Search
Saturday 4 April 2020
  • :
  • :

ಮಾಗಡಿ ತಿರುಮಲೆ ಶ್ರೀ ರಂಗನಾಥಸ್ವಾಮಿ ಕ್ಷೇತ್ರ

ಬೆಂಗಳೂರಿನ ಪಶ್ಚಿಮಕ್ಕೆ ೫೦ ಕಿ.ಮೀ. ದೂರದಲ್ಲಿರುವ ಮಾಗಡಿ ಒಂದು ತಾಲ್ಲೂಕು ಕೇಂದ್ರ.

ಸ್ಥಳ ಪುರಾಣ

“ಮಾಂಡವ್ಯಕ್ಷೇತ್ರ” ಎಂದು ಹೆಸರಾದ ಈ “ಮಾಂಡವ್ಯಕುಟಿ” (ಮಾಕುಟಿ-ಮಾಗುಡಿ-ಮಾಗಡಿ) ಪ್ರದೇಶ ಅಷ್ಟಶೈಲಗಳಿಂದಲೂ,  ಅಷ್ಟ ತೀರ್ಥಗಳಿಂದಲೂ, ಪವಿತ್ರ ಕಣ್ವಾ ನದಿಯಿಂದಲೂ ಕೂಡಿದ ದಿವ್ಯ ಕ್ಷೇತ್ರ. ಮಾಂಡವ್ಯ, ಕಣ್ವ, ಶುಕಮುನಿ ಮುಂತಾದ ಅನೇಕ ಮಹಿಮಾವಂತರ ತಪೋಭೂಮಿ, ಪುಣ್ಯಭೂಮಿ, ಸುಂದರ ಗಿರಿಕಾನನಗಳಿಂದ ಕೂಡಿದ ರಮ್ಯತಾಣ, ಶಾಂತಿಭೂಮಿ. ಮಾಗಡಿಯ ಮಾಂಡವ್ಯ ಎಂಬ ಋಷಿಯು ತಿರುಪತಿಗೆ ಹೋಗಿ ಶ್ರೀ ಶ್ರೀನಿವಾಸನನ್ನು ಕುರಿತು ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿದ ಶ್ರೀ ವೆಂಕಟಾಚಲಪತಿಯು ಸ್ವರ್ಣಾಚಲಕ್ಕೆ ಹೋಗಿ ತನ್ನನ್ನು ಆರಾಧಿಸಿದರೆ ಅಲ್ಲಿ ತಾನು ಅನುಗ್ರಹಿಸುತ್ತೇನೆಂದು ವರವಿತ್ತನು. ಅಂತೆಯೇ ಆ ಮಾಂಡವ್ಯ ಋಷಿಯು ಸ್ವರ್ಣಾಚಲಕ್ಕೆ ಬಂದು ಒಂದು ಕುಟೀರವನ್ನು ನಿರ್ಮಿಸಿಕೊಂಡು ಅಲ್ಲಿ ತಪಸ್ಸು ಮಾಡಿ ಸ್ವಾಮಿಯ ಅನುಗ್ರಹ ಪಡೆದರು. ತಿರುಪತಿ ಶ್ರೀ ಶ್ರೀನಿವಾಸ ಸ್ವಾಮಿಯ ಆಜ್ಞಾನುಸಾರ ಮಾಂಡವ್ಯ ಋಷಿಗಳು “ಸ್ವರ್ಣಾದ್ರಿ” ಎಂದು ಹೆಸರಾಗಿದ್ದ ಈ ತಿರುಮಲೆಯಲ್ಲಿ “ಪಶ್ಚಿಮ ವೆಂಕಟಾಚಲಪತಿ”ಯನ್ನು ಸ್ಥಾಪಿಸಿದ ವಿಚಾರ ಬ್ರಹ್ಮಾಂಡ ಪುರಾಣದಲ್ಲಿ ದೊರೆಯುತ್ತದೆ. ತಿರುಪತಿಗೆ ಹೋಗಲಾಗದವರು ಈ ತಿರುಮಲೆಯ ಶ್ರೀ “ಪಶ್ಚಿಮ ವೆಂಕಟಾಚಲಪತಿ” ದರ್ಶನದಿಂದಲೇ ಪುನೀತರಾಗಿ, ಶ್ರೀ ಶ್ರೀನಿವಾಸ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನಲಾಗಿದೆ.

ಇತಿಹಾಸ

ಚೋಳರಾಜನೊಬ್ಬ ೧೧-೧೨ ನೇ ಶತಮಾನದಲ್ಲಿ ಮಾಗಡಿ ಪಟ್ಟಣವನ್ನು ನಿರ್ಮಿಸಿದನೆಂದು ತಿಳಿದು ಬರುತ್ತದೆ. ಚೋಳರ ಕಾಲದಲ್ಲೇ ಶ್ರೀ ರಂಗನಾಥ ಸ್ವಾಮಿಯ ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದ್ದು, ಮುಂದೆ ಇದು ಹೊಯ್ಸಳರು, ವಿಜಯನಗರರಸರು,  ಕೆಂಪೇಗೌಡನ ವಂಶಸ್ಥರು, ಮೈಸೂರರಸರ ಕಾಲದಲ್ಲಿ, ಅದರಲ್ಲೂ ಮುಖ್ಯವಾಗಿ ಸಂಪಾಜರಾಯ, ಇಮ್ಮಡಿ ಕೆಂಪೇಗೌಡ ಮತ್ತು ದೊಡ್ಡವೀರಪ್ಪ ಗೌಡರ ಕಾಲದಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ಹೊಂದಿರುತ್ತದೆ. ಅಲ್ಲದೆ ಈ ಸ್ವಾಮಿಗೆ ನಿತ್ಯಪೂಜೆ, ಅಮೃತ ಪಡಿಗೆ, ಆಭರಣ ಅಲಂಕಾರ, ದೀಪಾರಾಧನೆ ಇತ್ಯಾದಿಗಳಿಗಾಗಿ ರಾಜರುಗಳು, ಅಧಿಕಾರಿಗಳು ಮತ್ತು ಭಕ್ತಾದಿಗಳು ದಾನ-ದತ್ತಿಗಳನ್ನು ನೀಡಿರುವ ವಿಚಾರವನ್ನು ಅನೇಕ ಶಾಸನಗಳಲ್ಲಿ, ದಾನಪತ್ರಗಳಲ್ಲಿ ಕಾಣಬಹುದು. ಈ ದೇವಾಲಯದ ಬಳಿ ದೊರೆತಿರುವ ೧೫೨೪ ಮತ್ತು ೧೫೭೮ರ ಶಾಸನಗಳು ಮತ್ತು ಇತರ ದಾನ ಪತ್ರಗಳಲ್ಲಿ ಶ್ರೀ ಸ್ವಾಮಿಯನ್ನು `ತಿರುವಂಗಳನಾಥ’ ಎಂದು ಕರೆಯಲಾಗಿದ್ದು, ಟಿಪ್ಪುಸುಲ್ತಾನನ ಕಾಲದಿಂದ ಈಚೆಗೆ ಇದು `ಶ್ರೀ ರಂಗನಾಥ ಸ್ವಾಮಿ’ ಎಂದೇ ಪ್ರಸಿದ್ಧವಾಗಿರುತ್ತದೆ. ದೇವಾಲಯದ ಮುಖ ಮಂಟಪವನ್ನು ನಾಗಿರೆಡ್ಡಿ ಎಂಬಾತನೂ, ಹಿಂದಿನ ಸಾರ್ಸನಿಕ್ ಶೈಲಿಯ ಗೋಪುರವನ್ನು ಸ್ವಾಮಿಯ ಭಕ್ತ ಮುಸ್ಲಿಂ ಖಿಲ್ಲೇದಾರನು ಕಟ್ಟಿಸಿರುತ್ತಾನೆಂದು ತಿಳಿದುಬರುತ್ತದೆ. ದೇವಾಲಯದ ಪಶ್ಚಿಮ ಮತ್ತು ಪೂರ್ವದ ದ್ವಾರಗಳಲ್ಲಿ ಎತ್ತರವಾದ ಎರಡು ರಾಜ ಗೋಪುರಗಳಿದ್ದು ತಿರುಮಲೆಯ ಅಸ್ತಿತ್ವವನ್ನು ಬಹುದೂರಕ್ಕೆ ಸಾರುತ್ತವೆ.

