Search
Sunday 28 February 2021
  • :
  • :

ದಿವ್ಯ ಸಂಸ್ಕೃತಿ

ಕೃಷ್ಣ ಪ್ರಜ್ಞೆ ಆಂದೋಲನವು ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ವಾಸ್ತವವಾಗಿ ಅದು ಬೇರೆ ಮತ ಅಥವಾ ಧರ್ಮಗಳನ್ನು ಪರಾಜಯಗೊಳಿಸಲು ಪ್ರಯತ್ನಿಸುವ ಮತ ಅಥವಾ ಧರ್ಮ ಅಲ್ಲವೇ ಅಲ್ಲ. ಅದಕ್ಕಿಂತ, ಇದು ಇಡೀ ಮಾನವ ಸಮಾಜಕ್ಕೆ ಒಂದು ಅಗತ್ಯ ಸಾಂಸ್ಕೃತಿಕ ಆಂದೋಲನವಾಗಿದ್ದು ಯಾವುದೇ ನಿರ್ದಿಷ್ಟ ಪಂಥೀಯ ನಂಬಿಕೆಯನ್ನು ಪರಿಗಣಿಸುವುದಿಲ್ಲ. ಈ ಸಾಂಸ್ಕೃತಿಕ ಆಂದೋಲನವು ಭಗವಂತನನ್ನು ಹೇಗೆ ಪ್ರೀತಿಸಬೇಕೆಂಬುದರ ಬಗೆಗೆ ಜನರಿಗೆ ಬೋಧನೆ ನೀಡುವ ಮುಖ್ಯ ಉದ್ದೇಶ ಹೊಂದಿದೆ.

ನಾವು ಹಿಂದೂ ಧರ್ಮವನ್ನು ಬೋಧಿಸುತ್ತಿದ್ದೇವೆಂದು ಭಾರತದ ಒಳಗಿನ ಮತ್ತು ಹೊರಗಿನ ಭಾರತೀಯರು ಕೆಲವೊಮ್ಮೆ ಭಾವಿಸುತ್ತಾರೆ. ಆದರೆ ವಾಸ್ತವವಾಗಿ ನಾವು ಹಾಗೆ ಮಾಡುತ್ತಿಲ್ಲ. ಭಗ‌ದ್ಗೀತೆಯಲ್ಲಿ ಹಿಂದೂ ಎಂಬ ಪದ ಕಾಣಸಿಗುವುದಿಲ್ಲ. ವಾಸ್ತವವಾಗಿ, ಇಡೀ ವೈದಿಕ ಸಾಹಿತ್ಯದಲ್ಲಿ “ಹಿಂದೂ” ಎಂಬ ಪದವಿಲ್ಲ. ಈ ಪದವನ್ನು ಆಫ್ಘಾನಿಸ್ತಾನ, ಬಲೂಚಿಸ್ತಾನ, ಪರ್ಶಿಯಾದಂತಹ ನಮ್ಮ ನೆರೆ ಪ್ರಾಂತ್ಯಗಳ ಮುಸ್ಲಿಮರು ಶುರು ಮಾಡಿದ್ದಾರೆ. ಭಾರತದ ವಾಯುವ್ಯ ಪ್ರಾಂತ್ಯದ ಗಡಿಯಲ್ಲಿ “ಸಿಂಧೂ” ಎಂಬ ನದಿ ಇದೆ. ಅಲ್ಲಿನ ಮುಸ್ಲಿಮರಿಗೆ “ಸಿಂಧೂ”  ಪದವನ್ನು ಸರಿಯಾಗಿ ಉಚ್ಚರಿಸಲಾಗದ ಕಾರಣ ಅವರು ಆ ನದಿಯನ್ನು “ಹಿಂದೂ” ಎಂದು ಕರೆದರು ಮತ್ತು ಆ ಪ್ರದೇಶದ ವಾಸಿಗಳ‌ನ್ನು “ಹಿಂದೂ” ಗಳೆಂದು ಕರೆದರು. ಭಾರತದಲ್ಲಿ, ವೈದಿಕ ಭಾಷೆಯ ಪ್ರಕಾರ, ಯೋರೋಪಿಯನ್ನರನ್ನು ಮ್ಲೇಚ್ಛರು ಅಥವಾ ಯವನರೆಂದು ಕರೆಯುತ್ತಾರೆ. ಅದೇ ರೀತಿ, “ಹಿಂದೂ” ಎಂಬುವುದು ಮುಸ್ಲಿಮರು ನೀಡಿರುವ ಹೆಸರು.

ವರ್ಣಾಶ್ರಮ ವ್ಯವಸ್ಥೆಯ ಅಪಾರ್ಥ

ಭಾರತದ ನಿಜವಾದ ಸಂಸ್ಕೃತಿಯನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಭಿನ್ನವಾದ ಗುಣಗಳು ಅಥವಾ ಐಹಿಕ ಪ್ರಕೃತಿಯ ಪ್ರಕಾರ ಭಿನ್ನ ವಿಧವಾದ ವ್ಯಕ್ತಿಗಳಿದ್ದಾರೆ. ಅವರನ್ನು ಸಾಮಾನ್ಯವಾಗಿ ನಾಲ್ಕು ಸಾಮಾಜಿಕ ವ್ಯವಸ್ಥೆ ಮತ್ತು ನಾಲ್ಕು ಆಧ್ಯಾತ್ಮಿಕ ವ್ಯವಸ್ಥೆಗಳನ್ನಾಗಿ ವರ್ಗೀಕರಿಸಲಾಗಿದೆ. ಈ ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಭಾಗದ ಪದ್ಧತಿಯನ್ನು ವರ್ಣಾಶ್ರಮ ಧರ್ಮ ಎನ್ನುತ್ತಾರೆ. ನಾಲ್ಕು ವರ್ಣಗಳು ಅಥವಾ ಸಾಮಾಜಿಕ ವ್ಯವಸ್ಥೆಗಳೆಂದರೆೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ನಾಲ್ಕು ಆಶ್ರಮ ಅಥವಾ ಆಧ್ಯಾತ್ಮಿಕ ವ್ಯವಸ್ಥೆಗಳೆಂದರೆ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ವರ್ಣಾಶ್ರಮ ಪದ್ಧತಿಯನ್ನು ಪುರಾಣಗಳೆಂಬ ವೈದಿಕ ಸಾಹಿತ್ಯದಲ್ಲಿ ವಿವರಿಸಲಾಗಿದೆ. ಕೃಷ್ಣ ಅಥವಾ ಭಗವಂತನನ್ನು ಕುರಿತ ಜ್ಞಾನದ ಮುನ್ನಡೆಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದೇ ಈ ವೈದಿಕ ಸಂಸ್ಕೃತಿ ವ್ಯವಸ್ಥೆಯ ಗುರಿ. ಅದೇ ಇಡೀ ವೈದಿಕ ಕಾರ್ಯಕ್ರಮ.

