Search
Saturday 4 April 2020
  • :
  • :

ಜಗನ್ನಾಥನಾಗಿ ಶ್ರೀ ಕೃಷ್ಣ

ಜಗನ್ನಾಥ ಎಂದರೆ “ಜಗತ್ತಿನ ಒಡೆಯ” ಎಂದು ಅರ್ಥ. ಅನೇಕ ವೈದಿಕ ಗ್ರಂಥಗಳು ಜಗನ್ನಾಥನು ಕೃಷ್ಣನೇ ಎಂದು ಹೇಳುತ್ತವೆ. ಬಲದೇವನು ಅವನ ಅಣ್ಣ, ಮತ್ತು ಸುಭದ್ರೆಯು ಅವನ ತಂಗಿ.

ಕೃಷ್ಣನು ಪರಿಪೂರ್ಣನೂ ಐಹಿಕ ಪ್ರಕೃತಿಗೆ  ಲೋಕೋತ್ತರನೂ ಆಗಿದ್ದರೂ, ತನ್ನ ಭಕ್ತರ ಪ್ರೇಮಸೇವೆಯನ್ನು ಸ್ವೀಕರಿಸುವುದಕ್ಕಾಗಿ ಅವನು ದೇವಸ್ಥಾನದಲ್ಲಿ ಕಲ್ಲು, ಲೋಹ, ಕಾಷ್ಠ ಅಥವಾ ಚಿತ್ರದ ರೂಪದಲ್ಲಿ ನಮ್ಮ ಮುಂದೆ ಅರ್ಚಾ ವಿಗ್ರಹದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಜಗನ್ನಾಥನು ಕೃಷ್ಣನ ಕಾಷ್ಠ ರೂಪ.

ಜಗನ್ನಾಥನು ಕೃಷ್ಣನಂತೆ ಕಾಣಿಸುವುದಿಲ್ಲವಾದ್ದರಿಂದ, ಅವನು ಹೇಗೆ ಕೃಷ್ಣನಾದಾನು ಎಂದು ಜನರು ಅಚ್ಚರಿಪಡಬಹುದು. ಜಗನ್ನಾಥನ ಅಪೂರ್ವ ರೂಪದ ಹಿನ್ನೆಲೆಯ ಕಥೆಯನ್ನು ಧರ್ಮಗ್ರಂಥಗಳು ಹೇಳುತ್ತವೆ.

ಜಗನ್ನಾಥನ ದಿವ್ಯಾವತಾರ

ಇಂದ್ರದ್ಯುಮ್ನ  ಮಹಾರಾಜನು ನೀಲ ಮಾಧವ ಎಂಬ ಅತ್ಯಂತ ಚೆಲುವಾದ ನೀಲಿಯ ಅರ್ಚಾ ವಿಗ್ರಹವನ್ನು ಕನಸಿನಲ್ಲಿ ನೋಡಿದ, ಅನಂತರ ಕೃಷ್ಣನ ಆ ರೂಪವನ್ನು ಅರಸಲು ಹಂಬಲಿಸಿದ್ದನ್ನು ಸ್ಕಾಂದ ಪುರಾಣವು ನಿರೂಪಿಸುತ್ತದೆ. ಈ ಹೆಸರು ಇಂದ್ರನೀಲ ಮಣಿಯ ಬಣ್ಣದ ದೇವತೆಯನ್ನು ಬಣ್ಣಿಸುತ್ತದೆ: ನೀಲ ಎಂದರೆ ನೀಲಿ ಮತ್ತು ಮಾಧವ ಎನ್ನುವುದು ಕೃಷ್ಣನ ಹೆಸರುಗಳಲ್ಲಿ ಒಂದು. ಇಂದ್ರದ್ಯುಮ್ನ ಮಹಾರಾಜನು ಈ ನೀಲಮಾಧವನನ್ನು ಅರಸಲು ತನ್ನ ದೂತರನ್ನು ಎಲ್ಲ ದಿಕ್ಕುಗಳಿಗೂ ಕಳುಹಿಸುತ್ತಾನೆ. ವಿದ್ಯಾಪತಿ ಎಂಬ ಬ್ರಾಹ್ಮಣನು ಯಶಸ್ವಿಯಾಗಿ ಹಿಂತಿರುಗುತ್ತಾನೆ. ಯಾವುದೋ ಮೂಲೆಯಲ್ಲಿರುವ ಒಂದು ಗುಡ್ಡಗಾಡಿನ ಹಳ್ಳಿಯಲ್ಲಿ ವಿಶ್ವವಸು ಎಂಬ ಹಂದಿ ಸಾಕಣೆಗಾರನೊಬ್ಬನು (ಸವರ) ರಹಸ್ಯವಾಗಿ ನೀಲಮಾಧವನನ್ನು ಆರಾಸುತ್ತಿರುತ್ತಾನೆ. ವಿದ್ಯಾಪತಿಯು ಕೆಲಸಮಯದ ಅನಂತರ ಇಂದ್ರದ್ಯುಮ್ನನೊಡನೆ ಆ ಸ್ಥಳಕ್ಕೆ ಮರಳಿ ಬಂದಾಗ ನೀಲ ಮಾಧವನು ಹೊರಟು ಹೋಗಿರುತ್ತಾನೆ. ಇಂದ್ರದ್ಯುಮ್ನ ಮಹಾರಾಜನು ತನ್ನ ಸೈನಿಕರಿಂದ ಆ ಹಳ್ಳಿಗೆ ಮುತ್ತಿಗೆ  ಹಾಕಿ ವಿಶ್ವವಸುವನ್ನು ಸೆರೆಹಿಡಿಯುತ್ತಾನೆ.

ಆಗ ಆಕಾಶವಾಣಿಯೊಂದು ಕೇಳಿಸುತ್ತದೆ, “ಆ ಸವರನನ್ನು ಬಿಟ್ಟು ಬಿಡು. ನೀಲ ಪರ್ವತದ ಮೇಲೆ ನನಗಾಗಿ ಒಂದು ದೊಡ್ಡ ದೇವಸ್ಥಾನವನ್ನು ಕಟ್ಟು. ಅಲ್ಲಿ ನೀನು ನನ್ನನ್ನು ನೀಲ ಮಾಧವನಾಗಿ ಅಲ್ಲ, ಬದಲಿಗೆ ಬೇವಿನ ಮರದಲ್ಲಿ ಕೆತ್ತಿದ ಒಂದು ರೂಪದಲ್ಲಿ ನೋಡುತ್ತೀಯೆ.”

ನೀಲ ಮಾಧವನು ಮರದ (ದಾರು)ರೂಪಿನಲ್ಲಿ ಕಾಣಿಸಿಕೊಳ್ಳುವುದಾಗಿ ಭರವಸೆ ಕೊಟ್ಟಿದ್ದ. ಆದ್ದರಿಂದ ಅವನನ್ನು ದಾರುಬ್ರಹ್ಮ ಎಂದು ಕರೆಯಲಾಗುತ್ತದೆ. ಇಂದ್ರದ್ಯುಮ್ನನು ಸಾಗರದ ದಂಡೆಯಲ್ಲಿ ಕಾಯುತ್ತಿದ್ದ. ಆಗ ಪ್ರಭುವು ಒಂದು ಬೃಹದಾಕಾರವಾದ ಮರದದಿಮ್ಮಿಯಾಗಿ ದಂಡೆಯ ಕಡೆಗೆ ತೇಲಿಕೊಂಡು ಬಂದ.

ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನು ಒಬ್ಬ ವೃದ್ಧನಂತೆ ವೇಷ ಮರೆಸಿಕೊಂಡು ಅಲ್ಲಿಗೆ ಬಂದ. ಅರ್ಚಾ ವಿಗ್ರಹಗಳನ್ನು ತಾನು ಕೆತ್ತಿಕೊಡುವುದಾಗಿ ಹೇಳಿದ. ಆದರೆ ಒಂದು ಷರತ್ತು: ಇಪ್ಪತ್ತೊಂದು ದಿನಗಳ ಕಾಲ ತಾನು ಏಕಾಂತದಲ್ಲಿ ಕೆತ್ತುವಾಗ ಯಾರೂ ಬಂದು ತನಗೆ ತೊಂದರೆ ಕೊಡಬಾರದು. ಇಂದ್ರದ್ಯುಮ್ನ ಮಹಾರಾಜ ಇದಕ್ಕೆ ಸಮ್ಮತಿಸಿದ. ಶಿಲ್ಪಿಯನ್ನು ಒಂದು ಮನೆಯಲ್ಲಿ ಕಾದಿರಿಸಲಾಯಿತು. ಆದರೆ ಅವ ಮುಗಿಯುವ ಮುನ್ನವೇ ಕೆತ್ತನೆಯ ಶಬ್ದ ನಿಂತು ಹೋಯಿತು. ಇಂದ್ರದ್ಯುಮ್ನ ಮಹಾರಾಜನಿಗೆ ತೀರದ ಕುತೂಹಲ. ಅದನ್ನು ತಡೆಯಲಾಗದೆ ಅವನು ಬಾಗಿಲನ್ನು ತೆರೆದು ಒಳಗೆ ಹೋದ. ವಿಶ್ವಕರ್ಮ ಮಾಯವಾಗಿದ್ದ. ಕೋಣೆಯಲ್ಲಿ ಜಗನ್ನಾಥ, ಬಲದೇವ ಮತ್ತು ಸುಭದ್ರೆಯ ಮೂರು ವಿಗ್ರಹಗಳಿದ್ದವು. ಆದರೆ ಅವು ಅಪೂರ್ಣವಾಗಿದ್ದಂತೆ ತೋರುತ್ತಿದ್ದವು. ವಿಗ್ರಹಗಳಿಗೆ ಕೈಕಾಲುಗಳು ಇರಲಿಲ್ಲ. ದೇವರಿಗೆ ತನ್ನಿಂದ ಅಪಚಾರವಾಯಿತೆಂದು ಭಾವಿಸಿ ಇಂದ್ರದ್ಯುಮ್ನನು ಅಪಾರ ಕ್ಷೋಭೆಗೊಂಡ.

ಆ ರಾತ್ರಿ ಜಗನ್ನಾಥನು ರಾಜನ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ಸಮಾಧಾನ ಮಾಡಿದನು. ತನ್ನ ಅನೂಹ್ಯವಾದ ಆಸೆಯಿಂದಾಗಿಯೇ ತಾನು ಆ ರೂಪದಲ್ಲಿ ಕಾಣಿಸಿಕೊಂಡಿರುವು- ದಾಗಿಯೂ, ಕೈಗಳಿಲ್ಲದೆ ಕಾಣಿಕೆಗಳನ್ನು ತಾನು ಸ್ವೀಕರಿಸಬಲ್ಲ, ಮತ್ತು ಕಾಲುಗಳಿಲ್ಲದೆ ನಡೆದಾಡಬಲ್ಲ ಎಂಬುದನ್ನು ಜಗತ್ತಿಗೆ ತೋರಿಸುವುದು ತನ್ನ ಉದ್ದೇಶವೆಂದೂ ಅವನು ವಿವರಿಸಿದ.

ಪ್ರಭು ಜಗನ್ನಾಥನು ರಾಜನಿಗೆ ಹೇಳಿದ, “ನನ್ನ ಕೈಗಳು ಮತ್ತು ಕಾಲುಗಳು ಎಲ್ಲ ಆಭರಣಗಳಿಗೇ ಆಭರಣ ಸ್ವರೂಪವಾದವು. ಆದರೆ ನಿನ್ನ ತೃಪ್ತಿಗಾಗಿ ನೀನು ನನಗೆ ಚಿನ್ನದ ಕೈ ಕಾಲುಗಳನ್ನು ಮಾಡಿಸಿಕೊಡು.”

ಭಕ್ತರು ಇಂದು ಪುರಿಯಲ್ಲಿ ಮತ್ತು ಜಗತ್ತಿನಾದ್ಯಂತ ಅನೇಕ ದೇವಸ್ಥಾನಗಳಲ್ಲಿ ಜಗನ್ನಾಥ, ಬಲದೇವ ಮತ್ತು ಸುಭದ್ರೆಯರ ಆ “ಅಪೂರ್ಣ” ರೂಪವನ್ನೇ ಆರಾಸುತ್ತಾರೆ. ಈ ರೂಪಗಳು ಅವರ ನಿತ್ಯಲೀಲೆಗಳ ಒಂದು ಅಂಗವಷ್ಟೆ .

ರೋಹಿಣಿಯ ಮಾತುಗಳಿಂದ ರೂಪಾಂತರ

ಕೃಷ್ಣನು ಜಗನ್ನಾಥನಾಗಿ ಕಾಣಿಸಿಕೊಂಡದ್ದಕ್ಕೆ ಸಂಬಂಸಿದಂತೆ ಸ್ಕಾಂದ ಪುರಾಣದ ಉತ್ಕಲ ಖಂಡವು ಇನ್ನೊಂದು ವೃತ್ತಾಂತವನ್ನು ಹೇಳುತ್ತದೆ. (ಉತ್ಕಲ ಎನ್ನುವುದು ಒರಿಸ್ಸಾದ ಸಾಂಪ್ರದಾಯಿಕ ಹೆಸರು.) ಒಂದು ಸಲ ಸೂರ್ಯಗ್ರಹಣದ ಸಮಯದಲ್ಲಿ ಕೃಷ್ಣ, ಬಲರಾಮ, ಸುಭದ್ರೆ ಮತ್ತು ದ್ವಾರಕೆಯ ಇತರ ನಿವಾಸಿಗಳು ಕುರುಕ್ಷೇತ್ರದಲ್ಲಿದ್ದ ಪವಿತ್ರವಾದ ಕೊಳದಲ್ಲಿ ಸ್ನಾನ ಮಾಡಲು ಹೋದರು. ಕೃಷ್ಣನು ಅಲ್ಲಿರುತ್ತಾನೆಂದು ತಿಳಿದು, ಪ್ರಭುವಿನ ವಿರಹಾಗ್ನಿಯಿಂದ ಪರಿತಪಿಸುತ್ತಿದ್ದ ಶ್ರೀಮತಿ ರಾಧಾರಾಣಿ, ಕೃಷ್ಣನ ತಂದೆತಾಯಿಗಳಾದ ನಂದ ಮತ್ತು ಯಶೋದ, ಮತ್ತು ವೃಂದಾವನದ ಇತರ ನಿವಾಸಿಗಳು, ಅವನನ್ನು ಭೇಟಿ ಮಾಡಲು ಅಲ್ಲಿಗೆ ಹೋದರು. ಯಾತ್ರಾರ್ಥಿಗಳು ತಂಗಲು ಕುರುಕ್ಷೇತ್ರದಲ್ಲಿ ಅನೇಕ ಗುಡಾರಗಳನ್ನು ನಿರ್ಮಿಸಿದ್ದರು. ಅಂತಹ ಅನೇಕ ಗುಡಾರಗಳೊಂದರಲ್ಲಿ ಬಲರಾಮನ ತಾಯಿಯಾದ ರೋಹಿಣಿಯು ದ್ವಾರಕೆಯ ರಾಣಿ ಮತ್ತು ಇತರರಿಗೆ ಕೃಷ್ಣನ ವೃಂದಾವನ ಲೀಲೆಗಳನ್ನು ನಿರೂಪಿಸಿದಳು.

