ಪ್ರಾಪ್ತಿ ಕಾಮಃ ಪ್ರಕಾಮಮ್ |

ಅನುಸರತಿ ಯದ್ ಉಚ್ಬೈಃ ಸ್ನಾನ ಸೇವಾನುಬಂಧೈಃ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ಅಘಾಸುರನ ಶತ್ರುವಾದ ಸ್ವತಃ ಕೃಷ್ಣನೇ ಜಾಗರೂಕತೆಯಿಂದ ರಾಧಾಕುಂಡದ ಆಶ್ರಯವನ್ನು ತೆಗೆದುಕೊಳ್ಳುತ್ತಾನೆ. ಶ್ರೀಮತಿ ರಾಧಾರಾಣಿಯ ಕರುಣಾಪೂರಿತ ಕಟಾಕ್ಷವನ್ನು ಪಡೆಯುವ ಹಂಬಲದಿಂದ ಕೃಷ್ಣನು ತವಕದಿಂದ ರಾಧಾಕುಂಡದಲ್ಲಿ ಸ್ನಾನ ಮಾಡಿ ಅದನ್ನು ಪೂಜಿಸುತ್ತಾನೆ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮೇವ ಆಶ್ರಯವಾಗಿರಲಿ.

ವ್ರಜ ಭುವನ ಸುಧಾಂಶೋಃ ಪ್ರೇಮ ಭೂಮಿಃ ನಿಕಾಮಂ

ವ್ರಜ ಮಧುರ ಕಿಶೋರೀ ಮೌಲಿ ರತ್ನ ಪ್ರಿಯೇವ |

ಪರಿಚಿತಮ್ ಅಪಿ ನಾಮ್ನಾ ಯಚ್ ಚ ತೇನೈವ ತಸ್ಯಾಃ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ರಾಧಾಕುಂಡವು ವ್ರಜದ ಚಂದ್ರಮನಾದ ಕೃಷ್ಣನ ಪ್ರೇಮಧಾಮ. ಏಕೆಂದರೆ ವ್ರಜದ ಎಲ್ಲ ಮಧುರ ಕಿಶೋರೀ ಗೋಪಿಯರಲ್ಲಿ ಶ್ರೀಮತಿ

ರಾಧಾರಾಣಿಯು ಚೂಡಾರತ್ನದಂತೆ ಶ್ರೇಷ್ಠಳು. ಅವಳು ಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರಳು. ಕೃಷ್ಣನಿಗೆ ಶ್ರೀಮತಿ ರಾಧಾರಾಣಿಯು ಹೇಗೋ ಅಷ್ಟೇ ಸಮಾನವಾದ ರೀತಿಯಲ್ಲಿ ರಾಧಾಕುಂಡವೂ ಪ್ರಿಯವಾದದ್ದು. ಆದ್ದರಿಂದ ಕೃಷ್ಣನು ಈ ಕುಂಡಕ್ಕೆ ರಾಧೆಯ ಹೆಸರನ್ನಿಟ್ಟ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮಾತ್ರ ಆಶ್ರಯವಾಗಿರಲಿ.