ಶ್ರೀ ಚೈತನ್ಯರು ಶ್ರೇಷ್ಠ ಭಕ್ತ ರಾಮಾನಂದ ರಾಯರೊಂದಿಗೆ ಮಾತನಾಡುವಾಗ “ಮಾನವ ಜೀವನದ ಮೂಲ ತತ್ತ್ವ ಏನು?” ಎಂದು ಕೇಳಿದರು. ವರ್ಣಾಶ್ರಮ ಧರ್ಮವನ್ನು ಸ್ವೀಕರಿಸಿದಾಗ ಮಾನವ ನಾಗರೀಕತೆ ಆರಂಭಗೊಳ್ಳುತ್ತದೆ ಎಂದು ಅವರು ಉತ್ತರಿಸಿದ್ದರು. ವರ್ಣಾಶ್ರಮ ಧರ್ಮದ ಗುಣ ಮಟ್ಟಕ್ಕೆ ಬರುವ ಮುನ್ನ ಮಾನವ ನಾಗರೀಕತೆಯ ಪ್ರಶ್ನೆಯೇ ಇಲ್ಲ. ಆದುದರಿಂದ ಕೃಷ್ಣ ಪ್ರಜ್ಞೆ ಆಂದೋಲನವು ಮಾನವ ನಾಗರೀಕತೆಯ ಈ ಸರಿಯಾದ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದು ಕೃಷ್ಣ ಪ್ರಜ್ಞೆ ಅಥವಾ ದೈವ ವರ್ಣಾಶ್ರಮ – ದೈವೀ ಸಂಸ್ಕೃತಿ ಎಂದು ಹೆಸರು ಪಡೆದಿದೆ.

ಭಾರತದಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ವಿಕೃತವಾದ ರೀತಿಯಲ್ಲಿ, ಅಪಾರ್ಥವಾಗಿ ಸ್ವೀಕರಿಸಲಾಗಿದೆ. ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಒಬ್ಬ ವ್ಯಕ್ತಿ ತನ್ನನ್ನು ಬ್ರಾಹ್ಮಣನನ್ನಾಗಿ ಸ್ವೀಕರಿಸಬೇಕೆಂದು ಪ್ರತಿಪಾದಿಸುತ್ತಾನೆ. ಆದರೆ ಇಂತಹ ಪ್ರತಿಪಾದನೆಯನ್ನು ಶಾಸ್ತ್ರಗಳು (ಧರ್ಮ ಗ್ರಂಥಗಳು) ಒಪ್ಪುವುದಿಲ್ಲ. ಒಬ್ಬ ವ್ಯಕ್ತಿಯ ಪೂರ್ವಜರು ಗೋತ್ರದ ಅಥವಾ ಕೌಟುಂಬಿಕ ವಂಶಪಾರಂಪರ್ಯ ವ್ಯವಸ್ಥೆಯ ಪ್ರಕಾರ ಬ್ರಾಹ್ಮಣರಾಗಿ ಇದ್ದಿರಬಹುದು. ಆದರೆ ನಿಜವಾದ ವರ್ಣಾಶ್ರಮ ಧರ್ಮವು ವ್ಯಕ್ತಿಯ ಜನ್ಮ ಅಥವಾ ವಂಶಪಾರಂಪರ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಅವನು ಹೊಂದಿರುವ ವಾಸ್ತವಿಕ ಗುಣದ ಮೇಲೆ ಆಧಾರಿತವಾಗಿದೆ. ಆದುದರಿಂದ ನಾವು ಹಿಂದೂಗಳ, ಮುಖ್ಯವಾಗಿ ಶ್ರೀ ಶಂಕರಾಚಾರ್ಯರ ಪ್ರಭಾವಕ್ಕೆ ಒಳಪಟ್ಟವರ,  ಪ್ರಸ್ತುತ ಪದ್ಧತಿಯನ್ನು ಬೋಧಿಸುತ್ತಿಲ್ಲ. ಶಂಕರಾಚಾರ್ಯರು ಪರಮ ಸತ್ಯವು ನಿರಾಕಾರ ಎಂದು ಬೋಧಿಸಿದರು. ಹೀಗೆ ಅವರು ಭಗವಂತನ ಅಸ್ತಿತ್ವವನ್ನು ಪರೋಕ್ಷವಾಗಿ ನಿರಾಕರಿಸಿದರು.

