Search
Friday 29 October 2021
  • :
  • :

ಶ್ರೀಲ ಭಕ್ತಿವಿನೋದ ಠಾಕುರ ಭಾಗ – 1

ಶ್ರೀಲ ಭಕ್ತಿವಿನೋದ ಠಾಕುರರನ್ನು ಕುರಿತು ಶ್ರೀಲ ಪ್ರಭುಪಾದ

“ನನ್ನ ಗುರುಗಳಾದ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಭಕ್ತಿವಿನೋದ ಠಾಕುರರ ಐದನೆಯ ಪುತ್ರರಾಗಿದ್ದರು. ಮನೆಯಲ್ಲಿ ಭಕ್ತಿವಿನೋದ ಠಾಕುರರು ನನ್ನ ಗುರುಗಳಿಗೆ ನಿಜವಾದ ಗುರುಗಳಾಗಿದ್ದರೂ, `ನೀನು ಗೌರ ಕಿಶೋರ ದಾಸ ಬಾಬಾಜೀ ಅವರ ಬಳಿಗೆ ಹೋಗಿ ದೀಕ್ಷೆಯನ್ನು ತೆಗೆದುಕೋ’ ಎಂದು ಭಕ್ತಿ ಸಿದ್ಧಾಂತ ಸರಸ್ವತೀ ಠಾಕುರರಿಗೆ ಶಿಫಾರಸು ಮಾಡಿದರು. ಗೌರ ಕಿಶೋರ ದಾಸ ಬಾಬಾಜೀ ಮಹಾರಾಜರು ಭಕ್ತಿವಿನೋದ ಠಾಕುರರನ್ನು ತಮ್ಮ ಮಾರ್ಗದರ್ಶಿ ಎಂದು ಗೌರವಿಸುತ್ತಿದ್ದರು. ಆದ್ದರಿಂದ ನಾವು ನಮ್ಮ ಗುರುಶಿಷ್ಯ ಪರಂಪರೆಯಲ್ಲಿ ಭಕ್ತಿವಿನೋದ ಠಾಕುರರು ಗೌರ ಕಿಶೋರ ದಾಸ ಬಾಬಾಜೀ ಮಹಾರಾಜ ಅವರಿಗೆ ಮಾರ್ಗದರ್ಶನ ಮಾಡಿದರು ಎಂದು ಪರಿಗಣಿಸುತ್ತೇವೆ ಮತ್ತು ಗೌರ ಕಿಶೋರ ದಾಸ ಬಾಬಾಜೀ ಮಹಾರಾಜ ಅವರು ನನ್ನ ಗುರುಗಳಿಗೆ ದೀಕ್ಷೆ ನೀಡಿದರು. ಆದ್ದರಿಂದ ಭಕ್ತಿವಿನೋದ ಠಾಕುರರು ನನ್ನ ಗುರುಗಳ ಗುರುಗಳ ಗುರುಗಳು ಎಂದು ಅಂಗೀಕರಿಸಲಾಗಿದೆ. ಅವರು ನಾಲ್ಕನೆಯ ತಲೆಮಾರಿನ ಗುರುಗಳು.”

ನಮೋ ಭಕ್ತಿವಿನೋದಾಯ ಸಚ್ಚಿದಾನಂದ ನಾಮಿನೇ |

ಗೌರಶಕ್ತಿ ಸ್ವರೂಪಾಯ ರೂಪಾನುಗ ವರಾಯ ತೇ ||

“ಸಚ್ಚಿದಾನಂದ ಭಕ್ತಿವಿನೋದರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಅವರು ಚೈತನ್ಯ ಮಹಾಪ್ರಭುಗಳ ದಿವ್ಯಶಕ್ತಿ. ಅವರು ಶ್ರೀಲ ರೂಪ ಗೋಸ್ವಾಮಿ ಅವರ ನೇತೃತ್ವದಲ್ಲಿರುವ ಗೋಸ್ವಾಮಿಗಳ ಕಟ್ಟುನಿಟ್ಟಿನ ಅನುಯಾಯಿಗಳು.”

ಶ್ರೀಲ ಸಚ್ಚಿದಾನಂದ ಭಕ್ತಿವಿನೋದ ಠಾಕುರರು ಹತ್ತೊಂಬತ್ತನೆಯ ಶತಮಾನದಲ್ಲಿ ವಿಷಮ ಐತಿಹಾಸಿಕ ಪರ್ವಕಾಲದಲ್ಲಿ ಆವಿರ್ಭವಿಸಿದರು. ಆಗ ಚೈತನ್ಯ ಮಹಾಪ್ರಭುಗಳ ಬೋಧನೆಗಳು ಎಷ್ಟೊಂದು ನಿಂದನೆಗೆ ತುತ್ತಾಗಿ ಅಪಮೌಲ್ಯ- ಗೊಂಡಿದ್ದವೆಂದರೆ, ಭಕ್ತಿವಿನೋದ ಠಾಕುರರು ಎಂಟು ವರ್ಷಗಳ ಕಾಲ ಶೋಧನೆ ಮತ್ತು ನಿರಂತರ ಪ್ರಯತ್ನ ಮಾಡಿದರೂ ಶ್ರೀ ಚೈತನ್ಯ ಚರಿತಾಮೃತದ ಒಂದು ಪ್ರತಿಯನ್ನು ದೊರಕಿಸಿಕೊಳ್ಳಲಾಗಲಿಲ್ಲ. ಅದು ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ದರ್ಶನವನ್ನು ಕುರಿತ ಅತ್ಯಂತ ಪ್ರಮುಖವಾದ ಜೀವನ ಚರಿತ್ರೆಯಾಗಿತ್ತು. ಚೈತನ್ಯ ಮಹಾಪ್ರಭುಗಳು ಕಣ್ಮರೆ ಹೊಂದಿ ಕೆಲವೇ ನೂರು ವರ್ಷಗಳು ಮಾತ್ರ ಕಳೆದಿದ್ದರೂ ಅವರ ಪರಿಶುದ್ಧ ಬೋಧನೆಗಳು ವಸ್ತುತಃ ಕಳೆದುಹೋಗಿದ್ದವು. ಈ ಬೋಧನೆಗಳು ಕೆಲವೇ ಕೆಲವು ನಿಸ್ಸಂಗಿಗಳಾದ ವಿರಕ್ತರಲ್ಲಿ ಸಂರಕ್ಷಿತವಾಗಿದ್ದವು. ಇವರು ತಮ್ಮ ಜೀವಂತ ನಿದರ್ಶನವನ್ನು ಬಿಟ್ಟರೆ ಅವರ ಸಂದೇಶವನ್ನು ಸಕ್ರಿಯವಾಗಿ ಬೋಧಿಸುತ್ತಿರಲಿಲ್ಲ. ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳವನ್ನು ಪುನಃ ಕಂಡುಹಿಡಿದಿದ್ದಕ್ಕಾಗಿ ಭಕ್ತಿವಿನೋದ ಠಾಕುರರು ವಿಶೇಷವಾದ ಮನ್ನಣೆಗೆ ಪಾತ್ರರಾಗಿದ್ದರೂ, ದಿಟದಲ್ಲಿ ಅವರು ಚೈತನ್ಯ ಮಹಾಪ್ರಭುಗಳ ಆಂದೋಲನವನ್ನು ಪುನಃ ಕಂಡುಹಿಡಿದರು, ಪುನಃ ಸ್ಥಾಪಿಸಿದರು. ಅದು ಬ್ರಿಟಿಷ್ ಆಡಳಿತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಟ್ಟಭಿಮಾನದಲ್ಲಿ ಕಾಂತಿಗುಂದಿತ್ತು. ಅನೇಕ ಸಹಜೀಯಾ ಪಂಗಡಗಳ ವಿಕೃತ ಮತ್ತು ನಿರರ್ಥಕ ಚಟುವಟಿಕೆಗಳಿಂದ ಮತ್ತು ಪ್ರಚೋದಿತ, ಕಲ್ಪಿತ ತತ್ತ್ವಜ್ಞಾನಗಳಿಂದ ಕೂಡಿದ ಇತರ ಗುಂಪುಗಳಿಂದ ಅದಕ್ಕೆ ಅಪಕೀರ್ತಿ ಬಂದಿತ್ತು. ಅವರು ಚೈತನ್ಯ ಮಹಾಪ್ರಭುಗಳ ಸಂದೇಶವನ್ನು ಪುನರುಜ್ಜೀವಿಸಿದರು. ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಾದ ಗೋಸ್ವಾಮಿಗಳ ಬರಹವನ್ನು ಪ್ರಕಟಿಸಿದರು. ಈ ಬೋಧನೆಗಳು ಆಧುನಿಕ ಜಗತ್ತಿಗೆ ಹೇಗೆ ಕಾಲಾತೀತವಾದ ಮಹತ್ವವನ್ನು ಹೊಂದಿವೆಯೆಂದೂ ಪ್ರಸಕ್ತವಾಗಿವೆಯೆಂದೂ ಸಾಧಿಸಿತೋರಿಸಿದರು.

ಶ್ರೀಲ ಭಕ್ತಿವಿನೋದ ಠಾಕುರರು ನಿತ್ಯಸಿದ್ಧರು. ಪರಮ ಪ್ರಭುವಿನ ಶಾಶ್ವತ ಸಾಕ್ಷಾತ್ಕೃತ ಸಹಚರರು. ಚೈತನ್ಯ ಮಹಾಪ್ರಭುಗಳು ತಮ್ಮ ಅಭಿಯಾನವನ್ನು ಸ್ಥಾಪಿಸಲು ನೆರವಾಗಲು ಅವರು ಆಧ್ಯಾತ್ಮಿಕ ಲೋಕದಿಂದ ಇಳಿದು ಬಂದವರು. ಅವರ ಜೀವನದಲ್ಲಿ ಬಾಹ್ಯ ನೋಟಗಳು, ಆಕಾರಗಳು ಮತ್ತು ಆಕೃತಿಗಳು ಏನೇ ಆಗಿದ್ದಿರಲಿ ಅವರು ಎಂದೂ ಈ ಜಗತ್ತಿನ ಬದ್ಧಾತ್ಮರಾಗಿರಲಿಲ್ಲ. ನಮ್ಮ ಆಚಾರ್ಯರಿಂದ ನಮಗೆ ಈ ಭರವಸೆ ದೊರೆಯುತ್ತದೆ. ಆಧ್ಯಾತ್ಮಿಕ ಜಗತ್ತಿನ ಸರ್ವೋಚ್ಚ ಆಧ್ಯಾತ್ಮಿಕ ಲೋಕವಾದ ಗೋಲೋಕ ವೃಂದಾವನದಲ್ಲಿ ಕೃಷ್ಣನ ನಿಕಟ ವರ್ತುಲದಲ್ಲಿ ಅವರೊಬ್ಬರು ಸದಸ್ಯರಾಗಿದ್ದರು.

ಒಬ್ಬ ಮಹಾತ್ಮನ ಅಂತರಂಗದ ಜೀವನವನ್ನು ವಿಶೇಷವಾಗಿ ಅವನ ಬರವಣಿಗೆಗಳಲ್ಲಿ ಗುರುತಿಸಬಹುದು. ಶಬ್ದಗಳು ವರ್ಣಿಸುವ ಮಟ್ಟಿಗೆ ಅವನ ವೈಯಕ್ತಿಕ ಭಾವೋತ್ಕರ್ಷತೆಗಳು ಅದರಲ್ಲಿ ಅನಾವರಣಗೊಳ್ಳುತ್ತವೆ. ಶ್ರೀಲ ಭಕ್ತಿವಿನೋದ ಠಾಕುರರ ವಿಷಯದಲ್ಲಿ ಇದು ವಿಶೇಷವಾದ ಸತ್ಯಸಂಗತಿಯಾಗಿದೆ. ಶ್ರೀಕೃಷ್ಣನ ದಿವ್ಯ ಸಾಕ್ಷಾತ್ಕಾರವನ್ನು ಕುರಿತಂತೆ ತಮ್ಮ ವೈಯಕ್ತಿಕ ಅನುಭವದ ಆಧ್ಯಾತ್ಮಿಕ ಪ್ರಕ್ರಿಯೆಯ ವಿವರವಾದ ವರ್ಣನೆಗಳನ್ನು ಕೊಟ್ಟಿದ್ದಾರೆ. ಮಹಾನ್ ಆತ್ಮಗಳು ಸಾಧಾರಣವೆಂದು ಕಂಡುಬರುವ ಚಟುವಟಿಕೆಗಳನ್ನು ತೋರಬಹುದು. ಆದರೆ ಈ ಕಾರಣದಿಂದ ಅವರನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು.

