Search
Saturday 4 April 2020
  • :
  • :

ಕಡಗೋಲು ಕೃಷ್ಣನ ದಿವ್ಯಕ್ಷೇತ್ರ

ಸುಪ್ರಸಿದ್ಧ ಶ್ರೀಕೃಷ್ಣ ಕ್ಷೇತ್ರಗಳಲ್ಲಿ ಉಡುಪಿ ಕ್ಷೇತ್ರವೂ ಒಂದು. ಇಲ್ಲಿನ ಕಡಗೋಲು ಕೃಷ್ಣ ಮೂರುತಿ ಸ್ವತಃ ರುಕ್ಮಿಣೀದೇವಿಯಿಂದ ಪೂಜಿಸಲ್ಪಟ್ಟಂಥದ್ದು. ದ್ವೈತ ಮತ ಪ್ರವರ್ತಕ ಶ್ರೀ ಮಧ್ವಾಚಾರ್ಯರು ಈ ಮುದ್ದು ಮನೋಹರ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಬನ್ನಿ, ಉಡುಪಿ ಕ್ಷೇತ್ರದ ದರ್ಶನ ಮಾಡೋಣ.

ಕಟ್ಟಿಗೆಯ ತೇರು ಒಂದೆಡೆಯಾದರೆ, ಚಿನ್ನದ ರಥ ಇನ್ನೊಂದೆಡೆ. ಪಂಚಭಕ್ಷ್ಯ ಪರಮಾನ್ನದ  ಭೋಜನ ಒಂದೆಡೆಯಾದರೆ, ತುಲಸೀದಳ ತೀರ್ಥದ ಉಪವಾಸ ವ್ರತ ಮತ್ತೊಂದೆಡೆ. ರಾಗತಾಳ ಬದ್ಧ ಸಂಗೀತ ನಿನಾದ ಒಂದೆಡೆಯಾದರೆ `ಕೃಷ್ಣ ನೀನೇ ಗತಿ’ ಎಂಬ ಆರ್ತನಾದ ಮಗುದೊಂದು ಕಡೆ. ಹೀಗೆ ಉಡುಪಿ ನಿಜವಾಗಿಯೂ `ದ್ವೈತ’ದ ತವರು ಮನೆ. ಶ್ರೀಕೃಷ್ಣ ಪರಮಾತ್ಮನ ವ್ಯಕ್ತಿತ್ವವೇ ಅಂತಹುದು. ಅವನು `ಷೋಡಶ ಸ್ತ್ರೀ ಸಹಸ್ರೇಶ’ನಾಗಿದ್ದೂ `ಅನಾದಿಬ್ರಹ್ಮಚಾರಿ’ ಎನಿಸಿದವನಲ್ಲವೆ? ವಿಷ್ಣು ಸಹಸ್ರನಾಮದಲ್ಲಿ ಹೇಳಿದಂತೆ ಭಗವಂತ ಏಕ-ಅನೇಕ, ಅರ್ಥ-ಅನರ್ಥ, ಕ್ಷರ-ಅಕ್ಷರ, ಚಲ-ಅಚಲ, ಭಯಕೃತ್-ಭಯನಾಶ, ಸ್ತವಪ್ರಿಯ-ರಣಪ್ರಿಯ! ಏಕಕಾಲದಲ್ಲಿ ಅದೂ ಹೌದು; ಇದು ಹೌದು. ಭಗವಂತನೆಂದರೆ ಎಲ್ಲವೂ ಹೌದು ತಾನೇ? ಉಡುಪಿಯ ಶ್ರೀಕೃಷ್ಣನೂ ಹಾಗೆಯೇ. ಒಮ್ಮೆ ಉಡಿದಾರ-ಒಡ್ಯಾಣ ಮಾತ್ರ ಕಟ್ಟಿಕೊಂಡು ಬಾಲಕೃಷ್ಣನಾಗಿ ನಿಂತರೆ, ಮತ್ತೊಮ್ಮೆ ಕಡಗ ಕಂಕಣ ಕೇಯೂರ ಕಿರೀಟಾದಿಗಳಿಂದ ಕಂಗೊಳಿಸುವ ಕಮನೀಯ ಮೂರುತಿ! ಅವನಿಗೆ ಒಮ್ಮೆ ಗರ್ಭಗುಡಿಯ ಕತ್ತಲು, ಮತ್ತೊಮ್ಮೆ ಮಂಟಪದ ತೊಟ್ಟಿಲು. ಒಮ್ಮೆ ಪಲ್ಲಕ್ಕಿಯ ಪ್ರಯಾಣ, ಇನ್ನೊಮ್ಮೆ ಗರುಡರಥದಲ್ಲಿ ವಿಮಾನಯಾನ!

`ದ್ವಾರಾವತೀಂ ಸಕಲ ಭಾಗ್ಯವತೀಮುಪೇಕ್ಷ್ಯ
ಗೋಪಾಲಬಾಲ ಲಲನಾಕರ ಪೂಜನಂ ಚ
ವಾಧಿ೯‌O  ವಧೂಗೃಹಮತೀತ್ಯ ಸಮಧ್ಯನಾಥೋ
ಯತ್ರಾಸಿ ತದ್ರಜತಪೀಠ ಪುರಂ ಗರೀಯಃ’

