Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 1ಆ

ಸಾರ್ವಭೌಮರ ಪರಿವರ್ತನೆ

ಪುರಿಗೆ ಆಗಮಿಸಿದ ಶ್ರೀ ಚೈತನ್ಯ ಮಹಾಪ್ರಭುಗಳು ದೇವಸ್ಥಾನದಲ್ಲಿ ಜಗನ್ನಾಥನ ದರ್ಶನವನ್ನು ಪಡೆದರು ಮತ್ತು ಸಾರ್ವಭೌಮರ ಕೋರಿಕೆಯಂತೆ ಅವರ ಮನೆಯಲ್ಲಿಯೇ ತಂಗಿದರು. ಸಾರ್ವಭೌಮರು ಆ ಕಾಲದಲ್ಲಿನ ಮಹಾನ್ ಪಂಡಿತರಾಗಿದ್ದರು. ಅವರ ವ್ಯಾಸಂಗಕ್ಕೆ ಪಾರವೇ ಇರಲಿಲ್ಲ. ಅವರು ಆ ಕಾಲದ ಶ್ರೇಷ್ಠ ನೈಯಾಯಿಕರಾಗಿದ್ದರು ಮತ್ತು ಶಂಕರಾಚಾರ್ಯರ ಪಂಥದ ಅತ್ಯಂತ ಪ್ರೌಢ ವಿದ್ವಾಂಸರೆಂದು ಪ್ರಸಿದ್ಧರಾಗಿದ್ದರು. ಅವರ ಭಾವಮೈದುನ ಗೋಪೀನಾಥ ಮಿಶ್ರರು ನಮ್ಮ ಹೊಸ ಸಂನ್ಯಾಸಿಯನ್ನು ಸಾರ್ವಭೌಮರಿಗೆ ಪರಿಚಯ ಮಾಡಿಸಿದರು. ಅವರ ಕಣ್ಣುಕುಕ್ಕುವ ಸೌಂದರ್ಯವನ್ನು ನೋಡಿ ಸಾರ್ವಭೌಮರು ಆಶ್ಚರ್ಯಚಕಿತರಾದರು. ಈ ತರುಣನಿಗೆ ತನ್ನ ದೀರ್ಘ ಜೀವಿತಾವಯಲ್ಲಿ ಸಂನ್ಯಾಸಧರ್ಮವನ್ನು ಕಾಪಾಡಿಕೊಳ್ಳುವುದು ದುಸ್ತರವಾದೀತು ಎಂದು ಅಂಜಿದರು. ನದಿಯಾದಲ್ಲಿದ್ದ ಕಾಲದಿಂದಲೂ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಬಲ್ಲವರಾಗಿದ್ದ ಗೋಪೀನಾಥ ಮಿಶ್ರರಿಗೆ ಅವರನ್ನು ಕಂಡರೆ ಅಪಾರವಾದ ಗೌರವ. ಈ ಸಂನ್ಯಾಸಿಯು ಒಬ್ಬ ಸಾಮಾನ್ಯನಾದ ಮಾನವನಲ್ಲ ಎಂದು ಅವರು ಘೋಷಿಸಿದರು. ಆಗ ಸಾರ್ವಭೌಮರು ವೇದಾಂತ ಸೂತ್ರಗಳನ್ನು ಕುರಿತ ತಮ್ಮ ವಾಚನ ವ್ಯಾಖ್ಯಾನಗಳನ್ನು ಕೇಳುವಂತೆ ಶ್ರೀಚೈತನ್ಯ ಮಹಾಪ್ರಭುಗಳನ್ನು ಕೋರಿಕೊಂಡಾಗ ಚೈತನ್ಯರು ಮೌನವಾಗಿ ಸಮ್ಮತಿ ಸೂಚಿಸಿದರು. ಮಹಾನ್ ಸಾರ್ವಭೌಮರು ಏಳುದಿನಗಳ ಕಾಲ ಗಂಭೀರವಾಗಿ ಮಾಡಿದ ವಾಚನವನ್ನು ಚೈತನ್ಯರು ಮೌನವಾಗಿ ಆಲಿಸಿದರು. ಕೊನೆಯಲ್ಲಿ ಸಾರ್ವಭೌಮರು, “ಕೃಷ್ಣ ಚೈತನ್ಯ! ವೇದಾಂತ ನಿಮಗೆ ಅರ್ಥವಾಗಲಿಲ್ಲ ಅಂತ ಕಾಣುತ್ತೆ. ಏಕೆಂದರೆ ನನ್ನ ವಾಚನ ವ್ಯಾಖ್ಯಾನಗಳನ್ನು ಕೇಳಿಯೂ ನೀವೇನೂ ಹೇಳುತ್ತಿಲ್ಲ” ಎಂದರು. ಅದಕ್ಕೆ ಉತ್ತರವಾಗಿ ಚೈತನ್ಯರು ಸೂತ್ರಗಳನ್ನು ತಾವು ಬಹಳ ಚೆನ್ನಾಗಿ ಅರ್ಥಮಾಡಿಕೊಂಡರೆಂದೂ, ಆದರೆ ಶಂಕರಾಚಾರ್ಯರು ತಮ್ಮ ವ್ಯಾಖ್ಯಾನಗಳಿಂದ ಏನನ್ನು ಉದ್ದೇಶಿಸಿದ್ದಾರೆಂದು ಅರ್ಥವಾಗಲಿಲ್ಲವೆಂದೂ ಹೇಳಿದರು. ಇದನ್ನು ಕೇಳಿ ಆಶ್ಚರ್ಯಚಕಿತರಾದ ಸಾರ್ವಭೌಮರು, “ನಿಮಗೆ ಸೂತ್ರಗಳ ಅರ್ಥಗಳು ಗೊತ್ತಾಗುತ್ತವೆ ಆದರೆ ಸೂತ್ರಗಳನ್ನು ವಿವರಿಸುವ ವ್ಯಾಖ್ಯಾನಗಳು ಅರ್ಥವಾಗುವುದಿಲ್ಲ ಎಂದರೆ ಹೇಗೆ? ಇರಲಿ, ಸೂತ್ರಗಳು ನಿಮಗೆ ಅರ್ಥವಾಗಿದ್ದರೆ, ನಿಮ್ಮ ವ್ಯಾಖ್ಯಾನವನ್ನು ನನಗೆ ತಿಳಿಸುತ್ತೀರಾ?” ಎಂದರು. ಆಗ ಮಹಾಪ್ರಭುಗಳು ಶಂಕರರ ಸರ್ವಬ್ರಹ್ಮವಾದಿ ಭಾಷ್ಯವನ್ನು ಸ್ಪರ್ಶಿಸದೆ ತಮ್ಮದೇ ಆದ ರೀತಿಯಲ್ಲಿ ಎಲ್ಲ ಸೂತ್ರಗಳನ್ನೂ ವಿವರಿಸಿದರು. ಚೈತನ್ಯರು ನೀಡಿದ ವ್ಯಾಖ್ಯಾನದಲ್ಲಿದ್ದ ಸತ್ಯ, ಸೌಂದರ್ಯ ಮತ್ತು ವಾದಗಳ ಸಾಮರಸ್ಯವನ್ನು ಸಾರ್ವಭೌಮರ ಸೂಕ್ಷ್ಮ ತಿಳಿವಳಿಕೆಯು ಅರ್ಥಮಾಡಿಕೊಂಡಿತು. ಬ್ರಹ್ಮಸೂತ್ರಗಳನ್ನು ಇಷ್ಟು ಸರಳವಾಗಿ ವಿವರಿಸಬಹುದು ಎನ್ನುವುದನ್ನು ತಾವು ಇದೇ ಮೊದಲಬಾರಿ ಕಂಡುಕೊಂಡದ್ದಾಗಿ ಅವರು ಉದ್ಗರಿಸಿದರು. ಅನಂತರ ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಅನುಯಾಯಿ ಮತ್ತು ಪ್ರತಿಪಾದಕರಾಗಿ ಶರಣಾದರು. ಕೆಲವೇ ದಿನಗಳಲ್ಲಿ ಸಾರ್ವಭೌಮರು ಆ ಕಾಲದ ಅತ್ಯುತ್ತಮ ವೈಷ್ಣವರಲ್ಲಿ ಒಬ್ಬರಾಗಿ ಪರಿವರ್ತಿತರಾದರು. ಈ ಪ್ರಸಂಗದ ವಿವರಗಳು ಬಯಲಾದಾಗ ಸಮಸ್ತ ಒರಿಸ್ಸಾವೇ ಕೃಷ್ಣ ಚೈತನ್ಯರನ್ನು ಹಾಡಿ ಹೊಗಳಿತು. ಸಾವಿರಾರು ಜನರು ಅವರ ಬಳಿಗೆ ಬಂದು ಅವರ ಅನುಯಾಯಿಗಳಾದರು.

