Search
Monday 6 April 2020
  • :
  • :

ಭಗವದ್ಗೀತೆ ಎಂಬ ದಿವ್ಯ ವಿಜ್ಞಾನ

ಬಹುತೇಕ ಜನರಲ್ಲಿ ಭಗವದ್ಗೀತೆ ಒಂದು ಮತೀಯ ಗ್ರಂಥ ಎಂಬ ಭಾವನೆ ಇದೆ. ಸಾಕಷ್ಟು ಜನರು ಅದನ್ನು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಸಾಹಿತ್ಯ ಎಂಬುದಾಗಿ ತಿಳಿದಿದ್ದಾರೆ. ನಾವು ಭಗವದ್ಗೀತೆಯನ್ನು ಯಥಾರ್ಥವಾಗಿ, ಆಳವಾಗಿ ಅಧ್ಯಯನ ಮಾಡಿದರೆ ಅದರ ಅಗಾಧ ವ್ಯಾಪ್ತಿಯ ಪರಿಚಯ ನಮಗಾಗುತ್ತದೆ. ಭಗವದ್ಗೀತೆಯನ್ನು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ನೋಡಿದಾಗ, ಅದೊಂದು ಅತ್ಯದ್ಭುತ ಜ್ಞಾನ ಭಂಡಾರವೆಂಬ ಸತ್ಯ ಹೊಳೆಯುತ್ತದೆ.

ಇಲ್ಲೀಗ ಅಂತಹ ಕೆಲವು ವೈಜ್ಞಾನಿಕ ಹೊಳಹುಗಳನ್ನು ನೋಡೋಣ:

ಇತರ ಗ್ರಹ – ಜೀವಿಗಳ ಅಧ್ಯಯನ (Astrobiology)

ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ಆತ್ಮವನ್ನು `ಸರ್ವಗತ’ ಎಂದು ವರ್ಣಿಸಿದ್ದಾನೆ. ಸರ್ವಗತ ಎಂದರೆ, ಭಗವಂತನ ಸೃಷ್ಟಿಯ ಎಲ್ಲ ಭಾಗಗಳಲ್ಲೂ ಇರುವಂಥದ್ದು. ಇದು ಬಹಳ ಮುಖ್ಯವಾದ ಹೇಳಿಕೆ. ಆತ್ಮವು ಭೂಮಿಯ ಮೇಲೆ, ನೀರಿನಲ್ಲಿ, ಗಾಳಿಯಲ್ಲಿ, ಭೂಮಿಯ ಒಳಗೆ, ಬೆಂಕಿಯ ಒಳಗೆ – ಈ ಎಲ್ಲದರಲ್ಲೂ ಇರುವುದು ಎಂಬುದನ್ನು ನಾವು ಇದರಿಂದ ಅರಿಯಬಹುದು.

ಭಗವದ್ಗೀತೆಯ ಜಾಡನ್ನು ಹಿಡಿದು ಹೊರಟಾಗ, ಮೊಟ್ಟ ಮೊದಲ ಬಾರಿಗೆ ಇದನ್ನು ಶ್ರೀಕೃಷ್ಣನು ವಿವಸ್ವಾನನಿಗೆ, ಆತನು ಮನುವಿಗೆ, ಮನುವು ಇಕ್ಷ್ವಾಕುವಿಗೆ ಬೋಧಿಸಿದ್ದರೆಂದು ತಿಳಿದು ಬರುತ್ತದೆ. ವಿವಸ್ವಾನ ಎಂದರೆ ಸೂರ್ಯದೇವ. ಮನು – ಮನುಕುಲದ ತಂದೆ. ಇಕ್ಷ್ವಾಕು – ಅಯೋಧ್ಯೆಯನ್ನು ನಿರ್ಮಿಸಿದ ಚಕ್ರವರ್ತಿ. ಇದನ್ನು ಗಮನಿಸಿದಾಗ ನಮಗೆ ಭಗವದ್ಗೀತೆಯು ಸೂರ್ಯನಿಂದಾರಂಭಿಸಿ ಎಲ್ಲ ಗ್ರಹಗಳ ಪ್ರಮುಖರಿಗೆ ಬೋಧಿಸಲ್ಪಟ್ಟಿರುವುದು ತಿಳಿದು ಬರುತ್ತದೆ.

“ಯಾರು ದೇವತೆಗಳನ್ನು ಪೂಜಿಸುತ್ತಾರೋ, ಅವರು ದೇವತೆಗಳ ಲೋಕವನ್ನು ಹೊಂದುತ್ತಾರೆ.”  – ಎಂಬುದು ಭಗವದ್ಗೀತೆಯ ಒಂದು ವಾಕ್ಯ. ಸ್ವರ್ಗೀಯ ಗ್ರಹಗಳಾದ ಬ್ರಹ್ಮಲೋಕ, ಚಂದ್ರಲೋಕ, ಇಂದ್ರಲೋಕ ಮೊದಲಾದವುಗಳು ಧರ್ಮಾತ್ಮರ ಗುರಿಗಳಾಗಿರುತ್ತವೆ. ಅಲ್ಲಿ ಅವರಿಗೆ ಅನೇಕ ಬಗೆಯ ದೈವಿಕ ಆನಂದಗಳು ಕೊಡಲ್ಪಡುತ್ತವೆ. ಯಾರು ಅಧರ್ಮವನ್ನು ಆಚರಿಸುತ್ತಾರೋ, ಅವರು ಈ ಭೂಮಿಗೆ ಹತ್ತಿರದಲ್ಲಿರುವ ನರಕಕ್ಕೆ ಹೋಗುತ್ತಾರೆ. ಇದರ ಅಧಿಪತಿ `ಯಮ’, ಪಾಪಾತ್ಮರು ಮರಣಾನಂತರ ಇಲ್ಲಿಗೆ ಎಳೆತರಲ್ಪಡುತ್ತಾರೆ, ಮತ್ತು ಯಮನು ಅವರಿಗೆ ವಿವಿಧ ರೀತಿಯ ಶಿಕ್ಷೆಗಳನ್ನು ವಿಧಿಸುತ್ತಾನೆ.