ಶಂಕರಾಚಾರ್ಯರ ಧ್ಯೇಯವು ವಿಶೇಷ; ಬೌಧ್ಧ ಧರ್ಮದ ಪ್ರಭಾವದ ಅನಂತರ ವೇದಗಳ ಪ್ರಭಾವವನ್ನು ಪುನರ್ ಸ್ಥಾಪಿಸಲು ಅವರು ಅವತರಿಸಿದರು. ಚಕ್ರವರ್ತಿ ಅಶೋಕನು ಪೋಷಕನಾಗಿದ್ದ ಕಾರಣ ೨೬೦೦ ವರ್ಷಗಳ ಹಿಂದೆ ಬೌದ್ಧ ಧರ್ಮವು ಹೆಚ್ಚೂ ಕಡಮೆ ಭಾರತದಾದ್ಯಂತ ಹರಡಿತ್ತು. ವೈದಿಕ ಸಾಹಿತ್ಯದ ಪ್ರಕಾರ, ಬುದ್ಧನು ವಿಶೇಷ ಶಕ್ತಿ ಹೊಂದಿದ್ದ ಕೃಷ್ಣನ ಅವತಾರ ಮತ್ತು ಒಂದು ವಿಶೇಷ ಉದ್ದೇಶಕ್ಕಾಗಿ ಆವಿರ್ಭವಿಸಿದ. ಬುದ್ಧನ ಚಿಂತನೆ ಅಥವಾ ಮತವನ್ನು ವ್ಯಾಪಕವಾಗಿ ಸ್ವೀಕರಿಸಲಾಗಿತ್ತು. ಆದರೆ ಬುದ್ಧನು ವೇದಗಳ ಅಧಿಕೃತತೆಯನ್ನು ತಿರಸ್ಕರಿಸಿದ್ದನು. ಬೌದ್ಧ ಧರ್ಮವು ವ್ಯಾಪಿಸುತ್ತಿದಂತೆಯೇ ವೈದಿಕ ಸಂಸ್ಕೃತಿಯು ಭಾರತದೊಳಗೆ ಮತ್ತು ಇತರ ಪ್ರದೇಶಗಳಲ್ಲಿ ಸ್ಥಗಿತಗೊಂಡಿತು. ಆದುದರಿಂದ ಬುದ್ಧನ ಸಿದ್ಧಾಂತವನ್ನು ಹೊರ ದೂಡುವ ಏಕೈಕ ಗುರಿಯನ್ನೇ ಹೊಂದಿದ್ದ ಶ್ರೀ ಶಂಕರಾಚಾರ್ಯರು ಮಾಯಾವಾದ ಎಂಬ ವ್ಯವಸ್ಥೆಯನ್ನು ಆರಂಭಿಸಿದರು.

ನಿಷ್ಕೃಷ್ಟವಾಗಿ ಹೇಳುವುದಾದರೆ, ಮಾಯಾವಾದ ಸಿದ್ಧಾಂತ ಪದ್ಧತಿಯು ನಾಸ್ತಿಕವಾದ. ಏಕೆಂದರೆ, ವ್ಯಕ್ತಿಯು ದೇವರಿದ್ದಾನೆ ಎಂಬುವುದನ್ನು ಊಹಿಸುವ ವಿಧಾನವಿದು. ಈ ಮಾಯಾವಾದ ಸಿದ್ಧಾಂತ ಪದ್ಧತಿಯು ಅನಾದಿಕಾಲದಿಂದಲೂ ಇದೆ. ಈಗಿನ ಭಾರತೀಯ ಧರ್ಮ ಅಥವಾ ಸಂಸ್ಕೃತಿ ವ್ಯವಸ್ಥೆಯು ಬೌದ್ಧ ಸಿದ್ಧಾಂತದೊಂದಿಗೆ ಸಮನ್ವಯವಾದ (ರಾಜಿ) ಶಂಕರಾಚಾರ್ಯರ ಮಾಯಾವಾದ ತತ್ತ್ವ ಶಾಸ್ತ್ರದ ಮೇಲೆ ಆಧಾರಿತವಾಗಿದೆ. ಮಾಯಾವಾದ ಸಿದ್ಧಾಂತದ ಪ್ರಕಾರ, ವಾಸ್ತವವಾಗಿ ದೇವರಿಲ್ಲ, ಅಥವಾ ಇದ್ದರೂ ನಿರಾಕಾರ ಮತ್ತು ಸರ್ವವ್ಯಾಪಿ. ಆದುದರಿಂದ ಅವನನ್ನು  ಯಾವುದೇ ರೂಪದಲ್ಲಿ ಊಹಿಸಿಕೊಳ್ಳಬಹುದು. ಈ ನಿರ್ಣಯವು ವೈದಿಕ ಸಾಹಿತ್ಯಕ್ಕೆ ಅನುಗುಣವಾಗಿ ಇಲ್ಲ. ಆ ಸಾಹಿತ್ಯವು ಅನೇಕ ದೇವತೆಗಳನ್ನು ಹೆಸರಿಸುತ್ತದೆ ಮತ್ತು ಅನೇಕ ಉದ್ದೇಶಗಳಿಗೆ ಈ ದೇವತೆಗಳನ್ನು ಆರಾಧಿಸಲಾಗುತ್ತದೆ. ಆದರೆ ಪ್ರತಿಯೊಂದು ವಿಷಯದಲ್ಲಿಯೂ ದೇವೋತ್ತಮ ಪರಮ ಪುರುಷ ವಿಷ್ಣುವನ್ನು ಪರಮ ನಿಯಂತ್ರಕ ಎಂದು ಸ್ವೀಕರಿಸಲಾಗಿದೆ. ಅದು ನಿಜವಾದ ವೈದಿಕ ಸಂಸ್ಕೃತಿ.

