Search
Friday 7 August 2020
  • :
  • :

ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಾಲಯ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ದಕ್ಷಿಣ ಗೋವರ್ಧನಗಿರಿ ಎಂಬ ತನ್ನ ಸುಂದರ ಧಾಮದಲ್ಲಿ ಗೋಪಾಲಸ್ವಾಮಿಯಾಗಿ ನೆಲೆಸಿದ್ದಾನೆ.

ಸ್ಥಳ ಪುರಾಣ

ಈ ಕ್ಷೇತ್ರದ ಮಹಿಮೆ ಸಂಕ್ಷಿಪ್ತವಾಗಿ ಹೀಗಿದೆ :  ಒಮ್ಮೆ ದ್ವಾಪರ ಯುಗದಲ್ಲಿ  ಹಿಮವಂತ ಪರ್ವತನ ಕುಮಾರಿಯಾದ ಗಿರಿಜೆಯ ಕಲ್ಯಾಣ ಮಹೋತ್ಸವಕ್ಕೆಂದು ಉತ್ತರ ದೇಶದ ಕಾಶಿ ಪಟ್ಟಣಕ್ಕೆ ೩೩ ಕೋಟಿ ದೇವತೆಗಳು, ಬ್ರಹ್ಮ ರುದ್ರಾದಿಗಳು, ವ್ಯಾಸ ಪರಾಶರಾದಿ ಮುಖ್ಯವಾದ ಮಹರ್ಷಿಗಳು ಆಗಮಿಸಿದರು. ಸಕಲ ದೇವಾನುದೇವತೆಗಳೆಲ್ಲರ ಆಗಮನದ ಕಾರಣ ಭೂದೇವಿಯ ಭಾರ ಹೆಚ್ಚಾಗಿ ಈ ಭಾರ ಸಹಿಸಲಾರದೆ ಭೂಮಿಯು ಪಾತಾಳಕ್ಕೆ ಇಳಿಯತೊಡಗಿದಳು. ಅದನ್ನು ಕಂಡು ಬ್ರಹ್ಮ ರುದ್ರಾದಿ ಸಕಲ ದೇವತೆಗಳು ಆಲೋಚನೆ ಮಾಡಿ ಈ ಭಾರಕ್ಕೆ ಸಮನಾದ ಮಹಾಪುರುಷರೊಬ್ಬರನ್ನು ದಕ್ಷಿಣ ದೇಶಕ್ಕೆ ಕಳುಹಿಸಿ ಭೂಮಿಯನ್ನು ಸಮ ತೂಕಕ್ಕೆ ತರಲು ನಿರ್ಧರಿಸಿದರು. ಅಗಸ್ತ್ಯ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ ನೀವು ದಕ್ಷಿಣ ದೇಶಕ್ಕೆ ಹೋಗಿ ಅಲ್ಲಿ ವಾಸಮಾಡಬೇಕೆಂದು ಕೇಳಿದರು. ಆ ಮೇರೆಗೆ ಮಹರ್ಷಿಯವರು ದೇವಾನುದೇವತೆಗಳ ಅನುಮತಿ ಪಡೆದು ಗಂಗಾದಿ ಸರ್ವ ತೀರ್ಥಗಳನ್ನು ಕಮಂಡಲದಲ್ಲಿ ಸಂಗ್ರಹಿಸಿಕೊಂಡು ಹೊರಡಲು ಅನುವಾದಾಗ ದೇವಾನುದೇವತೆಗಳು ಇನ್ನೊಂದು ಪ್ರಾರ್ಥನೆಯನ್ನು ಅವರ ಮುಂದಿಟ್ಟರು. ಏನೆಂದರೆ ವಿಂಧ್ಯನಿಗೂ ಮಹಾಮೇರು ಪರ್ವತ ರಾಜನಿಗೂ ನಾನೇ ಹೆಚ್ಚು ತಾನೇ ಹೆಚ್ಚು ಎಂಬ ವಿವಾದವುಂಟಾಗಿದ್ದು ಇದರಿಂದ ಕುಪಿತನಾಗಿರುವ ವಿಂಧ್ಯನು ಆಕಾಶಕ್ಕೆ ತೆರಳಿ ಸೂರ್ಯಗತಿ ಚಂದ್ರಗತಿ ತಡೆದಿರುವ ಕಾರಣ ಉದಯಾಸ್ತಮಗಳು ನಿಂತು ಅಂಧಕಾರವಾಗಿತ್ತು. ಈ ನಿಮ್ಮ ಶಿಷ್ಯನಾದ ವಿಂಧ್ಯನ ದೆಸೆಯಿಂದ ಬಂದಿರುವ ಉಪದ್ರವವನ್ನು ಪರಿಹರಿಸಿ ನಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡಾಗ ಅಗಸ್ತ್ಯ ಮಹರ್ಷಿಗಳು ಕಾಶಿ ಪಟ್ಟಣದಿಂದ ಹೊರಟು ದಕ್ಷಿಣ ದೇಶಕ್ಕೆ ಬರುವ ಮಾರ್ಗದಲ್ಲಿ ವಿಂಧ್ಯನ ಬಳಿ ಬಂದರು. ವಿಂಧ್ಯನು ತನ್ನ ಗುರುಗಳಾದ ಅಗಸ್ತ್ಯ ಮಹರ್ಷಿಗಳು ಬರುವುದನ್ನು ಕಂಡು ನಮಸ್ಕರಿಸಲಾಗಿ ಋಷಿವರ್ಯರು ಹಸನ್ಮುಖರಾಗಿ ನಾವು ದಕ್ಷಿಣ ದೇಶಕ್ಕೆ ಹೋಗಿ ಬರುವವರೆಗೂ ಇದೇ ರೀತಿ ಇರಬೇಕೆಂದು ಅಪ್ಪಣೆ ಕೊಟ್ಟರು. ಇದರಿಂದ ವಿಂಧ್ಯನು ಬೆಳೆಯುವುದನ್ನು ನಿಲ್ಲಿಸಿದನು. ಅಗಸ್ತ್ಯರು ಉತ್ತರ ಗೋವರ್ಧನ ಪರ್ವತಕ್ಕೆ ಬಂದು ಶ್ರೀಕೃಷ್ಣನನ್ನು ಕುರಿತು ನೀನು ದಕ್ಷಿಣ ದೇಶದಲ್ಲಿ ನೆಲೆಸಿ ಕಲಿಯುಗದಲ್ಲಿ ಜನರನ್ನು ಸಂರಕ್ಷಿಸಬೇಕೆಂದು ಪ್ರಾರ್ಥಿಸಿದರು.