ಭಾರತದಾದ್ಯಂತ ಬೋಧನೆ

ಈ ಮಧ್ಯೆ ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಬೇಕೆಂದು ಅಪೇಕ್ಷಿಸಿದರು. ಕೃಷ್ಣದಾಸ ಬ್ರಾಹ್ಮಣ ಎನ್ನುವವರನ್ನು ಜೊತೆಗಿಟ್ಟುಕೊಂಡು ಅವರು ಪ್ರಯಾಣವನ್ನು ಆರಂಭಿಸಿದರು. ಚೈತನ್ಯರು ದಕ್ಷಿಣ ಭಾರತದಲ್ಲಿ ಕನ್ಯಾಕುಮಾರಿಯವರೆಗೂ ಪ್ರಯಾಣ ಮಾಡಿ ಅನೇಕ ಸ್ಥಳಗಳನ್ನು ಸಂದರ್ಶಿಸಿ ಎರಡು ವರ್ಷಗಳ ಅನಂತರ ಭೀಮಾನದಿಯ ದಂಡೆಯಲ್ಲಿರುವ ಪಂಢರಾಪುರದ ಮಾರ್ಗವಾಗಿ ಪುರಿಗೆ ಹಿಂತಿರುಗಿದರು. ಕಡೆಯ ಸ್ಥಳದಲ್ಲಿ ಅವರು ತುಕಾರಾಮರನ್ನು ಆಧ್ಯಾತ್ಮೀಕರಿಸಿದರು. ಅಲ್ಲಿಂದ ಮುಂದಕ್ಕೆ ತುಕಾರಾಮರು ಸ್ವತಃ ಒಬ್ಬ ಧಾರ್ಮಿಕ ಬೋಧಕರಾದರು. ತಮ್ಮ ಪ್ರಯಾಣದ ಅವಯಲ್ಲಿ ಅವರು ಬೌದ್ಧರು, ಜೈನರು ಮತ್ತು ಮಾಯಾವಾದಿಗಳೊಡನೆ ಚರ್ಚೆ ಮಾಡಿದರು ಮತ್ತು ತಮ್ಮ ಎದುರಾಳಿಗಳನ್ನು ವೈಷ್ಣವಧರ್ಮಕ್ಕೆ ಪರಿವರ್ತಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಪುರಿಗೆ ಹಿಂತಿರುಗಿದ ಮೇಲೆ ರಾಜ ಪ್ರತಾಪರುದ್ರದೇವ ಮತ್ತು ಅನೇಕ ಪಂಡಿತ ಬ್ರಾಹ್ಮಣರು ಅವರ ಪಂಥವನ್ನು ಸೇರಿದರು. ಈಗ ಅವರಿಗೆ ಇಪ್ಪತ್ತೇಳು ವರ್ಷ ವಯಸ್ಸಾಗಿತ್ತು. ತಮ್ಮ ಇಪ್ಪತ್ತೆಂಟನೆಯ ವಯಸ್ಸಿನಲ್ಲಿ ಅವರು ಬಂಗಾಳಕ್ಕೆ ಹೋದರು. ಅಲ್ಲಿ ರೂಪ ಮತ್ತು ಸನಾತನ ಎಂಬ ಇಬ್ಬರು ಮಹಾಪುರುಷರು ಅವರ ಸಂಪರ್ಕಕ್ಕೆ ಬಂದರು. ಕರ್ನಾಟಕ ಬ್ರಾಹ್ಮಣ ಮೂಲದಿಂದ ಬಂದವರಾದರೂ ಈ ಇಬ್ಬರು ಸೋದರರು ಆಗಿನ ಗೌಡ ಚಕ್ರವರ್ತಿ ಹುಸೇನ ಷಾ ಒಡನೆ ಇದ್ದ ನಿರಂತರ ಸಂಪರ್ಕದಿಂದಾಗಿ ಅರೆ-ಮುಸ್ಲಿಮರೇ ಆಗಿದ್ದರು. ಈ ಇಬ್ಬರು ಸಜ್ಜನರಿಗೆ ಕ್ರಮಬದ್ಧ ಹಿಂದೂಗಳಾಗಿ ಮರಳಲು ಮಾರ್ಗವೇ ಇರಲಿಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳು ಪುರಿಯಲ್ಲಿದ್ದಾಗ ತಮಗೆ ಆಧ್ಯಾತ್ಮಿಕ ನೆರವು ಬೇಕೆಂದು ಅವರು ಪತ್ರ ಬರೆದಿದ್ದರು. ಅವರ ಬಳಿಗೆ ಬಂದು ಅವರನ್ನು ಆಧ್ಯಾತ್ಮಿಕ ಸಂಕಟದಿಂದ ಪಾರುಮಾಡುವುದಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಮಾರೋಲೆ ಬರೆದಿದ್ದರು. ಈಗ ಅವರು ಗೌಡ ದೇಶಕ್ಕೆ ಬಂದಿದ್ದರಿಂದ ಈ ಸೋದರರಿಬ್ಬರೂ ತಮ್ಮ ದೀರ್ಘಕಾಲದ ಪ್ರಾರ್ಥನೆಯೊಡನೆ ಅವರ ಮುಂದೆ ಕಾಣಿಸಿಕೊಂಡರು. ಅವರಿಬ್ಬರೂ ವೃಂದಾವನಕ್ಕೆ ಹೋಗಿ ಅಲ್ಲಿ ತಮ್ಮನ್ನು ಭೇಟಿ ಮಾಡಬೇಕೆಂದು ಶ್ರೀ ಚೈತನ್ಯ ಮಹಾಪ್ರಭುಗಳು ಆದೇಶಿಸಿದರು.

