Search
Monday 18 November 2019
  • :
  • :

ಯಕ್ಷ ಪ್ರಶ್ನೆ (ಭಾಗ 2)

ಪ್ರಶ್ನೆ ೭೮. ಒಬ್ಬನು ಅನುಸರಿಸಬೇಕಾದ ಮಾರ್ಗ ಯಾವುದು?

ಉತ್ತರ: ಸದ್ಗುಣಿಯು ನೀಡಿದ ಸರಿಯಾದ ಮಾರ್ಗದರ್ಶನವನ್ನು ಒಬ್ಬನು ಅನುಸರಿಸಬೇಕಾಗುತ್ತದೆ.

ಪ್ರಶ್ನೆ ೭೯. ಯಾವುದನ್ನು ಜಲವೆಂದು ಕರೆಯುತ್ತಾರೆ?

ಉತ್ತರ: ಆಕಾಶವನ್ನು ಜಲವೆಂದು ಕರೆಯುತ್ತಾರೆ.

ಪ್ರಶ್ನೆ ೮೦. ಯಾವುದನ್ನು ಆಹಾರವೆಂದು ಕರೆಯುತ್ತಾರೆ?

ಉತ್ತರ: ಹಸುವನ್ನು  (ಹಾಲು, ಮೊಸರು, ಇತ್ಯಾದಿ) ಆಹಾರವೆಂದು ಕರೆಯುತ್ತಾರೆ.

ಪ್ರಶ್ನೆ ೮೧. ಯಾವುದನ್ನು ವಿಷವೆಂದು ಕರೆಯುತ್ತಾರೆ?

ಉತ್ತರ: ಇಷ್ಟಾರ್ಥ ಕೋರಿಕೆಯನ್ನು ವಿಷವೆಂದು ಕರೆಯುತ್ತಾರೆ.

ಪ್ರಶ್ನೆ ೮೨. ಯಾವ ಸಮಯವು ಶ್ರಾದ್ಧವನ್ನು ಮಾಡಲು ಉಪಯುಕ್ತವಾದುದು?

ಉತ್ತರ: ಯೋಗ್ಯವಾದ ಬ್ರಾಹ್ಮಣನು ದೊರೆಯುವ ಸಮಯವು ಉಪಯುಕ್ತ.

ಪ್ರಶ್ನೆ ೮೩. ತಪಸ್ಸಿನ ಲಕ್ಷಣ ಏನು? ದಮ (ಆತ್ಮ ಸಂಯಮ)ದ ಲಕ್ಷಣವೇನು? ಕ್ಷಮೆಯ ಪ್ರಮುಖ ಲಕ್ಷಣಗಳೇನು? ಮತ್ತು ಋಃ (ನಾಚಿಕೆ)ಯ ಲಕ್ಷಣವೇನು?

ಉತ್ತರ: ಸ್ವಧರ್ಮದ ಅನುಸರಣೆ ತಪಸ್ಸಿನ ಲಕ್ಷಣ. ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸುವುದು ದಮ (ಆತ್ಮ ಸಂಯಮ)ದ ಲಕ್ಷಣ. ವೈರತ್ವವನ್ನು ಸಹಿಸುವುದು ಕ್ಷಮೆ ಎನಿಸುವುದು ಮತ್ತು ನೀಚ ಕಾರ್ಯಗಳನ್ನು ಮಾಡದಿರುವುದೇ ಋಃ (ನಾಚಿಕೆ)ಯ ಲಕ್ಷಣ.

ಪ್ರಶ್ನೆ ೮೪. ಜ್ಞಾನವೆನ್ನುವುದು ಯಾವುದು?

ಉತ್ತರ: ಭಗವತ್ ತತ್ತ್ವವನ್ನು ಅರ್ಥಮಾಡಿಕೊಳ್ಳುವುದೇ ಜ್ಞಾನ.

ಪ್ರಶ್ನೆ ೮೫. ಯಾವುದನ್ನು ಶಮ ಎನ್ನಲಾಗುವುದು?

ಉತ್ತರ: ಮನಶ್ಶಾಂತಿಯನ್ನು ಶಮ ಎನ್ನಲಾಗುವುದು.

ಪ್ರಶ್ನೆ ೮೬. ಯಾವುದನ್ನು ದಯೆ ಎಂದು ಕರೆಯುತ್ತಾರೆ?

ಉತ್ತರ: ಎಲ್ಲರ ಸುಖವನ್ನು ಬಯಸುವುದನ್ನು ದಯೆ ಎಂದು ಕರೆಯುತ್ತಾರೆ.

