Search
Friday 29 October 2021
  • :
  • :

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಹೊರಕೆರೆ ದೇವರಪುರ

ಜೀವನದಲ್ಲಿ ಬರುವ ಅಡಚಣೆಗಳನ್ನು ದೂರ ಮಾಡಲು ನಾವು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯನ್ನು ಪ್ರಾರ್ಥಿಸುತ್ತೇವೆ. ತನ್ನ ಪರಮ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸಲು ಅವತಾರವೆತ್ತಿ ಬಂದ ಭಕ್ತವತ್ಸಲನಲ್ಲವೆ, ಅವನು? ಅದೇ ರೀತಿ ಸದಾ ನಮ್ಮನ್ನು ಕಾಪಾಡು ಎಂದು ಅವನಲ್ಲಿ ಕೋರುತ್ತೇವೆ. ದಕ್ಷಿಣ ಭಾರತ, ಮುಖ್ಯವಾಗಿ ಕರ್ನಾಟಕದಲ್ಲಿ ಅನೇಕ ಸ್ಥಳಗಳಲ್ಲಿ ಶ್ರೀ ನರಸಿಂಹ ದೇವರ ಮಂದಿರಗಳಿವೆ. ಪ್ರತಿಯೊಂದೂ ತನ್ನದೇ ವೈಶಿಷ್ಟ್ಯಗಳಿಂದ ಭಕ್ತರನ್ನು ಸೆಳೆಯುತ್ತವೆ. ಚಿತ್ರದುರ್ಗ ಜಿಲ್ಲೆ (ಮೊದಲು ನಂದರಾಯನ ಪಟ್ಟಣ) ಹೊರಕೆರೆ ದೇವರಪುರದ ಶ್ರೀ ಲಕ್ಷ್ನೀನರಸಿಂಹ‌ಸ್ವಾಮಿ ದೇವಸ್ಥಾನವು ಅನೇಕ ವಿಶೇಷಗಳಿಂದ ಮಹತ್ವದ್ದಾಗಿದೆ. ಇದರ ಸ್ಥಳ ಪುರಾಣ, ಇತಿಹಾಸ ಎಲ್ಲವೂ ಅತ್ಯಂತ ಕುತೂಹಲದಾಯಕವಾಗಿದೆ.