ಶ್ರೀ ಚೈತನ್ಯ ಮಹಾಪ್ರಭುಗಳು ಶಾಂತಿಪುರದ ಮಾರ್ಗವಾಗಿ ಪುರಿಗೆ ಮರಳಿದರು. ಶಾಂತಿಪುರದಲ್ಲಿ ತಮ್ಮ ಪ್ರೀತಿಯ ತಾಯಿಯನ್ನು ಮತ್ತೆ ಭೇಟಿ ಮಾಡಿದರು. ಪುರಿಯಲ್ಲಿ ಸ್ವಲ್ಪ ಕಾಲ ತಂಗಿದ್ದು ವೃಂದಾವನದ ಕಡೆಗೆ ಹೊರಟರು. ವೃಂದಾವನವನ್ನು ಸಂದರ್ಶಿಸಿ ಪ್ರಯಾಗಕ್ಕೆ (ಅಲಹಾಬಾದ್) ಬಂದ ಅವರು ಕುರಾನ್‌ಗೆ ಸಂಬಂಸಿದಂತೆ ವಾದ ಮಾಡಿ ಅಪಾರ ಸಂಖ್ಯೆಯ ಮುಸ್ಲಿಮರನ್ನು ವೈಷ್ಣವಧರ್ಮಕ್ಕೆ ಮತಾಂತರಿಸಿದರು. ಅವರ ವಂಶಜರು ಇಂದಿಗೂ ಪಠಾಣ ವೈಷ್ಣವರು ಎಂದು ಪರಿಚಿತರಾಗಿದ್ದಾರೆ. ರೂಪ ಗೋಸ್ವಾಮೀ ಅವರು ಶ್ರೀ ಚೈತನ್ಯ ಮಹಾಪ್ರಭುಗಳನ್ನು ಅಲಹಾಬಾದಿನಲ್ಲಿ ಭೇಟಿಯಾದರು. ಶ್ರೀ ಚೈತನ್ಯ ಮಹಾಪ್ರಭುಗಳು ಅವರಿಗೆ ಹತ್ತು ದಿನಗಳಲ್ಲಿ ಆಧ್ಯಾತ್ಮಿಕತೆಯಲ್ಲಿ ತರಬೇತಿ ನೀಡಿ ಧರ್ಮಪ್ರಚಾರಕ್ಕೆ ವೃಂದಾವನಕ್ಕೆ ಹೋಗುವಂತೆ ನಿರ್ದೇಶಿಸಿದರು.ಅವರ ಮೊದಲ ಅಭಿಯಾನವೆಂದರೆ ಪರಿಶುದ್ಧ ಭಕ್ತಿ ಮತ್ತು ಪ್ರೇಮವನ್ನು ಕುರಿತು ವೈಜ್ಞಾನಿಕವಾಗಿ ವಿವರಿಸುವ ಮತಧರ್ಮ ಶಾಸ್ತ್ರದ ಗ್ರಂಥಗಳನ್ನು ಬರೆಯುವುದು. ಅವರ ಎರಡನೆಯ ಅಭಿಯಾನವೆಂದರೆ ಕೃಷ್ಣಚಂದ್ರನು ಧಾರ್ಮಿಕ ಜಗತ್ತಿನ ಪ್ರಯೋಜನಕ್ಕಾಗಿ ದ್ವಾಪರಯುಗದ ಕೊನೆಯಲ್ಲಿ ತನ್ನ ಆಧ್ಯಾತ್ಮಿಕ ಲೀಲೆಗಳನ್ನು ಪ್ರದರ್ಶಿಸಿದ ತಾಣಗಳನ್ನು ಪುನರುಜ್ಜೀವನಗೊಳಿಸುವುದು. ರೂಪ ಗೋಸ್ವಾಮಿಗಳು ಅಲಹಾಬಾದನ್ನು ಬಿಟ್ಟು ವೃಂದಾವನಕ್ಕೆ ಹೋದರು. ಶ್ರೀ ಚೈತನ್ಯ ಮಹಾಪ್ರಭುಗಳು ಕಾಶಿಗೆ ಹೋದರು. ಇಲ್ಲಿ ಸನಾತನ ಗೋಸ್ವಾಮಿಯವರು ಬಂದು ಕೂಡಿಕೊಂಡರು. ಅವರು ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಎರಡು ತಿಂಗಳ ಕಾಲ ತರಬೇತಿಯನ್ನು ತೆಗೆದುಕೊಂಡರು. ಕಾಶಿಯಲ್ಲಿದ್ದಾಗ ಶ್ರೀ ಚೈತನ್ಯ ಮಹಾಪ್ರಭುಗಳು ನಗರದ ವಿದ್ವಾಂಸರಾದ ಸಂನ್ಯಾಸಿಗಳೊಡನೆ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು. ಒಬ್ಬರು ಮರಾಠ ಬ್ರಾಹ್ಮಣರು ಎಲ್ಲ ಸಂನ್ಯಾಸಿಗಳನ್ನೂ ತಮ್ಮ ಮನೆಗೆ ಆಹ್ವಾನಿಸಿ ಈ ಸಂದರ್ಶನವನ್ನು ಏರ್ಪಡಿಸಿದ್ದರು.

