Search
Friday 29 October 2021
  • :
  • :

ನಾಲ್ವರು ಭಾಗವತೋತ್ತಮರು

ಧ್ರುವ, ಪ್ರಹ್ಲಾದರು ಎಳವೆಯಲ್ಲೇ ಶ್ರೀಹರಿಯ ದರ್ಶನ ಪಡೆದ ಭಾಗ್ಯವಂತರು. ಶ್ರದ್ಧಾ – ಭಕ್ತಿಗಳೇ ಅವರ ಪುಣ್ಯ ಸಂಚಯದ ಮೂಲ. ರಾಜ ಅಂಬರೀಷನು ಕರ್ತವ್ಯಪ್ರಜ್ಞೆ – ವಿನಯವಂತಿಕೆಗಳಿಂದ, ಶುದ್ಧ ಭಕ್ತಿಯಿಂದ ವಿಷ್ಣುವಿಗೆ ಪ್ರಿಯನಾದರೆ, ಅಜಾಮಿಳನು ನಾರಾಯಣ ಸ್ಮರಣೆಯಿಂದ ತನಗೇ ಅರಿವಿಲ್ಲದಂತೆ ಭಗವಂತನ ಕೃಪೆಗೆ ಪಾತ್ರನಾದ. ಈ ಭಾಗವತೋತ್ತಮರ ಜೀವನಗಾಥೆ, ಭಕ್ತರ ಪಾಲಿಗೆ ನಿರಂತರ ಸ್ಪೂರ್ತಿ ಸ್ರೋತ.

ಭಾರತೀಯ ಧಾರ್ಮಿಕ ಪರಂಪರೆಯು ಹಲವು ಸಮ್ಮತಸೂತ್ರಗಳ ಮೇಲೆ ನಿಂತಿದೆ. ಈ ಸೂತ್ರಗಳಿಗೆ ಯಾವ ಸಾಕ್ಷ್ಯಾಧಾರಗಳ ಅಗತ್ಯ ಇಲ್ಲ. ಅನೇಕ ಶತಮಾನಗಳಿಂದ ಇವು ಭಾರತೀಯ ಸಮಾಜದ ಜೀವನಾಡಿಯಾಗಿವೆ. ಇವೆಂದರೆ: ದೇವರಿದ್ದಾನೆ; ಅವನು ಸರ್ವಶಕ್ತ, ಸರ್ವಜ್ಞ, ಸರ್ವವ್ಯಾಪಿ, ಆತ್ಮಕ್ಕೆ ಅಳಿವಿಲ್ಲ, ಶರೀರ ಮಾತ್ರ ನಶಿಸುತ್ತದೆ, ಆತ್ಮವು ಬೇರೆ ಶರೀರದಲ್ಲಿ ಪುನರ್ಜನ್ಮ ತಾಳುತ್ತದೆ; ಒಂದು ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳು ಮರುಜನ್ಮದಲ್ಲಿಯೂ ಪ್ರಭಾವ ಬೀರುತ್ತವೆ, ಇತ್ಯಾದಿ-

ಈ ಸೂತ್ರಗಳ ಆಧಾರದಿಂದಲೇ ನಮ್ಮ ಸಮಾಜ ಎಷ್ಟೇ ಆಘಾತಗಳು ಸಂಭವಿಸಿದರೂ ಛಿದ್ರವಾಗದೆ ಉಳಿದಿದೆ. ಸಮಾಜವನ್ನು ಉನ್ನತಿಯತ್ತ ನಡೆಸಲು ಭಗವಂತನಲ್ಲಿ ಭಕ್ತಿ ಆವಶ್ಯಕ ಎಂಬುದು ಸ್ವತಃ ಸಿದ್ಧ. ಪರಮಾತ್ಮನನ್ನು ಭಜಿಸುವುದು ಅತ್ಯಗತ್ಯ. ಭಗವದ್ಗೀತೆಯ ಒಂದು ಶ್ಲೋಕ:

ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋಽರ್ಜುನ |
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ||       ೭-೧೬

ಆರ್ತರು, ಅರ್ಥಾರ್ಥಿಗಳು, ಜಿಜ್ಞಾಸುಗಳು ಮತ್ತು ಜ್ಞಾನಿಗಳು ಇವರಲ್ಲಿ ಸುಕೃತಿಗಳು ಎಂದರೆ ಪರಮೇಶ್ವರನ ಆರಾಧನೆಗಾಗಿ ಕರ್ಮವನ್ನು ಮಾಡುವವರು ಭಗವಂತನ ಭಕ್ತರಾಗುತ್ತಾರೆ.

ಯಾವುದಾದರೊಂದು ಸಂಕಟದಿಂದ ಪಾರಾಗಬೇಕೆಂದು ಭಗವಂತನನ್ನು ಶರಣು ಹೋಗುವವರು ಆರ್ತರು. ಇವರ ದೈವಭಕ್ತಿ ಅನನ್ಯ, ಕುಂದಿಲ್ಲದುದು, ಅರ್ಥಾರ್ಥಿಗಳು ಸಂತಾನ‌, ಐಶ್ವರ್ಯ, ಗೌರವ, ಖ್ಯಾತಿ ಮುಂತಾದ ಪ್ರಾಪಂಚಿಕ ಭೋಗಗಳನ್ನು ಬಯಸುವವರು. ಐಹಿಕ ಸುಖಗಳನ್ನಪೇಕ್ಷಿಸದೆ ಭಗವಂತನನ್ನು ಸಂಪೂರ್ಣ ನಿಷ್ಠೆಯಿಂದ ಆರಾಧಿಸಿ, ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ಯತ್ನಿಸುವವರು, ಜಿಜ್ಞಾಸುಗಳು. ಜ್ಞಾನಿಗಳಾದರೋ ದೈವ ಸಾಯುಜ್ಯ ಪಡೆದವರು. ಪರಮಾತ್ಮನಲ್ಲಿ ಒಂದಾದವರು. ಅವರಿಗೆ ಭಗವಂತನಲ್ಲದೆ ಬೇರಾವುದೂ ಅಪೇಕ್ಷಣೀಯವಲ್ಲ. ಅವರ ಹೃದಯದಲ್ಲಿ ಪರಮಾತ್ಮ ನೆಲೆಗೊಂಡಿರುತ್ತಾನೆ.

ಇವರಲ್ಲಿ ಸರ್ವಶ್ರೇಷ್ಠರು ಜ್ಞಾನಿಗಳು. ಅನಂತರದ ಸ್ಥಾನ ಜಿಜ್ಞಾಸುಗಳದ್ದು ಮತ್ತ್ತು ಆರ್ತರು, ಕೊನೆಯ ಸ್ಥಾನ ಅರ್ಥಾರ್ಥಿಗಳದ್ದು.

ಇಂತಹ ಭಕ್ತರ ಪರಂಪರೆಯಲ್ಲಿ ಖ್ಯಾತರಾಗಿ, ಭಗವತ್ಸೇವೆಯ ಮಹಿಮೆಯನ್ನು ಸಾರಿದ ಅನೇಕ ಭಾಗವತೋತ್ತಮರ ಜೀವನಚರಿತ್ರೆ ಪುರಾಣೇತಿಹಾಸ ಗ್ರಂಥಗಳಲ್ಲಿ ವಿಪುಲವಾಗಿವೆ. ಅವರಲ್ಲಿ ಕೆಲವರ ಬಗೆಗಿನ ವಿಷಯಗಳನ್ನು ನಮ್ಮ ಅವಗಾಹನೆಗೆ ತಂದುಕೊಳ್ಳೋಣ.

ಧ್ರುವ

ಸ್ವಾಯಂಭುವ ಮನುವಿನ ಪುತ್ರರಲ್ಲಿ ಒಬ್ಬ ಉತ್ತಾನಪಾದ, ಶ್ರೇಷ್ಠ ರೀತಿಯಲ್ಲಿ ರಾಜ್ಯವಾಳುತ್ತಿದ್ದ. ಅವನಿಗೆ ಇಬ್ಬರು ಪತ್ನಿಯರು. ಹಿರಿಯಳೂ ಪಟ್ಟ ಮಹಿಷಿಯೂ ಆದ ಸುನೀತಿ, ಕಿರಿಯಳು ಸುರುಚಿ. ಸುನೀತಿಯು ಗುಣಾಢ್ಯಳೂ, ದೈವಭಕ್ತಳೂ ಆಗಿದ್ದಳು. ಆದರೆ ರಾಜನಿಗೆ ಅವಳಲ್ಲಿ  ಅಷ್ಟಾಗಿ ಪ್ರೀತಿಯಿರಲಿಲ್ಲ.ಅವಳಿಗೆ ಒಬ್ಬ ಮಗ ಧ್ರುವ. ಕಿರಿಯಳಾದ ಸುರುಚಿ ಸ್ವಾರ್ಥಿ, ಗರ್ವಿಷ್ಠೆ. ಅವಳ ಮಗ ಉತ್ತಮ. ಅವಳ ಪ್ರೇಮಪಾಶದಲ್ಲಿ ಸಿಲುಕಿದ ರಾಜನಿಗೆ ಅವಳನ್ನು ಎದುರು ಹಾಕಿಕೊಳ್ಳುವ ಶಕ್ತಿಯೂ ಇರಲಿಲ್ಲ, ಇಷ್ಟವೂ ಇರಲಿಲ್ಲ.