ಪ್ರಶ್ನೆ ೮೭. ಸರಳತೆ ಎನ್ನುವುದು ಯಾವುದು?

ಉತ್ತರ: ಸಮಚಿತ್ತತೆಯನ್ನು ಸರಳತೆ ಎನ್ನಲಾಗಿದೆ.

ಪ್ರಶ್ನೆ ೮೮. ಮಾನವರು ಜಯಿಸಲಾಗದ ಶತ್ರು ಯಾರು?

ಉತ್ತರ: ಕೋಪವು ಮಾನವರು ಜಯಿಸಲಾಗದ ಶತ್ರು.

ಪ್ರಶ್ನೆ ೮೯. ಮನುಷ್ಯರಲ್ಲಿರುವ ಶಾಶ್ವತವಾದ ರೋಗ ಯಾವುದು?

ಉತ್ತರ: ಲೋಭವೇ ಮನುಷ್ಯರಲ್ಲಿರುವ ಶಾಶ್ವತವಾದ ರೋಗ.

ಪ್ರಶ್ನೆ ೯೦. ಎಂತಹ ಮನುಷ್ಯನು ಸಾಧುವೆಂದು ಪರಿಗಣಿತನಾಗುತ್ತಾನೆ?

ಉತ್ತರ: ಎಲ್ಲ ಜೀವಿಗಳ ಹಿತವನ್ನು ಬಯಸುವವನೇ ಸಾಧು.

ಪ್ರಶ್ನೆ ೯೧. ಯಾರು ಅಸಾಧು ಎಂದು ಪರಿಗಣಿತನಾಗುತ್ತಾನೆ?

ಉತ್ತರ: ನಿರ್ದಯಿಯು ಅಸಾಧುವೆಂದು ಪರಿಗಣಿತನಾಗುತ್ತಾನೆ.

ಪ್ರಶ್ನೆ ೯೨. ಯಾವುದನ್ನು ಮೋಹವೆಂದು ಕರೆಯುತ್ತಾರೆ?

ಉತ್ತರ: ಧಾರ್ಮಿಕ ಜ್ಞಾನ ಇಲ್ಲದಿರುವುದನ್ನು ಮೋಹವೆಂದು ಕರೆಯುತ್ತಾರೆ.

ಪ್ರಶ್ನೆ ೯೩. ಯಾವುದನ್ನು ಅಹಂಕಾರವೆಂದು ಹೇಳಲಾಗುತ್ತದೆ?

ಉತ್ತರ: ಒಬ್ಬ ವ್ಯಕ್ತಿಯು ತನ್ನ ಬಗ್ಗೆ ತಾನೇ ಅತಿಯಾಗಿ ಹೇಳಿಕೊಳ್ಳುತ್ತಿದ್ದರೆ ಅದನ್ನು ಅಹಂಕಾರವೆಂದು ಹೇಳಲಾಗುತ್ತದೆ.

ಪ್ರಶ್ನೆ ೯೪. ಆಲಸ್ಯವೆಂದರೇನು?

ಉತ್ತರ: ಧರ್ಮದ ಬಗ್ಗೆ ಕ್ರಿಯಾಶೀಲತೆ ಇಲ್ಲದಿರುವುದೇ ಆಲಸ್ಯ.

ಪ್ರಶ್ನೆ ೯೫. ಶೋಕ ಎಂದರೇನು?

ಉತ್ತರ: ಅಜ್ಞಾನವೇ ಶೋಕ.

ಪ್ರಶ್ನೆ ೯೬. ಯಾವುದನ್ನು ಸ್ಥಿರತೆ/ನಿಶ್ಚಲತೆ ಎಂದು ಋಷಿಗಳು ಹೇಳುತ್ತಾರೆ?

ಉತ್ತರ: ಸ್ವಧರ್ಮದಲ್ಲಿನ ಸ್ಥಿರತೆಯೇ ಸ್ಥಿರತೆಯಾಗಿದೆ.

ಪ್ರಶ್ನೆ ೯೭. ಯಾವುದು ತಾಳ್ಮೆ ಎಂದು ಪರಿಗಣಿತವಾಗಿದೆ?

ಉತ್ತರ: ಇಂದ್ರಿಯ ನಿಗ್ರಹವೇ ತಾಳ್ಮೆ.

ಪ್ರಶ್ನೆ ೯೮. ಅತ್ಯುತ್ತಮ ಸ್ನಾನ ಯಾವುದು?

ಉತ್ತರ: ಮನಸ್ಸಿನ ಮಲದ ತ್ಯಾಗವೇ ಅತ್ಯುತ್ತಮ ಸ್ನಾನ.