ಈ ಸಂದರ್ಶನದ ಸಮಯದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ತೋರಿದ ಒಂದು ಪವಾಡವು ಎಲ್ಲ ಸಂನ್ಯಾಸಿಗಳನ್ನೂ ಆಕರ್ಷಿಸಿತು. ಅನಂತರ ವಾಗ್ವಾದ ಪ್ರಾರಂಭವಾಯಿತು. ಸಂನ್ಯಾಸಿಗಳ ಗುಂಪಿಗೆ ಮುಖಂಡರಾಗಿ ವಿದ್ವನ್ಮಣಿ ಪ್ರಕಾಶಾನಂದ ಸರಸ್ವತೀ ಅವರು ಇದ್ದರು. ಅನತಿಕಾಲದ ವಿವಾದದ ಅನಂತರ ಅವರು ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಶರಣಾದರು ಮತ್ತು ಶಂಕರಾಚಾರ್ಯರ ಭಾಷ್ಯಗಳಿಂದ ತಾವು ದಾರಿತಪ್ಪಿದ್ದಾಗಿ ಒಪ್ಪಿಕೊಂಡರು. ಅಪಾರ ಪಾಂಡಿತ್ಯದಿಂದ ಕೂಡಿದ್ದ ವಿದ್ವಾಂಸರಿಗೂ ಶ್ರೀ ಚೈತನ್ಯ ಮಹಾಪ್ರಭುಗಳನ್ನು ದೀರ್ಘಕಾಲ ವಿರೋಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರಲ್ಲಿ ಅಂತಹ ಮಂತ್ರಶಕ್ತಿಯಿತ್ತು. ಅದು ಅವರ ಹೃದಯಗಳನ್ನು ಸ್ಪರ್ಶಿಸಿತು. ತಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ ಅವರು ಅಳುವಂತೆ ಮಾಡಿತು. ಕಾಶಿಯ ಸಂನ್ಯಾಸಿಗಳು ಅನತಿಕಾಲದಲ್ಲಿಯೇ ಶ್ರೀ ಚೈತನ್ಯ ಮಹಾಪ್ರಭುಗಳ ಕಾಲಿಗೆ ಬಿದ್ದು ಅವರ ಕೃಪೆಗಾಗಿ ಪ್ರಾರ್ಥಿಸಿದರು. ಅನಂತರ ಚೈತನ್ಯರು ಅವರಿಗೆ ಪರಿಶುದ್ಧ  ಭಕ್ತಿಯನ್ನು ಕುರಿತು ಉಪದೇಶಿಸಿದರು. ಅವರ ಹೃದಯಗಳಲ್ಲಿ ಕೃಷ್ಣನ ಬಗೆಗೆ ಆಧ್ಯಾತ್ಮಿಕ ಪ್ರೀತಿಯನ್ನು ಬಿತ್ತಿದರು. ಅದು ಅವರು ಪಂಥೀಯ ಭಾವನೆಗಳನ್ನು ತೊರೆಯಲು ಪ್ರೇರೇಪಿಸಿತು. ಸಂನ್ಯಾಸಿಗಳ ಈ ಅದ್ಭುತವಾದ ಪರಿವರ್ತನೆಯನ್ನು ಕಂಡ ಸಮಸ್ತ ಕಾಶಿ ಜನಸಮುದಾಯವೇ ವೈಷ್ಣವರಾಗಿ ಪರಿವರ್ತಿತವಾಯಿತು. ತಮ್ಮ ಹೊಸ ಪ್ರಭುವಿನೊಡನೆ ಅವರು ಒಂದು ಬೃಹತ್ ಸಂಕೀರ್ತನೆಯನ್ನು ಏರ್ಪಡಿಸಿದರು. ಸನಾತರನ್ನು ವೃಂದಾವನಕ್ಕೆ ಕಳುಹಿಸಿದ ಮೇಲೆ ಶ್ರೀ ಚೈತನ್ಯ ಮಹಾಪ್ರಭುಗಳು ಪುರಿಗೆ ಹೋದರು. ಮಾರ್ಗದಲ್ಲಿ ದಟ್ಟವಾದ ಅರಣ್ಯ. ಕೃಷ್ಣನ ನಾಮವನ್ನು ಕೇಳುತ್ತಲೇ ಹುಲಿಗಳು ಮತ್ತು ಆನೆಗಳು ನರ್ತನ ಮಾಡುವಂತಹ ಅನೇಕಾನೇಕ ಪವಾಡಗಳನ್ನು ಮೆರೆದರು.