ಶ್ರೀವಾದಿರಾಜ ಸ್ವಾಮಿಗಳ `ತೀರ್ಥ ಪ್ರಬಂಧ’ ಕೃತಿಯಲ್ಲಿ ಮೂಡಿಬಂದ ಉಡುಪಿಯ ವರ್ಣನೆಯಿದು. “ಗೋಪಿಕಾಂಗನೆಯರಿಂದ ಸೇವೆಯನ್ನು ಕೈಗೊಳ್ಳುತ್ತಿದ್ದ  ಪರಮ ದೇವೋತ್ತಮ ಪುರುಷ ಶ್ರೀಕೃಷ್ಣನು ಸಕಲ ಸೌಭಾಗ್ಯಗಳ ಗಣಿಯಾಗಿದ್ದ ದ್ವಾರಕಾನಗರಿಯನ್ನೇ ತೊರೆದು, ಹೆಂಡತಿಯ ತವರು ಮನೆಯಾಗಿದ್ದ ಸಮುದ್ರವನ್ನು ದಾಟಿಕೊಂಡು ಮಧ್ವಮುನಿಯಿಂದ ಪೂಜೆಕೈಗೊಳ್ಳಲು ಬಂದು ನೆಲೆನಿಂತ ರಜತಪೀಠ ಪುರವೇ ಶ್ರೇಷ್ಠವಾದುದು”- ಎಂಬ ಈ ವರ್ಣನೆಯಲ್ಲಿ ಶ್ರೀಕೃಷ್ಣನ ಗುಣಗಾನಕ್ಕಿಂತಲೂ ಪರೋಕ್ಷವಾಗಿ ಉಡುಪಿಯ ಪಾರಮ್ಯ ಚಿತ್ರಿತವಾಗಿದೆ. ಪೌರಾಣಿಕ ಕಥೆಯೊಂದು ಶ್ರೀಕೃಷ್ಣನ ಅರ್ಚಾವಿಗ್ರಹದ ನಿರ್ಮಾಣವನ್ನು ಹೀಗೆ ಹೇಳುತ್ತದೆ: ಹಿಂದೊಮ್ಮೆ ದ್ವಾಪರ ಯುಗದಲ್ಲಿ ರುಕ್ಮಿಣೀದೇವಿಗೆ ಶ್ರೀಕೃಷ್ಣನ ಬಾಲಲೀಲೆಯನ್ನು ನೋಡುವ ಹಂಬಲವಾಯಿತು. ಆಗ ಸ್ವಯಂ ಭಗವಂತನೇ ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಸಿ, ಸಾಲಿಗ್ರಾಮ ಶಿಲೆಯಲ್ಲಿ ತನ್ನ ಮೂರ್ತಿಯನ್ನು ನಿರ್ಮಿಸಲು ಕೇಳಿಕೊಂಡನಂತೆ. ಹಾಗೆ ಮೈ ತಳೆದ ಮುದ್ದಾದ ಮೂರ್ತಿಯೇ ಉಡುಪಿಯ ಕೃಷ್ಣ ವಿಗ್ರಹ. ದ್ವಾರಕೆ ಸಮುದ್ರದಲ್ಲಿ ಮುಳುಗಿದಾಗ ಈ ಮೂರ್ತಿಯೂ ಕಡಲ ಒಡಲಲ್ಲಿ ಸೇರಿಹೋಯಿತು. ದ್ವಾರಕೆಯ ಮಣ್ಣಲ್ಲಿ ಕೂಡಿಕೊಂಡು, ಗೋಪಿ ಚಂದನದ ಹೆಂಟೆಯಲ್ಲಿ ಹುದುಗಿಕೊಂಡಿತು. ಕಲಿಯುಗದಲ್ಲಿ ವ್ಯಾಪಾರಿಗಳ ಸರಕಿನೊಂದಿಗೆ ಹಡಗನ್ನು ಏರಿ ಮಲ್ಪೆಯ ಕಡಲತೀರಕ್ಕೆ ಬಂದಿತು. ಆಚಾರ್ಯ ಮಧ್ವರು ಅದನ್ನು ಪ್ರೀತಿಯಿಂದ ಪಡೆದು ಮಲ್ಪೆಯಿಂದ ಉಡುಪಿಯವರೆಗೆ ಭಕ್ತಿಯಿಂದ ದ್ವಾದಶ ಸ್ತೋತ್ರವನ್ನು ಹಾಡುತ್ತಾ ತಲೆಯ ಮೇಲೆ ಹೊತ್ತು ತಂದರು.

`ಬಂಧಕೋ ಭವ ಪಾಶೇನ
ಭವಪಾಶಾಚ್ಚ ಮೋಚಕಃ’

ಹೌದು! ಭವಬಂಧನಕ್ಕೆ ಒಳಪಡಿಸುವವನೂ ಅವನೇ. ಅದರಿಂದ ಬಿಡುಗಡೆಗೊಳಿಸುವವನೂ ಅವನೇ. ಕಡೆಗೋಲು – ಹಗ್ಗ ಹಿಡಿದು ನಿಂತ ಈ ಕೃಷ್ಣಮೂರ್ತಿ ನಿಜವಾದ ಅರ್ಥದಲ್ಲಿ ಪ್ರತಿಮೆ! ಪ್ರತಿಮೆ ಎಂದರೆ ಪ್ರತಿಯಾಗಿ ನಿಂತ ಸಂಕೇತವೆಂದು ಗ್ರಹಿಸಿದಾಗ ಹೃದಯಮಂಥನದಿಂದ ಭಕ್ತಿಯ ನವನೀತ ತೆಗೆದರೆ, ಸಂಸಾರ ಬಂಧನದಿಂದ ಮುಕ್ತಿಗೊಳಿಸುತ್ತೇನೆಂದು ಸೂಚಿಸುವ ಹಾಗೆ ಭಾಸವಾಗುತ್ತದೆ.

ಕ್ರಿ.ಶ. ೭ನೇ ಶತಮಾನದಿಂದ ೧೨ನೇ ಶತಮಾನದವರೆಗೆ ಭಾರತದಲ್ಲಿ ಆಧ್ಯಾತ್ಮಿಕ ವಿಪ್ಲವ ನಡೆದಿತ್ತು. ಬೌದ್ಧ ಧರ್ಮದ ನೈರಾತ್ಮವಾದ, ಜಗತ್ತು ಮಿಥ್ಯೆಯೆಂಬ ಶಂಕರಾಚಾರ್ಯರ ಅದ್ವೈತವಾದ, ಭಾಸ್ಕರಾಚಾರ್ಯರ ಸತ್ಯವಾದ, ರಾಮಾನುಜರ ವಿಶಿಷ್ಟಾದ್ವೈತವಾದಗಳಿಂದ ಭಾರತದ ಜನಮನ ಗೊಂದಲದ ಗೂಡಾಗಿತ್ತು. ಆಗಲೇ ಕರ್ನಾಟಕದಲ್ಲಿ ಜೈನಧರ್ಮ ರಾಜಾಶ್ರಯವನ್ನು ಪಡೆದುಕೊಂಡಿತ್ತು. ಕರಾವಳಿ ಕರ್ನಾಟಕದಲ್ಲಿ ಆಗಲೇ ನಾಥಪಂಥ, ಶಾಕ್ತಪಂಥಗಳು ಪ್ರಬಲವಾಗಿದ್ದವು. ಉತ್ತರಭಾರತದಲ್ಲಿ ಮುಸಲ್ಮಾನ ಧರ್ಮವು ಪ್ರಭುತ್ವವನ್ನು ಪಡೆದಾಗಿತ್ತು. ಕ್ಸೈಸ್ತ ಧರ್ಮವು ಸಂತ ಥಾಮಸ್ ನಂತಹವರಿಂದ ಭಾರತಕ್ಕೆ ಕಾಲಿಟ್ಟು ವ್ಯಾಪಕ ಪ್ರಚಾರ ಪಡೆಯುತ್ತಿತ್ತು. ಉಡುಪಿಯ ಕಲ್ಯಾಣಪುರದಲ್ಲಿ ಕ್ರಿ.ಶ. ೧೩ನೇ ಶತಮಾನದಲ್ಲೇ ಇಗರ್ಜಿಯೊಂದು ಸ್ಥಾಪನೆಗೊಂಡಿತ್ತು. ಉತ್ತರ ಕರ್ನಾಟಕದಲ್ಲಿ ಶಿವ ಶರಣರ ಕ್ರಾಂತಿ ನಡೆದು ವೀರಶೈವ ಧರ್ಮ ಮೊಳಕೆಯೊಡೆದಿತ್ತು. ಇಂತಹ ಕಾಲದಲ್ಲಿ ಉಡುಪಿಯಲ್ಲಿ ಕೃಷ್ಣಭಕ್ತಿಯ ಕಿರಣವೊಂದು ಮೂಡಿತು.

