Search
Friday 29 October 2021
  • :
  • :

ಆದರ್ಶ  ರಾಜ  ಪೃಥು

ದೇವೋತ್ತಮನ ಆಡಳಿತ ಶಕ್ತಿಯ ಅವತಾರ – ರಾಜ ಪೃಥುವಿನ ಜೀವನ ಗಾಥೆ.

ಬಹು ಕಾಲದ ಹಿಂದೆ, ಸಾಮಾನ್ಯವಾಗಿ ಶಾಂತಮೂರ್ತಿಗಳಾದ ಒಂದು ವೈದಿಕ ಸಾಮ್ರಾಜ್ಯದ ಜ್ಞಾನಿಗಳು ಅಸಹನೀಯ ಭ್ರಷ್ಟ ರಾಜನನ್ನು ಬಲವಂತದಿಂದ ಪದಚ್ಯುತಗೊಳಿಸಿದರು. ಆದರೆ ಅವನ ಸ್ಥಾನಕ್ಕೆ ತತ್ತ್ವನಿಷ್ಠೆ ಇಲ್ಲದ ಮತ್ತೊಬ್ಬ ರಾಜಕಾರಣಿಯನ್ನು (ಜಗತ್ತಿನ ಇತಿಹಾಸದಲ್ಲಿ ಸಾಮಾನ್ಯವಾಗಿ ನಡೆಯುವಂತೆ) ತರುವ ಬದಲು ಅವರು ರಾಜ್ಯಭಾರಕ್ಕಾಗಿ ಪರಿಪೂರ್ಣನಾದ ಮುಖ್ಯ ಕಾರ್ಯಾಧಿಕಾರಿಯನ್ನು ಆಯ್ಕೆ ಮಾಡಿದರು. ಜಗತ್ತಿನ ಈ ಅಪರೂಪದ ಕ್ಷಿಪ್ರ ಕ್ರಾಂತಿಯು ಅಯೋಗ್ಯ ನಾಯಕರ ಅನ್ಯಾಯಕ್ಕೆ ಗುರಿಯಾಗಿರುವ ರಾಷ್ಟ್ರಗಳ ಜನರಿಗೆ ಅನೇಕ ಪಾಠಗಳನ್ನು ಕಲಿಸುತ್ತದೆ.

ಒಮ್ಮೆ ರಾಜ ಅಂಗನು ಒಂದು ಶ್ರೇಷ್ಠ ಯಜ್ಞವನ್ನು ಮಾಡುವ ಪ್ರಯತ್ನದಲ್ಲಿ ವಿಫಲನಾದ. ಆಗ ಅವನು ಪೂಜಾರಿಗಳನ್ನು ಕೇಳಿದ, “ನಾನೇನು ತಪ್ಪು ಮಾಡಿರುವೆ, ದಯೆಯಿಟ್ಟು ತಿಳಿಸಿ. ದೇವತೆಗಳು ಯಜ್ಞದಲ್ಲಿ ಪಾಲ್ಗೊಳ್ಳುತ್ತಿಲ್ಲ ಅಥವಾ ತಮ್ಮ ಪಾಲನ್ನು ಸ್ವೀಕರಿಸುತ್ತಲೂ ಇಲ್ಲ.” ಅಂದಿನ ದಿನಗಳಲ್ಲಿ ಇಂದ್ರನಂತಹ ದೇವತೆಗಳು ಸಂತರಾದ ರಾಜರು ಮಾಡುತ್ತಿದ್ದ ಯಜ್ಞಗಳಲ್ಲಿ ಪಾಲ್ಗೊಳ್ಳಲು ಸ್ವರ್ಗದಿಂದ ಬರುತ್ತಿದ್ದರು.

ಪ್ರಧಾನ ಪುರೋಹಿತರು ಉತ್ತರಿಸಿದರು, “ಓ ರಾಜನೇ, ಈ ಜನ್ಮದಲ್ಲಿ  ನಿನ್ನ ಯಾವುದೇ ಪಾಪ ಕರ್ಮಗಳನ್ನು ನಾವು ಕಾಣುತ್ತಿಲ್ಲ. ಆದರೆ ನಿನ್ನ ಹಿಂದಿನ ಜನ್ಮದಲ್ಲಿ ನೀನು ಮಾಡಿದ ಪಾಪ ಕರ್ಮಗಳಿಂದಾಗಿ ನಿನಗೆ ಪುತ್ರ ಜನನವಾಗಿಲ್ಲ.” ದೇವತೆಗಳಿಗೆಲ್ಲ ಪರಮನಾದ ದೇವೋತ್ತಮನಲ್ಲಿ ಪಾರ್ಥಿಸಿಕೊಳ್ಳಲು ಆ ಪುರೋಹಿತರು ರಾಜ ಅಂಗನಿಗೆ ಸಲಹೆ ಮಾಡಿದರು. ಪುತ್ರೋತ್ಸವವಾಗಬೇಕೆಂಬ ರಾಜನ ಅಪೇಕ್ಷೆಯನ್ನು ಈಡೇರಿಸಲು ಶ್ರೀ ವಿಷ್ಣುವು ಬಂದಾಗ, ದೇವತೆಗಳು ಅವನೊಂದಿಗೆ ಬರುತ್ತಾರೆ ಎಂದು ಅವರು ನುಡಿದರು.

ರಾಜ ಅಂಗನು ಈ ಸಲಹೆಯನ್ನು ಒಪ್ಪಿದನು. ಪರಮ ಆತ್ಮನಾಗಿ ಎಲ್ಲ ಜೀವಿಗಳ  ಹೃದಯದಲ್ಲಿರುವ ಶ್ರೀ ವಿಷ್ಣುವಿಗೆ ಪೂಜಾರಿಗಳು ಆಹುತಿ ನೀಡಿದರು. ಶ್ರೀ ವಿಷ್ಣುವು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ನೇರ ವಿಸ್ತರಣೆ.

ರಾಜ ಅಂಗನು ಪವಿತ್ರ ಅಗ್ನಿಗೆ ಆಹುತಿಯನ್ನು ಅರ್ಪಿಸುತ್ತಿದ್ದಾಗ, ಶ್ವೇತವರ್ಣದ ನಿಲುವಂಗಿ ಮತ್ತು ಚಿನ್ನದ ಹಾರವನ್ನು ಧರಿಸಿದ್ದ ವ್ಯಕ್ತಿಯೊಬ್ಬನು ಜ್ವಾಲೆಯಿಂದ ಹೊರ ಬಂದನು. ಅವನು ತನ್ನ ಕೈಯಲ್ಲಿ ಚಿನ್ನದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ಅದರಲ್ಲಿ ಹಾಲಿನಲ್ಲಿ ಬೇಯಿಸಿದ್ದ ಅನ್ನವಿತ್ತು. ಪುರೋಹಿತರ ಅನುಮತಿ ಪಡೆದು ರಾಜನು ಆ ಪ್ರಸಾದದ ಒಂದು ಭಾಗವನ್ನು ತನ್ನ ಪತ್ನಿ ಸುನಿತಾಳಿಗೆ ನೀಡಿದನು.

ಸಾವಿನ ಸಾಕಾರ ಮೂರ್ತಿಯ ಮಗಳಾದ ರಾಣಿಯು ಅತಿ ಶೀಘ್ರದಲ್ಲಿ ಗರ್ಭಿಣಿಯಾದಳು ಮತ್ತು ಗಂಡು ಮಗುವಿಗೆ ಜನ್ಮ ನೀಡಿದಳು. ಪುತ್ರಿಯು ತನ್ನ ತಂದೆಯ ಮತ್ತು ಪುತ್ರನು ತನ್ನ ತಾಯಿಯ ಗುಣಗಳನ್ನು ಪಡೆಯುತ್ತಾನೆಂದು ನಾವು ವೈದಿಕ ಸಾಹಿತ್ಯದಿಂದ ಅರಿತಿದ್ದೇವೆ. ಅದರಂತೆ, ಸಜ್ಜನ ರಾಜನಿಗೆ ಹುಟ್ಟಿದ ಮಗನು ತನ್ನ ತಾಯಿಯ ತಂದೆಯ ಅಂದರೆ ಅಜ್ಜನ ಅನಪೇಕ್ಷಿತ ಗುಣಗಳನ್ನು ಪಡೆದನು.

