Search
Saturday 4 April 2020
  • :
  • :

ಭಕ್ತಿ ರಸ

ಭಕ್ತಿ ಎಂದರೆ `ಭಕ್ತಿಯುತಸೇವೆ.’ ಪ್ರತಿಯೊಂದು ಸೇವೆಯಲ್ಲೂ ಏನಾದರೊಂದು ಆಕರ್ಷಕ ಲಕ್ಷಣವಿದ್ದು, ಅದು ಸೇವೆ ಸಲ್ಲಿಸುವವನು ಹಂತ ಹಂತವಾಗಿ ಸೇವೆಯನ್ನು ಮುಂದುವರಿಸುವಂತೆ ಮಾಡುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸೇವೆಯಲ್ಲಿ ಸದಾ ನಿರತರಾಗಿದ್ದೇವೆ ಮತ್ತು ಆ ಸೇವೆಯಿಂದ ದೊರೆಯುವಂತಹ ಆನಂದವೇ ನಮಗೆ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ತನ್ನ ಹೆಂಡತಿ ಮತ್ತು ಮಕ್ಕಳ ಬಗೆಗಿನ ಒಲವಿನಲ್ಲಿ ತಲ್ಲೀನನಾಗಿರುವ ಒಬ್ಬ ಗೃಹಸ್ಥನು ಹಗಲು ರಾತ್ರಿ ದುಡಿಯುತ್ತಾನೆ. ಒಬ್ಬ ಲೋಕ ಹಿತೈಷಿಯು ಬೃಹತ್ ಕುಟುಂಬಕ್ಕಾಗಿ ಶ್ರಮಿಸಿದರೆ, ಒಬ್ಬ ರಾಷ್ಟ್ರೀಯತಾವಾದಿಯು ತನ್ನ ರಾಷ್ಟ್ರಕ್ಕಾಗಿ ಮತ್ತು ಪ್ರಜೆಗಳಿಗಾಗಿ ಶ್ರಮಿಸುತ್ತಾನೆ. ಗೃಹಸ್ಥನನ್ನು, ಲೋಕ ಹಿತೈಷಿಯನ್ನು ಮತ್ತು ರಾಷ್ಟ್ರೀಯತಾವಾದಿಯನ್ನು ಆಕರ್ಷಿಸುವ ಶಕ್ತಿಯನ್ನೇ ರಸ ಎನ್ನುತ್ತಾರೆ ಅಥವಾ ಒಂದು ಪ್ರಕಾರದ ತುಂಬ ಸಿಹಿಯಾದ ಮಾಧುರ್ಯ (ಸಂಬಂಧ) ಎನ್ನುತ್ತಾರೆ.

ಭಕ್ತಿರಸವು ಲೌಕಿಕ ಶ್ರಮಿಕರು ಆನಂದಿಸುವ ರಸಕ್ಕಿಂತ ವಿಭಿನ್ನವಾದ ಮಧುರ ರಸವಾಗಿದೆ. ಈ ಲೌಕಿಕ ಶ್ರಮಿಕರು ಇಂದ್ರಿಯ ತೃಪ್ತಿ ಎನ್ನಲಾಗುವ ರಸವನ್ನು ಆಸ್ವಾದಿಸಲು ಹಗಲು ರಾತ್ರಿ ಕಠಿಣ ಶ್ರಮವಹಿಸುತ್ತಾರೆ. ಈ ಲೌಕಿಕ ರಸದ ಆಸ್ವಾದನೆ ಅಥವಾ ರುಚಿಯು ಬಹುಕಾಲ ಬಾಳದು. ತಾನು ಹಗಲು ರಾತ್ರಿಯೆನ್ನದೇ ಬಹಳ ಶ್ರಮವಹಿಸುವ ಒಬ್ಬ ಗೃಹಸ್ಥನು ತನ್ನ ಪರಿವಾರದ ಸದಸ್ಯರಿಗೆ ಏನು ಬೇಕೋ ಅದನ್ನೆಲ್ಲ ಒದಗಿಸುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ಅವನು ಒಂದು ವಿಧದ ಮಾಧುರ್ಯವನ್ನು ಆನಂದಿಸುತ್ತಾನೆ. ಆದರೆ ಅವನ ಜೀವನ ಪಯಣವು ಮುಕ್ತಾಯಗೊಳ್ಳುವುದರೊಂದಿಗೇ ಅವನು ಸಾಧಿಸಿದ ಲೌಕಿಕ ಆನಂದದ ಅಭಿವೃದ್ಧಿಯೂ ಅಸುನೀಗುತ್ತದೆ.

ಆದರೆ ಭಗವಂತನಿಗೆ ಸಲ್ಲಿಸುವ ಅಲೌಕಿಕ ಪ್ರೇಮ ಸೇವೆಯಲ್ಲಿ ಆನಂದಿಸುವ ಮಾಧುರ್ಯವಾದ ಭಕ್ತಿರಸವು ಜೀವನದೊಂದಿಗೆ ಅಂತ್ಯವಾಗದು. ಅದು ನಿರಂತರವಾಗಿ ಮುಂದುವರಿಯುತ್ತದೆ- ಯಾದ್ದರಿಂದ ಅದನ್ನು ಅಮೃತವೆನ್ನುತ್ತಾರೆ; ಅದು ಎಂದಿಗೂ ಗತಿಸದೇ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ. ಇದನ್ನು ಎಲ್ಲ ವೈದಿಕ ಸಾಹಿತ್ಯಗಳಲ್ಲಿ ಖಚಿತಪಡಿಸಲಾಗಿದೆ. ಭಗವದ್ಗೀತೆ ಹೇಳುವಂತೆ, ಒಬ್ಬ ಭಕ್ತನು ಭಕ್ತಿರಸದಲ್ಲಿ ಸ್ವಲ್ಪ ಅಭಿವೃದ್ಧಿ ಸಾಧಿಸಿದರೂ ಸಾಕು ಅವನು ಮಾನವ ಜನ್ಮದ ಅವಕಾಶವನ್ನು ಕಳೆದುಕೊಳ್ಳುವಂತಹ ದೊಡ್ಡ ಅಪಾಯದಿಂದ ಪಾರಾಗುತ್ತಾನೆ. ಸಾಮಾಜಿಕ ಜೀವನ, ಕೌಟುಂಬಿಕ ಜೀವನ ಪರೋಪಕಾರ, ಪರಹಿತಚಿಂತನೆ, ಲೋಕ ಹಿತ, ರಾಷ್ಟ್ರೀಯತಾವಾದ, ಸಮಾಜವಾದ, ಸಾಮುದಾಯಿಕ ತತ್ತ್ವ ಇತ್ಯಾದಿಗಳಲ್ಲಿನ ಭಾವನೆಗಳಿಂದ ಪಡೆದುಕೊಂಡ ರಸಗಳು ಒಬ್ಬ ವ್ಯಕ್ತಿಯ ಮುಂದಿನ ಜನ್ಮವು ಮಾನವ ಜನ್ಮವೇ ಆಗಿರುವುದೆಂಬುದನ್ನು ಖಚಿತಪಡಿಸಲಾರವು.