ಉಡುಪಿಯ ದಕ್ಷಿಣಕ್ಕೆ ಪಾಜಕವೆಂಬ ಪುಟ್ಟಗ್ರಾಮದಲ್ಲಿ ಆಚಾರ್ಯ ಮಧ್ವರು ಕ್ರಿ.ಶ. ೧೨೩೮ರಲ್ಲಿ ಜನಿಸಿದರು. ತಂದೆ ನಾರಾಯಣ ನಡ್ಯಂತಿಲ್ಲಾಯರು, ತಾಯಿ ವೇದವತಿ. ಮಗುವಿಗೆ ಬಾಲ್ಯದಲ್ಲಿ ವಾಸುದೇವ ಎಂದು ಹೆಸರಿಟ್ಟರು. ಆಗ ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಉತ್ತರಭಾರತದ ಯತಿವರೇಣ್ಯರಾದ ಅಚ್ಯುತಪ್ರಜ್ಞ ಎಂಬುವರು ಅದ್ವೈತವೇದಾಂತ ಗುರುಕುಲವನ್ನು ನಡೆಸುತ್ತಿದ್ದರು. ಇವರ ಶಿಷ್ಯತ್ವವನ್ನು ಸ್ವೀಕರಿಸಿ ಬೆಳೆದ ಬಾಲಕ ವಾಸುದೇವ ಅದ್ವೈತದ ಅವೈಚಾರಿಕತೆಯನ್ನು ಪ್ರಶ್ನಿಸಿದ. ಇದರಿಂದಾಗಿ `ತತ್ತ್ವವಾದ’ ಎಂಬ ಹೊಸದರ್ಶನವೊಂದು ಮೂಡಿ ಭಾರತೀಯ ಅಧ್ಯಾತ್ಮವನ್ನು ಬೆಳಗುವಂತಾಯಿತು.

ಉಡುಪಿಯನ್ನು ಶಾಸನಗಳು `ರಜತಪೀಠ’ವೆಂದು ಹಾಡಿ ಹೊಗಳಿವೆ. ಇದಕ್ಕೆ ಪುರಾಣದ ಕಥೆಯೊಂದರ ಆಧಾರವಿದೆ. ಹಿಂದೊಮ್ಮೆ ಉಡುಪತಿಯಾದ (ನಕ್ಷತ್ರರಾಜ) ಚಂದ್ರನು ಪರಶಿವನನ್ನು ಮೆಚ್ಚಿಸಲು ಇಲ್ಲಿರುವ `ಅಬ್ಜಾರಣ್ಯ’ದಲ್ಲಿ ತಪಸ್ಸು ಮಾಡಿದ. ಅವನಿಗೆ ಶಿವನು ಪ್ರತ್ಯಕ್ಷನಾದ ಕಾರಣದಿಂದ ಈ ಸ್ಥಳಕ್ಕೆ `ಉಡುಪಿ’ ಎಂದು ಹೆಸರಾಯಿತು. ಇನ್ನೊಂದು ಕಥೆಯ ಪ್ರಕಾರ ಹಿಂದೊಮ್ಮೆ ಈ ಪ್ರದೇಶದ ರಾಜ ರಾಮಭೋಜನೆಂಬುವನು ವಾಜಪೇಯವೆಂಬ ಯಜ್ಞಕೈಗೊಂಡಾಗ ಪರಶುರಾಮ ಮುನಿಯನ್ನು ಪ್ರಾರ್ಥಿಸಿದನು. ಆ ಕೂಡಲೇ ಪರಶುರಾಮನು ಬಂದು ದರ್ಶನ ನೀಡಿದಾಗ, ಅವನಿಗೆ ಬೆಳ್ಳಿಯ ಮಣಿಯನ್ನು ಕೊಟ್ಟು ಉಪಚರಿಸಲಾಯಿತು. ಹೀಗೆ `ರಜತ ಪೀಠ’ ಎಂಬ ಹೆಸರುಂಟಾಯಿತೆಂದು ಹೇಳುತ್ತಾರೆ. ಆದರೆ `ಕೆಳದಿನೃಪ ವಿಜಯಂ’ ಕಾವ್ಯದಲ್ಲಿ `ಉಡುಪಿನ’ ಎಂಬ ಪ್ರಯೋಗವಿರುವುದನ್ನು ಗಮನಿಸಿದರೆ, ಈ ಸ್ಥಳದ ಹೆಸರು `ಉಡುಪು’ ಎಂದಿರಬಹುದೆಂಬ ಊಹೆಯಿದೆ. ತುಳುಭಾಷೆಯ ಜನರು `ಒಡಿಪು’ ಎಂದೇ ಈಗಲೂ ಕರೆಯುವುದರಿಂದ ಉಡುಪಿಯ ಪ್ರಾಚೀನ ಹೆಸರು `ಒಡಿಪು’ ಎಂಬುದೇ ಸರಿಯೆಂದು ತೋರುತ್ತದೆ. ತುಳುವಿನಲ್ಲಿ ಒಡಿಪು ಎಂದರೆ ನೀರಝರಿ, ಕಿರಿದಾದ ತೋಡು ಎಂಬ ಅರ್ಥವಿದೆ. ಇದು ಉಡುಪಿಯ ಪ್ರಾಕೃತಿಕ ಲಕ್ಷಣಕ್ಕೂ ಹೊಂದಿಕೆಯಾಗುವ ಹೆಸರೇ ಹೌದು.