ಮಗುವಿನ ಹೆಸರು ವೇಣ. ಯುವಕನಾಗಿ ಅವನು ತನ್ನ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಕಾಡಿಗೆ ಹೋಗಿ ಮುಗ್ಧ ಜಿಂಕೆಗಳನ್ನು ಕೊಲ್ಲುತ್ತಿದ್ದ. ಅವನೆಷ್ಟು ಕ್ರೂರಿಯಾಗಿದ್ದನೆಂದರೆ, ಅವನು ಕೆಲವು ವೇಳೆ ತನ್ನ ಜೊತೆಯಲ್ಲಿ ಆಡುತ್ತಿದ್ದ ಹುಡುಗರನ್ನು ಅವರು ಪ್ರಾಣಿಗಳೋ ಎಂಬಂತೆ ಕೊಲ್ಲುತ್ತಿದ್ದ. ರಾಜ ಅಂಗನು ವೇಣನ ಸುಧಾರಣೆಗಾಗಿ ಅವನನ್ನು ಶಿಕ್ಷಿಸಿದ. ಆದರೂ ಅವನು ತನ್ನ ಮಗನನ್ನು ವಿನಯದ ಹಾದಿಗೆ ತರಲಾಗಲಿಲ್ಲ.

“ಪುತ್ರರಿಲ್ಲದವರೇ ಭಾಗ್ಯವಂತರು. ಕೆಟ್ಟ ಮಗನಿಂದಾಗುವ ಅಸಹನೀಯ ದುಃಖವನ್ನು ಅವರು ಅನುಭವಿಸಬೇಕಾಗಿಲ್ಲ” ಎಂದು ರಾಜನು ಯೋಚಿಸಿದನು. ಆದರೆ ಅವನು ಇದನ್ನೂ ಪರಿಗಣಿಸಿದ : “ಕೆಟ್ಟ ಮಗನು ಒಳ್ಳೆಯವನಿಗಿಂತ ಉತ್ತಮ. ಕೆಟ್ಟ ಮಗನು ಮನೆಯನ್ನು ನರಕಗೊಳಿಸುತ್ತಾನೆ. ಅದರಿಂದ ಬುದ್ಧಿವಂತನು ಅತಿ ಸುಲಭವಾಗಿ ಪ್ರತ್ಯೇಕಗೊಳ್ಳಬಹುದು.”

ಅಂಗನ ನಿರ್ಗಮನ

ವೈದಿಕ ನಾಗರಿಕತೆಯ ಪ್ರಕಾರ, ದೇವೋತ್ತಮ ಶ್ರೀ ಕೃಷ್ಣನೊಂದಿಗೆ ಶಾಶ್ವತ ಬಾಂಧವ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಬದುಕಿನ ನಿಜವಾದ ಉದ್ದೇಶ. ಆದರೆ ವ್ಯಕ್ತಿಯು ಕೌಟುಂಬಿಕ ಕರ್ತವ್ಯಗಳಲ್ಲಿ ಹೆಚ್ಚಾಗಿ ಮಗ್ನನಾದರೆ, ಅವನು ಈ ಅಂತಿಮ ಗುರಿಯ ಮೇಲಿನ ಗಮನವನ್ನು ಕಳೆದುಕೊಳ್ಳುತ್ತಾನೆ. ಆದುದರಿಂದ ವ್ಯಕ್ತಿಗಳು ೫೦ ವರ್ಷವನ್ನು ಮುಟ್ಟಿದಾಗ, ಕೌಟುಂಬಿಕ ಜೀವನದ ಹೊರೆಯನ್ನು ಕಳಚಿಕೊಳ್ಳಬೇಕೆಂದು ವೇದಗಳು ವಿವಾಹಿತರಿಗೆ ಸಲಹೆ ಮಾಡಿದೆ. ಇದರಿಂದ ಅವರು ತಮ್ಮ ಉಳಿದ ಜೀವನವನ್ನು ಸಂಪೂರ್ಣವಾಗಿ ಆತ್ಮ ಸಾಕ್ಷಾತ್ಕಾರಕ್ಕಾಗಿ ಅರ್ಪಿಸಿಕೊಳ್ಳಬಹುದು.

ಇದನ್ನೆಲ್ಲ ಯೋಚಿಸುತ್ತಿದ್ದ ರಾಜ ಅಂಗನಿಗೆ ನಿದ್ರೆ ಮಾಡಲಾಗಲಿಲ್ಲ. ಅವನು ನಡು ರಾತ್ರಿಯಲ್ಲಿ ಎದ್ದು ಅರಮನೆಯನ್ನು ತ್ಯಜಿಸಿ ಹೊರಟು ಹೋದ. ತನ್ನ ವೈಭವದ ಸಾಮ್ರಾಜ್ಯದ ಎಲ್ಲ ಆಕರ್ಷಣೆಯನ್ನೂ ಬಿಟ್ಟುಬಿಟ್ಟ ಅವನು ಯಾರಿಗೂ ಕಾಣದಂತೆ ಅರಣ್ಯದತ್ತ ಸಾಗಿದ.

ರಾಜ ಅಂಗನು ಹೊರಟುಹೋಗಿರುವುದನ್ನು ಅರಿತ ಪ್ರಜೆಗಳು ಅವನನ್ನು ಹುಡುಕಲಾರಂಭಿಸಿದರು. ಆದರೆ ಅವನನ್ನು ಪತ್ತೆ ಮಾಡಲಾಗಲಿಲ್ಲ. ಅವರು ನಗರಕ್ಕೆ ಹಿಂದಿರುಗಿದರು. ಆಗ ಅಲ್ಲಿ ದೇಶದ ಎಲ್ಲ ಋಷಿಗಳೂ ಸೇರಿದ್ದರು. ತಮಗೆ ರಾಜನು ಎಲ್ಲಿಯೂ ಸಿಗಲಿಲ್ಲ ಎಂದು ಪ್ರಜೆಗಳು ಋಷಿಗಳ ಬಳಿ ಹೇಳಿ ಕಣ್ಣೀರಿಟ್ಟರು.

ಕ್ರೂರಿ ವೇಣ

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯಾರೂ ಇಲ್ಲದ್ದರಿಂದ ಅಪರಾಧಿಗಳು ಸಮಾಜಕ್ಕೆ ತೊಂದರೆ ಕೊಡಲಾರಂಭಿಸಿದರು. ಆಗ ಋಷಿಗಳು ರಾಣಿ ಸುನಿತಾಳನ್ನು ಕರೆಸಿ, ಅವಳ ಅನುಮತಿ ಪಡೆದು ಅವಳ ಪುತ್ರ ವೇಣನಿಗೆ ಪಟ್ಟಾಭಿಷೇಕ ಮಾಡಿದರು. ಋಷಿಗಳ ಈ ನಿರ್ಧಾರವು ಯಾವ ಸಚಿವರಿಗೂ ಸಮ್ಮತವಾಗಲಿಲ್ಲ. ವೇಣನು ಕ್ರೂರಿ, ಅವನು ಒಳ್ಳೆಯ ರಾಜನಾಗುವುದು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿತ್ತು. ಕೆಲವೇ ಸಮಯದಲ್ಲಿ ಅದು ನಿಜವಾಯಿತು. ಸಿಂಹಾಸನವನ್ನು ಏರಿದ ಕೂಡಲೇ ಅವನು ಅಹಂಕಾರದಿಂದ ಬೀಗಿದನು. ಅವನು ತನ್ನ ರಥವನ್ನೇರಿ ಹತೋಟಿ ಇಲ್ಲದ ಗಜದಂತೆ ಸಾಮ್ರಾಜ್ಯದಾದ್ಯಂತ ಸಾಗುತ್ತಿದ್ದ. ಅವನು ಹೋದ ಕಡೆಯಲ್ಲೆಲ್ಲ ಆಕಾಶ ಮತ್ತು ಭೂಮಿ ನಡುಗುತ್ತಿತ್ತು.

