Search
Friday 29 October 2021
  • :
  • :

ನರಸಿಂಹ ಅವತಾರ

ಮಕ್ಕಳೇ, ವರಾಹ ಅವತಾರದಲ್ಲಿ ವಿಷ್ಣು ಹಿರಣ್ಯಾಕ್ಷನೆಂಬ ರಾಕ್ಷಸನನ್ನು ಕೊಂದನಲ್ಲವೇ? ಅವನ ಸೋದರನೇ ಹಿರಣ್ಯಕಶಿಪು. `ನ‌ನ್ನ ಸೋದರನನ್ನು ಕೊಂದ ವಿಷ್ಣುವನ್ನು ಸಂಹರಿಸುವೆ’ ಎಂದು ಅವನು ಪಣ ತೊಡುತ್ತಾನೆ. ಇದಕ್ಕಾಗಿ ಉಗ್ರ ತಪಸ್ಸು ಕೈಗೊಳ್ಳುತ್ತಾನೆ. ಬ್ರಹ್ಮ ಅವನಿಗೆ ವರ ಬೇಡಲು ಹೇಳುತ್ತಾನೆ. `ನನಗೆ ಸಾವೇ ಬೇಡ.  ಅಮರತ್ವ ಕೊಡು’ ಎಂದು ರಾಕ್ಷಸ ಕೇಳಿದ! ಬ್ರಹ್ಮ ಅದಕ್ಕೆ ಒಪ್ಪುವುದಿಲ್ಲ. `ಹಾಗೆಲ್ಲ ಸಾವೇ ಇಲ್ಲದಂತೆ ವರ ಕೊಡಲಾಗದು. ಬೇರೆ ಯಾವ ವರವನ್ನಾದರೂ ಕೇಳು’ ಎಂದ. ಆಗ ರಾಕ್ಷಸ ಜಾಣತನ ತೋರಿಸಿದ. `ಮಾನವ ಅಥವಾ ಮೃಗದಿಂದ, ಹಗಲು ಅಥವಾ ರಾತ್ರಿ, ಮನೆ ಒಳಗೆ ಅಥವಾ ಹೊರಗೆ ಮತ್ತು ಶಸ್ತ್ರ ಅಥವಾ ಅಸ್ತ್ರದಿಂದ ನನಗೆ ಸಾವು ಬೇಡ’ ಎಂದು ಕೇಳಿದ. ಅದರಂತೆಯೇ ಬ್ರಹ್ಮ ವರ ನೀಡಿದ. `ಸದ್ಯ, ನನಗೆ ಸಾವೇ ಇಲ್ಲ’  ಎಂದು ಹಿರಣ್ಯಕಶಿಪು ಖುಷಿಪಟ್ಟುಕೊಂಡ.

ಹಿರಣ್ಯಕಶಿಪು ದಿನೇ ದಿನೇ ಪ್ರಬಲನಾಗುತ್ತಿದ್ದ. ದೇವತೆಗಳಿಗೆ ತುಂಬ ಕಾಟ ಕೊಡುತ್ತಿದ್ದ. ಅವನ ಹಿಂಸೆ ತಾಳಲಾರದೆ ದೇವತೆಗಳು ವಿಷ್ಣುವಿನ ಬಳಿಗೆ ಬರುತ್ತಾರೆ. `ಈ ರಾಕ್ಷಸನ ಕಾಟ ತಾಳಲಾಗುತ್ತಿಲ್ಲ. ನಮ್ಮನ್ನು ರಕ್ಷಿಸು’  ಎಂದು ಬೇಡುತ್ತಾರೆ. `ಭಯ ಪಡಬೇಡಿ. ಸೂಕ್ತ ಕಾಲದಲ್ಲಿ ನಾನು ಹಿರಣ್ಯಕಶಿಪುವನ್ನು ಸಂಹರಿಸುತ್ತೇನೆ’  ಎಂದು ಭಗವಂತನು ಅವರಿಗೆ ಆಶ್ವಾಸನೆ ನೀಡಿದ.