ಅಷ್ಟಮಠಗಳ ಇಷ್ಟ ಮೂರುತಿ

ಆಚಾರ್ಯ ಮಧ್ವರಿಗೆ ಎಂಟು ಜನ ಶಿಷ್ಯರು. ಇವರುಗಳೇ ಸಂನ್ಯಾಸದೀಕ್ಷೆಯನ್ನು ಪಡೆದು ಅಷ್ಟಮಠಗಳ ಮೂಲಯತಿಗಳಾದರು. ಪ್ರಾಚೀನ ಶ್ಲೋಕವೊಂದು ಅನುಕ್ರಮವಾಗಿ ಈ ಎಂಟುಮಂದಿ ಯತಿಗಳನ್ನು ಹೀಗೆ ಉಲ್ಲೇಖಿಸುತ್ತದೆ.

ವಂದೇ ಹೃಷಿಕೇಶಮಧೋ ನೃಸಿಂಹಂ
ಜನಾರ್ದನಂ ಚಿಂತಯ ಧೀರುಪೇಂದ್ರಂ |
ಶ್ರೀವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಾಚೇಹಮಧೋಕ್ಷಜಂ ಚ ||

ಇದಕ್ಕೆ ಅನುಗುಣವಾಗಿ ಶ್ರೀಹೃಷೀಕೇಶತೀರ್ಥ (ಫಲಿಮಾರು ಮಠ), ಶ್ರೀ ನೃಸಿಂಹ (ನರಹರಿ) ತೀರ್ಥ (ಅದಮಾರು ಮಠ), ಶ್ರೀ ಜನಾರ್ದನ ತೀರ್ಥ (ಕೃಷ್ಣಾಪುರ ಮಠ), ಶ್ರೀ ಉಪೇಂದ್ರ ತೀರ್ಥ (ಪುತ್ತಿಗೆಮಠ), ಶ್ರೀ ವಾಮನ ತೀರ್ಥ (ಶಿರೂರು ಮಠ), ಶ್ರೀ ವಿಷ್ಣುತೀರ್ಥ (ಸೋದೆ ಮಠ), ಶ್ರೀರಾಮತೀರ್ಥ (ಕಾಣಿಯೂರು ಮಠ), ಶ್ರೀ ಅಧೋಕ್ಷಜ ತೀರ್ಥ (ಪೇಜಾವರ ಮಠ) – ಎಂಟು ಮಠಗಳ ಮೂಲ ಯತಿಗಳು. ಕ್ರಮವಾಗಿ ಈ ಎಂಟು ಮಠಗಳಿಗೆ ಆಚಾರ್ಯಮಧ್ವರು ಶ್ರೀರಾಮ, ಕಾಳಿಯ ಮರ್ದನ, ಕಾಳಿಯ ಮರ್ದನ, ವಿಟ್ಠಲ, ವಿಟ್ಠಲ, ಭೂವರಾಹ, ನರಸಿಂಹ, ವಿಟ್ಠಲ ಪ್ರತಿಮೆಗಳನ್ನು ಉಪಾಸ್ಯಮೂರ್ತಿಗಳನ್ನಾಗಿ ನೀಡಿದರು. ಆಚಾರ್ಯರು ಭಗವಂತನ ದಶಾವತಾರಗಳಲ್ಲಿ ನಾಲ್ಕು ಅವತಾರಗಳ ಮೂರ್ತಿಗಳನ್ನು ಮಾತ್ರ ನೀಡಿರುವುದು ಸ್ವಾರಸ್ಯಕರವಾಗಿದೆ. ಶ್ರೀಕೃಷ್ಣ, ಶ್ರೀರಾಮ, ನರಸಿಂಹ ಮತ್ತು ವರಾಹಮೂರ್ತಿಗಳು.

ಓಂಕಾರದ ನಾಲ್ಕು ಅಕ್ಷರಗಳಾದ ಅಕಾರ, ಉಕಾರ, ಮಕಾರ ಮತ್ತು ನಾದಗಳನ್ನು ಪ್ರತಿನಿಧಿಸುತ್ತವೆ ಎಂಬುದೇ ಇಲ್ಲಿಯ ಆಧ್ಯಾತ್ಮಿಕ ರ‌ಹಸ್ಯ.

ಪರ್ಯಾಯ ಉತ್ಸವ

ಶ್ರೀಕೃಷ್ಣನ ಪೂಜಾಸರದಿಯನ್ನು `ಪರ್ಯಾಯ’ ಎಂದು ಕರೆಯುವುದು ಜಗತ್‌ಪ್ರಸಿದ್ಧ. ಎರಡು ತಿಂಗಳಿಗೊಮ್ಮೆ ಇದ್ದ ಈ ಪೂಜಾ ಪರ್ಯಾಯವನ್ನು ಎರಡು ವರ್ಷಗಳಿಗೆ ಬದಲಿಸಿದ್ದು ಶ್ರೀವಾದಿರಾಜತೀರ್ಥರು ಎಂಬುದು ಉಲ್ಲೇಖಾರ್ಹ. ಕ್ರಿ.ಶ. ೧೫೨೨ರಲ್ಲಿ ಆರಂಭವಾದ ಮೊದಲ ಪರ್ಯಾಯ ಎಂಟುಮಠಗಳಿಗೆ ಹದಿನಾರು ವರ್ಷಕಾಲದಂತೆ ನಡೆದು, ಇದುವರೆಗೆ ಮೂವತ್ತು ಆವರ್ತ ತಿರುಗಿದೆ. ಕ್ರಿ.ಶ. ೨೦೦೨ರಲ್ಲಿ ೩೧ನೇ ಆವರ್ತ ಆರಂಭವಾಗಿದೆ.