ವೇಣನಿಗೆ ಅನೇಕ ಕೆಟ್ಟ ಗುಣಗಳಿದ್ದರೂ ಒಂದು ವಿಷಯದಲ್ಲಿ ಅವನಿಗೆ ಖ್ಯಾತಿ ಲಭಿಸಿತ್ತು. ಅವನ ಕ್ರೂರ ವರ್ತನೆಯಿಂದ ಹೆದರಿ ಕಳ್ಳರು ಮತ್ತು ಪುಂಡರು ತಮ್ಮ ಕೃತ್ಯಗಳನ್ನು ಸ್ಥಗಿತಗೊಳಿಸಿದರು.

ಆದರೆ ರಾಜ ವೇಣನು ಬ್ರಾಹ್ಮಣರು ಯಜ್ಞ ಮಾಡುವುದನ್ನು ನಿಷೇಧಿಸಿದನು. ಅವನು ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದನು. ವಿಶ್ವಾದ್ಯಂತ ನಾಸ್ತಿಕ ಸರಕಾರಗಳು ಇದೇ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ತಾಂತ್ರಿಕವಾಗಿ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದಾದರೂ, ಅಮೆರಿಕದಲ್ಲಿ ಸರಕಾರವು ಸರಕಾರಿ ಶಾಲೆಗಳಲ್ಲಿ ಪ್ರಾರ್ಥನೆಯನ್ನು ನಿಷೇಧಿಸಿದೆ, ಭಗವಾನ್ ಮೂಲದ ವಿಜ್ಞಾನ ವಿವರಣೆಯನ್ನು ಕಾನೂನು ಬಾಹಿರ ಮತ್ತು ಗರ್ಭಪಾತವನ್ನು ಕಾನೂನುಬದ್ಧಗೊಳಿಸಿತು.

ವೇಣನ ದೌರ್ಜನ್ಯಗಳನ್ನು ಗಮನಿಸಿದ ಋಷಿಗಳು ಈ ಲೋಕದ ಜನರು ಅಪಾಯದಲ್ಲಿದ್ದಾರೆ ಎಂದು ತೀರ್ಮಾನಿಸಿದರು. ಸಾಮಾನ್ಯವಾಗಿ ಮುನಿ ಸಮುದಾಯವು ರಾಜಕೀಯದಲ್ಲಿ ತೊಡಗುವುದಿಲ್ಲ. ಆದರೂ ಈಗ ಬಿಕ್ಕಟ್ಟು ತೀವ್ರವಾಗಿದ್ದರಿಂದ ಅವರಿಗೆ ಅದನ್ನು ನಿರ್ಲಕ್ಷಿಸುವುದು ಸಾಧ್ಯವಿರಲಿಲ್ಲ. ಆದುದರಿಂದ ಏನು ಮಾಡಬೇಕೆಂದು ಅವರು ತಮ್ಮೊಳಗೇ ಸಮಾಲೋಚಿಸಿದರು.

“ಪ್ರಜೆಗಳಿಗೆ ರಕ್ಷಣೆ ನೀಡಲೆಂದು ನಾವು ವೇಣನನ್ನು ರಾಜನನ್ನಾಗಿ ನೇಮಕ ಮಾಡಿದೆವು. ಆದರೆ ಅವನು ಈಗ ಜನರ ಶತ್ರುವಾಗಿದ್ದಾನೆ. ಆದರೆ ಅವನ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಅವನ ಉದ್ರೇಕವನ್ನು ಶಾಂತಗೊಳಿಸಲು ಪ್ರಯತ್ನಿಸೋಣ” ಎಂದು ಋಷಿಗಳು ಹೇಳಿದರು.

ತಮ್ಮ ಕೋಪವನ್ನು ಅಡಗಿಸಿಕೊಂಡು ಋಷಿಗಳು ನುಡಿದರು, “ಪ್ರೀತಿಯ ರಾಜ, ನಿನಗೆ ಒಳ್ಳೆಯ ಸಲಹೆ ನೀಡಲು ನಾವು ಬಂದಿದ್ದೇವೆ. ಜನ ಸಾಮಾನ್ಯರ ಆಧ್ಯಾತ್ಮಿಕ ಜೀವನ ಹಾಳಾಗಲು ನೀನು ಕಾರಣವಾಗಬಾರದು. ನೀನು ಹಾಗೆ ಮಾಡಿದರೆ, ನೀನು ನಿನ್ನ ಸಾಮ್ರಾಟ ಸ್ಥಾನದಿಂದ ಕೆಳಗೆ ಕುಸಿಯುವುದು ನಿಶ್ಚಯ.”

ರಾಜ ವೇಣನು ಅಹಂಕಾರದಿಂದ ಉತ್ತರಿಸಿದ, “ವಾಸ್ತವವಾಗಿ ದೇವೋತ್ತಮ ಪರಮ ಪುರುಷನಾದ ರಾಜನನ್ನು ಯಾರು ಅಜ್ಞಾನದಿಂದ ಪೂಜಿಸುವುದಿಲ್ಲವೋ ಅಂತಹವರು ಈ ಲೋಕದಲ್ಲಿ ಅಥವಾ ಸಾವಿನ ಅನಂತರದ ಲೋಕದಲ್ಲಿ ಸಂತೋಷದಿಂದ ಇರುವುದಿಲ್ಲ. ಆದುದರಿಂದ, ಋಷಿಗಳೇ, ನನ್ನನ್ನು ದ್ವೇಷಿಸುವುದನ್ನು ಬಿಟ್ಟು ನನ್ನನ್ನು ಆರಾಧಿಸಿ.”

“ಈ ನಾಸ್ತಿಕ ಮತ್ತು ನಿರ್ಲಜ್ಜ ವ್ಯಕ್ತಿಯು ಸಿಂಹಾಸನದ  ಮೇಲೆ ಕೂರಲು ಸ್ವಲ್ಪವೂ ಯೋಗ್ಯನಲ್ಲ. ದೇವೋತ್ತಮ ಪರಮ ಪುರುಷನನ್ನೇ ಅಪಮಾನಿಸುವ ಧೈರ್ಯ ತೊರಿದ ಇವನೆಷ್ಟು ಲಜ್ಜಾಹೀನ” ಎಂದು ಋಷಿಗಳು ಸಾರಿದರು. ಅನಂತರ ಶಬ್ದವಲ್ಲದೆ ಬೇರೆ ಯಾವ ಅಸ್ತ್ರವನ್ನೂ ಉಪಯೋಗಿಸದೆ ಅವರು ರಾಜ ವೇಣನನ್ನು ಕೊಂದರು.

ಮಗನ ದೇಹವನ್ನು ಕಂಡು ದುಃಖಿತಳಾದ ರಾಣಿ ಸುನಿತಾ, ಅದಕ್ಕೆ ಕೆಲವು ವಸ್ತುಗಳನ್ನು ಲೇಪಿಸಿ ಮತ್ತು ಮಂತ್ರಗಳನ್ನು ಜಪಿಸಿ ಸಂರಕ್ಷಿಸಿಡಲು ನಿರ್ಧರಿಸಿದಳು.

ಸಮಾಜವು ಪುನಃ ಅವ್ಯವಸ್ಥಿತವಾಗುತ್ತಿರುವುದನ್ನು ಕೆಲ ಸಮಯದ ಅನಂತರ ಋಷಿಗಳು ಗಮನಿಸಿದರು. ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತ ಅವರೆಂದರು, “ರಾಜನು ಸತ್ತಿರುವುದರಿಂದ ಕಳ್ಳರು ಮತ್ತು ಪುಂಡರು ಪುನಃ ಕ್ರಿಯಾಶೀಲರಾಗಿದ್ದಾರೆ.” ರಾಜನನ್ನೇ ಕೊಂದಿರುವುದರಿಂದ ಅಪರಾಧಿಗಳನ್ನು ಶಿಕ್ಷಿಸಲು ಋಷಿಗಳು ಮುಂದಾಗಬಹುದಿತ್ತು. ಆದರೆ ತಮ್ಮ ವಿಶೇಷ ಶಕ್ತಿಯನ್ನು ಬಳಸದಿರಲು ಅವರು ನಿರ್ಧರಿಸಿದರು. ಅವರು ಬೇರೆ ಪರಿಹಾರ ಕಂಡುಕೊಂಡರು.

