Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 1ಅ

ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ – ಒಂದು ಸಂಕ್ಷಿಪ್ತ ಚಿತ್ರಣ

ಶ್ರೀ ಚೈತನ್ಯ ಮಹಾಪ್ರಭುಗಳು ಮಾಯಾಪುರದಲ್ಲಿ ಶಕಾಬ್ದ ೧೪೦೭ಫಾಲ್ಗುಣ ೨೩ರಂದು (ಕ್ರಿ.ಶ. ೧೪೮೬ ಫೆಬ್ರವರಿ ೧೮) ಸಾಯಂಕಾಲ ಸೂರ್ಯಾಸ್ತವಾಗುತ್ತಿದ್ದಂತೆಯೇ ಜನಿಸಿದರು. ಅವರ ಜನ್ಮದಿನದಂದು ಚಂದ್ರಗ್ರಹಣವಾಗಿತ್ತು. ಅಂತಹ ಸಂದರ್ಭಗಳಲ್ಲಿನ ವಾಡಿಕೆಯಂತೆ ಜನರು ಭಾಗೀರಥೀ ನದಿಯಲ್ಲಿ ಸ್ನಾನ ಮಾಡುತ್ತಾ ಹರಿಬೋಲ್ ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಅವರ ತಂದೆ ಜಗನ್ನಾಥ ಮಿಶ್ರ ವೈದಿಕ ಪರಂಪರೆಯ ಒಬ್ಬ ಬಡಬ್ರಾಹ್ಮಣ. ತಾಯಿ ಶಚೀದೇವಿ ಒಬ್ಬಳು ಆದರ್ಶ ಸದ್ಗೃಹಿಣಿ. ಇಬ್ಬರೂ ಸಿಲ್ಹೆಟ್ ಜಿಲ್ಲೆಯಲ್ಲಿ ಮೂಲತಃ ನೆಲೆಸಿದ್ದ ಬ್ರಾಹ್ಮಣ ಕುಟುಂಬದಿಂದ ಬಂದವರು. ಮಹಾಪ್ರಭುಗಳು ತುಂಬ ಮುದ್ದಾದ ಮಗುವಾಗಿದ್ದರು. ಪಟ್ಟಣದ ಮಹಿಳೆಯರು ಮಗುವನ್ನು ನೋಡಲು ಉಡುಗೊರೆಗಳೊಡನೆ ಬಂದರು. ಶ್ರೀ ಚೈತನ್ಯ ಮಹಾಪ್ರಭುಗಳ ತಾಯಿಯ ತಂದೆ ಪಂಡಿತ ನೀಲಾಂಬರ ಚಕ್ರವರ್ತಿ ಅವರು ಒಬ್ಬ ಪ್ರಸಿದ್ಧ ಜ್ಯೋತಿಷಿಯಾಗಿದ್ದರು. ಕಾಲಕ್ರಮದಲ್ಲಿ ಈ ಮಗುವು ಒಬ್ಬ ಮಹಾಪುರುಷನಾಗುತ್ತಾನೆ ಎಂದು ಅವರು ಭವಿಷ್ಯ ನುಡಿದರು. ಆದ್ದರಿಂದ ಅವರು ಮಗುವಿಗೆ ವಿಶ್ವಂಭರ ಎಂಬ ಹೆಸರನ್ನಿಟ್ಟರು. ಮಗುವು ಚಿನ್ನದ ಬಣ್ಣದಿಂದ ಕಂಗೊಳಿಸುತ್ತಿದ್ದುದರಿಂದ ನೆರೆಹೊರೆಯ ಮಹಿಳೆಯರು ಅವನನ್ನು ಗೌರಹರಿ ಎಂದು ಕರೆದರು. ಬೇವಿನ ಮರದ ಸಮೀಪದಲ್ಲಿ ಅವನು ಜನಿಸಿದ ಕಾರಣದಿಂದ ಅವನ ತಾಯಿಯು ಅವನನ್ನು ನಿಮಾಯ್ ಎಂದು ಕರೆದಳು. ಮಗು ಚೆಲುವಾಗಿದ್ದುದರಿಂದ ಎಲ್ಲರೂ ನಿತ್ಯ ಅವನನ್ನು ನೋಡಲು ಬಯಸುತ್ತಿದ್ದರು. ಮಗು ಬೆಳೆಯುತ್ತಾ ತುಂಟ ಹುಡುಗಾಟಿಕೆಯ ಬಾಲಕನಾದ. ಮಗುವಿಗೆ ಐದು ವರ್ಷ ತುಂಬಿದ ಮೇಲೆ ಒಂದು ಪಾಠಶಾಲೆಗೆ ಸೇರಿಸಿದರು. ಅಲ್ಲಿ ಅನತಿಕಾಲದಲ್ಲಿಯೇ ಅವನು ಬಂಗಾಳಿಯನ್ನು ಕಲಿತ.

ಬಾಲ್ಯ

ಅವರ ಸಮಕಾಲೀನ ಜೀವನಚರಿತ್ರಕಾರರಲ್ಲಿ ಬಹುಪಾಲು ಜನ ಚೈತನ್ಯರಿಗೆ ಸಂಬಂಸಿದ ಸ್ವಾರಸ್ಯವಾದ ಘಟನೆಗಳನ್ನು ಪ್ರಸ್ತಾವಿಸಿದ್ದಾರೆ. ಅವು ಅವರ ಆರಂಭಕಾಲದ ಪವಾಡಗಳ ಸರಳ ದಾಖಲೆಗಳು. ಅವರಿನ್ನೂ ಎಳೆಗೂಸಾಗಿದ್ದಾಗ ತಾಯಿ ಎತ್ತಿಕೊಂಡಿದ್ದಾಗ ಒಂದೇ ಸಮನೆ ಅಳುತ್ತಿದ್ದರಂತೆ. ನೆರೆಹೊರೆಯ ಮಹಿಳೆಯರು ಹರಿಬೋಲ್ ಎಂದು ಕೂಗಿದಾಗ ಥಟ್ಟನೆ ಅಳು ನಿಲ್ಲುತ್ತಿತ್ತು. ಹೀಗಾಗಿ ಅವರ ಮನೆಯಲ್ಲಿ ಹರಿಬೋಲ್ ಎಂಬ ಉಚ್ಚಾರ ನಿರಂತರವಾಗಿ ಇರುತ್ತಿತ್ತು. ಹೀಗೆ ನಾಯಕನ ಭವಿಷ್ಯದ ಅಭಿಯಾನದ ಪೂರ್ವಸೂಚನೆಯನ್ನು ಕೊಡುತ್ತಿತ್ತು.

ಇನ್ನೊಂದು ಪವಾಡಸದೃಶವಾದ ಘಟನೆಯನ್ನು ನಿರೂಪಿಸಲಾಗಿದೆ. ಒಂದು ಸಲ ಒಬ್ಬ ಬ್ರಾಹ್ಮಣ ಯಾತ್ರಿಕನು ಅವರ ಮನೆಯಲ್ಲಿ ಅತಿಥಿಯಾಗಿದ್ದನು. ಅವನು ಅಡಿಗೆ ಮಾಡಿ ಕೃಷ್ಣನಿಗೆ ನೈವೇದ್ಯ ಮಾಡಲು ಧ್ಯಾನಿಸುತ್ತಿರುವಾಗ ಬಾಲಕ ನಿಮಾಯಿಯು ಅಲ್ಲಿಗೆ ಬಂದು ಅನ್ನವನ್ನು ತಿಂದುಬಿಟ್ಟನು. ಬಾಲಕನ ಈ ಚರ್ಯೆಯನ್ನು ನೋಡಿ ಬ್ರಾಹ್ಮಣನಿಗೆ ಅತ್ಯಾಶ್ಚರ್ಯವಾಯಿತು. ಜಗನ್ನಾಥಮಿಶ್ರರ ಕೋರಿಕೆಯ ಪ್ರಕಾರ ಅವನು ಮತ್ತೊಮ್ಮೆ ಅಡಿಗೆ ಮಾಡಿದನು. ಬ್ರಾಹ್ಮಣನು ಕೃಷ್ಣನಿಗೆ ನೈವೇದ್ಯ ಮಾಡಿ ಧ್ಯಾನಿಸುತ್ತಿರುವಾಗ ಬಾಲಕನು ಮತ್ತೊಮ್ಮೆ ಅನ್ನವನ್ನು ತಿಂದುಬಿಟ್ಟನು. ಮೂರನೆಯ ಬಾರಿ ಅಡಿಗೆ ಮಾಡುವಂತೆ ಬ್ರಾಹ್ಮಣನಿಗೆ ಮನವೊಲಿಸಲಾಯಿತು. ಈ ವೇಳೆಗೆ ಮನೆಯವರೆಲ್ಲ ನಿದ್ರಾವಶರಾಗಿದ್ದರು. ಬಾಲಕನು ಕೃಷ್ಣನ ರೂಪದಲ್ಲಿ ಆ ಯಾತ್ರಿಕನ ಮುಂದೆ ಕಾಣಿಸಿಕೊಂಡು ಅನುಗ್ರಹಿಸಿದನು. ಆಗ ಆ ಬ್ರಾಹ್ಮಣನು ತನ್ನ ಆರಾಧ್ಯದೈವವನ್ನು ಕಂಡು ಭಾವೋತ್ಕರ್ಷದಿಂದ ಮೈಮರೆತನು.