ಭಗವಂತನ ಅಸ್ತಿತ್ವ

ಕೃಷ್ಣ ಪ್ರಜ್ಞೆ ಸಿದ್ಧಾಂತವು ಭಗವಂತ ಮತ್ತು ದೇವತೆಗಳ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಆದರೆ ಮಾಯಾವಾದ ಸಿದ್ಧಾಂತವು ಎರಡರ ಅಸ್ತಿತ್ವವನ್ನೂ ನಿರಾಕರಿಸುತ್ತದೆ. ಭಗವಂತ ಅಥವಾ ದೇವತೆಗಳ ಅಸ್ತಿತ್ವ ಇಲ್ಲ ಎಂದೇ ಅದು ಸಮರ್ಥಿಸಿಕೊಳ್ಳುತ್ತಾ ಬಂದಿದೆ. ಮಾಯಾವಾದಿಗಳಿಗೆ ಅಂತಿಮವಾಗಿ ಎಲ್ಲವೂ ಸೊನ್ನೆ. ಯಾರಾದರೂ ಯಾವುದೇ ವಿಧಾಯಕ ಶಕ್ತಿಯನ್ನು, ವಿಷ್ಣು, ದುರ್ಗ, ಶಿವ ಅಥವಾ ಸೂರ್ಯನನ್ನು ಊಹಿಸಿಕೊಳ್ಳಬಹುದು. ಏಕೆಂದರೆ ಇವರೆಲ್ಲ ಸಮಾಜದಲ್ಲಿ ಸಾಮಾನ್ಯವಾಗಿ ಪೂಜಿಸಲ್ಪಡುವ ದೇವತೆಗಳು. ಆದರೆ, ಮಾಯಾವಾದ ಸಿದ್ಧಾಂತವು ವಾಸ್ತವದಲ್ಲಿ ಅವರು ಯಾರೂ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ. ನಿರಾಕಾರ ಬ್ರಹ್ಮನ್ ಮೇಲೇ ಮನಸ್ಸನ್ನು ಕೇಂದ್ರೀಕರಿಸಲಾಗದ ಕಾರಣ ವ್ಯಕ್ತಿಯು ಈ ರೂಪಗಳನ್ನು ಊಹಿಸಿಕೊಳ್ಳಬಹುದು ಎಂದು ಮಾಯಾವಾದಿಗಳು ವಾದಿಸುತ್ತಾರೆ. ಇದೊಂದು ಹೊಸ ವ್ಯವಸ್ಥೆಯಾಗಿದ್ದು ಇದನ್ನು ಪಂಚೋಪಾಸನ ಎಂದು ಕರೆಯುತ್ತಾರೆ. ಇದನ್ನು ಶಂಕರಾಚಾರ್ಯರು ಆರಂಭಿಸಿದರು. ಆದರೆ ಭಗವದ್ಗೀತೆಯು ಅಂತಹ ಸಿದ್ಧಾಂತಗಳನ್ನು ಬೋಧಿಸುವುದಿಲ್ಲ. ಆದುದರಿಂದ ಅವು ಅಧಿಕೃತವಲ್ಲ.

ಭಗವದ್ಗೀತೆಯು ದೇವತೆಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತದೆ. ವೇದಗಳಲ್ಲಿ ದೇವತೆಗಳ ಕುರಿತು ವರ್ಣನೆ ಇದೆ. ಅವರ ಅಸ್ತಿತ್ವವನ್ನು ಯಾರೂ ನಿರಾಕರಿಸಲಾಗದು. ಆದರೆ ಅವರನ್ನು ಶಂಕರಾಚಾರ್ಯರ ಮಾದರಿಯಲ್ಲಿ ಅರ್ಥಮಾಡಿಕೊಳ್ಳಬಾರದು ಅಥವಾ ಪೂಜಿಸಬಾರದು. ದೇವತೆಗಳ ಆರಾಧನೆಯನ್ನು ಭಗವದ್ಗೀತೆಯು ತಿರಸ್ಕರಿಸಿದೆ. ಗೀತೆ ಹೇಳುತ್ತದೆ,

ಕಾಮೈಸ್ ತೈಸ್ ತೈರ್ ಹೃತ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ |
ತಂ ತಂ ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ||

“ಐಹಿಕ ಬಯಕೆಗಳು ಯಾರ ಬುದ್ಧಿಶಕ್ತಿಯನ್ನು ಕಸಿದಿವೆಯೋ ಅಂತಹವರು ದೇವತೆಗಳಿಗೆ ಶರಣಾಗುತ್ತಾರೆ ಮತ್ತು ತಮ್ಮ ಸ್ವಭಾವಗಳಿಗೆ ಅನುಗುಣವಾಗಿ ಪೂಜೆಯ ನಿರ್ದಿಷ್ಟ ನಿಯಮ ನಿಬಂಧನೆಗಳನ್ನು ಅನುಸರಿಸುತ್ತಾರೆ. “(ಭಗವದ್ಗೀತೆ ೭.೨೦) ಗೀತೆಯ ಎರಡನೆಯ ಅಧ್ಯಾಯದಲ್ಲಿ (ಶ್ಲೋಕ ೪೪) ಕೃಷ್ಣ ಹೇಳುತ್ತಾನೆ,

ಭೋಗೈಶ್ವರ್ಯ ಪ್ರಸಕ್ತಾನಾಂ ತಯಾಪಹೃತ ಚೇತಸಂ |
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವೀಯತೇ ||

“ಭೋಗ ಮತ್ತು ಪ್ರಾಪಂಚಿಕ ಸಂಪತ್ತಿಗೆ ಅತಿಯಾಗಿ ಅಂಟಿಕೊಂಡವರಲ್ಲಿ ಮತ್ತು ಇಂತಹ ವಿಷಯಗಳಿಂದ ಚಿತ್ತಭ್ರಮಣೆಯಾದವರಲ್ಲಿ ಭಗವಂತನ ಭಕ್ತಿ ಸೇವೆಗಾಗಿ ದೃಢ ಸಂಕಲ್ಪವು ಇರುವುದಿಲ್ಲ.” ವಿವಿಧ ದೇವತೆಗಳನ್ನು ಅನುಸರಿಸುವವರನ್ನು ಹೃತ ಜ್ಞಾನಾಃ ಎಂದು ವರ್ಣಿಸಲಾಗಿದೆ. ಅಂದರೆ, ಯಾರು ತಮ್ಮ ಜ್ಞಾನವನ್ನು ಕಳೆದುಕೊಂಡಿರುವರೋ ಅವರು. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ,