ಶ್ರೀಕೃಷ್ಣನು ನಮ್ಮನ್ನು ಮರಳಿ ಮನೆಗೆ, ಮರಳಿ ಭಗವದ್ಧಾಮಕ್ಕೆ ಗೋಲೋಕ ವೃಂದಾವನಕ್ಕೆ ಬರುವಂತೆ ಆಹ್ವಾನ ನೀಡುತ್ತಲೇ ಇದ್ದಾನೆ. ಈ ಭೌತಿಕ ಜಗತ್ತಿನ ಅತ್ಯುನ್ನತ ಗ್ರಹದಿಂದಾರಂಭಿಸಿ, ಅತ್ಯಂತ ಹೀನ ಗ್ರಹದವರೆಗೆ ಎಲ್ಲ ಸ್ಥಳಗಳೂ ಜನನ-ಮರಣ ಚಕ್ರದ ನಿರಂತರ ಯಾತನೆಯಿಂದ ಕೂಡಿವೆ. ಕೃಷ್ಣನು ಹೇಳುತ್ತಾನೆ, “ಒಮ್ಮೆ ನನ್ನ ನೆಲೆಗೆ ಮರಳಿದರೆ ಸಾಕು, ಅವರು ಮತ್ತೆಂದೂ ಈ ಜನನ-ಮರಣದ ಯಾತನೆಗೆ ಸಿಲುಕಲಾರರು” ಎಂದು. (ಭ.ಗೀ-೮.೧೬)

ಪ್ರತಿಯೊಂದು ಬ್ರಹ್ಮಾಂಡದಲ್ಲಿಯೂ ಅನೇಕಾನೇಕ ಗ್ರಹಗಳಿರುವವು. ಮತ್ತು ಪ್ರತಿಯೊಂದು ಗ್ರಹವೂ ವಿವಿಧ ಬಗೆಯ ಜೀವಿಗಳಿಂದ ತುಂಬಿಕೊಂಡಿರುವುದು. ಮತ್ತು ಎಲ್ಲ ಗ್ರಹಗಳ ಜೀವನವು ಜನನ ಮರಣಗಳ ಚಕ್ರದಲ್ಲಿ ಸಿಲುಕಿ ಯಾತನೆಯಿಂದ ಕೂಡಿರುವುದು.

ಕಾಲ ಮಾಪನದ ವಿಜ್ಞಾನ (Chronometry)

ಭಗವದ್ಗೀತೆಯ ಹತ್ತನೆ ಅಧ್ಯಾಯದ ೩೦ನೇ ಶ್ಲೋಕದಲ್ಲಿ ಶ್ರೀಕೃಷ್ಣನು, “ಕ್ಷಯವನ್ನುಂಟು- ಮಾಡುವವರಲ್ಲಿ ನಾನು ಕಾಲನಾಗಿರುವೆ” ಎಂದಿದ್ದಾನೆ.

ಭೌತಿಕ ಜಗತ್ತಿನ ಅವಧಿಯು ಸೀಮಿತವಾದುದಾಗಿದೆ. ಇದು `ಕಲ್ಪ’ಗಳೆಂಬ ಕಾಲಚಕ್ರದಲ್ಲಿ ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿದೆ. ಒಂದು ಕಲ್ಪವು ಬ್ರಹ್ಮನ ಒಂದು ದಿನಕ್ಕೆ ಸಮನಾಗಿದ್ದು, ಬ್ರಹ್ಮನ ಒಂದು ದಿನವು ಸತ್ಯ, ತ್ರೇತಾ, ದ್ವಾಪರ, ಕಲಿಗಳೆಂಬ ನಾಲ್ಕು ಯುಗಗಳ ಸಾವಿರ ಚಕ್ರಗಳನ್ನು ಒಳಗೊಂಡಿರುತ್ತದೆ.

ಸತ್ಯಯುಗವು ಜ್ಞಾನ, ಧರ್ಮ, ನ್ಯಾಯ ನೀತಿಗಳಿಂದ ಕೂಡಿದ್ದು, ಅಲ್ಲಿ ಮೌಢ್ಯಕ್ಕೆ ಜಾಗವೇ ಇರುವುದಿಲ್ಲ. ಇದು ೧,೭೨೮,೦೦೦ ವರ್ಷಗಳ ಕಾಲ ನಡೆಯುತ್ತದೆ. ತ್ರೇತಾಯುಗದಲ್ಲಿ ವಂಚನೆ ಪ್ರವೇಶವಾಗುತ್ತದೆ. ಈ ಯುಗವು ೧,೨೯೬,೦೦೦ ವರ್ಷ ಪರ್ಯಂತ ಇರುತ್ತದೆ. ದ್ವಾಪರ ಯುಗದಲ್ಲಿ ಧಾರ್ಮಿಕ ಮೌಲ್ಯಗಳ ಕುಸಿತದ ಪ್ರಮಾಣ ಮತ್ತಷ್ಟು ಹೆಚ್ಚುತ್ತದೆ. ವಂಚಕ ಬುದ್ಧಿ ಬಹಳವಾಗುತ್ತದೆ. ಈ ಯುಗವು ೮೬೪,೦೦೦ ವರ್ಷಕಾಲ ನಡೆಯುತ್ತದೆ. ಅಂತಿಮವಾಗಿ, ಕಲಿಯುಗವು (ಇಂದಿನ ಯುಗ) ಅಧರ್ಮ, ಕಲಹ, ಅನೀತಿಗಳಿಂದ ತುಂಬಿದ್ದು, ೪೩೨,೦೦೦ ವರ್ಷಗಳ ಕಾಲ ಇರುತ್ತದೆ. ನಾವೀಗ ಈ ಯುಗದ ೫,೦೦೦ ವರ್ಷಗಳನ್ನು ಕಳೆದಿದ್ದೇವೆ. ಕಾಲ ಮತ್ತು ಕಾಲ ಮಾಪನದ ಕುರಿತು ಹೆಚ್ಚಿನ ಸಂಗತಿಯನ್ನು ನಾವು ಈ ಹಿಂದಿನ (ನವೆಂಬರ್)ಸಂಚಿಕೆಯಲ್ಲಿ ಚರ್ಚಿಸಿದ್ದೇವೆ.