ಅಪಿ ಜನ ಇಹ ಕಶ್ಚಿದ್ ಯಸ್ಯ ಸೇವಾ ಪ್ರಸಾದೈಃ

ಪ್ರಣಯ ಸುರ ಲತಾ ಸ್ಯಾತ್ ತಸ್ಯ ಗೋಷ್ಟೇಂದ್ರ ಸೂನೋಃ |

ಸಪದಿ ಕಿಲ ಮದ್ ಈಶಾ ದಾಸ್ಯ ಪುಷ್ಪ ಪ್ರಶಸ್ಯಾ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ಯಾರು ಇಲ್ಲಿ ಭಕ್ತಿಸೇವೆಯನ್ನು ಸಲ್ಲಿಸುತ್ತಾರೋ ಅವರಿಗೆ ರಾಧಾಕುಂಡದ ಕೃಪೆಯಿಂದಾಗಿ ರಾಧೆಯ ದಾಸಿಯಾಗಬೇಕೆಂಬ ಆಸೆಯು ಜಾಗೃತವಾಗುತ್ತದೆ. ಇದು ಕೃಷ್ಣಪ್ರೇಮವೆಂಬ ಕಾಮನೆಯ ಬಳ್ಳಿಯಲ್ಲಿ ಅರಳುತ್ತಿರುವ ಪುಷ್ಪ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮಾತ್ರ ಆಶ್ರಯವಾಗಿರಲಿ.

ತಟ ಮಧುರ ನಿಕುಂಜಾಃ ಕ್ಲಪ್ತ ನಾಮಾನ್ ಉಚ್ಬೈಃ

ನಿಜ ಪರಿಜನ ವರ್ಗೈಃ ಸಂವಿಭಗ್ಯಾಶ್ರಿತಾಸ್ತೈಃ |

ಮಧುಕರ ರುತ ರಮ್ಯಾ ಯಸ್ಯ ರಾಜಂತಿ ಕಾಮ್ಯಾಸ್

ತದ್ ಅತಿ ಸುರಭಿ ರಾಧಾಕುಂಡಮ್ ಏವಾಶ್ರಯೋ ಮೇ ||

ರಾಧಾಕುಂಡದ ಸುತ್ತ ಇರುವ ದಂಡೆಗಳ ಮೇಲೆ ಮಧುರವಾದ ಮತ್ತು ಆನಂದದಾಯಕವಾದ ಪೊದೆಗಳು ಇವೆ. ಅವುಗಳ ಸುತ್ತ ಝೇಂಕರಿಸುತ್ತಿರುವ ದುಂಬಿಗಳು ಪ್ರಣಯ ಸುಖದ ಆಸೆಯನ್ನು ಜಾಗೃತಗೊಳಿಸುತ್ತಿವೆ. ರಾಧಾರಾಣಿಯ ಎಂಟು ಜನ ಸಖಿಯರ ಹೆಸರುಗಳನ್ನಿಟ್ಟು ಈ ಕುಂಜಗಳನ್ನು ವೈಯಕ್ತಿಕವಾಗಿ ವಿರಚಿಸಲಾಗಿದೆ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮಾತ್ರ ಆಶ್ರಯವಾಗಿರಲಿ.

ತಟಭುವಿ ವರ ವೇದ್ಯಾಂ ಯಸ್ಯ ನರ್ಮಾತಿ ಹೃದ್ಯಾಂ

ಮಧುರ ಮಧುರ ವಾರ್ತಾಂ ಗೋಷ್ಠ ಚಂದ್ರಸ್ಯ ಭಂಗ್ಯಾ |

ಪ್ರಥಯತಿ ಮಿಥ ಈಶಾ ಪ್ರಾಣ ಸಖ್ಯಾಲಿಭಿಃ ಸಾ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ರಾಧಾಕುಂಡದ ದಂಡೆಯ ಮೇಲೆ ಶ್ರೀಮತಿ ರಾಧಾರಾಣಿಯು ಸೊಗಸಾಗಿ ಅಲಂಕೃತವಾದ ವೇದಿಕೆಯೊಂದರ ಮೇಲೆ ತನ್ನ ಅತ್ಯಂತ ಪ್ರೀತಿಪಾತ್ರರಾದ ಗೆಳತಿಯರ ಜೊತೆಯಲ್ಲಿ ಕುಳಿತಿರುತ್ತಾಳೆ.