ಇನ್ನೊಂದು ಸಲ ಮಗುವು ಮನೆಯ ಮುಂದೆ ಆಡುತ್ತಿರುವಾಗ ಅವನು ಧರಿಸಿದ್ದ ಆಭರಣಗಳ ಆಸೆಯಿಂದ ಇಬ್ಬರು ಕಳ್ಳರು ಅವನನ್ನು ಹೊತ್ತುಕೊಂಡು ಹೋದರು. ದಾರಿಯಲ್ಲಿ ಅವನಿಗೆ ಮಿಠಾಯಿಗಳನ್ನು ಕೊಟ್ಟರು. ಬಾಲಕನು ಅವರ ಮೇಲೆ ತನ್ನ ಮಾಯಾಶಕ್ತಿಯನ್ನು ಪ್ರಯೋಗಿಸಿ ಮರಳಿ ತನ್ನ ಮನೆಗೇ ಕರೆದುಕೊಂಡು ಬರುವಂತೆ ಮಾಡಿದನು. ಕಳ್ಳರು ತಮ್ಮ ಕೃತ್ಯ ಬಯಲಾದೀತೆಂದು ಹೆದರಿ ಮಗುವನ್ನು ಅಲ್ಲೇ ಬಿಟ್ಟು ಪರಾರಿಯಾದರು.

ವಿದ್ವಾಂಸ

ಬಾಲಕನು ಎಂಟನೆಯ ವರ್ಷದಲ್ಲಿದ್ದಾಗ ಅವನನ್ನು ಮಾಯಾಪುರಕ್ಕೆ ಸಮೀಪದಲ್ಲಿದ್ದ ಗಂಗಾನಗರದಲ್ಲಿ ಗಂಗಾದಾಸ ಪಂಡಿತರ ಟೋಳಿಗೆ ಸೇರಿಸಲಾಯಿತು. ಎರಡು ವರ್ಷಗಳಲ್ಲಿ ಅವನು ಸಂಸ್ಕೃತ ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರದಲ್ಲಿ ಪಾರಂಗತನಾದನು. ಅವನ ಮುಂದಿನ ವ್ಯಾಸಂಗವೆಲ್ಲ ಮನೆಯಲ್ಲೇ ಸ್ವಾಧ್ಯಯನದಿಂದ ನಡೆಯಿತು. ಸ್ವತಃ ಪಂಡಿತರಾಗಿದ್ದ ಅವನ ತಂದೆ ಸಂಗ್ರಹಿಸಿದ್ದ ಎಲ್ಲ ಪ್ರಮುಖ ಗ್ರಂಥಗಳು ಅವನ ಅಧ್ಯಯನದ ವಸ್ತುಗಳಾದವು. ಹತ್ತು ವರ್ಷ ಮುಗಿಯುವಷ್ಟರಲ್ಲಿ ಅವನು ವ್ಯಾಕರಣ, ಅಲಂಕಾರಶಾಸ್ತ್ರ, ಸ್ಮೃತಿ ಮತ್ತು ನ್ಯಾಯಶಾಸ್ತ್ರಗಳಲ್ಲಿ ತಕ್ಕಮಟ್ಟಿನ ವಿದ್ವಾಂಸನಾದನು. ಇಷ್ಟಾಗುವ ಹೊತ್ತಿಗೆ ಅವನ ಅಣ್ಣ ವಿಶ್ವರೂಪನು ಮನೆಯನ್ನು ತೊರೆದು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದನು. ವಿಶ್ವಂಭರನು ಚಿಕ್ಕಬಾಲಕನಾಗಿದ್ದರೂ, ದೇವರನ್ನು ಸಂತುಷ್ಟಿಗೊಳಿಸುವುದಕ್ಕಾಗಿ ತನ್ನ ತಂದೆತಾಯಿಗಳಿಗೆ ಸೇವೆ ಸಲ್ಲಿಸುವುದಾಗಿ ಹೇಳುವ ಮೂಲಕ ಅವರನ್ನು ಸಾಂತ್ವನಗೊಳಿಸಿದನು. ಇದಾದ ಸ್ವಲ್ಪ ಸಮಯದಲ್ಲಿಯೇ ಅವನ ತಂದೆಯು ಇಹಲೋಕವನ್ನು ತ್ಯಜಿಸಿದರು. ವಿಶ್ವಂಭರನು ತನ್ನ ಎಂದಿನ ಸಮಾಧಾನ ಸ್ಥಿತಿಯಲ್ಲಿ ವಿಧವೆಯಾದ ತಾಯಿಯನ್ನು ಸಾಂತ್ವನಗೊಳಿಸಿದನು.