ಕೆಟ್ಟ ಗುಣಗಳಿದ್ದರೂ ಉತ್ತಮ ರಾಜರ ವಂಶದಿಂದ ಬಂದಿದ್ದ ವೇಣನ ದೇಹದಿಂದ ಮತ್ತೊಬ್ಬ ರಾಜನನ್ನು ಉತ್ಪತ್ತಿ ಮಾಡಲು ಋಷಿಗಳು ತೀರ್ಮಾನಿಸಿದರು. ಆ ರೀತಿ ಮಾಡಲು ಅವರು ಮೊದಲು ವೇಣನ ದೇಹದ ಕೆಳ ಭಾಗದಿಂದ ಬಹುಕ ಎಂದು ಕರೆಯುವ, ನೋಡಲಾಗದಂತಹ ಜೀವಿಯನ್ನು ಉತ್ಪಾದಿಸಿದರು. ಅವನ ಬಣ್ಣ ಕಪ್ಪು ಮತ್ತು ಅವನ ಕಣ್ಣುಗಳು ಕೆಂಪು. ಅವನು ತತ್‌ಕ್ಷಣ ವೇಣನ ಎಲ್ಲ ಪಾಪ ಕರ್ಮಗಳ ಫಲವನ್ನು ಸ್ವೀಕರಿಸಿದನು.

ಆಡಳಿತ ಶಕ್ತಿಯ ಅವತಾರ

ಪರಮ ಪ್ರಭುವಿನ ಶಕ್ತಿಗಳಿಂದ ಸಬಲಗೊಂಡ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯನ್ನು ಋಷಿಗಳು ವೇಣನ ಮೇಲ್ಭಾಗದಿಂದ ಉತ್ಪಾದಿಸಿದರು. ಪುರುಷನು ಶ್ರೀ ಕೃಷ್ಣನ ಆಡಳಿತ ಶಕ್ತಿಯ ಅವತಾರ ಮತ್ತು ಮಹಿಳೆಯು ಅದೃಷ್ಟ ದೇವತೆಯ ವಿಸ್ತರಣೆ.

“ಪುರುಷನು ವಿಶ್ವಾದ್ಯಂತ ತನ್ನ  ಕೀರ್ತಿಯನ್ನು ಹರಡುವನು. ಅವನ ಹೆಸರು ಪೃಥು ಎಂದಿರುತ್ತದೆ ಮತ್ತು ಅವನು ರಾಜರಲ್ಲಿ ಮೊದಲ ರಾಜ. ಸ್ತ್ರೀಗೆ ಎಂತಹ ಸುಂದರ ಗುಣಗಳಿರುತ್ತವೆ ಎಂದರೆ ಅವಳು ತಾನು ಧರಿಸುವ ಆಭರಣಗಳನ್ನು ಮತ್ತೂ ಸುಂದರಗೊಳಿಸುವಳು. ಅವಳ ಹೆಸರು ಅರ್ಚಿ ಮತ್ತು ಅವಳು ಪೃಥುವನ್ನು ಪತಿಯಾಗಿ ಸ್ವೀಕರಿಸುವಳು” ಎಂದು ಋಷಿಗಳು ಹೇಳಿದರು.

ಪೃಥುವಿನ ಪಟ್ಟಾಭಿಷೇಕವನ್ನು ವೀಕ್ಷಿಸಲು ಋಷಿಗಳು ಮತ್ತು ದೇವತೆಗಳೆಲ್ಲ ಬಂದರು. ಅತ್ಯಂತ ಸುಂದರವಾದ ಉಡುಗೆಯಿಂದ ಅಲಂಕೃತರಾಗಿದ್ದ ಪೃಥು ಮತ್ತು ಅರ್ಚಿ ಬೆಂಕಿಯಷ್ಟೆ ಪ್ರಜ್ವಲಿಸುತ್ತಿದ್ದರು. ದೇವತೆಗಳು ರಾಜನಿಗೆ ಅನೇಕ ಉಡುಗೊರೆಗಳನ್ನು ನೀಡಿದರು.

ವೃತ್ತಿಪರ ಕಥನಕಾರರು ರಾಜನನ್ನು ಹೊಗಳಲಾರಂಭಿಸಿದರು. ಆದರೆ ಪೃಥು ನುಡಿದ, “ಓ ಕಥನಕಾರರೇ, ನೀವು ವ್ಯಕ್ತಪಡಿಸುತ್ತಿರುವ ಗುಣಗಳು ನನ್ನಲ್ಲಿ ವಾಸ್ತವವಾಗಿ ಪ್ರಕಟಗೊಳ್ಳಲಿ, ಆಗ ನೀವು ಅಂತಹ ಪ್ರಾರ್ಥನೆಯನ್ನು ಮಾಡಿ.”

ಆದರೆ ಋಷಿಗಳ ಆದೇಶದಂತೆ ಕಥನಕಾರರು ರಾಜನ ಶ್ಲಾಘನೆಯನ್ನು ಮುಂದುವರಿಸಿದರು. ಪರಮ ಪ್ರಭುವಿನ ಸಬಲ ಪ್ರತಿನಿಧಿಯಾಗಿ ರಾಜನ ಗುರುತನ್ನು ಅವರು ಅರ್ಥಮಾಡಿಕೊಂಡರು. ರಾಜ ಪೃಥುವಿನ ಗುಣಗಳನ್ನು ಕುರಿತಂತೆ ಕಥನಕಾರರು ನೀಡಿದ ವರ್ಣನೆಯನ್ನು ಪರಿಶೀಲಿಸಿದರೆ ನಾವು ಒಬ್ಬ ಪರಿಪೂರ್ಣ ಆಡಳಿತಗಾರನ ಪಾತ್ರದೊಳಗೆ ಹೊಕ್ಕು ನೋಟ ಹರಿಸಬಹುದು.

ಆಡಳಿತಗಾರನ ಕರ್ತವ್ಯ

ರಾಜನು ಸ್ವತಃ ಧಾರ್ಮಿಕ ತತ್ತ್ವಗಳನ್ನು ಅನುಸರಿಸುವನು ಮತ್ತು ಪ್ರಜೆಗಳೂ  ಅವುಗಳನ್ನು ಅನುಸರಿಸುವಂತೆ ಕ್ರಮಗಳನ್ನು ಕೈಗೊಳ್ಳುವನು ಎಂದು ಮೊದಲು ಋಷಿಗಳು ಹೇಳಿದರು. ಅವನು ಅಧಾರ್ಮಿಕ ಮತ್ತು ನಾಸ್ತಿಕರನ್ನು ಶಿಕ್ಷಿಸಬೇಕು. ಪ್ರಸ್ತುತದಲ್ಲಿ , ಧರ್ಮ ನಿರಪೇಕ್ಷಿತ ರಾಜ್ಯದ ಹೆಸರಿನಲ್ಲಿ ಸರಕಾರವು ಜನರಿಗೆ ಅಧಾರ್ಮಿಕ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಲು ಅವಕಾಶ ನೀಡುತ್ತಿರುವುದನ್ನು ನಾವು ಕೆಲವು ಬಾರಿ ನೊಡುತ್ತೇವೆ. ಮಾಂಸ ಭಕ್ಷಣೆ, ಜೂಜು, ಮದ್ಯಪಾನ ಮತ್ತು ಗರ್ಭನಿರೋಧಕ, ಗರ್ಭಪಾತಗಳ ನೆರವಿನಿಂದ ಅನೈತಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಹ ಪಾಪ ಕರ್ಮಗಳನ್ನು ಮಾಡುವ ಮೂಲಕ ಜನರು ಕರ್ಮದ ಕಾನೂನಿನಲ್ಲಿ ಸಿಕ್ಕಿಕೊಳ್ಳುತ್ತಾರೆ ಮತ್ತು ಯುದ್ಧ, ಸಾಂಕ್ರಾಮಿಕ ರೋಗ, ಕ್ಷಾಮ ಮುಂತಾದುವುಗಳ ರೂಪದಲ್ಲಿ ನೋವನ್ನು ಅನುಭವಿಸುವರು. ಈ ರೀತಿ ಜನರು ಈ ಜನ್ಮದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ ಮತ್ತು ಹುಟ್ಟು ಸಾವಿನ ವೃತ್ತದ ಬಲೆಯಲ್ಲಿಯೇ ಉಳಿಯುತ್ತಾರೆ.