ಅನ್ತವತ್ ತು ಫಲಂ ತೇಷಾಂ ತದ್ ಭವತಿ ಅಲ್ಪ ಮೇಧಸಾಂ |
ದೇವಾನ್ ದೇವಯಜೋ ಯಂತಿ ಮದ್ಭಕ್ತಾ ಯಾನ್ತಿ ಮಾಂ ಅಪಿ ||

“ಅಲ್ಪ ಬುದ್ಧಿಯವರು ದೇವತೆಗಳನ್ನು ಪೂಜಿಸುತ್ತಾರೆ. ಅವರು ಪಡೆಯುವ ಫಲವು ಮಿತವಾದದ್ದು ಮತ್ತು ಅಲ್ಪ ಕಾಲದ್ದು. ದೇವತೆಗಳನ್ನು ಪೂಜಿಸುವವರು ದೇವತೆಗಳ ಲೋಕಕ್ಕೆ ಹೋಗುತ್ತಾರೆ. ಆದರೆ ನನ್ನ ಭಕ್ತರು ಕಡೆಗೆ ನನ್ನ ಪರಮ ಲೋಕವನ್ನು ಮುಟ್ಟುವರು.”  ದೇವತೆಗಳಿಂದ ಪಡೆವ ಫಲಗಳು ತಾತ್ಕಾಲಿಕ, ಏಕೆಂದರೆ ಐಹಿಕ ಜಗತ್ತಿನಲ್ಲಿ ಯಾವುದೇ ಲೌಕಿಕ ಸೌಲಭ್ಯವು ತಾತ್ಕಾಲಿಕ ದೇಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಬೇಕಾಗಿದೆ. ಆಧುನಿಕ ವೈಜ್ಞಾನಿಕ ವಿಧಾನಗಳಿಂದ ಅಥವಾ ದೇವತೆಗಳ ವರಗಳಿಂದ ಪಡೆದ ಯಾವುದೇ ಲೌಕಿಕ ಸೌಲಭ್ಯಗಳು ದೇಹದ ಜೊತೆಗೇ ನಾಶವಾಗುತ್ತವೆ ಆದರೆ ಆಧ್ಯಾತ್ಮಿಕ ಪ್ರಗತಿಯು ಎಂದಿಗೂ ನಾಶವಾಗುವುದಿಲ್ಲ.

ದೇವರನ್ನು ಪ್ರೀತಿಸುವ ಬೋಧನೆ

ನಾವು ಧರ್ಮದ ಒಂದು ಪದ್ಧತಿಯನ್ನು ಬೋಧಿಸುತ್ತಿದ್ದೇವೆ ಎಂದು ಜನರು ಭಾವಿಸಬಾರದು. ಇಲ್ಲ. ನಾವು ದೇವರನ್ನು ಹೇಗೆ ಪ್ರೀತಿಸಬೇಕೆಂಬುದನಷ್ಟೇ ಬೋಧಿಸುತ್ತಿದ್ದೇವೆ. ದೇವರ ಅಸ್ತಿತ್ವದ ಬಗೆಗೆ ಅನೇಕ ಸಿದ್ಧಾಂತಗಳಿವೆ. ಉದಾಹರಣೆಗೆ, ನಾಸ್ತಿಕರು ಎಂದಿಗೂ ದೇವರಲ್ಲಿ ನಂಬಿಕೆ ಹೊಂದುವುದಿಲ್ಲ. ಪ್ರೊ. ಜಾಕ್ವೆಸ್ ಮೊನೋದ್ (ನೊಬೆಲ್ ಪಾರಿತೋಷಕ ಪಡೆದವರು) ಅವರಂತಹ ನಾಸ್ತಿಕರು ಎಲ್ಲವೂ ಆಕಸ್ಮಿಕ ಎಂದು ಘೋಷಿಸುತ್ತಾರೆ. (ಚಾರ್ವಾಕರಂತಹ ನಾಸಿಕವಾದಿ ತತ್ತ್ವ ಜ್ಞಾನಿಗಳು ಬಹಳ ಹಿಂದೆಯೇ ಇಂತಹ ಸಿದ್ಧಾಂತವನ್ನು ಮುಂದಿಟ್ಟಿದ್ದರು.) ವ್ಯಕ್ತಿಯು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಪ್ರಾಮಾಣಿಕವಾಗಿ ಮಾಡುತ್ತಾ ಹೋದರೆ, ಫಲಿತಾಂಶ ತನಗೆ ತಾನೇ ಬರುತ್ತದೆ, ದೇವರ ಪ್ರಸ್ತಾಪನೆಯ ಅಗತ್ಯವಿಲ್ಲ ಎಂಬುವುದನ್ನು ಕರ್ಮ ಮೀಮಾಂಸದಂತಹ ಇತರ ತತ್ತ್ವ ಜ್ಞಾನಗಳು ಸ್ವೀಕರಿಸುತ್ತವೆ. ಅಂತಹ ಸಿದ್ಧಾಂತಗಳ ಪ್ರತಿಪಾದಕರು ಪುರಾವೆಗಾಗಿ ವಾದಗಳನ್ನು ಮುಂದಿಡುತ್ತಾರೆ. ಒಬ್ಬನು ಸೋಂಕಿನಿಂದ ರೋಗಪೀಡಿತನಾದರೆ ಔಷಧಿಯನ್ನು ತೆಗೆದುಕೊಳ್ಳುತ್ತಾನೆ. ಅದು ರೋಗದ ವಿರುದ್ಧ ಕೆಲಸ ಮಾಡುತ್ತದೆ ಮತ್ತು ರೋಗವು ಗುಣಮುಖವಾಗುತ್ತದೆ. ಆದರೆ ಈ ಸಂದರ್ಭದಲ್ಲಿ ನಮ್ಮ ವಾದ ಏನೆಂದರೆ, ಅತ್ಯುತ್ತಮ ಔಷಧಿ ನೀಡಿದರೂ ರೋಗಿ ಬದುಕದೇ ಇರಬಹುದು. ಫಲಿತಾಂಶವನ್ನು ಯಾವಾಗಲೂ ಊಹಿಸಲಾಗದು. ಆದುದರಿಂದ ಉನ್ನತ ಅಧಿಕಾರಿ, ದೈವ ನೇತ್ರ, ಪರಮ ನಿರ್ದೇಶಕನಿದ್ದಾನೆ. ಇಲ್ಲವಾದರೆ, ಶ್ರೀಮಂತ ಮತ್ತು ಪುಣ್ಯವಂತನ ಮಗ ರಸ್ತೆಯಲ್ಲಿ ಹೇಗೆ ಹಿಪ್ಪಿಯಾಗುವನು? ಅಥವಾ ಕಷ್ಟಪಟ್ಟು ದುಡಿದು ಶ್ರೀಮಂತನಾದ ವ್ಯಕ್ತಿಗೆ ವೈದ್ಯರು,“ನೀನು ಬಾರ್ಲಿ ನೀರು ಬಿಟ್ಟು ಬೇರೆ ಯಾವುದೇ ತಿನಿಸು ಸೇವಿಸಬಾರದು” ಎಂದು ಹೇಗೆ ಹೇಳುವುದು ಸಾಧ್ಯ?