ವಿಶ್ವಂಭರನಿಗೆ ೧೪ ಅಥವಾ ೧೫ನೇ ವಯಸ್ಸಿನಲ್ಲಿ ನದಿಯಾದವರೇ ಆದ ವಲ್ಲಭಾಚಾರ್ಯ ಅವರ ಪುತ್ರಿ ಲಕ್ಷ್ಮೀದೇವಿಯೊಡನೆ ವಿವಾಹವಾಯಿತು. ನ್ಯಾಯ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಕಲಿಕೆಯಲ್ಲಿ ಪ್ರಸಿದ್ಧ ಪೀಠವಾಗಿದ್ದ ನದಿಯಾದಲ್ಲಿ ವಿಶ್ವಂಭರನನ್ನು ಆ ವಯಸ್ಸಿಗಾಗಲೇ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬನೆಂದು ಪರಿಗಣಿಸಲಾಗಿತ್ತು. ಸ್ಮಾರ್ತ ಪಂಡಿತರಿರಲಿ, ನೈಯಾಯಿಕರೇ ಇರಲಿ, ಸಾಹಿತ್ಯಕ್ಕೆ ಸಂಬಂಸಿದ ಚರ್ಚೆಗಳಲ್ಲಿ ಅವನಿಗೆ ಮುಖಾಮುಖಿಯಾಗಲು ಭಯಪಡುತ್ತಿದ್ದರು. ಗೃಹಸ್ಥನಾಗಿ ಅವನು ದ್ರವ್ಯ ಸಂಪಾದನೆಗಾಗಿ ಪದ್ಮದ ದಂಡೆಯ ಮೇಲಿರುವ ಪೂರ್ವಬಂಗಾಳಕ್ಕೆ ಹೋದನು. ಅವನು ಪೂರ್ವ ಬಂಗಾಳದಲ್ಲಿ ಇರುವ ಸಮಯದಲ್ಲಿ ಇತ್ತ ಲಕ್ಷ್ಮೀದೇವಿಯು ಹಾವು ಕಚ್ಚಿದ್ದರ ಪರಿಣಾಮವಾಗಿ ಇಹಲೋಕವನ್ನು ತ್ಯಜಿಸಿದಳು. ಕಾಲಾನಂತರದಲ್ಲಿ ತಾಯಿಯ ಒತ್ತಾಯದ ಮೇರೆಗೆ ರಾಜ ಪಂಡಿತ ಸನಾತನ ಮಿಶ್ರರ ಮಗಳಾದ ವಿಷ್ಣುಪ್ರಿಯಾಳನ್ನು ವಿವಾಹವಾದನು. ಕಾಶ್ಮೀರದ ಕೇಶವಮಿಶ್ರನು ತನ್ನನ್ನು ತಾನೇ ಮಹಾ ದಿಗ್ವಿಜಯಿ ಎಂದು ಕರೆದುಕೊಳ್ಳುತ್ತಿದ್ದು, ನದಿಯಾದ ಪಂಡಿತರೊಡನೆ ವಾಗ್ವಾದವನ್ನು ನಡೆಸುವ ದೃಷ್ಟಿಯಿಂದ ಅಲ್ಲಿಗೆ ಬಂದನು. ಕೇಶವನು ಮಾಯಾಪುರದಲ್ಲಿ ಬಾರೋಕೋನ ಘಾಟಾದಲ್ಲಿ ನಿಮಾಯಿ ಪಂಡಿತನನ್ನು ಭೇಟಿಯಾದನು. ಅಲ್ಪಕಾಲದ ಸಂವಾದದಲ್ಲಿಯೇ ಅವನು ಬಾಲಕನಿಂದ ಪರಾಜಿತನಾದನು. ಅವಮಾನವನ್ನು ತಾಳಲಾರದೆ ಕೇಶವನು ರಾತ್ರೋರಾತ್ರಿ ಮಾಯಾಪುರದಿಂದ ಪಲಾಯನ ಮಾಡಿದನು. ಈಗ ನಿಮಾಯಿ ಪಂಡಿತನು ತನ್ನ ಕಾಲದಲ್ಲಿಯೇ ಅತ್ಯಂತ ಪ್ರಮುಖನಾದ ಪಂಡಿತನಾದನು.