ಪರಿಶುದ್ಧ ಭಕ್ತಿಯ ವ್ಯಾಖ್ಯಾನ:

ರೂಪ ಗೋಸ್ವಾಮಿಯವರು ಪರಿಶುದ್ಧ ಭಕ್ತನ ಬಗ್ಗೆ ನೀಡಿರುವ ವ್ಯಾಖ್ಯಾನವನ್ನು ಹೀಗೆ ಸಂಕ್ಷೇಪಿಸಬಹುದು: ಅವನ ಸೇವೆಯು ಸದಾ ಅನುಕೂಲಕರವಾಗಿರುತ್ತದೆ ಮತ್ತು ಅದು ಸದಾ ಕೃಷ್ಣನಿಗೆ ಸಂಬಂಧಿಸಿದ್ದಾಗಿರುತ್ತದೆ. ಇಂತಹ ಕೃಷ್ಣಪ್ರಜ್ಞೆಯುಕ್ತ ಕಾರ್ಯಗಳ ಪಾವಿತ್ರ್ಯವನ್ನು ಕಾಪಾಡಿಕೊಂಡು ಹೋಗಬೇಕಾದರೆ, ಒಬ್ಬ ವ್ಯಕ್ತಿಯು ಸಕಲ ಲೌಕಿಕ ಕಾಮನೆಗಳಿಂದ ಮತ್ತು ತಾತ್ತ್ವಿಕ ಊಹನಗಳಿಂದ ಮುಕ್ತನಾಗಿರಬೇಕು. ಭಗವಂತನ ಸೇವೆಯ ಬಗೆಗಿನ ಆಸಕ್ತಿಯೊಂದನ್ನು ಬಿಟ್ಟು ಇನ್ನುಳಿದ ಆಸೆಗಳೆಲ್ಲವನ್ನೂ ಲೌಕಿಕ ಆಸೆಗಳೆನ್ನುತ್ತಾರೆ. ಇನ್ನು “ತಾತ್ತ್ವಿಕ ಊಹನ” ಎಂದರೆ, ಶೂನ್ಯಸ್ಥಿತಿ ಅಥವಾ ನೀರೂಪ ಸ್ಥಿತಿಗೆ ತಲಪಿದಾಗ ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಊಹನವಾಗಿದೆ.

ಶ್ರೀಲ ರೂಪಗೋಸ್ವಾಮಿಯವರು ನಾರದ ಪಂಚರಾತ್ರ- ದಿಂದಲೂ ಒಂದು ವ್ಯಾಖ್ಯಾನವನ್ನು ಉಲ್ಲೇಖಿಸಿದ್ದಾರೆ: “ಒಬ್ಬ ವ್ಯಕ್ತಿಯು ಸಕಲ ಲೌಕಿಕ ಉಪಾಧಿಗಳಿಂದ ಮುಕ್ತನಾಗಬೇಕು ಮತ್ತು ಕೃಷ್ಣಪ್ರಜ್ಞೆಯಿಂದಾಗಿ ಎಲ್ಲ ಲೌಕಿಕ ಕಲ್ಮಷತೆಯನ್ನು ಕಳೆದುಕೊಂಡು ಪರಿಶುದ್ಧನಾಗಬೇಕು. ಅವನು ತನ್ನ ಪರಿಶುದ್ಧ ಅಸ್ತಿತ್ವದಲ್ಲಿ ಮರುಸ್ಥಾಪನೆಗೊಳ್ಳಬೇಕು; ಈ ಮೂಲಕ ಅವನು ಇಂದ್ರಿಯಗಳ ಒಡೆಯನ ಸೇವೆಯಲ್ಲಿ ತನ್ನ ಇಂದ್ರಿಯಗಳನ್ನು ತೊಡಗಿಸುತ್ತಾನೆ.” ಹೀಗೆ ನಮ್ಮ ಇಂದ್ರಿಯಗಳು ಅವುಗಳ ನಿಜವಾದ ಒಡೆಯನ ಸೇವೆಯಲ್ಲಿ ತಲ್ಲೀನಗೊಳ್ಳುವುದನ್ನೇ ಭಕ್ತಿಯುತಸೇವೆ ಎನ್ನುತ್ತಾರೆ. ನಮ್ಮ ಬದ್ಧಾವಸ್ಥೆಯಲ್ಲಿ, ನಮ್ಮ ದೈಹಿಕ ಬೇಡಿಕೆಗಳನ್ನು ಈಡೇರಿಸುವುದರಲ್ಲೇ ನಮ್ಮ ಇಂದ್ರಿಯಗಳು ತೊಡಗಿವೆ. ಅದೇ ಇಂದ್ರಿಯಗಳನ್ನು ಕೃಷ್ಣನ ಆಜ್ಞೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಡಗಿಸಿದರೆ, ನಮ್ಮ ಚಟುವಟಿಕೆಗಳನ್ನು ಭಕ್ತಿಯೆನ್ನಲಾಗುತ್ತದೆ.

ಎಲ್ಲಿಯವರೆಗೆ ಒಬ್ಬ ವ್ಯಕ್ತಿಯು ತಾನೊಂದು ನಿರ್ದಿಷ್ಟ ಕುಟುಂಬಕ್ಕೆ, ಒಂದು ನಿರ್ದಿಷ್ಟ ಸಮಾಜಕ್ಕೆ ಅಥವಾ ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದವನೆಂದು ತಿಳಿದುಕೊಳ್ಳುತ್ತಾನೋ, ಅಲ್ಲಿಯವರೆಗೆ ಆ ವ್ಯಕ್ತಿಯು ಉಪಾಧಿಗಳಿಂದಾವೃತನಾಗಿದ್ದಾನೆಂದು ಹೇಳಲಾಗುತ್ತದೆ. ಯಾವಾಗ ಆ ವ್ಯಕ್ತಿಯು ತಾನು ಯಾವುದೇ ಕುಟುಂಬಕ್ಕೆ, ದೇಶಕ್ಕೆ ಅಥವಾ ಸಮಾಜಕ್ಕೆ ಸಂಬಂಧಿಸಿಲ್ಲ, ಆದರೆ ಶಾಶ್ವತವಾಗಿ ಕೃಷ್ಣನೊಂದಿಗೆ ಸಂಬಂಧ ಹೊಂದಿರುವುದನ್ನು ಅರಿತುಕೊಳ್ಳುತ್ತಾನೋ ಆವಾಗ ಅವನು ತನ್ನ ಶಕ್ತಿಯನ್ನು ಯಾವುದೇ ಸಮಾಜಕ್ಕಾಗಿ, ದೇಶಕ್ಕಾಗಿ ಅಥವಾ ಕುಟುಂಬಕ್ಕಾಗಿ ವಿನಿಯೋಗಿಸದೇ ಕೃಷ್ಣನಿಗಾಗಿ ಮಾತ್ರ ಬಳಸಬೇಕೆಂಬುದನ್ನು ಅರಿತುಕೊಳ್ಳುತ್ತಾನೆ. ಇದೇ ಉದ್ದೇಶದ ಪರಿಶುದ್ಧತೆಯಾಗಿದೆ ಮತ್ತು ಕೃಷ್ಣಪ್ರಜ್ಞೆಯಲ್ಲಿ ಪರಿಶುದ್ಧ ಭಕ್ತಿಸೇವೆಯ ವೇದಿಕೆಯಾಗಿದೆ.

ಪರಿಶುದ್ಧ ಭಕ್ತಿಯ ಪ್ರಮುಖ ಲಕ್ಷಣಗಳು:

ಕ್ಲೇಶಘ್ನೀ ಶುಭದಾ ಮೋಕ್ಷ ಲಘುತಾ ಕೃತ್ ಸುದುರ್ಲಭಾ |
ಸಾಂದ್ರಾನಂದ ವಿಶೇಷಾತ್ಮಾ ಶ್ರೀ ಕೃಷ್ಣಾಕರ್ಷಿಣಿ ಚ ಸಾ ||

ಪರಿಶುದ್ಧ ಭಕ್ತಿ ಸೇವೆಯ ಆರು ಲಕ್ಷಣಗಳು ಇಂತಿವೆ:

೧)           ಪರಿಶುದ್ಧ ಭಕ್ತಿಸೇವೆಯು ಎಲ್ಲ ಪ್ರಕಾರದ ಲೌಕಿಕ ಒತ್ತಡಗಳಿಂದ ತತ್‌ಕ್ಷಣ ಮುಕ್ತಿ ನೀಡುತ್ತದೆ.