ಶ್ರೀವಾದಿರಾಜಸ್ವಾಮಿಗಳು `ಪರ್ಯಾಯ ಪರಂಪರೆ’ಯ ಜೊತೆಗೆ ಅನೇಕ ಹೊಸತುಗಳ ರೂವಾರಿ. ಉಡುಪಿಯಲ್ಲಿ ರಥೋತ್ಸವ ಕ್ರಮವನ್ನು ಜಾರಿಗೆ ತಂದು ಧಾರ್ಮಿಕ ಸಮಾರಂಭಗಳಿಗೆ ಸಾಮಾಜಿಕ ಆಯಾಯವನ್ನು ತಂದುಕೊಟ್ಟವರು ಅವರು. ಕನಕದಾಸರು ಶ್ರೀಕೃಷ್ಣನಿಗೆ ಅರ್ಪಿಸುತ್ತಿದ್ದ ಗಂಜಿ ನೈವೇದ್ಯದ ಸಂಗತಿಯನ್ನು ತಿಳಿದು ಅವನ ಬಳಿಕ `ನಿತ್ಯ ನೈವೇದ್ಯ’ದಲ್ಲಿ ಸೇರಿಸಿದ್ದು ವಾದಿರಾಜರಿಗಿದ್ದ ಕನಕ ಪ್ರೀತಿಗೆ ಸಾಕ್ಷಿ. ಕನಕನು ವಾಸವಾಗಿದ್ದ ಗುಡಿಸಲು ವಾದಿರಾಜರಿಂದಾಗಿ `ಕನಕನ ಗುಡಿ’ಯಾಗಿದ್ದು ಇತಿಹಾಸ. ಕೃಷ್ಣಮಠದ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಕನಕದಾಸನಿಗೆ ಶ್ರೀಕೃಷ್ಣದರ್ಶನವಾದುದನ್ನು ಮುಂದಿನ ತಲೆಮಾರಿಗೆ ತಿಳಿಸುವುದಕ್ಕೋಸ್ಕರ `ಕನಕನ ಕಿಂಡಿ’ಯನ್ನು ಶಾಶ್ವತಗೊಳಿಸಿದ ಶ್ರೇಯಸ್ಸೂ ವಾದಿರಾಜರಿಗೇ ಸಲ್ಲಬೇಕು. ಜಾತಿಯಲ್ಲಿ ಅವಮಾನಗೊಂಡ ಬ್ರಾಹ್ಮಣವರ್ಗವೊಂದಕ್ಕೆ ಜೀವನೋಪಾಯಕ್ಕಾಗಿ ಗುಳ್ಳ ಬದನೆಕಾಯಿಯ ಬೀಜವನ್ನು ಕೊಟ್ಟು ಅನುಗ್ರಹಸಿದ ಐತಿಹ್ಯವಂತೂ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿ.

ಬಂಗಾಲದ ಶ್ರೀಚೈತನ್ಯ ಮಹಾಪ್ರಭುಗಳು ಶ್ರೀವಾದಿರಾಜತೀರ್ಥರ ಕಾಲದಲ್ಲಿ ಉಡುಪಿಗೆ ಬಂದಿದ್ದರೆನ್ನುವುದು ಗಮನಾರ್ಹ. ಶ್ರೀಮಾಧ್ವ ಗೌಡೀಯ ಸಂಪ್ರದಾಯ ಬಂಗಾಳದಲ್ಲಿ ಶ್ರೀಚೈತನ್ಯರಿಂದ ಬೆಳಗಿದುದನ್ನು ಇಲ್ಲಿ ಸ್ಮರಿಸಬಹುದು.

ಹರಿದಾಸ ಕೇಂದ್ರ

ಕರ್ನಾಟಕದ ಸಾಹಿತ್ಯಚರಿತ್ರೆಯಲ್ಲಿ `ದಾಸಸಾಹಿತ್ಯ’ದ ಸ್ಥಾನ ಮಹತ್ತ್ವ ಪೂರ್ಣವಾದುದು. ಅಂತಹ ದಾಸಸಾಹಿತ್ಯ ಮೊದಲು ಪಲ್ಲವಿಸಿದ್ದು ಉಡುಪಿಯಲ್ಲೆಂಬುದು ಗಮನಾರ್ಹ. ಅದಮಾರು ಮಠದ ಮೂಲಯತಿಗಳಾದ ಶ್ರೀ ನರಹರಿ ತೀರ್ಥರೇ ಮೊತ್ತಮೊದಲು ಕನ್ನಡದಲ್ಲಿ ಕೀರ್ತನೆಗಳನ್ನು ಬರೆದವರು. ದಾಸ ಸಾಹಿತ್ಯದ ಅಧ್ವರ್ಯುಗಳಾದ ಪುರಂದರದಾಸ, ಕನಕದಾಸರುಗಳು ಉಡುಪಿಯ ರಥಬೀದಿಯಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದರು. ವಾದಿರಾಜ ತೀರ್ಥರು ಉಡುಪಿಯ ಸೋದೆಮಠದ ಯತಿಗಳಾಗಿ ಸಂಸ್ಕೃತ ಕಾವ್ಯಗಳ ಜೊತೆಗೆ ಕನ್ನಡ ಕೀರ್ತನೆಗಳನ್ನು ರಚಿಸಿ ಜನಮನದಲ್ಲಿ ಹರಿಭಕ್ತಿಯನ್ನು ಬಿತ್ತಿದವರು. `ತೀರ್ಥ ಪ್ರಬಂಧ’ ಎಂಬ ಅವರ ಕೃತಿ ಸಂಸ್ಕೃತದ ಮೊದಲ ಪ್ರವಾಸ ಸಾಹಿತ್ಯ. ಸ್ವಾಮೀಜಿಯಾಗಿದ್ದುಕೊಂಡೇ ಅವರು `ಮಂಡೆ ಬೋಳಾದರೇನು ಮನಶುದ್ಧಿಯಿಲ್ಲ’ ಎಂದು ವಿಡಂಬಿಸಿದ್ದು ಅಸಾಧಾರಣ ಅಭಿವ್ಯಕ್ತಿಯೇ ಸರಿ. ಹರಿಜನರಿಗಾಗಿ ಅವರು ತುಳು ಭಾಷೆಯಲ್ಲಿ ರಚಿಸಿದ “ಲೇಲೆ ಲೇಲೆಗಾ” ಎಂಬ ದಶಾವತಾರ ಸ್ತುತಿ ಸಾಮಾಜಿಕ ಸ್ಪಂದನದ ದೃಷ್ಟಿಯಲ್ಲಿ ಗಮನಾರ್ಹ. ಕುಡುಮವಾಗಿದ್ದ ಕ್ಷೇತ್ರವನ್ನು `ಧರ್ಮಸ್ಥಳ’ ಮಾಡಿದ್ದು, ಎಲ್ಲೂರಿನ ಶಿವದೇಗುಲ ಮತ್ತು ಮೂಡಬಿದಿರೆಯ ಜೈನ ಬಸದಿಗೆ ಅವರ ಭೇಟಿ ಆ ಕಾಲದ ಕ್ರಾಂತಿಕಾರಿ ಹೆಜ್ಜೆಗಳೆಂಬುದನ್ನು ಮರೆಯುವಂತಿಲ್ಲ.