ಒಂದು ದಿನ ಉತ್ತಾನಪಾದನು ಸಿಂಹಾಸನದ ಮೇಲೆ ಕುಳಿತು ಸುರುಚಿಯೊಡನೆ ಸರಸ ಸಲ್ಲಾಪದಲ್ಲಿ ತೊಡಗಿದ್ದನು. ಉತ್ತಮನು ಅವನ ತೊಡೆಯಮೇಲೆ ಕುಳಿತಿದ್ದು ರಾಜನಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದನು. ಅದೇ ವೇಳೆಗೆ ಸರಿಯಾಗಿ ಧ್ರುವನೂ ಅಲ್ಲಿಗೆ ಬಂದನು. ಆಸೆಯಿಂದ ತಾನೂ ತಂದೆಯ ತೊಡೆಯಮೇಲೆ ಕುಳಿತುಕೊಳ್ಳಲು ಹೋದ. ತಂದೆಯು ಧ್ರುವನ ಬಗೆಗೆ ಅನಾದರ ತೋರಿ ತೊಡೆಯೇರಲು ಅನುವು ಮಾಡಿಕೊಡಲಿಲ್ಲ. ಸಮೀಪದಲ್ಲಿದ್ದ ಸುರುಚಿಯು ಧ್ರುವನನ್ನು ದೂರದೂಡಿ ಗರ್ವದಿಂದ ಹೀಗೆ ಹೇಳಿದಳು: `ಲೋ, ನೀನು ರಾಜನ ತೊಡೆಯೇರಲು ಅರ್ಹನಲ್ಲ, ಏಕೆಂದರೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ. ಯಾವಳೋ ಅಲ್ಪಳ ಬಸಿರಿನಲ್ಲಿ ಜನಿಸಿ ದುರ್ಲಭವಾದ ಪದವಿಗೆ ಆಶಿಸುವೆಯಲ್ಲ. ಸಿಂಹಾಸನವನ್ನೇರುವ ಅಪೇಕ್ಷೆ ಇದ್ದರೆ ತಪಸ್ಸಿನಿಂದ ಭಗವಂತನನ್ನಾರಾಧಿಸಿ ಮುಂದಿನ ಜನ್ಮದಲ್ಲಿ ನನ್ನ ಮಗನಾಗಿ ಹುಟ್ಟುವಂತೆ ವರವನ್ನು ಪಡೆದುಕೊ ಹೋಗು.” ತಂದೆಯ ನಿರ್ಲಕ್ಷ್ಯ, ಚಿಕ್ಕಮ್ಮನ ಗರ್ವದ ಮಾತುಗಳು, ತನ್ನ ತಾಯಿಯನ್ನು ಅವಹೇಳನ ಮಾಡಿದುದು – ಇವು ಐದು ವರ್ಷದ ಬಾಲಕ ಧ್ರುವನನ್ನು ಕ್ರುದ್ಧನನ್ನಾಗಿಸಿದುವು. ಅತೀವ ದುಃಖದಿಂದ ಅಳುತ್ತ ತನ್ನ ತಾಯಿಯ ಸಮೀಪಬಂದನು. ನಡೆದುದನ್ನೆಲ್ಲಾ ವಿವರಿಸಿದನು. ಅವಳು, ಇವೆಲ್ಲ ತನ್ನ ದೌರ್ಭಾಗ್ಯವೆಂದು, ತನ್ನಲ್ಲಿ ಜನಿಸಿದುದರಿಂದ ಅವನಿಗೆ ಎಲ್ಲ ಅವಮಾನ, ದುಃಖಗಳು ಉಂಟಾದುವೆಂದು ಹೇಳಿದಳು.

ಧ್ರುವನಿಗೆ ಉತ್ತಮನಂತೆ ರಾಜಪೀಠದಲ್ಲಿ ಕುಳಿತುಕೊಳ್ಳುವ ಆಸೆಯಿದ್ದರೆ, ಸುರುಚಿಯು ಹೇಳಿದಂತೆ ಭಗವಂತನನ್ನು ಕುರಿತು ತಪಸ್ಸು ಮಾಡುವುದು ಸರಿಯಾದ ಮಾರ್ಗ ಎಂದು ತಿಳಿಸಿದಳು. ದೃಢಭಕ್ತಿಯಿಂದ ನಾರಾಯಣನನ್ನು ಭಜಿಸಿ, ಅವನ ಅನುಗ್ರಹ ಸಂಪಾದಿಸಲು ಸಲಹೆಯಿತ್ತಳು.

ಒಡನೆಯೇ ಧ್ರುವನು ಅರಮನೆಯನ್ನು ತ್ಯಜಿಸಿ ವನಾಭಿಮುಖನಾಗಿ ಹೊರಟನು. ನಾರದನು ಈ ವೃತ್ತಾಂತವನ್ನರಿತು ಧ್ರುವನಲ್ಲಿಗೆ ಬಂದು, “ಮಗೂ ಎಲ್ಲಿಗೆ ಹೋಗುವೆ? ನಿನ್ನ ಸ್ವಜನರೊಂದಿಗೆ ವಿರಸನಾಗಿ ದುಃಖಿತನಾಗಿದ್ದೀಯ ವಿಚಾರವೇನು?” ಎಂದನು. ಧ್ರುವನು ಅರಮನೆಯಲ್ಲಿ ನಡೆದದ್ದನ್ನೆಲ್ಲ ವಿವರಿಸಿ, ತಾನು ತಪಸ್ಸಿಗೆ ತೆರಳುತ್ತಿರುವುದಾಗಿ ತಿಳಿಸಿದನು. ತಪಸ್ಸಿನ ಮಾರ್ಗ ಸುಲಭವಲ್ಲವೆಂದೂ, ಅವನಿನ್ನೂ ಚಿಕ್ಕವನಾಗಿರುವುದರಿಂದ ನಿಷಲವೆಂದೂ, ಭಗವದನುಗ್ರಹ ಕಷ್ಟ ಸಾಧ್ಯವೆಂದೂ ತಿಳಿಸಿ, ತನ್ನ ಪ್ರಯತ್ನ ಬಿಡುವಂತೆ ಧ್ರುವನಿಗೆ ಬುದ್ಧಿವಾದ ನೀಡಿದನು. ಧ್ರುವನು ನಾರದನ ಮಾತುಗಳಿಗಾಗಿ ಅವನಿಗೆ ಕೃತಜ್ಞತೆ ಅರ್ಪಿಸಿ, ತನ್ನ ನಿರ್ಧಾರ ದೃಢವೆಂದೂ, ಅದನ್ನು ಸಾಧಿಸಲು ಸಹಾಯ ಮಾಡಬೇಕೆಂದೂ ಪ್ರಾರ್ಥಿಸಿದನು. ಬಾಲಕ ಧ್ರುವನ ದೃಢ ನಿಶ್ಚಯವನ್ನು ಮೆಚ್ಚಿದ ನಾರದನು ಅವನನ್ನು ಯಮುನಾ ತೀರದಲ್ಲಿನ ಮಧುವನವೆಂಬ ತೋಟಕ್ಕೆ ತೆರಳಬೇಕೆಂದು, ಅಲ್ಲಿ ತ್ರಿಕರಣಶುದ್ಧಿಯಿಂದ ಶ್ರೀಮನ್ನಾರಾಯಣನ ಧ್ಯಾನ ಮಾಡಬೇಕೆಂದು ಹೇಳಿದನು. ಅಲ್ಲದೆ ಭಗವಂತನು ಪ್ರತ್ಯಕ್ಷವಾದಾಗಿನ ಸ್ವರೂಪದ ಬಗ್ಗೆಯೂ ತಿಳಿಯ ಹೇಳಿದನು. ಧ್ರುವನು ನಾರದನಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಮಧುವನಕ್ಕೆ ಹೊರಟನು. ದಾರಿಯಲ್ಲಿ ಸಪ್ತರ್ಷಿಗಳು ಬರುತ್ತಿರುವುದನ್ನು ಕಂಡ ಧ್ರುವನು ಅವರ ಪಾದಕ್ಕೆರಗಿ ಆಶೀರ್ವಾದ ಬೇಡಿದನು. ಎಲ್ಲ ವಿಷಯವರಿತ ಋಷಿಗಳು ದ್ವಾದಶ ನಾಮಮಂತ್ರ ಉಪದೇಶಿಸಿ ಯಶಸ್ವಿಯಾಗೆಂದು ಹರಸಿ ತೆರಳಿದರು.