೨)           ಪರಿಶುದ್ಧ ಭಕ್ತಿಸೇವೆಯು ಎಲ್ಲ ಶುಭದ ಪ್ರಾರಂಭ.

೩)           ಪರಿಶುದ್ಧ ಭಕ್ತಿಸೇವೆಯಲ್ಲಿರುವವರು ಮೋಕ್ಷದ ಪರಿಕಲ್ಪನೆಯನ್ನು ಸಹ ತಿರಸ್ಕಾರದಿಂದ ಕಾಣುತ್ತಾರೆ.

೪)          ಪರಿಶುದ್ಧ ಭಕ್ತಿಸೇವೆಯು ಬಹಳ ದುರ್ಲಭವಾದದ್ದು.

೫)          ಪರಿಶುದ್ಧ ಭಕ್ತಿಸೇವೆಯು ಒಬ್ಬ ವ್ಯಕ್ತಿಯನ್ನು ಅಲೌಕಿಕ ಆನಂದದಲ್ಲಿ ಮುಳುಗಿಸುತ್ತದೆ.

೬)           ಕೃಷ್ಣನನ್ನು ಆಕರ್ಷಿಸಲು ಪರಿಶುದ್ಧ ಭಕ್ತಿಸೇವೆ ಏಕೈಕ ಮಾರ್ಗವಾಗಿದೆ.

ಲೌಕಿಕ ದುಃಖದಿಂದ ಬಿಡುಗಡೆ (ಕ್ಲೇಶಘ್ನೀ):

ಪದ್ಮಪುರಾಣದಲ್ಲಿ ಹೇಳಿರುವಂತೆ, ಪಾಪಕೃತ್ಯಗಳಿಂದಾಗಿ ನಾಲ್ಕು ಪ್ರಕಾರದ ಪರಿಣಾಮಗಳುಂಟಾಗುತ್ತವೆ; ಆದರೆ ಯಾರು ದೇವೋತ್ತಮ ಪರಮ ಪುರುಷ ವಿಷ್ಣುವಿಗೆ ಶರಣಾಗತರಾಗಿ, ಅವನ ಸೇವೆಯಲ್ಲಿ ತಲ್ಲೀನರಾಗುತ್ತಾರೋ ಅಂಥವರಲ್ಲಿ ಇಂತಹ ದುಷ್ಪರಿಣಾಮಗಳು ಮಾಯವಾಗಿಬಿಡುತ್ತವೆ. ಆ ನಾಲ್ಕು ಪ್ರಕಾರದ ಪರಿಣಾಮಗಳು ಇಂತಿವೆ:

೧)           ಅಪ್ರಾರಬ್ಧ ಫಲಂ – ಅಪಕ್ವ ಪಾಪಕೃತ್ಯಗಳು.

೨)           ಕೂಟಂ –  ಪಾಪಕೃತ್ಯಗಳನ್ನೆಸಗಲು ಹೃದಯದಲ್ಲಿ ಸುಪ್ತವಾಗಿರುವ ಆಸೆ.

೩)           ಬೀಜಂ – ಪ್ರಸ್ತುತದಲ್ಲಿ ಎಸಗಲಾಗುತ್ತಿರುವ ಪಾಪಕೃತ್ಯಗಳು.

೪)          ಫಲೋನ್ಮುಖಂ/ಪ್ರಾರಬ್ಧ – ಪರಿಪಕ್ವ ಪಾಪಕೃತ್ಯಗಳು.

ಒಬ್ಬ ವ್ಯಕ್ತಿಯು ಪಾಪಕೃತ್ಯಗಳನ್ನು ಎಸಗಿದ್ದರೂ, ಅವನು ಬಂದಿಯಾಗಿರದೇ ಇರಬಹುದು. ಆದರೆ ಅವನು ಸಿಕ್ಕಿಬಿದ್ದರೆ, ಬಂಧನವು ಕಟ್ಟಿಟ್ಟದ್ದು. ಅದೇ ರೀತಿ, ನಮ್ಮ ಕೆಲವು ಪಾಪಕೃತ್ಯಗಳಿಗಾಗಿ ನಾವು ಭವಿಷ್ಯದಲ್ಲಿ ನೋವನ್ನನುಭವಿಸಲು ದಾರಿ ಕಾಯುತ್ತಿದ್ದೇವೆ ಮತ್ತು ಯಾರ ಪಾಪಕೃತ್ಯಗಳು ಪರಿಪಕ್ವವಾಗಿವೆಯೋ, ಅಂಥವರೂ ಈಗ ಯಾತನೆಯನ್ನನುಭವಿಸುತ್ತಿದ್ದಾರೆ. ಹೀಗೆ ಪಾಪಕೃತ್ಯಗಳು ಮತ್ತು ಅವುಗಳೊಟ್ಟಿಗಿರುವ ಯಾತನೆಗಳ ಸರಪಳಿಯಿದೆ ಮತ್ತು ಬದ್ಧಾತ್ಮನು ಈ ಪಾಪಕೃತ್ಯಗಳಿಗಾಗಿ ಪ್ರತಿಯೊಂದು ಜನ್ಮದಲ್ಲೂ ಯಾತನೆಯನ್ನ- ನುಭವಿಸುತ್ತಿದ್ದಾನೆ. ಅವನು ಹಿಂದೆ ಮಾಡಿದ ಪಾಪಗಳಿಗಾಗಿ ಈ ಜನ್ಮದಲ್ಲಿ ಯಾತನೆ ಅನುಭವಿಸುತ್ತಿದ್ದಾನೆ ಮತ್ತು ಈ ಅವಧಿಯಲ್ಲೇ ಅವನು ಭವಿಷ್ಯದ ಜೀವನಕ್ಕಾಗಿ ಇನ್ನಷ್ಟು ಯಾತನೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಒಬ್ಬ ವ್ಯಕ್ತಿಯು ಆನುವಂಶಿಕ ರೋಗದಿಂದ ಬಳಲುತ್ತಿದ್ದರೆ, ಇಲ್ಲವೇ ಯಾವುದೋ ವ್ಯಾಜ್ಯದಲ್ಲಿ ಸಿಕ್ಕಿಹಾಕಿ- ಕೊಂಡಿದ್ದರೆ, ಹೀನಕುಲದಲ್ಲಿ ಜನಿಸಿದ್ದರೆ ಅಥವಾ ಅಶಿಕ್ಷಿತನಾಗಿದ್ದರೆ ಅಥವಾ ತುಂಬ ಕುರೂಪಿಯಾಗಿದ್ದರೆ ಅದೆಲ್ಲ ಅವನ ಪರಿಪಕ್ವಗೊಂಡ ಪಾಪಕೃತ್ಯಗಳ ಪರಿಣಾಮವೆಂದೇ ತಿಳಿದುಕೊಳ್ಳಬೇಕು. ನಮ್ಮ ಗತಜೀವನದ ಅನೇಕ ಪಾಪಕೃತ್ಯಗಳಿಂದಾಗಿಯೇ ನಾವು ಪ್ರಸ್ತುತ ಜೀವನದಲ್ಲಿ ಬಳಲುತ್ತಿದ್ದೇವೆ ಮತ್ತು ನಾವು ಇಂದು ಎಸಗುವ ಪಾಪಗಳಿಂದಾಗಿ ಭವಿಷ್ಯದಲ್ಲಿ ಯಾತನೆಗೊಳಗಾಗಬಹುದು. ಆದರೆ ನಾವು ಕೃಷ್ಣಪ್ರಜ್ಞೆಗೆ ಶರಣಾಗತರಾದರೆ ಪಾಪಕೃತ್ಯಗಳ ಈ ಎಲ್ಲ ಪ್ರತಿಕ್ರಿಯೆಗಳನ್ನು ತತ್‌ಕ್ಷಣವೇ ಶಮನಗೊಳಿಸಬಹುದು.