ಆಹಾರ ವಿಜ್ಞಾನ (Dietetics)

ಭಗವದ್ಗೀತೆಯ ೧೭ನೇ ಅಧ್ಯಾಯದಲ್ಲಿ ಆಹಾರ ವಿಜ್ಞಾನ ಮತ್ತು ಆರೋಗ್ಯ ಪೂರ್ಣ ಜೀವನದ ಬಗ್ಗೆ ಸಾಕಷ್ಟು ವಿವರಣೆಗಳಿವೆ;

“ಸಾತ್ತ್ವಿಕಗುಣದವರಿಗೆ ಪ್ರಿಯವಾದ ಆಹಾರಗಳು ಆಯುಸ್ಸನ್ನು ಹೆಚ್ಚಿಸುತ್ತವೆ; ಮನುಷ್ಯನ ಬದುಕನ್ನು ಪರಿಶುದ್ಧಗೊಳಿಸುತ್ತವೆ; ಬಲ, ಆರೋಗ್ಯ, ಸುಖ ಮತ್ತು ತೃಪ್ತಿಗಳನ್ನು ಹೆಚ್ಚಿಸುತ್ತವೆ. ಅಂತಹ ಆಹಾರಗಳು ರಸಯುಕ್ತವಾಗಿರುತ್ತವೆ, ಜಿಡ್ಡಿನಿಂದ ಕೂಡಿರುತ್ತವೆ, ಆರೋಗ್ಯಕರವಾಗಿರುತ್ತವೆ ಮತ್ತು ಹೃದಯಕ್ಕೆ ಪ್ರಿಯವಾಗಿರುತ್ತವೆ.” (ಭ.ಗೀ:೧೭:೮)

“ಬಹು ಕಹಿಯಾದ, ಹುಳಿಯಾದ, ಉಪ್ಪಾದ, ಉಷ್ಣವಾದ, ತೀಕ್ಷ್ಣವಾದ, ಒಣಕಲಾದ ಮತ್ತು ಸುಡುತ್ತಿರುವ ಆಹಾರಗಳು ರಾಜಸ ಸ್ವಭಾವದವರಿಗೆ ಪ್ರಿಯವಾದವು.  ಇಂತಹ ಆಹಾರಗಳು ದುಃಖವನ್ನು, ಶೋಕವನ್ನು, ರೋಗವನ್ನು ಉಂಟುಮಾಡುವವು.” (ಭ.ಗೀ:೧೭:೯)

“ತಿನ್ನುವುದಕ್ಕೆ ಮೂರು ಗಂಟೆಗಳಿಗೂ ಮೊದಲು ಸಿದ್ಧಮಾಡಿದ ಆಹಾರ, ರುಚಿಯಿಲ್ಲದ, ಕೆಡುತ್ತಿರುವ ಹಳಸಿದ ಆಹಾರ ಮತ್ತು ಉಚ್ಛಿಷ್ಟವೂ, ಅಸ್ಪೃಶ್ಯವೂ ಆದ ಆಹಾರವು ತಾಮಸಗುಣದವರಿಗೆ ಪ್ರಿಯವಾದವು.” (ಭ.ಗೀ:೧೭:೧೦)

ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳುವುದು, ಮನಃಶುದ್ಧಿ ಮತ್ತು ದೈಹಿಕ ಬಲವರ್ಧನೆ. ಇವು ಆಹಾರ ಸೇವನೆಯ ಪ್ರಮುಖ ಉದ್ದೇಶಗಳು. ನಮ್ಮ ಪೂರ್ವಜರು ಆರೋಗ್ಯಕ್ಕೆ ಪೂರಕವಾದ, ಜೀವಿತಾವಧಿಯನ್ನು ಹೆಚ್ಚಿಸುವ ಆಹಾರಗಳನ್ನು ಆಯ್ಕೆ ಮಾಡಿ, ಅದನ್ನು ತಮ್ಮ ಮುಂದಿನ ಪೀಳಿಗೆಗಳಿಗೆ ಪರಿಚಯಿಸಿರುವರು. ಅದರಂತೆ, ಹಾಲು – ಹಾಲಿನ ಉತ್ಪನ್ನಗಳು, ಸಕ್ಕರೆ, ಅಕ್ಕಿ, ಗೋಧಿ, ಹಣ್ಣುಗಳು ಮತ್ತು ತರಕಾರಿಗಳು. ಸಾತ್ತ್ವಿಕ ಗುಣ ಹೊಂದಿರುವ ಮಾನವರಿಗೆ ಬಹಳ ಆಪ್ಯಾಯಮಾನ. ಪ್ರಾಕೃತಿಕವಾಗಿ ದೊರೆಯುವ ಶುದ್ಧ ಆಹಾರವು ಶರೀರ ಪೋಷಣೆಗೆ ಅತ್ಯುತ್ತಮ. ಆದರೆ ಮಾಂಸ, ಮೀನು, ಮೊಟ್ಟೆ ಮೊದಲಾದವುಗಳು ಆರೋಗ್ಯಕ್ಕೂ, ಆಧ್ಯಾತ್ಮಿಕ ಪ್ರಗತಿಗೂ ಮಾರಕ. ಹಾಲು – ಉಳಿದೆಲ್ಲ ಆಹಾರಗಳಿಗಿಂತ ಆರೋಗ್ಯಪೂರ್ಣ ಮತ್ತು ಪರಿಪೂರ್ಣ ಆಹಾರವಾಗಿದೆ. ಇದರ ಉತ್ಪನ್ನಗಳಾದ ಮೊಸರು, ಬೆಣ್ಣೆ, ಗಿಣ್ಣುಗಳು ಹೇರಳವಾದ ಜೀವ ಸತ್ತ್ವಗಳಿಂದ ಕೂಡಿರುತ್ತವೆ. ಹೀಗಿರುವಾಗ, ದೇಹ ಪೋಷಣೆಯ ಹೆಸರಲ್ಲಿ ಪ್ರಾಣಿಹತ್ಯೆ ನಡೆಸುವುದು ಮಹಾಪಾಪ. ಸಸ್ಯಾಹಾರದಲ್ಲಿ ದೇಹಕ್ಕೆ ಅಗತ್ಯವಿರುವ ಜೀವಸತ್ತ್ವಗಳೆಲ್ಲವೂ ದೊರೆಯುತ್ತವೆಯೆಂದಮೇಲೂ ಅದರ ಹೆಸರಿನಲ್ಲಿ ಮುಗ್ಧ ಪ್ರಾಣಿಗಳನ್ನು ಹತ್ಯೆ ಮಾಡಿ ಬೇಯಿಸಿ ತಿನ್ನುವುದು ವಿಕೃತಿಯಲ್ಲದೆ ಮತ್ತೇನು?