ದ್ವಾರಕೆಯ ಪ್ರಜೆಗಳು ಐಶ್ವರ್ಯದ ಮನೋಭಾವದಲ್ಲಿದ್ದರು. ಅವರು ಕೃಷ್ಣನನ್ನು ಪರಮಪ್ರಭು ಎಂದು ಆರಾಸುತ್ತಿದ್ದರು. ಆದರೆ ವೃಂದಾವನ ನಿವಾಸಿಗಳು ಮಾಧುರ್ಯರಸದಲ್ಲಿ ಇದ್ದರು. ಅವರು ಕೃಷ್ಣನೊಡನೆ ಒಂದು ಗೋಪ್ಯವಾದ ಸಂಬಂಧವನ್ನು ಇಟ್ಟುಕೊಂಡಿದ್ದರು. ಅದು ಭಯಭಕ್ತಿ ಮತ್ತು ಗೌರವಗಳನ್ನು ಮೀರಿದ್ದಾಗಿತ್ತು. ಏಕೆಂದರೆ ಅದು ಸ್ನೇಹ ಮತ್ತು ಪ್ರೀತಿಯನ್ನು ಆಧರಿಸಿತ್ತು. ಹೀಗೆ ರೋಹಿಣಿಯ ನಿರೂಪಣೆಯು ಅತ್ಯಂತ ಗೋಪ್ಯವಾದುದಾಗಿತ್ತು. ಆದ್ದರಿಂದ ಯಾರಾದರೂ ಒಳಗೆ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಅವಳು ಸುಭದ್ರೆಯನ್ನು ಬಾಗಿಲ ಬಳಿ ಕಾವಲಿಗೆ ನಿಲ್ಲಿಸಿದಳು.

ಕೃಷ್ಣ ಮತ್ತು ಬಲರಾಮರು ಬಾಗಿಲ ಬಳಿಗೆ ಬಂದರು, ಮತ್ತು ಸುಭದ್ರೆಯ ಅಕ್ಕಪಕ್ಕಗಳಲ್ಲಿ ನಿಂತರು. ಕೃಷ್ಣನ ನಿಕಟವಾದ ವೃಂದಾವನ ಲೀಲೆಗಳನ್ನು ಕುರಿತ ರೋಹಿಣಿಯ ನಿರೂಪಣೆಯನ್ನು ಕೇಳುತ್ತಾ ಕೃಷ್ಣ ಮತ್ತು ಬಲರಾಮರು ಆನಂದಪರವಶರಾದರು ಮತ್ತು ಅವರ ಅಂತರಂಗ ಭಾವನೆಗಳು ಬಹಿರಂಗವಾಗಿ ಪ್ರದರ್ಶಿತವಾದವು. ಅವರ ಕಣ್ಣುಗಳು ಹಿಗ್ಗಿದವು. ಅವರ ತಲೆಗಳು ದೇಹದೊಳಕ್ಕೆ ಕುಸಿದವು. ಕೈಕಾಲುಗಳು ಹಿಂದಕ್ಕೆಳೆದುಕೊಂಡವು. ಕೃಷ್ಣ ಮತ್ತು ಬಲರಾಮರಲ್ಲಿ ಈ ರೂಪಾಂತರಗಳನ್ನು  ನೋಡಿದ ಸುಭದ್ರೆಯು ತಾನೂ ಆನಂದಪರವಶಳಾದಳು ಮತ್ತು ಅಂಥದೇ ರೂಪವನ್ನು ತಾನೂ ತಾಳಿದಳು. ಹೀಗೆ ವೃಂದಾವನದಲ್ಲಿನ ಕೃಷ್ಣನ ಲೀಲೆಗಳನ್ನು ಕುರಿತು ಕೇಳುವ ಮೂಲಕ ಕೃಷ್ಣ ಮತ್ತು ಬಲರಾಮ, ತಮ್ಮ ನಡುವೆ ಸುಭದ್ರೆ ಇರುತ್ತ, ತಮ್ಮ ಆನಂದಪರವಶ ರೂಪಗಳಾದ ಜಗನ್ನಾಥ, ಬಲದೇವ ಮತ್ತು ಸುಭದ್ರೆಯರ ರೂಪಗಳನ್ನು ಪ್ರದರ್ಶಿಸಿದರು.

ಪ್ರಭುವಿನ ಅತ್ಯುನ್ನತ ಆನಂದಪರವಶತೆ

ಸ್ಕಾಂದ ಪುರಾಣದ ಪ್ರಕಾರ ಜ್ಯೇಷ್ಠ ಮಾಸದ (ಮೇ-ಜೂನ್) ಪೂರ್ಣಿಮೆಯು ಜಗನ್ನಾಥನ ಜನ್ಮದಿನ. ಜಗನ್ನಾಥನು ಕೃಷ್ಣನೇ. ಆದರೆ ಕೃಷ್ಣನ ಜನ್ಮದಿನವು ಭಾದ್ರಪದ ಮಾಸದಲ್ಲಿ ಬರುವ ಜನ್ಮಾಷ್ಟಮಿ. (ಆಗಸ್ಟ್-ಸೆಪ್ಟೆಂಬರ್). ದೊಡ್ಡದಾದ ವಿಸ್ತರಿಸಿದ ಕಣ್ಣುಗಳು ಮತ್ತು ಕುಗ್ಗಿದ ಕೈಕಾಲುಗಳ ರೂಪದ ಜಗನ್ನಾಥನ ರೂಪದಲ್ಲಿ ಕೃಷ್ಣನು ಅವತರಿಸಿದ ಕಾಲವೇ ಜ್ಯೇಷ್ಠ ಪೂರ್ಣಿಮೆ ಎಂದು ನಾವು ಅರಿತುಕೊಂಡರೆ, ಮೇಲು ನೋಟಕ್ಕೆ ವಿರೋಧೋಕ್ತಿಯಂತೆ ಕಾಣುವ ಇದನ್ನು ಪರಿಹರಿಸಬಹುದು. ಇದು ಮಹಾಭಾವ ಪ್ರಕಾಶ ಎಂದು ಪ್ರಸಿದ್ಧವಾಗಿದೆ. ಅಂದರೆ ಕೃಷ್ಣನ ಆನಂದಪರವಶ ಆಕಾರ.  ಮಹಾಭಾವ ಎಂದರೆ “ಅತ್ಯುನ್ನತವಾದ ಆನಂದಪರವಶತೆ” ಮತ್ತು ಪ್ರಕಾಶ ಎಂದರೆ “ಆವಿರ್ಭವಿಸುವಿಕೆ”, ಆದ್ದರಿಂದ ಜಗನ್ನಾಥನು ಅಕ್ಷರಶಃ ಕೃಷ್ಣನ ಆನಂದಪರವಶ ರೂಪ.