ಪ್ರಶ್ನೆ ೯೯. ಯಾವುದಕ್ಕೆ ದಾನ ಎಂದು ಕರೆಯುತ್ತಾರೆ?

ಉತ್ತರ: ಸಕಲ ಜೀವಿಗಳ ರಕ್ಷಣೆಯೇ ದಾನ.

ಪ್ರಶ್ನೆ ೧೦೦. ಯಾರನ್ನು ಪಂಡಿತನೆಂದು ಪರಿಗಣಿಸಲಾಗುತ್ತದೆ?

ಉತ್ತರ: ಧರ್ಮವನ್ನು ತಿಳಿದವನೇ ಪಂಡಿತ.

ಪ್ರಶ್ನೆ ೧೦೧. ಯಾರನ್ನು ನಾಸ್ತಿಕನೆಂದೂ ಮತ್ತು ಯಾರನ್ನು ಮೂರ್ಖನೆಂದೂ ಕರೆಯಲಾಗುತ್ತದೆ?

ಉತ್ತರ: ನಾಸ್ತಿಕನೇ ಮೂರ್ಖ.

ಪ್ರಶ್ನೆ ೧೦೨. ಕಾಮ ಎಂದರೇನು?

ಉತ್ತರ: ಸಂಸಾರದ ಕಾರಣವನ್ನು ಕಾಮ ಎನ್ನುತ್ತಾರೆ.

ಪ್ರಶ್ನೆ ೧೦೩. ಮಾತ್ಸರ್ಯ ಎಂದರೆ ಏನು?

ಉತ್ತರ: ಹೃತ್ತಾಪವನ್ನು ಮಾತ್ಸರ್ಯ ಎನ್ನುತ್ತಾರೆ.

ಪ್ರಶ್ನೆ ೧೦೪. ಯಾವುದನ್ನು ಅಹಂಕಾರ ಎಂದು ಕರೆಯುತ್ತಾರೆ?

ಉತ್ತರ: ಮೂರ್ಖತನದಿಂದ ಕೂಡಿದ ಅಜ್ಞಾನವನ್ನು ಅಹಂಕಾರ ಎಂದು ಕರೆಯುತ್ತಾರೆ.

ಪ್ರಶ್ನೆ ೧೦೫. ಯಾವುದನ್ನು ದಂಭ (ಮಿಥ್ಯಾತನ) ಎಂದು ಕರೆಯುತ್ತಾರೆ?

ಉತ್ತರ: ಆಡಂಬರದ ಧರ್ಮವನ್ನು ದಂಭ (ಮಿಥ್ಯಾತನ) ಎಂದು ಕರೆಯುತ್ತಾರೆ.

ಪ್ರಶ್ನೆ ೧೦೬. ದೈವ ಎಂದು ಏನನ್ನು ಕರೆಯುತ್ತಾರೆ?

ಉತ್ತರ: ದಾನದ ಫಲವನ್ನು ದೈವ ಎಂದು ಕರೆಯುತ್ತಾರೆ.

ಪ್ರಶ್ನೆ ೧೦೭. ದುಷ್ಟತನ ಎಂದರೇನು?

ಉತ್ತರ: ಬೇರೆಯವರನ್ನು ದೂಷಿಸುವುದು ದುಷ್ಟತನ.

ಪ್ರಶ್ನೆ ೧೦೮. ಧರ್ಮ, ಅರ್ಥ ಮತ್ತು ಕಾಮಗಳು ಪರಸ್ಪರ ವಿರೋಧಿಗಳು. ಇವುಗಳನ್ನು ಒಟ್ಟುಗೂಡಿಸುವುದು ಹೇಗೆ?

ಉತ್ತರ: ಪತ್ನಿಯು ಧರ್ಮಕಾರ್ಯಗಳಿಗೆ ಅಡ್ಡಿಯಾಗದಿದ್ದಾಗ ಧರ್ಮ, ಅರ್ಥ ಮತ್ತು ಕಾಮಗಳನ್ನು ಒಂದುಗೂಡಿಸಬಹುದು.

ಪ್ರಶ್ನೆ ೧೦೯. ನಿರಂತರ ನರಕವಾಸವು ಯಾರಿಗೆ ಪ್ರಾಪ್ತವಾಗುತ್ತದೆ?