ಪುರಾಣ-ಇತಿಹಾಸ

ಸುಮಾರು ೯೦೦ ವರ್ಷಗಳ ಇತಿಹಾಸವಿರುವ ದೇವಸ್ಥಾನವಿದು, ಇಲ್ಲಿನ ಸುತಮುತ್ತಲ ಊರುಗಳ ಭಕ್ತರು ಆಗಾಗ್ಗೆ ತಿರುಪತಿ ಯಾತ್ರೆ ಕೈಗೊಳ್ಳುವುದು ವಾಡಿಕೆಯಾಗಿತ್ತು. ಆಗೆಲ್ಲ ಈಗಿನಂತೆ ಪ್ರಯಾಣಕ್ಕೆ ಬಸ್‌ಗಳಂತಹ ಸೌಕರ್ಯಗಳಿರಲಿಲ್ಲ. ಜನರು ನಡಿಗೆಯಲ್ಲಿಯೇ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದರು. ಇಲ್ಲಿಂದ ತಿರುಪತಿಗೆ ಹೋಗಲು ತಿಂಗಳಾನುಗಟ್ಟಲೆ ಪ್ರಯಾಣ ಮಾಡಬೇಕಾಗಿದ್ದರೂ ಭಕ್ತರ ಉತ್ಸಾಹ ಕುಂದುತ್ತಿರಲಿಲ್ಲ. ಆದರೆ ಅವರು ಒಂದು ದೊಡ್ಡ ಸಮಸ್ಯೆ ಎದುರಿಸುತ್ತಿದ್ದರು. ಅದು ಗುಡ್ಡಗಾಡಿನ ಪ್ರದೇಶ. ಕಳ್ಳರ ಕಾಟ ಜಾಸ್ತಿ. ಯಾತ್ರೆ ಹೋಗುವ ಜನರಿಗೆ ಹಿಂಸೆ ನೀಡಿ ಹಣ, ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಆಗ ಆ ಪ್ರದೇಶವನ್ನು ನಂದರಾಜ ಎಂಬ ಜೈನ ದೊರೆ ಆಳುತ್ತಿದ್ದ. ಸಹಜವಾಗಿ ಜನರು ತಮ್ಮ ಅಳಲನ್ನು ರಾಜನ ಬಳಿ ಹೊಗೆಡಹಿದರು. ದುಷ್ಟನಾದ ರಾಜನು ಅವರ ಹಣವನ್ನು ಸಂರಕ್ಷಿಸುವ ನೆಪದಲ್ಲಿ ಅವರಿಂದ ಹಣ ಕಿತ್ತುಕೊಂಡು ತನ್ನ ಖಜಾನೆ ತುಂಬಿಕೊಳ್ಳುತ್ತಿದ್ದ. ಅವರು ಯಾತ್ರೆಗೆ ಹೋಗುವಾಗ ಅವರಿಗೆ ಚರ್ಮದ ನಾಣ್ಯ ತಯಾರು ಮಾಡಿ ನೀಡುತ್ತಿದ್ದ. ಅವರು ರಾಜನ ಕಪಟವರಿಯದೆ ಆ ನಾಣ್ಯವನ್ನು ತಿರುಪತಿ ಹುಂಡಿಗೆ ಹಾಕುತ್ತಿದ್ದರು. ಇದು ಅಪವಿತ್ರ ಎಂದು ಭಾವಿಸಿದ ಭಗವಂತನು ಅದರ ಹಿನ್ನೆಲೆ ಕಂಡುಹಿಡಿಯಲು ಈ ನಂದರಾಯನ ಪಟ್ಟಣಕ್ಕೆ ಬರುತ್ತಾನೆ. ದಾಸಯ್ಯನಂತೆ ಮಾರುವೇಷ ತೊಟ್ಟು ಶಂಖ, ಜಾಗಟೆ ಸಮೇತ “ಗೋವಿಂದಾ, ಗೋವಿಂದಾ” ಎಂದು ಪ್ರವೇಶಿಸುತ್ತಾನೆ. ಸಾಧು, ಸಂನ್ಯಾಸಿ, ದೇವರಲ್ಲಿ ನಂಬಿಕೆ ಇಲ್ಲದ ರಾಜನು ದಾಸಯ್ಯನನ್ನು ಅವಮಾನ ಮಾಡಿ ಊರಾಚೆಗೆ ತಳ್ಳಿಸುತ್ತಾನೆ. ಈ ದುಷ್ಟ ರಾಜನನ್ನು ಸಂಹಾರ ಮಾಡಬೇಕೆಂದು ಸಂಕಲ್ಪಿಸಿದ ಸ್ವಾಮಿಯು ಸುಮಾರು ೩ ಕಿ.ಮೀ. ದೂರದ ಕೃಷ್ಣಾಚಲ ಕರಿಕಲ್ಲು ಬೆಟ್ಟದ ಬಂಡೆಯ ಮೇಲೆ ಆಸೀನನಾಗಿ ನಿಜರೂಪ ತೋರುತ್ತಾನೆ. ಪ್ರಭು ಕುಳಿತ ಜಾಗ ಇದೆ ಹಾಗೂ ಅವನು ಜಾಗಟೆ ಇಟ್ಟ ಸ್ಥಳ ದೊಡ್ಡ ಕಲ್ಲಾಗಿದ್ದು, ಬಡಿದರೆ ಜಾಗಟೆ ಶಬ್ದ ಬರುತ್ತದೆ. ಆ ಸ್ಥಳದಲ್ಲಿ ಕುಳಿತು ಸ್ವಾಮಿ ತನ್ನ ದಿವ್ಯ ದೃಷ್ಟಿಯನ್ನು ಬೀರಿದಾಗ ನಂದರಾಯನ ಪಟ್ಟಣ ಭಸ್ಮವಾಗುತ್ತದೆ. ಆದರೆ ಬಾಸಿಂಗ ಮನೆತನ ಮಾತ್ರ ಭಗವಂತನ ಸಿಟ್ಟಿನಿಂದ ಪಾರಾಗುತ್ತದೆ. ಆ ಮನೆತನದಲ್ಲಿ ಹುಟ್ಟಿದ ಮಗುವಿಗೆ ಆಗ ಮೂರು ತಿಂಗಳು.“ನಂದನ ಕೊಂದಿದ್ದೀಯ, ಕಂದನ ಉಳಿಸು” ಎಂದು ಬೇಡಿಕೊಳ್ಳುತ್ತಾರೆ. ಹೀಗಾಗಿ ಈ ಮನೆತನದವರು ಉಳಿದು ಈಗಲೂ ಸ್ವಾಮಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಭುವಿಗೆ ಮಂದಿರ