ಎರಡೂ ಜಗತ್ತುಗಳಿಂದ ಜಾಗರೂಕವಾಗಿ ಶ್ರವಣ ಮಾಡುವ ಮೂಲಕ – ತಮ್ಮ ತತ್ತ್ವಶಾಸ್ತ್ರೀಯ ಹಾಗು ದಿವ್ಯಜ್ಞಾನವನ್ನೀಯುವ ಬರಹಗಳ ಮೂಲಕ ಅವರು ನಾದದಲ್ಲಿ ಶಾಶ್ವತವಾಗಿ ಜೀವಿಸಿದ್ದಾರೆ, ಅಲ್ಲದೆ ನಾನಾ ಸಂತಚರಿತಕಾರರು ಅವರ ಐತಿಹಾಸಿಕ ವಿವರಗಳು ಮತ್ತು ಚಟುವಟಿಕೆಗಳನ್ನು ವರ್ಣಿಸಿದ್ದಾರೆ – ಅವರ ದಿವ್ಯ ಜೀವನದೊಳಗೊಂದು ಮಿನುಗುನೋಟವನ್ನು ಹಾಯಿಸಬಹುದೆಂದು ನಾವು ಆಶಿಸಬಹುದು. ಮಿಗಿಲಾಗಿ ಹೀಗೆ ಅವರಿಂದ ಮತ್ತು ಅವರನ್ನು ಕುರಿತು ಕೇಳುವ ಮೂಲಕ ಮಾನವನ ಅಸ್ತಿತ್ವದ ಮಹಾನ್ ವರವನ್ನು ನಾವು ಅರ್ಥಮಾಡಿಕೊಳ್ಳಬಹುದು: ಪರಿಶುದ್ಧ ಭಕ್ತರೊಬ್ಬರ ಒಡನಾಟ, ಅತ್ಯಂತ ಶ್ರೇಷ್ಠ ದರ್ಜೆಯ ಪರಮಹಂಸ, ಶ್ರೀ ಚೈತನ್ಯ ಮಹಾಪ್ರಭುಗಳ ಪ್ರಮುಖ ಅನುಯಾಯಿಗಳಾದ ವೃಂದಾವನದ ಆರುಜನ ಗೋಸ್ವಾಮಿಗಳಿಗೆ ಸರಿಸಮಾನವಾದ ಬರವಣಿಗೆ ಮತ್ತು ಆಧ್ಯಾತ್ಮಿಕ ಸಾಕ್ಷಾತ್ಕಾರಗಳಿಂದ “ಏಳನೆಯ ಗೋಸ್ವಾಮಿ” ಎಂಬ ಯುಕ್ತವಾದ ಗೌರವಕ್ಕೆ ಪಾತ್ರರಾದವರು ಅವರು ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು.

ಪ್ರಾರಂಭದ ಜೀವನ

ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿರುವ ಬೀರ್‌ನಗರ್ (ಉಲಾಗ್ರಾಮ್ ಅಥವಾ ಉಲಾ) ಎಂಬ ಒಂದು ಪ್ರಾಚೀನ ಹಳ್ಳಿಯಲ್ಲಿ ,೧೮೩೮ನೇ ಇಸವಿ ಸೆಪ್ಟೆಂಬರ್ ಎರಡನೇ ತಾರೀಖು ಭಾನುವಾರದಂದು ಶ್ರೀಲ ಸಚ್ಚಿದಾನಂದ ಭಕ್ತಿವಿನೋದ ಠಾಕುರರು ಜನಿಸಿದರು. ಆನಂದಚಂದ್ರದತ್ತ ಮತ್ತು ಜಗತ್‌ಮೋಹಿನೀದೇವಿ ದಂಪತಿಗೆ ಅವರು ಮೂರನೆಯ ಪುತ್ರ. ಅವರು ಆಗರ್ಭಶ್ರೀಮಂತರು ಎಂದು ಹೇಳಬಹುದು. ಏಕೆಂದರೆ ಅವರ ತಂದೆ ತಾಯಿ ಇಬ್ಬರೂ ಪ್ರಖ್ಯಾತವಾದ ಮತ್ತು ಶ್ರೀಮಂತವಾದ ಕುಟುಂಬಗಳಿಂದ ಬಂದವರು. ಅವರಿಗೆ ಕೇದಾರನಾಥ ಎಂಬ ಪ್ರಭು ಶಿವನ ಹೆಸರನ್ನು ಅವರ ತಂದೆ ಇಟ್ಟರು.

ತಂದೆಯು ಒರಿಸ್ಸಾಕ್ಕೆ ಹೋಗಿದ್ದ ಸಮಯದಲ್ಲಿ ಕೇದಾರನಾಥನ ಜನನವಾಯಿತು. ಬಾಲಕನಿಗೆ ಸುಮಾರು ಎರಡು ವರ್ಷ ವಯಸ್ಸಾಗಿದ್ದಾಗ ತಂದೆ ಹಿಂತಿರುಗಿ ಬಂದರು. ತಂದೆಯು ಹಿಂತಿರುಗುವುದಕ್ಕೆ ಕೆಲವು ದಿನಗಳ ಮುಂಚೆ, ಕಾಗೆಯೊಂದು ಹಾರಿಬಂದು ಕೊಂಬೆಯ ಮೇಲೆ ಕುಳಿತುಕೊಳ್ಳುವುದನ್ನು ನೋಡಿ ಬಾಲಕನು ಒಂದು ಪದ್ಯವನ್ನು ಕಟ್ಟಿ ಹಾಡಿದನೆಂದು ಅವರ ದಾದಿ ಹೇಳಿದಳು:

ಕಾಕ್ ಕಾಲ್ ಝಿಂಗೇರ ಫೂಲ್

ಬಾಬಾ ಆಸೇತ ನದೇ ಬಸೋ

“ಓ ಕಪ್ಪು ಕಾಗೆ, ಹೀರೆಕಾಯಿ ಗಿಡದ ಹೂವೆ, ತಂದೆ ಬರುತ್ತಾರೆ ಪಕ್ಕಕ್ಕೆ ಸರಿದು ಕುಳಿತುಕೋ.”

ಅವನು ಹಾಗೆ ಮಾತನಾಡುತ್ತಿದ್ದಂತೆಯೇ ಕಾಗೆ ಹಾರಿ ಬೇರೆಡೆ ಕುಳಿತುಕೊಂಡಿತು. ಸಮೀಪದಲ್ಲಿದ್ದ ಕೆಲವು ಜನರು ಇದನ್ನು ಗಮನಿಸಿ, “ನಿನ್ನ ತಂದೆ ಖಂಡಿತವಾಗಿಯೂ ಬೇಗ ಬರುತ್ತಾರೆ” ಎಂದು ಹೇಳಿದರು. ಕೆಲವು ದಿನಗಳ ಅನಂತರ ಅವರ ತಂದೆ ಬಂದರು.

ಅವರಿಗೆ ಐದು ವರ್ಷ ವಯಸ್ಸಾದಾಗ ಶಾಲೆಗೆ ಸೇರಿಸಿದರು. ಆದರೆ ಆ ಶಾಲೆಯನ್ನು ಒಬ್ಬರು ಕ್ರೂರಿ ಉಪಾಧ್ಯಾಯರು ನಡೆಸುತ್ತಿದ್ದರು. ಅವರು ದೊಡ್ಡ ವಿದ್ಯಾರ್ಥಿಗಳನ್ನು ಬಳಸಿಕೊಂಡು ಚಿಕ್ಕ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸುವ ಕ್ರಮವನ್ನು ಜಾರಿಗೆ ತಂದಿದ್ದರು. ಇದರಿಂದ ಚಿಕ್ಕ ವಿದ್ಯಾರ್ಥಿಗಳು ಸದಾ ಭಯಭೀತರಾಗಿರುತ್ತಿದ್ದರು. “ಸ್ವಲ್ಪ ದೊಡ್ಡವರಾಗಿರುವ ವಿದ್ಯಾರ್ಥಿಗಳು ಉಪಾಧ್ಯಾಯರ ಪ್ರತಿನಿಧಿಗಳಂತೆ ವರ್ತಿಸುತ್ತಿದ್ದರು. ನಮ್ಮಲ್ಲಿ ಚಿಕ್ಕವರಿಗೆ ಅವರು ಕಿರುಕುಳ ಕೊಡುತ್ತಿದ್ದರು. ನಾವು ಶಾಲೆಗೆ ತಡವಾಗಿ ಬಂದರೆ ಈ ಹಿರಿಯ ವಿದ್ಯಾರ್ಥಿಗಳು ನಮ್ಮನ್ನು ಹೆದರಿಸುತ್ತಿದ್ದರು. ಅಲ್ಲಿನ ನಿಯಮ ಹೇಗಿತ್ತೆಂದರೆ: ಶಾಲೆಗೆ ಯಾರು ಮೊದಲು ಬರುತ್ತಿದ್ದರೋ ಅವರಿಗೆ ಬೆತ್ತದಿಂದ ಒಂದು ಏಟು ಕೊಡಲಾಗುತ್ತಿತ್ತು, ಎರಡನೆಯವರಾಗಿ ಬಂದವರಿಗೆ ಎರಡು ಏಟು, ಮೂರನೆಯವರಾಗಿ ಬಂದವರಿಗೆ ಮೂರು ಏಟು. ಈ ರೀತಿಯಲ್ಲಿ ಏಟುಗಳ ಸಂಖ್ಯೆ ಏರುತ್ತಾ ಹೋಗುತ್ತಿತ್ತು. ಶಾಲೆಯ ದಿನಚರಿ ಹೀಗಿತ್ತು: ಅತ್ಯಂತ ಚಿಕ್ಕ ವಿದ್ಯಾರ್ಥಿಗಳು ತಾಳಪತ್ರೆಯ ಮೇಲೆ ಇದ್ದಿಲಿನಿಂದ  ಕ ಖ ಗ … ಬರೆಯುತ್ತಿದ್ದರು. ಒಂದು ವರ್ಷವಾದ ಮೇಲೆ ಅವರು ಬಾಳೆಯ ಎಲೆಯ ಮೇಲೆ ಬರೆಯುತ್ತಿದ್ದರು. ಅದಾದ ಮೇಲೆ ಅವರು ಕಾಗದದ ಮೇಲೆ ಪ್ರತಿ ಮಾಡುತ್ತಿದ್ದರು.”

ಒಂದು ಸಲ ಹಿರಿಯ ವಿದ್ಯಾರ್ಥಿಗಳ ಬೆದರಿಕೆಗೆ ಮಣಿದು ಕೇದಾರನಾಥ ತನ್ನ ಉಪಾಧ್ಯಾಯರಿಗಾಗಿ ತನ್ನ ಮನೆಯಿಂದ ಒಂದು ಹಲಸಿನ ಹಣ್ಣನ್ನು ಕದ್ದ. ಆದರೆ ಅವರ ತಾಯಿಗೆ ಈ ವಿಷಯ ಗೊತ್ತಾಗಿ ಬಹಳ ಕೋಪ ಮಾಡಿಕೊಂಡರು. “…. ನಮ್ಮ  ಉಪಾಧ್ಯಾಯರು ಈ ಸಂಗತಿಯನ್ನು ಕೇಳಿ ಹೆದರಿಕೊಂಡರು. ಗಮನಕ್ಕೆ ಬಾರದಂತಹ ವಸ್ತುಗಳನ್ನೇ ನಾನು ತೆಗೆದುಕೊಂಡು ಬರಬೇಕೆಂದು ಅವರು ನನಗೆ ಹೇಳಿದರು. `ದೊಡ್ಡ ವಸ್ತುಗಳನ್ನು ತರಬೇಡ.’ ನೆರೆಯವರ ಮಕ್ಕಳು ಹೊಗೆಸೊಪ್ಪನ್ನು ಕದ್ದು ಅವರಿಗೆ ಕೊಡುತ್ತಿದ್ದರು. ನಾನು ಅದರ ಬದಲಿಗೆ ನೆನೆದ ಕಡಲೇಕಾಳು ಕದ್ದು ಅವರಿಗೆ ಕೊಡುತ್ತಿದ್ದೆ.” ಕೇದಾರನಾಥನ ಸೋದರ ಹರಿದಾಸ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದ. ಉಪಾಧ್ಯಾಯರ ಬಗೆಗೆ ಮತ್ತು ಹಿರಿಯ ವಿದ್ಯಾರ್ಥಿಗಳ ದುಷ್ಟತನದ ಬಗೆಗೆ ಅವನಿಗೆ ಕೊನೆಯಲ್ಲಿ ಎಂತಹ ಕೋಪ ಬಂದಿತೆಂದರೆ ಒಂದು ಮಚ್ಚನ್ನು ಸೆಳೆದುಕೊಂಡು ಉಪಾಧ್ಯಾಯರು ಮಲಗಿರುವಾಗ ಅವರ ಮನೆಗೆ ನುಗ್ಗಿದ. ಆಕಸ್ಮಿಕವಾಗಿ ಆಕಡೆ ಬಂದ ಕೇದಾರನಾಥ ಮಚ್ಚನ್ನು ಅವನ ಕೈಯಿಂದ ಕಸಿದುಕೊಂಡು ದೂರ ಎಸೆದ. ಉಪಾಧ್ಯಾಯರು ಕೂಡಲೇ ರಾಜೀನಾಮೆ ಕೊಟ್ಟು ಅದೇ ದಿನ ಊರು ಬಿಟ್ಟು  ಹೊರಟುಹೋದರು. ಅವರ ಸ್ಥಾನಕ್ಕೆ ಇನ್ನೊಬ್ಬ ಉಪಾಧ್ಯಾಯರು ಬಂದರು.