ಹಿರಣ್ಯಕಶಿಪುವಿಗೆ ವಿಷ್ಣು ಮತ್ತು ಅವನ ಭಕ್ತರನ್ನು ಕಂಡರಾಗುತ್ತಿರಲಿಲ್ಲ. `ನನ್ನ ಸೋದರನನ್ನು ಕೊಂದ ವಿಷ್ಣು ನನ್ನ ಶತ್ರು. ಅವನನ್ನು ಹೇಗಾದರೂ ಕೊಲ್ಲುವೆ’ ಎನ್ನುತ್ತಿದ್ದ. `ನಾನು ವಿಷ್ಣುವಿಗಿಂತ ಹೆಚ್ಚು ಶಕ್ತಿಶಾಲಿ’ ಎಂದು ಸೊಕ್ಕಿನಿಂದ ಹೇಳುತ್ತಿದ್ದ. ಅಷ್ಟೇ ಅಲ್ಲ, `ವಿಷ್ಣುವನ್ನು ಪೂಜಿಸಬೇಡಿ. ನನ್ನನ್ನೇ ಪೂಜಿಸಿ’ ಎಂದು  ಆದೇಶಿಸಿದ್ದ. ಇಂತಹ ಅಸುರನ ಮಗನಾಗಿ ಪ್ರಹ್ಲಾದ ಹುಟ್ಟಿದ. ಹಿರಣ್ಯಕಶಿಪುವಿನ ಪತ್ನಿ ಕಯಾದು. ಹಿರಣ್ಯಕಶಿಪು ತಪಸ್ಸು ಆಚರಿಸುತ್ತಿದ್ದಾಗ ಅವಳು ನಾರದ ಮುನಿಗಳ ಆಶ್ರಮದಲ್ಲಿದ್ದಳು. ಆಗ ಪ್ರಹ್ಲಾದನಿಗೆ ಜನ್ಮನೀಡಿದಳು. ನಾರದರು ಹೇಳುತ್ತಿದ್ದ ಶ್ರೀಮನ್ ನಾರಾಯಣನ ಕತೆಯನ್ನು ಕೇಳುತ್ತ ಪ್ರಹ್ಲಾದ ಬಾಲ್ಯದಿಂದಲೇ ವಿಷ್ಣುಭಕ್ತನಾದ. ಮುಂದೆ ಗುರುಕುಲದಲ್ಲಿಯೂ ತನ್ನ ಸಹಪಾಠಿಗಳಿಗೆ `ಭಗವಂತನನ್ನು ಪೂಜಿಸಿ’ ಎಂದು ಉಪದೇಶ ನೀಡುತ್ತಿದ್ದ. ಇದರಿಂದಾಗಿ ಗುರುಕುಲದಲ್ಲಿದ್ದ ರಾಕ್ಷಸ ಪುತ್ರರೂ ಭಗವಂತನಲ್ಲಿ ಭಕ್ತಿ ತೋರುತ್ತಿದ್ದರು. ಇದರಿಂದ ಗಾಬರಿಯಾದ ಗುರುಗಳು ಹಿರಣ್ಯಕಶಿಪುವಿನ ಬಳಿ ಹೋಗಿ ಪ್ರಹ್ಲಾದನ ಬಗೆಗೆ ದೂರುತ್ತಿದ್ದರು. ಇದನ್ನು ಕೇಳಿ ಹಿರಣ್ಯಕಶಿಪು ಕೆರಳಿದ. ` ನನ್ನ ಈ ಮಗನನ್ನೇ ಕೊಲ್ಲಿ’ ಎಂದು ಆಜ್ಞಾಪಿಸಿದ.  ನಾನಾ ರೀತಿ ಪ್ರಯತ್ನಿಸಿದರೂ ಪ್ರಹ್ಲಾದನನ್ನು ಕೊಲ್ಲುವುದು ಸಾಧ್ಯವಾಗುವುದಿಲ್ಲ.