ಕೃಷ್ಣಪ್ರಜ್ಞೆಯು ಸರ್ವಮಂಗಳವಾದದ್ದು (ಶುಭದಾ):

೧)           ಎಲ್ಲರಿಗೂ ಇದು ಹಿತವಾದದ್ದು:

ನಿಜವಾದ ಶುಭಕಾರ್ಯವೆಂದರೆ, ಜಗತ್ತಿನ ಎಲ್ಲ ಜನರಿಗಾಗಿ ಕ್ಷೇಮಾಭಿವೃದ್ಧಿ ಕಾರ್ಯಗಳನ್ನು ಮಾಡುವುದು. ಪ್ರಸ್ತುತದಲ್ಲಿ ಜನಸಮೂಹಗಳು ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ಅಥವಾ ಸಮುದಾಯಕ್ಕಾಗಿ ಜನಹಿತಕಾರ್ಯಗಳಲ್ಲಿ ತೊಡಗಿವೆ. ಅಲ್ಲದೇ ವಿಶ್ವಸಂಸ್ಥೆಯ ರೂಪದಲ್ಲಿ ಜಗತ್ತಿಗೆ ಸಹಕಾರಿಯಾದ ಚಟುವಟಿಕೆಗಳು ನಡೆದಿವೆ. ಆದರೆ ಇಂತಹ ಕೆಲವೇ ಕೆಲವು ರಾಷ್ಟ್ರೀಯ ಚಟುವಟಿಕೆಗಳ ನ್ಯೂನತೆಯಿಂದಾಗಿ ಇಡೀ ಜಗತ್ತಿನ ಜನತೆಗಾಗಿ ಕಲ್ಯಾಣ ಕಾರ್ಯಗಳನ್ನು ಮಾಡುವುದು ಕಷ್ಟಸಾಧ್ಯವೇ ಸರಿ. ಅದೇ ಕೃಷ್ಣಪ್ರಜ್ಞಾ ಆಂದೋಲನವು ಎಷ್ಟು ಉತ್ತಮವಾದುದೆಂದರೆ, ಅದರಿಂದ ಇಡೀ ಮನುಕುಲಕ್ಕೆ ಸರ್ವೋನ್ನತ ಲಾಭ ದೊರೆಯುವುದು ಸಾಧ್ಯವಿದೆ. ಪ್ರತಿಯೊಬ್ಬರೂ ಈ ಆಂದೋಲನದತ್ತ ಆಕರ್ಷಿತರಾಗಬಹುದು ಮತ್ತು ಅದರ ಪರಿಣಾಮಗಳನ್ನೂ ಅನುಭವಿಸಬಹುದು. ಹೇಗೆ ಕೃಷ್ಣಪ್ರಜ್ಞಾ ಆಂದೋಲನವು ಇಡೀ ಜಗತ್ತಿನ ಗಮನವನ್ನು ಸೆಳೆಯಬಲ್ಲದು ಮತ್ತು ಹೇಗೆ ಪ್ರತಿಯೊಬ್ಬ ವ್ಯಕ್ತಿಯೂ ಕೃಷ್ಣಪ್ರಜ್ಞೆಯ ಆನಂದವನ್ನು ಆಸ್ವಾದಿಸಬಹುದು ಎಂಬುದನ್ನು ಪದ್ಮಪುರಾಣದಲ್ಲಿ ತಿಳಿಸಲಾಗಿದೆ: “ಸಂಪೂರ್ಣ ಕೃಷ್ಣಪ್ರಜ್ಞೆಯಿಂದ ಭಕ್ತಿಸೇವೆಯಲ್ಲಿ ತೊಡಗಿರುವ ವ್ಯಕ್ತಿಯು ಇಡೀ ಜಗತ್ತಿಗೆ ಸರ್ವಶ್ರೇಷ್ಠ ಸೇವೆಯನ್ನು ನೀಡುತ್ತಿದ್ದಾನೆಂದು ಮತ್ತು ಸರ್ವರಿಗೂ ಆನಂದವನ್ನುಂಟುಮಾಡುತ್ತಿದ್ದಾನೆಂದು ಅರಿತುಕೊಳ್ಳಬೇಕು. ಅವನು ಮಾನವ ಸಮಾಜದೊಂದಿಗೆ ಪ್ರಾಣಿಗಳು ಮತ್ತು ಸಸ್ಯಗಳಿಗೂ ಆನಂದವನ್ನುಂಟುಮಾಡುತ್ತಿದ್ದಾನೆ; ಏಕೆಂದರೆ, ಅವುಗಳು ಕೂಡ ಅಂತಹ ಆಂದೋಲನದತ್ತ ಆಕರ್ಷಿತಗೊಳ್ಳುತ್ತವೆ.” ಇದಕ್ಕೆ ಪ್ರತ್ಯಕ್ಷ ಉದಾಹರಣೆಯೆಂದರೆ ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ತಮ್ಮ ಸಂಕೀರ್ತನಾ ಆಂದೋಲನವನ್ನು ಪ್ರಚಾರ ಮಾಡಲೆಂದು ಮಧ್ಯ ಭಾರತದ ಝಾರೀಖಂಡದ ಅರಣ್ಯಗಳ ಮುಖಾಂತರ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿದ್ದ ಹುಲಿಗಳು, ಆನೆಗಳು, ಜಿಂಕೆ ಮತ್ತು ಇನ್ನಿತರ ಕಾಡುಪ್ರಾಣಿಗಳು ಅವರೊಂದಿಗೆ ಸಂಕೀರ್ತನೆಯಲ್ಲಿ ಪಾಲ್ಗೊಂಡು, ತಮ್ಮದೇ ಆದ ರೀತಿಯಲ್ಲಿ ನರ್ತಿಸುತ್ತಿದ್ದವು ಮತ್ತು ಹರೇಕೃಷ್ಣ ಮಂತ್ರವನ್ನು ಪಠಿಸುತ್ತಿದ್ದವು.

೨)           ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸುತ್ತದೆ:

ಅಷ್ಟೇ ಅಲ್ಲದೇ, ಕೃಷ್ಣಪ್ರಜ್ಞೆಯಲ್ಲಿ ತೊಡಗಿದ್ದು ಭಕ್ತಿಯಿಂದ ನಡೆದುಕೊಳ್ಳುತ್ತಿರುವ ವ್ಯಕ್ತಿಯು ದೇವತೆಗಳಲ್ಲಿ ಕಂಡುಬರುವ ಎಲ್ಲ ಉತ್ತಮ ಗುಣಗಳನ್ನೂ ಬೆಳೆಸಿಕೊಳ್ಳಬಹುದು. ಇನ್ನೊಂದೆಡೆ, ಯಾವ ವ್ಯಕ್ತಿಯು ಕೃಷ್ಣಪ್ರಜ್ಞೆಯನ್ನು ಹೊಂದಿಲ್ಲವೋ ಅವನಲ್ಲಿ ಯಾವುದೇ ಉತ್ತಮ ಗುಣಗಳಿರುವುದಿಲ್ಲ. ಅಂತಹ ವ್ಯಕ್ತಿಯು ಅತ್ಯುತ್ತಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬಹುದು, ಆದರೆ ಅವನ ವಾಸ್ತವಿಕ ಕಾರ್ಯಕ್ಷೇತ್ರದಲ್ಲಿ ಅವನು ಪ್ರಾಣಿಗಳಿಗಿಂತಲೂ ಕೆಳಮಟ್ಟದವ- ನಾಗಿರುವುದು ಸ್ಪಷ್ಟವಾಗುತ್ತದೆ.