ಭಗವದ್ಗೀತೆಯಲ್ಲಿ ತಾಮಸಿಕ ಆಹಾರದ ವಿವರಣೆಯನ್ನು ನೀಡುತ್ತಾ, ಯಾವುದೇ ಆಹಾರವನ್ನು (ಪ್ರಸಾದ ಹೊರತಾಗಿ) ತಯಾರಿಸಿದ ಮೂರು ಗಂಟೆಯ ಅನಂತರ ಸೇವಿಸಬಾರದು ಎಂದು ಹೇಳಿದೆ. ಏಕೆಂದರೆ, ಬೇಯಿಸಿದ ಮೂರು ಗಂಟೆಗಳ ಅನಂತರ ಅದು ಕೆಡಲಾರಂಭಿಸುತ್ತದೆ. ಇಂತಹ ತಾಮಸಿಕ ಆಹಾರವು ಸಾತ್ತ್ವಿಕ ಗುಣದವರನ್ನು ಕೂಡ ತಮೋಗುಣಕ್ಕೆಳೆಯುತ್ತದೆ.

ಇತರರು ಸೇವಿಸಿದ ಉಳಿಕೆ ಆಹಾರವನ್ನು (ಎಂಜಲು)ತಿನ್ನಕೂಡದು. ಆದರೆ, ದೇವೋತ್ತಮ ಪರಮಪುರುಷನಿಗೆ ನಿವೇದಿಸಲ್ಪಟ್ಟ, ಸಾಧು ಸಜ್ಜನರ ಅದರಲ್ಲಿಯೂ ಆಧ್ಯಾತ್ಮಿಕ ಗುರುಗಳು ಸೇವಿಸಿದ ಉಳಿಕೆ ಆಹಾರವನ್ನು ಸೇವಿಸುವುದು ಅತ್ಯಂತ ಪ್ರಶಸ್ತವಾದುದು. ಅದರ ಹೊರತಾಗಿ, ಎಂಜಲು ಆಹಾರವನ್ನು ಸೇವಿಸುವುದು ತಮೋಗುಣವನ್ನು ಸೂಚಿಸುತ್ತದೆ. ಇಂತಹ ಅಭ್ಯಾಸವು ಸೋಂಕು ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ತಮೋಗುಣದವರು ಎಂಜಲು ಆಹಾರ ಸೇವಿಸುವುದನ್ನು ಬಯಸುತ್ತಾರೆ. ಆದರೆ ಸಾತ್ತ್ವಿಕ ಗುಣದವರು ಅಂತಹ ಆಹಾರವನ್ನು ಮುಟ್ಟುವುದಿರಲಿ, ನೋಡುವುದೂ ಇಲ್ಲ.

ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿರುವಂತೆ, ಅತ್ಯುತ್ತಮ ಆಹಾರವೆಂದರೆ ಅದು – ದೇವೋತ್ತಮ ಪರಮ ಪುರುಷನಿಗೆ ಅರ್ಪಿಸಿದ ಆಹಾರ ಮಾತ್ರ. ಕೃಷ್ಣನು , ತಾನು ಧಾನ್ಯ,ತರಕಾರಿ,ಹಿಟ್ಟು ಹಾಲು, ಹಣ್ಣುಗಳನ್ನು ಬಳಸಿ ಭಕ್ತಿಯಿಂದ ತಯಾರಿಸಿದ ಯಾವುದೇ ಆಹಾರವನ್ನು ಸ್ವೀಕರಿಸುವುದಾಗಿ ಹೇಳಿದ್ದಾನೆ. ಭಕ್ತಿ ಮತ್ತು ಪ್ರೀತಿಯಿಂದ ಏನನ್ನೂ ಅರ್ಪಿಸಿದರೂ ಭಗವಂತನು ಸ್ವೀಕರಿಸುತ್ತಾನೆಂಬುದು ದಿಟವಾದರೂ, ಪ್ರಸಾದ ತಯಾರಿಕೆಗೆ ಕೆಲವು ನಿರ್ದಿಷ್ಟ ನಿಯಮಗಳಿವೆ. ಈ ನಿರ್ದೇಶನದಂತೆ ತಯಾರಿಸಿದ ಆಹಾರವು ಭಗವಂತನಿಗೆ ಅರ್ಪಿತವಾಯಿತೆಂದರೆ, ಮುಂದೆ ಅದನ್ನು ಎಷ್ಟು ಕಾಲದ ಅನಂತರ ಬೇಕಾದರೂ ಸೇವಿಸಬಹುದು. ಏಕೆಂದರೆ ಅದು – ಆರೋಗ್ಯಕಾರಿ, ಸ್ವಾದಿಷ್ಟ ಮತ್ತು ಸತ್ತ್ವಪೂರ್ಣ ಆಹಾರವಾಗಿ ಮಾರ್ಪಟ್ಟಿರುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯು ಆಹಾರ ಸೇವನೆಗೆ ಮುನ್ನ ಅದನ್ನು ಭಗವಂತನಿಗೆ ಅರ್ಪಿಸಬೇಕು.