ಕೇದಾರನಾಥನಿಗೆ ಏಳು ವರ್ಷವಾಗಿದ್ದಾಗ, ಕೃಷ್ಣನಗರದ ರಾಜ ಒಂದು ಮಹಾವಿದ್ಯಾಲಯವನ್ನು (ಕಾಲೇಜ್) ಸ್ಥಾಪನೆ ಮಾಡಿದ. ಪ್ರಮುಖ ಜಮೀನ್ದಾರರು ಮತ್ತು ನೆರೆಹೊರೆಯ ರಾಜರು ತಮ್ಮ ಪುತ್ರರನ್ನು ಅಲ್ಲಿಗೆ ಕಳುಹಿಸಬೇಕೆಂದು ಆಹ್ವಾನ ನೀಡಿದ. ಕೇದಾರನಾಥ, ಕಾಳಿಪ್ರಸನ್ನ (ಅವರ ಅಣ್ಣ) ಮತ್ತು ಅವರ ಕುಟುಂಬದ ಇತರ ಬಾಲಕರು ಅದಕ್ಕೆ ಸೇರಿದರು. ಅವರ ದಾದಿಯರು ಜೊತೆಗೆ ಹೋದರು. ಕೃಷ್ಣನಗರದ ಬಜಾರ್‌ನ ಮಧ್ಯದಲ್ಲಿದ್ದ ಒಂದು ಮನೆಯಲ್ಲಿ ಅವರು ನೆಲೆಸಿದರು. ಪಕ್ಕದ ಮನೆಯಲ್ಲಿ ಒಬ್ಬ ಗಾಣಿಗ ಇದ್ದ. ಮರಣೋನ್ಮುಖನಾಗಿದ್ದ ಅವನು ನಿತ್ಯ ಮಹಾಭಾರತ ಪ್ರವಚನವನ್ನು ಏರ್ಪಡಿಸಿದ್ದ. ಮಹಾಭಾರತದ ಕಥೆಗಳನ್ನು ಕೇಳಲು ಕೇದಾರನಾಥನಿಗೆ ಬಹಳ ಇಷ್ಟವಾಗಿತ್ತು. ಅದರಲ್ಲೂ ವಿಶೇಷವಾಗಿ ಭೀಮನ ಕಥೆಗಳು ಅವನ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದ್ದವು. ಅವರು ತಮಾಷೆಯಾಗಿ ಹೀಗೆ ಬರೆದಿದ್ದಾರೆ. “ಪ್ರವಚನಕಾರರಿಗೆ ತಿನ್ನಲು ಬಹಳಷ್ಟು ಪದಾರ್ಥಗಳು ಸಿಕ್ಕಿದ ದಿನಗಳಲ್ಲಿ ಅವರು ನಿರರ್ಗಳವಾಗಿ ಪ್ರವಚನ ಮಾಡುತ್ತಿದ್ದರು. ಏನೂ ಸಿಗದಿದ್ದ ದಿನಗಳಲ್ಲಿ ಅವರ ಹೃದಯ ಬಹಳ ಕುಗ್ಗಿರುತ್ತಿತ್ತು.”

ಅವರಿಗೆ ಹನ್ನೆರಡು ವರ್ಷ ತುಂಬಿದಾಗ ಅವರ ತಾಯಿ ರಾಣಘಾಟ್‌ನ ಐದು ವರ್ಷದ ಬಾಲಕಿಯೊಡನೆ ವಿವಾಹದ ಏರ್ಪಾಡು ಮಾಡಿದರು. ಅವಳ ಹೆಸರು ಶಯಾಮಣಿ. ಅವಳು ಶ್ರೀಯುಕ್ತ ಮಧುಸೂದನ ಮಿತ್ರರ ಮಗಳು. ಈ ವಿವಾಹದಿಂದ ಕುಟುಂಬದ ಸೌಭಾಗ್ಯ ವೃದ್ಧಿಯಾಗುತ್ತದೆಂದು ತಾಯಿ ಭಾವಿಸಿದಳು. ಆ ಕಾಲದಲ್ಲಿ ಬಂಗಾಳದಲ್ಲಿ ಬಾಲ್ಯವಿವಾಹಗಳು ಅಸಾಮಾನ್ಯ- ವೇನಾಗಿರಲಿಲ್ಲ. ಸಾಮಾನ್ಯವಾಗಿ ಅಂತಹ ವಿವಾಹಗಳನ್ನು ಜ್ಯೋತಿಷ್ಯದ ಲೆಕ್ಕಾಚಾರವನ್ನು ಆಧರಿಸಿ ಏರ್ಪಡಿಲಾಗುತ್ತಿತ್ತು. ಇದರಿಂದ ಪತಿಪತ್ನಿಯರ ನಡುವೆ ಹೊಂದಾಣಿಕೆ ಇರುತ್ತಿತ್ತು. ಸಾಮಾನ್ಯವಾಗಿ ವಧೂವರರು ಅನುರೂಪ ಕೌಟುಂಬಿಕ ಹಿನ್ನೆಲೆ ಹೊಂದಿರುತ್ತಿದ್ದರು. ಈ ಬಾಲ್ಯ ವಿವಾಹಗಳ ಹಿಂದಿನ ಮನೋವೈಜ್ಞಾನಿಕ ತರ್ಕವೇನೆಂದರೆ, ವೈದಿಕ ಸಂಸ್ಕೃತಿಯ ಒಬ್ಬಳು ಬಾಲಕಿಯು ತನ್ನ ಭವಿಷ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಮತ್ತು ತನ್ನ ಸುರಕ್ಷತೆಗೆ ಖಾತರಿ ದೊರೆತಿದೆ ಎಂದು ತಿಳಿದರೆ ಅವಳಲ್ಲಿ ಸುಭದ್ರತೆಯ ಮನೋಭಾವ ಮೂಡುತ್ತಿತ್ತು. ಈ ದಂಪತಿ ಪ್ರೌಢಾವಸ್ಥೆ ತಲಪುವವರೆಗೂ ಸಾಮಾನ್ಯವಾಗಿ ಜೊತೆಯಲ್ಲಿ ವಾಸಿಸುತ್ತಿರಲಿಲ್ಲ. ಹೀಗೆ ಶ್ರೀಲ ಭಕ್ತಿವಿನೋದ ಠಾಕುರರ ಮದುವೆ ವೈಭವೋಪೇತವಾಗಿ ನೆರವೇರಿತು. ಅವರು ಅದನ್ನು ಗೊಂಬೆಯ ಮದುವೆಗೆ ಹೋಲಿಸುತ್ತಾರೆ. “ಒಂದು ವಿಹಾರ ದೋಣಿ, ಮದುವೆಯ ಮೇನೆ, ಅಲಂಕಾರಗಳು, ದೀಪಗಳು, ಇಂಗ್ಲಿಷ್‌ವಾದ್ಯಗೋಷ್ಠಿ ಇತ್ಯಾದಿ ಇದ್ದವು. ಹನ್ನೆರಡು ವರ್ಷದ ಬಾಲಕ ಮತ್ತು ಐದು ವರ್ಷದ ಬಾಲಕಿಯ ನಡುವೆ ನಡೆದ ಈ ಮದುವೆ ಥೇಟ್ ಚಿಕ್ಕಮಕ್ಕಳು ಆಡುವ ಆಟದ ಗೊಂಬೆಗಳ ಮದುವೆಯಂತೆಯೇ ಇತ್ತು.”

ಕೇದಾರನಾಥನಿಗೆ ಹದಿನಾಲ್ಕು ವರ್ಷವಾಗಿದ್ದಾಗ ಅವನ ಸೋದರಮಾವ, ಪ್ರಖ್ಯಾತ ಬಂಗಾಳಿ ಕವಿ ಕಾಶಿಪ್ರಸಾದ್ ಘೋಷ್ ಅವರ ಮನೆಗೆ ಭೇಟಿ ಕೊಟ್ಟರು. ಕಾಶಿಪ್ರಸಾದ್ ಒಬ್ಬರು ಪತ್ರಕರ್ತರಾಗಿದ್ದರು ಮತ್ತು `ಹಿಂದೂ ಇಂಟೆಲಿಜೆನ್ಸರ್’ ಎಂಬ ಸಾಪ್ತಾಹಿಕದ ಸಂಪಾದಕರಾಗಿದ್ದರು. ಅವರು ಆ ಕಾಲದ ಸಾಹಿತ್ಯಕ್ಷೇತ್ರದ ಪ್ರತಿಭಾಶಾಲಿ ವ್ಯಕ್ತಿಯಾಗಿದ್ದರು. ಅವರ ಮನೆಯು ಕಲ್ಕತ್ತದ ಸಾಹಿತ್ಯಕ್ಷೇತ್ರದ ಅನೇಕ ದಿಗ್ಗಜ್ಜರ ಸಮಾವೇಶ ಸ್ಥಳವಾಗಿತ್ತು.

ಕಾಶಿಪ್ರಸಾದರು ಕೇದಾರನಾಥನ ಇಂಗ್ಲಿಷ್ ವಾಚನ ಮತ್ತು ಲೇಖನ ಶಕ್ತಿಯನ್ನು ಪರೀಕ್ಷಿಸಿದರು. ಅವನ ಬುದ್ಧಿಶಕ್ತಿಯನ್ನು ಕಂಡು ಮೆಚ್ಚಿಕೊಂಡರು. ಅವನಿಗೆ ಒಂದು ಕನ್ನಡಿಯನ್ನು ಬಹುಮಾನವಾಗಿ ಕೊಟ್ಟರು. ಕೇದಾರನಾಥನ ಸೋದರತ್ತೆಯು ಅವನು ಕಲ್ಕತ್ತೆಗೆ ಹೋಗಿ ಅವನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದು ಅವನ ತಾಯಿಗೆ ಸಲಹೆ ಮಾಡಿದಳು. ಅವಳು ಅವನನ್ನು ತನ್ನ ಮಗನಂತೆಯೇ ನೋಡಿಕೊಳ್ಳುವುದಾಗಿ ತಾಯಿಯ ಮನವೊಲಿಸಿದಳು. ಹೀಗೆ ಕೇದಾರನಾಥನು ತನ್ನ ವಿದ್ಯಾಭ್ಯಾಸಕ್ಕಾಗಿ ಕಲ್ಕತ್ತಕ್ಕೆ ಹೋಗುವುದೆಂದು ನಿರ್ಧಾರವಾಯಿತು.

ಕೇದಾರನಾಥನು ಕಾಶಿ ಪ್ರಸಾದರ ಪುಸ್ತಕ ಭಂಡಾರದಲ್ಲಿದ್ದ ಎಲ್ಲ ಪುಸ್ತಕಗಳನ್ನೂ ಓದಿದ. ಅವರ ನಿಯತಕಾಲಿಕಗಳು ಮತ್ತು ಸುದ್ದಿ ಪತ್ರಿಕೆಗಳಿಗೆ ಕಳುಹಿಸಲಾಗಿದ್ದ ಎಲ್ಲ ಲೇಖನಗಳನ್ನು ಓದುವ ಮೂಲಕ ಅವರಿಗೆ ಸಹಾಯ ಮಾಡಿದ. ಅಲ್ಲದೆ ಸಾರ್ವಜನಿಕ ಪುಸ್ತಕಭಂಡಾರದಲ್ಲೂ ಅವನು ಮುಕ್ತವಾದ ಅಧ್ಯಯನ ನಡೆಸಿದ. ಕಾಶಿಪ್ರಸಾದರು ಸಂಪಾದಿಸುತ್ತಿದ್ದ ಲಿಟೆರರಿ ಗೆಜೆಟ್ ಮತ್ತು ಇಂಟೆಲಿಜೆನ್ಸರ್‌ಗಳಿಗೆ ಅವನು ಲೇಖನಗಳನ್ನು ಕೊಡಲಾರಂಭಿಸಿದ.

ತಾನು ಹಿಂದೆ ಓದಿದ್ದ ಶಾಲೆ `ಹಿಂದೂ ಚಾರಿಟಬಲ್ ಇನ್‌ಸ್ಟಿಟೂಷನ್ ಸ್ಕೂಲ್’ನಲ್ಲಿ ಅವನಿಗೆ ಎರಡನೆಯ ದರ್ಜೆಯ ಉಪಾಧ್ಯಾಯನ ಕೆಲಸ ದೊರೆಯಿತು. ಸಂಬಳ ತಿಂಗಳಿಗೆ ಹದಿನೈದು ರೂಪಾಯಿ. ಆ ಸಮಯದಲ್ಲಿ ಅವನ ವಯಸ್ಸು ಸುಮಾರು ಹತ್ತೊಂಬತ್ತು ವರ್ಷ.