೩)           ಆನಂದ ನೀಡುತ್ತದೆ:

ಕೃಷ್ಣಪ್ರಜ್ಞೆ ಮತ್ತು ಭಕ್ತಿಸೇವೆಯಿಂದ ಪಡೆದುಕೊಂಡ ಆನಂದವು ಎಷ್ಟೊಂದು ಪ್ರಬಲವಾಗಿರುತ್ತದೆಯೆಂದರೆ, ಅದರ ಜೊತೆ ಒಬ್ಬ ವ್ಯಕ್ತಿಯು ಧಾರ್ಮಿಕ, ಆರ್ಥಿಕ ಅಭಿವೃದ್ಧಿ, ಇಂದ್ರಿಯ ತೃಪ್ತಿ ಅಷ್ಟೇ ಅಲ್ಲದೇ ಲೌಕಿಕ ಅಸ್ತಿತ್ವದಿಂದ ಮುಕ್ತಿಯ ಪರಿಪೂರ್ಣತೆಯನ್ನು ಹೊಂದಬಲ್ಲನು.

ನಿಜದಲ್ಲಿ, ಒಬ್ಬ ಪರಿಶುದ್ಧ ಭಕ್ತನು ಮೇಲೆ ತಿಳಿಸಿದ ಪರಿಪೂರ್ಣತೆಗಳಲ್ಲಿ ಯಾವುದಕ್ಕೂ ಇಚ್ಛಿಸುವುದಿಲ್ಲ. ಏಕೆಂದರೆ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯಿಂದ ಗಳಿಸಿದ ಆನಂದವು ಎಷ್ಟು ದಿವ್ಯ ಮತ್ತು ಅಮಿತವಾಗಿರುತ್ತದೆಯೆಂದರೆ ಯಾವ ಪರಿಪೂರ್ಣತೆಯೂ ಅದಕ್ಕೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಬೇರೆ ಚಟುವಟಿಕೆಗಳಿಂದ ದೊರೆತ ಆನಂದವು ಸಾಗರದಷ್ಟು ವಿಶಾಲವಾಗಿದ್ದರೂ, ಅದು ಕೃಷ್ಣಪ್ರಜ್ಞೆಯಿಂದ ದೊರೆವ ಆನಂದದ ಒಂದು ಹನಿಗೂ ಸಮಾನವಾಗಲಾರದು.

ಭಕ್ತಿಯು ಮೋಕ್ಷದ ಬಗ್ಗೆ ತಾತ್ಸಾರವನ್ನು ಮೂಡಿಸುತ್ತದೆ (ಮೋಕ್ಷ ಲಘುತಾ ಕೃತ್):

ಸ್ವಲ್ಪ ಪ್ರಮಾಣದ ಭಕ್ತಿಸೇವೆಯನ್ನು ಬೆಳೆಸಿಕೊಂಡಿರುವ ವ್ಯಕ್ತಿಯು ಧಾರ್ಮಿಕ, ಆರ್ಥಿಕ ಅಭಿವೃದ್ಧಿ, ಇಂದ್ರಿಯ ತೃಪ್ತಿ ಅಥವಾ ಐದು ಪ್ರಕಾರದ ಮುಕ್ತಿಗಳಿಂದ ಪಡೆದುಕೊಳ್ಳಬಹುದಾದ ಆನಂದಕ್ಕಾಗಿ ಕಿಂಚಿತ್ತೂ ಆಸೆಪಡುವುದಿಲ್ಲ. ಧಾರ್ಮಿಕ, ಆರ್ಥಿಕ ಅಭಿವೃದ್ಧಿ, ಇಂದ್ರಿಯ ತೃಪ್ತಿಗಳಿಂದ ಮತ್ತು ಮುಕ್ತಿಗಳಿಂದ ಗಳಿಸಿದ ಯಾವುದೇ ಪ್ರಕಾರದ ಆನಂದವು ಒಬ್ಬ ಪರಿಶುದ್ಧ ಭಕ್ತನ ಹೃದಯವನ್ನು ಪ್ರವೇಶಿಸುವಂತಹ ಸಾಹಸಕ್ಕೆ ಕೈಹಾಕದು. ಯಾವ ರೀತಿ ಒಬ್ಬ ರಾಣಿಯ ಸೇವಕಿಯರು ಮತ್ತು ಸಹಾಯಕರು ಗೌರವಭಾವದಿಂದ ಅವಳನ್ನು ಅನುಸರಿಸುತ್ತಾರೋ, ಅದೇ ರೀತಿ ಧಾರ್ಮಿಕ, ಆರ್ಥಿಕ ಅಭಿವೃದ್ಧಿ, ಇಂದ್ರಿಯ ತೃಪ್ತಿ ಮತ್ತು ಮುಕ್ತಿಯ ಆನಂದಗಳು ಭಗವಂತನ ಭಕ್ತಿಸೇವೆಯನ್ನನುಸರಿಸುತ್ತವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಬ್ಬ ಪರಿಶುದ್ಧ ಭಕ್ತನಿಗೆ ಯಾವುದೇ ರೀತಿಯ ಆನಂದದ ಕೊರತೆಯಿರುವುದಿಲ್ಲ. ಅವನಿಗೆ ಕೃಷ್ಣನನ್ನು ಸೇವಿಸುವುದೊಂದನ್ನು ಬಿಟ್ಟರೆ ಬೇರೇನೂ ಬೇಡ. ಅಕಸ್ಮಾತ್ ಅವನಿಗೇನಾದರೂ ಅವನ ಇಚ್ಛೆಗಳಿದ್ದರೆ ಅವನು ಕೇಳುವ ಮುನ್ನವೇ ಭಗವಂತನು ಅವುಗಳನ್ನು ಈಡೇರಿಸುತ್ತಾನೆ.

ಪರಿಶುದ್ಧ ಭಕ್ತಿಸೇವೆಯ ವಿರಳತೆ (ಸುದುರ್ಲಭಾ):

ಕೃಷ್ಣನು ಸುಮ್ಮನೇ ಯಾರ್ಯಾರಿಗೋ ಭಕ್ತಿಸೇವೆಯನ್ನು ದಯಪಾಲಿಸಲು ಒಪ್ಪುವುದಿಲ್ಲ. ಕೃಷ್ಣನು ಒಬ್ಬ ವ್ಯಕ್ತಿಗೆ ಲೌಕಿಕ ಸಂತೋಷವನ್ನು ಅಥವಾ ಮೋಕ್ಷವನ್ನು ಸುಲಭವಾಗಿ ಕರುಣಿಸಬಲ್ಲನು. ಆದರೆ ಒಬ್ಬ ವ್ಯಕ್ತಿಯು ತನ್ನ ಭಕ್ತಿಸೇವೆಯಲ್ಲಿ ತೊಡಗಲು ಅವನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಒಬ್ಬ ಪರಿಶುದ್ಧ ಭಕ್ತನ ಕರುಣೆಯಿಂದ ಮಾತ್ರ ಭಕ್ತಿಸೇವೆಯನ್ನು ಗಳಿಸುವುದು ಸಾಧ್ಯ. ಚೈತನ್ಯ ಚರಿತಾಮೃತದಲ್ಲಿ ಹೇಳಿರುವಂತೆ: “ಪರಿಶುದ್ಧ ಭಕ್ತನಾದ ಆಧ್ಯಾತ್ಮಿಕ ಗುರುವಿನ ಕರುಣೆ ಮತ್ತು ಕೃಷ್ಣನ ಕರುಣೆಯಿಂದ ಒಬ್ಬ ವ್ಯಕ್ತಿಯು ಭಕ್ತಿಸೇವೆಯ ವೇದಿಕೆಯನ್ನೇರಬಹುದು. ಇದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ.”