ಪುರಿಯಲ್ಲಿ ಅಂತಿಮ ವರ್ಷಗಳು

ಇಲ್ಲಿಂದ ಮುಂದಕ್ಕೆ, ಅಂದರೆ ತಮ್ಮ ಮೂವತ್ತೊಂದನೆಯ  ವರ್ಷದ ಅನಂತರ, ತೋಟ ಗೋಪೀನಾಥ ದೇವಸ್ಥಾನದಲ್ಲಿನ ಸಂಕೀರ್ತನೆಯ ಸಮಯದಲ್ಲಿ ತಮ್ಮ ನಲವತ್ತೆಂಟನೆಯ ವರ್ಷದಲ್ಲಿ ಕಣ್ಮರೆಯಾಗುವವರೆಗೂ, ಪುರಿಯಲ್ಲಿ ಕಾಶಿಮಿಶ್ರನ ಮನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ನೆಲೆಸಿದ್ದರು. ಈ ಹದಿನೆಂಟು ವರ್ಷಗಳ ಅವಯಲ್ಲಿ ಅವರ ಸುತ್ತ ಅಸಂಖ್ಯಾತ ಅನುಯಾಯಿಗಳಿರುತ್ತಿದ್ದರು. ಅವರಲ್ಲಿ ಎಲ್ಲರೂ ಅತ್ಯುನ್ನತ ಶ್ರೇಣಿಯ ವೈಷ್ಣವರು. ಪರಿಶುದ್ಧ ಚಾರಿತ್ರ್ಯ ಮತ್ತು ವಿದ್ವತ್ತು, ದೃಢವಾದ ಧಾರ್ಮಿಕ ತತ್ತ್ವಗಳು ಮತ್ತು ರಾಧಾ-ಕೃಷ್ಣರನ್ನು ಕುರಿತ ಆಧ್ಯಾತ್ಮಿಕ ಪ್ರೀತಿಯಿಂದಾಗಿ ಸಾಮಾನ್ಯ ಜನರಿಂದ ಗಣ್ಯತೆಯನ್ನು ಪಡೆದಿದ್ದರು. ಮಹಾಪ್ರಭುಗಳು ನದಿಯಾದಲ್ಲಿದ್ದಾಗ ಪುರುಷೋತ್ತಮಾಚಾರ್ಯ ಎಂದು ಪರಿಚಿತರಾಗಿದ್ದ ಸ್ವರೂಪ ದಾಮೋದರರು ಕಾಶಿಯಿಂದ ಬಂದು ಅವರನ್ನು ಕೂಡಿಕೊಂಡರು ಮತ್ತು ಅವರ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುವ ಕೆಲಸವನ್ನು ಸ್ವೀಕರಿಸಿದರು. ಯಾವ ಕವಿ ಅಥವಾ ತತ್ತ್ವಜ್ಞಾನಿಯ ಕೃತಿಯೇ ಆಗಲಿ ಶ್ರೀ ಚೈತನ್ಯ ಮಹಾಪ್ರಭುಗಳ ಮುಂದೆ ಮಂಡಿಸುವ ಮೊದಲು ಸ್ವರೂಪರಿಂದ ಶುದ್ಧವೂ ಉಪಯುಕ್ತವೂ ಆದುದೆಂದು ತೇರ್ಗಡೆಹೊಂದಬೇಕಾಗಿತ್ತು. ರಾಯ ರಾಮಾನಂದ ರಾಯರು ಅವರ ಎರಡನೆಯ ಸಂಗಾತಿಯಾಗಿದ್ದರು. ಆರಾಧನೆಯ ಯಾವುದೋ ಒಂದು ಸಂಗತಿಯನ್ನು ಕುರಿತು ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದಾಗ ರಾಮಾನಂದ ಮತ್ತು ಸ್ವರೂಪ ಇಬ್ಬರೂ ದನಿಗೂಡಿಸುತ್ತಿದ್ದರು. ಧರ್ಮಕ್ಕೆ ಸಂಬಂಸಿದ ವಿಷಯಗಳಲ್ಲಿ ಪರಮಾನಂದ ಪುರೀ ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಮಂತ್ರಾಲೋಚಕರಾಗಿದ್ದರು.