ರಾಜನು ಪರಮ ಪ್ರಭುವಿಗಾಗಿ ಮಾಡುವ ಯಜ್ಞದಲ್ಲಿ ಜನರನ್ನು ತೊಡಗಿಸುತ್ತಾನೆ ಮತ್ತು ಆಹಾರ ಹಾಗೂ ಇತರ ಸಂಪನ್ಮೂಲಗಳ ಸಮೃದ್ಧ ಪೂರೈಕೆಯನ್ನು ಖಚಿತಪಡಿಸುತ್ತಾನೆ ಎಂದು ಕಥನಕಾರರು ಹೇಳಿದರು.  ಆಧುನಿಕ ಕೈಗಾರಿಕೀಕರಣ ನಾಗರಿಕತೆಯು ವಾಸ್ತವವಾಗಿ ಜೀವನದ ಅಗತ್ಯಗಳನ್ನು ಒದಗಿಸುವುದಿಲ್ಲ. ಆಹಾರವನ್ನು ಭಗವಂತನ ವ್ಯವಸ್ಥೆಯಿಂದ ಭೂಮಿಯಲ್ಲಿ ಉತ್ಪಾದಿಸಲಾಗುತ್ತದೆಯೇ ವಿನಾ ಕಾರ್ಖಾನೆಗಳಲ್ಲಿ ಅಲ್ಲ. ಉತ್ಪಾದನೆಗಾಗಿ ಬಳಸುವ ಗಾಳಿ, ನೀರು, ಖನಿಜಗಳು ಮತ್ತು ತೈಲ ಮುಂತಾದ ಕಚ್ಚಾ ವಸ್ತುಗಳನ್ನು ಪರಮ ಪ್ರಭು ಪೂರೈಸುತ್ತಾನೆ. ಅವುಗಳ ಮೂಲನಾದ ಭಗವಂತನಿಗೆ ಕೃತಜ್ಞತೆ ಅರ್ಪಿಸದೆ ಈ ನೈಸರ್ಗಿಕ ಕೊಡುಗೆಗಳನ್ನು ತೆಗೆದುಕೊಂಡರೆ ಮತ್ತು ಇಂದ್ರಿಯ ಸುಖಕ್ಕಾಗಿಯೇ ಬಳಸಿದರೆ ಭಗವಂತನು ಪೂರೈಕೆಯನ್ನು ನಿರ್ಬಂಧಿಸುತ್ತಾನೆ. ನಾವು ಈ ಸಂಪನ್ಮೂಲಗಳ ಮೂಲಕ್ಕೆ ಯಜ್ಞಗಳ ಮೂಲಕ ಕೃತಜ್ಞತೆ ಅರ್ಪಿಸಬಹುದು. ವೈದಿಕ ಧರ್ಮ ಗ್ರಂಥಗಳಲ್ಲಿ ಈ ಯುಗಕ್ಕೆ ಶಿಫಾರಸು ಮಾಡಿರುವ ಯಜ್ಞವೆಂದರೆ ಹರೇ ಕೃಷ್ಣ ಮಂತ್ರವನ್ನು ಪಠಿಸುವುದು : ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ. ಈ ಯಜ್ಞವನ್ನು ಮಾಡುವುದರಿಂದ ಜನರು ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳಲು ಅರ್ಪಿಸಲಾದ ಸರಳ ಜೀವನಕ್ಕೆ ಅಗತ್ಯವಾದ ಸಾಕಷ್ಟು ನೈಸರ್ಗಿಕ ಕೊಡುಗೆಯನ್ನು ಅನುಭವಿಸಬಹುದು.

ರಾಜನು ನ್ಯಾಯೋಚಿತವಾಗಿ ತೆರಿಗೆಯನ್ನು ಸಂಗ್ರಹಿಸುತ್ತಾನೆ ಮತ್ತು ಅಗತ್ಯದ ಸಮಯದಲ್ಲಿ ಅವುಗಳನ್ನು ಜನರಿಗೆ ವಿತರಿಸುತ್ತಾನೆ. ಅದು ಹೇಗೆಂದರೆ, ಸೂರ್ಯ ದೇವನು ಸಾಗರದ ನೀರನ್ನು ಆವಿಯಾಗಿಸಿ ಅದನ್ನು ಮಳೆಯ ರೂಪದಲ್ಲಿ ಭೂಮಿಗೆ ಹಿಂದಿರುಗಿಸುವಂತೆ. ಆದರೆ, ಪ್ರಸ್ತುತ ಯುಗದಲ್ಲಿ, ಭಾರವಾದ ತೆರಿಗೆಯನ್ನು ಸದಾ ಹೆಚ್ಚಿಸಲಾಗುತ್ತದೆ ಮತ್ತು ಅದನ್ನು ಸರಕಾರಿ ಆಡಳಿತಗಾರರ ದುಬಾರಿ ವೇತನಕ್ಕಾಗಿ ಖರ್ಚು ಮಾಡುತ್ತಾರೆ. ಈ ಅನ್ಯಾಯದ ತೆರಿಗೆಯು ಜನರನ್ನು ಅಪ್ರಾಮಾಣಿಕಗೊಳಿಸುತ್ತದೆ ಮತ್ತು ಅವರು ತಮ್ಮ ವರಮಾನವನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಕೊನೆಗೆ, ಸರಕಾರಕ್ಕೆ ತನ್ನ ಭಾರಿ ಮಿಲಿಟರಿ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭರಿಸಲು ಸಾಕಷ್ಟು ತೆರಿಗೆಯನ್ನು ಸಂಗ್ರಹಿಸುವುದು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇಡೀ ಆರ್ಥಿಕ ವ್ಯವಸ್ಥೆ ಮತ್ತು ಆಡಳಿತ ಯಂತ್ರ ಕುಸಿಯುತ್ತದೆ. ಇದು ಈಗಾಗಲೇ ಆರಂಭವಾಗಿದೆ.

ರಾಜನು ಎಲ್ಲ ಜೀವಿಗಳನ್ನು ತನ್ನಷ್ಟೇ ಪ್ರೀತಿಪಾತ್ರರೆಂದು ಪರಿಗಣಿಸುತ್ತಾನೆ ಎಂದು ಋಷಿಗಳು ಹೇಳಿದರು. ಇಂದು ಅನೇಕ ಸರಕಾರಿ ಮುಖಂಡರು ಮಾಂಸ ಭಕ್ಷಕರು. ಅದೇ ರೀತಿ ಅವರ ಪ್ರಜೆಗಳೂ ಕೂಡ. ಅವರು ಇತರರ ಹಿತದ ಬಗೆಗೆ ಆತಂಕವನ್ನು ಪ್ರಕಟಿಸುತ್ತಾರೆ. ಆದರೆ ಲಕ್ಷಾಂತರ ಅಮಾಯಕ ಪ್ರಾಣಿಗಳ ಹತ್ಯೆಗೆ ಅವಕಾಶ ನೀಡುತ್ತಾರೆ.