ದೇವರ ಧರ್ಮಪ್ರಚಾರಕ

೧೬ ಅಥವಾ ೧೭ನೇ ವಯಸ್ಸಿನಲ್ಲಿ ವಿಶ್ವಂಭರನು ತನ್ನ ಶಿಷ್ಯರ ಗುಂಪಿನೊಡನೆ ಗಯೆಗೆ ಪ್ರಯಾಣ ಮಾಡಿದನು. ಅಲ್ಲಿ ಪ್ರಖ್ಯಾತ ಮಾಧವೇಂದ್ರ ಪುರೀಗಳ ಶಿಷ್ಯರೂ ಮತ್ತು ಒಬ್ಬ ವೈಷ್ಣವ ಸಂನ್ಯಾಸಿಗಳೂ ಆಗಿದ್ದ ಈಶ್ವರಪುರೀ ಅವರಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದನು. ಈ ವೇಳೆಗೆ ನಿಮಾಯಿ ಪಂಡಿತನೆಂದು ಪ್ರಸಿದ್ಧನಾಗಿದ್ದ ವಿಶ್ವಂಭರನು ನದಿಯಾಗೆ ಹಿಂತಿರುಗಿದ ಮೇಲೆ ಒಬ್ಬ ಧಾರ್ಮಿಕ ಬೋಧಕನಾದನು. ಅವನ ಆಧ್ಯಾತ್ಮಿಕ ಪ್ರವೃತ್ತಿಯು ಎಷ್ಟು ತೀವ್ರವಾಗಿ ಪ್ರತಿನಿತವಾಯಿತೆಂದರೆ, ಅವನು ಹುಟ್ಟುವುದಕ್ಕೆ ಮುಂಚೆಯೇ ವೈಷ್ಣವ ಧರ್ಮವನ್ನು ಸ್ವೀಕರಿಸಿದ್ದ ಅದ್ವೈತ ಪ್ರಭು ಶ್ರೀವಾಸ ಮತ್ತು ಇತರರು, ಈ  ತರುಣನಲ್ಲಾದ ಬದಲಾವಣೆಯನ್ನು ಕಂಡು ಆಶ್ಚರ್ಯಚಕಿತರಾದರು. ಈಗ ಅವನು ಹುರುಡುಕಟ್ಟಿ ನಿಲ್ಲುವ ನೈಯಾಯಿಕನಾಗಲಿ, ಏರುಧ್ವನಿಯ ವಾದಿಯಾದ ಸ್ಮಾರ್ತನಾಗಲಿ, ಟೀಕೆಮಾಡುವ ಅಲಂಕಾರಶಾಸ್ತ್ರಜ್ಞನಾಗಲಿ ಆಗಿ ಉಳಿದಿರಲಿಲ್ಲ. ಕೃಷ್ಣನ ಹೆಸರು ಕೇಳಿದರೇ ಅವನಿಗೆ ಎಚ್ಚರ ತಪ್ಪುತ್ತಿತ್ತು. ಅವನು ತನ್ನ ಧಾರ್ಮಿಕ ಭಾವೋದ್ವೇಗದ ಪ್ರಭಾವದಿಂದ ಅತಿಮಾನುಷ ಮೂಲದಿಂದ ಬಂದವನಂತೆ ವರ್ತಿಸುತ್ತಿದ್ದ. ವೈಷ್ಣವ ಧರ್ಮದ ಒಬ್ಬ ಪ್ರಚಾರಕನಾಗಿದ್ದ ಮತ್ತು ಈ ವೇಳೆಗಾಗಲೇ ತಮ್ಮ ಭಾರತದಾದ್ಯಂತದ ಪ್ರವಾಸವನ್ನು ಮುಗಿಸಿದ್ದ ನಿತ್ಯಾನಂದ ಪ್ರಭುಗಳು ಈ ಸಮಯದಲ್ಲಿ ನಿಮಾಯಿ ಪಂಡಿತರನ್ನು ಕೂಡಿಕೊಂಡರು. ವಾಸ್ತವದಲ್ಲಿ ಪ್ರಾಮಾಣಿಕರಾಗಿದ್ದ ವೈಷ್ಣವ ಧರ್ಮದ ಪಂಡಿತ ಪ್ರಚಾರಕರಾಗಿದ್ದ ಒಂದು ದೊಡ್ಡ ಗುಂಪೇ ಬಂಗಾಳದ ವಿವಿಧ ಭಾಗಗಳಿಂದ ಬಂದು ನಿಮಾಯಿ ಪಂಡಿತರನ್ನು ಕೂಡಿಕೊಂಡಿತು. ಈಗ ನದಿಯಾವು ವೈಷ್ಣವ ಆಚಾರ್ಯರ ಒಂದು ದೊಡ್ಡ ಸಮೂಹದ ಕೇಂದ್ರ ಸ್ಥಾನವಾಯಿತು. ವೈಷ್ಣವ ಧರ್ಮಸಿದ್ಧಾಂತಗಳ ಅತ್ಯುನ್ನತ ಪ್ರಭಾವದಿಂದ ಇಡೀ ಮನುಕುಲವನ್ನೇ ಆಧ್ಯಾತ್ಮೀಕರಣ- ಗೊಳಿಸುವುದೇ ಅವರ ಅಭಿಯಾನವಾಗಿತ್ತು.