ಮಧುವನ ತಲಪಿದ ಧ್ರುವನು ಉಗ್ರತಪಸ್ಸನ್ನು ಆರಂಭಿಸಿದನು. ಆಹಾರ ನಿಯಂತ್ರಣ ಮಾಡಿ, ಒಂಟಿಕಾಲಿನಲ್ಲಿ ನಿಂತು, ಇಂದ್ರಿಯಗಳನ್ನು ಹಿಡಿತದಲ್ಲಿರಿಸಿಕೊಂಡು, ಹೃದಯದಲ್ಲಿ  ಭಗವತ್ಸ್ವರೂಪವನ್ನು ನೆಲೆಗೊಳಿಸಿದನು. ಬಾಹ್ಯ ಪ್ರಪಂಚದ ವ್ಯಾಪಾರ ಅವನಿಗೆ ತಿಳಿಯ- ದಾಯಿತು. ಇವನ ತಪಸ್ಸಿನಿಂದಾದ ಜ್ವಾಲೆ ಮೂರು ಲೋಕಗಳನ್ನಾವರಿಸಿತು. ಇದರಿಂದ ಪೀಡಿತರಾದ ಇಂದ್ರಾದಿ ದೇವತೆಗಳು ಶ್ರೀಮನ್ನಾರಾಯಣನಲ್ಲಿ ಬಂದು ಕಾಪಾಡಬೇಕೆಂದು ಮೊರೆಯಿಟ್ಟರು. ವಿಷ್ಣುವು ಅವರಲ್ಲಿ ಮರುಕಗೊಂಡು ಧ್ರುವನ ತಪಸ್ಸಿನ ಬಗ್ಗೆ ತಿಳಿಸಿ, ಅಭಯ ನೀಡಿದನು. ಅನಂತರ ಭಕ್ತ ಧ್ರುವನನ್ನು ಅನುಗ್ರಹಿಸಲು ಮಧುವನಕ್ಕೆ ಬಂದನು. ಪ್ರತ್ಯಕ್ಷನಾದ ವಿಷ್ಣುವನ್ನು ಕಂಡ ಧ್ರುವನು ಅವನ ಕಾಲುಗಳ ಮೇಲೆ ಬಿದ್ದನು. ಎದ್ದು ನಿಂತು ಭಗವಂತನನ್ನು  ಸ್ತುತಿಸಬೇಕೆಂದವನಿಗೆ ಮಾತೇ ಹೊರಡಲಿಲ್ಲ. ಕೈ ಮುಗಿದು ನಿಂತನು. ಅವನ ಮನೋಭಿಪ್ರಾಯವನ್ನರಿತ ಶ್ರೀಹರಿಯು ತನ್ನ ಶಂಖದಿಂದ ಧ್ರುವನ ತಲೆ ನೇವರಿಸಿದನು.

ಆಗ ಮಾತು ಹೊರಟಿತು. ಪರಮಾತ್ಮನನ್ನು ಬಹುರೀತಿಯಿಂದ ಹೊಗಳಿದನು. ಸಂತುಷ್ಟನಾದ ಭಗವಂತನು ಧ್ರುವನಿಗೆ ಲೋಕದಲ್ಲಿ  ಬೇರೆ ಯಾರೂ ಎಂದೂ ಪಡೆಯದ ಕಾಂತಿಯುತ ವಿಶಿಷ್ಟ ಪದವಿಯನ್ನು ನೀಡಿರುವುದಾಗಿಯೂ, ಎಲ್ಲ ಗ್ರಹ ನಕ್ಷತ್ರಗಳೂ ಈ ಸ್ಥಾನವನ್ನು ಪ್ರದಕ್ಷಿಣೆ ಮಾಡುವುದೆಂದೂ ಹೇಳಿ, ತನ್ನ ರಾಜ್ಯಕ್ಕೆ ಹಿಂದಿರುಗಲು ಧ್ರುವನಿಗೆ ಆದೇಶಿಸಿದನು.

ದೈವ ಸಾಕ್ಷಾತ್ಕಾರ ಹೊಂದಿ ಹಿಂದಿರುಗಿದ ಪುತ್ರನನ್ನು ಉತ್ತಾನಪಾದನು ಪ್ರೀತ್ಯಾದರಗಳಿಂದ ಸ್ವಾಗತಿಸಿ, ಪರಿವಾರದೊಡನೆ ಸಂತೋಷದಿಂದಿದ್ದನು. ಕೆಲ ಕಾಲದ ಅನಂತರ ರಾಜ್ಯವನ್ನು ಧ್ರುವನಿಗೆ ವಹಿಸಿ ತಾನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿಗೆ ಹೋದನು. ಉತ್ತಮನು ಒಂದು ದಿನ ಬೇಟೆಯಾಡಲು ಕಾಡಿಗೆ ಹೋಗಿದ್ದು ವನ್ಯಮೃಗಗಳಿಗೆ ಬಲಿಯಾದನು. ಹಿಂದಿರುಗದಿದ್ದ ಮಗನನ್ನು ಅರಸುತ್ತಾ ಸುರುಚಿಯು ಕಾಡಿಗೆ ಹೋದಾಗ ಕಾಳ್ಗಿಚ್ಚಿಗೆ ಸಿಲುಕಿ ಭಸ್ಮವಾದಳು. ಧ್ರುವನು ಅನೇಕ ವರ್ಷ ರಾಜ್ಯಭಾರ ನಿರ್ವಹಿಸಿ ಅನಂತರ ಮೋಕ್ಷ ಹೊಂದಿದನು.

ಅಜಾಮಿಳ

“ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೊ” ಎಂದು ಹಾಡಿದ್ದಾರೆ ದಾಸರು. ಪುರುಷೋತ್ತಮನ ನಾಮ ಸ್ಮರಣೆಯ ಪ್ರಭಾವ ಅಷ್ಟು ಮಹತ್ವದ್ದು. ರಾಮನಾಮವನ್ನು ಜಪಿಸಿದ ಬೇಡ ರತ್ನಾಕರ ಮುಂದೆ ಮಹರ್ಷಿ ವಾಲ್ಮೀಕಿಯಾಗಲಿಲ್ಲವೇ? ಭಗವನ್ನಾಮವನ್ನು ತುಟಿಯ ತುದಿಯಿಂದ ಗಳಹಿದರೆ ಸಾಲದು, ಸರ್ವಸ್ವವನ್ನೂ ಮರೆತು ಹೃದಯಾಂತರಾಳದಿಂದ ಶ್ರೀಹರಿಯ ನಾಮವನ್ನು ಜಪಿಸಿದರೆ ಉತ್ತಮ ಫಲ ನಿಃಸಂಶಯವಾಗಿ ಲಭಿಸುತ್ತದೆ. ಅಷ್ಟೇ ಅಲ್ಲದೆ ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮಗಳ ಪಾಪ-ಪುಣ್ಯಗಳೂ ನಶಿಸುತ್ತದೆ. ಅನೇಕ ಜನ್ಮಗಳಲ್ಲಿ ಸತ್ಕರ್ಮ ನಿರತರಾಗಿ ಪರಮಾತ್ಮ ನಾಮಸ್ಮರಣೆಯಲ್ಲಿ ನಿರತರಾದವರಿಗೆ ಅಂತಿಮವಾಗಿ ಸದ್ಗತಿ ಕಟ್ಟಿಟ್ಟದ್ದೇ. ಇಂತಹ ನಾಮಸ್ಮರಣೆಯ ಶಕ್ತಿ, ಸತ್ತ್ವ, ಮಹತ್ತ್ವಗಳನ್ನು ತಿಳಿಯಲು ಒಂದು ಉಪಾಖ್ಯಾನ.

