Search
Friday 29 October 2021
  • :
  • :

ಶ್ರೀ ಗವಿರಂಗನಾಥ ಸ್ವಾಮಿ ವೈಭವ

ದೇವದಾನವರು ಕೂಡಿ ಅಮೃತ ಮಥನಕ್ಕೋಸ್ಕರ ಕ್ಷೀರಸಾಗರವನ್ನು ಕಡೆಯಲು ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ಕಡೆಯುತ್ತಿರುವಾಗ ಮಂದರ ಪರ್ವತವು ಕುಸಿಯುತ್ತಿರಲಾಗಿ ದೇವಾನುದೇವತೆಗಳ ಪ್ರಾರ್ಥನೆಯಂತೆ ಶ್ರೀ ವಿಷ್ಣುವು ತನ್ನ ದಶಾವತಾರದ ದ್ವಿತೀಯ ಅವತಾರವಾದ ಕೂರ್ಮಾವತಾರಿಯಾಗಿ ಮಂದರ ಪರ್ವತವನ್ನು ಮೇಲಕ್ಕೆ ಎತ್ತಿ ನಿಲ್ಲಿಸಿ ಸಮುದ್ರ ಮಥನ ಕಾರ್ಯವು ಸುಗಮವಾಗಿ ನಡೆಯಲು ಕಾರಣೀಭೂತನಾಗಿ,  ಉದ್ಭವಿಸಿದ ಶ್ರೀಲಕ್ಷ್ಮೀಯನ್ನು ಸ್ವೀಕರಿಸಿ, ಶ್ರೀ ಲಕ್ಷ್ಮೀರಂಗನಾಥನಾಗಿ ನೆಲೆನಿಂತು ಭಕ್ತಾದಿಗಳ ಇಷ್ಟಾರ್ಥಗಳನ್ನು ಪೂರೈಸಿ ನಿರಂತರವಾಗಿ ಅನುಗ್ರಹಿಸುತ್ತಾ ಇರುವುದು ಗವಿರಂಗಪುರ ಕ್ಷೇತ್ರದ ಮಹಿಮೆ. ಭಾರತದಲ್ಲಿನ ಕೆಲವೇ ಕೆಲವು ಕೂರ್ಮಾದ್ರಿ ಕ್ಷೇತ್ರಗಳಲ್ಲಿ ಇದು ಒಂದು.

ಇತಿಹಾಸ:

ಗಿರಿಶಿಖರದ ತಪ್ಪಲಿನಲ್ಲಿರುವ ಈ ಗ್ರಾಮದ ದನಗಾಹಿಗಳು ಗೋವುಗಳನ್ನು ಮೇಯಿಸಲು ಗಿರಿಶಿಖರಕ್ಕೆ ಬರುತ್ತಿದ್ದರು. ಗೋವುಗಳ ಮಂದೆಯಲ್ಲಿದ್ದ ಕಪಿಲೆ ಎಂಬ ಒಂದು ಗೋವು ದಿನನಿತ್ಯ ಒಂದು ಗುಹೆಯೊಳಗೆ ಪ್ರವೇಶಿಸಿ ಹುತ್ತವಿರುವಲ್ಲಿ ತನ್ನಷ್ಟಕ್ಕೆ ತಾನೇ ಹಾಲನ್ನು ಕರೆಯುತ್ತಿತ್ತು. ಸಂಜೆ ಗೊಲ್ಲರು ಹಾಲನ್ನು ಕರೆಯುವಾಗ ಈ ಕಪಿಲೆ ಹಸುವಿನ ಹಾಲು ಕ್ರಮೇಣ ಕಡಮೆಯಾಗುತ್ತಿರುವುದನ್ನು ಗಮನಿಸಿದರು. ಆಗ ಹಸುವಿನ ಮಾಲೀಕನಾದ ಗೌಡನು ಗೊಲ್ಲನನ್ನು ಪ್ರಶ್ನಿಸಿ, ಈ ಕೂಡಲೇ ಕಪಿಲೆ ಹಸುವಿನ ಮೇಲೆ ವಿಶೇಷ ಗಮನವಿಡಬೇಕೆಂದು ಆಗ್ರಹಿಸಿದನು. ಗೌಡನ ಆದೇಶದಂತೆ ದನಗಾಹಿ ಗೊಲ್ಲನು ಕಪಿಲೆಯನ್ನು ವಿಶೇಷವಾಗಿ ಗಮನಿಸುತ್ತಿದ್ದಾಗ ಒಂದು ದಿನ ಕಪಿಲೆ ಹಸುವು ಗೋವುಗಳ ಸಮೂಹದಿಂದ ಪ್ರತ್ಯೇಕಗೊಂಡು ಗವಿಯ ಕಡೆ ಹೋಗುವುದನ್ನು ಕಂಡು ಅದನ್ನೇ ಹಿಂಬಾಲಿಸಿ ಹೋಗಿ ನೋಡಿದಾಗ ಈ ಗೋವು ಗವಿಯಲ್ಲಿರುವ ಹುತ್ತದ ಮೇಲೆ ತನ್ನ ಹಾಲನ್ನು ತಾನೇ ಕರೆಯುತ್ತಿರುವುದನ್ನು ಗಮನಿಸಿದನು. ಈ ಅದ್ಭುತವನ್ನು ಕಂಡ ಗೊಲ್ಲನು ಆನಂದತುಂದಿಲನಾಗಿ ಸಾಷ್ಟಾಂಗ ನಮಸ್ಕಾರ ಮಾಡಿ ಧನ್ಯನಾದನು, ಹಾಗೂ ಸಂಜೆ ಗ್ರಾಮಕ್ಕೆ ಹಿಂದಿರುಗಿ ಗೌಡನಿಗೆ ತಾನು ಕಂಡ ದೃಶ್ಯವನ್ನು ವಿವರಿಸಿದನು. ಮರುದಿನ ಗೌಡನೇ ಸ್ವತಃ ಈ ಗಿರಿಶಿಖರದಲ್ಲಿ ನಡೆಯುತ್ತಿರುವ ಅದ್ಭುತವನ್ನು ಕಂಡು ಬೂದಿಹಾಳಿನ ಪಾಳೆಯಗಾರರಲ್ಲಿ ಈ ವಿಷಯವನ್ನೆಲ್ಲ ನಿವೇದಿಸಿಕೊಂಡನು. ಈ ಹಿಂದಿನ ದಿನವೇ ಸ್ವಾಮಿಯು ಬೂದಿಹಾಳಿನ ಪಾಳೇಗಾರನ ಸ್ವಪ್ನದಲ್ಲಿ ಕಾಣಿಸಿಕೊಂಡು ಕೂರ್ಮಾವತಾರಿಯಾಗಿ ಈ ಗಿರಿಶಿಖರದಲ್ಲಿ ನೆಲೆ ನಿಂತಿರುವುದಾಗಿ, ತನಗೆ ನಿತ್ಯ ಪೂಜಾ ಕಾರ್ಯವನ್ನು ನಿರಂತರವಾಗಿ ನಡೆಸಬೇಕೆಂದು ಆದೇಶಿಸಿದ್ದನು. ಈಗ ಗೌಡನು ಇದೇ ವಿಷಯವನ್ನು ಹೇಳುತ್ತಿರುವುದನ್ನು ಅನುಸರಿಸಿ ಸುತ್ತಲ ಗ್ರಾಮದ ಮುಖಂಡರನ್ನು ಒಳಗೊಂಡಂತೆ ಮಂಗಳವಾದ್ಯ ಸಹಿತವಾಗಿ ಪೂಜಾ ಸಾಮಗ್ರಿಗಳೊಂದಿಗೆ ಗಿರಿಶಿಖರದ ಗವಿಯಲ್ಲಿಗೆ ತೆರಳಿದನು. ಗುಹಾ ಪ್ರದೇಶವನ್ನು ಶುಭ್ರಗೊಳಿಸಿ ಹುತ್ತವಿರುವಲ್ಲಿ ವೀಕ್ಷಿಸಿದಾಗ  ಶಿಲಾರೂಪದಲ್ಲಿಯ ಸಹಜ ಶಂಖ-ಚಕ್ರ ಮುದ್ರಾಂಕಿತ ತ್ರಿನಾಮಧಾರಿ ಕೂರ್ಮಾವತಾರಿ ಶ್ರೀವಿಷ್ಣುವನ್ನು ಕಂಡು ನಮಸ್ಕರಿಸಿ ಪೂಜಾಕಾರ್ಯ ನೆರವೇರಿಸಿದರು. ಪ್ರಥಮ ಬಾರಿಗೆ ಈ ಕ್ಷೇತ್ರದರ್ಶನ ಮಾಡಿದ ಗೊಲ್ಲನನ್ನು ಪೂಜಾಕಾರ್ಯಕ್ಕೆಂದು ನೇಮಿಸಿ ಜಮೀನನ್ನು ದೇವಸ್ಥಾನಕ್ಕೆ ಬಳುವಳಿಯಾಗಿ ಕೊಟ್ಟು, ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಾರಂಭಿಸಿದರು.

ಲಕ್ಷ್ಮೀ ದೇವಾಲಯ: ಮಾರ್ಗದ ದಕ್ಷಿಣ ಬದಿಗೆ ಶ್ರೀಲಕ್ಷ್ಮೀ ಅಮ್ಮನವರ ದೇವಸ್ಥಾನವಿದೆ. ಇದು ಪ್ರತಿಷ್ಠಾ ಮೂರ್ತಿಯಾಗಿದ್ದು ಸಹಸ್ರದಳ ಕಮಲದ ಮೇಲೆ ಕುಳಿತಿರುವ ದೇವಿ ಪ್ರಸನ್ನ ಮುಖಭಾವದಿಂದ ಕೂಡಿದ್ದು, ಅಭಯ ಹಸ್ತವುಳ್ಳ ವಿಗ್ರಹವು ಬಹಳ ಸುಂದರವಾಗಿದೆ.

ಅನಂತಶಯನ ಸ್ವಾಮಿ : ಈ ವಿಗ್ರಹವನ್ನು ಬೆಟ್ಟದ ತಪ್ಪಲಿನಲ್ಲಿ ಸ್ವಾಮಿಯ ಸನ್ನಿಧಾನಕ್ಕೆ ಹೋಗುವ ದಾರಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸಿರುವ ಸ್ವಾಮಿಯ ನಾಭಿಯಿಂದ ಬ್ರಹ್ಮನೂ ಪಾದತಳದಲ್ಲಿ ಶ್ರೀದೇವಿ-ಭೂದೇವಿಯರು ಉಪಸ್ಥಿತರಿದ್ದು ಇದು ತುಂಬ ಮನೋಹರವಾಗಿದೆ.

ಮಾರುತಿ ಮಂಟಪ: ಅನಂತಶಯನ ಸ್ವಾಮಿಯ ಪಕ್ಕದಲ್ಲೇ ಇರುವ ವೂರುತಿ ದೇವಾಲಯದಲ್ಲಿ ಅಂಜನಾಸುತ ಎಂಬ ಈ ಮೂರ್ತಿಯು ಸುಮಿತ್ರಾನಂದನ ಮತ್ತು ಕಪಿವೀರರ ಸಲುವಾಗಿ ಸಂಜೀವಿನಿ ಇರುವ ಔಷಧಿ ಪರ್ವತವನ್ನು ಹೊತ್ತಿದ್ದು ಸೌಮ್ಯ ಸ್ವರೂಪದಿಂದ ಕೂಡಿ ಶ್ರೀರಾಮ ಭಕ್ತಿಯ ದ್ಯೋತಕವಾಗಿದೆ. ಈಗ ಜೀರ್ಣೋದ್ಧಾರ- ಗೊಂಡು ದೇವಾಲಯ ಸುಂದರವಾಗಿದೆ.

ಶಂಕರಲಿಂಗ ಮಲ್ಲೇಶ್ವರ ದೇವಾಲಯ: ಸ್ವಾಮಿಯವರ ಗಿರಿಶಿಖರದ ಹಿಂಭಾಗದ ಗುಹೆಯಲ್ಲಿ ಶಂಕರಲಿಂಗ ಮಲ್ಲೇಶ್ವರರ ಪವಿತ್ರ ಲಿಂಗಗಳಿವೆ.  ಇವುಗಳ ಪಕ್ಕದಲ್ಲಿಯೇ ಸ್ವಾಮಿಯವರ ಶಂಖ-ಚಕ್ರ ಮುದ್ರಾಂಕಿತ ಪಾದಗಳಿವೆ. ಪ್ರತಿ ದಿವಸವೂ ಅಸಂಖ್ಯಾತ ಭಕ್ತರು ತಮ್ಮ ಸಮಸ್ಯೆ ಮತ್ತು ಕೋರಿಕೆಯನ್ನು ಸ್ವಾಮಿಯಲ್ಲಿ ಅರಿಕೆ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತೃಪ್ತಿ ಕಾಣುತ್ತಾರೆ.