ಕೃಷ್ಣನು ಕೋರಿಕೆಯನ್ನು ಒಪ್ಪಿ ಮೂರು ಷರತ್ತುಗಳನ್ನು ಹಾಕುತ್ತಾನೆ. – (೧) ನಾನು ಇರುವ ಸ್ಥಳ ಯಾವಾಗಲೂ ಹಿಮದಿಂದ ಕೂಡಿರಬೇಕು (೨) ಸಕುಟುಂಬವಾಗಿ ನೆಲೆಸಲು ಅವಕಾಶವಿರಬೇಕು (೩) ಸಪ್ತಋಷಿಗಳಿಂದ ಪೂಜೆಗಳು ನಡೆಯುತ್ತಿರಬೇಕು. ಈ ಷರತ್ತುಗಳಿಗೆ ಒಪ್ಪಿ ಶ್ರೀ ಅಗಸ್ತ್ಯ ಋಷಿವರ್ಯರು ದಕ್ಷಿಣ ಗೋವರ್ಧನಗಿರಿಗೆ ಸ್ವಾಮಿಯನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿ, ಸ್ವಾಮಿಯ ಆರಾಧನೆ ಮಾಡಿಕೊಂಡಿದ್ದರು. ಹೀಗೆ ಸ್ವಾಮಿಯ ಕೋರಿಕೆಯಂತೆ ಇಂದಿಗೂ ಶ್ರೀಕೃಷ್ಣ ವಿಗ್ರಹದ ಶಿರೋಭಾಗದಲ್ಲಿ ಮತ್ತು ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುತ್ತದೆ.

ಒಂದೇ ಕೃಷ್ಣ ಶಿಲೆಯಲ್ಲಿ ಸಕುಟುಂಬವಾಗಿ ಅಂದರೆ ಕೃಷ್ಣ, ರುಕ್ಮಿಣಿ, ಸತ್ಯಭಾಮ, ಗೋವುಗಳು, ಗೋಪಿಕಾ ಸ್ತ್ರೀಯರು, ಕೃಷ್ಣನ ಸ್ನೇಹಿತ ಮಕರಂದ ಇವರೆಲ್ಲರೂ ಸುರಹೊನ್ನೆ ವೃಕ್ಷದ ಕೆಳಗೆ ತ್ರಿಭಂಗಿಯಲ್ಲಿರುವ ಹಾಗೆ ಸ್ವಾಮಿಯ ವಿಗ್ರಹವಿದೆ. ಇಲ್ಲಿ ಪ್ರತಿನಿತ್ಯವೂ ಸಪ್ತರ್ಷಿಗಳು ಅಗೋಚರವಾಗಿ ಪೂಜೆ ಸಲ್ಲಿಸುತ್ತಿರುವ ಅನುಭವವಾಗುತ್ತದೆ.