ಶ್ರೀ ಚೈತನ್ಯ ಮಹಾಪ್ರಭುಗಳು ಸ್ವಲ್ಪ ಹೊತ್ತು ಮಾತ್ರ ನಿದ್ದೆ ಮಾಡುತ್ತಿದ್ದರು. ಅವರ ಭಾವುಕತೆಗಳು ಪ್ರತಿ ಹಗಲು ಮತ್ತು ರಾತ್ರಿ ಆಧ್ಯಾತ್ಮಿಕ ನಭೋಮಂಡಲದ ಉದ್ದಗಲಕ್ಕೆ ಅವರನ್ನು ಕೊಂಡೊಯ್ಯುತ್ತಿದ್ದವು. ಅವರ ಎಲ್ಲ ಅಭಿಮಾನಿಗಳು ಮತ್ತು ಅನುಯಾಯಿಗಳು ಎಡೆಬಿಡದೆ ಅವರನ್ನು ಲಕ್ಷಿಸುತ್ತಿದ್ದರು. ಅವರು ಪೂಜೆ ಮಾಡುತ್ತಿದ್ದರು, ವೃಂದಾವನದಲ್ಲಿದ್ದ ತಮ್ಮ ಧರ್ಮಪ್ರಚಾರಕರೊಡನೆ ಸಂವಹನ ಮಾಡುತ್ತಿದ್ದರು ಮತ್ತು ತಮ್ಮನ್ನು ಭೇಟಿಯಾಗಲು ಹೊಸದಾಗಿ ಬರುತ್ತಿದ್ದ ಧಾರ್ಮಿಕ ವ್ಯಕ್ತಿಗಳೊಡನೆ ಸಂಭಾಷಣೆ ಮಾಡುತ್ತಿದ್ದರು. ಅವರು ಹಾಡುತ್ತಿದ್ದರು ಮತ್ತು ನರ್ತಿಸುತ್ತಿದ್ದರು. ತಮ್ಮ ಬಗೆಗೆ ಅವರಿಗೆ ಕಾಳಜಿಯೇ ಇರಲಿಲ್ಲ. ಅನೇಕ ವೇಳೆ ಧಾರ್ಮಿಕ ದಿವ್ಯಾನಂದದಲ್ಲಿ ಮೈಮರೆಯುತ್ತಿದ್ದರು. ಅವರ ಬಳಿಗೆ ಬರುತ್ತಿದ್ದವರೆಲ್ಲರೂ ಮನುಕುಲದ ಪ್ರಯೋಜನಕ್ಕಾಗಿ ಸರ್ವಸುಂದರನಾದ ದೇವರೇ ಅವರ ರೂಪದಲ್ಲಿ ಅವತರಿಸಿದ್ದಾನೆ ಎಂದು ನಂಬುತ್ತಿದ್ದರು. ಜೀವಮಾನ ಪರ್ಯಂತ ಅವರು ತಮ್ಮ ತಾಯಿಯನ್ನು ಪ್ರೀತಿಸುತ್ತಿದ್ದರು ಮತ್ತು ನದಿಯಾಗೆ ಹೋಗುವವರೊಡನೆ ಆಗೀಗ ಮಹಾಪ್ರಸಾದವನ್ನು ಅವಳಿಗೆ ಕಳುಹಿಸಿಕೊಡುತ್ತಿದ್ದರು. ಸ್ವಭಾವತಃ ಅವರು ಅತ್ಯಂತ ಸ್ನೇಹಪರರು. ವಿನಮ್ರತೆಯು ಅವರಲ್ಲಿ ಸಾಕಾರ ರೂಪವನ್ನು ತಾಳಿತ್ತು. ಅವರ ಮಧುರವಾದ ರೂಪವು ಅವರ ಸಂಪರ್ಕಕ್ಕೆ ಬಂದವರಿಗೆಲ್ಲ ಸಂತೋಷವನ್ನು ನೀಡುತ್ತಿತ್ತು. ಅವರು ಪ್ರಭು ನಿತ್ಯಾನಂದರನ್ನು ಬಂಗಾಳದ ಧರ್ಮಪ್ರಚಾರದ ಪ್ರಭಾರಿಯಾಗಿ ನೇಮಿಸಿದರು. ಅವರು ದೇಶದ ಮೇಲುಭಾಗದಲ್ಲಿ ಪ್ರೀತಿಯನ್ನು ಬೋಸಲು ಆರು ಜನ ಗೋಸ್ವಾಮಿಗಳನ್ನು ವೃಂದಾವನಕ್ಕೆ ಕಳುಹಿಸಿಕೊಟ್ಟರು. ಪವಿತ್ರ ಜೀವನದಿಂದ ದಿಕ್ಚ್ಯುತರಾದ ತಮ್ಮ ಎಲ್ಲ ಶಿಷ್ಯರನ್ನೂ ಅವರು ಶಿಕ್ಷಿಸಿದರು. ಕಿರಿಯ ಹರಿದಾಸನ ವಿಷಯದಲ್ಲಿ ಇದು ಎದ್ದು ತೋರುವಂತಿತ್ತು. ಹಿರಿಯ ಹರಿದಾಸನ ವಿಷಯದಲ್ಲಿ ಅವರು ನಡೆದುಕೊಂಡ ರೀತಿಯು ಆಧ್ಯಾತ್ಮಿಕ ವ್ಯಕ್ತಿಗಳನ್ನು ಅವರು ಹೇಗೆ ಪ್ರೀತಿಸುತ್ತಿದ್ದರು ಮತ್ತು ಆಧ್ಯಾತ್ಮಿಕ ಭ್ರಾತೃತ್ವದಲ್ಲಿ ಜಾತಿ ಪಕ್ಷಪಾತವನ್ನು ಅವರು ಹೇಗೆ ಕ್ಕರಿಸುತ್ತಿದ್ದರು ಎನ್ನುವುದನ್ನು ತೋರಿಸುತ್ತದೆ.

