Search
Friday 29 October 2021
  • :
  • :

ಪರಶುರಾಮ ಅವತಾರ

ಪ್ರಿಯ ಮಕ್ಕಳೇ, ಒಂದಾನೊಂದು ಕಾಲದಲ್ಲಿ ಜಮದಗ್ನಿ ಎಂಬ ಮಹಾನ್ ಋಷಿಗಳಿದ್ದರು. ತಮ್ಮ ಭಕ್ತಿಸೇವೆಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರ ಪತ್ನಿ ರೇಣುಕಾ. ಅವರಿಗೆ ಅನೇಕ ಮಕ್ಕಳು. ಪರಶುರಾಮ ಕೊನೆಯ ಮಗ. ಮಹಾ ವೀರ. ಪರಶುರಾಮನು ವಿಷ್ಣುವಿನ ಅವತಾರ. ಒಮ್ಮೆ ಪರಶುರಾಮನ ತಾಯಿ ರೇಣುಕಾ ನೀರು ತರಲು ನದಿಗೆ ಹೋಗುತ್ತಾಳೆ. ಅಲ್ಲಿ ಗಂಧರ್ವ ರಾಜ ಚಿತ್ರರಥನು ಅಪ್ಸರೆಯರೊಂದಿಗೆ ಇರುತ್ತಾನೆ. `ನನಗೂ ಅಂತಹ ಅವಕಾಶ ಇರಬಾರದೇ?’ ಎಂದು ಅವಳು ಆಸೆ ಪಡುತ್ತಾಳೆ. ಅದು ಒಂದೇ ಕ್ಷಣ ಮಾತ್ರ. ಆದರೂ ಅವಳ ಪತಿಗೆ ಇದು ಗೊತ್ತಾಗಿಬಿಡುತ್ತದೆ. ಅವರು ಕೋಪಗೊಳ್ಳುತ್ತಾರೆ. ತಮ್ಮ ಮಕ್ಕಳಿಗೆ `ನಿಮ್ಮ ತಾಯಿಯನ್ನು ಕೊಲ್ಲಿ’ ಎಂದು ಆದೇಶಿಸುತ್ತಾರೆ. `ಮಾತೃ ಹತ್ಯೆ ಮಾಡುವುದೇ? ಛೆ! ಅಂತಹ ಪಾಪ ಮಾಡಲಾರೆ’ ಎಂದು ಎಲ್ಲ ಮಕ್ಕಳೂ ಹೇಳುತ್ತಾರೆ. ಜಮದಗ್ನಿಯು ಆಗ ತನ್ನ ಆಜ್ಞೆಯನ್ನು ಉಲ್ಲಂಘಿಸಿದ ತನ್ನ ಮಕ್ಕಳನ್ನು ಮತ್ತು ಹೆಂಡತಿಯನ್ನು ಕೊಲ್ಲಲು ತನ್ನ ಕೊನೆಯ ಮಗನಾದ ಪರಶುರಾಮನಿಗೆ ಆದೇಶಿಸುತ್ತಾರೆ. ತನ್ನ ತಂದೆಯ ಶಕ್ತಿಯನ್ನು ಅರಿತ ಪರಶುರಾಮನು ತನ್ನ ತಾಯಿ ಮತ್ತು ತನ್ನ ಅಣ್ಣಂದಿರನ್ನು ತತ್‌ಕ್ಷಣ ಕೊಲ್ಲುತ್ತಾನೆ. ಜಮದಗ್ನಿಯು ಸಂಪ್ರೀತನಾಗಿ ಮಗನಿಗೆ ವರವನ್ನು ಕೇಳು ನೀಡುವೆ ಎನ್ನುತ್ತಾರೆ. ಪರಶುರಾಮನು ತನ್ನ ತಾಯಿ ಮತ್ತು ಸಹೋದರರು ಮತ್ತೆ ಬದುಕಲಿ ಮತ್ತು ನನ್ನಿಂದ ಹತರಾಗಿರುವುದು ಅವರ ಸ್ಮರಣೆಗೆ ಬಾರದಿರಲಿ ಎಂದು ವರವನ್ನು ಕೇಳಿದನು. ಆಗ ಪರಶುರಾಮನ ತಾಯಿ ಮತ್ತು ಸಹೋದರರು ಗಾಢ ನಿದ್ರೆಯಿಂದ ಎದ್ದಂತೆ ಆನಂದದಿಂದ ಎದ್ದು ನಿಂತರು.