೧೮೬೦ರ ಮಾರ್ಚ್ ತಿಂಗಳಿನಲ್ಲಿ `ಭದ್ರಾಸ್ಕೂಲ್’ನಲ್ಲಿ ಅವನಿಗೆ ಮುಖ್ಯೋಪಾಧ್ಯಾಯನ ಹುದ್ದೆ ದೊರೆಯಿತು. ಸಂಬಳ ತಿಂಗಳಿಗೆ ನಲವತ್ತೈದು ರೂಪಾಯಿ.

೧೮೬೧ರ ಕೊನೆಯ ವೇಳೆಗೆ ಅವನ ಪತ್ನಿಗೆ ಅನಾರೋಗ್ಯವಾಯಿತು. ಹತ್ತುತಿಂಗಳ ಮಗನನ್ನು  ಅವನ ಕೈಯಲ್ಲಿಟ್ಟು ಅವಳು ಮೃತಳಾದಳು. ಎರಡು ತಿಂಗಳ ಅನಂತರ ಅವನಿಗೆ ಮರುಮದುವೆಯಾಯಿತು. ವಧು ಲಲಿತಾ ಎನ್ನುವ ಹುಡುಗಿ. ಜಾಕ್‌ಪುರ್ ಗ್ರಾಮದ ಗಣ್ಯಮಾನ್ಯರಾಯ್ ಅವರ ಮಗಳು. ಮುಂದೆ ಅವಳು ಶ್ರೀಮತಿ ಭಾಗವತೀ ದೇವೀ ಎಂದು ಪ್ರಸಿದ್ಧಳಾದಳು. ಪತಿಯ ಹೆಜ್ಜೆಯನ್ನು ಅನುಸರಿಸಿ ನಡೆಯುವ ಅವಳೊಬ್ಬಳು ಪ್ರಾಮಾಣಿಕ ವೈಷ್ಣವಿಯಾಗಿದ್ದಳು. ಉದಾತ್ತ ಚಾರಿತ್ರ್ಯ ಮತ್ತು ಪ್ರಶಾಂತ ಸ್ವಭಾವದ ಅವಳು ತನ್ನೆಲ್ಲ ಕೆಲಸಗಳಲ್ಲೂ ನಿಷ್ಣಾತಳಾಗಿದ್ದಳು.

ಜಿಲ್ಲಾ ನ್ಯಾಯಾಧೀಶರಾಗಿ

ಕೇದಾರನಾಥರನ್ನು ೧೮೬೮ರ ಮಾರ್ಚ್ ತಿಂಗಳಿನಲ್ಲಿ ದಿನಜ್‌ಪುರದ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಲಾಯಿತು. ದಿನಜ್‌ಪುರದ ಭಾರಿ ಜಮೀನ್ದಾರ್ ರಾಯ್‌ಸಾಹೇಬ್ ಕಮಲ ಲೋಚನ್ ಅವರ ಆಶ್ರಯದಲ್ಲಿ ಅನೇಕ ವೈಷ್ಣವರು ನೆಲೆಸಿರುವುದನ್ನು ಕಂಡು ಅವರಿಗೆ ಸಂತೋಷವಾಯಿತು. ಆ ಜಮೀನ್ದಾರರು, ಶ್ರೀ ಚೈತನ್ಯ ಮಹಾಪ್ರಭುಗಳ ಮಹಾನ್ ಭಕ್ತರಾಗಿದ್ದ ರಾಮಾನಂದ ವಸು ಅವರ ವಂಶಜರಾಗಿದ್ದರು.

ಕೇದಾರನಾಥರು ಹೀಗೆ ಬರೆಯುತ್ತಾರೆ: “ಚೈತನ್ಯ ಚರಿತಾಮೃತವನ್ನು ನಾನು ಮೊದಲನೆಯ ಸಲ ಓದಿದಾಗ ಶ್ರೀ ಚೈತನ್ಯರ ಬಗೆಗೆ ನನಗೆ ಸ್ವಲ್ಪ ನಂಬಿಕೆಯುಂಟಾಯಿತು. ಎರಡನೆಯ ಸಲ ಓದಿದಾಗ ಶ್ರೀ ಚೈತನ್ಯರಿಗೆ ಸಮಾನರಾದ ಪಂಡಿತರು ಯಾರೂ ಇಲ್ಲ ಎಂದು ಅರ್ಥಮಾಡಿಕೊಂಡೆ. ಆಗ ನನಗೊಂದು ಶಂಕೆ  ಮೂಡಿತು: ಅಂತಹ ಮಹಾನ್ ವಿದ್ವಾಂಸರಾಗಿ, ದೇವೋತ್ತಮನನ್ನು ಕುರಿತು ವಾಸ್ತವಿಕ ಪ್ರೇಮವನ್ನು ಅಷ್ಟರಮಟ್ಟಿಗೆ ಪ್ರಕಟಗೊಳಿಸಿದವರಾಗಿ, ಯುಕ್ತ ಚಾರಿತ್ರ್ಯನಲ್ಲದ ಕೃಷ್ಣನ ಆರಾಧನೆಯನ್ನು ಅವರು ಹೇಗೆ ಪ್ರತಿಪಾದಿಸುತ್ತಿದ್ದಾರೆ? ಪ್ರಾರಂಭದಲ್ಲಿ ನನಗೆ ಇದನ್ನು ಕುರಿತು ಸೋಜಿಗವಾಗಿತ್ತು. ನಾನು ಅದನ್ನು ಕುರಿತು ಆಳವಾಗಿ ಯೋಚಿಸಿದೆ. ಅನಂತರ ನಾನು ಅತ್ಯಂತ ವಿನೀತಭಾವದಿಂದ ದೇವರಲ್ಲಿ ಪ್ರಾರ್ಥನೆ ಮಾಡಿದೆ, `ಓ ಪ್ರಭು! ಈ ವಿಚಾರದಲ್ಲಿರುವ ರಹಸ್ಯವನ್ನು ಅರ್ಥಮಾಡಿಕೊಳ್ಳಲು ನನಗೆ ಶಕ್ತಿಕೊಡು.’ ಭಗವಂತನ ಕರುಣೆ ಅನಂತ. ನನ್ನ ಕಾತರ ಮತ್ತು ದೈನ್ಯವನ್ನು ನೋಡಿ ಕೆಲವೇ ದಿನಗಳಲ್ಲಿ ಅವನು ನನ್ನ ಮೇಲೆ ತನ್ನ ಕರುಣೆಯನ್ನು ಅನುಗ್ರಹಿಸಿದ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿಯನ್ನು ನನಗೆ ಒದಗಿಸಿದ. ಕೃಷ್ಣನ ಸತ್ಯವು ಬಹಳ ಆಳವಾದದ್ದು ಮತ್ತು ಗುಪ್ತವಾದದ್ದು ಹಾಗೂ ದೇವೋತ್ತಮನ ವಿಜ್ಞಾನದ ಅತ್ಯುನ್ನತ ತತ್ತ್ವ ಎಂದು ಆಗ ನನಗೆ ಅರ್ಥವಾಯಿತು. ಆ ಸಮಯದಿಂದ ಮುಂದಕ್ಕೆ ಶ್ರೀ ಚೈತನ್ಯ ಮಹಾಪ್ರಭುಗಳೇ ದೇವರೆಂದು ನಾನು ತಿಳಿದೆ. ಪ್ರಾರಂಭದಿಂದಲೇ ನನಗೆ ಅನುರಾಗದ ಅನುಭವವಾಯಿತು ಮತ್ತು ಅದು ಅತ್ಯದ್ಭುತವಾಗಿತ್ತು.”

ಈಗ ನಾವು ಸಚ್ಚಿದಾನಂದ ಭಕ್ತಿವಿನೋದ ಠಾಕುರರ ಸಹಜ ಚಾರಿತ್ರ್ಯವು ಹೊರಹೊಮ್ಮಲು ಪ್ರಾರಂಭಿಸುವುದನ್ನು ಕಾಣುತ್ತೇವೆ. ಕೃಷ್ಣನು ಅವರ ಆಧ್ಯಾತ್ಮಿಕ ಗುಣಗಳನ್ನು ಆಚ್ಛಾದಿಸಿದ್ದನು ಮತ್ತು ತನ್ನ ಯೋಗಮಾಯೆಯ ಹೊದಿಕೆಯಡಿಯಲ್ಲಿ ಅದನ್ನು ಜಗತ್ತಿನಿಂದ ಮುಚ್ಚಿಟ್ಟಿದ್ದನು. ಆದರೆ ಈಗ ಚೈತನ್ಯ ಮಹಾಪ್ರಭುಗಳ ಆಂದೋಲನವನ್ನು ಪುನರುಜ್ಜೀವನಗೊಳಿಸುವ ಠಾಕುರರ ಮಹಾ ಅಭಿಯಾನವು ಪ್ರಾರಂಭವಾಗಬೇಕಾಗಿತ್ತು. ತಮ್ಮ ಆತ್ಮ ಚರಿತ್ರೆಯಲ್ಲಿ ಅವರು ಹೇಳುವಂತೆ ಶ್ರೀ ಚೈತನ್ಯ ಮಹಾಪ್ರಭುಗಳ ಪರಿಶುದ್ಧ ಬೋಧನೆಗಳೊಂದಿಗೆ ಅವರಿಗೆ ಸಂಪರ್ಕ ಬಂದ ಮೊದಲಿನಿಂದಲೂ ಅವರು ಅನುರಾಗ ಅಥವಾ ಸ್ವಯಂಪ್ರೇರಿತವಾದ ಭಕ್ತಿಯ ಅನುಭವವನ್ನು ಪಡೆಯುತ್ತಿದ್ದರು.

ಅದಾದ ಸ್ವಲ್ಪ ಸಮಯದಲ್ಲಿಯೇ, ೧೮೬೮ರಲ್ಲಿ, ಶ್ರೀ ಚೈತನ್ಯ ಮಹಾಪ್ರಭುಗಳ ಬಗೆಗೆ ಅವರಿಗಿದ್ದ ಆನಂದಪರವಶ ಭಾವನೆಯಿಂದಾಗಿ `ಸಚ್ಚಿದಾನಂದ ಪ್ರೇಮಾಲಂಕಾರ’ ಎಂಬ ಒಂದು ಬಂಗಾಳಿ ಪದ್ಯವನ್ನು ಅವರನ್ನು ಕೀರ್ತಿಸಿ ಬರೆದರು. ಅಲ್ಲಿಂದ ಮುಂದಕ್ಕೆ ಅವರು `ಸದ್-ಚಿದ್-ಆನಂದ’ ಅಥವಾ ನಿತ್ಯತೆ, ಜ್ಞಾನ ಮತ್ತು ಆನಂದಗಳ ಸಾಕಾರರೂಪ ಎಂದು ಪ್ರಸಿದ್ಧರಾದರು.

ಪುರೀ ನಗರಕ್ಕೆ ವರ್ಗ ಮಾಡಬೇಕೆಂದು ಅವರು ಕೇಳಿಕೊಂಡರು. ಅದು ಲಭಿಸಿತು. ಶ್ರೀಮದ್ ಭಾಗವತ ಮತ್ತು ಶ್ರೀ ಚೈತನ್ಯ ಚರಿತಾಮೃತದ ಪ್ರತಿಗಳನ್ನು ತಮ್ಮೊಡನೆ ತೆಗೆದುಕೊಂಡು ಅವರು ಅಲ್ಲಿಗೆ ತೆರಳಿದರು. ಪ್ರಭು ಜಗನ್ನಾಥನ ನಿತ್ಯದರ್ಶನಕ್ಕೆ ಹೋಗುತ್ತಿದ್ದುದನ್ನು ಅವರು ಹೀಗೆ ಬಣ್ಣಿಸುತ್ತಾರೆ: “ಪ್ರತಿದಿನ ನಾನು  ಶ್ರೀಮಂದಿರದಲ್ಲಿ ಜಗನ್ನಾಥನನ್ನು ನೋಡಲು ಹೋಗುತ್ತಿದ್ದೆ. ದರ್ಶನದ ಸಮಯದಲ್ಲಿ ನನಗೆ ಶ್ರೀ ಚೈತನ್ಯ ಮಹಾಪ್ರಭುಗಳ ಭಾವೋದ್ವೇಗದ ನೆನಪಾಗುತ್ತಿತ್ತು. ಆಗ ನನಗೆ ತುಂಬ ಸಂತೋಷವಾಗುತ್ತಿತ್ತು.” ಕೆಲವು ತಿಂಗಳ ಕಾಲ ಪುರೀ ನಗರದಲ್ಲಿ ಅವರು ಒಬ್ಬರೇ ಇದ್ದರು. ಅನಂತರ ಅವರು ತಮ್ಮ ಕುಟುಂಬವನ್ನು ಕರೆದುಕೊಂಡು ಬಂದು ಒಂದು ಮನೆಯನ್ನು ಬಾಡಿಗೆಗೆ ಹಿಡಿದು ಅಲ್ಲಿ ನೆಲೆಸಿದರು. ಪುರಿಯಲ್ಲಿ ಒಬ್ಬರೇ ಇರುವಾಗ, ೧೮೭೧ರಲ್ಲಿ ಶ್ರೀಲ ಹರಿದಾಸ ಠಾಕುರರ ಸಮಾಧಿಯನ್ನು ಕುರಿತು ಒಂದು ಪದ್ಯವನ್ನು ರಚಿಸಿದರು. ಹರಿದಾಸರು ಪವಿತ್ರ ನಾಮದ ಪ್ರಾಧ್ಯಾಪಕರಾಗಿದ್ದರು.