ಪ್ರಭು ನೆಲೆಸುವುದು ಕಾಡುಕೇರಿ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ. ಅಲ್ಲೊಂದು ಹುತ್ತದಲ್ಲಿ ವಾಸ. ಸುತ್ತಮುತ್ತಲ ಗ್ರಾಮಗಳ ದನಕರುಗಳು ಪ್ರತಿದಿನ ಮೇಯಲು ಬಂದು ಈ ಹುತ್ತಕ್ಕೆ ಹಾಲು ನೀಡಿ ಹೋಗುತ್ತಿದ್ದವು. ತನ್ನ ಮಾಲೀಕ ಗೌಡನ ಮನೆಗೆ ಸಂಜೆ ಬರುವ ಹಸುಗಳಲ್ಲಿ ಹಾಲು ಇರುತ್ತಿರಲಿಲ್ಲ. ಇದರಿಂದ ಅಚ್ಚರಿಗೊಂಡ ಗೌಡನು ಸತ್ಯಾನ್ವೇಷಣೆಗೆ ಹಸುಗಳ ಹಿಂದೆ ಹೋಗುತ್ತಾನೆ. ಕಾಡುಕೇರಿ ಹುತ್ತದಲ್ಲಿ ಹಸುಗಳು ಹಾಲು ಕೊಡುತ್ತಿರುವುದನ್ನು ನೋಡಿ ಇದರ ಪರೀಕ್ಷೆ ಮಾಡಬೇಕೆಂದುಕೊಳ್ಳುತ್ತಾನೆ. ಅದೇ ದಿನ ರಾತ್ರಿ ಕನಸಿನಲ್ಲಿ ಸ್ವಾಮಿ ಕಾಣಿಸಿಕೊಂಡು , “ತಿರುಪತಿಯಿಂದ ಬಂದು ನರಸಿಂಹನ ರೂಪದಲ್ಲಿ ಇಲ್ಲಿ ನೆಲೆಸಿದ್ದೇನೆ. ಇಲ್ಲಿ ನನಗೆ ದೇವಸ್ಥಾನ ನಿರ್ಮಿಸು,” ಎನ್ನುತ್ತಾನೆ. ಗೌಡನು ಹುತ್ತವನ್ನು ಬಯಲು ಮಾಡಿದಾಗ ಚಿಕ್ಕದಾದ ಮೂರ್ತಿ ಕಂಡಿತು. ಅವನು ಭಕ್ತಿಯಿಂದ ಚಿಕ್ಕ ಮಂದಿರ ನಿರ್ಮಿಸುತ್ತಾನೆ. ಮುಂದೆ ಚಿತ್ರದುರ್ಗ, ತರಿಕೆರೆಯ ಪಾಳೆಯಗಾರರು ಮತ್ತು ವಿಜಯನಗರದ ಅರಸರು ಮಂದಿರದ ಅಭಿವೃದ್ಧಿ ಕೈಗೊಳ್ಳುತ್ತಾರೆ. ಕ್ರಮೇಣ ಸ್ವಾಮಿಗೆ ವೈಭವದ ಪೂಜೆ ನಡೆಯುತ್ತ ಬಂದಿದೆ.