ಪಚನ ವಿಜ್ಞಾನ  (Gastroenterology)

“ಎಲ್ಲ ಜೀವಿಗಳ ದೇಹಗಳಲ್ಲಿ ಜಠರಾಗ್ನಿ ನಾನು. ದೇಹದಿಂದ ಹೊರಕ್ಕೆ ಹೋಗುವ ಮತ್ತು ಒಳಕ್ಕೆ ಬರುವ ಪ್ರಾಣವಾಯುವಿನೊಂದಿಗೆ  ಸೇರಿ ನಾನು  ನಾಲ್ಕು  ವಿಧವಾದ  ಆಹಾರವನ್ನು ಜೀರ್ಣಮಾಡುತ್ತೇನೆ.” – ಹೀಗೆಂದು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯ ೧೫ನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳಿರುವನು.

ಆಯುರ್ವೇದ ಶಾಸ್ತ್ರದ ಪ್ರಕಾರ, ನಮ್ಮ ಹೊಟ್ಟೆಯಲ್ಲಿರುವ ಜಠರಾಗ್ನಿಯು ಅಲ್ಲಿ ಪ್ರವೇಶಿಸುವ ಎಲ್ಲ ಆಹಾರವನ್ನೂ ಜೀರ್ಣ ಮಾಡುವುದು. ಈ ಜಠರಾಗ್ನಿಯು ಪ್ರಖರವಾದಾಗ ನಮಗೆ ಹಸಿವಾಗುವುದು. ಅದು ಚಟುವಟಿಕೆಯಿಲ್ಲದೆ ಸುಮ್ಮನಿದ್ದಾಗ ನಮಗೆ ಹಸಿವಿನ ಅನುಭವವೇ ಆಗದು. ಹೀಗೆ ಜಠರಾಗ್ನಿಯು ಬಹುತೇಕ ನಿಷ್ಕ್ರಿಯವಾಗಿ ನಮಗೆ ಆಹಾರ ಸೇವನೆಯ ಆಸಕ್ತಿ ಇಲ್ಲವಾದಾಗ ಚಿಕಿತ್ಸೆ ಅನಿವಾರ್ಯವಾಗಿ, ಜಠರಾಗ್ನಿಯನ್ನು ಉದ್ದೀಪಿಸುವ ಔಷಧ ಸೇವಿಸಬೇಕಾಗಿ ಬರುವುದು.

ವಾಸ್ತವವಾಗಿ ಈ ಜಠರಾಗ್ನಿಯು ದೇವೋತ್ತಮ ಪರಮ ಪುರುಷನ ಪ್ರತಿನಿಧಿಯೇ ಆಗಿರುವುದು. ವೈದಿಕ ಮಂತ್ರಗಳು ಕೂಡ (ಬೃಹದಾರಣ್ಯಕ ಉಪನಿಷತ್ತು -೫:೯:೧) ಸ್ವತಃ ಪರಬ್ರಹ್ಮನೇ ಜಠರಾಗ್ನಿಯ ರೂಪದಿಂದ ಹೊಟ್ಟೆಯಲ್ಲಿದ್ದು, ಎಲ್ಲ ಬಗೆಯ ಆಹಾರವನ್ನು ಜೀರ್ಣ ಮಾಡುವನೆಂದು ಹೇಳಿವೆ. (ಅಯಮ್ ಅಗ್ನಿರ್ ವೈಶ್ವಾನರೋ ಯೋಽಯಂ ಅಂತಃ ಪುರುಷೇ ಏನೇದಮ್ ಅನ್ನಮ್ ಪಚಯತೇ). ಆದ್ದರಿಂದ ಸ್ವತಃ ಭಗವಂತನೇ ಜೀರ್ಣಕ್ರಿಯೆಯನ್ನು ನಡೆಸುವುದರಿಂದ, ಜೀವಿಯು ಆಹಾರ ಸೇವನೆಯ ಪ್ರಕ್ರಿಯೆಯಲ್ಲಿ ಸ್ವತಂತ್ರವಾಗಿರುವುದಿಲ್ಲ, ಭಗವಂತನು ಆಹಾರ ಜೀರ್ಣವಾಗಲು ಸಹಕರಿಸುವ ಹೊರತು, ಆತ ಆಹಾರ ಸೇವಿಸಲು ಶಕ್ಯನಾಗಿರುವುದಿಲ್ಲ ಹೀಗೆ ಭಗವಂತನು ಆಹಾರದ ಉತ್ಪಾದಕನೂ, ಜೀರ್ಣಕರ್ತೃವೂ ಆಗಿರುವನು.  ಮತ್ತು ನಾವು, ಅವನ ಕೃಪೆಯಿಂದಲೇ ಜೀವನವನ್ನು ಆನಂದಿಸುತ್ತಿರುವೆವು.

ವೇದಾಂತ ಸೂತ್ರದಲ್ಲಿ (೧:೨:೨೭) ಹೇಳಿರುವಂತೆ – “ಶಬ್ದಾದಿಭ್ಯೋ ಅಂತಃ ಪ್ರತಿಷ್ಠಾನಾಚ್ಚ” – ಭಗವಂತನು ಶಬ್ದದ ಒಳಗೂ, ದೇಹದ ಒಳಗೂ, ಗಾಳಿಯಲ್ಲಿಯೂ, ಹೊಟ್ಟೆಯಲ್ಲಿ ಜೀರ್ಣಶಕ್ತಿಯಾಗಿಯೂ ಉಪಸ್ಥಿತನಿರುವನು.

ಆಹಾರದಲ್ಲಿ ನಾಲ್ಕು ಬಗೆಗಳಿವೆ – ದ್ರವಾಹಾರ, ಅಗಿದು ತಿನ್ನುವಂಥದ್ದು, ನೆಕ್ಕುವಂಥದ್ದು, ಮತ್ತು ಹೀರುವಂಥದ್ದು. ಭಗವಂತನು ಈ ಎಲ್ಲ ಪ್ರಕಾರಗಳ ಆಹಾರಗಳಿಗೂ ಜೀರ್ಣ ಶಕ್ತಿಯಾಗಿದ್ದಾನೆ.