ಉತ್ತರ: ಬಡ ಬ್ರಾಹ್ಮಣನೊಬ್ಬನನ್ನು ಯಾರು ಸ್ವತಃ ಕರೆದು ಅನಂತರ ಕೊಡಲು ಏನೂ ಇಲ್ಲ ಎನ್ನುತ್ತಾರೋ ಅವರು ನಿರಂತರವಾಗಿ ನರಕದಲ್ಲಿ ವಾಸಿಸುತ್ತಾರೆ. ವೇದ, ಧರ್ಮಶಾಸ್ತ್ರ ಇವು ಸುಳ್ಳು ಎಂದು ಆಪಾದಿಸುವವನು, ವೇದಾಧ್ಯಯನ ಮಾಡಿ ಅದರಲ್ಲಿ ಹೇಳಿರುವಂತೆ ನಡೆದುಕೊಳ್ಳುವ ಬ್ರಾಹ್ಮಣನನ್ನು ನಿಂದಿಸುವವನು, ದೇವರಲ್ಲಿ, ದೈವತ್ವದಲ್ಲಿ ನಂಬಿಕೆ ಇರುವವರನ್ನು, ಗತಿಸಿದ ಪಿತೃಗಳಿಗೆ ಮಾಡಬೇಕಾದ ಶ್ರಾದ್ಧ ವಿಧಿಗಳನ್ನು ಮಾಡುವವರನ್ನು `ಅವು ಸುಳ್ಳು’ ಎಂದು ಹೇಳಿ ಆಪಾದಿಸುವವನು ನಿರಂತರ ನರಕಿಯಾಗುತ್ತಾನೆ. ಧನವಿದ್ದರೂ ಲೋಭದಿಂದ ಯಾರು ಅದನ್ನು ಭೋಗಿಸದೇ, ದಾನವನ್ನೂ ಮಾಡದೇ `ನನ್ನ ಹತ್ತಿರ ಏನೂ ಇಲ್ಲ’ ಎಂದು ಹೇಳುವರೋ ಅಂತಹವರು ನಿರಂತರ ನರಕವಾಸಿಯಾಗುತ್ತಾರೆ.

ಪ್ರಶ್ನೆ ೧೧೦. ಹುಟ್ಟಿನಿಂದಾಗಲೀ, ಉತ್ತಮ ನಡತೆಯಿಂದಾಗಲೀ, ಸ್ವಾಧ್ಯಾಯದಿಂದಾಗಲೀ ಅಥವಾ ವೇದಗಳ ಅಧ್ಯಯನದಿಂದಾಗಲೀ ಒಬ್ಬ ಮನುಷ್ಯನು ಹೇಗೆ ಬ್ರಾಹ್ಮಣನಾಗುತ್ತಾನೆ?

ಉತ್ತರ: ಹುಟ್ಟಿನಿಂದಾಗಲೀ, ಜ್ಞಾನ ಸಂಪಾದನೆಯಿಂದಾಗಲೀ ಒಬ್ಬನು ಬ್ರಾಹ್ಮಣನಾಗಲಾರ. ಸದ್ಗುಣವನ್ನು ಹೊಂದುವುದರಿಂದ ಮಾತ್ರ ದ್ವಿಜತ್ವವನ್ನು ಪಡೆಯಬಹುದು. ಇದರಲ್ಲಿ ಅನುಮಾನವೇ ಇಲ್ಲ. ಒಬ್ಬನು, ಅದರಲ್ಲೂ ಬ್ರಾಹ್ಮಣನಾದವನು, ತನ್ನ ಗುಣವನ್ನು ಬಹು ಜಾಗರೂಕತೆಯಿಂದ ಉಳಿಸಿಕೊಳ್ಳಬೇಕು.  ಯಾರ ನಡತೆಯು ಚೆನ್ನಾಗಿದೆಯೋ ಅವನು  ದುರ್ಬಲನಾಗಲಾರ. ಆದರೆ ಅವನು ಗುಣಹೀನನಾದರೆ ಹತನಾಗುತ್ತಾನೆ. ಉಪಾಧ್ಯಾಯರು, ವಿದ್ಯಾರ್ಥಿಗಳು, ಶಾಸ್ತ್ರಗ್ರಂಥಗಳನ್ನು  ಅಧ್ಯಯನ ಮಾಡುವವರು ಅಕೃತ್ಯಗಳಲ್ಲಿ ತೊಡಗಿದಾಗ ಅಂಥವರು ಅಜ್ಞಾನಿಗಳೆಂದು ಪರಿಗಣಿತರಾಗುತ್ತಾರೆ. ಯಾರು ಸ್ತುತ್ಯರ್ಹ ಚಟುವಟಿಕೆಗಳಲ್ಲಿ ತೊಡಗುವನೊ ಅಂಥವನೇ ಪಂಡಿತನು. ನಾಲ್ಕು ವೇದಗಳನ್ನು ಅಭ್ಯಸಿಸಿದರೂ ಸಹಾ ದುಷ್ಟ ನಡತೆಯುಳ್ಳವನು ಶೂದ್ರರಿಗಿಂತ ಕೀಳು. ಅಗ್ನಿ ಹೋತ್ರಗಳನ್ನು ಮಾಡುತ್ತಾ ತನ್ನ ಇಂದ್ರಿಯಗಳನ್ನು ನಿಗ್ರಹಿಸಿದವನನ್ನು ಬ್ರಾಹ್ಮಣನೆಂದು ಕರೆಯುತ್ತಾರೆ.

