Search
Saturday 4 April 2020
  • :
  • :

ಬಂಗಾರ ತಿರುಪತಿ

ಪುರಾಣ ಪ್ರಸಿದ್ಧ ಸ್ಥಳವಾದ  ಬಂಗಾರ ತಿರುಪತಿಯು ೧೦೮ ತಿರುಪತಿಗಳಲ್ಲಿ ಒಂದು ಎಂದು ಪ್ರತೀತಿ. ಚಿನ್ನದ ಗಣಿ ಪ್ರದೇಶವಿರುವ ಕೋಲಾರ ಜಿಲ್ಲೆಯಲ್ಲಿ ಈ ಪುಣ್ಯ ಕ್ಷೇತ್ರವಿರುವುದರಿಂದ ಇದಕ್ಕೆ `ಬಂಗಾರ ತಿರುಪತಿ’ ಎಂದು ಹೆಸರು. ಹಾಗೆಯೇ ಇಲ್ಲಿ ಪೂಜಿಸಲ್ಪಡುವವನು ಬಂಗಾರ ತಿರುಪತಿ ಶ್ರೀನಿವಾಸ. ಬಂಗಾರ ಗಿರಿವಾಸ ಎಂದೂ ಕರೆಯುತ್ತಾರೆ. ಕೋಲಾರ ಜಿಲ್ಲೆ ಮುಳಬಾಗಲಿನಿಂದ ೧೫ ಕಿ.ಮೀ. ಕ್ರಮಿಸಿದರೆ ಬಂಗಾರ ತಿರುಪತಿ ಶ್ರೀನಿವಾಸನ ದರ್ಶನ ನಿಮಗಾಗುತ್ತದೆ.

ಈ ದೇವಸ್ಥಾನದ ಸ್ಥಳ ಪುರಾಣ ಕುತೂಹಲದಾಯಕವಾಗಿದೆ. ಸಾಮಾನ್ಯವಾಗಿ ಎಲ್ಲ ಮಂದಿರಗಳಲ್ಲಿಯೂ ಮುಂದುಗಡೆ ಬಾಗಿಲು ಇರುತ್ತದೆ. ಆದರೆ ಇಲ್ಲಿ ಬಾಗಿಲೇ ಇಲ್ಲ! ಕಿಟಕಿಗಳಿಂದ ದರ್ಶನ! ಇದಕ್ಕೊಂದು ಪುರಾಣ ಸಂಗತಿ ಉಂಟು. ಇಲ್ಲಿ ಭೃಗು ಮಹರ್ಷಿಗಳು ತಪಸ್ಸು ಮಾಡುತ್ತಿದ್ದರಂತೆ. ಅವರ ಪಾದದಲ್ಲಿ ಇದ್ದ ಜ್ಞಾನನೇತ್ರ ಎಂಬ ಕಣ್ಣನ್ನು ಪರಮಾತ್ಮನು ವೈಕುಂಠದಲ್ಲಿ ತೆಗೆದುಬಿಡುತ್ತಾನೆ. ಆಗ ಋಷಿಗೆ ಜ್ಞಾನೋದಯವಾಗುತ್ತದೆ. “ಜಗತ್ ಸೃಷ್ಟಿಕರ್ತನಾದ ನಿನ್ನನ್ನು ಒದ್ದಿದ್ದರಿಂದ ಈ ಮಹಾ ಪಾಪ ಉಂಟಾಯಿತು. ನನ್ನ ಪಾಪ ಹೋಗಲಾಡಿಸಿ ಮೋಕ್ಷ ಕೊಡು” ಎಂದು ಬಹುವಾಗಿ ಬೇಡಿಕೊಳ್ಳುತ್ತಾರೆ. ಆಗ ಪರಮಾತ್ಮನು. “ಈ ಶೇಷಾಚಲ ಕ್ಷೇತ್ರದಲ್ಲಿ ತಪಸ್ಸು ಮಾಡಿಕೊಂಡಿರು. ನನ್ನ ಆರಾಧನೆ ಮಾಡು, ಮೋಕ್ಷ ಕೊಡುತ್ತೇನೆ” ಎಂದು ಆಶ್ವಾಸನೆ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಸ್ವಾಮಿಯು ಇಲ್ಲಿ ಉದ್ಭವಿಸಿದ ಎಂದು ಪುರಾಣ ಹೇಳುತ್ತದೆ. ಭೃಗು ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿಕೊಂಡು ಭಗವಂತನ ದರ್ಶನ ಪಡೆದರು.