ವೃಂದಾವನದ ನಿವಾಸಿಗಳಿಂದ, ಅದರಲ್ಲೂ ಮುಖ್ಯವಾಗಿ ರಾಧಾ ಮತ್ತು ಗೋಪಿಯರಿಂದ ಪ್ರತ್ಯೇಕಗೊಂಡ ಕೃಷ್ಣನ ಮನೋವೇದನೆಯ ಸಾಕಾರ ರೂಪವೇ ಈ ಜಗನ್ನಾಥನಾಗಿದ್ದಾನೆ. ಆಧ್ಯಾತ್ಮಿಕ ಆನಂದಪರವಶತೆಯ ಉತ್ಕಟವಾದ ಭಾವನೆಗಳು, ಅದರಲ್ಲೂ ವಿಶೇಷವಾಗಿ ಪ್ರೀತಿಪಾತ್ರರಿಂದ ದೂರವಾದ ಈ ಮನೋಭಾವದಲ್ಲಿ, ದೇಹದಲ್ಲಿ ರೂಪಾಂತರವನ್ನು ತರುತ್ತವೆ ಎಂದು ಧರ್ಮಗ್ರಂಥಗಳು ವಿವರಿಸುತ್ತವೆ. ಕೃಷ್ಣನು ತನ್ನ ದೇಹದಿಂದ ಬೇರೆಯಲ್ಲವಾದ್ದರಿಂದ, ಅವನ ಆಂತರಿಕ ಭಾವನೆಗಳು ಬಾಹ್ಯರೂಪದಲ್ಲಿ ಗೋಚರವಾಗಿವೆ, ಮತ್ತು ಅವನು ಜಗನ್ನಾಥನ ರೂಪವನ್ನು ತಾಳಿದ್ದಾನೆ.

ಕೃಷ್ಣನು ಜಗನ್ನಾಥನಾಗಿ ರೂಪಾಂತರಗೊಂಡಿದ್ದನ್ನು ನೋಡಿದ ನಾರದ ಮುನಿಗಳು ಮತ್ತೊಮ್ಮೆ ಈ ರೀತಿ ಅವತರಿಸಬೇಕೆಂದು ಪ್ರಭುವನ್ನು ಪ್ರಾರ್ಥಿಸಿದರು. ಪ್ರಭುವನ್ನು ಯಾರಿಂದಲೂ ನಿರ್ಬಂಧಪಡಿಸಲಾಗುವುದಿಲ್ಲವಾದರೂ, ಅವನು ತನ್ನ ಭಕ್ತರ ಆಸೆಗಳನ್ನು ಈಡೇರಿಸಲು ಪ್ರತಿಸ್ಪಂದಿಸುತ್ತಾನೆ. ಗರ್ಗಸಂಹಿತೆಯಲ್ಲಿ ಕೃಷ್ಣನು ಹೇಳುತ್ತಾನೆ (೧.೨೭.೪): “ನಾನು ಪೂರ್ಣ. ಆದರೂ ಕೂಡ ನಾನು ನನ್ನ ಭಕ್ತನ ಆಸೆಗಳಿಗೆ ಸೋತು ಅವನು ಬಯಸಿದ ರೂಪದಲ್ಲಿ ಬರುತ್ತೇನೆ.” ಹೀಗೆ, ವಿಶ್ವವಸುವನ್ನು ಸಂತುಷ್ಟಗೊಳಿಸಲು ಕೃಷ್ಣನು ನೀಲ ಮಾಧವನಾಗಿ ಕಾಣಿಸಿಕೊಂಡಂತೆ, ನಾರದ ಮುನಿಗಳ ಅಪೇಕ್ಷೆಯನ್ನು ಈಡೇರಿಸಲು ಜಗನ್ನಾಥನ ವಿಗ್ರಹ ರೂಪದಲ್ಲಿ ಜಗನ್ನಾಥಪುರಿಯಲ್ಲಿ ನೆಲೆಸಿದ್ದಾನೆ.

ಕೃಷ್ಣನ ಈ ವಿಶೇಷ ರೂಪವು ಪತಿತ ಪಾವನ, ಪತಿತಾತ್ಮರನ್ನು ಉದ್ಧಾರ ಮಾಡುವವನು, ಎಂದೂ ಪ್ರಸಿದ್ಧವಾಗಿದೆ. ಸರಿಯಾದ ಪ್ರಜ್ಞೆಯಿಂದ ಯಾರು ಅವನ ದರ್ಶನವನ್ನು ಪಡೆಯುತ್ತಾರೋ ಅವರಿಗೆ ಆಧ್ಯಾತ್ಮಿಕ ವಿಮುಕ್ತಿಯು ದೊರೆಯುತ್ತದೆ.

ವೃಂದಾವನದ ಕೃಷ್ಣನಾಗಿ ಜಗನ್ನಾಥ

ಜಗನ್ನಾಥನನ್ನು ಅನೇಕ ವೇಳೆ ಐಶ್ವರ್ಯ ಮನೋಭಾವದಲ್ಲಿ ದ್ವಾರಕೆಯ ಕೃಷ್ಣನೊಂದಿಗೆ ಗುರುತಿಸಲಾಗುತ್ತದೆಯಾದರೂ, ಅವನ ವಾಸ್ತವಿಕವಾದ ಮತ್ತು ಗೋಪ್ಯವಾದ ಗುರುತೆಂದರೆ ರಾಧಾರಾಣಿಯ ಪ್ರಿಯತಮನಾದ ವೃಂದಾವನ ಕೃಷ್ಣನೇ. ಜಗನ್ನಾಥ ಚರಿತಾಮೃತವು, “ಹೇಗೆ ರಾಧೆಯು ಜಗನ್ನಾಥನ ಹೃದಯದಲ್ಲಿ ನೆಲೆಸಿದ್ದಾಳೋ, ಹಾಗೆಯೇ ಶ್ರೀಕೃಷ್ಣನೂ ಕೂಡ” ಎಂದು ಹೇಳುತ್ತದೆ.

ಕೃಷ್ಣನು ತನ್ನ ಸಂಬಂಧಗಳಿಂದ, ವಿಶೇಷವಾಗಿ ವೃಂದಾವನದ ನಿವಾಸಿಗಳೊಡನೆ ಇರುವ ಸಂಬಂಧಗಳಿಂದ, ಪ್ರಸಿದ್ಧನಾಗಿದ್ದಾನೆ. ಭಕ್ತರು ಕೆಲವು ಸಲ ಜಗನ್ನಾಥನನ್ನು ಈ ರೀತಿಯಲ್ಲಿ ಕರೆಯುತ್ತಾರೆ. ರಾಧಾರಾಣಿಯನ್ನು ಕುರಿತ ಕೃಷ್ಣನ ಪ್ರೀತಿಯಿಂದ ಉಂಟಾದ ಭಾವೋದ್ರೇಕವು, ಕೃಷ್ಣನು ಜಗನ್ನಾಥನಾಗಿ ರೂಪಾಂತರ- ವಾಗುವುದರಲ್ಲಿ ಪರ್ಯವಸಾನವಾಗಿದೆ.