ಕನಕದಾಸರು ದಾಸ ದೀಕ್ಷೆಯನ್ನು ಪಡೆದದ್ದೇ ಉಡುಪಿಯಲ್ಲಿ ಎಂದು ಸಂಶೋಧನೆಯೊಂದು ಹೇಳುತ್ತದೆ. ಬಾಳೆಹಣ್ಣಿನ ಪ್ರಸಂಗ, ನಾನು ಹೋದರೆ ಹೋದೇನು, ಪಾತ್ರೆಯನ್ನು ತಿಕ್ಕಿ ತೊಳೆದು ಬೆಳ್ಳಗಾಗಿಸುವುದೇ ಮೊದಲಾದ ಅನೇಕ ಘಟನೆಗಳು ಕನಕದಾಸರು ಉಡುಪಿಯಲ್ಲಿ ಇದ್ದಾಗಲೇ ನಡೆದವುಗಳೆಂದು ಅಭಿಪ್ರಾಯವಿದೆ. “ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು”, `ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಮುಂತಾದ ಕೀರ್ತನೆಗಳನ್ನು  ಕನಕದಾಸರು ಉಡುಪಿಯಲ್ಲಿದ್ದಾಗಲೇ ರಚಿಸಿದ್ದರಂತೆ. ಮಂತ್ರಾಲಯದ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳೂ ಉಡುಪಿ ಕೃಷ್ಣನನ್ನು ಕಂಡೇ `ಇಂದು ಎನಗೆ ಗೋವಿಂದ’ ಹಾಡಿದರೆಂದು ಹೇಳುತ್ತಾರೆ.

ಹೀಗೆ ಆರಂಭವಾದ ದಾಸಸಾಹಿತ್ಯ ಚಳವಳಿ ಆಧುನಿಕ ಕಾಲದಲ್ಲೂ ಉಡುಪಿಯಲ್ಲಿ ಮುಂದುವರಿಯುತ್ತಿರುವುದು ಮತ್ತೊಂದು ಮುಖ್ಯ ಸಂಗತಿ. ಜರ್ಮನಿಯ ಹರ್ಮನ್ ಮೊಗ್ಲಿಂಗ್ ಕ್ರಿ.ಶ. ೧೮೫೦ರಲ್ಲಿ ನೆಕ್ಕಾರು ಕೃಷ್ಣದಾಸರ `ದಾಸರ ಪದಗಳು’ ಸಂಕಲನವನ್ನು ಪ್ರಕಟಿಸಿದ್ದರು. ಕ್ರಿ.ಶ. ೧೮೭೩ರ ಒಂದು ಲೇಖನದಲ್ಲಿ ರೆವರೆಂಡ್ ಕಿಟೆಲ್ ಅವರು ಕೃಷ್ಣದಾಸರನ್ನು ಕನಕಪುರಂದರರ ಸಾಲಿನಲ್ಲಿ ನಿಲ್ಲಬಲ್ಲವರೆಂಬುದನ್ನು ಬರೆದಿದ್ದಾರೆ. `ವರಾಹ ತಿಮ್ಮಪ್ಪ’ ಎಂಬ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸುತ್ತಿದ್ದ ನೆಕ್ಕಾರು ಕೃಷ್ಣದಾಸರು (ಕ್ರಿ.ಶ. ೧೭೬೦) ಉಡುಪಿಯ ಹತ್ತಿರದ ಪೆರಂಪಳ್ಳಿಯವರು. ಇವರು ರಚಿಸಿದ ಸಮಗ್ರ ಕೀರ್ತನೆಗಳು ಇತ್ತೀಚೆಗೆ ಪ್ರಕಟವಾಗಿದೆ. ಮೂಲ್ಕಿಯ ವೆಂಕಟರಮಣ ದೇವರ ಭಕ್ತರಾದ ವೆಂಕಣ್ಣಕವಿ (ಕ್ರಿ.ಶ. ೧೭೫೦-೧೮೩೦), ಪಾವಂಜೆ ಲಕ್ಷ್ಮೀನಾರಣಪ್ಪಯ್ಯ (ಕ್ರಿ.ಶ. ೧೮೫೪ (೧೯೨೪), ಹೆಬ್ರಿ ಖಂಡಿಗ ಪದ್ಮನಾಭ ಜೆನ್ನಿ (ಕ್ರಿ.ಶ. ೧೯೦೮-೧೯೮೩), ಸಾಂತ್ಯಾರು ಮಂಜುನಾಥ ಉಪಾಧ್ಯಾಯ (ಕ್ರಿ.ಶ. ೧೯೦೯-೧೯೯೦) ಮುಂತಾದ ಅನೇಕರು ಕೀರ್ತನೆಗಳನ್ನು ರಚಿಸಿ ಉಡುಪಿಯ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಪರಂಪರೆ ಈಗಲೂ ಮುಂದುವರಿದಿದೆ.

ದಾಸ ಸಾಹಿತ್ಯದ ಪ್ರಕಟಣೆಯಲ್ಲಿಯೂ ಉಡುಪಿಯ ಕೊಡುಗೆ ಅವಿಸ್ಮರಣೀಯವಾದುದು. ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯದ (ಸ್ಥಾಪನೆ ಕ್ರಿ.ಶ. ೧೯೦೮) ದಿ. ಪಾವಂಜೆ ಗುರುರಾವ್ ಅವರು ಈ ನಿಟ್ಟಿನಲ್ಲಿ ಪ್ರಾತಃಸ್ಮರಣೀಯರು. ಸುಮಾರು ೪೫೦ ಗ್ರಂಥಗಳ ಮೂಲಕ ಹತ್ತುಸಾವಿರ ಪುಟದ ದಾಸ ವಾಙ್ಮಯವನ್ನು ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಮಠದೇಗುಲಗಳ ನಗರಿ