ಕನ್ಯಾಕುಬ್ಜ (ಇಂದು `ಕನೂಜ್’ ಆಗಿದೆ) ನಗರದಲ್ಲಿ ಅಜಾಮಿಳನೆಂಬ ಬ್ರಾಹ್ಮಣನಿದ್ದನು. ಸತ್ಕುಲ ಪ್ರಸೂತನಾದ ಅವನು ವೇದ ಪಾರಂಗತನಾಗಿದ್ದ. ಸದ್ಗುಣಿ, ಸದಾಚಾರ ನಿಷ್ಠೆ, ಗುರುಹಿರಿಯರಲ್ಲಿ ಭಕ್ತಿಗೌರವ ಉಳ್ಳವನಾಗಿದ್ದ, ದಯಾಪರ ಹಾಗೂ ಪ್ರಾಮಾಣಿಕ. ಒಮ್ಮೆ ತಂದೆಯ ಆದೇಶಾನುಸಾರ ಹೂ, ಹಣ್ಣು, ಸಮಿತ್ತು ಮತ್ತು ದರ್ಭೆಗಳನ್ನು ಸಂಗ್ರಹಿಸಲು ಕಾಡಿಗೆ ಹೋದ. ಅವನ ವಯಸ್ಸು ಇಪ್ಪತ್ತನ್ನು ದಾಟಿದ್ದು, ಅವನಿಗೆ ವಿವಾಹವಾಗಿದ್ದಿತು. ಕಾಡಿನಿಂದ ಹಿಂದಿರುಗುವಾಗ ಕಾಮೋದ್ರೇಕನಾದ ವ್ಯಕ್ತಿಯೊಬ್ಬನು ಸಡಿಲ ಉಡುಪಿನಲ್ಲಿದ್ದ ವೇಶ್ಯೆಯೊಬ್ಬಳನ್ನು ಆಲಿಂಗಿಸಿ ಚುಂಬಿಸುತ್ತಿರುವುದನ್ನು ಕಂಡ. ಮದ್ಯಪಾನ ಮಾಡಿದ್ದ ಅವರಿಬ್ಬರಿಗೂ ಎಚ್ಚರವಿರಲಿಲ್ಲ. ಈ ದೃಶ್ಯವನ್ನು ವೀಕ್ಷಿಸಿದ ಅಜಾಮಿಳನ ಮನಸ್ಸಿನಲ್ಲಿ ನಿಯಂತ್ರಿಸಲಾಗದಂತಹ ಕಾಮವು ಎಚ್ಚೆತ್ತಿತು. ಎಷ್ಟೇ ಪ್ರಯತ್ನಿಸಿದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳಲಾಗಲಿಲ್ಲ. ತನ್ನ ಬುದ್ಧಿಯನ್ನು ಕಳೆದುಕ‌ೊಂಡ – ಸದಾ ಆ ವೇಶ್ಯೆಯದೇ ಧ್ಯಾನವಾಯಿತು. ಕೆಲವೇ ದಿನಗಳಲ್ಲಿ ಅವಳನ್ನು ತನ್ನ ಮನೆಯಲ್ಲಿ ಕೆಲಸಮಾಡಲು ನೇಮಿಸಿಕೊಂಡ. ಕ್ರಮೇಣ ಅವಳನ್ನು ವಶಮಾಡಿಕೊಂಡು ಅವಳೊಡನೆಯೇ ವಾಸಿಸತೊಡಗಿದ. ಚಿಕ್ಕ ವಯಸ್ಸಿನ ಸುಂದರವಾದ ಹೆಂಡತಿಯನ್ನು ದೂರಮಾಡಿದ. ವೇಶ್ಯೆಯನ್ನು ತೃಪ್ತಿಪಡಿಸಲು ತಂದೆಯಿಂದ ಬಂದಿದ್ದ ಸಂಪತ್ತನ್ನೆಲ್ಲ ಸೂರೆ ಮಾಡಿದ. ದುರ್ಮಾರ್ಗದಿಂದ ಹಣ ಸಂಪಾದಿಸತೊಡಗಿದ. ಬ್ರಾಹ್ಮಣವಿಹಿತ ಕರ್ಮಗಳನ್ನು ಬಿಟ್ಟು ಪಾಪಕರ್ಮಗಳಲ್ಲಿ ನಿರತನಾದ. ಕಾಲಕಳೆದಂತೆ ಹತ್ತು ಮಕ್ಕಳಾದುವು. ಸುಮಾರು ಎಂಬತ್ತು ವರ್ಷದವನಾಗಿದ್ದಾಗ ಕೊನೆಯ ಮಗು ಜನಿಸಿತು. ಅದಕ್ಕೆ ನಾರಾಯಣ ಎಂಬ ಹೆಸರಿಟ್ಟ. ಅವನನ್ನು ಕಂಡರೆ ಅಜಾಮಿಳನಿಗೆ ಬಹಳ ಪ್ರೀತಿ. ಸದಾ ತನ್ನ ಸಂಗಡ ಇಟ್ಟುಕೊಂಡು ಮುದ್ದಿನಿಂದ ಸಾಕತೊಡಗಿದ. ಬಾರಿಬಾರಿಗೂ ಅವನನ್ನು ನಾರಾಯಣಾ ಎಂದು ಸಂಬೋಧಿಸುತ್ತಿದ್ದ. ಇದರಿಂದ ಅಜಾಮಿಳನು ನಾರಾಯಣ ನಾಮವನ್ನು ಜಪಿಸಿದಂತಾಗುತ್ತಿತ್ತು. ಅವನಿಗರಿವಿಲ್ಲದೆಯೇ ನಾಮಸ್ಮರಣೆಯಿಂದ ಪರಿಶುದ್ಧನಾಗುತ್ತಿದ್ದ. ಸಾವಿನ ಸಮಯ ಬಂದಿತು. ಅಜಾಮಿಳ ತನ್ನ ಮುದ್ದು ಮಗ ನಾರಾಯಣನ ಹೆಸರನ್ನು ಗಟ್ಟಿಯಾಗಿ ಕೂಗಿದ. ದೇಹದಿಂದ ಹೊರಕ್ಕೆಳೆದುಕೊಂಡು ಅಜಾಮಿಳನನ್ನು ಯಮನಲ್ಲಿಗೆ ಒಯ್ಯಲು ಯಮದೂತರು ಬಂದರು. ಆಗಲೂ ಇವನ ಬಾಯಿಯಿಂದ `ನಾರಾಯಣ’ ಶಬ್ದವೇ ಬರುತ್ತಿದ್ದಿತು. ಪಾವನ ನಾಮಜಪದ ಪ್ರಭಾವದಿಂದ ನಾರಾಯಣನ ಆಜ್ಞಾಧಾರಕರಾದ ವಿಷ್ಣುದೂತರು ಬಂದರು. ಎರಡೂ ಕಡೆಯ ದೂತರಲ್ಲಿ ವಾದ ವಿವಾದಗಳಾದುವು. ಅಂತಿಮವಾಗಿ ವಿಷ್ಣುದೂತರು ಅಜಾಮಿಳನನ್ನು ಯಮದೂತರಿಂದ ಬಿಡಿಸಿದನು. ಅವರ ಸಂವಾದವನ್ನು ಆಲಿಸಿದ ಮಾತ್ರದಿಂದಲೇ ಅವನ ಪಾಪರಾಶಿ ಕರಗಿತು. ವಿಷ್ಣುದೂತರಲ್ಲಿ ಭಕ್ತಿಗೌರವ ಮೂಡಿದವು. ಅವರಿಗೆ ಕೃತಜ್ಞತೆ ಸಲ್ಲಿಸುವಷ್ಟರಲ್ಲೇ ಅವರು ಅದೃಶ್ಯರಾದರು.

ಈಗ ಅಜಾಮಿಳನಿಗೆ ತನ್ನ ಸ್ಥಿತಿಯ ಅರಿವಾಗತೊಡಗಿತು. ತಾನು ಮಾಡಿದ ಪಾಪ ಕೃತ್ಯಗಳಿಗೆಲ್ಲ ಪಶ್ಚಾತ್ತಾಪ ಪಡತೊಡಗಿದ. ತನ್ನ ಮನಸ್ಸನ್ನು ಶ್ರೀಹರಿಯ ಚರಣಗಳಲ್ಲಿ ಸ್ಥಿರವಾಗಿ ನಿಲ್ಲಿಸಿ, ಪ್ರಾಪಂಚಿಕ ಅಪೇಕ್ಷೆಗಳನ್ನು ವರ್ಜಿಸಿ ಹರಿದ್ವಾರಕ್ಕೆ ಹೋದ. ಅಲ್ಲಿ ಭಗವಂತನಿಗೆ ಭಕ್ತಿಪೂರ್ವಕ ಸೇವೆ ಮಾಡಿಕೊಂಡು ತನ್ನದೆಲ್ಲವನ್ನು ಕೃಷ್ಣಾರ್ಪಣ ಮಾಡಿಕೊಂಡಿದ್ದಾಗ ಪುನಃ ವಿಷ್ಣುದೂತರ ದರ್ಶನವಾಯಿತು. ಅವರಿಗೆ ನಮಿಸಿ ತನ್ನ ಐಹಿಕ ಶರೀರ ತ್ಯಜಿಸಿ ಸದ್ಗತಿ ಹೊಂದಿದನು.