ಭಗವಂತನ ಪರಮ ನಿರ್ದೇಶನವಿಲ್ಲದೆ ಜಗತ್ತು ಸಾಗುತ್ತಿದೆ ಎಂದು ಕರ್ಮ ಮೀಮಾಂಸ ಸಿದ್ಧಾಂತವು ಪ್ರತಿಪಾದಿಸುತ್ತದೆ. ಎಲ್ಲವೂ ಕಾಮದಿಂದ ನಡೆಯುತ್ತದೆ (ಕಾಮ ಹೈತುಕ) ಎಂದು ಅಂತಹ ಸಿದ್ಧಾಂತಗಳು ಹೇಳುತ್ತವೆ. ಕಾಮದಿಂದ ಒಬ್ಬ ಪುರುಷನು ಮಹಿಳೆಗೆ ಆಕರ್ಷಿತನಾಗುತ್ತಾನೆ. ಅಕಸ್ಮಾತ್ ಲೈಂಕಿಕ ಪ್ರಕ್ರಿಯೆ ಉಂಟಾದರೆ ಮಹಿಳೆಯು ಗರ್ಭವತಿಯಾಗುತ್ತಾಳೆ. ವಾಸ್ತವವಾಗಿ ಮಹಿಳೆಯನ್ನು ಗರ್ಭ ಧರಿಸುವಂತೆ ಮಾಡುವ ಯೋಜನೆಗಳಿರಲಿಲ್ಲ. ಆದರೆ ಒಬ್ಬ ಮಹಿಳೆಯ ಮತ್ತು ಪುರುಷ ಸಮಾಗಮವಾಗುವ ಸ್ವಾಭಾವಿಕ ಪ್ರಸಂಗದಲ್ಲಿ ಫಲಿತಾಂಶ ಉಂಟಾಗುತ್ತದೆ. ಸ್ವಾಭಾವಿಕ ಆಕರ್ಷಣೆಯ ಫಲವಾಗಿ, ಆಕಸ್ಮಿಕದಿಂದಾಗಿ ಎಲ್ಲವೂ ವಾಸ್ತವವಾಗಿ ಈ ರೀತಿ ನಡೆಯುತ್ತಿದೆ ಎನ್ನವುದೇ ಗೀತೆಯಲ್ಲಿ ಆಸುರಿ ಅಥವಾ ರಾಕ್ಷಸೀಯ ಎಂದು ವರ್ಣಿಸಿರುವ ನಾಸ್ತಿಕವಾದ ಸಿದ್ಧಾಂತ. ಮಕ್ಕಳು ಬೇಡವೆನಿಸಿದರೆ, ಜನನ ನಿಯಂತ್ರಣ ವಿಧಾನಗಳನ್ನು ಬಳಸಬಹುದು ಎಂಬ ಅಭಿಪ್ರಾಯವನ್ನು ಈ ರಾಕ್ಷಸೀ ಸಿದ್ಧಾಂತವು ಬೆಂಬಲಿಸುತ್ತದೆ.