ಪ್ರಶ್ನೆ ೧೧೧. ಸಿಹಿ ಮಾತುಗಳನ್ನಾಡುವವನು ಏನನ್ನು ಪಡೆಯುತ್ತಾನೆ?

ಉತ್ತರ: ಸಿಹಿ ಮಾತುಗಳನ್ನಾಡುವವನು ಎಲ್ಲರಿಗೂ ಪ್ರಿಯನಾಗುತ್ತಾನೆ.

ಪ್ರಶ್ನೆ ೧೧೨. ವಿಮರ್ಶೆ ಮಾಡಿದ ಅನಂತರವೇ ಕೆಲಸ ಮಾಡುವವನು ಏನನ್ನು ಪಡೆಯುತ್ತಾನೆ?

ಉತ್ತರ: ವಿಮರ್ಶೆ ಮಾಡಿದ ಅನಂತರವೇ ಕೆಲಸ ಮಾಡುವವನಿಗೆ ಅಧಿಕ ಜಯ ಪ್ರಾಪ್ತಿಯಾಗುತ್ತದೆ.

ಪ್ರಶ್ನೆ ೧೧೩. ಅನೇಕ ಮಿತ್ರರನ್ನು ಹೊಂದಿದವನು ಏನನ್ನು ಪಡೆಯುತ್ತಾನೆ?

ಉತ್ತರ: ಅನೇಕ ಮಿತ್ರರನ್ನು ಹೊಂದಿದವನು ಸುಖದಿಂದ ಜೀವಿಸುತ್ತಾನೆ.

ಪ್ರಶ್ನೆ ೧೧೪. ಧರ್ಮವನ್ನು ಪಾಲಿಸುವವನು ಏನನ್ನು ಪಡೆಯುತ್ತಾನೆ?

ಉತ್ತರ: ಧರ್ಮರತನಾದವನಿಗೆ ಪರಮಪದವು ಲಭಿಸುತ್ತದೆ.

ಪ್ರಶ್ನೆ ೧೧೫. ಸುಖಿಯಾಗಿರುವವರು ಯಾರು ?

ಉತ್ತರ: ಯಾರು ತಮ್ಮ ಮನೆಯಲ್ಲಿ ದಿನದ ಐದು ಅಥವಾ ಆರನೆಯ ಭಾಗದಲ್ಲಿ ಕಾಯಿಪಲ್ಯಗಳನ್ನು ಬೇಯಿಸುತ್ತಾರೋ, ಋಣಮುಕ್ತರಾಗಿರುತ್ತಾರೋ ಮತ್ತು ಪ್ರಯಾಣ ಮಾಡುವುದಿಲ್ಲವೋ ಅವರೇ ಸುಖಿಯಾಗಿರುತ್ತಾರೆ.

ಪ್ರಶ್ನೆ ೧೧೬. ಈ ಜಗತ್ತಿನಲ್ಲಿ ಆಶ್ಚರ್ಯಕರವಾದದ್ದು ಏನು?

ಉತ್ತರ: ಈ ಜಗತ್ತಿನಲ್ಲಿ ಪ್ರತಿನಿತ್ಯವೂ ಅನೇಕ ಜೀವಿಗಳು ಗತಪ್ರಾಣರಾಗಿ ಯಮಪುರಿಗೆ ಹೋಗುತ್ತಿರುವುದು ಕಂಡರೂ ಉಳಿದವರು ಇಲ್ಲಿಯೇ ಶಾಶ್ವತವಾಗಿರಲು ಬಯಸುವುದು ಅತ್ಯಂತ ಆಶ್ಚರ್ಯಕರವಾದ ಸಂಗತಿ.

ಪ್ರಶ್ನೆ ೧೧೭. ಒಬ್ಬನು ಅನುಸರಿಸಬೇಕಾದ ಮಾರ್ಗ ಯಾವುದು?