ಅಜಾಮಿಳನಂತಹ ಧರ್ಮಭ್ರಷ್ಟನಿಗೆ ಸದ್ಗತಿ ದೊರೆತುದು ಸರಿಯೇ? ಎಂಬ ಸಂಶಯ ಬರಬಹುದು. ಆದರೆ ಕೆಲವು ಅಂಶಗಳನ್ನು ಗಮನಿಸೋಣ. ಅವನು ಕಾಮಪರವಶನಾಗಿ ವೇಶ್ಯೆಯ ವಶನಾಗುವವರೆಗೂ ಸದಾಚಾರ ನಿಷ್ಠನಾಗಿದ್ದನು. ಪಾಪ ಜೀವನದ ಕಾಲದಲ್ಲಿಯು ತನ್ನ ಮಗನನ್ನು ಕರೆಯುವ ನೆಪದಲ್ಲಿ ನಾರಾಯಣ ನಾಮಸ್ಮರಣೆ ಮಾಡುತ್ತಿದ್ದ. ಇದರಿಂದಾಗಿ ಅವನಿಗರಿವಿಲ್ಲದಂತೆಯೇ ಪಾಪಗಳು ನಶಿಸುತ್ತಿದ್ದುವು. ಮರಣಕಾಲದಲ್ಲಿಯೂ `ನಾರಾಯಣ’ ನಾಮಸ್ಮರಣೆ ಮಾಡಿದ. ಯಾರೇ ಆಗಲಿ ತ್ರಿಕರಣ ಶುದ್ಧರಾಗಿ, ಭಗವಂತನಿಗೆ ತಮ್ಮೆಲ್ಲವನ್ನು ಅರ್ಪಿಸಿ ಅವನ ಪುಣ್ಯನಾಮಸ್ಮರಣೆಯಲ್ಲಿ ನಿರತರಾಗಿರುವರೋ ಅವರಿಗೆ ಮೋಕ್ಷವು ಲಭಿಸುವುದರಲ್ಲಿ ಸಂಶಯವಿಲ್ಲ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ:

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂವ್ರಜ |
ಅಹಂತ್ವಾಮ್ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

(ಎಲ್ಲ ಧರ್ಮಗಳನ್ನು ತ್ಯಜಿಸಿ ನನ್ನಲ್ಲಿಯೇ ಶರಣಾಗತನಾಗು. ನಾನು ನಿನ್ನೆಲ್ಲ ಪಾಪಗಳನ್ನು ನಿವಾರಿಸಿ ಮೋಕ್ಷವನ್ನು ನೀಡುತ್ತೇನೆ). ಅಜಾಮಿಳನಿಗೆ ಆದುದೂ ಇದೇ.

ಪ್ರಹ್ಲಾದ

ಹಿಂದೆಯೇ ತಿಳಿಸಿದಂತೆ `ಜ್ಞಾನಿ’ಗಳಾದ ಭಕ್ತರು ಭಗವಂತನ ಸಾಕ್ಷಾತ್ಕಾರ ಪಡೆದವರು. ಅವರಿಗೆ ಪರಮಾತ್ಮನಲ್ಲದೆ ಬೇರೊಂದಿಲ್ಲ. ಇಹದ ಅಪೇಕ್ಷೆ ಶೂನ್ಯ. ಶ್ರೀಹರಿಯ ಧ್ಯಾನವು ಸದಾ ಅವರ ನರನಾಡಿಗಳಲ್ಲಿ ಸ್ವಾಭಾವಿಕವಾಗಿ ತುಂಬಿರುತ್ತದೆ. ಇವರನ್ನು ಯಾವ ದುಷ್ಟಶಕ್ತಿಯೂ ಹಾನಿಗೊಳಿಸಲಾರದು. ಸರ್ವಶಕ್ತನೇ ಅವರ ರಕ್ಷಕ. ಇಂತಹ ಪರಮ ಭಾಗವತೋತ್ತಮರಲ್ಲಿ ಪ್ರಹ್ಲಾದನೂ ಒಬ್ಬ.

ಶಾಪಗ್ರಸ್ತರಾದ ಜಯವಿಜಯರು ಭೂಮಿಯಲ್ಲಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬ ಹೆಸರಿನಿಂದ ಕಶ್ಯಪನ ಮಕ್ಕಳಾಗಿ ಜನಿಸಿದರು. ಹಿರಣ್ಯಾಕ್ಷನು ವಿಷ್ಣುವಿನಿಂದ ಹತನಾದನು. ಇದರಿಂದ ಕ್ರುದ್ಧನಾದ ಹಿರಣ್ಯಕಶಿಪು ಪ್ರತೀಕಾರಕ್ಕಾಗಿ ಸಿದ್ಧನಾದನು. ಈ ಪ್ರಪಂಚದಲ್ಲಿ ತನ್ನನ್ನು ಜಯಿಸುವವರು ಇರಬಾರದೆಂದು, ತಾನು ಜರಾಮರಣಗಳಿಲ್ಲದೆ ಇರಬೇಕೆಂದು ವರಪಡೆಯಲು ಬ್ರಹ್ಮನನ್ನು ಕುರಿತು ತಪಸ್ಸನ್ನು ಆಚರಿಸಿದನು. ಇವನ ತಪೋಜ್ವಾಲೆ ಎಲ್ಲೆಡೆ ಆವರಿಸಿತು. ಅಲ್ಲೆಲ್ಲಾ ಬದುಕು ದುಸ್ತರವಾಯಿತು.ಆಗ ದೇವತೆಗಳು ಬ್ರಹ್ಮನ ಬಳಿಗೆ ಬಂದು ಕಷ್ಟವನ್ನು ನಿವಾರಿಸಲು ಪ್ರಾರ್ಥಿಸಿದರು. ಬ್ರಹ್ಮನು ಹಿರಣ್ಯಕಶಿಪುವಿನ ಬಳಿಗೆ ಬಂದು ಅವನ ದೃಢ ತಪಸ್ಸಿಗೆ ಮೆಚ್ಚಿ, ಬೇಕಾದ ವರಗಳನ್ನು ಕೇಳಿಕೊ ಎಂದನು. ಆಗ ಅಸುರನು ಯಾವುದೇ ಮನುಷ್ಯ, ಮೃಗ, ಪಕ್ಷಿ ಮೊದಲಾದ ಜೀವಿಗಳಿಂದಾಗಲೀ, ಜೀವವಿಲ್ಲದವುಗಳಿಂದಾಗಲೀ, ಮನೆಯ ಒಳಗಾಗಲೀ- ಹೊರಗಾಗಲೀ, ಭೂಮಿಯಲ್ಲಾಗಲೀ, ಅಂತರಿಕ್ಷದಲ್ಲಾಗಲೀ ಮತ್ತು ಯಾವುದೇ ಆಯುಧದಿಂದ ತನಗೆ ಮರಣವುಂಟಾಗದಂತೆ ಅನುಗ್ರಹಿಸಬೇಕೆಂದು ಕೇಳಿಕೊಂಡನು. ಒಡನೆಯೇ ಬ್ರಹ್ಮನು `ತಥಾಸ್ತು’ ಎಂದನು. ಹೀಗಾಗಿ ಅಪರಿಮಿತ ಶಕ್ತಿಯಿಂದ ಕೊಬ್ಬಿದವನಾಗಿ ಹಿರಣ್ಯಕಶಿಪು ದೇವತೆಗಳೇ ಮೊದಲಾದವರೆಲ್ಲರ ಮೇಲೆ ದಾಳಿ ಮಾಡಿ ಅವರ ರಾಜ್ಯವನ್ನು ಕಿತ್ತುಕೊಂಡು ನಿರಂಕುಶನಾಗಿದ್ದನು.