ಮನೋದೈಹಿಕ ವಿಜ್ಞಾನ  (Psychophysiology)

ದೇಹದ ವಿವಿಧ ಅಂಗಾಂಗಗಳು ಮತ್ತು ಅವುಗಳ ಕಾರ್ಯ ಚಟುವಟಿಕೆಯ ಅಧ್ಯಯನವೇ ದೈಹಿಕ ವಿಜ್ಞಾನ. ಮನಸ್ಸಿಗೆ ಸಂಬಂಧಿಸಿದ ಚಟುವಟಿಕೆಗಳ ಅಧ್ಯಯನ – ಮನೋವಿಜ್ಞಾನ. ಮನೋದೈಹಿಕ ವಿಜ್ಞಾನ ಇವೆರಡು ಅಧ್ಯಯನಗಳ ಒಟ್ಟು ಮೊತ್ತ. ಭಗವದ್ಗೀತೆಯು ನಮಗೆ ಸ್ಥೂಲ ಮತ್ತು ಸೂಕ್ಷ್ಮ ಶರೀರಗಳ ಪರಿಚಯ ಮಾಡಿ ಕೊಡುತ್ತದೆ. ಸ್ಥೂಲ ಶರೀರವು ನಮ್ಮ ದೃಷ್ಟಿಗೆ ಸಿಲುಕುವಂಥದ್ದಾಗಿದ್ದು; ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಆಕಾಶದಿಂದ ನಿರ್ಮಾಣಗೊಂಡದ್ದಾಗಿದೆ. ಸೂಕ್ಷ್ಮ ಶರೀರವು ಮನಸ್ಸು, ಬುದ್ಧಿ, ಮಿಥ್ಯಾಹಂಕಾರಗಳಿಂದ ಕೂಡಿದ್ದು, ನಾವು ಅವುಗಳ ಅಸ್ತಿತ್ವವನ್ನು ಅನುಭವಿಸಬಹುದಾಗಿದೆ.

ಗೀತೆಯ ೩ನೇ ಅಧ್ಯಾಯ (೪೨ನೇ ಶ್ಲೋಕ)ದಲ್ಲಿ ಹೇಳಿರುವಂತೆ,

“ಕ್ರಿಯಾಶಾಲಿಯಾದ ಇಂದ್ರಿಯಗಳು ಜಡವಸ್ತುವಿಗಿಂತ ಶ್ರೇಷ್ಠ.  ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠ. ಬುದ್ಧಿಯು ಮನಸ್ಸಿಗಿಂತ ಇನ್ನೂ ಬಹು ಶ್ರೇಷ್ಠ ಮತ್ತು ಆತ್ಮನು ಬುದ್ಧಿಗಿಂತ ಬಹು ಶ್ರೇಷ್ಠನು.”

ಆಧುನಿಕ ವಿಜ್ಞಾನವು ಇನ್ನೂ ಮನಸ್ಸು, ಬುದ್ಧಿ ಮತ್ತು ಮಿಥ್ಯಾಹಂಕಾರಗಳು ಅವುಗಳ ಸ್ವರೂಪ ಮತ್ತು ಚಟುವಟಿಕೆಗಳ ನಿಖರ ವಿವರಣೆಯನ್ನು ನೀಡಲು ಸಾಧ್ಯವಾಗಿಲ್ಲ. ಭಗವದ್ಗೀತೆಯು ಇವುಗಳ ಸ್ಪಷ್ಟ ಚಿತ್ರಣವನ್ನು ಕಟ್ಟಿಕೊಡುತ್ತದೆ. ಈ ಕುರಿತ ಹೆಚ್ಚಿನ ವಿವರಗಳಿಗಾಗಿ ನೀವು ಶ್ರೀಲ ಪ್ರಭುಪಾದರ `ಭಗವದ್ಗೀತಾ ಯಥಾರೂಪ’ ಕೃತಿಯನ್ನು ಅಧ್ಯಯನ ಮಾಡಬಹುದು.

ಆರೋಗ್ಯ ವಿಜ್ಞಾನ

ಭಗವದ್ಗೀತೆಯಲ್ಲಿ ನಿಯಮಿತ ಆಹಾರ ಸೇವನೆ ಮತ್ತು ನಿದ್ರೆಗಳ ಆವಶ್ಯಕತೆಯನ್ನು ಹೇಳಲಾಗಿದೆ. ಕೆಲಸ ಕಾರ್ಯಗಳು, ಮಾತು, ನಿದ್ರೆ, ಎಚ್ಚರ ಮತ್ತಿತರ ಎಲ್ಲ ಬಗೆಯ ದೈಹಿಕ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಿದರೆ, ಭೌತಿಕ ಯಾತನೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಈ ನಿರ್ದೇಶನವನ್ನು ನಾವು ಭಗವದ್ಗೀತೆಯ ೬ನೇ ಅಧ್ಯಾಯದಲ್ಲಿ ನೋಡಬಹುದು.

“ಮನುಷ್ಯನು ಅತಿ ಹೆಚ್ಚಾಗಿ ತಿಂದರೂ ಅಥ‌ವಾ ಅತಿಸ್ವಲ್ಪ ತಿಂದರೂ, ಅತಿ ಹೆಚ್ಚಾಗಿ ನಿದ್ದೆ ಮಾಡಿದರೂ ಅಥ‌ವಾ ತಕ್ಕಷ್ಟು ನಿದ್ದೆ ಮಾಡದಿದ್ದರೂ ಯೋಗಿಯಾಗಲು ಸಾಧ್ಯವಿಲ್ಲ.” (ಭ.ಗೀ:೬:೧೬)