ಇದರ ರಾಜಗೋಪುರದಲ್ಲಿಯೂ ವಿಶೇಷವಿದೆ. ಮೂರರಿಂದ ಐದು ಮೆಟ್ಟಿಲುಗಳಿವೆ. ಮೊದಲ ಮೆಟ್ಟಿಲಿನಲ್ಲಿ ಹಿಂದೂ ಧರ್ಮ ಶೈಲಿಯಲ್ಲಿ ದ್ವಾರ ನಿರ್ಮಿಸಲಾಗಿದೆ. ಎರಡನೆಯದರಲ್ಲಿ ಮುಸಲ್ಮಾನ ಶೈಲಿ ಮತ್ತು ಮೂರನೆಯದರಲ್ಲಿ ಕ್ರಿಶ್ಚಿಯನ್ ಮಾದರಿಯಲ್ಲಿ ದ್ವಾರಗಳಿವೆ. ಗೋಪುರದ ಮೇಲೆ ಜೈನ ಧರ್ಮ ಸರ್ವ ಧರ್ಮ ಸಮನ್ವಯ ಎಂದು ಬರೆಯಲಾಗಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿರುವ ಈ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯು ಅತ್ಯಂತ ಸತ್ಯವಾದ ದೇವರು. ಇಲ್ಲಿ ಸ್ವಾಮಿಯು ಎಡಗೈಯಲ್ಲಿ ಆಶೀರ್ವದಿಸುತ್ತಿದ್ದಾನೆ. ಅಂದರೆ ಅಭಯ ಹಸ್ತ ವರದ ಹಸ್ತ. ಊರಿನಿಂದ ಆಚೆ ನೆಲೆಸಿರುವುದರಿಂದ ಹೊರಕೆರೆ ದೇವರಪುರದ  ಸ್ವಾಮಿ ಎಂದು ಪ್ರಸಿದ್ಧ. ಉತ್ಸವ ಮೂರ್ತಿಗೆ ಶ್ರೀ ರಂಗನಾಥ ಎನ್ನುತ್ತಾರೆ.

ಹಬ್ಬ-ಹರಿದಿನ

ಶ್ರಾವಣ, ನವರಾತ್ರಿ, ಧನುರ್ಮಾಸ ಮತ್ತಿತರ ಹಬ್ಬಗಳಂದು ವಿಶೇಷ ಪೂಜೆಗಳು ನಡೆಯುತ್ತವೆ.

ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪುಬ್ಬಾ ನಕ್ಷತ್ರ ಪೂರ್ಣಿಮೆಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಪಕ್ಷಿರಾಜ ವೈನತೇಯ, ಗರುಡ ಬಂದು ರಥದ ಮೇಲು ಭಾಗದಲ್ಲಿ ಮೂರು ಪ್ರದಕ್ಷಿಣೆ ಹಾಕಿ ಹೋದ ಮೇಲೆಯೇ ರಥ ಸಾಗುತ್ತದೆ. ಗರುಡ ಬರದಿದ್ದರೆ ರಥ ಚಲಿಸದೆಂಬ ಪ್ರತೀತಿ ಇದೆ.

ಈಗಿನ ಪ್ರಧಾನ ಅರ್ಚಕರು ಶ್ರೀ ಕೃಷ್ಣ ಭಟ್ಟರು.  ಪರಂಪರೆಯಿಂದಲೂ ಪೂಜಾ ಕಾರ್ಯದ ಪುಣ್ಯ ಈ ಮನೆತನಕ್ಕೆ ದೊರೆತಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ ೨೧೮ ಕಿ.ಮೀ., ಹೊಳಲ್‌ಕೆರೆಯಿಂದ ೨೦ ಕಿ.ಮೀ., ಚಳ್ಳಕೆರೆ ರೈಲು ನಿಲ್ದಾಣದಿಂದ ೧ ಕಿ.ಮೀ.  ರೈಲು, ಬಸ್‌ನಿಂದ ತಲುಪಬಹುದು.
Leave a Reply

Your email address will not be published. Required fields are marked *