Search
Saturday 4 April 2020
  • :
  • :

ಮತ್ಸ್ಯ ಅವತಾರ

ಮಕ್ಕಳೇ, ಒಂದಾನೊಂದು ಕಾಲದಲ್ಲಿ ಸತ್ಯವ್ರತ ಎಂಬ ಧರ್ಮಿಷ್ಠ ರಾಜನಿದ್ದ. ಅವ‌ನು ಪ್ರಜೆಗಳನ್ನು ತನ್ನ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದ.  ಕೃಷ್ಣನ ಕೃಪೆಗೆ ಪಾತ್ರನಾಗಲು ಅವನು ನದಿಯ ದಡದಲ್ಲಿ ತಪಸ್ಸನ್ನು ಮಾಡುತ್ತಿದ್ದ. ಒಂದು ದಿನ ಅವನು ಕೈಯಲ್ಲಿ ನೀರನ್ನು ತೆಗೆದುಕೊಂಡು ತರ್ಪಣ ಕೊಡುತ್ತಿದ್ದ. `ಅರೇ! ಇದೇನು, ಕೈಯಲ್ಲಿ ಚಿಕ್ಕ ಮೀನೊಂದು ಬಂದಿದೆ!’ ರಾಜನು ಪುಟ್ಟ ಮೀನನ್ನು ನೀರಿಗೆ ವಾಪಸ್ಸು ಹಾಕಿದ. ಮತ್ತೆ ಬೊಗಸೆಯಲ್ಲಿ ನೀರು ತೆಗೆದುಕೊಂಡರೆ ಮತ್ತೆ ಅದೇ ಮೀನು! ಎಷ್ಟು ಬಾರಿ ಮೀನನ್ನು ನೀರಿಗೆ ಹಾಕಿದರೂ ಅದು ಪುನಃ ಅವನ ಕೈಗೇ ಬರುತ್ತಿತ್ತು. ರಾಜನಿಗೆ ಅಚ್ಚರಿ ಕಾದಿತ್ತು. ಏಕೆಂದರೆ, ಆ ಪುಟ್ಟ ಮೀನು ಅವನೊಂದಿಗೆ ಮಾತನಾಡಲಾರಂಭಿಸಿತು. `ಹೇ, ರಾಜ! ನಾನು ಇಲ್ಲಿ ಸುರಕ್ಷಿತವಾಗಿಲ್ಲ. ನನ್ನನ್ನು ಕಾಪಾಡು.’

ಸತ್ಯನಿಷ್ಠ ರಾಜನು ಆ ಮೀನನ್ನು ರಕ್ಷಿಸ‌ಲು ನಿರ್ಧರಿಸಿ, ಅರಮನೆಗೆ ತಂದು ನೀರಿನ ಪಾತ್ರೆಯಲ್ಲಿ ಇಟ್ಟ. ನೋಡ ನೋಡುತ್ತಲೇ ಆ ಮೀನು ಎಷ್ಟು ದೊಡ್ಡದಾಯಿತೆಂದರೆ ಅದಕ್ಕೆ ಆ ಪಾತ್ರೆ ಚಿಕ್ಕದಾಗಿ ಹೋಯಿತು. ಅವನು ಮೀನನ್ನು ಬಾವಿಗೆ ಹಾಕಿದ. ಅದು ಬೆಳೆದು ಬಾವಿ ಕೂಡ‌ ಸಾಲದಾಯಿತು. ರಾಜನು ಅದನ್ನು ಸರೋವರದಲ್ಲಿ ಬಿಟ್ಟ. ಸರೋವರ ಕೂಡ ಸಾಲದಾಯಿತು. ಕೊನೆಗೆ ರಾಜನು ಮೀನನ್ನು ಸಮುದ್ರಕ್ಕೆ ಬಿಟ್ಟ. ಹೀಗೆ, ರಾಜನಿಗೆ ಆ ಮೀನು ಸಾಕ್ಷಾತ್ ಭಗವಂತನೇ ಎಂಬುವುದು ಅರ್ಥವಾಯಿತು. ರಾಜನ ನಡವಳಿಕೆಯಿಂದ ಸಂಪ್ರೀತನಾದ ಮೀನಿನ ರೂಪದ ಭಗವಂತ ಹೀಗೆ ಹೇಳಿದ, `ಪ್ರಿಯ ದೊರೆ, ಒಂದು ವಾರದಲ್ಲಿ ಪ್ರಳಯವಾಗುತ್ತದೆ. ನೀನು ಎಲ್ಲ ರೀತಿಯ ಜೀವಿಗಳೊಂದಿಗೆ ಒಂದು ದೊಡ್ಡ ದೋಣಿಯಲ್ಲಿ ನನ್ನ ಆಶ್ರಯ ಪಡೆಯಬೇಕು. ದೋಣಿಯನ್ನು ವಾಸುಕಿ ಸರ್ಪದ ಸಹಾಯದಿಂದ ನನ್ನ ಕೊಂಬಿಗೆ ಕಟ್ಟಬೇಕು.’  ಹೀಗೆ ಹೇಳಿ ಮತ್ಸ್ಯ ಭಗವಂತನು ಅಂತರ್ಧಾನನಾದನು.

ಕೆಲ ದಿನಗಳ ಅನಂತರ ಭಗವಂತನು ಹೇಳಿದಂತೆಯೇ ಪ್ರಳಯ ಸಂಭವಿಸಿತು. ಸತ್ಯವ್ರತ ರಾಜನು ದೋಣಿಯೊಂದು ಬರುತ್ತಿರುವುದನ್ನು ಕಂಡ. ಬ್ರಾಹ್ಮಣರು, ಸಂತ ಪುರುಷರು, ಪ್ರಾಣಿ ಪಕ್ಷಿಗಳು ಮತ್ತು ಸಸ್ಯಗಳೊಂದಿಗೆ ದೋಣಿ ಏರಿದ ಮತ್ತು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿದ. ಪ್ರಳಯ ನಿಂತಮೇಲೆ ಹೊಸ ಯುಗ ಆರಂಭವಾಯಿತು. ಮತ್ಸ್ಯ ರೂಪಿ ಭಗವಂತನಿಗೆ ತಲೆಬಾಗಿ ನಮಿಸೋಣವೇ?




Leave a Reply

Your email address will not be published. Required fields are marked *