ಸಾಮಾನ್ಯವಾಗಿ ಈ ದೇವಾಲಯದಲ್ಲಿನ ದೇವರ ಪ್ರತಿಮೆಗಳೆಲ್ಲವೂ ಪೂರ್ವಾಭಿಮುಖವಾಗಿದ್ದು ಸುಮಾರು ೪ ೧/೨ ಅಡಿ ಎತ್ತರದ ವಿಜಯನಗರ ಶೈಲಿಯ ಶ್ರೀರಂಗನಾಥ ಸ್ವಾಮಿಯ ವಿಗ್ರಹ ಮಾತ್ರ ಪಶ್ಚಿಮಾಭಿಮುಖವಾಗಿರುವುದು ಒಂದು ವಿಶೇಷ. ಇದರ ಮುಂದೆ ಮಾಂಡವ್ಯರು ಆರಾಧಿಸುತ್ತಿದ್ದರೆನ್ನಲಾದ ಸ್ವಾಮಿ ಸ್ವಯಂಭೂ ರೂಪದ ಸಾಲಿಗ್ರಾಮವನ್ನು ಕಾಣಬಹುದು. ಇಲ್ಲಿ ಎಷ್ಟೇ ಕೊಡ ನೀರು ಅಭಿಷೇಕ ಮಾಡಿದರೂ ಅದು ಎಲ್ಲಿ ಹೋಗುವುದೋ ತಿಳಿಯದು ಎನ್ನುತ್ತಾರೆ. ನವರಂಗದಲ್ಲಿರುವ ಶ್ರೀದೇವಿ ಸಮೇತ ಶ್ರೀ ಸ್ವಾಮಿಯ ಉತ್ಸವ ಮೂರ್ತಿ ಅತ್ಯಂತ ಸುಂದರವಾಗಿದೆ. ಸ್ವಾಮಿಯ ಎಡಗಡೆಗೆ (ಹಿಂಭಾಗದಿಂದ) ಶ್ರೀಅಮ್ಮನವರು, ಮುಂದೆ ಬಲಗಡೆಗೆ ಸೀತಮ್ಮನವರು, ಎದುರಿಗೆ ಹನುಮ-ಗರುಡರ ದೊಡ್ಡ ಕೆತ್ತನೆಗಳೂ, ಸುತ್ತ ಶ್ರೀ ರಾಮ, ರಾಮಾನುಜಾಚಾರ್ಯರು, ಆಳ್ವಾರುಗಳೂ ಮತ್ತು ವೈಷ್ಣವ ಭಕ್ತರ ಪ್ರತಿಮೆಗಳು ಪ್ರತ್ಯೇಕ ಗರ್ಭಗೃಹಗಳನ್ನು ಹೊಂದಿದ್ದು ಮನೋಹರವಾಗಿವೆ. ಶ್ರೀ ರಂಗನಾಥಸ್ವಾಮಿಯ ಎಡಬದಿಗೆ (ಹಿಂಬದಿಯಿಂದ) ಗೋಡೆಯ ಮೇಲೆ ಮಲಗಿರುವ ಭಂಗಿಯಲ್ಲಿರುವ ದೇವರನ್ನು ಮಾಗಡಿರಂಗ, ಮಕ್ಕಳರಂಗ, ಬೆಳೆಯುವರಂಗ, ಮೂಲರಂಗ ಎಂದು ಕರೆಯುತ್ತಾರೆ. ಇದು ದಿನೇ ದಿನೇ ಬೆಳೆಯುತ್ತಿದೆ ಎಂದೂ ಎನ್ನುತ್ತಾರೆ.

ಶ್ರೀರಂಗನಾಥ ಸ್ವಾಮಿ ದೇವಾಲಯದ ಬಲಭಾಗಕ್ಕೆ ಅನತಿ ದೂರದಲ್ಲಿರುವ “ಸ್ತಂಭಗಿರಿ” ಎಂದು ಹೆಸರಾದ ಶ್ರೀ ನರಸಿಂಹಸ್ವಾಮಿ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಕ್ತ ಪ್ರಹ್ಲಾದನು ಸ್ಥಾಪಿಸಿದನೆಂದು ಹೇಳಲಾಗುವ ಕಂಬದ ಮುಂದಿರುವ ಯೋಗಾನರಸಿಂಹನನ್ನು ಕಂಬದ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ. ಪ್ರತಿವರ್ಷ ಚೈತ್ರ ಮಾಸದಲ್ಲಿ ಹುಣ್ಣಿಮೆಗೆ ಮುಂಚೆ ಉತ್ತರಾನಕ್ಷತ್ರದಲ್ಲಿ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವವು ಅದ್ದೂರಿಯಿಂದ ನಡೆಯುತ್ತದೆ. ಅದೇ ಸಮಯದಲ್ಲಿ ನಾಲ್ಕಾರು ದಿನಗಳ ಕಾಲ ವಿಶೇಷ ಅನ್ನಸಂತರ್ಪಣೆಗಳು ನಡೆಯುತ್ತವೆ.
Leave a Reply

Your email address will not be published. Required fields are marked *