ನಿಮಾಯಿ ಪಂಡಿತರು ಪ್ರಭು ನಿತ್ಯಾನಂದ ಮತ್ತು ಹರಿದಾಸರಿಗೆ ನೀಡಿದ ಪ್ರಥಮ ಆದೇಶ ಹೀಗಿತ್ತು: “ಹೋಗಿ ಸ್ನೇಹಿತರೆ, ಪಟ್ಟಣದ ಬೀದಿಗಳುದ್ದಕ್ಕೂ ಸಂಚಾರ ಮಾಡಿ. ಪ್ರತಿಯೊಬ್ಬನನ್ನೂ ಅವನ ಮನೆಯ ಬಳಿ ಭೇಟಿಯಾಗಿ. ಪವಿತ್ರ ಜೀವನವನ್ನು ನಡೆಸುತ್ತಾ ಹರಿನಾಮ ಸ್ಮರಣೆ ಸಂಕೀರ್ತನೆ ಮಾಡುವಂತೆ ಪ್ರತಿಯೊಬ್ಬರನ್ನೂ ಕೇಳಿಕೊಳ್ಳಿ. ಅನಂತರ ಪ್ರತಿದಿನ ಸಂಜೆಯೂ ನನ್ನ ಬಳಿ ಬಂದು ನಿಮ್ಮ ಬೋಧನೆಯ ಪರಿಣಾಮವೇನಾಯಿತು ಎಂದು ವರದಿ ಮಾಡಿ.” ಹೀಗೆ ಆದೇಶವನ್ನು ಹೊತ್ತ ಆ ಇಬ್ಬರು ಬೋಧಕರೂ ಹೋಗಿ ಜಗಾಯಿ ಮತ್ತು ಮಾಧಾಯಿ ಅವರನ್ನು ಭೇಟಿ ಮಾಡಿದರು. ಅವರಿಬ್ಬರೂ ಅತ್ಯಂತ ಅಸಭ್ಯ, ಕೀಳು ವ್ಯಕ್ತಿಗಳಾಗಿದ್ದರು. ನಿಮಾಯಿ ಪಂಡಿತರ ಆದೇಶವನ್ನು ಕೇಳಿ ಅವರು ಬೋಧಕರಿಬ್ಬರಿಗೂ ಅಪಮಾನ ಮಾಡಿದರು. ಆದರೆ ಪ್ರಭುವಿನಿಂದ ಪ್ರತಿಪಾದಿತವಾದ ಭಕ್ತಿಯಿಂದ ಅನತಿಕಾಲದಲ್ಲಿಯೇ ಪರಿವರ್ತಿತರಾದರು. ನದಿಯಾದ ಜನಸಮುದಾಯ ಇದನ್ನು ಕಂಡು ಆಶ್ಚರ್ಯಚಕಿತವಾಯಿತು. “ನಿಮಾಯಿ ಪಂಡಿತರು ಅಸಾಧಾರಣ ಪ್ರತಿಭಾಶಾಲಿಗಳಷ್ಟೇ ಅಲ್ಲ , ಅವರು ಖಂಡಿತವಾಗಿಯೂ ಸರ್ವಶಕ್ತನಾದ ಭಗವಂತನು ಕಳುಹಿಸಿದ ಧರ್ಮಪ್ರಚಾರಕರೇ ಹೌದು.”