ಉಡುಪಿಯಲ್ಲಿ ಶ್ರೀಕೃಷ್ಣಮಠ ಹಾಗೂ ಅದಕ್ಕೆ ಸಂಬಂಧಿಸಿದ ಅಷ್ಟಮಠಗಳು ಮಾತ್ರ ಇರುವುದಲ್ಲ. ನಗರದ ಸುತ್ತ ಮುತ್ತ ಅನೇಕ ದೇವಾಲಯಗಳು ಜನಮನದ ಶ್ರದ್ಧಾ ಭಕ್ತಿಗೆ ಕನ್ನಡಿ ಹಿಡಿಯುತ್ತವೆ. ಕಡಲ ತಡಿಯಲ್ಲಿ ಗೋಪೀಚಂದನದ ಉಂಡೆಯಲ್ಲಿ ಶ್ರೀಕೃಷ್ಣನ ವಿಗ್ರಹದೊಂದಿಗೆ ಬಲರಾಮನ ವಿಗ್ರಹ ಕೂಡ ದೊರಕಿತ್ತೆಂದು ಇತಿಹಾಸ ಹೇಳುತ್ತದೆ. ಆದರೆ ಆ ಬಲರಾಮ ಉಡುಪಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿಲ್ಲ. ಅವನು ನೆಲೆ ನಿಂತಿದ್ದು ಮಲ್ಪೆಗೆ ಹತ್ತಿರದ ವಡಭಾಂಡೇಶ್ವರದಲ್ಲಿ. ಸಮೀಪದ ಕೊಡವೂರು ಶಂಕರ ನಾರಾಯಣ ದೇವಸ್ಥಾನಕೂಡಾ ಪ್ರಾಚೀನವಾದುದು. ಇಲ್ಲಿಯ ಭಕ್ತಕವಿ `ಅರುಣಾಬ್ಜ’ನೆಂಬವನು (ಕ್ರಿ.ಶ. ೧೩೮೩) ತುಳುಭಾಷೆಯಲ್ಲಿ ರಚಿಸಿದ ಮಹಾಭಾರತ ಕಾವ್ಯದಲ್ಲಿ ಶಂಕರ ನಾರಾಯಣ ದೇವರನ್ನು ಸ್ತುತಿಸಿರುವುದು ವಿಶೇಷವಾಗಿದೆ. ಹಾಗೆಯೇ ಈಗ ಉಡುಪಿಯ ಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿರುವ `ಎಣ್ಣೆ ಕೃಷ್ಣ’ ಮೂಲತಃ ಕಂಗುಮಠ ಎಂಬಲ್ಲಿಯ ವೇಣುಗೋಪಾಲ ಕೃಷ್ಣಸ್ವಾಮಿ. ನಿತ್ಯ ಪೂಜೆಗೆ ಸಂಕಷ್ಟ ಒದಗಿದಾಗ ಅರ್ಚಕರು ಈ ಮೂರ್ತಿಯನ್ನು ಉಡುಪಿಯ ಕೃಷ್ಣ ಮಠಕ್ಕೆ ನೀಡಿದರೆಂಬ ಐತಿಹ್ಯವಿದೆ.

ಉಡುಪಿಯ ಪರಿಸರದಲ್ಲಿ ಇಂದ್ರಾಣಿ ಪಂಚದುರ್ಗೆ, ಕಡಿಯಾಳಿ ಮಹಿಷಮರ್ದಿನಿ, ಅಲೆವೂರು ದುರ್ಗಾಪರಮೇಶ್ವರಿ, ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಾಲಯಗಳಿವೆ. ಆಚಾರ್ಯಮಧ್ವರ ಹುಟ್ಟುರಾದ ಪಾಜಕದ ಸಮೀಪ ಕುಂಜಾರುಗಿರಿಯಲ್ಲಿ ವನದುರ್ಗೆ ನೆಲೆನಿಂತಿದ್ದಾಳೆ. ಪ್ರಾಚೀನಕಾಲದಲ್ಲಿ ಇದು ವಿಮಾನಗಿರಿ ಎಂದು ಪ್ರಸಿದ್ಧವಾಗಿತ್ತು. ಯಕ್ಷಗಾನ ಕವಿ ದೇವಿದಾಸನೆಂಬವನು ಈ ದುರ್ಗೆಯ ಭಕ್ತನಾಗಿದ್ದನೆಂದು ತಿಳಿದು ಬರುತ್ತದೆ. ಗದಾತೀರ್ಥ, ಪರಶುತೀರ್ಥ, ಬಾಣತೀರ್ಥ, ಪದ್ಮತೀರ್ಥಗಳು, ಪರಶುರಾಮ ದೇಗುಲ, ಮಧ್ವಾಚಾರ್ಯರ ಪಾದಚಿಹ್ನೆ- ಮುಂತಾದವುಗಳು ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳು.

ರಥಬೀದಿಯ ಕೇಂದ್ರಸ್ಥಾನದಲ್ಲಿರುವ ಅನಂತೇಶ್ವರ ದೇವಸ್ಥಾನವು ಐತಿಹಾಸಿಕ ಮಹತ್ತ್ವವನ್ನು ಪಡೆದ ದೇಗುಲ. ಗಜಪೃಷ್ಠಾಕಾರದಲ್ಲಿರುವ ಈ ದೇಗುಲದ ಗರ್ಭಗುಡಿ, ಅದರ ಮುಂದಿರುವ ಮಾನಸ್ತಂಭಗಳು ಗಮನಾರ್ಹ. ಈ ದೇಗುಲದ ಪ್ರದಕ್ಷಿಣ ಪಥದಲ್ಲೇ ಆಚಾರ್ಯ ಮಧ್ವರು ಪಿಂಗಳನಾಮ ಸಂವತ್ಸರದ ಮಾಘ ಶುದ್ಧ ನವಮಿಯಂದು (ಕ್ರಿ.ಶ. ೧೩೧೭) ಕಣ್ಮರೆಯಾದರು ಎಂದು ನಂಬಲಾಗಿದೆ. ಈ ದೇವಸ್ಥಾನದ ಎದುರಿಗೆ ಚಂದ್ರೇಶ್ವರ ದೇವಸ್ಥಾನವಿದೆ. ನೆಲದಮಟ್ಟದಿಂದ ಕೆಳಗಿರುವುದರಿಂದ ಈ ಪ್ರದೇಶವು ಹಿಂದೆ ಸರೋವರವಾಗಿದ್ದಿರಬಹುದೆಂಬ ಊಹೆಯಿದೆ. ರಥಬೀದಿಯ ಈಶಾನ್ಯ ಭಾಗದಲ್ಲಿ ಪುಷ್ಕರಣಿಯಿದ್ದು ಇದಕ್ಕೆ `ಮಧ್ವ ಸರೋವರ’ ಎಂಬ ಹೆಸರಿದೆ. ಇದರ ನೈಋತ್ಯ ಭಾಗದಲ್ಲಿ ಭಾಗೀರಥಿ ಗುಡಿಯಿದ್ದು ಕಾಶಿಯಿಂದ ಗಂಗೆಯೇ ಬಂದು ಇಲ್ಲಿ ನೆಲೆಸಿದಳೆಂಬ ನಂಬಿಕೆಯಿದೆ. ಕೃಷ್ಣ ಮಠದ ಉತ್ತರಕ್ಕೆ ಸುಬ್ರಹ್ಮಣ್ಯ ದೇವರ ಗುಡಿಯಿದ್ದು, ವಾದಿರಾಜಸ್ವಾಮಿಗಳ ಕಾಲದಲ್ಲಿ ವಿಜಯ ನಗರದ ದೊರೆಗಳು ಕೊಟ್ಟ ಚಿನ್ನಾಭರಣಗಳನ್ನು ಇಲ್ಲಿಯ ಭೂಮಿಯೊಳಗೆ ಇಡಲಾಗಿದೆ ಎಂದೂ ಹೇಳಲಾಗುತ್ತದೆ.