“ಆಹಾರ, ನಿದ್ರೆ, ವಿಹಾರ ಮತ್ತು ಕೆಲಸಗಳ ಅಭ್ಯಾಸಗಳಲ್ಲಿ ಮಿತವಾಗಿರುವವನಿಗೆ ಯೋಗ ಪದ್ಧತಿಯ ಅಭ್ಯಾಸವು ಎಲ್ಲ ಐಹಿಕ ದುಃಖಗಳನ್ನು ಕಡಮೆ ಮಾಡಬಲ್ಲದು.”(ಭ.ಗೀ:೬:೧೭)

`ಮಳೆ’ಯ ಅಧ್ಯಯನ (Meteorology)

ಇದು, ಭಗವದ್ಗೀತೆಯ ಮೂರನೆ ಅಧ್ಯಾಯದಲ್ಲಿ ಬರುವ ಬಹಳ ಕುತೂಹಲಕಾರಿಯಾದ ವೈಜ್ಞಾನಿಕ ಸಂಗತಿಯಾಗಿದೆ. ಇಲ್ಲಿ ಭಗವಂತನು, “ಎಲ್ಲ ಜೀವಿಗಳು ಆಹಾರ ಧಾನ್ಯಗಳಿಂದ ಬದುಕುತ್ತವೆ.  ಧಾನ್ಯಗಳನ್ನು ಮಳೆ ಉತ್ಪತ್ತಿಮಾಡುತ್ತದೆ.  ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ.  ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.” (ಭ.ಗೀ.೩:೧೪) ಎಂದು ಮಳೆಯ ರಹಸ್ಯವನ್ನು ಬಯಲು ಮಾಡಿದ್ದಾನೆ.

ಆಹಾರ ಧಾನ್ಯಗಳು ಅಥವಾ ತರಕಾರಿಗಳು ಆಹಾರದ ಮುಖ್ಯ ಆಕರಗಳು. ಮಾನವನು ವಿವಿಧ ಬಗೆಯ ಆಹಾರ ಧಾನ್ಯ, ತರಕಾರಿ, ಹಣ್ಣು ಮೊದಲಾದವುಗಳನ್ನು ಸೇವಿಸುತ್ತ ಬಂದಿದ್ದಾನೆ. ಇತರ ಪ್ರಾಣಿಗಳು ಧಾನ್ಯಗಳ ಹೊಟ್ಟು, ಸಿಪ್ಪೆ ಮೊದಲಾದ ತ್ಯಾಜ್ಯಗಳು, ಹುಲ್ಲು, ಸಸ್ಯ ಮೊದಲಾದವುಗಳನ್ನು ಸೇವಿಸುತ್ತ ಬದುಕಿವೆ. ಮಾಂಸಾಹಾರಿ ಪ್ರಾಣಿ ಮತ್ತು ಮಾನವರು ಸಹ, ಪರೋಕ್ಷವಾಗಿ ಸಸ್ಯೋತ್ಪನ್ನದ ಮೇಲೆಯೇ ಅವಲಂಬಿತರಾಗಿರುತ್ತಾರೆ. ಆದ್ದರಿಂದ ನಾವು ನಮ್ಮ ಆಹಾರಕ್ಕಾಗಿ ಕೃಷಿ ಭೂಮಿಯ ಮೇಲೆ ಅವಲಂಬಿತರಾಗಿರುತ್ತೇವೆಯೇ ಹೊರತು ದೊಡ್ಡ ದೊಡ್ಡ ಕಾರ್ಖಾನೆಗಳ ಮೇಲಲ್ಲ.

ಆಕಾಶವು ಯಥೇಚ್ಛವಾಗಿ ಮಳೆ ಸುರಿಸಿದರೆ ಮಾತ್ರ ಕೃಷಿ ಭೂಮಿ ಹಸನಾಗಿ ಬೆಳೆ ಬೆಳೆಯುತ್ತದೆ. ಮಳೆಯನ್ನು ಇಂದ್ರ, ಸೂರ್ಯ, ಚಂದ್ರ ಮೊದಲಾದ ದೇವತೆಗಳು ನಿಯಂತ್ರಿಸುತ್ತಾರೆ. ಅವರೆಲ್ಲರೂ ಪರಮಪ್ರಭುವಿನ ಸೇವಕರು. ಭಗವಂತನು ಯಜ್ಞಗಳಿಂದ ಸಂತೃಪ್ತನಾಗುತ್ತಾನೆ. ಎಲ್ಲಿ ಯಜ್ಞವನ್ನು ಆಚರಿಸಲಾಗುವುದಿಲ್ಲವೋ, ಅಲ್ಲಿ ಆಹಾರ ಕೊರತೆಯುಂಟಾಗುತ್ತದೆ. ಇದು ಪ್ರಕೃತಿ ನಿಯಮ. ಯಜ್ಞ – ನಿರ್ದಿಷ್ಟವಾಗಿ ಸಂಕೀರ್ತನ ಯಜ್ಞವು ಈ ಯುಗಕ್ಕಾಗಿ ಸೂಚಿಸಲ್ಪಟ್ಟಿದೆ. ಆದ್ದರಿಂದ ನಮ್ಮನ್ನು ನಾವು ಆಹಾರದ ಕೊರತೆಯಿಂದ ಮುಕ್ತರಾಗಿಸಿಕೊಳ್ಳಬೇಕೆಂದರೆ ಸಂಕೀರ್ತನ ಯಜ್ಞವನ್ನು ಆಚರಿಸುವುದು ಅತ್ಯಗತ್ಯ.

ಅಣುಭೌತ ಶಾಸ್ತ್ರ (Atomic physics)

ಭಗವದ್ಗೀತೆಯ ೮ನೇ ಅಧ್ಯಾಯದ ೯ನೇ ಶ್ಲೋಕದಲ್ಲಿ, ಭಗವಂತನ ಸ್ವರೂಪದ ಬಗ್ಗೆ ಹೇಳಲಾಗಿದೆ. ಅವುಗಳಲ್ಲೊಂದು, ಭಗವಂತನು ಅತ್ಯಂತ ಸಣ್ಣದಕ್ಕಿಂತ ಸಣ್ಣನಿರುವನು ಎಂಬುದು

ಕವೀಂ ಪುರಾಣಮನುಶಾಸಿತಾರಮ್

ಅಣೋರಣೀಯಾಂಸಮನುಸ್ಮರೇದ್ ಯಃ

ಅರ್ಥ : “ಪರಮ  ಪುರುಷನು  ಎಲ್ಲವನ್ನೂ  ಬಲ್ಲವನು,  ಅತಿ  ಪುರಾತನನು,  ನಿಯಂತ್ರಕನು,  ಅತ್ಯಂತ ಸಣ್ಣದಕ್ಕಿಂತ  ಸಣ್ಣಗಿರುವವನು,  ಎಲ್ಲವನ್ನೂ  ಪಾಲಿಸುವವನು.”