`ನಾನು ಭಗವಂತನಿಗಿಂತ ದೊಡ್ಡವನು’ ಎಂದು ಈ ರಾಕ್ಷಸ ರಾಜ ಸದಾ ಹೇಳುತ್ತಿದ್ದ. ಆಗ ಪ್ರಹ್ಲಾದನು ತನ್ನ ತಂದೆಗೆ ಹೇಳಿದ: `ರಾಜನಾದ ಹಿರಣ್ಯಕಶಿಪು, ನೀನು ದೇವರಲ್ಲ. ಭಗವಂತನಾದರೋ ಸರ್ವವ್ಯಾಪಿ ಮತ್ತು ಸರ್ವಶಕ್ತ. ಅವನಿಗೆ ಸರಿಸಮಾನರಾಗಲೀ ಅವನಿಗಿಂತ ಶ್ರೇಷ್ಠರಾದವರಾಗಲೀ ಯಾರೂ ಇಲ್ಲ. ಆದುದರಿಂದ ಭಗವಂತನಿಗೆ ಶರಣಾಗು.’ ಪ್ರಹ್ಲಾದನ ಮಾತು ಕೇಳಿ ಹಿರಣ್ಯಕಶಿಪುವಿಗೆ ಇನ್ನಷ್ಟು ಕೋಪ. ಅವನನ್ನು ಕೆಣಕಲು ಕೇಳುತ್ತಾನೆ, `ನಿನ್ನ ನಾರಾಯಣ ಈ ಅರಮನೆ ಕಂಬದಲ್ಲಿ ಇದ್ದಾನೆಯೇ?’ `ಭಗವಂತನು ಎಲ್ಲೆಲ್ಲೂ ಇರುವುದರಿಂದ ಕಂಬದಲ್ಲಿಯೂ ಇದ್ದಾನೆ’ ಎಂದು ಪ್ರಹ್ಲಾದ ಉತ್ತರಿಸಿದ. `ಹಾಗಾದರೆ ನೋಡೇ ಬಿಡುವ’ ಎಂದು ಹಿರಣ್ಯಕಶಿಪು ತಿರಸ್ಕಾರದಿಂದ ಆ ಕಂಬವನ್ನು ಗುದ್ದಿದ. ಆಗ ಕಂಬದಿಂದ ಭಾರೀ ಶಬ್ದ ಹೊರಬಂದಿತು. ಪ್ರಹ್ಲಾದನ ಮಾತು ನಿಜವಾಯಿತು. ವಿಷ್ಣುವು ತನ್ನ ಅದ್ಭುತವಾದ ನರಸಿಂಹಾವತಾರದಲ್ಲಿ -ಅರ್ಧ ಸಿಂಹ, ಅರ್ಧ ಮನುಷ್ಯನ ಅವತಾರದಲ್ಲಿ- ಹೊರಬಂದನು.  ಭಗವಂತನ ಈ ವಿಶೇಷವಾದ  ರೂಪವನ್ನು ಕಂಡು ಹಿರಣ್ಯಕಶಿಪು ಒಳಗೊಳಗೇ ಬೆದರಿದ. ಇದು ತನ್ನ ಸಾವಿಗೇ ಎಂದು ಶಂಕಿಸಿದ. ಹೀಗಾಗಿ ಅವನು ನೃಸಿಂಹನೊಡನೆ ಹೋರಾಡಲು ಸಿದ್ಧವಾದ. ಕೆಲಕಾಲ ಭಗವಂತನು ಆ ರಾಕ್ಷಸನೊಡನೆ ಕಾದಾಡಿದ. ಅನಂತರ ಮುಸ್ಸಂಜೆಯಲ್ಲಿ ಭಗವಂತನು ರಾಕ್ಷಸನನ್ನು ಬಲವಾಗಿ ಹಿಡಿದು ತನ್ನ ತೊಡೆಯ ಮೇಲೆ ಎಳೆದುಕೊಂಡ. ಅನಂತರ ತನ್ನ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿ ಕೊಂದು ಹಾಕಿದ.

ರಾಕ್ಷಸನ ಸಂಹಾರ ಮಾಡಿದ ಮೇಲೆ ಕೂಡ ನೃಸಿಂಹನ ಕೋಪ ಶಮನವಾಗಿರಲಿಲ್ಲ. ಅವನು ಗರ್ಜಿಸುತ್ತಾ ಹಿರಣ್ಯಕಶಿಪುವಿನ ಸಿಂಹಾಸನದ ಮೇಲೆ ಆಸೀನನಾದ. ಯಾರು ಎಷ್ಟೇ ಪ್ರಯತ್ನಿಸಿದರೂ  ಅವನ ಕೋಪ ಇಳಿಯಲಿಲ್ಲ. ಆಗ ಪ್ರಹ್ಲಾದನು ಕೊಂಚವೂ ಹೆದರದೆ ನೃಸಿಂಹನ ಮುಂದೆ ಬಂದು ಭಕ್ತಿಪೂರ್ವಕವಾಗಿ ನಮಸ್ಕರಿಸಿದ. ತನ್ನ ಭಕ್ತನ ಬಗ್ಗೆ ವಿಶೇಷ ಪ್ರೀತಿ ವಾತ್ಸಲ್ಯಗಳಿದ್ದ ನೃಸಿಂಹನು ಅವನ ತಲೆಯ ಮೇಲೆ ತನ್ನ ದಿವ್ಯ ಹಸ್ತವನ್ನು ಇರಿಸಿದ. ಪ್ರಹ್ಲಾದನು ಭಗವಂತನನ್ನು ಸ್ತುತಿಸಿ, ಭಕ್ತಿ ಅರ್ಪಿಸಿ ಕರುಣೆ ಯಾಚಿಸಿದ. ಆಗ ದೇವನು ಶಾಂತನಾದ. ಇಂತಹ ವಿಷ್ಣು ಭಕ್ತ ಪ್ರಹ್ಲಾದನಿಗೆ ನಮಿಸೋಣ.
Leave a Reply

Your email address will not be published. Required fields are marked *