ಉಪಸಂಹಾರ

ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳೇ ಅಲ್ಲದೆ ಅವರ ಸಮಕಾಲೀನರು ಮತ್ತು ನಿಕಟ ಸಮಕಾಲೀನರಾದ ವಿದ್ವಾಂಸರು ಶ್ರೀಕೃಷ್ಣ ಚೈತನ್ಯ ಮಹಾಪ್ರಭುಗಳ ಜೀವನವನ್ನು ಕುರಿತು ಅನೇಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಮುರಾರಿಗುಪ್ತರು ಬರೆದ ಶ್ರೀ ಚೈತನ್ಯ ಚರಿತ, ಲೋಚನ ದಾಸ ಠಾಕುರರು ಬರೆದ ಚೈತನ್ಯಮಂಗಳ ಮತ್ತು ವೃಂದಾವನ ದಾಸ ಠಾಕುರರು ಬರೆದ ಚೈತನ್ಯ ಭಾಗವತಗಳು ಸೇರಿವೆ. ವೃಂದಾವನ ದಾಸರು ತಮ್ಮ ಮಹತ್ತ್ವದ ಕೃತಿಯನ್ನು ರಚಿಸುವಾಗ ಅದು ಬಹಳ ವಿಸ್ತಾರವಾಗುವ ಭಯದಿಂದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನದ ಅನೇಕ ಘಟನೆಗಳನ್ನು, ವಿಶೇಷವಾಗಿ ಕಡೆಗಾಲದವುಗಳನ್ನು, ವಿಸ್ತಾರವಾಗಿ ವರ್ಣಿಸಲು ಹೋಗಿಲ್ಲ. ಕಡೆಗಾಲದ ಈ ಲೀಲೆಗಳನ್ನು ಕುರಿತು ಕೇಳಲು ಕಾತರರಾದ ವೃಂದಾವನದ ಭಕ್ತರು, ಮಹಾಸಂತ ಮತ್ತು ವಿದ್ವಾಂಸ ಎಂದು ತಾವು ಪರಿಗಣಿಸಿದ್ದ ಕೃಷ್ಣದಾಸ ಕವಿರಾಜ ಗೋಸ್ವಾಮಿ ಅವರನ್ನು, ಈ ಪ್ರಸಂಗಗಳನ್ನು ವಿವರವಾಗಿ ನಿರೂಪಿಸುವ ಒಂದು ಗ್ರಂಥವನ್ನು ರಚಿಸುವಂತೆ ಪ್ರಾರ್ಥಿಸಿಕೊಂಡರು. ಈ ಕೋರಿಕೆಯ ಮೇರೆಗೆ ಮತ್ತು ವೃಂದಾವನದ ಮದನಮೋಹನ ಅರ್ಚಾವಿಗ್ರಹದ ಅನುಮತಿ ಮತ್ತು ಆಶೀರ್ವಾದದೊಡನೆ ಅವರು ಶ್ರೀಚೈತನ್ಯ ಚರಿತಾಮೃತವನ್ನು ರಚಿಸಲು ಪ್ರಾರಂಭಿಸಿದರು. ಅದು ತನ್ನ ಸಾಹಿತ್ಯಕ ಉತ್ಕೃಷ್ಟತೆ ಮತ್ತು ದಾರ್ಶನಿಕ ಕೂಲಂಕಷತೆಯ ಕಾರಣದಿಂದಾಗಿ ಇಂದು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಗಹನವಾದ ಬೋಧನೆಗಳಿಗೆ ಸಂಬಂಸಿದಂತೆ ಮುಂಚೂಣಿಯಲ್ಲಿರುವ ಗ್ರಂಥ ಎಂದು ಜಗತ್ತಿನಾದ್ಯಂತ ಪರಿಗಣಿತವಾಗಿದೆ.

ಶ್ರೀ ಚೈತನ್ಯ ಮಹಾಪ್ರಭುಗಳ ಪಾದ ಕಮಲಗಳತ್ತ ಸಾಗುವ ಪಥದಲ್ಲಿ ಸಂಚಿಕೆಯಿಂದ ಸಂಚಿಕೆಗೆ ಈ ಅಮೃತೋಪಮವಾದ ಲೀಲೆಗಳನ್ನು ಆಸ್ವಾದಿಸಲು ನಮ್ಮೊಡನೆ ಸೇರಬೇಕೆಂದು ನಮ್ಮೆಲ್ಲ ಓದುಗರನ್ನು ಆಹ್ವಾನಿಸುತ್ತಿದ್ದೇವೆ.

(ಮುಂದುವರಿಯುವುದು)
Leave a Reply

Your email address will not be published. Required fields are marked *