ವೃಂದಾವನದಲ್ಲಿ ಕೃಷ್ಣನು ಲಾಲಿತ್ಯಪೂರ್ಣವಾದ ತ್ರಿಭಂಗಿಯನ್ನು (ತ್ರಿಭಂಗ-ಲಲಿತ) ತಾಳುತ್ತಾನೆ. ನವಿಲು ಗರಿಯನ್ನು ಧರಿಸುತ್ತಾನೆ. ಕೊಳಲನ್ನು ನುಡಿಸುತ್ತಾನೆ. ಜಗನ್ನಾಥಾಷ್ಟಕಮ್ (ಶ್ಲೋಕ ೨) ಜಗನ್ನಾಥನನ್ನು ಈ ಮನೋಭಾವದಲ್ಲಿ ಗುರುತಿಸುತ್ತದೆ: “ಪ್ರಭು ಜಗನ್ನಾಥನು ತನ್ನ ಎಡಗೈಯಲ್ಲಿ ಒಂದು ಕೊಳಲನ್ನು ಹಿಡಿದಿದ್ದಾನೆ. ಅವನ ತಲೆಯ ಮೇಲೆ ನವಿಲುಗರಿಯನ್ನು ಧರಿಸಿದ್ದಾನೆ. ಸುಂದರವಾದ ಪೀತಾಂಬರವನ್ನು ಉಟ್ಟಿದ್ದಾನೆ. ತನ್ನ ಕಟಾಕ್ಷಗಳಿಂದ ತನ್ನ ಪ್ರೀತಿಪಾತ್ರ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ. ತನ್ನ ವೃಂದಾವನ ದಿವ್ಯಧಾಮದಲ್ಲಿ ತನ್ನ ಲೀಲೆಗಳ ಮೂಲಕ ಸದಾ ತನ್ನನ್ನು ಅನಾವರಣಗೊಳಿಸುತ್ತಿದ್ದಾನೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.”

ರಾಧಾರಾಣಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವು-ದಕ್ಕಾಗಿಯೇ ಕೃಷ್ಣನು ಚೈತನ್ಯರಾಗಿ ಬಂದನು ಎಂದು ಚೈತನ್ಯ ಚರಿತಾಮೃತವು ವಿವರಿಸುತ್ತದೆ. ರಥಯಾತ್ರೆಯ ಸಮಯದಲ್ಲಿ ಅವರು ಭಾವೋದ್ರೇಕದಿಂದ ಪ್ರಭು ಜಗನ್ನಾಥನ (ಕೃಷ್ಣ) ಮುಂದೆ ನರ್ತಿಸುತ್ತಿದ್ದರು.

ಬೃಹದ್ ಭಾಗವತಾಮೃತದಲ್ಲಿ ನಾರದ ಮುನಿಗಳು ಹೀಗೆ ಹೇಳುತ್ತಾರೆ (೨.೫.೨೧೨-೨೧೪): “ಶ್ರೀ ಕೃಷ್ಣನಿಗೆ ಅವನ ಸುಂದರವಾದ ಮಥುರಾ ಧಾಮವು ಎಷ್ಟು ಪ್ರೀತಿಪಾತ್ರವೋ ಪುರುಷೋತ್ತಮ ಕ್ಷೇತ್ರವೂ ಅಷ್ಟೇ ಆಗಿದೆ. ಅಲ್ಲಿ ಪ್ರಭುವು ತನ್ನ ಸರ್ವೋತ್ತಮ ಐಶ್ವರ್ಯವನ್ನು ಪ್ರದರ್ಶಿಸುತ್ತಾನೆ. ಆದರೂ ತನ್ನ ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತಾನೆ.” ಜಗನ್ನಾಥನನ್ನು ಕುರಿತ ಪ್ರೀತಿಯು ಕೃಷ್ಣಪ್ರೇಮ, ಅದೇ ನಮ್ಮ ಅಂತಿಮ ಗುರಿ. ಕೃಷ್ಣನು ಜಗನ್ನಾಥನ ರೂಪದಲ್ಲಿ ಪ್ರತಿಯೊಬ್ಬರಿಗೂ ಲಭ್ಯನಾಗಿದ್ದಾನೆ.

ಪ್ರಭು ಜಗನ್ನಾಥನು ಕೃಷ್ಣನಲ್ಲದೆ ಬೇರೆ ಯಾರೂ ಅಲ್ಲವಾದ್ದರಿಂದ ಅವನ ಧಾಮವು ವೃಂದಾವನಕ್ಕೆ ಸಮಾನವಾಗಿದೆ. ಅಲ್ಲಿ ಕೃಷ್ಣನು ತನ್ನ ಬಾಲ್ಯ ಕಾಲದ ಲೀಲೆಗಳನ್ನು ನಡೆಸುತ್ತಾನೆ. ಜಗನ್ನಾಥ ಪುರಿ – ಇದನ್ನು ಪುರುಷೋತ್ತಮ ಕ್ಷೇತ್ರ, ಶ್ರೀಕ್ಷೇತ್ರ ಮತ್ತು ನೀಲಾಚಲ (ನೀಲಿ ಪರ್ವತದ ಪ್ರದೇಶ) ಎಂದೂ ಕರೆಯಲಾಗುತ್ತದೆ – ಕೃಷ್ಣನ ವೃಂದಾವನದ ಎಲ್ಲ ಲೀಲೆಗಳನ್ನೂ ಒಳಗೊಂಡಿದೆ, ಐಹಿಕ ಕಣ್ಣುಗಳಿಗೆ ಅವು ಮರೆಯಾಗಿರಬಹುದಷ್ಟೆ. ವೈಷ್ಣವ ತಂತ್ರವು ಹೀಗೆ ಹೇಳುತ್ತದೆ, “ಗೋಕುಲ, ಮಥುರಾ ಮತ್ತು ದ್ವಾರಕೆಗಳಲ್ಲಿ ಯಾವ ಶ್ರೀಕೃಷ್ಣಲೀಲೆಗಳು ಪ್ರಕಟವಾಗಿವೆಯೋ ಅವು ಎಲ್ಲವೂ ನೀಲಾಚಲ, ಶ್ರೀಕ್ಷೇತ್ರದಲ್ಲೂ ಕಂಡುಬರುತ್ತವೆ.”

ಯೋಗ್ಯವಾದ ಆಧ್ಯಾತ್ಮಿಕ ದೃಷ್ಟಿಯಿಂದ – ಕೃಷ್ಣಪ್ರೇಮ ಎಂಬ ದೇವೋತ್ತಮನನ್ನು ಕುರಿತ ಪರಿಶುದ್ಧ ಪ್ರೇಮದ ಅಂಜನವನ್ನು ಹಚ್ಚಿದ ಕಣ್ಣುಗಳಿಂದ – ಕೃಷ್ಣನ ಎಲ್ಲ ಲೀಲೆಗಳನ್ನೂ ಅಲ್ಲಿ ನಾವು ನೋಡಬಹುದು.

ಜಗನ್ನಾಥನು ಕೃಷ್ಣನ ಭಾವೋದ್ರೇಕದ ಪ್ರಕಾಶನವಲ್ಲದೆ ಬೇರೇನೂ ಅಲ್ಲ. ನಮಗೆ ಭಗವದ್ಧಾಮಕ್ಕೆ ಹಿಂತಿರುಗಲು ಸಹಾಯ ಮಾಡುವುದಕ್ಕಾಗಿ ಅವನು ಅತ್ಯಂತ ಕರುಣಾಪೂರ್ಣವಾದ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ದರಿಂದ ಪ್ರಭುಪಾದರು, ಮಾಯಾ ಬಂಧನದಿಂದ ಬದ್ಧಾತ್ಮರನ್ನು ಉದ್ಧಾರಮಾಡುವುದಕ್ಕಾಗಿ ಜಗತ್ತಿನಾದ್ಯಂತ ಅನೇಕ ನಗರಗಳಲ್ಲಿ ಜಗನ್ನಾಥ ರಥಯಾತ್ರೆಯನ್ನು ಪರಿಚಯಿಸಿದ್ದಾರೆ. ನಾವು ಈ ಸುಸಂದರ್ಭದ ಪ್ರಯೋಜನವನ್ನು ಪಡೆದುಕೊಳ್ಳೋಣ.