ಆ ಕಾಲದಲ್ಲಿ ರಾಜ ಕಾರ್ತವೀರ್ಯಾರ್ಜುನ ಅತ್ಯಂತ ಪರಾಕ್ರಮಿ. ಒಮ್ಮೆ ಅವನು ತನ್ನ ಪರಿವಾರದೊಂದಿಗೆ ಜಮದಗ್ನಿ ಆಶ್ರಮಕ್ಕೆ ಬರುತ್ತಾನೆ. ಮಹಾ ಋಷಿಯು ತನ್ನ ಅತಿಥಿಗಳನ್ನು ಸತ್ಕರಿಸುತ್ತಾರೆ. ಜಮದಗ್ನಿ ಬಳಿ ಕಾಮಧೇನು ಇತ್ತು. `ಕಾಮಧೇನು ಇದ್ದರೆ ಎಷ್ಟು ಜನರನ್ನಾದರೂ ಸತ್ಕರಿಸಬಹುದು’ ಎಂದು ಋಷಿಗೆ ಗೊತ್ತು. ಆದುದರಿಂದ ಅವರಿಗೆ ರಾಜನ ಪರಿವಾರ ನೋಡಿ ಗಾಬರಿಯಾಗಲಿಲ್ಲ. `ಒಂದೇ ಒಂದು ಕಾಮಧೇನುವಿಗೆ ಇಷ್ಟು ಸಾಮರ್ಥ್ಯವೇ?’ ಎಂದು ರಾಜ ಚಕಿತನಾದ. ಅವನಿಗೆ ಋಷಿ ಬಗ್ಗೆ ಅಸೂಯೆ ಉಂಟಾಯಿತು. `ರಾಜನಾದ ನನ್ನ ಬಳಿ ಕಾಮಧೇನು ಇರಬೇಕು’ ಎಂದು ಅವನು ಬಯಸಿದ. ಆಗ ದೊರೆ ಕಾಮಧೇನುವನ್ನು ಅಪಹರಿಸುತ್ತಾನೆ. ರಾಜನು ಬಲವಂತದಿಂದ ಕಾಮಧೇನುವನ್ನು ಒಯ್ದಾಗ ಅದು ಕಣ್ಣೀರಿಡುತ್ತದೆ.

ರಾಜನು ಕಾಮಧೇನುವನ್ನು ಒಯ್ದ ವಿಷಯ ಪರಶುರಾಮನಿಗೆ ತಿಳಿಯುತ್ತದೆ. `ಕಾಮಧೇನುವನ್ನು ರಕ್ಷಿಸುವೆ’ ಎಂದು ತನ್ನ ಕೊಡಲಿ, ಬಿಲ್ಲು ಬಾಣ ಹಿಡಿದು ದೊರೆಯ ಬೆನ್ನಟ್ಟುತ್ತಾನೆ. ರಾಜ ಮತ್ತು ಪರಶುರಾಮನ ಮಧ್ಯೆ ಭೀಕರ ಕಾಳಗ ನಡೆಯುತ್ತದೆ. ರಾಜ ಹತನಾಗುತ್ತಾನೆ. ಅನಂತರ ಪರಶುರಾಮ ಕಾಮಧೇನುವನ್ನು ಆಶ್ರಮಕ್ಕೆ ವಾಪಸು ತರುತ್ತಾನೆ. ಅಂತೂ ಕಾಮಧೇನು ವಾಪಸಾದಳು. ಜಮದಗ್ನಿಯು ಪರಶುರಾಮನ ಕೃತ್ಯ ಸರಿಯಲ್ಲ ಎಂದು ವಿವರಿಸುತ್ತಾರೆ. `ಬ್ರಾಹ್ಮಣರು ಕ್ಷಮಾ ಗುಣ ಹೊಂದಿರಬೇಕು’ ಎಂದು ಹೇಳುತ್ತಾರೆ. `ಪಾಪ ಪರಿಹಾರಕ್ಕೆ ತೀರ್ಥಯಾತ್ರೆಗೆ ಹೋಗು’ ಎನ್ನುತ್ತಾರೆ. ತಂದೆಯ ಸೂಚನೆಯಂತೆ ಪರಶುರಾಮ ಯಾತ್ರೆ ಹೊರಡುತ್ತಾನೆ.

ಇತ್ತ ರಾಜನ ಮಕ್ಕಳು `ಆ ಪರಶುರಾಮನನ್ನು ಬಿಡುವುದಿಲ್ಲ’ ಎಂದು ಸಿಟ್ಟಿನಿಂದ ಚೀರುತ್ತಾರೆ. ಅವರೆಲ್ಲ  ಜಮದಗ್ನಿ ಆಶ್ರಮಕ್ಕೆ ಬರುತ್ತಾರೆ. ಋಷಿಯನ್ನು ಕೊಂದು ಅವರ‌ ಶಿರವನ್ನು ಒಯ್ಯುತ್ತಾರೆ. ಪರಶುರಾಮನಿಗೆ ರಾಜನ ಮಕ್ಕಳು ತಂದೆಯನ್ನು ಕೊಂದಿರುವುದು ತಿಳಿಯುತ್ತದೆ. ಇದರಿಂದ ಅವನಿಗೆ ತುಂಬ ಕೋಪ ಉಂಟಾಗಿ  `ಕ್ಷತ್ರಿಯರನ್ನೆಲ್ಲಾ ಕೊಲ್ಲುವೆ’ ಎಂದು ವೀರಾವೇಶದಿಂದ ಹೊರಡುತ್ತಾನೆ. ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ಸಂಚರಿಸಿ ಕ್ಷತ್ರಿಯರನ್ನು ಸಂಹರಿಸುತ್ತ ಹೋಗುತ್ತಾನೆ.  ಪರಶುರಾಮನು ತಂದೆಯ ಶಿರ ತಂದು ದೇಹದೊಂದಿಗೆ ಜೋಡಿಸುತ್ತಾನೆ . ಜಮದಗ್ನಿಗೆ ಪುನಃ ಜೀವ ಬರುತ್ತದೆ.

ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶ ಪಡಿಸುವುದು. ವಿಷ್ಣುವು ಪರಶುರಾಮನ ಅವತಾರದಲ್ಲಿ ೨೧ ಬಾರಿ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಏಕೆಂದರೆ ಅವರೆಲ್ಲ ಬ್ರಾಹ್ಮಣ ಸಂಸ್ಕೃತಿಗೆ ಅವಿಧೇಯರಾಗಿರುತ್ತಾರೆ. ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಪ್ರಾಜ್ಞ ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
Leave a Reply

Your email address will not be published. Required fields are marked *