ಆಕಸ್ಮಿಕ ಅಲ್ಲ

ಆದರೂ ವಾಸ್ತವವಾಗಿ ಎಲ್ಲಕ್ಕೂ ಶ್ರೇಷ್ಠ ಯೋಜನೆಯೊಂದಿದೆ – ವೈದಿಕ ಯೋಜನೆ. ಸ್ತ್ರೀ ಪುರುಷರ ಸಮಾಗಮ ಹೇಗಾಗಬೇಕು, ಅವರು ಹೇಗೆ ಮಕ್ಕಳನ್ನು ಪಡೆಯಬೇಕು ಮತ್ತು ಲೈಂಗಿಕ ಜೀವನದ ಉದ್ದೇಶವೇನು ಎಂಬುದರ ಬಗೆಗೆ ವೈದಿಕ ಸಾಹಿತ್ಯವು ನಿರ್ದೇಶನಗಳನ್ನು ನೀಡುತ್ತದೆ. ವೈದಿಕ ವ್ಯವಸ್ಥೆಯು ಅನುಮೋದಿಸಿರುವ ಲೈಂಗಿಕ ಜೀವನ ಅಥವಾ ವೈದಿಕ ನಿಯಮ ಮತ್ತು ನಿರ್ಬಂಧಗಳ ಆದೇಶಗಳ ಅಡಿಯಲ್ಲಿನ ಲೈಂಗಿಕ ಜೀವನವು ಯೋಗ್ಯ ಮತ್ತು ಅದು ತನಗೆ ಒಪ್ಪಿತ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ಆದರೆ ಆಕಸ್ಮಿಕ ಲೈಂಗಿಕ ಜೀವನ ಒಪ್ಪಿತವಲ್ಲ. ಆಕಸ್ಮಿಕವಾಗಿ ಲೈಂಗಿಕವಾಗಿ ಆಕರ್ಷಿತರಾಗಿ ಮಕ್ಕಳು ಹುಟ್ಟಿದರೆ, ಅವರನ್ನು ವರ್ಣ ಸಂಕರ, ಬೇಡವಾದ ಜನರು ಎನ್ನುತ್ತಾರೆ. ಅದು ಕೀಳು ಪ್ರಾಣಿಗಳ ರೀತಿ. ಮಾನವರಿಗೆ ಒಪ್ಪಿತವಲ್ಲ. ಮಾನವರಿಗೆ ಯೋಜನೆ ಇದೆ. ಮಾನವ ಜೀವಿಗಳಿಗೆ ಯಾವುದೆ ಯೋಜನೆ ಇಲ್ಲ ಅಥವಾ ಎಲ್ಲವೂ ಆಕಸ್ಮಿಕ ಮತ್ತು ಲೌಕಿಕ ಅಗತ್ಯಗಳಿಗೆ ಅನುಸಾವಾಗಿ ಸೃಷ್ಟಿಯಾದವು ಎಂಬ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ.

ದೇವರಿಲ್ಲ ಮತ್ತು ವ್ಯಕ್ತಿಯು ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬಹುದು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲು ದೇವರನ್ನು ಯಾವ ರೂಪದಲ್ಲಿಯಾದರೂ ಊಹಿಸಿಕೊಳ್ಳಬಹುದು ಎಂಬ ಶಂಕರಾಚಾರ್ಯರ ಸಿದ್ಧಾಂತವೂ ಹೆಚ್ಚೂ ಕಡಮೆ ಈ ಆಕಸ್ಮಿಕ ಮತ್ತು ಅಗತ್ಯ ಎಂಬ ಅಭಿಪ್ರಾಯದ ಮೇಲೆಯೇ ಆಧಾರಿತವಾಗಿದೆ. ಆದರೆ ಸಂಪೂರ್ಣ ಭಿನ್ನವಾದ ನಮ್ಮ ಮಾರ್ಗವು ವಿಧಾಯಕ ಶಕ್ತಿಯ ಮೇಲೆ ಆಧಾರಿತವಾಗಿದೆ. ಕೃಷ್ಣನು ಶಿಫಾರಸು ಮಾಡುವುದು ಈ ದೈವೀ ವರ್ಣಾಶ್ರಮ ಧರ್ಮವನ್ನೇ. ಈವತ್ತಿನ ದಿನಗಳಲ್ಲಿ ಅರ್ಥಮಾಡಿಕೊಂಡಿರುವಂತೆ ಜಾತಿ ಪದ್ಧತಿಯನ್ನಲ್ಲ. ಈ ಆಧುನಿಕ ಜಾತಿ ವ್ಯವಸ್ಥೆಯನ್ನು ಈಗ ಭಾರತದಲ್ಲಿಯೂ ಖಂಡಿಸಲಾಗಿದೆ. ಅದನ್ನು ಖಂಡಿಸಲೇ ಬೇಕು, ಏಕೆಂದರೆ ವ್ಯಕ್ತಿಗಳನ್ನು ಅವರ ಜನ್ಮ ಆಧಾರದ ಮೇಲೆ ವರ್ಗೀಕರಿಸುವುದು ವೈದಿಕ ಅಥವಾ ದೈವೀ ಜಾತಿ ವ್ಯವಸ್ಥೆಯಲ್ಲ.

ಸಮಾಜದಲ್ಲಿ ಅನೇಕ ವರ್ಗಗಳ ಜನರಿದ್ದಾರೆ. ಅವರು ಎಂಜನಿಯರ್, ವೈದ್ಯರು, ರಾಸಾಯನ ತಜ್ಞರು, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ಹೀಗೆ ಅನೇಕ ರೀತಿಯ ವರ್ಗದ ಜನರಾಗಿರಬಹುದು. ಈ ವಿವಿಧ ವರ್ಗಗಳನ್ನು ಅವರ ಜನ್ಮದಿಂದ ನಿರ್ಧರಿಸಬಾರದು, ಆದರೆ ಅವರ ಗುಣಗಳಿಂದ ನಿರ್ಧರಿಸಬೇಕು. ಜನ್ಮ ಆಧಾರಿತ ಜಾತಿ ವ್ಯವಸ್ಥೆಯಂತಹುದನ್ನು ವೈದಿಕ ಸಾಹಿತ್ಯವು ಅನುಮೋದಿಸಿಲ್ಲ. ನಾವೂ ಅದನ್ನು ಒಪ್ಪುವುದಿಲ್ಲ. ಜಾತಿ ಪದ್ಧತಿಯೊಂದಿಗೆ ನಮಗೇನೂ ಸಂಬಂಧವಿಲ್ಲ. ಈಗ ಭಾರತದಲ್ಲಿ ಜನರೂ ಅದನ್ನು ತಿರಸ್ಕರಿಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ನಾವು ಪ್ರತಿಯೊಬ್ಬರಿಗೂ ಬ್ರಾಹ್ಮಣರಾಗಲು ಅವಕಾಶ ನೀಡಿ ತನ್ಮೂಲಕ ಬದುಕಿನ ಅತ್ಯುನ್ನತ ಸ್ಥಾನವನ್ನು ಮುಟ್ಟಲು ಅವಕಾಶ ಕಲ್ಪಿಸುತ್ತೇವೆ.