ಕಾಜಿಯೊಡನೆ ಮುಖಾಮುಖಿ

ನಿಮಾಯಿ ಪಂಡಿತರು ಇಲ್ಲಿಂದ ಮುಂದಕ್ಕೆ ತಮ್ಮ ಇಪ್ಪತ್ತ ಮೂರನೆಯ ವರ್ಷದವರೆಗೆ ತಮ್ಮ ತತ್ತ್ವಗಳನ್ನು ನದಿಯಾದಲ್ಲಷ್ಟೇ ಅಲ್ಲದೆ ಸುತ್ತುಮುತ್ತಲಿನ ಎಲ್ಲ ಪ್ರಮುಖ ಪಟ್ಟಣಗಳು ಮತ್ತು ಹಳ್ಳಿಗಳಲ್ಲೂ ಬೋಸಿದರು. ನದಿಯಾ ಪಟ್ಟಣದ ಅವರ ಅನುಯಾಯಿಗಳು ಬೀದಿಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಹರಿಯ ಪವಿತ್ರ ನಾಮವನ್ನು ಹಾಡಲು ಪ್ರಾರಂಭಿಸಿದರು. ಇದು ಒಂದು ಭಾವೋದ್ರೇಕವನ್ನೇ ಉಂಟುಮಾಡಿತು ಮತ್ತು ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಭಾವನೆಗಳ ಅಲೆಯನ್ನೇ ಎಬ್ಬಿಸಿತು. ನಿಮಾಯಿ ಪಂಡಿತನ ಯಶಸ್ಸನ್ನು ಕಂಡು ಸ್ಮಾರ್ತ ಪಂಡಿತರು ಅಸೂಯೆಗೊಂಡರು ಮತ್ತು ಚಾಂದ್‌ಕಾಜಿ ಬಳಿಗೆ ಹೋಗಿ ನಿಮಾಯಿ ಪಂಡಿತರ ವ್ಯಕ್ತಿತ್ವವು ಹಿಂದೂಯೇತರವಾಗಿದೆ ಎಂದು ದೂರುಕೊಟ್ಟರು. ಕಾಜಿಯು ಶ್ರೀವಾಸ ಪಂಡಿತರ ಮನೆಗೆ ಬಂದು ಒಂದು ಮೃದಂಗವನ್ನು ಒಡೆದು ಹಾಕಿ ನಿಮಾಯಿ ಪಂಡಿತನು ತನ್ನ ವಿಚಿತ್ರ ಧರ್ಮವನ್ನು ಕುರಿತು ಗದ್ದಲ ಮಾಡುವುದನ್ನು ನಿಲ್ಲಿಸದಿದ್ದರೆ ಅವನ ಮೇಲೆ ಮತ್ತು ಅವರ ಅನುಯಾಯಿಗಳ ಮೇಲೆ ಇಸ್ಲಾಂ ಧರ್ಮವನ್ನು ಬಲಾತ್ಕಾರವಾಗಿ ಹೇರಬೇಕಾಗುತ್ತದೆ ಎಂದು ಘೋಷಿಸಿದ. ಇದನ್ನು ಮಹಾಪ್ರಭುಗಳ ಗಮನಕ್ಕೆ ತರಲಾಯಿತು. ಪಟ್ಟಣದ ಜನರು ತಲಾ ಒಂದೊಂದು ಪಂಜನ್ನು ಹಿಡಿದುಕೊಂಡು ಸಂಜೆ ಸೇರಬೇಕೆಂದು ಅವರು ಆದೇಶ ನೀಡಿದರು. ಅವರೆಲ್ಲ ಕಾಜಿಯ ಮನೆಯ ಮುಂದೆ ಜಮಾಯಿಸಿದರು. ನಿಮಾಯಿಪಂಡಿತರು ಕಾಜಿಯ ಮನೆಗೆ ಹೋಗಿ ಅವನೊಡನೆ ದೀರ್ಘವಾದ ಸಂಭಾಷಣೆಯನ್ನು ನಡೆಸಿದರು. ಕೊನೆಯಲ್ಲಿ ಅವನ ದೇಹವನ್ನು ಸ್ಪರ್ಶಿಸುವ ಮೂಲಕ ವೈಷ್ಣವ ಪ್ರಭಾವವನ್ನು ಅವನ ಹೃದಯದೊಳಕ್ಕೆ ನಾಟಿದರು. ಅನಂತರ ಕಾಜಿಯು ಸಂಕೀರ್ತನಾ ತಂಡವನ್ನು ಸೇರಿಕೊಂಡನು. ನಿಮಾಯಿ ಪಂಡಿತರ ಆಧ್ಯಾತ್ಮಿಕ ಶಕ್ತಿಯನ್ನು ಕಂಡು ಇಡೀ ಜಗತ್ತೇ ಆಶ್ಚರ್ಯಗೊಂಡಿತು. ಈ ಪ್ರಕರಣದ ಅನಂತರ ನೂರಾರು ಸಾವಿರಾರು ಪಾಷಂಡಿಗಳು ಪರಿವರ್ತನೆಗೊಂಡು ವಿಶ್ವಂಭರನ ಲಾಂಛನದಡಿಯಲ್ಲಿ ಒಂದಾದರು.