ಹಿರಣ್ಯಕಶಿಪುವಿನ ಹೆಂಡತಿ ಕಯಾದು. ಇವಳ ಐವರು ಪುತ್ರರಲ್ಲಿ ಪ್ರಹ್ಲಾದ ದೈವಭಕ್ತ. ತಾಯಿಯ ಗರ್ಭದಲ್ಲಿದ್ದಾಗಲೇ ಜ್ಞಾನಯೋಗ, ಭಕ್ತಿಯೋಗಗಳನ್ನು ತನ್ನ ತಾಯಿಗೆ ಉಪದೇಶಿಸುವಾಗ ತಾನೂ ಗ್ರಹಿಸಿ, ಜನಿಸುವಾಗಲೇ ಜ್ಞಾನಿಯಾಗಿದ್ದನು. ತಂದೆಯು ವಿಷ್ಣುವಿನ ಕಟ್ಟಾ ದ್ವೇಷಿ, ಮಗ ವಿಷ್ಣುಭಕ್ತ. ಹಿರಣ್ಯಕಶಿಪು ತಾನೇ ಸರ್ವಶಕ್ತ, ತನ್ನನ್ನೇ ಸರ್ವಶ್ರೇಷ್ಠನೆಂದು ಒಪ್ಪಿ ಎಲ್ಲರೂ ಪೂಜಿಸಬೇಕೆಂದು ಆದೇಶಿಸಿದ್ದನು. ಮಗನಾದರೋ ಹರಿಸರ್ವೋತ್ತಮ, ಸರ್ವವ್ಯಾಪಿ, ಸರ್ವಶಕ್ತನೆಂದು ಬಲವಾಗಿ ನಂಬಿದವನು. ಇದರಿಂದಾಗಿ ತಂದೆಗೆ ಮಗನ ಮೇಲೆ ದ್ವೇಷ ಬೆಳೆಯಿತು. ಇಂತಹ ಮಗ ಇರುವುದಕ್ಕಿಂತ ಸಾಯುವುದೇ ಮೇಲೆಂದು ಗ್ರಹಿಸಿ ಪ್ರಹ್ಲಾದನನ್ನು ಕೊಲ್ಲಿಸಲು ನಾನಾ ಬಗೆಯ ವ್ಯವಸ್ಥೆಗಳನ್ನು ಮಾಡಿದನು. ಭೀಕರ ವಿಷಸರ್ಪಗಳಿಂದ ಕಚ್ಚಿಸಿದನು. ಕಾಲಕೂಟ ವಿಷಪ್ರಾಶನ ಮಾಡಿಸಿದನು, ಉರಿಯುವ ಬೆಂಕಿಯಲ್ಲಿ ಹಾಕಿಸಿದನು, ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಸಿದನು, ಬೆಟ್ಟದ ಶಿಖರದಿಂದ ಕೆಳಕ್ಕೆ ತಳ್ಳಿಸಿದನು, ಆನೆಗಳ ಕಾಲಿಂದ ತುಳಿಸಿದನು. ಈ ಎಲ್ಲ ಪ್ರಸಂಗಗಳಲ್ಲಿಯೂ ಪ್ರಹ್ಲಾದನು ನಿಶ್ಚಲ ಭಕ್ತಿಯಿಂದ ಶ್ರೀಹರಿಯ ಧ್ಯಾನ ಮಾಡುತ್ತ ಇದ್ದುಬಿಟ್ಟನು. ಆ ಭಗವಂತನ ಕೃಪೆಯಿಂದ ಅವನ ಕೂದಲೂ ಕೊಂಕದೆ ಹೋಯಿತು. ಪ್ರಹ್ಲಾದನು ಸುಖವಾಗಿಯೇ ಇದ್ದನು. ತಂದೆಯ ರೋಷ ಮಾತ್ರ ಹೆಚ್ಚುತ್ತಾ ಹೋಯಿತು.

ಪ್ರಹ್ಲಾದನನ್ನು ವ್ಯಾಸಂಗಕ್ಕಾಗಿ ಗುರುಗಳ ಬಳಿ ಬಿಟ್ಟದ್ದರು. ಅಲ್ಲಿಯೂ ತನ್ನ ಸಹಪಾಠಿಗಳಿಗೆ ವಿಷ್ಣುಪಾರಮ್ಯವನ್ನು ತಿಳಿಸಿ, ದೈವಭಕ್ತರನ್ನಾಗಿ ಮಾಡಿದನು. ಇವೆಲ್ಲವೂ ಹಿರಣ್ಯಕಶಿಪುವನ್ನು ಕೆರಳಿಸಿದುವು. ಒಂದು ದಿನ ಅವನೇ ಖಡ್ಗವನ್ನು ಹಿರಿದು ಪ್ರಹ್ಲಾದನನ್ನು ಕುರಿತು ಅವನು ಭಜಿಸುವ ಶ್ರೀಹರಿಯು ಎಲ್ಲಿದ್ದಾನೆಂದು ಪ್ರಶ್ನಿಸಿದನು. ಶ್ರೀಹರಿಯು ಸರ್ವವ್ಯಾಪಿ, ಎಲ್ಲೆಡೆಯಲ್ಲೂ ಇದ್ದಾನೆಂಬುದಾಗಿ ಪ್ರಹ್ಲಾದನ ಉತ್ತರ. ಒಂದು ಕಂಭವನ್ನು ತೋರಿಸಿ ಇದರಲ್ಲಿ ಹರಿ ಇದ್ದರೆ ತೋರಿಸು ಎಂದು ತಂದೆಯ ಆರ್ಭಟ. ಪ್ರಹ್ಲಾದನು ನಿಶ್ಚಲ ಮನಸ್ಸಿನಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು. ಕಂಭವು ಸೀಳಿತು. ನರಸಿಂಹ (ಅರ್ಧಸಿಂಹ, ಅರ್ಧಮನುಷ್ಯ) ಪ್ರತ್ಯಕ್ಷನಾಗಿ, ಹಿರಣ್ಯಕಶಿಪುವನ್ನು ಹಿಡಿದು ತನ್ನ ತೊಡೆಯ ಮೇಲಿರಿಸಿಕೊಂಡು, ಹೊಸ್ತಿಲಿನ ಮೇಲೆ ಕುಳಿತು, ತನ್ನ ಉಗುರುಗಳಿಂದ ಸೀಳಿಕೊಂದನು. ಆಗ ಹಗಲು ಮುಗಿದು ರಾತ್ರಿಯಾಗುವುದರಲ್ಲಿತ್ತು. ಹೀಗಾಗಿ ಅವನಿಗಿದ್ದ ಯಾವ ವರವೂ ಅವನನ್ನು ರಕ್ಷಿಸಲಾಗಲಿಲ್ಲ.

ಪ್ರಹ್ಲಾದನು ಭಗವಂತನನ್ನು ಸ್ತುತಿಸಿ, ಅವನಿಂದ ಅನುಗ್ರಹೀತನಾಗಿ ಅನೇಕ ವರ್ಷ ರಾಜ್ಯಭಾರ ಮಾಡಿದನು.

ಭಗವಂತನಲ್ಲಿ ಅನನ್ಯ ಭಕ್ತಿ, ಸಂಪೂರ್ಣ ಶರಣಾಗತಿ ಇರುವ ಭಾಗವತೋತ್ತಮರಿಗೆ ಸದಾ ಶ್ರೀಹರಿಯ ಕೃಪಾ ಕಟಾಕ್ಷವಿರುವುದಕ್ಕೆ ಪ್ರಹ್ಲಾದನ  ಆಖ್ಯಾಯಿಕೆಯೇ ಸಾಕ್ಷಿ.

ಅಂಬರೀಷ

ಮನುಪುತ್ರರಲ್ಲಿ ಒಬ್ಬನಾದ ನಭಗನ ಮಗ ನಾಭಾಗ.ಇವನು ಚಿಕ್ಕಂದಿನಿಂದಲೇ ಐಹಿಕ ವ್ಯಾಮೋಹಕ್ಕೆ ಬೀಳದೆ ಜ್ಞಾನಮಾರ್ಗ ಹಿಡಿದನು. ಧರ್ಮಿಷ್ಠ, ಸತ್ಯವಂತ, ಮಂತ್ರಜ್ಞ ಹಾಗೂ ಬ್ರಹ್ಮಜ್ಞಾನಿ. ಇವನ ಮಗ ಅಂಬರೀಷ. ಇವನು ಬಹಳ ವಿಸ್ತಾರವಾದ ರಾಜ್ಯಕ್ಕೆ ಒಡೆಯನಾದವನು. ಅಕ್ಷಯ, ಐಶ್ವರ್ಯ, ಭೋಗ ಸಾಮಗ್ರಿಗಳು ಅವನಲ್ಲಿದ್ದವು. ಆದರೆ ಅವನು ವಿರಕ್ತ. ಪ್ರಾಪಂಚಿಕ ವಸ್ತುಗಳು ನಶ್ವರ ಮತ್ತು ನರಕ ಕಾರಣವೆಂಬ ದೃಢ ನಂಬಿಕೆಯಿದ್ದವನು. ಅವುಗಳನ್ನು ತೃಣ ಸಮಾನವೆಂದು ಗಣಿಸಿದ್ದವನು. ಸದಾ ಭಗವತ್‌ಧ್ಯಾನದಲ್ಲಿ ನಿರತನು. ಮನಸ್ಸನ್ನು ಕೃಷ್ಣ ಪಾದಾರವಿಂದದಲ್ಲಿ ಸ್ಥಿರಗೊಳಿಸಿದ್ದವನು. ಭಗವನ್ಮಂದಿರಗಳಿಗೆ ಹೋಗುವುದು, ಪರಮಾತ್ಮನ ಭಜನೆ, ಹರಿಭಕ್ತರ ಸಹವಾಸ – ಇವುಗಳಲ್ಲಿಯೇ ಅವನ ದಿನಗಳು ಕಳೆಯುತ್ತಿದ್ದವು. ಭಗವನ್ನಿವೇದಿತ ಪದಾರ್ಥಗಳು ಮಾತ್ರ ಅವನ ಆಹಾರ. ತನ್ನೆಲ್ಲ  ಶಕ್ತಿ, ಸತ್ಯಗಳನ್ನು ತ್ರಿಕರಣಪೂರ್ವಕವಾಗಿ ಐಹಿಕ ಕರ್ಮಾಚರಣೆಯಲ್ಲಿ ಬಳಸಿ, ಎಲ್ಲವನ್ನೂ ಭಗವದರ್ಪಣೆ ಮಾಡುತ್ತಿದ್ದವನು.