ರಾಜ ಪೃಥುವನ್ನು ಸಿಂಹಕ್ಕೆ ಹೋಲಿಸಲಾಗುವುದೆಂದು ಅನಂತರ ಋಷಿಗಳು ಘೋಷಿಸಿದರು. ಪುಂಡರು ಮತ್ತು ಕಳ್ಳರಿಗೆ ಮುಖ್ಯ ಕಾರ್ಯನಿರ್ವಾಹಕನ ಬಗೆಗೆ ಭಯವಿಲ್ಲದಿದ್ದರೆ, ನಾಡಿನಲ್ಲಿ ಶಾಂತಿ ಮತ್ತು ಸಮೃದ್ಧಿ ಇರುವುದಿಲ್ಲ. ರಾಜನು ತನ್ನನ್ನು ಭಗವಂತನ ಭಕ್ತರ ಸೇವಕನೆಂದು ಭಾವಿಸುತ್ತಾನೆ ಮತ್ತು ತಮ್ಮ ಒಳ್ಳೆಯ ಸಲಹೆಯಂತೆ ರಾಜ್ಯಭಾರ ಮಾಡುತ್ತಾನೆ ಎಂದು ಋಷಿಗಳು ಹೇಳಿದರು. ರಾಜನು ಭಕ್ತರಿಂದ ಖಾಸಗಿಯಾಗಿ ಆಧ್ಯಾತ್ಮಿಕ ಬೋಧನೆಯನ್ನು ಪಡೆಯುವನು ಎಂದೂ ಅವರು ನುಡಿದರು,

ಸಿಂಹಾಸನವನ್ನು ಅಲಂಕರಿಸಿದ ಮೇಲೆ ರಾಜ ಪೃಥುವು ಆಹಾರ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅನೇಕ ಪ್ರಜೆಗಳು ಹೊಟ್ಟೆಗಿಲ್ಲದೆ ಬಡಕಲಾಗಿದ್ದರು. ಆದುದರಿಂದ ಅವರು ರಾಜನ ಮುಂದೆ ಬಂದು ಕೋರಿದರು, “ನೀನು ರಾಜನಷ್ಟೇ ಅಲ್ಲ, ಭಗವಂತನ ಅವತಾರ ಕೂಡ. ಆದುದರಿಂದ. ರಾಜಾಧಿರಾಜನೇ, ದಯೆಯಿಟ್ಟು ನಮ್ಮ ಹಸಿವು ಹೋಗಲಾಡಿಸಲು ಏನಾದರೂ ವ್ಯವಸ್ಥೆ ಮಾಡು.”

ಜನರಲ್ಲಿ ದೋಷ ಇಲ್ಲವೇ ಇಲ್ಲ ಎಂದು ರಾಜನು ತೀರ್ಮಾನಿಸಿದನು. ಬದಲಿಗೆ, ಯಾವುದೊ ಕಾರಣಕ್ಕಾಗಿ ಭೂಮಿಯು ತನ್ನ ಕೊಡುಗೆಯನ್ನು ತಡೆ ಹಿಡಿದಿದ್ದಾಳೆ ಎಂದು ಭಾವಿಸಿ ರಾಜನು ಭೂಮಿಗೆ ಬೆದರಿಕೆ ಹಾಕಿದ. ದೇವೋತ್ತಮ ಪರಮ ಪುರುಷನ ಅವತಾರವೆಂದು ರಾಜ ಪೃಥುವನ್ನು ಪೂಜಿಸಿ ಅವಳು ಕಾರಣವನ್ನು ಅರುಹಿದಳು. ಕೆಲವು ಜನರ ಪಾಪ ಕರ್ಮಗಳಿಂದಾಗಿ ತಾನು ಆಹಾರ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ಅವಳು ವಿವರಿಸಿದಳು. ರಾಜನ ಮಧ್ಯ ಪ್ರವೇಶದಿಂದ ಅವಳು ಎಲ್ಲ ಜೀವಿಗಳಿಗೂ ಸೂಕ್ತ ಆಹಾರವನ್ನು ಪೂರೈಸಲಾರಂಭಿಸಿದಳು.

ಯಜ್ಞಕ್ಕೆ ವಿಷ್ಣುವಿನ ಕೃಪೆ

ಅನಂತರ ರಾಜನು ಒಂದು ನೂರು ಯಜ್ಞಗಳ ಸರಣಿಯನ್ನೇ ಆರಂಭಿಸಿದನು. ವಿಷ್ಣುವು ದೇವತೆಗಳು ಮತ್ತು ಋಷಿಗಳೊಂದಿಗೆ ಈ ಯಜ್ಞಗಳ ಬಳಿ ಸಂತೋಷದಿಂದ ಪ್ರತ್ಯಕ್ಷನಾದನು. ಪ್ರತಿಕ್ರಿಯೆಯಾಗಿ ಭೂಮಿಯು ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ಸಮೃದ್ಧವಾಗಿ ಪೂರೈಸಿದಳು. ಆದರೆ ಈ ಯಜ್ಞಗಳಿಂದ ರಾಜನು ಕೀರ್ತಿ ಮತ್ತು ವೈಭವದಲ್ಲಿ ತನ್ನನ್ನು ಮೀರಿಬಿಡುತ್ತಾನೆಂದು ಇಂದ್ರನು ಹೆದರಿದನು. ಹೀಗಾಗಿ ಅವನು ಯಜ್ಞಕ್ಕೆ ತಡೆ ಉಂಟುಮಾಡಲು ಆರಂಭಿಸಿದನು. ರಾಜನು ಇಂದ್ರನ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಸಿದ್ಧನಾದ. ಆದರೆ ಬ್ರಹ್ಮನ ಸಲಹೆಯಂತೆ ರಾಜನು ಅದನ್ನು ಕೈಬಿಟ್ಟನು.

ಆಗ ವಿಷ್ಣುವು ಇಂದ್ರನೊಂದಿಗೆ ಯಜ್ಞದ ಸ್ಥಳಕ್ಕೆ ಬಂದು ಹೇಳಿದನು, “ನನ್ನ ಪ್ರೀತಿಯ ರಾಜ ಪೃಥು, ಇಂದ್ರನು ನಿನ್ನ ನೂರು ಯಜ್ಞಗಳು ಕಾರ್ಯಗತಗೊಳ್ಳಲು  ತೊಂದರೆ ಉಂಟು ಮಾಡಿದ್ದಾನೆ. ಈಗ ನಿನ್ನಲ್ಲಿ  ಕ್ಷಮೆ ಕೇಳಲು ಅವನು ನನ್ನೊಂದಿಗೆ ಬಂದಿದ್ದಾನೆ. ಆದುದರಿಂದ ಅವನನ್ನು ಕ್ಷಮಿಸಿಬಿಡು.” ಭಗವಂತನ ಕೋರಿಕೆಯಂತೆ ಪೃಥುವು ಇಂದ್ರನನ್ನು ಕ್ಷಮಿಸಿದ.

ಅನಂತರ ಪ್ರಭು ವಿಷ್ಣು ನುಡಿದ, “ನನ್ನ ಪ್ರೀತಿಯ ಪೃಥು, ಗುರು ಶಿಷ್ಯ ಪರಂಪರೆಯಿಂದ ಸ್ವೀಕರಿಸಿರುವಂತೆ ಜ್ಞಾನಿಗಳಾದ ಬ್ರಾಹ್ಮಣ ಪ್ರಾಮಾಣ್ಯರ ಬೋಧನೆಯಂತೆ ನೀನು ನಿನ್ನ ಪ್ರಜೆಗಳ ರಕ್ಷಣೆಯನ್ನು ಮುಂದುವರಿಸಿದರೆ ಮತ್ತು  ಕಲ್ಪನೆಯ ವಿಷಯಗಳಿಗೆ ಅಂಟಿಕೊಳ್ಳದೆ ಅವರು ರೂಪಿಸಿರುವ ಧಾರ್ಮಿಕ ತತ್ತ್ವಗಳನ್ನು ನೀನು ಅನುಸರಿಸಿದರೆ, ಆಗ ನಿನ್ನ ಎಲ್ಲ ಪ್ರಜೆಗಳೂ ಸಂತೋಷದಿಂದ ಇರುವರು ಮತ್ತು ನಿನ್ನನ್ನು ಪ್ರೀತಿಸುವರು. ಆಗ ನೀನು ಈಗಾಗಲೇ ಮುಕ್ತರಾಗಿರುವ ನಾಲ್ಕು ಕುಮಾರರಾದ ಸನಕ, ಸನಾತನ, ಸನಂದ ಮತ್ತು ಸನತ್‌ಕುಮಾರರಂತಹವರನ್ನು ಅತಿ ಶೀಘ್ರದಲ್ಲಿ ನೋಡುವುದು ಸಾಧ್ಯ.” ರಾಜ ಪೃಥುವು ಭಗವಂತನ ಬೋಧನೆಯನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಪ್ರಭುವಿಗೆ ಪ್ರಾರ್ಥನೆಯನ್ನು ಸಲ್ಲಿಸಿದ. ಅನಂತರ ಪ್ರಭುವು ತನ್ನ ಧಾಮಕ್ಕೆ ಹಿಂದಿರುಗಿದ.