ನಾನಾ ವಿಧವಾದ ಅಂಗಭಂಗಿಗಳಿಂದ ಅವರು ವ್ರಜಕ್ಕೆ ಚಂದ್ರೋಪಮನಾದ ಕೃಷ್ಣನನ್ನು ಕುರಿತು ಮಧುರವಾದ ವಿನೋದ ಸಲ್ಲಾಪವನ್ನು ಮಾಡುತ್ತಾರೆ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾ ಕುಂಡವು ನನ್ನ ಏಕಮಾತ್ರ ಆಶ್ರಯವಾಗಿರಲಿ.

ಅನುದಿನಮ್ ಅತಿ ರಂಗೈಃ ಪ್ರೇಮ ಮತ್ತಾಲಿ ಸಂಘೈರ್

ವರ ಸರಸಿಜ ಗಂಧೈರ್ ಹಾರಿ ವಾರಿ ಪ್ರಪೂರ್ಣೇ |

ವಿಹರತ ಇಹ ಯಸ್ಮಿನ್ ದಂಪತಿ ತೌ ಪ್ರಮತ್ತೌ

ತದ್ ಅತಿ ಸುರಭಿ ರಾಧಾ ಕುಂಡಮ್ ಏವಾಶ್ರಯೋ ಮೇ ||

ಪ್ರೇಮಮತ್ತರಾದ ರಾಧಾ ಮಾಧವರು, ಮತ್ತು ಗೋಪಿಯರು ಪ್ರತಿದಿನವೂ ಇಲ್ಲಿಗೆ ಬರುತ್ತಾರೆ. ರಾಧಾಕುಂಡದಲ್ಲಿ ಸಂತೋಷದಿಂದ ಆಟವಾಡುತ್ತಾರೆ. ಅದು ವರ್ಣರಂಜಿತವಾದ ಕಮಲಪುಷ್ಪಗಳಿಂದ ತುಂಬಿದೆ. ಆ ಪುಷ್ಪಗಳು ತಮ್ಮ ಚಿತ್ತಾಕರ್ಷಕವಾದ ಸುಗಂಧದಿಂದ ಗಾಳಿಯನ್ನು ಮಧುರಗೊಳಿಸಿವೆ. ಇಂತಹ ಸುಂದರವಾದ ಮತ್ತು ಮಂತ್ರಮುಗ್ಧಗೊಳಿಸುವಂತಹ ರಾಧಾಕುಂಡವು ನನ್ನ ಏಕಮಾತ್ರ ಆಶ್ರಯವಾಗಿರಲಿ.

ಅವಿಕಲಮ್ ಅತಿ ದೇವ್ಯಾಶ್ ಚಾರು ಕುಂಡಾಷ್ಟಕಂ ಯಃ

ಪರಿಪಠತಿ ತದೀಯೋಲ್ಲಾಸೀ ದಾಸ್ಯಾರ್ಪಿತಾತ್ಮಾ |

ಅಚಿರಮ್ ಇಹ ಶರೀರೇ ದರ್ಶಯತಿ ಏವ ತಸ್ಮನಿ

ಮಧು ರಿಪುರತಿ ಮೋದೈಃ ಶ್ಲಿಷ್ಯಮಾಣಾಂ ಪ್ರಿಯಾಂ ತಾಮ್ ||

ಫಲಪ್ರಾಪ್ತಿ : ರಾಧೆಯ ಆನಂದದಾಯಕವಾದ ಸೇವೆಗೆ ಅರ್ಪಿತರಾಗಿ ಯಾರು ಶಾಂತಚಿತ್ತದಿಂದ ಈ ರಾಧಾಕುಂಡಾಷ್ಟಕವನ್ನು ಪಠಿಸುತ್ತಾರೋ ಅವರು ಕ್ಷಿಪ್ರವಾಗಿ ರಾಧಾಕೃಷ್ಣರು ಆನಂದದಿಂದ ಆಲಿಂಗಿಸಿಕೊಂಡಿರುವ ದೃಶ್ಯದ ದರ್ಶನವನ್ನು ಪಡೆಯುತ್ತಾರೆ.
Leave a Reply

Your email address will not be published. Required fields are marked *