ಮೈಸೂರು ಆಸ್ಥಾನದಲ್ಲಿ ದಿವಾನರಾಗಿದ್ದ ಪೂರ್ಣಯ್ಯನವರು ಕ್ಷೇತ್ರವನ್ನು ಸಂದರ್ಶಿಸಿ ಇಲ್ಲಿಯ ಪೂಜಾ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲು ಅನುಕೂಲವಾಗಲೆಂದು ಮೈಸೂರು ನಗರದಿಂದ ಒಂದು ವೈಷ್ಣವ ಕುಟುಂಬವನ್ನು ಇಲ್ಲಿ ನೆಲೆನಿಲ್ಲಿಸಿ ಪಾಂಚರಾತ್ರ ಆಗಮ ಪದ್ಧತಿಯಂತೆ ಪೂಜಾಕಾರ್ಯಗಳು ನಡೆಯುವಂತೆ ರಾಜರ ಆದೇಶದಂತೆ ದತ್ತಿಯನ್ನು ನಿರ್ಮಿಸಿದರು. ಮುಂದೆ ದೇವಾಲಯ  ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿತು.

ಉತ್ಸವ ಮೂರ್ತಿ: ಸ್ವಾಮಿಯ ಉತ್ಸವ ಮೂರ್ತಿಗೆ ಗ್ರಾಮದಲ್ಲಿ ಒಂದು ದೇವಸ್ಥಾನವಿದ್ದು ಉತ್ಸವ ಕಾಲದಲ್ಲಿ ಗಿರಿಶಿಖರಕ್ಕೆ ತಂದು ಅನಂತಶಯನ ಗರ್ಭಗುಡಿಯಲ್ಲಿ ಇರಿಸಿ ಉತ್ಸವ ಕಾರ್ಯಗಳು ಮುಗಿದ ಅನಂತರ ಗ್ರಾಮದ ದೇವಸ್ಥಾನಕ್ಕೆ ಕೊಂಡೊಯ್ದು ನಿತ್ಯ ಪೂಜಾ ಕಾರ್ಯ ನೇರವೇರಿಸುವರು. ಪ್ರತಿ ಶನಿವಾರ ಭಜನಾ ಕಾರ್ಯಕ್ರಮ ನಡೆಯುವುದು. ಉತ್ಸವ ಮೂರ್ತಿಯನ್ನು ವಿವಿಧ ವಾಹನಗಳಲ್ಲಿ ಕರೆದೊಯ್ಯಲಾಗುತ್ತದೆ.

ಉತ್ಸವಾಚರಣೆ: ಕ್ಷೇತ್ರದಲ್ಲಿ ವಿವಿಧ ರೀತಿಯ ಉತ್ಸವ ವಾಹನಗಳಿದ್ದು ತನ್ನದೇ ಆದ ವೈವಿಧ್ಯದಿಂದ ಕೂಡಿವೆ. ಇದನ್ನು ಪ್ರತ್ಯಕ್ಷವಾಗಿ ನೋಡಿಯೇ ಆನಂದಿಸಬೇಕು.

ರಥಸಪ್ತಮಿ: ಮಾಘ ಮಾಸದಲ್ಲಿ ರಥಸಪ್ತಮಿ ಉತ್ಸವವು ಅತೀ ವಿಜೃಂಭಣೆಯಿಂದ ನಡೆಯುವುದು. ಶ್ರೀ ಲಕ್ಷ್ಮೀರಂಗನಾಥ- ಸ್ವಾಮಿಯು ಸೂರ್ಯ ಭಗವಾನನಾಗಿ ಸಪ್ತಾಶ್ವಗಳಿಂದ ಕೂಡಿದ ರಥದಲ್ಲಿ ವಿರಾಜಮಾನನಾಗಿ ವಿಜೃಂಭಿಸಿ ಸಮೂಹವನ್ನು ಹರಸುವನು.

ಕೂರ್ಮಾವತಾರದ ಜಯಂತ್ಯುತ್ಸವ ಈ ಕ್ಷೇತ್ರದ ವಿಶೇಷ ಉತ್ಸವ. ಚೈತ್ರ ಮಾಸದ ಚಿತ್ತಾ  ನಕ್ಷತ್ರದ ದಿವಸ  ಬ್ರಹ್ಮರಥೋತ್ಸವ. ಇಲ್ಲಿ ನಡೆಯುವ ಉತ್ಸವಗಳ ಕಾಲದಲ್ಲಿ ಮಹಾ ಭಾಗವತೋತ್ತಮರಾದ ಹನುಮ, ವಿಭೀಷಣ, ಅಂಬರೀಷ ಮೊದಲಾದವರು ಭಕ್ತ ಸಮೂಹದಲ್ಲಿ ನೆರೆದು ಶ್ರೀಲಕ್ಷ್ಮೀರಂಗನಾಥ ಸ್ವಾಮಿಯವರ ವೈಭವವನ್ನು ನೋಡಿ ನಲಿಯುವರೆಂದು ಪ್ರತೀತಿ.
Leave a Reply

Your email address will not be published. Required fields are marked *