ವಸಿಷ್ಠರು, ಗೌತಮರೇ ಮೊದಲಾದ ಮಹರ್ಷಿಗಳ ಮಾರ್ಗದರ್ಶನ ಹಾಗೂ ನೆರವಿನಿಂದ ಅನೇಕ ಯಾಗಗಳನ್ನು ನೆರವೇರಿಸಿ ಲೋಕಕಲ್ಯಾಣ ಸಾಧಿಸಿದನು. ತಾನು ಹರಿಭಕ್ತನಾಗಿದ್ದುದು ಸಾಲದೆಂದು ತನ್ನ ರಾಜ್ಯದ ಸಮಸ್ತ ಜನತೆಯನ್ನು ಭಕ್ತಿಮಾರ್ಗದಲ್ಲಿ ಕೊಂಡೊಯ್ದನು. ಇದಕ್ಕಾಗಿ ರಾಜ್ಯದ ಎಲ್ಲೆಡೆ ಹರಿಕಥೆ, ಭಕ್ತಿಸಂಗೀತ, ಭಜನೆ ಮುಂತಾದ ಭಕ್ತಿಕಾರ್ಯಕ್ರಮಗಳನ್ನು ಏರ್ಪಡಿಸಿದನು. ಪ್ರಜೆಗಳೂ ಇವನ ಮಾರ್ಗವನ್ನೇ ಅನುಸರಿಸಿ ಭೂಲೋಕದಲ್ಲಿಯೇ ಸ್ವರ್ಗಸುಖವನ್ನು ಅನುಭವಿಸಿದರು.

ಕಾಲಕ್ರಮೇಣ ಅಂಬರೀಷನು ಪ್ರಾಪಂಚಿಕ ವ್ಯವಹಾರಗಳಿಂದ ದೂರವಾದನು. ಅರಮನೆಯನ್ನು ತ್ಯಜಿಸಿದನು; ಪತ್ನಿಯರು, ಮಕ್ಕಳಿಂದ ದೂರವಾದನು; ರಾಜಯೋಗ್ಯವಾದ ವೈಭವದ ಉಡುಪನ್ನು ನಿರಾಕರಿಸಿದನು; ರಾಜ್ಯಭಾರವನ್ನು ಅನ್ಯರಿಗೆ ವಹಿಸಿ ಕೇವಲ ಭಕ್ತಿಯೊಂದನ್ನೇ ಜೀವನ ಮಂತ್ರವಾಗಿಸಿಕೊಂಡನು. ಇವನ ದೃಢ ಭಕ್ತಿಗೆ ಮೆಚ್ಚಿ ಭಗವಂತನು ತನ್ನ ಸುದರ್ಶನ ಚಕ್ರವನ್ನು ಅನುಗ್ರಹಿಸಿದನು.ಆ ಚಕ್ರವು ಶಕ್ತಶಾಲಿಯೂ, ಶತ್ರುಭಯಂಕರವೂ, ಆಶ್ರಿತರ ಭಯ ನಿವಾರಕವೂ ಆಗಿದ್ದಿತು.

ಒಮ್ಮೆ ಅಂಬರೀಷನು ಭಗವಂತನನ್ನಾರಾಧಿಸಲು ಒಂದು ವರ್ಷ ಕಾಲ ಸಹಧರ್ಮಿಣಿಯೊಂದಿಗೆ ದ್ವಾದಶೀ ವ್ರತವನ್ನು ನಡೆಸಿದನು. ವ್ರತದ ನಿಯಮದಂತೆ ವರ್ಷಾಂತ್ಯದ ಕಾರ್ತಿಕ ಮಾಸದಲ್ಲಿ, ದ್ವಾದಶಿಗೆ ಪೂರ್ವ ಮೂರು ದಿನಗಳು ಉಪವಾಸವಿದ್ದು, ನಾಲ್ಕನೆಯ ದಿನವಾದ ದ್ವಾದಶಿಯಂದು ಶ್ರೀಹರಿಯನ್ನು ಪ್ರತಿಷ್ಠಾಪಿಸಿ ಷೋಡಶೋಪಚಾರ ಪೂಜೆ, ಸಹಸ್ರಕುಂಭಾಭಿಷೇಕಗಳನ್ನು ನೆರವೇರಿಸಿದನು. ಅನಂತರ ಷಡ್ರಸೋಪೇತವಾದ ಭೋಜನದಿಂದ ಬ್ರಾಹ್ಮಣರನ್ನು ತೃಪ್ತಿಗೊಳಿಸಿದನು. ಅವರಿಗೆ ಗೋವು, ಸುವರ್ಣ, ವಸ್ತ್ರ ಮೊದಲಾದವನ್ನು ಯಥೇಚ್ಛವಾಗಿ ದಾನಮಾಡಿ ಸಂತೃಪ್ತಿಗೊಳಿಸಿದನು. ಎಲ್ಲರ ಭೋಜನವಾದ ಅನಂತರ ಅವರ ಅನುಮತಿ ಪಡೆದು ತಾನೂ ಪಾರಣೆಗೆ ಸಿದ್ಧನಾದನು. ಅಷ್ಟರಲ್ಲಿ ದೈವನಿಯಮದಿಂದ ಮಹರ್ಷಿ ದೂರ್ವಾಸರು ಅಲ್ಲಿಗೆ ಬಂದರು. ಒಡನೆಯೇ ಅಂಬರೀಷನು ಅವರನ್ನು ನಮಸ್ಕಾರ ಪೂರ್ವಕ ಸ್ವಾಗತಿಸಿ, ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ ತನ್ನ ಮನೆಯಲ್ಲಿ ಭೋಜನ ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು. ದೂರ್ವಾಸರು ಆಹ್ವಾನವನ್ನು ಅಂಗೀಕರಿಸಿ, ಯಮುನಾನದಿಯಲ್ಲಿ ಮಾಧ್ಯಾಹ್ನಿಕ ಕರ್ಮಗಳನ್ನು ಮುಗಿಸಿಕೊಂಡು ಬರುವುದಾಗಿ ಹೇಳಿ ನದಿಯತ್ತ ಹೋದರು. ಸ್ನಾನಾದಿಗಳನ್ನು   ಮುಗಿಸಿ ಪರಬ್ರಹ್ಮಧ್ಯಾನದಲ್ಲಿದ್ದ ಅವರಿಗೆ  ಹೊತ್ತಾಗುತ್ತಿದ್ದುದು ಅರಿವಿಗೆ ಬರಲಿಲ್ಲ. ಇತ್ತ ದ್ವಾದಶೀ ತಿಥಿಯು ಇನ್ನು ಅರ್ಧಘಳಿಗೆ ಮಾತ್ರ ಇರುವುದನ್ನು ಅರಿತ ಅಂಬರೀಷನು ಅಷ್ಟರೊಳಗೆ ಪಾರಣೆ (ಆಹಾರ ಸ್ವೀಕಾರ)ಮಾಡದಿದ್ದಲ್ಲಿ ವ್ರತ ಭಂಗವಾಗುವುದೆಂದೂ, ಅತಿಥಿಗಳಾದ ದೂರ್ವಾಸರನ್ನುಳಿದು ತಾನು ಭುಂಜಿಸುವುದು ಧರ್ಮವಿರುದ್ಧವೆಂದು ಯೋಚಿಸಿ, ಕೊನೆಗೆ ಅಲ್ಲಿದ್ದ  ವಿಪ್ರಶ್ರೇಷ್ಠರ ಅನುಮತಿ ಪಡೆದು ಶ್ರೀಹರಿಯನ್ನು ಧ್ಯಾನ ಮಾಡುತ್ತ ಕೇವಲ ಜಲಪಾನ ಮಾಡಿ ಪಾರಣೆಯನ್ನು ಮುಗಿಸಿ ದೂರ್ವಾಸರ ಆಗಮನದ ನಿರೀಕ್ಷೆಯಲ್ಲಿದ್ದನು.