ಶ್ರೀಮದ್ಭಾಗವತದಲ್ಲಿ ಪ್ರಹ್ಲಾದ ಮಹಾರಾಜನು ಖಚಿತಪಡಿಸಿರುವಂತೆ, ಒಬ್ಬ ವ್ಯಕ್ತಿಯು ತನ್ನ ಪ್ರಯತ್ನಗಳಿಂದ ಅಥವಾ ಉನ್ನತ ಅಧಿಕಾರಿಗಳ ಸೂಚನೆಗಳಿಂದ ಭಕ್ತಿಸೇವೆಯ ಹಂತವನ್ನು ಗಳಿಸಲು ಸಾಧ್ಯವಿಲ್ಲ. ಲೌಕಿಕ ಆಸೆಗಳ ಕಲ್ಮಷದಿಂದ ಸಂಪೂರ್ಣವಾಗಿ ಮುಕ್ತನಾಗಿರುವ ಒಬ್ಬ ಪರಿಶುದ್ಧ ಭಕ್ತನ ಪಾದಕಮಲಗಳ ಧೂಳಿನಿಂದ ಅವನು ಆಶೀರ್ವಾದ ಪಡೆಯಬೇಕು.

ಭಗವಂತನು ಮುಕ್ತಿಯನ್ನು ಸುಲಭವಾಗಿ ನೀಡುತ್ತಾನೆ. ಆದರೆ ಭಕ್ತಿಸೇವೆಯನ್ನು ದಯಪಾಲಿಸಲು ಒಪ್ಪುವುದು ವಿರಳಾತಿವಿರಳ. ಏಕೆಂದರೆ ಭಕ್ತಿಸೇವೆಯನ್ನು ತೋರುವ ಭಕ್ತನಿಂದ ಭಗವಂತನು ಕೊಂಡುಕೊಳ್ಳಲ್ಪಡುತ್ತಾನೆ.

ಭಕ್ತಿಯು ದಟ್ಟವಾದ ಆನಂದವನ್ನು ನೀಡುತ್ತದೆ (ಸಾಂದ್ರಾನಂದ ವಿಶೇಷಾತ್ಮ):

ಒಂದು ವೇಳೆ ಬ್ರಹ್ಮಾನಂದ ಅಥವಾ ಭಗವಂತನೊಂದಿಗೆ ಲೀನವಾಗುವ ಆನಂದವನ್ನು ಕೋಟಿ ಕೋಟಿ ಪಟ್ಟು ಗುಣಿಸಿದರೂ ಅದು ಭಕ್ತಿಸೇವೆಯ ಸಾಗರದಿಂದ ದೊರೆತ ಒಂದು ಚಿಕ್ಕ ಕಣವನ್ನು ಸರಿಗಟ್ಟಲಾಗದು. `ಹರಿಭಕ್ತಿ ಸುಧೋದಯ’ದಲ್ಲಿ ಪ್ರಹ್ಲಾದ ಮಹಾರಾಜನು ತನ್ನ ಪ್ರಾರ್ಥನೆಗಳಿಂದ ನರಸಿಂಹದೇವನನ್ನು ಪ್ರಸನ್ನಗೊಳಿಸುತ್ತಿರುವಾಗ ಹೇಳುತ್ತಾನೆ: “ಓ ಬ್ರಹ್ಮಾಂಡದೊಡೆಯನೆ, ನಾನು ನಿನ್ನ ಉಪಸ್ಥಿತಿಯಲ್ಲಿ ದಿವ್ಯಾನಂದವನ್ನು ಅನುಭವಿಸುತ್ತಿದ್ದೇನೆ ಮತ್ತು ಆನಂದಸಾಗರದಲ್ಲಿ ಮುಳುಗಿಹೋಗಿದ್ದೇನೆ. ಈಗ ಆನಂದಸಾಗರಕ್ಕೆ ಹೋಲಿಸಿದರೆ ಬ್ರಹ್ಮಾನಂದದ ಈ ಆನಂದವು ಭೂಮಿಯಲ್ಲುಂಟಾದ ಹಸುವಿನ ಪಾದಗಳ ಗುರುತುಗಳಲ್ಲಿ ಸಂಗ್ರಹವಾದ ನೀರಿದ್ದಂತೆ ಎಂದು ನನಗನ್ನಿಸುತ್ತಿದೆ.” ಅದೇ ರೀತಿ, `ಭಾವಾರ್ಥ ದೀಪಿಕಾ’ದಲ್ಲಿ ಶ್ರೀಮದ್ಭಾಗವತವನ್ನು ಕುರಿತು ಶ್ರೀಧರ ಸ್ವಾಮಿಗಳು ನೀಡಿರುವ ಭಾಷ್ಯವು ಕೂಡ ಇದನ್ನು ಖಚಿತಪಡಿಸುತ್ತದೆ: “ಓ ನನ್ನ ದೇವ, ನಿನ್ನ ಭಕ್ತಿರಸಾಮೃತದ ಸಾಗರದಲ್ಲಿ ಈಜುತ್ತಿರುವ ಮತ್ತು ನಿನ್ನ ಲೀಲೆಗಳ ನಿರೂಪಣೆಯ ಅಮೃತವನ್ನು ಸವಿಯುತ್ತಿರುವ ಕೆಲವು ಅದೃಷ್ಟವಂತ ವ್ಯಕ್ತಿಗಳು ಈ ಆನಂದಪರವಶತೆಯು ಧಾರ್ಮಿಕ, ಆರ್ಥಿಕ ಅಭಿವೃದ್ಧಿ, ಇಂದ್ರಿಯ ತೃಪ್ತಿ ಮತ್ತು ಮುಕ್ತಿಗಳಿಂದ ದೊರೆಯುವ ಆನಂದದ ಮೌಲ್ಯವನ್ನು ತತ್‌ಕ್ಷಣ ಕಡಮೆ ಮಾಡುತ್ತದೆ ಎಂದು ಬಲ್ಲವರಾಗಿದ್ದಾರೆ. ಅಂತಹ ದಿವ್ಯಭಕ್ತನು ಭಕ್ತಿಸೇವೆಯನ್ನು ಬಿಟ್ಟು ಬೇರೆ ಪ್ರಕಾರದ ಯಾವುದೇ ಆನಂದವನ್ನು ಬೀದಿಯಲ್ಲಿನ ಒಂದು ಹುಲ್ಲುಕಡ್ಡಿಗಿಂತಲೂ ಕಡೆಯಾಗಿ ಕಾಣುತ್ತಾನೆ.”