ಅನಂತರ ರಾಜನು ತನ್ನ ರಾಜಧಾನಿಯ ದ್ವಾರವನ್ನು ಪ್ರವೇಶಿಸಿದಾಗ, ಪ್ರಜೆಗಳು ಆನಂದದಿಂದ ಬರಮಾಡಿಕೊಂಡರು. ತಮ್ಮ ಉದ್ಯೋಗ ಕರ್ತವ್ಯಗಳ ಫಲಿತಾಂಶದ ಜೊತೆಗೆ ತಮ್ಮ ಮನಸ್ಸು, ಮಾತು ಮತ್ತು ದೇಹಗಳನ್ನು ಭಗವಂತನ ಸೇವೆಯಲ್ಲಿ ತೊಡಗಿಸಿ ಅವನನ್ನು ಪೂಜಿಸಬೇಕೆಂದು ರಾಜನು ತನ್ನ ಪ್ರಜೆಗಳಿಗೆ ಬುದ್ಧಿವಾದ ಹೇಳಿದನು. ಭಗವಂತನ ಶುದ್ಧ ಭಕ್ತರ ಆದೇಶವನ್ನು ಪಾಲಿಸಿ ಪೂಜಿಸಬೇಕೆಂದೂ ರಾಜನು ಸೂಚಿಸಿ ಹೀಗೆ ನುಡಿದನು, “ಬ್ರಾಹ್ಮಣರು ಮತ್ತು ವೈಷ್ಣವರಿಗೆ ಕ್ರಮಬದ್ಧವಾಗಿ ಸೇವೆ ಸಲ್ಲಿಸುವ ಮೂಲಕ ವ್ಯಕ್ತಿಯು ತನ್ನ ಹೃದಯದಿಂದ ಕಶ್ಮಲವನ್ನು ಹೊರಹಾಕಿ ಶುದ್ಧಮಾಡಿಕೊಳ್ಳಬಹುದು. ಹೀಗೆ ಲೌಕಿಕ ಆಸಕ್ತಿಯಿಂದ ಪರಮ ಶಾಂತಿ ಮತ್ತು ಮುಕ್ತಿಯನ್ನು ಆನಂದಿಸಬಹದು.”

ಕುಮಾರರ ಆದೇಶ

ಪುತ್ರ ಪೃಥುವಿನ ಸತ್ಕಾರ್ಯಗಳಿಂದಾಗಿ ಪಾಪಿಯಾದ ರಾಜ ವೇಣನು ನರಕ ಜೀವನದಿಂದ ಮುಕ್ತನಾದನೆಂದು ಋಷಿಗಳು, ದೇವತೆಗಳು ಮತ್ತು ಪ್ರಜೆಗಳು ಪೃಥುವಿನ ಮಾತುಗಳನ್ನು ಕೇಳಿದ ಮೇಲೆ ಘೋಷಿಸಿದರು. ಅನಂತರ, ಸೂರ್ಯನಷ್ಟೆ ತೇಜೋಮಯರಾದ ನಾಲ್ವರು ಕುಮಾರರು ಅಲ್ಲಿಗೆ ಆಗಮಿಸಿದರು. ಆಕಾಶದಿಂದ ಬಂದಿಳಿದ ನಾಲ್ವರು ಋಷಿಗಳನ್ನು ರಾಜನು ಸಕಲ ಗೌರವದಿಂದ  ಬರಮಾಡಿಕೊಂಡನು. ಭೌತಿಕ ಲೋಕದಲ್ಲಿರುವವರು ಬದುಕಿನ ಅಂತಿಮ ಗುರಿಯನ್ನು ಹೇಗೆ ಸಾಧಿಸುವುದು ಸಾಧ್ಯ ಎಂದು ರಾಜನು ಕುಮಾರರನ್ನು ಕೇಳಿದನು. ಸನತ್ ಕುಮಾರ ಉತ್ತರಿಸಿದನು:

ಬದುಕಿನ ದೈಹಿಕ ಕಲ್ಪನೆಯಿಂದ ಕಳಚಿಕೊಳ್ಳುವುದು ಮತ್ತು ಅಲೌಕಿಕ ಹಾಗೂ ಪ್ರಕೃತಿ ಗುಣಗಳನ್ನು ಮೀರಿದವನಾದ ಪರಮ ಪ್ರಭುವಿನ ಬಗೆಗೆ ಹೆಚ್ಚಿದ, ಕ್ಷಿಪ್ರವಾದ ಪ್ರೀತಿ ಇವು ಮಾನವ ಸಮಾಜದ ಒಳಿತಿಗಾಗಿನ ಅಂತಿಮ ಗುರಿ ಎಂದು ಧರ್ಮ ಗ್ರಂಥಗಳು ಸೂಕ್ತ ಪರಿಶೀಲನೆಯ ಅನಂತರ ನಿರ್ಣಯಕ್ಕೆ ಬಂದಿವೆ. ಹಣ ಸಂಪಾದನೆ ಮತ್ತು ಇಂದ್ರಿಯ ಸುಖದಲ್ಲಿಯೇ ಅಸಕ್ತಿ ಉಳ್ಳವರೊಂದಿಗೆ ಸಹವಾಸ ಮಾಡದೆಯೇ ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿ ಸಾಧಿಸಬೇಕು. ದೇವೋತ್ತಮ ಪರಮ ಪುರುಷನ ವೈಭವದ ಅಮೃತವನ್ನು ಸವಿಯದೆ ನಾವು ಶಾಂತಿಯಿಂದ ಇರುವುದು ಸಾಧ್ಯವಿಲ್ಲ ಎಂದು ಜೀವನವನ್ನು  ರೂಪಿಸಿಕೊಳ್ಳಬೇಕು. ಇಂದ್ರಿಯ ಸುಖದಲ್ಲಿ ಆಸಕ್ತಿ ಕಳೆದುಕೊಂಡು ಹೀಗೆ ವ್ಯಕ್ತಿಯು ಉನ್ನತ ಮಟ್ಟಕ್ಕೆ ಏರಬಹುದು.

ಸದಾ ದೇವೋತ್ತಮನ ಭಕ್ತಿಸೇವೆಯಲ್ಲಿ ತೊಡಗಿರಬೇಕೆಂದು ಸನತ್ ಕುಮಾರನು ರಾಜನಲ್ಲಿ ಮನವಿ ಮಾಡಿಕೊಂಡರು. ರಾಜನು ಈ ಆದೇಶವನ್ನು ಸ್ವೀಕರಿಸಿದನು. ಆದುದರಿಂದ ರಾಜ ವೈಭವದ ಮಧ್ಯೆ ಇದ್ದರೂ ಅವನಿಗೆ ಸಾಮಾನ್ಯ ಬದುಕಿನಲ್ಲಿ ನಿರಾಸಕ್ತಿ ಮತ್ತು ಆಧ್ಯಾತ್ಮಿಕ ಉನ್ನತಿ ಸಾಧ್ಯವಾಯಿತು.