ಉತ್ತರ: ತರ್ಕ ಮತ್ತು ಚರ್ಚೆಗಳಿಂದ ನಿರ್ದಿಷ್ಟವಾದ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ವೈದಿಕ ಸಾಹಿತ್ಯಗಳು ಒಂದಕ್ಕೊಂದು ವಿರುದ್ಧವಾದ ವಿಚಾರಗಳನ್ನು ಒಳಗೊಂಡಿರುವಂತೆ ಕಾಣಿಸುತ್ತವೆ. ಯಾವ ವ್ಯಕ್ತಿಯು ಬೇರೆಯವರ ಅಭಿಪ್ರಾಯಕ್ಕಿಂತ ವಿಭಿನ್ನವಾದ ಅಭಿಪ್ರಾಯವನ್ನು ಹೊಂದಿರುವುದಿಲ್ಲವೋ ಅವನು ಋಷಿ ಆಗಲಾರ. ಧರ್ಮದ ಬಗೆಗಿನ ಸತ್ಯಾಂಶವು ಮಹಾನ್ ಭಕ್ತರ ಹೃದಯಗಳಲ್ಲಿ ಅಡಗಿದೆ. ಆದ್ದರಿಂದ ಅಂತಹ ಮಹಾನ್ ಭಕ್ತರು ಅನುಸರಿಸಿದ ಮಾರ್ಗವೇ ಇತರರು ಅನುಸರಿಸಬೇಕಾದ ಮಾರ್ಗವಾಗಿದೆ.

ಪ್ರಶ್ನೆ ೧೧೮. ನಿಜವಾದ ವಾರ್ತೆ ಯಾವುದು?

ಉತ್ತರ: ಮಹಾಮೋಹದಿಂದ ತುಂಬಿರುವ ಈ ಜಗತ್ತೆಂಬ ಬಾಣಲೆಯಲ್ಲಿ ಸೂರ್ಯನನ್ನು ಅಗ್ನಿಯಾಗಿ, ಹಗಲು ರಾತ್ರಿಗಳನ್ನು ಇಂಧನವಾಗಿ ಮತ್ತು ಮಾಸಗಳನ್ನು ಸೌಟಾಗಿ ಉಪಯೋಗಿಸಿಕೊಂಡು ಕಾಲವು ಸಮಸ್ತ ಜೀವಿಗಳನ್ನು ಬೇಯಿಸುತ್ತಿದೆ. ಇದೇ ವಾರ್ತೆ.

ಯುಧಿಷ್ಠಿರನ ಉತ್ತರಗಳಿಂದ ಸಂತೃಪ್ತನಾದ ಯಮಧರ್ಮನು ತನ್ನ ಪ್ರಶ್ನೆಗಳನ್ನು ಮತ್ತೂ ಮುಂದುವರಿಸುತ್ತಾನೆ.

ಪ್ರಶ್ನೆ ೧೧೯. ಪುರುಷನನ್ನು ಹೇಗೆ ಗುರುತಿಸುತ್ತಾರೆ?

ಉತ್ತರ: ಒಬ್ಬ ಮನುಷ್ಯನ ಪುಣ್ಯ ಕಾರ್ಯಗಳ ವರದಿಯು ಸ್ವರ್ಗ ಮತ್ತು ಭೂಮಿ ಎರಡನ್ನೂ ತಲಪುತ್ತದೆ. ಎಲ್ಲಿಯವರೆಗೆ ಅದೇ ವರದಿ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಅವನನ್ನು ಪುರುಷನೆಂದು ಕರೆಯಲಾಗುತ್ತದೆ.

ಪ್ರಶ್ನೆ ೧೨೦. ಯಾವ ಮನುಷ್ಯನು ಎಲ್ಲಾ ರೀತಿಯಿಂದಲೂ ಧನಿಯಾಗಿರುತ್ತಾನೆ?

ಯಾರು ಪ್ರಿಯ ಮತ್ತು ಅಪ್ರಿಯ ಸಂದರ್ಭಗಳಲ್ಲಿ , ಸುಖ ಮತ್ತು ದುಃಖಗಳಲ್ಲಿ ಹಾಗೂ ಭೂತ, ವರ್ತಮಾನ, ಭವಿಷ್ಯತ್ತುಗಳಲ್ಲಿ ಸಮನಾಗಿರುವನೋ ಅಂಥವನು ಎಲ್ಲ ರೀತಿಯಿಂದಲೂ ಧನಿಯಾಗಿರುತ್ತಾನೆ.