ಜಗನ್ನಾಥನು ಕೃಷ್ಣ ಎನ್ನುವುದಕ್ಕೆ ಇತರ ಪುರಾವೆಗಳು

ಭಾರತದಲ್ಲಿ ಶತಮಾನಗಳ ಕಾಲದಿಂದ ಪ್ರಭು ಜಗನ್ನಾಥನನ್ನು ಆರಾಸಲಾಗುತ್ತಿದ್ದರೂ ಕೆಲವು ಸಲ ಅವನ ಗುರುತಿನ ಬಗೆಗೆ ಗೊಂದಲಗಳು ಏಳುತ್ತವೆ. ಅವನು ಸ್ವತಃ ಕೃಷ್ಣನೇ ಎನ್ನುವುದಕ್ಕೆ ಇಲ್ಲಿ ಇನ್ನಷ್ಟು ಪುರಾವೆಗಳಿವೆ.

ಜಯದೇವ ಗೋಸ್ವಾಮಿಯ ಗೀತಗೋವಿಂದದಲ್ಲಿ ದಶಾವತಾರವನ್ನು ವರ್ಣಿಸುವ ಪದ್ಯಭಾಗದ ಪಲ್ಲವಿಯಲ್ಲಿ ಜಯ ಜಗದೀಶ  ಹರೇ ಎಂದು ಹೇಳುತ್ತಾ ಕೃಷ್ಣನನ್ನು ಜಗನ್ನಾಥ ಎಂದು ಗುರುತಿಸಲಾಗಿದೆ. ಜಗನ್ನಾಥ ಮತ್ತು ಕೃಷ್ಣ ಎಲ್ಲ ಅವತಾರಗಳ ಅವತಾರಿ ಎಂದರೆ ಮೂಲ ಎಂದು ಗುರುತಿಸಲಾಗಿದೆ. ಈ ಹಾಡನ್ನು ಪುರಿಯ ಜಗನ್ನಾಥನ ದೇವಸ್ಥಾನದಲ್ಲಿ ನಿತ್ಯವೂ ಹಾಡಲಾಗುತ್ತದೆ.

ಸ್ಕಾಂದ ಪುರಾಣವು ಜಗನ್ನಾಥನೇ ಈ ಬ್ರಹ್ಮಾಂಡದ ಆಧಾರ ಎಂದು ಕೀರ್ತಿಸುತ್ತಾ ಭಗವದ್ಗೀತೆಯಲ್ಲಿನ (೭.೭) ಕೃಷ್ಣನ ಹೇಳಿಕೆಯನ್ನು ಪ್ರತಿಫಲಿಸುತ್ತದೆ: “ಮುತ್ತುಗಳನ್ನು ದಾರದಲ್ಲಿ ಪೋಣಿಸಿದ ಹಾಗೆ ಎಲ್ಲವೂ ನನ್ನನ್ನೇ ಅವಲಂಬಿಸಿದೆ.”

ನೀಲಾದ್ರಿಮಹೋದಯ ಗ್ರಂಥವು ನೇರವಾಗಿ ಜಗನ್ನಾಥನನ್ನು ಕೃಷ್ಣನೆಂದೇ ಉಲ್ಲೇಖಿಸುತ್ತದೆ. ಅವನ ಬಣ್ಣ ಮತ್ತು ಆಕಾರವು ಕೃಷ್ಣನದರ ಹಾಗೆಯೇ ಇದೆ ಎಂದು ಬಣ್ಣಿಸುತ್ತದೆ: “ಶ್ರೀ ಜಗನ್ನಾಥನ ಮೈ ಬಣ್ಣವು ನೀಲಮೇಘದಂತಿದೆ. ಅವನು ಕಮಲಾಸನದಲ್ಲಿ ಕುಳಿತಿದ್ದಾನೆ.” ವಿಗ್ರಹವು ನೋಡಲು ಬೇರೆ ರೀತಿಯಲ್ಲಿ ಕಾಣುತ್ತಿದ್ದರೂ ಅವನ ಮೈಬಣ್ಣದ ವರ್ಣನೆಯು ಜಗನ್ನಾಥನೇ ಕೃಷ್ಣ ಎಂದು ಸೂಚಿಸುತ್ತದೆ.

ಪದ್ಮ ಪುರಾಣದಲ್ಲಿ ಜಗನ್ನಾಥನನ್ನು ಪುರುಷೋತ್ತಮ (ಪರಮಪುರುಷ), ಕೃಷ್ಣ ಎಂದು ಕರೆಯಲಾಗಿದೆ. ಆಲ್ಲದೆ ಕೃಷ್ಣನ ಇತರ ಹೆಸರುಗಳಾದ ಮಾಧವ, ಹರಿ, ಮಧುಸೂದನ, ಮುರಾರಿ, ನಾರಾಯಣ, ಮತ್ತು ಕಮಲಾಪತಿ (ಭಾಗ್ಯದೇವತೆಯ ಪತಿ) ಮುಂತಾದವುಗಳಿಂದ ಕರೆಯಲಾಗಿದೆ. ಅವನನ್ನು ಧರ್ಮ ಸಂರಕ್ಷಕ ಮತ್ತು ಪ್ರತಿಯೊಂದು ಜೀವಿಯ ಹೃದಯದಲ್ಲೂ ಇರುವ ಪರಮಾತ್ಮ ಎಂದು ಬಣ್ಣಿಸಲಾಗಿದೆ.

ಚೈತನ್ಯ ಮಹಾಪ್ರಭುಗಳ ಶಿಷ್ಯರಾದ ವಾಸುದೇವ ಘೋಷರು ಹೀಗೆ ಹಾಡಿದ್ದಾರೆ : ಜೇ ಕೃಷ್ಣ , ಸೇ ಗೌರ, ಸೇ ಜಗನ್ನಾಥ : ಗೌರ (ಚೈತನ್ಯ ಮಹಾಪ್ರಭು), ಕೃಷ್ಣ ಮತ್ತು ಜಗನ್ನಾಥರಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಜಗನ್ನಾಥನನ್ನು ಕುರಿತ ಒಂದು ಬಂಗಾಳಿ ಪ್ರಾರ್ಥನೆಯು ಹೀಗೆ ಹೇಳುತ್ತದೆ : ಜಯ ಜಯ ಜಗನ್ನಾಥ ಮೇಘ ಶ್ಯಾಮ ವರ್ಣ/ ಗೋಪೀ ಜನ ವಲ್ಲಭ ಮಾಧವ ಅಭಿನ್ನ : “ಪ್ರಭು ಜಗನ್ನಾಥನಿಗೆ ಸಮಸ್ತ ಜಯವಾಗಲಿ. ಅವನ ಮೈಬಣ್ಣ ಕಪ್ಪನೆಯ ಮಳೆ ಮೋಡದಂತಿದೆ. ಅವನು ಗೋಪೀಜನ ವಲ್ಲಭನಾದ ಸ್ವತಃ ಪ್ರಭು ಕೃಷ್ಣನೇ ಆಗಿದ್ದಾನೆ.” ಅವನ ಆಕಾರದ ಅಂತರಾರ್ಥದ ಕಡೆಗೆ ಸೂಕ್ಷ್ಮವಾಗಿ ಸೂಚಿಸುತ್ತಾ ಈ ಪ್ರಾರ್ಥನೆಯು, “ಜಗನ್ನಾಥನು ತನ್ನದೇ ಆದ ಭಾವೋದ್ರೇಕದಲ್ಲಿ ತಲ್ಲೀನನಾಗಿರುತ್ತ ವಿಪ್ರಲಂಭ ಭಾವದಲ್ಲಿದ್ದಾನೆ” ಎಂದೂ ಹೇಳುತ್ತದೆ.