ಬಿಸಾಕಿಸೇನನಿಗೆ ಶಿಕ್ಷೆ

ಠಾಕುರರಂತಹ ದಕ್ಷ ವ್ಯಕ್ತಿ ತಮಗೆ ದೊರೆತಿದ್ದಕ್ಕೆ ಕಮಿಷನರ್‌ಗೆ ಬಹಳ ಸಂತೋಷವಾಯಿತು. ಸರ್ಕಾರದ ಪರವಾಗಿ ಜಗನ್ನಾಥ ದೇವಸ್ಥಾನದ ವಿದ್ಯಮಾನಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಅವರನ್ನು ನೇಮಿಸಿದರು. ಠಾಕುರರ ಪರಿಶ್ರಮದಿಂದಾಗಿ ದೇವಸ್ಥಾನದಲ್ಲಿದ್ದ ಅನೇಕ ಕೆಟ್ಟ ಆಚರಣೆಗಳನ್ನು  ನಿಗ್ರಹಿಸಲಾಯಿತು. ದೇವರಿಗೆ ಅರ್ಪಿಸಿದ ನೈವೇದ್ಯಗಳನ್ನು ಅತ್ಯಂತ ಕಾಲನಿಷ್ಠೆಯಿಂದ ನಿಯಂತ್ರಿಸಲಾಯಿತು.

ಚೈತನ್ಯ ಮಹಾಪ್ರಭುಗಳು ತಮ್ಮ ಜೀವಿತಾವಧಿಯ ಕೊನೆಯ ಹದಿನೆಂಟು ವರ್ಷಗಳನ್ನು ಕಳೆದ ಪುರೀನಗರದಲ್ಲಿ ಇರುವುದು ಶ್ರೀಲ ಭಕ್ತಿವಿನೋದ ಠಾಕುರರಿಗೆ ಬಹಳ ಚೈತನ್ಯದಾಯಿನಿಯಾಯಿತು. ಚೈತನ್ಯ ಮಹಾಪ್ರಭುಗಳ ಅಂತಿಮ ಲೀಲೆಗಳು ನಡೆದ ಸ್ಥಳಗಳಿಗೆ ಭೇಟಿ ನೀಡುವ ಪ್ರತಿಯೊಂದು ಅವಕಾಶವನ್ನೂ ಅವರು ಉಪಯೋಗಿಸಿಕೊಳ್ಳುತ್ತಿದ್ದರು. ಆ ಸ್ಥಳಗಳಲ್ಲಿ ಸದಾ ನೆಲೆಯೂರಿದ್ದ  ಕೃಷ್ಣ ವಿರಹದ ಭಾವಪರವಶ ಮನೋಧರ್ಮವನ್ನು ಅನುಭವಿಸುತ್ತಿದ್ದರು.

ಈ ಸಮಯದಲ್ಲಿ ಆಧ್ಯಾತ್ಮಿಕ ಯೋಗಿಯೊಬ್ಬ ತಾನು ಮಹಾವಿಷ್ಣುವಿನ ಅವತಾರ ಎಂದು ಹೇಳಿಕೊಳ್ಳುತ್ತಿದ್ದುದರಿಂದ ಉದ್ಭವಿಸಿದ್ದ ಕೋಲಾಹಲವನ್ನು ಶಮನಗೊಳಿಸುವ ಕೆಲಸವನ್ನು ಠಾಕುರರಿಗೆ ವಹಿಸಲಾಯಿತು.

ಶಾರದೈಪುರ ಎಂಬ ಗ್ರಾಮದ ಸಮೀಪವಿದ್ದ ಕಾಡಿನಲ್ಲಿ ಈ ಯೋಗಿಯು ಒಂದು ದೇವಸ್ಥಾನವನ್ನು ಸ್ಥಾಪಿಸಿದ್ದ. ಅವನು ಅಲ್ಲಿ ಅನೇಕ ಯೋಗ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿದ್ದುದರಿಂದ ಅಸಂಖ್ಯಾತ ಜನರು ಅವರಿಗೆ ಸೇವೆ ಸಲ್ಲಿಸಲು ಬರುತ್ತಿದ್ದರು. ಜನರ ಮೇಲೆ ಪ್ರಭಾವ ಬೀರಲು ಅವನು ಅನೇಕ ಪವಾಡಗಳನ್ನೂ ಪ್ರದರ್ಶಿಸುತ್ತಿದ್ದ. ಅವನು ಬೆಂಕಿಯ ಮುಂದೆ ನೆಟ್ಟಗೆ ಕುಳಿತುಕೊಳ್ಳುತ್ತಿದ್ದ. ಅನಂತರ ಜ್ವಾಲೆಗಳ ಕಡೆಗೆ ಬಾಗುತ್ತಿದ್ದ. ಸ್ವಲ್ಪ ಸಮಯದ ಅನಂತರ ಮತ್ತೆ ಮೊದಲಿನಂತೆಯೇ ನೆಟ್ಟಗೆ ಕುಳಿತುಕೊಳ್ಳುತ್ತಿದ್ದ. ಅವನಿಗೆ ಸ್ವಲ್ಪವೂ ಗಾಯವಾಗುತ್ತಿರಲಿಲ್ಲ. ಅವನು ಜನರ ಮನಸ್ಸನ್ನು ಥಟ್ಟನೆ ಓದಬಲ್ಲವನಾಗಿದ್ದ. ರೋಗಗ್ರಸ್ತರನ್ನು ಕೂಡಲೇ ವಾಸಿ ಮಾಡುತ್ತಿದ್ದ, ತನ್ನ ತಲೆಯಿಂದ ಬೆಂಕಿಯನ್ನು ಪ್ರಕಟಗೊಳಿಸುತ್ತಿದ್ದ. ಸಿದ್ಧಿಗಳನ್ನು ಗಳಿಸುವ ವಿವಿಧ ಯೋಗಾಚರಣೆಗಳ ಅರಿವಿಲ್ಲದವರಿಗೆ, ಈ ಘಟನೆಗಳು ಅಸಾಧಾರಣವೆಂದು, ಅಷ್ಟೇಕೆ ದೈವಿಕವೆಂದು ತೋರುತ್ತಿದ್ದವು. ಆದರೆ ಯೋಗ ಸಿದ್ಧಾಂತಗಳ ಗಂಭೀರ ವಿದ್ಯಾರ್ಥಿಯಾಗಿದ್ದ ಠಾಕುರರಂತಹವರಿಗೆ, ನಿಜವಾದ ಆಧ್ಯಾತ್ಮಿಕತೆಯಿಲ್ಲದೆ ಕಠಿಣ ವ್ರತಗಳಿಂದ ಗಳಿಸಿದ ಐಹಿಕ ಶಕ್ತಿಯ ಒಂದು ಕ್ಷುದ್ರ ಪ್ರದರ್ಶನವಷ್ಟೇ ಎಂದು ಅಂತಹ ಶಕ್ತಿಗಳು ತೋರುತ್ತಿದ್ದವು. ಇಂದಿಗೂ ಕೂಡ ಭಾರತದಲ್ಲಿ ಯಾವುದಕ್ಕೂ ಹೇಸದ ವ್ಯಕ್ತಿಗಳು ಈ ಐಂದ್ರಜಾಲಿಕ ಶಕ್ತಿಗಳನ್ನು ಗಳಿಸಲು ಉಗ್ರತಪಸ್ಸುಗಳನ್ನು ಆಚರಿಸುತ್ತಾರೆ. ಅದು ಕೇವಲ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಪಡೆಯುವುದಕ್ಕೆ ಮತ್ತು ಈ ಸರಳ ಮನಸ್ಸಿನ ಅನುಯಾಯಿಗಳನ್ನು ಲೌಕಿಕ ಪ್ರಯೋಜನಗಳಿಗೆ ಶೋಷಣೆ ಮಾಡುವುದಕ್ಕೆ ಮಾತ್ರ. ಅವರ ಮುಗ್ಧ ಅನುಯಾಯಿಗಳು ಅನೇಕ  ಸಂದರ್ಭಗಳಲ್ಲಿ  ಈ  ಧೂರ್ತರ ದೈವತ್ವದ ಬಗೆಗೆ ನಂಬಿಕೆಯುಂಟಾಗಿ ಅವರನ್ನು ದೇವರೆಂದೇ ಪೂಜಿಸುತ್ತಾರೆ.

ಒರಿಸ್ಸಾದ ಕೆಲವು ಭಯಭೀತರಾದ ದೊರೆಗಳು ಅವನ ಕೋರಿಕೆಯ ಮೇರೆಗೆ ಕಳುಹಿಸಿದ್ದ ಕಾಣಿಕೆಗಳಿಂದ ಅವನು ದೇವಸ್ಥಾನವನ್ನು ಸ್ಥಾಪಿಸಿದ್ದ. ತಾನು ರಾಸನೃತ್ಯವನ್ನು ವ್ಯವಸ್ಥೆ ಮಾಡುವುದಾಗಿಯೂ ಅದರಲ್ಲಿ ಸಮಸ್ತ ಮಹಿಳೆಯರ ಮೇಲೆ ತನ್ನ ಏಕಮೇವ ಸರ್ವಶ್ರೇಷ್ಠತೆಯನ್ನು ಪ್ರದರ್ಶಿಸುವುದಾಗಿಯೂ ಅವನು ಘೋಷಿಸಿದಾಗ ಕೆಲವು ರಾಜರು ಮತ್ತು ಗ್ರಾಮಸ್ಥರು ಅವನ ಆಮೋದಕ್ಕಾಗಿ ಸ್ತ್ರೀಯರನ್ನು ಕೂಡ ಕಳುಹಿಸಿಕೊಟ್ಟರು. ಬ್ರಿಂಗಾರಪುರ ಎಂಬ ಒರಿಸ್ಸಾದ ಒಂದು ಪಟ್ಟಣದ ಪ್ರತಿಷ್ಠಿತ ನಾಗರಿಕರ ಪತ್ನಿಯರೊಂದಿಗೆ ಅವನು ವಾಸ್ತವವಾಗಿ ಲೈಂಗಿಕ ಸಂಪರ್ಕವನ್ನು ನಡೆಸಿದಾಗ, ಅದು ಅಲ್ಲಿನ ಪತಿಯಂದಿರು ಮತ್ತು ಪ್ರಮುಖರಲ್ಲಿ ಕೋಲಾಹಲವನ್ನೇ ಉಂಟುಮಾಡಿತು. ಅವರು ತಮ್ಮ ಪ್ರಕರಣವನ್ನು ಸರ್ಕಾರಿ ಅಧಿಕಾರಿಗಳ ಬಳಿಗೆ ಒಯ್ದರು.

ಆ ಸಮಯದಲ್ಲಿ ರಾಷ್ಟ್ರೀಯ ಬ್ರಿಟಿಷ್-ಇಂಡಿಯನ್ ಸರ್ಕಾರದ ಒರಿಸ್ಸಾ ವಿಭಾಗದಲ್ಲಿ ಮಿ.ರ್ಯಾವೆನ್‌ಷಾ ಎನ್ನುವವನು ಇಂಗ್ಲಿಷ್ ಜಿಲ್ಲಾಧಿಕಾರಿಯಾಗಿದ್ದ. ಬ್ರಿಂಗಾರಪುರದ ಮುಖಂಡರ ಅಹವಾಲವನ್ನು ಕೇಳಿದ ಮೇಲೆ ಕೂಲಂಕಷ ತನಿಖೆಗಾಗಿ ಈ ಪ್ರಕರಣವನ್ನು ಶ್ರೀಲ ಭಕ್ತಿವಿನೋದ ಠಾಕುರರಿಗೆ ವಹಿಸಲು ಅವನು ನಿರ್ಧರಿಸಿದ. ಈ ಪ್ರಕರಣ ಅತ್ಯಂತ ಸೂಕ್ಷ್ಮಸ್ವರೂಪದ್ದಾಗಿತ್ತು. ಬಿಸಾಕಿಸೇನ ಅಪಾರ ಸಂಖ್ಯೆಯ ಸಹಮತವುಳ್ಳ ಅನುಯಾಯಿಗಳ ದಂಡನ್ನೇ ಕೂಡಿಸಿದ್ದ. ಆ ಪ್ರದೇಶದ ಭದ್ರತೆಗೆ ಅವನೊಬ್ಬ ಸಂಭಾವ್ಯ ಆಪಾಯವೆಂದೇ ಭಾವಿಸಲಾಗಿತ್ತು. ಸ್ಥಳೀಯ ಕ್ರಾಂತಿಯೊಂದನ್ನು ಪ್ರೇರೇಪಿಸುವ ಸಾಮರ್ಥ್ಯವೂ ಪ್ರಾಯಃ ಅವನಲ್ಲಿತ್ತು.