ಪಾಂಡವಾಗ್ರಜನಾದ ಧರ್ಮಜನ ಉತ್ತರಗಳಿಂದ ತೃಪ್ತನಾದ ಯಮಧರ್ಮನು, `ಓ ರಾಜನೇ, ಎಲ್ಲವನ್ನೂ ಬಲ್ಲ ನೀನು ನಿಜವಾಗಿಯೂ ಐಶ್ವರ್ಯವಂತ ಯಾರು ಎಂದು ಸರಿಯಾಗಿ ಉತ್ತರಿಸಿರುವೆ. ಹೇಳು, ನಿನ್ನ ತಮ್ಮಂದಿರಲ್ಲಿ ಯಾರಿಗೆ ಮರಳಿ ಜೀವವನ್ನು ನೀಡಲಿ?’ ಎನ್ನುತ್ತಾನೆ. ಅದಕ್ಕೆ, `ನಕುಲನು ಬದುಕಲಿ’ ಎಂಬುದು ಧರ್ಮರಾಜನ ಬಿನ್ನಹವಾಗುತ್ತದೆ. ನಿನಗೆ ಅತಿ ಪ್ರಿಯನಾದ ಭೀಮಸೇನನನ್ನೂ, ಪ್ರಧಾನ ಬೆಂಬಲಿಗನಾದ ಅರ್ಜುನನನ್ನೂ ಬಿಟ್ಟು ಮಲತಾಯಿಯ ಮಗನಾದ ನಕುಲನನ್ನೇಕೆ ಬದುಕಿಸಲು ಕೋರುವೆ? ಎಂಬ ಯಮಧರ್ಮನ ಪ್ರಶ್ನೆಗೆ ಧರ್ಮರಾಜನ ಉತ್ತರವು ಸಾರ್ವಕಾಲಿಕ ಸತ್ಯವಾಗಿದೆ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ.

               ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ |

                ತಸ್ಮಾತ್ ಧರ್ಮಂ ನ ತ್ಯಜಾಮಿ ಮಾ ನೋ ಧರ್ಮೋ ಹತೋ ಅವಧಿತ್ ||

ಧರ್ಮದ ಹತ್ಯೆ ಮಾಡುವವರು ಧರ್ಮದಿಂದಲೇ ಹತರಾಗುತ್ತಾರೆ. ಧರ್ಮವನ್ನು ರಕ್ಷಿಸಿದವರು ಧರ್ಮದಿಂದ ರಕ್ಷಿತರಾಗುತ್ತಾರೆ. ಆದ್ದರಿಂದ ನಾನು ಧರ್ಮವನ್ನು ತ್ಯಜಿಸಲಾರೆ.

                ಅನೃಶಂಸ್ಯಂ ಪರೋಧರ್ಮ ಪರಮಾರ್ಥಾಚ್ಚ ಮೇ ಮತಂ |

                ಅನೃಶಂಸ್ಯಂ ಚಿಕೀರ್ಷ್ಯಾಮಿ ನಕುಲೋಪಕ್ಷ ಜೀವತು ||

ಪರಮಾರ್ಥಕ್ಕಿಂತ ಅಹಿಂಸೆಯೇ ದೊಡ್ಡದು ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ  ನಕುಲನು ಬದುಕಲಿ ಎಂಬುದು ಧರ್ಮಜನ ಮಾತು.

ಇದನ್ನು ಪ್ರತಿವಾದಿಸುತ್ತಾ ರಾಜನಾದವನು ಸದ್ಗುಣವಂತನಿರಬೇಕೆಂದೂ, ತಾಯಿಯರಾದ ಕುಂತಿ ಮತ್ತು ಮಾದ್ರಿಯರಿಬ್ಬರೂ ಪುತ್ರರನ್ನು ಹೊಂದಿರಬೇಕೆಂದೂ. ತಾನು ಇಬ್ಬರಲ್ಲೂ ಯಾವುದೇ ಭೇದ ಭಾವವನ್ನು ಹೊಂದಿಲ್ಲವೆಂದೂ ಧರ್ಮರಾಜನು ಹೇಳುವುದರೊಂದಿಗೆ ನಕುಲನಿಗೆ ಜೀವದಾನ ಮಾಡುವಂತೆ ಕೇಳಿಕೊಳ್ಳುತ್ತಾನೆ. ಅವನ ಈ ಧರ್ಮ ಮಾರ್ಗಕ್ಕೆ ಮನಸೋತ ಯಮಧರ್ಮನು ಗತಪ್ರಾಣರಾದ ನಾಲ್ವರನ್ನೂ ಬದುಕಿಸಿ ವರಗಳನ್ನು ನೀಡಲು ಮುಂದಾಗುತ್ತಾನೆ.