ಪ್ರಸ್ತುತದಲ್ಲಿ ಆಧ್ಯಾತ್ಮಿಕ ಮಾರ್ಗದರ್ಶಕರಾದ ಬ್ರಾಹ್ಮಣರ ಮತ್ತು  ಆಡಳಿತಗಾರರಾದ ಕ್ಷತ್ರಿಯರ ಅಭಾವವಿರುವುದರಿಂದ ಹಾಗೂ ಇಡೀ ಜಗತ್ತನ್ನು ಶೂದ್ರರು ಅಥವಾ ಕಾರ್ಮಿಕ ವರ್ಗದವರು ಆಳುತ್ತಿರುವುದರಿಂದ ಸಮಾಜದಲ್ಲಿ ಅನೇಕ ವ್ಯತ್ಯಾಸ, ಅಂತರಗಳಿವೆ. ಈ ಎಲ್ಲ ಅಂತರಗಳನ್ನು ಸರಿಪಡಿಸಲೆಂದು ನಾವು ಕೃಷ್ಣ ಪ್ರಜ್ಞೆ ಆಂದೋಲನವನ್ನು ಕೈಗೆತ್ತಿಕೊಂಡಿದ್ದೇವೆ. ಬ್ರಾಹ್ಮಣ ವರ್ಗವನ್ನು ನಿಜವಾಗಿಯೂ ಪುನರ್ ಸ್ಥಾಪಿಸಿಬಿಟ್ಟರೆ ಸಾಮಾಜಿಕ ಆರೋಗ್ಯದ ಉಳಿದ ವ್ಯವಸ್ಥೆಗಳು ತನಗೆ ತಾನೇ ಅದನ್ನು ಅನುಸರಿಸುತ್ತವೆ. ಮಿದುಳು ಸುವ್ಯವಸ್ಥಿತವಾಗಿದ್ದರೆ ಬಾಹು, ಉದರ ಮತ್ತು ಕಾಲುಗಳಂತಹ ಉಳಿದ ಅಂಗಾಂಗಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತವೆ.

ಕೃಷ್ಣ ಪ್ರಜ್ಞೆಯ ಗುರಿ

ದೇವರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗೆಗೆ ಜನರಿಗೆ ಶಿಕ್ಷಣ ನೀಡುವುದೇ ಈ ಆಂದೋಲನದ ಅಂತಿಮ ಗುರಿ. ದೇವರನ್ನು ಹೇಗೆ ಪ್ರೀತಿಸಬೇಕೆಂಬ ಬಗೆಗೆ ಕಲಿಯುವುದೇ ಮಾನವ ಜೀವನದ ಅತ್ಯುನ್ನತ ಪರಿಪೂರ್ಣತೆ ಎಂಬ ನಿರ್ಣಯವನ್ನು ಚೈತನ್ಯ ಮಹಾಪ್ರಭುಗಳು ಅನುಮೋದಿಸುತ್ತಾರೆ. ಹಿಂದೂ ಧರ್ಮ ಅಥವಾ ಯಾವುದೇ ಧರ್ಮ ವ್ಯವಸ್ಥೆಗೂ ಕೃಷ್ಣ ಪ್ರಜ್ಞೆಗೂ ಏನೇನೂ ಸಂಬಂಧವಿಲ್ಲ. ಯಾವುದೇ ಸನ್ಮಾನಿತ ಕ್ರಿಶ್ಚಿಯನ್ ವ್ಯಕ್ತಿಗೆ ತನ್ನ ಮತವನ್ನು ಕ್ರಿಶ್ಚಿಯನ್‌ನಿಂದ ಹಿಂದೂಗೆ ಬದಲಿಸುವ ಆಸಕ್ತಿ ಇರುವುದಿಲ್ಲ. ಅದೇ ರೀತಿ ಹಿಂದೂ ಸಂಸ್ಕೃತಿಯ ವ್ಯಕ್ತಿಯು ಕ್ರಿಶ್ಚಿಯನ್ ಮತಕ್ಕೆ ಬದಲಾವಣೆಗೊಳ್ಳಲು ಸಿದ್ಧನಿರುವುದಿಲ್ಲ. ಅಂತಹ ಬದಲಾವಣೆ ಏನಿದ್ದರೂ ನಿರ್ದಿಷ್ಟ ಸಾಮಾಜಿಕ ಸ್ಥಾನಗಳಿಲ್ಲದವರಿಗೆ. ಆದರೆ ಪ್ರತಿಯೊಬ್ಬರೂ ದೇವರನ್ನು ಕುರಿತ ತತ್ತ್ವ ಮತ್ತು ವಿಜ್ಞಾನವನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಹೊಂದಿರುತ್ತಾರೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಲೂ ಆಸಕ್ತಿ ಉಳ್ಳವರಾಗಿರುತ್ತಾರೆ.

ಹಿಂದೂ ಧರ್ಮ ಎಂದು ಕರೆಸಿಕೊಳ್ಳುವುದನ್ನು ಕೃಷ್ಣ ಪ್ರಜ್ಞೆ ಆಂದೋಲನವು ಬೋಧಿಸುತ್ತಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಬದುಕಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದಾದ ಆಧ್ಯಾತ್ಮಿಕ ಸಂಸ್ಕೃತಿಯನ್ನು ನಾವು ನೀಡುತ್ತಿದ್ದೇವೆ. ಆದುದರಿಂದ ಇದನ್ನು ಜಗತ್ತಿನಾದ್ಯಂತ ಸ್ವೀಕರಿಸಲಾಗುತ್ತಿದೆ.
Leave a Reply

Your email address will not be published. Required fields are marked *