ಜಿಲ್ಲಾ ಅಧೀಕ್ಷಕ, ಪೊಲೀಸ್ ಮುಖ್ಯಸ್ಥ ಮತ್ತು ಕೆಲವು ಕಾನ್‌ಸ್ಟೇಬಲ್‌ಗಳೊಡನೆ ಠಾಕುರರು ಅಲ್ಲಿಗೆ ಹೊರಟರು. ಶಾರದೈಪುರದ ಸಮೀಪದಲ್ಲಿ ಕಾಡಿನಲ್ಲಿ ಯೋಗಿಯು ನೆಲೆಸಿದ್ದ ಸ್ಥಳಕ್ಕೆ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಠಾಕುರರು ಪ್ರವೇಶಿಸಿದರು. ಅನೇಕ ಜನರು ಯೋಗಿಯ ಮುಂದೆ ಕುಳಿತಿರುವುದು ಅವರ ಕಣ್ಣಿಗೆ ಬಿತ್ತು. ಅನೇಕ ರೋಗಿಗಳು ಅವನಿಂದ ಗುಣಹೊಂದುವುದಕ್ಕೆ ಬಂದಿದ್ದರು. ಅವರು ಅವನನ್ನು ದೇವರ ಅವತಾರವೆಂದೇ ಕೀರ್ತಿಸುತ್ತಿದ್ದರು. ಠಾಕುರರು ಆಗಮಿಸುತ್ತಿದ್ದಂತೆಯೇ ಯೋಗಿಯು ತನ್ನ ಸಿಂಹಾಸನದಿಂದ ಎದ್ದು ಅವರನ್ನು ಪ್ರಶ್ನಿಸಿದನು, “ಓ ಬಾಬು, ನೀವು ಒಬ್ಬರು ಬಂಗಾಳಿ ಮತ್ತು ಒಬ್ಬರು ಮ್ಯಾಜಿಸ್ಟ್ರೇಟರೆಂದು ನನಗೆ ಗೊತ್ತು. ಈ ಕತ್ತಲೆಯ ರಾತ್ರಿಯಲ್ಲಿ ನೀವು ಯಾಕೆ ಇಲ್ಲಿಗೆ ಬಂದಿದ್ದೀರಿ?”

“ನಿಮ್ಮನ್ನು ನೋಡಲು ಬಂದಿದ್ದೇನೆ” ಎಂದು ಶ್ರೀಲ ಭಕ್ತಿವಿನೋದ ಠಾಕುರರು ಉತ್ತರಿಸಿದರು.

ಅದಕ್ಕೆ ಮಾರುತ್ತರವಾಗಿ ಬಿಸಾಕಿಸೇನನು, “ಹಾಗಾದರೆ ದಯವಿಟ್ಟು ಕುಳಿತುಕೊಂಡು ನನ್ನ ಉಪದೇಶಗಳನ್ನು ಕೇಳಿ. ನಾನು ಮಹಾವಿಷ್ಣು. ಕ್ಷೀರಸಾಗರದಿಂದ ಮೇಲೆದ್ದು ನಾನು ಈ ಸ್ಥಳಕ್ಕೆ ಬಂದಿದ್ದೇನೆ. ಕ್ಷಿಪ್ರವಾಗಿ ನಾನು ಇಂಗ್ಲೆಂಡಿನ ರಾಜನೂ ಸೇರಿದಂತೆ ಎಲ್ಲ ಯೂರೋಪಿಯನ್ನರನ್ನೂ ನಾಶಮಾಡುತ್ತೇನೆ. ಇದನ್ನು ನಾನು ಎಲ್ಲೆಡೆಯೂ ಘೋಷಿಸಿದ್ದೇನೆ.” ಎಂದು ಹೇಳಿದ.

ಇದನ್ನು ಹೇಳಿದ ಮೇಲೆ ಬಿಸಾಕಿಸೇನನು ಠಾಕುರರಿಗೆ ತಾಳೆ ಗರಿಯ ಒಂದು ತುಂಡನ್ನು ಕೊಟ್ಟ. ಅದರಲ್ಲಿ ಈಗಷ್ಟೇ ಅವನು ಹೇಳಿದ ಸಂಗತಿಯನ್ನೇ ಕಾವ್ಯರೂಪದಲ್ಲಿ ಬರೆಯಲಾಗಿತ್ತು. ತನ್ನ ಯೋಗಶಕ್ತಿಯನ್ನು ಪ್ರದರ್ಶಿಸುತ್ತಾ ಯೋಗಿಯು ಭಕ್ತಿವಿನೋದ ಠಾಕುರರನ್ನು ಕುರಿತ ಎಲ್ಲ ವಿವರಗಳನ್ನೂ ಬಣ್ಣಿಸಲಾರಂಭಿಸಿದ – ಅವರ ಹೆಸರು, ಗುರಿ, ಇತ್ಯಾದಿ. ಅಲ್ಲದೆ ತನ್ನ ಕೆಲಸದಲ್ಲಿ ತಲೆಹಾಕಬಾರದೆಂದು ಎಚ್ಚರಿಸಿದ. ಠಾಕುರರು ತಮ್ಮೊಡನೆ ಕರೆದುಕೊಂಡು ಬಂದಿರುವ ಜನರ ಬಗೆಗೆ ತನಗೆ ಸಂಪೂರ್ಣವಾಗಿ ಗೊತ್ತೆಂದೂ ಅವರು ಮರಗಳ ಹಿಂದೆ ಅವಿತುಕೊಂಡಿದ್ದಾರೆಂದೂ ತಿಳಿಸಿದ.

ಅವನ ಮಾತು ಠಾಕುರರ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಅವರು ಯೋಗಿಯನ್ನು ಕೇಳಿದರು, “ನೀವು ಮಹಾವಿಷ್ಣು ಆಗಿದ್ದರೆ ಈ ಕಾಡಿನಲ್ಲಿ ಏಕೆ ತಂಗಿದ್ದೀರಿ, ಶ್ರೀ ಜಗನ್ನಾಥ ದೇವ ನೆಲೆಸಿರುವ ಪುರೀನಗರದಲ್ಲಿ ಏಕೆ ಇಲ್ಲ?”

ಯೋಗಿ ಸೊಕ್ಕಿನಿಂದ ಉತ್ತರಿಸಿದ, “ನಾನೇ ಸ್ವತಃ ಪರಮೋತ್ತಮ ಪುರುಷ. ಪುರೀಯಲ್ಲಿ ಯಾವ ದೇವರೂ ಇಲ್ಲ. ಆ ಜಗನ್ನಾಥ ಎಂಬ ದೇವರು ಕೇವಲ ಮರದ ಒಂದು ಬೊಡ್ಡೆ ಅಷ್ಟೆ. ಶ್ರಿ ಚೈತನ್ಯ ತನ್ನ ಪ್ರೀತಿಪಾತ್ರ ಭಕ್ತರಾಗಿದ್ದರು. ನಾನು ಮತ್ತೆ ಭಾರತವನ್ನು ಹಿಂದೂಗಳ ಸಾಮ್ರಾಜ್ಯವಾಗಿ ಮಾಡುತ್ತೇನೆ. ಆ ಕಾರಣದಿಂದ ನಾನು ಈ ಕಾಡಿನಲ್ಲಿ ವಾಸಮಾಡುತ್ತಿದ್ದೇನೆ. ನೀವು ಒಬ್ಬ ಉತ್ಕೃಷ್ಟ ನ್ಯಾಯಾಧೀಶ ಮತ್ತು ಒಬ್ಬ ಉತ್ತಮ ಭಕ್ತರೂ ಹೌದು ಎಂದು ನನಗೆ ಗೊತ್ತು. ಮತ್ತೆ ಹಿಂದೂ ಸಾಮ್ರಾಜ್ಯವು ಸ್ಥಾಪನೆಯಾದಾಗ ನಾನು ನಿಮಗೆ ಸರ್ಕಾರದಲ್ಲಿ ಒಂದು ಉತ್ತಮ ಅಧಿಕಾರ ಸ್ಥಾನವನ್ನು ಕೊಡುತ್ತೇನೆ. ಸಮಸ್ತ ಒರಿಸ್ಸಾ ರಾಜ್ಯಕ್ಕೇ ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡುತ್ತೇನೆ.”

ಆಗ ಶ್ರೀಲ ಭಕ್ತಿವಿನೋದ ಠಾಕುರರು ಗಂಭೀರವಾಗಿ ಉತ್ತರಿಸಿದರು, “ಅಣುರೂಪಿಯಾದ ಜೀವಿಯು ಎಂದಿಗೂ ದೇವರಾಗಲಾರ. ರಾವಣ, ಹಿರಣ್ಯಕಶಿಪು, ಶಿಶುಪಾಲ, ದಂತವಕ್ರ ಮತ್ತು ಇತರ ಅನೇಕರು ಈ ಸೊಕ್ಕಿನ ಮನೋಧರ್ಮದ ಪ್ರಭಾವಕ್ಕೆ ತುತ್ತಾಗಿ, ಕೊನೆಗೆ ಎಲ್ಲರೂ ನಾಶವಾದರು.”

ಅನಂತರ ಠಾಕುರರು ಯೋಗಿಯನ್ನು ದಸ್ತಗಿರಿ ಮಾಡುವಂತೆ ಆಜ್ಞೆ ಮಾಡಿದರು. ತಮ್ಮ ಜನರು ಭಯಪಡುತ್ತಿರುವುದನ್ನು ಗಮನಿಸಿ ತಾವೇ ಅವರನ್ನು ಕರೆದುಕೊಂಡು ಮುಂದೆ  ಹೋದರು. ಅವರೊಡನೆ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಒಬ್ಬರು ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ನೂರಕ್ಕಿಂತ ಹೆಚ್ಚು ಜನ ಶಸ್ತ್ರ ಸಜ್ಜಿತ ಪೊಲೀಸರಿದ್ದರು.

ಪುರೀ ನಗರಕ್ಕೆ ಬಂದ ಮೇಲೆ ವಿಚಾರಣೆ ನಡೆಸುವವರೆಗೂ ಯೋಗಿಯನ್ನು ಒಂಟಿಸೆರೆಯಲ್ಲಿಟ್ಟರು. ಅವನ ಕೋಣೆಯನ್ನು ಹಗಲೂ ರಾತ್ರಿ ಕಾಯಲು ಮೂರು ಡಜನ್ ಮುಸ್ಲಿಂ ಕಾನ್‌ಸ್ಟೇಬಲ್‌ಗಳು ಮತ್ತು ಎಪ್ಪತ್ತೆರಡು ಕಟಕ್ ಪೊಲೀಸರನ್ನು ಶ್ರೀಲ ಭಕ್ತಿವಿನೋದ ಠಾಕುರರು ನೇಮಿಸಿದರು.

ವಿಚಾರಣೆಯನ್ನು ಪುರೀನಗರದ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಲಾಯಿತು. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಹೊರಭಾಗದಲ್ಲಿ ಸುಮಾರು ಒಂದು ಸಾವಿರ ಜನ ಯೋಗಿಯ ಅನುಯಾಯಿಗಳು ಮತ್ತು ಹಿತೈಷಿಗಳು ನೆರೆದು, ಯೋಗಿಯನ್ನು ಬಿಡುಗಡೆಮಾಡಬೇಕೆಂದು ಕೂಗುತ್ತಿದ್ದರು. ವಿಚಾರಣೆಯ ಐದನೆಯ ದಿನ ನ್ಯಾಯಾಲಯವು ಅಂದಿನ ಕೆಲಸವನ್ನು ಮುಗಿಸಿ ಮುಂದಿನ ವಿಚಾರಣೆಯನ್ನು ಮರುದಿನಕ್ಕೆ ಮುಂದೂಡಿತು. ಆರನೆಯ ದಿನದ ವಿಚಾರಣೆ ಮುಗಿದ ಮೇಲೆ ಬಿಸಾಕಿಸೇನನು ಅಶುಭಸೂಚಕವಾಗಿ ಠಾಕುರರಿಗೆ ಬೆದರಿಸಿದನು, “ಬಾಬು, ನೀವು ಕೂಡಲೇ ನನ್ನ ಮೇಲೆ ಕಾನೂನಿನ ಕ್ರಮ ಜರುಗಿಸುವುದರಿಂದ ಹಿಂದೆ ಸರಿಯಿರಿ, ಇಲ್ಲದಿದ್ದರೆ ನಿಮ್ಮ ಬಳಿ ಇರುವ ಎಲ್ಲವೂ ನಾಶವಾಗುತ್ತವೆ. ಈಗಲೇ ನಿಮ್ಮ ಮನೆಗೆ ಹೋಗಿ ಅಲ್ಲಿ ಏನು ದುರ್ಘಟನೆ ಸಂಭವಿಸುತ್ತಿದೆ ನೋಡಿ.”