ಸಮಾಜ ಶಾಸ್ತ್ರ (Sociology)

ಮಾನವ ಸಮಾಜವು ಇತರ ಪ್ರಾಣಿಗಳ ಸಮಾಜದಂತೆಯೇ ಇದೆಯಾದರೂ, ಮಾನವನನ್ನು ಪ್ರಾಣಿ ಸ್ತರದಿಂದ ಮೇಲೆತ್ತುವುದಕ್ಕಾಗಿ ಭಗವಂತನು ವರ್ಣಾಶ್ರಮ ಧರ್ಮವನ್ನು ರೂಪಿಸಿರುವನು. `ಕೃಷ್ಣಪ್ರಜ್ಞೆ’ಯ ಕ್ರಮಬದ್ಧ ವಿಕಸನಕ್ಕಾಗಿ ಭಗವಂತನು ಇದನ್ನು ರೂಪಿಸಿರುವನು.

“ಐಹಿಕ ನಿಸರ್ಗದ ಗುಣತ್ರಯಗಳಿಗೆ ಅನುಗುಣವಾಗಿ ಮತ್ತು ಅವುಗಳ ಕರ್ಮಗಳಿಗೆ ಅನುಸಾರವಾಗಿ ಮನುಷ್ಯ ಸಮಾಜದ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದೆ. ಈ ವ್ಯವಸ್ಥೆಯನ್ನು ನಾನು ಸೃಷ್ಟಿಸಿದ್ದರೂ ನಾನು ಬದಲಾವಣೆಯಿಲ್ಲದವನು, ಅವ್ಯಯನು.  ಆದುದರಿಂದ ನಾನು ಕರ್ತಾರನಲ್ಲ ಎಂದು ತಿಳಿ” (ಭ.ಗೀ.೪:೧೩)

ಭಗವಂತನು ರೂಪಿಸಿದ ೪ ವರ್ಣಗಳು ಹೀಗಿವೆ: ಬುದ್ಧಿವಂತರೂ, ಸಾತ್ತ್ವಿಕರೂ ಆದ `ಬ್ರಾಹ್ಮಣ’ ಎಂದು ಕರೆಯಲ್ಪಡುವ ವರ್ಣ; ಆಡಳಿತದ ಚುಕ್ಕಾಣಿ ಹಿಡಿದಿರುವ, ರಾಜಸಗುಣದ `ಕ್ಷತ್ರಿಯ’ ಎಂಬ ವರ್ಣ; ರಾಜಸಿಕ ಮತ್ತು ತಾಮಸಿಕ ಗುಣಗಳ ಮಿಶ್ರಣದಂತಿರುವ `ವೈಶ್ಯ’ ಎಂದು ಕರೆಯಲ್ಪಡುವ ವ್ಯಾಪಾರೀ ಸಮೂಹ; ಮತ್ತು ಮೌಢ್ಯದಿಂದ ಕೂಡಿರುವ `ಶೂದ್ರ’ ಎಂಬ ಕಾರ್ಮಿಕ ವರ್ಗ.

ಈ ನಾಲ್ಕು ವರ್ಣಗಳು ಸೇರಿ ಮಾನವ ಸಮಾಜವು ನಿರ್ಮಾಣಗೊಂಡಿರುವುದು. ಈ ಸಂಪೂರ್ಣ ವ್ಯವಸ್ಥೆಯು ನಮ್ಮನ್ನು ಲೌಕಿಕ ಬಂಧನದಿಂದ ಮುಕ್ತಗೊಳಿಸಿ ಭಗವಂತನ ಸಾಮ್ರಾಜ್ಯವನ್ನು ಸೇರಲು ಸುಗಮ ಹಾದಿ ತೋರುತ್ತದೆ. ಆತ್ಮಜ್ಞಾನ ಹೊಂದಿ, ಜೀವನದ ಮೇಲೆ ನಿಯಂತ್ರಣ ಸಾಧಿಸಿ, ಶಾಸ್ತ್ರಗಳ ನಿರ್ದೇಶನದಂತೆ ನಡೆದು, ತಮ್ಮೆಲ್ಲ ವ್ಯವಹಾರಗಳಿಂದ ವಿರಕ್ತನಾಗಿ ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಇದು ಸಹಕಾರಿ. ತನಗೆ ವಹಿಸಿದ ಕರ್ತವ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವುದರಿಂದ ಇದು ಸಿದ್ಧಿಸುತ್ತದೆ.

ಭಗವದ್ಗೀತೆಯಲ್ಲಿ ಅನೇಕಾನೇಕ ಸಂಗತಿಗಳು ಅಡಕಗೊಂಡಿವೆ. ಸರ್ವಕಾಲಕ್ಕೂ ಪ್ರಸ್ತುತವೆನಿಸುವ ವಿಜ್ಞಾನಗಳು ಇದರಲ್ಲಿವೆ. ಜ್ಞಾನಾರ್ಥಿಯು ಈ ಅದ್ಭುತ ಕೃತಿಯಿಂದ ತನಗೆ ಬೇಕಾದ ವಿಷಯದ ಬಗ್ಗೆ ಮುಖ್ಯ ಮಾಹಿತಿಗಳನ್ನು ಪಡೆಯಬಹುದೆಂಬುದರಲ್ಲಿ ಸಂಶಯವಿಲ್ಲ.

 

 
Leave a Reply

Your email address will not be published. Required fields are marked *