ದೂರ್ವಾಸರು ಹಿಂದಿರುಗಿದರು, ದಿವ್ಯದೃಷ್ಟಿಯಿಂದ ಇಲ್ಲಿ ನಡೆದುದನ್ನೆಲ್ಲ ಅರಿತರು. ಕೈಮುಗಿದು ನಿಂತಿದ್ದ ಅಂಬರೀಷನನ್ನು ದೂಷಿಸಿದರು. ಅವನು ಅಹಂಕಾರಿಯೆಂದೂ, ವಿಷ್ಣುಭಕ್ತನೆಂದು ಗರ್ವವಿದೆಯೆಂದೂ, ಅತಿಥಿ ಸತ್ಕಾರದ ನಿಯಮ ಪಾಲಿಸದ ಅಧರ್ಮಿಯೆಂದೂ ದೂರಿ ಅವನನ್ನು ಶಿಕ್ಷಿಸಲು ಉದ್ಯುಕ್ತರಾದರು. ತಮ್ಮ ತಪೋಬಲದಿಂದ ಶಕ್ತಿದೇವತೆಯನ್ನು ನಿರ್ಮಿಸಿ,ಅಂಬರೀಷನ ಸಂಹಾರ ಮಾಡಲು ಆದೇಶಿಸಿದರು. ಭೀಕರ ಶಕ್ತಿದೇವತೆ ಅಂಬರೀಷನನ್ನು ವಧಿಸಲು ಅವನ ಮುಂದೆ ನಿಂತಿತು. ಅಂಬರೀಷನಾದರೋ ಕಿಂಚಿತ್ತು ಭಯಪಡದೆ ಶ್ರೀಹರಿಯ ಧ್ಯಾನದಲ್ಲಿದ್ದನು. ಭಕ್ತವತ್ಸಲನಾದ ಶ್ರೀಮನ್ನಾರಾಯಣನು ಅಂಬರೀಷನನ್ನು ರಕ್ಷಿಸಲು ತನ್ನ ಚಕ್ರವನ್ನು ಪ್ರೇರಿಸಿದನು. ಕೂಡಲೇ ಚಕ್ರವು ಪ್ರಕಟವಾಗಿ ಶಕ್ತಿದೇವತೆಯನ್ನು ಧ್ವಂಸಮಾಡಿತು ಮತ್ತು ದೂರ್ವಾಸರನ್ನು ಬೆನ್ನಟ್ಟಿತು. ಋಷಿಯು ಪ್ರಾಣಭಯದಿಂದ ಓಡಿದರು. ಚಕ್ರವು ಹಿಂಬಾಲಿಸಿತು. ಚಕ್ರದ ಜ್ವಾಲೆಯಿಂದ ದೂರ್ವಾಸರು ತೊಂದರೆಗೊಳಗಾದರು. ರಕ್ಷಣೆಗಾಗಿ ಅವರು ಸ್ವರ್ಗ ಮರ್ತ್ಯ ಪಾತಾಳಗಳಲ್ಲಿ ಅಡಗುತಾಣಕ್ಕಾಗಿ ಓಡಾಡಿದರು. ಎಲ್ಲೆಡೆಗೂ ಚಕ್ರವು ಹಿಂಬಾಲಿಸುತ್ತಲೇ ಇದ್ದಿತು. ಆಗ ಅವರು ಬ್ರಹ್ಮಲೋಕವನ್ನು ಸೇರಿ ಬ್ರಹ್ಮನನ್ನು ರಕ್ಷಣೆಗಾಗಿ ಪ್ರಾರ್ಥಿಸಿದರು. ಭಗವಂತನ ಚಕ್ರವನ್ನು ತಡೆಯಲು ತಾನು ಅಸಮರ್ಥನೆಂದು ಬ್ರಹ್ಮನು ಹೇಳಿ  ಪರಮೇಶ್ವರನಲ್ಲಿ ಮೊರೆ ಹೋಗಲು ತಿಳಿಸಿದನು. ಕೂಡಲೇ ದೂರ್ವಾಸರು ಕೈಲಾಸಕ್ಕೆ ಧಾವಿಸಿ ರುದ್ರನನ್ನು ರಕ್ಷಣೆಗಾಗಿ ಬೇಡಿದರು. ಆ ಚಕ್ರವನ್ನು ತಡೆಯಲು ತನ್ನಿಂದ ಸಾಧ್ಯವಿಲ್ಲವೆಂದೂ, ತಾನೂ ಭಗವಂತನ ಸೇವಕನಾಗಿ ಲೋಕಪಾಲನೆ ಮಾಡುತ್ತಿರುವುದಾಗಿಯೂ ವಿಷ್ಣುವಿನ ಮೊರೆ ಹೊಕ್ಕರೆ ಕ್ಷೇಮ ಉಂಟಾಗಬಹುದೆಂದು ಹೇಳಿದನು.

ನಿರಾಶನಾದ, ಬೆಂದ ಮೈಯುಳ್ಳ ದೂರ್ವಾಸರು ವೈಕುಂಠಕ್ಕೆ ಧಾವಿಸಿದರು. ಶ್ರೀಹರಿಯ ಪಾದಕ್ಕೆ ಬಿದ್ದು, ತನ್ನ  ಅಪರಾಧ ಕ್ಷಮಿಸಿ ಕಾಪಾಡಬೇಕೆಂದು ಬೇಡಿದರು. ಅದಕ್ಕೆ ಶ್ರೀಹರಿಯು, ವತ್ಸ ದೂರ್ವಾಸಾ, ನಾನು ಭಕ್ತರಿಗೆ ಅಧೀನನು, ನನ್ನನ್ನು ನಂಬಿದ ಭಕ್ತರನ್ನು ಕಾಪಾಡುವುದು ನನ್ನ ಆದ್ಯ ಕರ್ತವ್ಯ. ನಿಜಭಕ್ತರಿಗಾಗಿ ನಾನು ನನ್ನೆಲ್ಲವನ್ನು ಬಿಡುವವನೇ. ಭಕ್ತರಿಗಿಂತ ಪ್ರಿಯವಾದವರು ನನಗೆ ಯಾರೂ ಇಲ್ಲ. ಅವರಿಗೆ ಅಪರಾಧವಾದರೆ ನಾನು ಸಹಿಸೆನು. ನಿನಗೆ ರಕ್ಷಣೆ ಬೇಕಾದಲ್ಲಿ ನೀನು ಯಾರಲ್ಲಿ ಅಪರಾದ ಮಾಡಿದೆಯೋ ಆ ಅಂಬರೀಷನಲ್ಲಿ ಹೋಗಿ ಕ್ಷಮೆ ಕೇಳು ಎಂದನು. ಇದನ್ನು ಕೇಳಿದ ದೂರ್ವಾಸರು ಅನ್ಯಮಾರ್ಗವಿಲ್ಲದೆ ಭಗವದಾಜ್ಞೆಯಂತೆ ಅಂಬರೀಷನಲ್ಲಿಗೆ ಧಾವಿಸಿ, ಅವನ ಪಾದಗಳನ್ನು ಹಿಡಿದು ತನ್ನನ್ನು ಕಾಪಾಡಬೇಕೆಂದು ಕೇಳಿಕೊಂಡನು. ಒಡನೆಯೇ ಅಂಬರೀಷನು ವಿಷ್ಣು ಚಕ್ರವನ್ನು ಸ್ತುತಿಸಲಾರಂಭಿಸಿದನು. ಅನೇಕ ಮಾತುಗಳಲ್ಲಿ ಅದರ ಶಕ್ತಿ, ಮಹಾತ್ಮೆ, ತೇಜಸ್ಸು ಮೊದಲಾದುವನ್ನು ಹೊಗಳಿದನು. ಶರಣಾಗತರಾಗಿರುವ ಈ ಮುನಿಯನ್ನು ಕಾಪಾಡಿ ತನ್ನ  ವಂಶವನ್ನುಳಿಸಬೇಕೆಂದು ಬೇಡಿಕೊಂಡನು. ತಾನು ಇದುವರೆಗೆ ಮಾಡಿರುವ ಪುಣ್ಯಕಾರ್ಯಗಳು ಪರಮಾತ್ಮನಿಗೆ ಸಂತೋಷವನ್ನುಂಟು ಮಾಡಿದ್ದರೆ ಋಷಿಗೆ ಬಾಧೆಯಿಲ್ಲದೆ ಸುಖವುಂಟಾಗುವಂತೆ ಕೃಪೆಮಾಡಲು ಪ್ರಾರ್ಥಿಸಿದನು.

ಚಕ್ರವು ಪ್ರಸನ್ನವಾಗಿ ಅಂಬರೀಷನ ಅನುಮತಿ ಪಡೆದು ದೂರ್ವಾಸರನ್ನು ಬಿಟ್ಟಿತು. ಅಂಬರೀಷನು ಮುನಿಯ ಪಾದಕ್ಕೆ ಬಿದ್ದು ಆತಿಥ್ಯ ಸ್ವೀಕರಿಸಲು ಕೇಳಿಕೊಂಡನು.ಭೋಜನದ ಅನಂತರ ದೂರ್ವಾಸರು ಅಂಬರೀಷನನ್ನು ಹೊಗಳಿ, ಕೊಂಡಾಡಿ, ಹರಸಿದರು.

ಅಪರಿಮಿತ ಭಕ್ತವತ್ಸಲನಾದ ಪರಮಾತ್ಮನ ನಿಶ್ಚಲ ಭಕ್ತಿಯ ಶಕ್ತಿ ಸದಾ ಭಕ್ತರ ನೆರವಿಗಾಗಿ ಸಿದ್ಧ. ಪರಿಶುದ್ಧ ಭಕ್ತಿ ಮಾರ್ಗದಲ್ಲಿ ನಡೆದು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವ ಸೌಭಾಗ್ಯ ನಮ್ಮೆಲ್ಲರದಾಗಲಿ ಎಂದು ಆಶಿಸೋಣ.

 

 
Leave a Reply

Your email address will not be published. Required fields are marked *