——————————————————————————————————————————————————————————————————–

 

 

ಜಗನ್ನಾಥಾಷ್ಟಕ

ಕದಾಚಿತ್ ಕಾಲಿಂದೀ ತಟವಿಪಿನ ಸಂಗೀತಕ ರವೋ |

ಮುದಾ ಭೀರೀ ನಾರೀವದನ ಕಮಲಾಸ್ವಾದ ಮಧುಪಃ ||

ರಮಾ ಶಂಭು ಬ್ರಹ್ಮಾಮರಪತಿ – ಗಣೇಶಾರ್ಚಿತಪದೋ |

ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ     ||೧||

ಕೆಲವು ಸಲ ಪ್ರಭು ಜಗನ್ನಾಥನು ಅಮಿತಾನಂದದಿಂದ ಯಮುನಾ ನದಿಯ ದಡದ ಮೇಲಿರುವ ಕಾನನದಲ್ಲಿ ತನ್ನ ಕೊಳಲಿನಿಂದ ಗಟ್ಟಿಯಾಗಿ ಸಂಗೀತದ ಧಾರೆಯನ್ನೇ ಹರಿಸುತ್ತಾನೆ. ವ್ರಜದ ಗೋಪಿಕಾ ಸ್ತ್ರೀಯರ ಸುಂದರವಾದ ಮುಖಾರವಿಂದಗಳನ್ನು ಆಸ್ವಾದಿಸುವ ದುಂಬಿಯಂತೆ ಅವನಿದ್ದಾನೆ. ಅವನ ಪಾದಕಮಲಗಳನ್ನು ಲಕ್ಷ್ಮೀ, ಶಿವ, ಬ್ರಹ್ಮ, ಇಂದ್ರ ಮತ್ತು ಗಣೇಶನಂತಹ ಮಹಾತ್ಮರೂ ಆರಾಸುತ್ತಾರೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.

ಭುಜೇ ಸವ್ಯೇ ವೇಣುಂ ಶಿರಸಿ ಶಿಖಿಪುಚ್ಛಂ ಕಟಿತಟೇ |

ದುಕೂಲಂ ನೇತ್ರಾಂತೇ ಸಹಚರ ಕಟಾಕ್ಷಂ ವಿದಧತೇ ||

ಸದಾ ಶ್ರೀಮದ್‌ವೃಂದಾವನ ವಸತಿಲೀಲಾಪರಿಚಯೋ |

ಜಗನ್ನಾಥಃ ಸ್ವಾಮೀ ನಯನ ಪಥಗಾಮೀ ಭವತು ಮೇ    ||೨||

ಪ್ರಭು ಜಗನ್ನಾಥನು ತನ್ನ ಎಡಗೈಯಲ್ಲಿ ಒಂದು ಕೊಳಲನ್ನು ಹಿಡಿದಿದ್ದಾನೆ. ತಲೆಯ ಮೇಲೆ ನವಿಲುಗರಿಗಳನ್ನು ಧರಿಸಿದ್ದಾನೆ. ಕಟಿಯಲ್ಲಿ ಸುಂದರವಾದ ಪೀತಾಂಬರವನ್ನು ಉಟ್ಟಿದ್ದಾನೆ. ತನ್ನ ಪ್ರೀತಿ ಪಾತ್ರರಾದ ಭಕ್ತರ ಮೇಲೆ ಕಟಾಕ್ಷದಿಂದ ಅನುಗ್ರಹಿಸುತ್ತಿದ್ದಾನೆ.

ಸದಾ ವೃಂದಾವನದ ಧಾಮದಲ್ಲಿರುತ್ತಾ ತನ್ನ ಲೀಲೆಗಳನ್ನು  ತೋರಿಸುತ್ತಿದ್ದಾನೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.

ಮಹಾಂಬೋಧೇಸ್ತೀರೇ ಕನಕರುಚಿರೇ ನೀಲಶಿಖರೇ |

ವಸನ್ ಪ್ರಾಸಾದಾಂತಃ ಸಹಜ ಬಲಭದ್ರೇಣ ಬಲಿನಾ ||

ಸುಭದ್ರಾಮಧ್ಯಸ್ಥಃ ಸಕಲ ಸುರಸೇವಾಽವಸರ ದೋ |

ಜಗನ್ನಾಥಃ ಸ್ವಾಮೀ ನಯನ ಪಥಗಾಮೀ ಭವತು ಮೇ    ||೩||

ಮಹಾ ಸಾಗರದ ದಡದಲ್ಲಿರುವ ಉಜ್ವಲವಾದ ಕನಕ ನೀಲಾಚಲ ಶಿಖರದಲ್ಲಿರುವ ವಿಶಾಲವಾದ ಅರಮನೆಯಲ್ಲಿ ಅವನಿದ್ದಾನೆ. ಪಕ್ಕದಲ್ಲಿ ಬಲಶಾಲಿಯಾದ ಬಲರಾಮ. ಅವರ ಮಧ್ಯದಲ್ಲಿ ಸೋದರಿ ಸುಭದ್ರೆ. ಪ್ರಭು ಜಗನ್ನಾಥನು ಸಕಲ ದೇವಾತ್ಮರಿಗೂ ಭಕ್ತಿಸೇವೆಯನ್ನು ಸಲ್ಲಿಸುವ ಅವಕಾಶವನ್ನು ಅನುಗ್ರಹಿಸುತ್ತಾನೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.

ಕೃಪಾಪಾರಾವಾರಃ ಸಜಲ-ಜಲದ-ಶ್ರೇಣಿ-ರುಚಿರೋ |

ರಮಾ ವಾಣೀ ರಾಮಃ ಸುರದಮಲ ಪಂಕೇರುಹ ಮುಖಃ ||

ಸುರೇಂದ್ರೈರಾರಾಧ್ಯಃ ಶ್ರುತಿ ಗಣ ಶಿಖಾ ಗೀತಚರಿತೋ |

ಜಗನ್ನಾಥಃ ಸ್ವಾಮೀ ನಯನ ಪಥಗಾಮೀ ಭವತು ಮೇ    ||೪||

ಪ್ರಭು ಜಗನ್ನಾಥನು ಕರುಣಾ ಸಾಗರ. ಕಪ್ಪನೆಯ ಮಳೆಯ ಮೋಡಗಳ ಶ್ರೇಣಿಯಂತೆ ಅವನು ಸುಂದರವಾಗಿದ್ದಾನೆ. ಲಕ್ಷ್ಮೀ ಮತ್ತು ಸರಸ್ವತಿಯರಿಗೆ ಅವನು ಆನಂದದ ಭಂಡಾರವೇ ಆಗಿದ್ದಾನೆ. ಅವನ ಮುಖವು ನಿಷ್ಕಳಂಕವಾದ ಅರಳಿದ ಕಮಲದ ಹಾಗಿದೆ. ಅವನನ್ನು ಶ್ರೇಷ್ಠರಾದ ದೇವತೆಗಳು ಮತ್ತು ಮುನಿಗಳು ಆರಾಸುತ್ತಾರೆ. ಅವನ ಮಹಿಮೆಗಳನ್ನು ಉಪನಿಷತ್ತುಗಳು ಹಾಡುತ್ತಿವೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.