ದೇವಸ್ಥಾನದ ನಿರ್ಮಾಣ

ದಕ್ಷಿಣ ಗೋವರ್ಧನಗಿರಿ ಸುತ್ತಮುತ್ತಲಿನ ಪ್ರಾಂತ್ಯದಲ್ಲೂ ಹೊಯ್ಸಳರ ಆಳ್ವಿಕೆಯಲ್ಲಿತ್ತು. ಈ ಅವಧಿಯಲ್ಲಿ ಮಾಧವ ದಂಡನಾಯಕ ಎಂಬ ಪಾಳೆಯಗಾರ ಹೆಗ್ಗಡದೇವನಕೋಟೆ ಮತ್ತು ತೆರಕಣಾಂಬಿ ಪ್ರಾಂತ್ಯವನ್ನು ಆಳುತ್ತಿದ್ದನು. ಈತ ತುಂಬ ದುಷ್ಟ ಅಹಂಕಾರಿ, ಆದಾಗ್ಯೂ ದೈವಭಕ್ತನಾಗಿದ್ದ. ಕೊರತೆಯೆಂದರೆ ಸಂತಾನ ಸೌಭಾಗ್ಯವಿರಲಿಲ್ಲ. ಸಂತಾನವಾಗಲಿಲ್ಲವೆಂದು ತುಂಬ ಕೊರಗುತ್ತಿದ್ದ. ಒಂದು ದಿನ ಶ್ರೀಕೃಷ್ಣ ಪರಮಾತ್ಮನು ಕನಸಿನಲ್ಲಿ ಬಂದು ನಿನಗೆ ಸಂತಾನ ಪ್ರಾಪ್ತಿಯಾಗಬೇಕೆಂದರೆ ನಿನ್ನ ದುಷ್ಟತನವನ್ನು ತ್ಯಜಿಸಿ ನನ್ನ ಸೇವೆ ಮಾಡಿದಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದ ಮೇರೆಗೆ ದೇವಾಲಯಕ್ಕೆ ಬಂದು ಕೃಷ್ಣನ ದರ್ಶನ ಪಡೆದು ಪಾಪನಾಶಿನಿಯಲ್ಲಿ ಸ್ನಾನ ಮಾಡಿ ಪಾಪದಿಂದ ವಿಮುಕ್ತಿಗೊಂಡು ಹತ್ತಿರದ ಸಂತಾನ ತೀರ್ಥದಲ್ಲಿ ಸ್ನಾನ ಮಾಡಿ ದೇವರಲ್ಲಿ ಹರಕೆ ಹೊತ್ತನು. ನಂತರ ಸಂತಾನ ಪ್ರಾಪ್ತಿಯಾಯಿತು. ಆ ಸಂತಾನವೇ ಪೆರುಮಾಳ್ ದಂಡನಾಯಕ. ಪೆರುಮಾಳ್ ದಂಡನಾಯಕನು ನಂತರ ತನ್ನ ತಂದೆಯ ಹರಕೆಯ ಪ್ರಕಾರ ೧೩೧೫ರಲ್ಲಿ ಆಲಯ ನಿರ್ಮಾಣ ಮಾಡಿದನು. ಆಲಯದ ಸುತ್ತ ೪ ಸುತ್ತಿನ ಕೋಟೆಯನ್ನು ಕಟ್ಟಿಸಿ ಅಲ್ಲಿಂದಲೇ ರಾಜ್ಯಭಾರ ಮಾಡುತ್ತಿದ್ದನು.

ಇಲ್ಲಿಗೆ ತಲಪುವುದು ಹೇಗೆ?

ಶ್ರೀ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಎಂಬ ಊರಿನ ಹತ್ತಿರ ಇದೆ. ಮೈಸೂರು-ಊಟಿ ರಸ್ತೆಯಲ್ಲಿ ಸಾಗಿದರೆ ಮೈಸೂರಿನಿಂದ ಸುಮಾರು ೬೦ ಕಿ.ಮೀ. ದೂರದಲ್ಲಿ ಗುಂಡ್ಲುಪೇಟೆ ಎಂಬ ಊರು ಇದೆ. ಇಲ್ಲಿಂದ ಬಲಕ್ಕೆ ತಿರುಗಿ ಸುಮಾರು ೧೦ ಕಿ.ಮೀ. ಹೋದರೆ, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಈ ದೇವಸ್ಥಾನ ಸಿಗುತ್ತದೆ.
Leave a Reply

Your email address will not be published. Required fields are marked *