Search
Friday 29 October 2021
  • :
  • :

ಕೃಷ್ಣಾ ಬರಬಾರದೇ…..

ಕೃಷ್ಣಾ ಬರಬಾರದೇ, ಶ್ರೀ ಕೃಷ್ಣಾ ನೀ ಬರಬಾರದೇ
ಧರಣಿಯ ದುರುಳರ ಹರಣಕೆ ನೀ ಮತ್ತೆ ಬರಬಾರದೇ
ಕಲಿಗಾಲದಲ್ಲಿ ಧರ್ಮಕೆ ಉಳಿಗಾಲವಿನ್ನೆಲ್ಲಿ ನೀನಿರದೆ…

ಹಸುಗೂಸುಗಳ ಕತ್ತು ಹಿಸುಕುವ ನೀಚ ಕಂಸರು ಇಲ್ಲುಂಟು
ರುಕ್ಮಿಣಿಯರ ಬಯಸುವ ದುಷ್ಟ ಶಿಶುಪಾಲರೂ ಉಂಟು
ಬರಬಾರದೇ ಕೃಷ್ಣ, ಸುದರ್ಶನ ಚಕ್ರವನೊಮ್ಮೆ ಬಿಡಬಾರದೇ

ಸ್ತ್ರೀ ಹತ್ಯೆ, ಗೋಹತ್ಯೆಗೈವ ಪರಮ ಪಾಪಿ ರಕ್ಕಸರು ಇಲ್ಲುಂಟು
ಹೆಣ್ಣಿನ ಮಾನ ಹರಣಕೆ ಕಾಯ್ವ ದುಷ್ಟ ದುಷ್ಯಾಸನ ಕೀಚಕರು ಉಂಟು
ಬರಬಾರದೆ ಹೇ ಗೋವರ್ಧನ, ಕಾಯಬಾರದೇ ಮಾನಿನಿಯರ ಮಾನ

ಅಲ್ಲೆಲ್ಲೋ ಬುಸುಗುಡುತಿಹರು ವಿಷ ಕಕ್ಕೋ ಕಾಳಿಂಗರು,
ಇಲ್ಲೆಲ್ಲೋ ವಿಷ ಬಿತ್ತಿ ಬೆಳೆವ ಪೂತನಿ, ಶಕುನಿ ಕುತಂತ್ರಿಗಳಿಹರು,
ಬರಲಾರೆಯಾ ಕೃಷ್ಣ, ವಿಷಪಾತಕರಾ ನೀ ಕೊಲಲಾರೆಯಾ,

ಅರ್ಜುನ ಸಜ್ಜನರಿಲ್ಲಿ ಪ್ರತಿರೋಧ ತೋರದೆ
ಇದ್ದು ಸತ್ತವರಾಗಿ ಕೈಕಟ್ಟಿ ಕೂತಿಹುದು ಕಾಣದೆ,
ಗೀತೆಯ ಮಜ್ಜನ ಮಾಡಿಸಿ ಕರ್ತವ್ಯಕೆ ಎಬ್ಬಿಸಬಾರದೇ

ಪ್ರೀತಿಯ ಹೆಸರಲ್ಲಿ, ಕಾಮದ ಕೆಸರಲ್ಲಿ ಸತ್ತಿದೆ ಜಗವಿಲ್ಲಿ
ಪ್ರೀತಿಯ ಅಂತರಾಳ ಅರ್ಥೈಸು ನೀ ಜನಕಿಲ್ಲಿ
ಶಾಂತಿ ಸಹಬಾಳ್ವೆ, ಕರ್ತವ್ಯ ಕರ್ಮ ತಿಳಿಸಲು ಬಾ ಇಲ್ಲಿ

ಕನಕ, ಪುರಂದರ, ಕುಂಬಾರ, ಪುಂಡರೀಕ, ಸುಧಾಮರ ಗೋಳು
ನೀ ಬರದೇ ನಲುಗಿಹ ಆ ಸಾತ್ವಿಕರ ಆಕ್ರಂದನ ನೀ ಒಮ್ಮೆ ಕೇಳು
ಬರಲಾರೆಯಾ ಕೃಷ್ಣಾ, ನೀ ಕಾಯಲಾರೆಯಾ ಈ ಅಮಾಯಕರ ಬಾಳು

ಬರಲಾರೆಯಾ ಕೃಷ್ಣಾ, ನಿನ್ನ ಗೀತೆಯ ವಚನ ಮರೆತುಬಿಟ್ಟೆಯಾ
ಶಿಷ್ಟರ ಗುರುವಾಗಿ, ಸಖನಾಗಿ, ಬಾಳಿನ ಬೆಳಕಾಗಿ ಬರಲಾರೆಯಾ
ದುಷ್ಟರ ಹುಟ್ಟಡಗಿಸಿ, ಕೆಟ್ಟತನವ ಮೆಟ್ಟಿ ನಿಲ್ಲಲು ನೀ ಬರಲಾರೆಯಾ

ನೀ ಬರದೇ ಮನುಕುಲ ಮೃಗವಾಗಿದೆ, ಕೃಷ್ಣ ಬರಬಾರದೇ…
ಬರಬಾರದೇ ಕೃಷ್ಣಾ ನೀ ಧರ್ಮದ ಉಳಿವಿನ ಬೆಳಕ ತೋರಬಾರದೇ
ನನ್ನಲ್ಲಿ ನಿನ್ನಲ್ಲಿ ಅವನಲ್ಲಿ ಅವಳಲ್ಲಿ ನಿನ್ನ ಜನ್ಮ ಮತ್ತೆ ಆಗಬಾರದೇ

ಕೃಷ್ಣಾ ಬರಬಾರದೇ, ಶ್ರೀ ಕೃಷ್ಣಾ ನೀ ಬರಬಾರದೇ
ಕಲಿಯುಗದಿ ನೀ ಮತ್ತೆ ಹುಟ್ಟಿ ಬರಬಾರದೇ….
ಕೃಷ್ಣಾ ಬರಬಾರದೇ,  ಶ್ರೀ ಕೃಷ್ಣಾ ಬರಬಾರದೇ…

ರಚನೆ: ✍️ ರವಿನಾಗ್ ತಾಳ್ಯ
ಹೊಳಲ್ಕೆರೆ ತಾಲ್ಲೂಕು
ಚಿತ್ರದುರ್ಗ ಜಿಲ್ಲೆ
ತಾಳ್ಯ: 577527
Leave a Reply

Your email address will not be published. Required fields are marked *