ಸಂನ್ಯಾಸ ಸ್ವೀಕಾರ

ಈ ಘಟನೆಯ ಅನಂತರ ಕುಲಿಯಾದ ಕೆಲವು ಈರ್ಷ್ಯಾವಂತ ಮತ್ತು ಹೀನಬುದ್ಧಿಯ ಬ್ರಾಹ್ಮಣರು ನಿಮಾಯಿ ಪಂಡಿತರೊಡನೆ ಜಗಳ ತೆಗೆದು ಅವರನ್ನು ವಿರೋಸಲು ಒಂದು ಗುಂಪನ್ನು ಕಟ್ಟಿದರು. ನಿಮಾಯಿ ಪಂಡಿತರು ದೃಢವಾದ ತತ್ತ್ವಗಳನ್ನು ಹೊಂದಿದ್ದರೂ ಸಹಜವಾಗಿಯೇ ಮೃದು ಹೃದಯದ ವ್ಯಕ್ತಿಯಾಗಿದ್ದರು. ಪಕ್ಷ ಭಾವನೆಗಳು ಮತ್ತು ಪಂಥೀಯವಾದಗಳು ಪ್ರಗತಿಗೆ ಎರಡು ದೊಡ್ಡ ಶತ್ರುಗಳು ಎಂದು ಅವರು ಘೋಷಿಸಿದರು. ಒಂದು ನಿರ್ದಿಷ್ಟ ಕುಟುಂಬಕ್ಕೆ ಸೇರಿದವರಾಗಿ ನದಿಯಾದ ನಿವಾಸಿಯಾಗಿರುವವರೆಗೂ ಅವರ ಅಭಿಯಾನವು ಸಂಪೂರ್ಣವಾದ ಯಶಸ್ಸನ್ನು ಸಾಸಲಾರದು. ಆದ್ದರಿಂದ ಒಂದು ನಿರ್ದಿಷ್ಟವಾದ ಕುಟುಂಬ, ಜಾತಿ ಮತ್ತು ಪಂಥಗಳೊಡನೆ ತಮಗಿರುವ ಸಂಬಂಧವನ್ನು ಕಡಿದುಹಾಕಲು ಅವರು ನಿರ್ಧರಿಸಿದರು. ಈ ನಿರ್ಧಾರದೊಡನೆ ಅವರು ಕಾಟ್ವಾದ ಕೇಶವ ಭಾರತೀ ಅವರ ಮಾರ್ಗದರ್ಶನದಲ್ಲಿ ಸಂನ್ಯಾಸವನ್ನು ಸ್ವೀಕರಿಸಿದರು. ಆಗ ಅವರಿಗೆ ಇಪ್ಪತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅವರಿಗೆ ಕೃಷ್ಣಚೈತನ್ಯ ಎಂಬ ಅಭಿಧಾನವನ್ನು ನೀಡಲಾಯಿತು. ಜನರು ಶ್ರೀ ಚೈತನ್ಯ ಮಹಾಪ್ರಭು ಎಂದು ಕರೆಯಲಾರಂಭಿಸಿದರು.

ಸಂನ್ಯಾಸ ದೀಕ್ಷೆಯ ಅನಂತರ ಅವರನ್ನು ಶಾಂತಿಪುರದಲ್ಲಿದ್ದ ಅದ್ವೈತ ಪ್ರಭುಗಳ ಮನೆಗೆ ಭೇಟಿಕೊಡುವಂತೆ ಉತ್ತೇಜಿಸಲಾಯಿತು. ಅದ್ವೈತರು ನದಿಯಾದಿಂದ ತಮ್ಮ ಎಲ್ಲ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಆಹ್ವಾನಿಸಿದರು ಮತ್ತು ಶಚೀದೇವಿಯನ್ನು ಅವಳ ಮಗನನ್ನು ನೋಡಲು  ಕರೆತಂದರು. ಮಗನನ್ನು ಸಂನ್ಯಾಸಿಯ ವೇಷದಲ್ಲಿ ನೋಡಿದಾಗ ಅವಳಿಗೆ ನೋವು ನಲಿವುಗಳೆರಡೂ ಹೃದಯದಲ್ಲಿ ದಾಂಗುಡಿ ಇಟ್ಟವು. ಸಂನ್ಯಾಸಿಯಾಗಿ ಕೃಷ್ಣಚೈತನ್ಯರು ಒಂದು ಕೌಪೀನ ಮತ್ತು ಒಂದು ಬಹಿರ್ವಾಸವನ್ನಲ್ಲದೆ ಬೇರೇನನ್ನು ಧರಿಸಿರಲಿಲ್ಲ. ತಲೆಯಲ್ಲಿ ಕೂದಲನ್ನೆಲ್ಲ ತೆಗೆದಿದ್ದರು. ಅವರ ಕೈಗಳಲ್ಲಿ ಒಂದು ದಂಡ ಮತ್ತು ಒಂದು ಕಮಂಡಲ ಇದ್ದವು. ತಾಯಿಯು ಅದ್ವೈತ ಮತ್ತು ಇತರರೊಡನೆ ಸಮಾಲೋಚಿಸಿ, ತನ್ನ ಪುತ್ರನು ಜಗನ್ನಾಥನ ನೆಲೆಯಾದ ಪುರಿಯಲ್ಲಿ ನೆಲೆಸಬೇಕೆಂದು ಕೇಳಿಕೊಂಡಳು. ಅದರಿಂದ ಅವಳಿಗೆ ಆಗಾಗ ಅವನ ಸಮಾಚಾರ ತಿಳಿಯಲು ಸಾಧ್ಯವಾಗುತ್ತಿತ್ತು. ಮಹಾಪ್ರಭುಗಳು ಈ ಪ್ರಸ್ತಾವಕ್ಕೆ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಶಾಂತಿಪುರವನ್ನು ಬಿಟ್ಟು ಒರಿಸ್ಸಾ ಕಡೆಗೆ ಹೊರಟರು.

(ಮುಂದುವರಿಯುವುದು)

 

 
Leave a Reply

Your email address will not be published. Required fields are marked *