ಮತ್ತೊಂದು ವಿಶೇಷವೆಂದರೆ ಇಲ್ಲಿರುವ ಕಿಟಕಿಗೆ ಆರು ರಂಧ್ರಗಳಿವೆ. ಮಾನವನ ಆರು ಗುಣಗಳಾದ – ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ -ಇವುಗಳನ್ನು ಅರಿಷಡ್‌ವರ್ಗ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಈ ಆರು ಗುಣಗಳನ್ನು ಬಿಟ್ಟು ಮನುಷ್ಯ ಬದುಕುವುದು ಕಷ್ಟ . ಅದಕ್ಕಾಗಿ ಪರಮಾತ್ಮ “ನನ್ನನ್ನು ನೋಡುವಾಗಲಾದರೂ ಎಲ್ಲವನ್ನೂ ಮರೆತು ಪೂಜಿಸು. ಒಳ್ಳೆಯ ಫಲವನ್ನು ಕೊಡುತ್ತೇನೆ” ಎನ್ನುತ್ತಾನೆ. ಇದರ ಸಂಕೇತವಾಗಿ ಆರು ರಂಧ್ರಗಳಿರುವ ಕಿಟಕಿಯ ಮೂಲಕ ಇಲ್ಲಿ ಭಗವಂತನ ದರ್ಶನ. ಉಡುಪಿಯಲ್ಲಿ ಕೃಷ್ಣನ ದರ್ಶನ ಮಾಡಿದಂತೆ. ಎಷ್ಟೇ ಭಕ್ತರು ಬರಲಿ, ಅವರೆಲ್ಲ ಈ ಕಿಟಕಿ ಮೂಲಕವೇ ದರ್ಶನ ಮಾಡಿಕೊಂಡು ಹೋಗಬೇಕು. ಇಲ್ಲಿ ವರ್ಷದಲ್ಲಿ ಮೂರು ಬಾರಿ ಜಾತ್ರೆ. ಮಾಘ ಶುದ್ಧ ಪೂರ್ಣಿಮೆ, ಅಂದರೆ ಮಾರ್ಗಶಿರದಲ್ಲಿ ಬ್ರಹ್ಮೋತ್ಸವ ನಡೆಯುತ್ತದೆ. ವೈಶಾಖದಲ್ಲಿ  ೯ ದಿವಸ ಮತ್ತು ಶ್ರಾವಣದಲ್ಲಿ ನಾಲ್ಕೂ ಶನಿವಾರ ವಿಶೇಷ ಪೂಜೆ ಮತ್ತು ಶಿವರಾತ್ರಿ ಸಮಯದಲ್ಲಿ ಜಾತ್ರೆ.  ಈ ಎಲ್ಲ ವಿಶೇಷ ಸಂದರ್ಭಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಪುನೀತರಾಗುತ್ತಾರೆ.

ವಿಶೇಷ ದಿನಗಳಲ್ಲಿ ಭಗವಂತನ ವಿಗ್ರಹಕ್ಕೆ ಅಲಂಕರಿಸಲು ಬಂಗಾರದ ಆಭರಣಗಳಿವೆ. ಅದನ್ನು ತಾಲೂಕಿನ ಸರ್ಕಾರಿ ಖಜಾನೆಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತದೆ ಮತ್ತು ವಿಶೇಷ ಪೂಜೆ ಇದ್ದಾಗ ತರಲಾಗುತ್ತದೆ.

ವಿಶೇಷ ಆಚರಣೆ : ಶ್ರಾವಣ ಮಾಸ; ಶಿವರಾತ್ರಿ; ವೈಕುಂಠ ಏಕಾದಶೀ.

ದರ್ಶನ ಸಮಯ : ಬೆಳಗ್ಗೆ ೭-೩೦ ರಿಂದ ಸಂಜೆ ೭-೩೦ ರವರೆಗೆ, ಯಾವುದೇ ಬಿಡುವು ಇಲ್ಲದೆ.

ಅಭಿಷೇಕ : ಬೆಳಗ್ಗೆ ೮ ಗಂಟೆಗೆ. ಶನಿವಾರ ಮಾತ್ರ ಬೆಳಿಗ್ಗೆ ೧೧ ಗಂಟೆಗೆ. ಅನಂತರ ಪ್ರಸಾದ ವಿನಿಯೋಗ. ಶನಿವಾರ, ಭಾನುವಾರ ಮತ್ತು ರಜಾ ದಿನ ಹಾಗೂ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು.
Leave a Reply

Your email address will not be published. Required fields are marked *