ರಥಾರೂಢೋ ಗಚ್ಛನ್ಪಥಿ ಮಿಲಿತ – ಭೂದೇವಪಟಲೈಃ |

ಸ್ತುತಿ ಪ್ರಾದುರ್ಭಾವಂ ಪ್ರತಿಪದಮುಪಾಕರ್ಣ್ಯ ಸದಯಃ ||

ದಯಾಸಿಂಧುರ್ಬಂಧುಃ ಸಕಲ ಜಗತಾಂ ಸಿಂಧುಸುತಯಾ |

ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ     ||೫||

ಪ್ರಭು ಜಗನ್ನಾಥನು ರಥವನ್ನು ಏರಿ ಮಾರ್ಗದಲ್ಲಿ ಸಂಚರಿಸುತ್ತಿರುವಾಗ, ಪ್ರತಿಹಂತದಲ್ಲಿಯೂ ಅಪಾರ ಸಂಖ್ಯೆಯಲ್ಲಿ ನೆರೆದ ಬ್ರಾಹ್ಮಣರ ಸಮುದಾಯವು ಗಟ್ಟಿಯಾಗಿ ಪ್ರಾರ್ಥನೆಗಳನ್ನೂ ಮತ್ತು ಹಾಡುಗಳನ್ನೂ ಹಾಡುತ್ತಿದ್ದಾರೆ. ಅವರ ಸ್ತುತಿ ಗೀತೆಗಳನ್ನು ಕೇಳಿ ಪ್ರಭು ಜಗನ್ನಾಥನು ಅವರ ವಿಷಯದಲ್ಲಿ ಅತ್ಯಂತ ಸಂತುಷ್ಟನಾಗಿದ್ದಾನೆ. ಅವನು ಕರುಣಾಸಾಗರ. ಸಮಸ್ತ ಜಗತ್ತಿಗೂ ಅವನು ನಿಜವಾದ ಗೆಳೆಯ. ಅಂತಹ ಜಗನ್ನಾಥ ಸ್ವಾಮಿಯು ಅಮೃತ ಸಾಗರದಲ್ಲಿ ಉದಿಸಿದ ತನ್ನ ಪತ್ನಿ ಲಕ್ಷ್ಮಿಯೊಡಗೂಡಿ ನನ್ನ ದರ್ಶನದ ಗುರಿಯಾಗಿರಲಿ.

ಪರಬ್ರಹ್ಮಾಪೀಡಃ ಕುವಲಯದಲೋತುಲ್ಲ ನಯನೋ |

ನಿವಾಸೀ ನೀಲಾದ್ರೌ ನಿಹಿತಚರಣೋಽನಂತ ಶಿರಸಿ ||

ರಸಾನಂದೋ ರಾಧಾಸರಸವಪುರಾಲಿಂಗನ ಸುಖೋ |

ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ     ||೬||

ಅವನು  ಬ್ರಹ್ಮನ ತಲೆಯಲ್ಲೊಂದು ಆಭರಣವಾಗಿದ್ದಾನೆ. ಅವನ ಕಣ್ಣು ಸಂಪೂರ್ಣವಾಗಿ ಅರಳಿರುವ ಕಮಲದ ದಳಗಳಂತಿವೆ. ಅವನು ನೀಲಾಚಲವೆಂಬ ಪರ್ವತದಲ್ಲಿ ವಾಸ ಮಾಡುತ್ತಾನೆ. ಅವನ ಪಾದಕಮಲಗಳನ್ನು ಅನಂತದೇವನ ಶಿರದಲ್ಲಿ ಇರಿಸಿದ್ದಾನೆ. ಪ್ರಭು ಜಗನ್ನಾಥನು ಪ್ರೇಮ ರಸಭಾವದಿಂದ ಆನಂದಪರವಶನಾಗಿದ್ದಾನೆ. ಶ್ರೀಮತಿ ರಾಧಾರಾಣಿಯ ತನುವನ್ನು ಆಲಿಂಗಿಸಿಕೊಂಡು ಉಲ್ಲಾಸದಿಂದಿದ್ದಾನೆ; ಅದು ಒಂದು ಶೀತಲವಾದ ಕೊಳದಂತಿದೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.

ನ ವೈ ಯಾಚೇ ರಾಜ್ಯಂ ನ ಚ ಕನಕ ಮಾಣಿಕ್ಯ ವಿಭವಂ |

ನ ಯಾಚೇಽಹಂ ರಮ್ಯಾಂ ಸಕಲಜನಕಾಮ್ಯಾಂ ವರವಧೂಮ್ ||

ಸದಾ ಕಾಲೇ ಕಾಲೇ ಪ್ರಮಥಪತಿನಾ ಗೀತ ಚರಿತೋ |

ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ     ||೭||

ನಾನು ರಾಜ್ಯಕ್ಕಾಗಲಿ, ಚಿನ್ನಕ್ಕಾಗಲಿ, ಮಾಣಿಕ್ಯಕ್ಕಾಗಲಿ ಮತ್ತು ವೈಭವಕ್ಕಾಗಲಿ ಯಾಚನೆಯನ್ನು ಮಾಡುವುದಿಲ್ಲ. ಎಲ್ಲ ಪುರುಷರೂ ಬಯಸುವಂತೆ ಶ್ರೇಷ್ಠಳಾದ ಮತ್ತು ಸುಂದರಿಯಾದ ಪತ್ನಿಗಾಗಿ ನಾನು ಯಾಚಿಸುವುದಿಲ್ಲ. ಶಿವನು ಸದಾಕಾಲವೂ ಯಾರ ಮಹಿಮೆಯನ್ನು ಗಾಯನ ಮಾಡುತ್ತಿದ್ದಾನೆಯೋ ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಹರತ್ವಂ ಸಂಸಾರಂ ಧ್ರುತರಂ ಅಸಾರಂ ಸುರಪತೇ |

ಹರತ್ವಂ ಪಾಪಾನಾಂ ವಿತತಿಂ ಅಪರಾಂ ಯಾದವಪತೇ ||

ಅಹೋ ದೀನೇಽನಾಥೇ ನಿಹಿತ ಚರಣೋ ನಿಶ್ಚಿತ ಇದಂ |

ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ     ||೮||

ಓ ದೇವತೆಗಳ ಒಡೆಯನೇ, ನಾನು ಅನುಭವಿಸುತ್ತಿರುವ ಈ ಅಸಾರವಾದ ಐಹಿಕ ಅಸ್ತಿತ್ವದಿಂದ ಕೂಡಲೇ ನನ್ನನ್ನು ಪಾರು ಮಾಡು. ಓ ಯದುಪತಿಯೇ, ಪಾರವಿಲ್ಲದ ಈ ವಿಶಾಲವಾದ ಪಾಪ ಸಾಗರವನ್ನು ದಯವಿಟ್ಟು ನಾಶಮಾಡು. ಪತಿತರಾಗಿ, ಈ ಜಗತ್ತಿನಲ್ಲಿ ಅವನ ವಿನಾ ಬೇರಾವ ಆಶ್ರಯವೂ ಇಲ್ಲ ಎಂದು ಭಾವಿಸುವವರಿಗೆ ಪ್ರಭು ಜಗನ್ನಾಥನ ಪಾದಕಮಲಗಳ ಅನುಗ್ರಹವು ಖಂಡಿತವಾಗಿಯೂ ಲಭಿಸುತ್ತದೆ. ಅಂತಹ ಜಗನ್ನಾಥ ಸ್ವಾಮಿಯು ನನ್ನ ದರ್ಶನದ ಗುರಿಯಾಗಿರಲಿ.
Leave a Reply

Your email address will not be published. Required fields are marked *