ಪೃಥು ಮಹಾರಾಜನು ಅರ್ಚಿಯಿಂದ ಐವರು ಗಂಡು ಮಕ್ಕಳನ್ನು ಪಡೆದನು. ಅವನು ಉತ್ತಮ ಆಡಳಿತದಿಂದ ಪ್ರಜೆಗಳಿಗೆ ಆನಂದ ಉಂಟುಮಾಡಿದನು ಮತ್ತು ತನ್ನ ಸದ್ಗುಣಗಳಿಂದಾಗಿ ವಿಶ್ವಾದ್ಯಂತ ಜನಪ್ರಿಯನಾದನು. ಬದುಕಿನ ಅಂತ್ಯದಲ್ಲಿ ಅವನು ತನ್ನ ಮಕ್ಕಳಿಗೆ ಅಧಿಕಾರವನ್ನು ವಹಿಸಿಕೊಟ್ಟು ಪತ್ನಿಯೊಂದಿಗೆ ಅರಣ್ಯಕ್ಕೆ ಹೊರಟು ಹೋದನು. ವನದಲ್ಲಿ ಅವನು ವಾನಪ್ರಸ್ಥಾಶ್ರಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದನು. ಅವನು ಆಡಳಿತವನ್ನು ನಡೆಸಿದಷ್ಟೇ ಗಂಭೀರವಾಗಿ ತೀವ್ರ ನೇಮನಿಷ್ಠೆಯನ್ನೂ ಕೈಗೊಂಡನು. ಅವನು ಎಲೆ ಮತ್ತು ಹಣ್ಣುಗಳನ್ನು ಮಾತ್ರ ಸ್ವೀಕರಿಸುತ್ತಿದ್ದನು. ಕೊನೆಗೆ ಗಾಳಿಯಿಂದ ಮಾತ್ರ ಜೀವಿಸಿದ್ದನು. ಅವನ ನೇಮ ನಿಷ್ಠೆಗೆ ಪತ್ನಿ ಅರ್ಚಿಯು ನೆರವು ನೀಡಿದಳು. ಪತಿ ಸೇವೆಯಲ್ಲಿ ಆನಂದ ಕಂಡುಕೊಂಡಿದ್ದ ಅರ್ಚಿಗೆ ಅರಣ್ಯದಲ್ಲಿ ಏನೂ ಕಷ್ಟವಾಗಲಿಲ್ಲ.

ದಿನದ ೨೪ ಗಂಟೆಯು ದೇವೋತ್ತಮನನ್ನು ಪೂಜಿಸುತ್ತ ಮತ್ತು ಕಠಿಣ ತಪಸ್ಸು, ವ್ರತಾಚರಣೆಗಳಿಂದ ಪೃಥುವು ಆಧ್ಯಾತ್ಮಿಕ ಜೀವನದಲ್ಲಿ ಸ್ಥಿತನಾದನು. ಕಾಲ ಕ್ರಮೇಣ ಪೃಥು ಮಹಾರಾಜನಿಗೆ ತನ್ನ ಮನಸ್ಸನ್ನು ಶ್ರೀ ಕೃಷ್ಣನ ಪಾದಕಮಲದಲ್ಲಿ ನೆಡುವುದು ಸಾಧ್ಯವಾಯಿತು. ಯೋಗದ ಮೂಲಕ ಅವನು ತನ್ನ ಆತ್ಮವನ್ನು ತನ್ನ ಕಪೋಲಕ್ಕೆ (ತಲೆಬುರುಡೆಯ ಮೇಲಕ್ಕೆ) ತಂದ. ತನ್ನ ದೇಹದ ಅನೇಕ ವಸ್ತುಗಳನ್ನು ಪ್ರಕೃತಿಯ ವಸ್ತುಗಳೊಂದಿಗೆ ವಿಲೀನಗೊಳಿಸಿ ಅವನು ತನ್ನ ದೇಹವನ್ನು ತ್ಯಜಿಸಿದ.

ರಾಣಿ ಅರ್ಚಿಯು ತನ್ನ ಪತಿಯ ದೇಹವನ್ನು ಗಿರಿಯ ಮೇಲ್ಭಾಗದಲ್ಲಿ, ಜ್ವಲಿಸುವ ಚಿತೆಯ ಮೇಲೆ ಇಟ್ಟಳು. ಶ್ರೀಲ ಪ್ರಭುಪಾದರು ವ್ಯಾಖ್ಯಾನಿಸುತ್ತಾರೆ, “ತನ್ನ ಪತಿ ಮೃತನಾಗಿಲ್ಲ ಎಂಬುವುದು ರಾಣಿಗೆ ತಿಳಿದಿತ್ತು… ಸಾಮಾನ್ಯವಾಗಿ ಸಾವು ಎಂದು ಕರೆಯುವ ಪ್ರಕ್ರಿಯೆಯಾದ, ಜೀವಿಯು ಒಂದರಿಂದ ಮತ್ತೊಂದಕ್ಕೆ ದೇಹಾಂತರಗೊಂಡಾಗ ವಿವೇಕಿಯು ಗೋಳಾಡುವುದಿಲ್ಲ. ಜೀವಿಯು ಸತ್ತಿಲ್ಲ, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರಗೊಳ್ಳುತ್ತಿದ್ದಾನೆ ಎನ್ನುವುದು ಅವನಿಗೆ ಗೊತ್ತು.”

ತನ್ನ ಪತಿಯ ದೇಹವನ್ನು ಅಗ್ನಿಯಲ್ಲಿ ಇಟ್ಟ ಮೇಲೆ ಅರ್ಚಿಯೂ ಜ್ವಾಲೆಯನ್ನು ಪ್ರವೇಶಿಸಿದಳು. ಪತಿನಿಷ್ಠ ಪತ್ನಿಯ ಧೈರ್ಯವನ್ನು ಗಮನಿಸಿದ ದೇವತೆಗಳು ಮತ್ತು ಅವರ ಸತಿಯರು ಪುಷ್ಪಮಳೆಗರೆದರು ಮತ್ತು ಪ್ರಾರ್ಥಿಸಿದರು. ದೇವತೆಗಳ ಪತ್ನಿಯರು ನುಡಿದರು, “ರಾಣಿ ಅರ್ಚಿಗೆ ಜಯವಾಗಲಿ. ನೋಡಿ, ಈ ಪತಿವ್ರತೆ ಅರ್ಚಿಯನ್ನು. ಗ್ರಹಿಸಲಾಗದ ತನ್ನ ಪುಣ್ಯ ಕಾರ್ಯದಿಂದ ಅವಳು ತನ್ನ ಪತಿಯನ್ನು ಮೇಲಿನ ಲೋಕಕ್ಕೂ ಅನುಸರಿಸುತ್ತಿದ್ದಾಳೆ.”

ವೈಕುಂಠ ವಾಸ

ರಾಜ ಪೃಥು ಮತ್ತು ರಾಣಿ ಅರ್ಚಿ ಅಲೌಕಿಕ ವಿಮಾನದಲ್ಲಿ ಅಲೌಕಿಕ ಲೋಕ ವೈಕುಂಠವನ್ನು ತಲಪಿದರು. ಅವರ ಲೌಕಿಕ ದೇಹಗಳನ್ನು ಚಿತೆಯ ಬೆಂಕಿಯು ಆಹುತಿ ತೆಗೆದುಕೊಂಡಿತು.

ಭಾಗವತದಲ್ಲಿ ಈ ಇತಿಹಾಸವನ್ನು ವರ್ಣಿಸುತ್ತ ಮೈತ್ರೇಯ ಮುನಿಗಳು ಹೇಳಿದ್ದಾರೆ, “ರಾಜ ಪೃಥುವಿನ ಸದ್ಗುಣಗಳನ್ನು ಶ್ರದ್ಧೆಯಿಂದ ಮತ್ತು ದೃಢವಾಗಿ ಯಾರು ವಿವರಿಸುತ್ತಾರೆಯೋ ಅಂತಹ ವ್ಯಕ್ತಿಯು ಸ್ವತಃ ಅದನ್ನು ಓದುವನೋ ಅಥವಾ ಇತರರು ಕೇಳಲು ನೆರವಾಗುವನೋ, ಹೇಗಾದರೂ ಸರಿ ಅವನು ಪೃಥು ಮಹಾರಾಜನು ಪಡೆದ ಗ್ರಹವನ್ನೇ ತಾನೂ ಪಡೆಯುವನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅಂತಹ ವ್ಯಕ್ತಿಯೂ ವೈಕುಂಠಕ್ಕೆ ಹಿಂದಿರುಗುವನು.”
Leave a Reply

Your email address will not be published. Required fields are marked *