ಅವರು ಮನೆಗೆ ಬಂದಾಗ, ಅವರ ಎರಡನೆಯ ಮಗಳು ಏಳು ವರ್ಷದ ಕದಂಬಿನಿ ಯಾವುದೋ ಮಾರಣಾಂತಿಕ ರೋಗದಿಂದ ಮತ್ತು ಉಲ್ಬಣ ಜ್ವರದಿಂದ ಬಾಧೆಗೊಳಗಾಗಿ ಪದೇ ಪದೇ ಪ್ರಜ್ಞೆ ತಪ್ಪುತ್ತಿದ್ದಳು. ದೊಡ್ಡ ಸ್ವರದಲ್ಲಿ ಅಳುವ ಸದ್ದು ಮನೆಯನ್ನೆಲ್ಲ ತುಂಬಿತ್ತು. ಆದರೆ ಠಾಕುರರು ತಮ್ಮ ನಿರ್ಧಾರದಿಂದ ವಿಚಲಿತರಾಗಲಿಲ್ಲ. ಏಕೆಂದರೆ ದೇವರು ಯೋಗಿಯ ಕ್ಷುದ್ರಶಕ್ತಿಯಿಂದ ತಮ್ಮನ್ನು ರಕ್ಷಿಸುತ್ತಾನೆ ಎಂದು ಅವರಿಗೆ ಗೊತ್ತಿತ್ತು. ಅವರ ಮಗಳಿಗೆ ಚಿಕಿತ್ಸೆ ನೀಡಲು ಅನೇಕ ವೈದ್ಯರು ಬಂದರು. ಮರುದಿನ ಬೆಳಗ್ಗೆ ಎಂಟು ಗಂಟೆಯ ವೇಳೆಗೆ ಅವಳು ಗುಣಹೊಂದಿ ಅಂಗಳದಲ್ಲಿ ಆಟವಾಡುತ್ತಿದ್ದಳು. ಠಾಕುರರ ಪತ್ನಿ ಶ್ರೀಮತಿ ಭಾಗವತೀ ದೇವೀ ತಮ್ಮ ಮಕ್ಕಳ ಸುರಕ್ಷತೆಯ ಬಗೆಗೆ ಬಹಳ ಕಾತರಗೊಂಡರು. ತಮ್ಮ ಇಡೀ ಕುಟುಂಬವನ್ನೇ ನಾಶಮಾಡುವ ಮೊದಲು ಬಿಸಾಕಿಸೇನನನ್ನು ಬಿಡುಗಡೆ ಮಾಡಬೇಕೆಂದು ಅವರು ಪತಿಯಲ್ಲಿ ಬೇಡಿಕೊಂಡರು. “ಆಗಲಿ, ನಾವೆಲ್ಲ ಸತ್ತರೂ ಪರವಾಗಿಲ್ಲ, ಆದರೆ ಆ ಧೂರ್ತನಿಗೆ ಶಿಕ್ಷೆಯಾಗಲೇಬೇಕು!” ಎಂದು ಠಾಕುರರು ಉತ್ತರಿಸಿದರು.

ವಿಚಾರಣೆಯ ಏಳನೆಯ ದಿನ ನ್ಯಾಯಾಲಯವು ಬಿಡುವು ತೆಗೆದುಕೊಂಡಾಗ ಬಿಸಾಕಿಸೇನ ಎದ್ದು ನಿಂತು ಠಾಕುರರತ್ತ ರೋಷಾವೇಶದಿಂದ ಕೂಗಿದ, “ಮೊನ್ನೆ ನಿನ್ನ ಮನೆಯಲ್ಲಿ ಎಂತಹ ಭಾರಿ ದುರ್ಘಟನೆ ಸಂಭವಿಸಿತು ಅಂತ ನೋಡಿದಿಯಲ್ಲ! ಆದರೂ ನಿನಗೆ ಇನ್ನೂ ಬುದ್ಧಿ ಬಂದಿಲ್ಲ! ನಾನು ಪರಮಪ್ರಭು ಎಂದು ಗುರುತಿಸಲು ನಿನಗೆ ಯಾವಾಗ ಸಾಧ್ಯವಾದೀತು? ನನ್ನ ತೀರ್ಪಿನ ಕೊನೆಯ ದಿನ ನಿನ್ನ ಮರಣದ ದಿನವಾಗುತ್ತದೆ! ಒಂದು ಅವತಾರಕ್ಕೆ ಅಪಮಾನ ಮಾಡುವವನಿಗೆ ಏನು ಶಿಕ್ಷೆ? ನ್ಯಾಯಪೀಠದಲ್ಲಿ ಕುಳಿತ ಮೃತ್ಯುವು ಹೇಗೆ ತನ್ನ ಆಜ್ಞೆಯನ್ನು ಹೊರಡಿಸುತ್ತದೆ, ನಾನೂ ನೋಡುತ್ತೇನೆ!”

ಆ ದಿನ ಮಧ್ಯಾಹ್ನ ತಡವಾಗಿ ಭಕ್ತಿವಿನೋದಠಾಕುರರು ಮನೆಗೆ ಹಿಂತಿರುಗಿ ನ್ಯಾಯಾಲಯದ ಉಡುಪುಗಳನ್ನು ತೆಗೆಯುತ್ತಿದ್ದಾಗ ಅವರ ಎ ದೆಯ ಬಲಭಾಗದಲ್ಲಿ ಇದ್ದಕ್ಕಿದ್ದಂತೆಯೇ ಛಳಕ್ ಎಂದು ತೀವ್ರವಾದ ನೋವು ಆಯಿತು. ರಾತ್ರಿಯಾಗುತ್ತಿದ್ದಂತೆಯೇ ನೋವು ಹೆಚ್ಚಾಗುತ್ತಲೇ ಹೋಯಿತು. ಠಾಕುರರು ತಮ್ಮ ನಿರ್ಧಾರದಿಂದ ವಿಚಲಿತರಾಗಲಿಲ್ಲ. ಆದರೆ ಅಂತಹ ಪರಿಸ್ಥಿತಿಯಲ್ಲಿ ಅವರು ನ್ಯಾಯಾಲಯಕ್ಕೆ ಹೋಗಿ ಹೇಗೆ ತಮ್ಮ ಅಂತಿಮ ತೀರ್ಪನ್ನು ಕೊಡಬಲ್ಲರು ಎನ್ನುವುದು ಸ್ಪಷ್ಟವಾಗಲಿಲ್ಲ. ಬೆಳಗ್ಗೆ ಕೂಡ ತೀವ್ರವಾದ ನೋವು ಇದ್ದೇ ಇತ್ತು. ಕೊನೆಗೆ ಹತ್ತು ಗಂಟೆಯ ಹೊತ್ತಿಗೆ ನೋವು ಸ್ವಲ್ಪ ಕಡಮೆಯಾಯಿತು. ಈಗ ಅವರು ತೀರ್ಪನ್ನು ಬರೆಯಲು ಸಿದ್ಧರಾಗಿದ್ದರು. ಅವರಿಗೆ ನಡೆಯಲು ಆಗುತ್ತಿರಲಿಲ್ಲ. ಅವರ  ಮೇನೆಗೆ ಅವರನ್ನು ಎತ್ತಿಕೊಂಡು ಹೋಗಬೇಕಾಯಿತು. ಆ ಅಂತಿಮ ದಿನ ಸಾವಿರ ಜನ ಯೋಗಿಯ ಅನುಯಾಯಿಗಳು ನ್ಯಾಯಾಲಯದ ಮುಂದೆ ಮತ್ತೆ ನೆರೆದು ಪ್ರಚಂಡ ಕೋಲಾಹಲವನ್ನು ಮಾಡಿದರು. ಒಳಗಡೆ ವಿಚಾರಣೆ ಮುಂದುವರಿಯಿತು. ಠಾಕುರರು ತೀರ್ಪನ್ನು ಪ್ರಕಟಿಸಿದರು. `ರಾಷ್ಟ್ರೀಯ ಬ್ರಿಟಿಷ್- ಇಂಡಿಯನ್ ಸರ್ಕಾರದ ವಿರುದ್ಧ ಮತ್ತು ಒರಿಸ್ಸಾ ರಾಜ್ಯ ಸರ್ಕಾರದ ವಿರುದ್ಧ ಬಿಸಾಕಿಸೇನ ರಾಜಕೀಯ ಒಳಸಂಚು ಮಾಡಿದ ಅಪರಾಧಿ ಎಂದು ಸಾಬೀತಾಗಿದೆ. ಆದ್ದರಿಂದ ಅವನಿಗೆ ಹದಿನೆಂಟು ತಿಂಗಳ ಕಠಿಣ ಸೆರೆಮನೆ ಶಿಕ್ಷೆ ಮತ್ತು ಕಠಿಣ ಶ್ರಮದ ಕೆಲಸ ವಿಧಿಸಲಾಗಿದೆ.’ ಬಿಸಾಕಿಸೇನನ ಶಿಕ್ಷೆಯ ಸುದ್ದಿ ಹೊರಗಡೆ ಇದ್ದ ಗುಂಪಿಗೆ ತಲಪಿದಾಗ ಅವರು ಪ್ರಚಂಡವಾದ ಕೂಗಾಟ ಮಾಡುತ್ತಾ ಒಕ್ಕೊರಲಿನಿಂದ “ಅನ್ಯಾಯ! ಅನ್ಯಾಯ! ಎಂದು ಕೂಗಿದರು.

ಬಿಸಾಕಿಸೇನನನ್ನು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಆಗ ಹಿಂದಿನಿಂದ ಜಿಲ್ಲಾ ವೈದ್ಯಾಧಿಕಾರಿ ಡಾಕ್ಟರ್ ವಾಲ್ಟರ್ಸ್ ಇದ್ದಕ್ಕಿದ್ದಂತೆಯೇ ನುಗ್ಗಿ ಬಂದು ಆ ಧೂರ್ತನ ತಲೆಗೂದಲನ್ನು ದೊಡ್ಡ ಕತ್ತರಿಯಿಂದ ಚಕಚಕನೆ ಕತ್ತರಿಸಿಹಾಕಿಬಿಟ್ಟ. ಯೋಗಿಗಳು ತಮ್ಮ ಶಕ್ತಿಯನ್ನು ತಲೆಗೂದಲಲ್ಲಿ ಸಂರಕ್ಷಿಸಿಕೊಂಡಿರುತ್ತಾರೆ ಎಂದು ಆ ಇಂಗ್ಲಿಷ್ ಅಧಿಕಾರಿ ಯೋಗ ಮತ್ತು ಯೋಗಿಗಳನ್ನು ಕುರಿತ ತನ್ನ ಅಧ್ಯಯನಗಳಿಂದ ತಿಳಿದಿದ್ದ. ಬಿಸಾಕಿಸೇನನ ಜಟೆಗಟ್ಟಿದ ಕೂದಲನ್ನು ಕತ್ತರಿಸಿಹಾಕುತ್ತಿದ್ದಂತೆಯೇ ಅವನು ಎಲ್ಲ ಶಕ್ತಿಗಳನ್ನು ಕಳೆದುಕೊಂಡು ನಡೆಯಲೂ ಆಗದೆ ನೆಲದ ಮೇಲೆ ಧೊಪ್ಪನೆ ಬಿದ್ದು ಬಿಟ್ಟ. ಠಾಕುರರ ದೇಹದಲ್ಲಿದ್ದ ನೋವು ಕಣ್ಮರೆಯಾಯಿತು. ಯೋಗಿಯನ್ನು ನ್ಯಾಯಾಲಯದ ಆವರಣದಿಂದ ಕೈಮಂಚದ ಮೇಲೆ (ಸ್ಟ್ರೆಚರ್) ಕರೆದುಕೊಂಡು ಹೋಗಲಾಯಿತು. ಅವನ ಅನುಯಾಯಿಗಳು `ದೇವರ’ ಕೂದಲು ಕತ್ತರಿಸಿ ಸೋಲಿಸಲಾಗಿದ್ದನ್ನು ಕಂಡಾಗ, ಅವರಲ್ಲಿ ಬಹುಪಾಲು ಜನ ಅಲ್ಲಿಂದ ಹೊರಟುಹೋದರು. ಶ್ರೀಲ ಭಕ್ತಿವಿನೋದ ಠಾಕುರರು ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ನೆನಪಿಸಿಕೊಳ್ಳುತ್ತಾರೆ: “ಅವನ ಕೂದಲನ್ನು ಕತ್ತರಿಸಿದಾಗ ಅವನ ಅನುಯಾಯಿಗಳು ಅವನೊಬ್ಬ ವಂಚಕ ಎಂದು ಕಂಡುಕೊಂಡರು. ಅವನನ್ನು ತೊರೆದು ಹೊರಟುಹೋದರು.”