ಉಡುಪಿಯ ಪರಿಸರದಲ್ಲಿರುವ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ, ಅಂಬಲಪಾಡಿಯ ಲಕ್ಷ್ಮೀಜನಾರ್ದನ ದೇವಸ್ಥಾನ, ಕಾಪು ಜನಾರ್ದನ ದೇವಸ್ಥಾನ, ಕಟಪಾಡಿಯ ವೆಂಕಟರಮಣ ದೇವಸ್ಥಾನ, ಬನ್ನಂಜೆಯ ಮಹಾಲಿಂಗೇಶ್ವರ ದೇವಸ್ಥಾನ, ಸಗ್ರಿಯ ಸುಬ್ರಹ್ಮಣ್ಯದೇವಸ್ಥಾನ ಚಾರಿತ್ರಿಕ ಮಹತ್ತ್ವದ ದೇಗುಲಗಳು. ಈ ಪ್ರಾಚೀನ ದೇಗುಲಗಳ ವಾಸ್ತುಶಿಲ್ಪ, ದಾರುಶಿಲ್ಪಗಳು ಅಧ್ಯಯನಯೋಗ್ಯವಾಗಿವೆ. ಆದರೆ ಇತ್ತೀಚೆಗೆ ಜೀರ್ಣೋದ್ಧಾರದ ಮೂಲಕ ಆಧುನಿಕತೆ ಅಂಕುರಿಸಿದ್ದು ಕೂಡಾ ಅಷ್ಟೇ ಗಮನಾರ್ಹ.

ಉಡುಪಿ ಎಂಬುದು ವೈಕುಂಠ

`ತಾಳ ತಂಬೂರಿ ಕೈಯೊಳಗೆ
ವಿಠಲನ ಭಜನೆ ಮನದೊಳಗೆ
ರಾಮನ ಬಂಟ ಹನುಮಂತ
ಉಡುಪಿ ಎಂಬುದು ವೈಕುಂಠ’

ಹೀಗೆ ಹರಿದಾಸರು ಭಕ್ತಿಭಾವದಿಂದ ಹಾಡುತ್ತಾ ಕೃಷ್ಣನು ನೆಲೆನಿಂತ ಉಡುಪಿಯನ್ನು ಭೂಲೋಕದ ವೈಕುಂಠ ಎಂದು ಕೊಂಡಾಡಿದ್ದುಂಟು. ಎಲ್ಲ ಹರಿದಾಸರುಗಳೂ ಉಡುಪಿಗೆ ಬಂದು ಕೃಷ್ಣನ ಭಜನೆಯಲ್ಲಿ ಮೈಮರೆತವರೇ. ಶ್ರೀಪಾದರಾಜರು, ವ್ಯಾಸರಾಯರು, ರಾಘವೇಂದ್ರತೀರ್ಥರಾದಿಯಾಗಿ ಮಹಾನ್ ಯತಿವರೇಣ್ಯರು `ಆನಂದತೀರ್ಥ ಕರಾರ್ಚಿತ ಆನಂದಕಂದ’ನನ್ನು ಧ್ಯಾನಿಸಿದರು. ಶ್ರೀಚೈತನ್ಯ ಮಹಾಪ್ರಭುಗಳಂತೂ ವೃಂದಾವನದ ಮಂದಾರಗಂಧವನ್ನೇ ಇಲ್ಲಿಗೆ ತಂದರು. ಭಾವೀ ಸಮೀರ ವಾದಿರಾಜರು ವೈಕುಂಠದ ಸೊಬಗನ್ನೇ ತಂದರು.

`ದೇವರು ದೊಡ್ಡವನು’ ಎಂಬ ಕನ್ನಡದ ಆಡು ಮಾತಿನಲ್ಲಿ ಏಕವಚನ ಪ್ರಯೋಗದ ಆತ್ಮೀಯತೆಯಿದೆ. ಭಗವಂತನ ಮೇಲಿನ ಈ ಸಲುಗೆ ದಾಸಸಾಹಿತ್ಯದ ಪಂಚಭಾವಗಳಿಂದ ಬಂದುದಿರಬೇಕು. ಮೊನ್ನೆ ತಾನೇ ಉಡುಪಿಯ ಕೃಷ್ಣನ ಎದುರು ನಿಂತ ಹಣ್ಣು ಮುದುಕಿಯೊಬ್ಬಳು – `ಕೃಷ್ಣಾ…. ನೀನಿರುವವರೆಗೆ ನನಗೆ ಅನ್ನಹಾಕು’ ಎಂದು ಕೆನ್ನೆ ಬಡಿದುಕೊಂಡು ಪ್ರಾರ್ಥಿಸುತ್ತಿರುವುದನ್ನು ಕಂಡಾಗ, ಅವಳ ಅಂತರಂಗದಲ್ಲಿ ಕೃಷ್ಣನಿಗೆ ಮಗುವಿನ ಮುಗ್ಧ ಪ್ರೀತಿಯ ಸ್ಥಾನ ಇದ್ದ ಹಾಗೆನಿಸಿತು. ಉಡುಪಿಯಲ್ಲಿ  ಇನ್ನೂ ತಾಯಿ ಯಶೋದೆ ಜಗದೋದ್ಧಾರನನ್ನು ಮಗುವೆಂದು ತಿಳಿದು ಆಡಿಸುತ್ತಲೇ ಇದ್ದಾಳೆ!
Leave a Reply

Your email address will not be published. Required fields are marked *