ಪರಿಶುದ್ಧ ಭಕ್ತಿಯು ಕೃಷ್ಣನನ್ನು ಆಕರ್ಷಿಸುತ್ತದೆ (ಶ್ರೀಕೃಷ್ಣಾಕರ್ಷಿಣಿ):

ಕೃಷ್ಣನು ಎಲ್ಲರನ್ನೂ ಆಕರ್ಷಿಸುತ್ತಾನೆ, ಆದರೆ ಪರಿಶುದ್ಧ ಭಕ್ತಿಸೇವೆಯು ಅವನನ್ನು ಆಕರ್ಷಿಸುತ್ತದೆ. ರಾಧಾರಾಣಿಯು ಅತ್ಯುನ್ನತ ಭಕ್ತಿಸೇವೆಯ ಸಂಕೇತವಾಗಿದ್ದಾಳೆ. ಕೃಷ್ಣನು ಸಾವಿರಾರು ಮನ್ಮಥರ ಆಕರ್ಷಣೆಯನ್ನೂ ಮೀರಿ ನಿಲ್ಲುವಷ್ಟು ಆಕರ್ಷಕನಾಗಿರುವುದರಿಂದ ಅವನನ್ನು ಮದನಮೋಹನ ಎನ್ನುತ್ತಾರೆ. ರಾಧಾರಾಣಿಯು ಇನ್ನೂ ಅಧಿಕ ಆಕರ್ಷಕವಾಗಿದ್ದಾಳೆ; ಏಕೆಂದರೆ ಅವಳು ಕೃಷ್ಣನನ್ನು ಕೂಡ ಆಕರ್ಷಿಸಬಲ್ಲಳು. ಹಾಗಾಗಿ ಭಕ್ತರೆಲ್ಲ ಅವಳನ್ನು ಮದನ-ಮೋಹನ ಮೋಹಿನಿ ಅಂದರೆ ಮನ್ಮಥನನ್ನು ಆಕರ್ಷಿಸುವವನನ್ನು ಆಕರ್ಷಿಸುವವಳು ಎಂದು ಕರೆಯುತ್ತಾರೆ. ಭಕ್ತಿಸೇವೆಯನ್ನು ಮಾಡುವುದೆಂದರೆ ರಾಧಾರಾಣಿಯ ಹೆಜ್ಜೆಗುರುತುಗಳನ್ನು ಅನುಸರಿಸುವುದೆಂದರ್ಥ. ವೃಂದಾವನದಲ್ಲಿ ಭಕ್ತರು ರಾಧಾರಾಣಿಯ ಸೇವೆಯಲ್ಲಿ ತೊಡಗುವ ಮೂಲಕ ಭಕ್ತಿಸೇವೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಕ್ತಿಸೇವೆಯು ಲೌಕಿಕ ಜಗತ್ತಿನ ಚಟುವಟಿಕೆಯಲ್ಲ; ಅದು ನೇರವಾಗಿ ರಾಧಾರಾಣಿಯ ನಿಯಂತ್ರಣಕ್ಕೊಳಪಟ್ಟಿದೆ. ಭಗವದ್ಗೀತೆಯಲ್ಲಿ ಖಚಿತಪಡಿಸಿರುವಂತೆ, ಮಹಾತ್ಮರು ದೈವೀ ಪ್ರಕೃತಿ, ಅಂತರಂಗ ಶಕ್ತಿ – ರಾಧಾರಾಣಿಯ ರಕ್ಷಣೆಯಲ್ಲಿರುತ್ತದೆ. ಹೀಗೆ ಕೃಷ್ಣನ ಆಂತರಿಕ ಶಕ್ತಿಯ ನೇರ ನಿಯಂತ್ರಣಕ್ಕೊಳಪಡುವುದರಿಂದ, ಭಕ್ತಿಸೇವೆಯು ಕೃಷ್ಣನನ್ನು ಕೂಡ ಆಕರ್ಷಿಸುತ್ತದೆ.

ಈ ಸತ್ಯಾಂಶವನ್ನು ಶ್ರೀಮದ್ಭಾಗವತದ ೧೧ನೇ ಸ್ಕಂಧದ ೧೪ನೇ ಅಧ್ಯಾಯದ ೨೦ನೇ ಶ್ಲೋಕದಲ್ಲಿ ಕೃಷ್ಣನು ಕೂಡ ಪುಷ್ಟೀಕರಿಸುತ್ತಾನೆ: “ಪ್ರಿಯ ಉದ್ಧವ, ನಾನು ನನ್ನ ಭಕ್ತರ ಭಕ್ತಿಸೇವೆಗೆ ಆಕರ್ಷಿತ- ನಾಗುತ್ತೇನೆ. ಯಾವುದೇ ಆಧ್ಯಾತ್ಮಿಕವಾದ ಯೋಗ, ತಾತ್ತ್ವಿಕ ಊಹನ, ಧಾರ್ಮಿಕ ಯಜ್ಞ, ವೇದಾಂತ ಅಧ್ಯಯನ, ಕಠಿಣ ತಪಶ್ಚರ್ಯೆಗಳು ಅಥವಾ ಎಲ್ಲವನ್ನೂ ದಾನವಾಗಿ ಕೊಡುವಂತಹ ಚಟುವಟಿಕೆಗಳತ್ತ ನಾನು ಆಕರ್ಷಿತನಾಗುವುದಿಲ್ಲ ಎಂದು ನಿನಗೆ ತಿಳಿದಿರಲಿ. ಇವೆಲ್ಲವೂ ತುಂಬ ಉತ್ತಮವಾದ ಚಟುವಟಿಕೆಗಳೇನೋ ನಿಜ, ಆದರೆ ನನ್ನ ಭಕ್ತರು ನನಗೆ ಸಲ್ಲಿಸುವ ದಿವ್ಯವಾದ ಪ್ರೇಮಪೂರ್ಣ ಭಕ್ತಿಯಷ್ಟು ಅವು ನನಗೆ ಆಕರ್ಷಕವೆನಿಸುವುದಿಲ್ಲ.”