ಠಾಕುರರು ಶಾಂತಚಿತ್ತದಿಂದ ಮನೆಗೆ ಹಿಂತಿರುಗಿದರು. ಬಿಸಾಕಿಸೇನನನ್ನು ಪುರೀನಗರದ ಸೆರೆಮನೆಯಲ್ಲಿ ಮೂರು ತಿಂಗಳ ಕಾಲ ಇಟ್ಟುಕೊಂಡು ಅನಂತರ ಮೇದಿನೀಪುರದ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ೧೮೭೩ರಲ್ಲಿ ಸೆರೆಮನೆಯಲ್ಲಿರುವಾಗಲೇ ಅವನು ವಿಷವನ್ನು ಸೇವಿಸಿ ಪ್ರಾಣಬಿಟ್ಟ.

ಭಕ್ತಿ ವಿನೋದ  ಠಾಕುರರ  ದಿನಚರಿ

ಠಾಕುರರು ಜಗನ್ನಾಥ ಪುರೀಯಲ್ಲಿದ್ದಾಗ ಅವರ ದಿನಚರಿ ಹೇಗಿತ್ತೆಂದು ಅವರ ಪುತ್ರ ಲಲಿತಾಪ್ರಸಾದ್ ಠಾಕುರ ತಮ್ಮ ತಂದೆಯ ಜೀವನವನ್ನು ಕುರಿತ ಟಿಪ್ಪಣಿಗಳಲ್ಲಿ ಬಣ್ಣಿಸಿದ್ದಾನೆ:

ಸದಾ ದೇವರ ಸೇವೆಯಲ್ಲಿ ಮಗ್ನರಾಗುತ್ತಿದ್ದ ಅವರು ಎಂದೂ ಸೋಮಾರಿಯಾಗಿರಲಿಲ್ಲ.

ಸಂಜೆ ೭:೩೦ರಿಂದ ೮:೦೦ ಗಂಟೆಯ ನಡುವೆ ಅವರು ಮಲಗಲು ಹೋಗುತ್ತಿದ್ದರು. ಅನಂತರ ಅವರು ರಾತ್ರಿ ಹತ್ತು ಗಂಟೆಗೆ ಸ್ವಲ್ಪ ಮುಂಚೆ ಎದ್ದು ತಮ್ಮ ಎಣ್ಣೆ ದೀಪವನ್ನು ಹತ್ತಿಸಿ ಬೆಳಗಿನ ಜಾವ ನಾಲ್ಕು ಗಂಟೆಯವರೆಗೂ ಪುಸ್ತಕಗಳನ್ನು ಬರೆಯುತ್ತಿದ್ದರು. ಅನಂತರ ಅವರು ಗರಿಷ್ಠ ಅರ್ಧಗಂಟೆಯ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಬೆಳಗಿನ ಜಾವ ೪:೩೦ರಲ್ಲಿ ಅವರು ಕೈಕಾಲು ಮುಖ ತೊಳೆದುಕೊಂಡು ಒಂದು ಕಡೆ ಕುಳಿತು ತಮ್ಮ ಜಪಮಾಲೆ ಹಿಡಿದುಕೊಂಡು ಜಪ ಮಾಡುತ್ತಿದ್ದರು. ಅವರು ತಮ್ಮ ಜಪಮಾಲೆಯನ್ನು ಎಂದೂ ಯಾರಿಗೂ ತೋರಿಸುತ್ತಿರಲಿಲ್ಲ, ಆದರೆ ಸಮಯ ಸಿಕ್ಕಿದಾಗಲೆಲ್ಲ ಅವರು ಅದರಲ್ಲಿ ನಿರಂತರವಾಗಿ ಜಪ ಮಾಡುತ್ತಿದ್ದರು.

ಬೆಳಗ್ಗೆ ೭:೦೦ ಘಂಟೆಗೆ ಅವರು ಎಲ್ಲ ಪತ್ರ ವ್ಯವಹಾರಗಳಿಗೂ ಉತ್ತರಿಸುತ್ತಿದ್ದರು. ೭:೩೦ಕ್ಕೆ ನಾನಾ ಧಾರ್ಮಿಕ ಮತ್ತು ದಾರ್ಶನಿಕ ಗ್ರಂಥಗಳನ್ನು ಓದುತ್ತಿದ್ದರು. ೮:೩೦ಕ್ಕೆ ಅವರು ಯಾರಾದರೂ ಸಂದರ್ಶಕರು ಇದ್ದರೆ ಭೇಟಿ ಮಾಡುತ್ತಿದ್ದರು. ಇಲ್ಲದಿದ್ದರೆ ೯:೩೦ರವರೆಗೂ ಓದುವುದನ್ನು ಮುಂದುವರಿಸುತ್ತಿದ್ದರು. ಆ ಸಮಯದಲ್ಲಿ ತಮ್ಮ ಮನೆಯ ಪಡಸಾಲೆಯಲ್ಲಿ ಶತಪಥ ಹಾಕುತ್ತಿದ್ದರು. ಆಗ ವಿವಿಧ ಧಾರ್ಮಿಕ ಪ್ರಶ್ನೆಗಳನ್ನು ಕುರಿತು ಯೋಚಿಸುತ್ತಾ ಮನಸ್ಸಿನಲ್ಲಿಯೇ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಕೆಲವು ಸಲ ಯಾರೋ ಅದೃಶ್ಯ ಅತಿಥಿಗೆ ಬೋಧಿಸುತ್ತಿದ್ದಾರೋ ಎನ್ನುವಂತೆ ಈ ಪರಿಹಾರವನ್ನು ಗಟ್ಟಿಯಾಗಿ ಹೇಳುತ್ತಿದ್ದರು. ಅನಂತರ ಸ್ನಾನ ಮಾಡಿ ಉಪಾಹಾರ ಸೇವಿಸುತ್ತಿದ್ದರು. ಅದು ಸಾಮಾನ್ಯವಾಗಿ ಸ್ವಲ್ಪ ಹಾಲು, ಎರಡು ಚಪಾತಿಗಳು ಮತ್ತು ಒಂದಿಷ್ಟು ಹಣ್ಣುಗಳಿಂದ ಕೂಡಿರುತ್ತಿತ್ತು.

ಬೆಳಗ್ಗೆ ೯:೫೫ಕ್ಕೆ ಠಾಕುರರು ತಮ್ಮ ಸಮವಸ್ತ್ರವನ್ನು ತೊಟ್ಟು ತಮ್ಮ ಗಾಡಿಯಲ್ಲಿ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಒಬ್ಬರು ಮ್ಯಾಜಿಸ್ಟ್ರೇಟ್ ಆಗಿ ಅವರು ಕೋಟು ಮತ್ತು ಪ್ಯಾಂಟ್ಸ್ ಧರಿಸುತ್ತಿದ್ದರು. ಅವರ ಕುತ್ತಿಗೆಯಲ್ಲಿ ದಪ್ಪ ತುಳಸೀ ಮಣಿಗಳ ಆರೆಳೆಯ ಸರ ಇರುತ್ತಿತ್ತು. ಅವರು ತಮ್ಮ ನ್ಯಾಯಾಲಯದ ತೀರ್ಪುಗಳಲ್ಲಿ ದೃಢ ನಿಶ್ಚಿತರಾಗಿರುತ್ತಿದ್ದರು ಮತ್ತು ಯಾವ ಕಪಟವೇಷವನ್ನೂ ಸಹಿಸದೆ ಪ್ರಕರಣವನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡುತ್ತಿದ್ದರು. ತಮ್ಮ ಕೆಲಸವನ್ನು ಮುಗಿಸಿ ಅವರು ತೆರಳುತ್ತಿದ್ದರು. ತಿಂಗಳಿಗೊಂದು ಸಲ ಅವರು ತಲೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಅದನ್ನು ಕುರಿತು ಯಾರು ಏನು ಹೇಳುತ್ತಾರೆ ಎಂದೂ ಲಕ್ಷಿಸುತ್ತಿರಲಿಲ್ಲ.

ಠಾಕುರರ ಕಾರ್ಯಸಾಮರ್ಥ್ಯವನ್ನು ಕಂಡು ವಕೀಲರು ಮತ್ತು ಇಂಗ್ಲಿಷ್ ಜನರು ನಿಬ್ಬೆರಗಾಗುತ್ತಿದ್ದರು. ಬೆಳಗ್ಗೆ ಹತ್ತು ಗಂಟೆಗೆ ನ್ಯಾಯಾಲಯದ ಕೆಲಸ ಪ್ರಾರಂಭವಾಗುತ್ತಿತ್ತು. ಅವರು ಪ್ರತಿದಿನ ಮೂವತ್ತರಿಂದ ಐವತ್ತು ಪ್ರಕರಣಗಳನ್ನು ಕೇಳುತ್ತಿದ್ದರು. ಇಷ್ಟಾದರೂ ಮಧ್ಯಾಹ್ನ ೧:೦೦ ಗಂಟೆ ಹೊತ್ತಿಗೆ  ಮುಗಿಸುತ್ತಿದ್ದರು. ಬೇರೆ ಮ್ಯಾಜಿಸ್ಟ್ರೇಟರಿಗೆ ಅರ್ಧಗಂಟೆಯಾಗುತ್ತಿದ್ದುದನ್ನು ಅವರು ಐದು ನಿಮಿಷಗಳಲ್ಲಿ ಮುಗಿಸುತ್ತಿದ್ದರು. ತೀರ್ಪನ್ನು ವಿವರವಾಗಿ ಬರೆಯಲು ಅವರು ಇನ್ನು ಎರಡು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಕೆಲವು ಬ್ರಿಟಿಷ್ ವರಿಷ್ಠರು ಅವರ ಬಗೆಗೆ ಅಸೂಯೆ ತಾಳಿ, ಅವರನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಮೆಲೆ ಏನೂ ಪರಿಣಾಮ ಆಗುತ್ತಿರಲಿಲ್ಲ.

ಮಧ್ಯಾಹ್ನ ೧:೦೦ ಗಂಟೆಗೆ ಅವರು ಮನೆಗೆ ಹೋಗುತ್ತಿದ್ದರು. ದಣಿವಾರಿಸಿಕೊಂಡು ಮತ್ತೆ ೨:೦೦ ಗಂಟೆಯಿಂದ ೫:೦೦ ಗಂಟೆಯವರೆಗಿನ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ನ್ಯಾಯಾಲಯದ ಕರ್ತವ್ಯಗಳ ಅನಂತರ  ಪ್ರತಿದಿನ ಸಂಜೆ ಒಬ್ಬ ಕಾರ್ಯದರ್ಶಿಗೆ ಉಕ್ತಲೇಖನ ಕೊಡುವ ಮೂಲಕ ಯಾವುದಾದರೂ ಸಂಸ್ಕೃತ ಧಾರ್ಮಿಕ ಗ್ರಂಥವನ್ನು ಬಂಗಾಳಿ ಭಾಷೆಗೆ ಅನುವಾದಿಸುತ್ತಿದ್ದರು. ಅನಂತರ ಸಂಜೆಯ ಸ್ನಾನ ಮತ್ತು ಊಟ. ಅದರಲ್ಲಿ ಸ್ವಲ್ಪ ಅನ್ನ, ಎರಡು ಚಪಾತಿ ಮತ್ತು ಸ್ವಲ್ಪ ಹಾಲು ಇರುತ್ತಿತ್ತು.

ಶ್ರೀಲ ಭಕ್ತಿವಿನೋದ ಠಾಕುರರು ಒಂದು ಜೇಬುಗಡಿಯಾರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಅದರಿಂದ ಅವರು ಮಾಡುತ್ತಿದ್ದ ಪ್ರತಿಯೊಂದೂ ವೇಳಾಪಟ್ಟಿಗೆ ಅನುಗುಣವಾಗಿರುತ್ತಿತ್ತು. ಗೃಹಕೃತ್ಯದ ಮತ್ತು ಅಧಿಕಾರದ ಜವಾಬ್ದಾರಿಗಳಿದ್ದರೂ ಭಕ್ತಿವಿನೋದ ಠಾಕುರರ ಪ್ರತಿಯೊಂದು ಕ್ಷಣವೂ ಪ್ರಭುವಿಗೆ ಸೇವೆ ಸಲ್ಲಿಸಬೇಕೆಂಬ ತೀವ್ರ ಅಭೀಪ್ಸೆಯಿಂದ ಅಲಂಕೃತವಾಗಿರುತ್ತಿತ್ತು.

(ಮುಂದುವರಿಯುವುದು)
Leave a Reply

Your email address will not be published. Required fields are marked *