ಭಗವದ್ಗೀತೆಯಲ್ಲಿ ಕೃಷ್ಣನು ತನ್ನ ವಿಶ್ವರೂಪದಲ್ಲಿ ಪ್ರಕಟಗೊಂಡಾಗ ಅರ್ಜುನನು ಹೀಗೆ ಪ್ರಾರ್ಥಿಸಿದನು, “ಓ ನನ್ನ ಕೃಷ್ಣ, ನಾನು ನಿನ್ನನ್ನು ನನ್ನ ಸೋದರ ಸಂಬಂಧಿ ಎಂದು ಭಾವಿಸಿದೆ. ಅಲ್ಲದೇ ನಿನ್ನನು `ಕೃಷ್ಣ’ ಅಥವಾ `ಸ್ನೇಹಿತ’ ಎಂದು ಕರೆಯುವುದನ್ನು ಸೇರಿದಂತೆ ಅನೇಕ ರೀತಿಗಳಲ್ಲಿ ನಿನಗೆ ಅಗೌರವ ತೋರಿದ್ದೇನೆ. ಆದರೆ ನೀನು ಎಷ್ಟೊಂದು ಶ್ರೇಷ್ಠನಾಗಿರುವೆಯೆಂದರೆ, ನನಗೆ ನಿನ್ನನ್ನು ಅರಿತುಕೊಳ್ಳಲಾಗಲಿಲ್ಲ.” ಹೀಗಿತ್ತು ಪಾಂಡವರ ಮತ್ತು ಕೃಷ್ಣನ ನಂಟು. ಅವನು ದೇವೋತ್ತಮ ಪರಮ ಪುರುಷನಾಗಿದ್ದರೂ, ಶ್ರೇಷ್ಠರೆಲ್ಲರಲ್ಲಿ ಸರ್ವಶ್ರೇಷ್ಠನಾಗಿದ್ದರೂ, ಅವನು ಪಾಂಡವರ ಭಕ್ತಿಸೇವೆಗೆ, ಅವರ ಸ್ನೇಹಕ್ಕೆ ಮತ್ತು ಪ್ರೇಮಕ್ಕೆ ಆಕರ್ಷಿತನಾಗಿ ಅವರೊಂದಿಗೇ ಇದ್ದನು. ಈ ಭಕ್ತಿಸೇವೆಯ ಪ್ರಕ್ರಿಯೆಯು ಎಷ್ಟೊಂದು ಶ್ರೇಷ್ಠವಾದದ್ದು ಎನ್ನುವುದಕ್ಕೆ ಇದೇ ಸಾಕ್ಷಿ. ಅದು ದೇವೋತ್ತಮ ಪರಮ ಪುರುಷನನ್ನು ಕೂಡ ಆಕರ್ಷಿಸಬಲ್ಲದು. ಭಗವಂತನು ಶ್ರೇಷ್ಠನು, ಆದರೆ ಭಕ್ತಿಸೇವೆಯು ಭಗವಂತನನ್ನು ಆಕರ್ಷಿಸುವುದರಿಂದ ಅದು ಅವನಿಗಿಂತಲೂ ಶ್ರೇಷ್ಠ. ಕೃಷ್ಣನು ಸರ್ವಾಕರ್ಷಕ, ಆದರೆ ಪರಿಶುದ್ಧವಾದ ಭಕ್ತಿಸೇವೆಯು ಅವನನ್ನೂ ಆಕರ್ಷಿಸುತ್ತದೆ. ಅಂದರೆ ಪರಿಶುದ್ಧವಾದ ಭಕ್ತಿಸೇವೆಯು ಆಧ್ಯಾತ್ಮಿಕವಾಗಿಯೂ ಕೃಷ್ಣನಿಗಿಂತ ಪ್ರಬಲವಾದುದು; ಏಕೆಂದರೆ ಅದು ಕೃಷ್ಣನ ಅಂತರಂಗ ಶಕ್ತಿಯಾಗಿದೆ. ಭಕ್ತಿಸೇವೆಯಲ್ಲಿ ತೊಡಗಿರದ ಜನರಿಗೆ ಕೃಷ್ಣನನ್ನು ಸೇವಿಸುವುದರಲ್ಲಿರುವ ಮಹತ್ವಪೂರ್ಣ ಮೌಲ್ಯದ ಅರಿವು ಎಂದಿಗೂ ಉಂಟಾಗುವುದಿಲ್ಲ.

ಉಪಸಂಹಾರ:

ಪ್ರಸ್ತುತದಲ್ಲಿ ಮಾನವ ನಾಗರಿಕತೆಯು ಹಾಯಾಗಿ ಬದುಕುವುದರಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆಯಾದರೂ, ನಾವು ಸಂತೋಷದಿಂದಿಲ್ಲ. ಏಕೆಂದರೆ ನಾವು ಪ್ರಮುಖ ಅಂಶವೊಂದನ್ನು ಮರೆತಿದ್ದೇವೆ. ನಮ್ಮ ಜೀವನವು ಸಂತೋಷದಿಂದ ಸಾಗಲು ಈ ಲೌಕಿಕ ಸೌಕರ್ಯಗಳಷ್ಟೇ ಸಾಲದು. ನಾವು ಲೌಕಿಕ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದರೂ ನಮ್ಮೊಳಗಿನ ಸುಪ್ತವಾದ ಪ್ರೀತಿಸುವ ಹಂಬಲವು ತೃಪ್ತಿ ಹೊಂದಿಲ್ಲವಾದ್ದರಿಂದ ನಾವು ಸಂತುಷ್ಟರಾಗಿರುವುದು ಸಾಧ್ಯವಾಗಿಲ್ಲ. ಒಬ್ಬ ವ್ಯಕ್ತಿಯು ಲೌಕಿಕ ಅನನುಕೂಲತೆಯಿಲ್ಲದೆ ಬದುಕಬಹುದು ಆದರೆ, ಅವನು ಕೃಷ್ಣನನ್ನು ಪ್ರೇಮಿಸುವ ಕಲೆಯನ್ನು ಕಲಿಯಬೇಕು. ಪ್ರಸ್ತುತದಲ್ಲಿ ನಾವು ನಮ್ಮೊಳಗಿನ ಪ್ರೀತಿಸುವ ಪ್ರವೃತ್ತಿಯನ್ನು ಉಪಯೋಗಿಸಲು ಸಾಕಷ್ಟು ದಾರಿಗಳನ್ನು ಹುಡುಕುತ್ತಿದ್ದೇವೆ. ಆದರೆ ವಾಸ್ತವದಲ್ಲಿ, ನಿಜವಾದ ಅಂಶವನ್ನು ನಾವು ಕಡೆಗಣಿಸಿದ್ದೇವೆ. ನಾವು ಒಂದು ಗಿಡದ ಎಲ್ಲ ಭಾಗಗಳಿಗೂ ನೀರುಣಿಸುತ್ತಿದ್ದೇವೆ, ಆದರೆ ಅದರ ಬೇರನ್ನೇ ಕಡೆಗಣಿಸುತ್ತಿದ್ದೇವೆ. ನಾವು ಎಲ್ಲ ರೀತಿಯಿಂದಲೂ ನಮ್ಮ ಶರೀರವನ್ನು ಆರೋಗ್ಯದಿಂದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಹೊಟ್ಟೆಗೆ ಆಹಾರ ಪೂರೈಸುವುದನ್ನೇ ಮರೆಯುತ್ತಿದ್ದೇವೆ. ಕೃಷ್ಣನನ್ನು ಮರೆಯುವುದೆಂದರೆ, ಒಬ್ಬ ವ್ಯಕ್ತಿಯು ತನ್ನನ್ನು ಮರೆತಂತೆ. ನಿಜವಾದ ಆತ್ಮಸಾಕ್ಷಾತ್ಕಾರ ಮತ್ತು ಕೃಷ್ಣನ ಸಾಕ್ಷಾತ್ಕಾರ – ಇವೆರಡೂ ಒಟ್ಟಿಗೆ ಸಾಗುತ್ತವೆ: ಒಬ್ಬ ವ್ಯಕ್ತಿಯು ಮುಂಜಾನೆಯ ಹೊತ್ತು ತನ್ನನ್ನು ತಾನು ನೋಡಿಕೊಂಡಾಗ ಅದು ಸೂರ್ಯನನ್ನು ನೋಡಿದ ಹಾಗೆ. ಸೂರ್ಯನ ಬೆಳಕು ಕಾಣುವ ಹೊರತು ಯಾವ ವ್ಯಕ್ತಿಯೂ ತನ್ನನ್ನು ಕಂಡುಕೊಳ್ಳಲಾರನು. ಅದೇ ರೀತಿ, ಎಲ್ಲಿಯವರೆಗೆ ಒಬ್ಬ ವ್ಯಕ್ತಿಯು ಕೃಷ್ಣನನ್ನು ಸಾಕ್ಷಾತ್ಕರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವನು ಆತ್ಮಸಾಕ್ಷಾತ್ಕಾರ ಹೊಂದುವುದು ಅಸಾಧ್ಯ.
Leave a Reply

Your email address will not be published. Required fields are marked *