ಬ್ರಾಹ್ಮಣನ ಅರಣಿಗಳನ್ನು ನಾಶವಾಗದಂತೆ ಕಾಪಾಡಬೇಕೆಂಬ ಧರ್ಮರಾಯನ ಮಾತಿಗೆ ತಾನೇ `ಜಿಂಕೆಯ ರೂಪದಲ್ಲಿ ಆ ಅರಣಿಗಳನ್ನು ತೆಗೆದುಕೊಂಡು ಹೋಗಿದ್ದಾಗಿ ತಿಳಿಸಿದ ಯಮಧರ್ಮನು ಮತ್ತೊಂದು ವರವನ್ನು ಕೇಳುವಂತೆ ತಿಳಿಸಿದಾಗ ಹನ್ನೆರಡು ವರ್ಷಗಳ ಅರಣ್ಯವಾಸವು ಕೊನೆಗೊಳ್ಳುತ್ತಿರುವುದಾಗಿಯೂ, ಮುಂಬರುವ ವರ್ಷ ಅಜ್ಞಾತವಾಗಿರಬೇಕಾಗಿರುವುದರಿಂದ ಪಾಂಡವರನ್ನು ಯಾರೂ ಗುರುತಿಸದ ಹಾಗೆ ವರವನ್ನು ಕರುಣಿಸಲು ಕೋರುತ್ತಾನೆ ಯುಧಿಷ್ಠಿರ. ಆಗ ವಿರಾಟ ನಗರಕ್ಕೆ ಹೋಗಿ ಒಂದು ವರ್ಷದ ಅಜ್ಞಾತವಾಸವನ್ನು ಮುಗಿಸಲು ಹೇಳಿದ ಯಮಧರ್ಮನು ಅವರೆಲ್ಲರಿಗೂ ಆ ಅವಧಿಯಲ್ಲಿ ಇಚ್ಛಾರೂಪಿಗಳಾಗುವಂತೆ ವರವನ್ನು ನೀಡಿ ಬ್ರಾಹ್ಮಣನ ಅರಣಿಗಳನ್ನು ಹಿಂತಿರುಗಿಸುತ್ತಾನೆ. ಅವುಗಳೊಂದಿಗೆ ಬ್ರಾಹ್ಮಣನ ಕುಟೀರಕ್ಕೆ ಹಿಂತಿರುಗಿದ ಪಾಂಡವರು ಅರಣಿಗಳನ್ನು ಅವನಿಗೆ ಹಿಂದಿರುಗಿಸಿ ಅಲ್ಲಿಂದ ಬೀಳ್ಕೊಂಡು ಮುಂದೆ ಬರುವ ಅಜ್ಞಾತವಾಸದ ಒಂದು ವರ್ಷವನ್ನು ಕಳೆಯಲು `ಯಮಧರ್ಮ’ನ ಸೂಚನೆಯಂತೆ ವಿರಾಟನಗರದ ಕಡೆಗೆ ನಡೆಯುತ್ತಾರೆ ಎಂಬಲ್ಲಿನ `ಯಕ್ಷಪ್ರಶ್ನೆ’ಯ ಪ್ರಸಂಗವನ್ನು ಒಳಗೊಂಡಿರುವ ಅರಣಿಯ ಪರ್ವದೊಂದಿಗೆ ಪಾಂಡವರ ವನವಾಸವೂ ಸಹ ಮುಕ್ತಾಯಗೊಳ್ಳುತ್ತದೆ.

               ಇದಂ ಸಮುತ್ಥಾನಸಮಾಗತಮ್ ಮಹತ್ |

                                    ಪಿತುಶ್ಚ ಪುತ್ರಸ್ಯೈ ಚ ಕೀರ್ತಿವರ್ಧನಂ ||

                ಪಠನ್ ನರಃ ಸ್ಯಾದ್ ವಿಜಿತೇಂದ್ರಿಯೋ ವಶೀ |

                                   ಸಪುತ್ರ ಪೌತ್ರಃ ಶತವರ್ಷ ಭಾಗ್ ಭವೇತ್ ||

ಪಾಂಡವರಿಗೆ ಮರುಜೀವ ಬಂದ ಮತ್ತು ಪಿತಾಪುತ್ರರ (ಯಮಧರ್ಮ ಮತ್ತು ಯುಧಿಷ್ಠಿರ) ಭೇಟಿಯ ಈ ಮಹಾನ್ ಮತ್ತು ಕೀರ್ತಿವರ್ಧಕ ಕಥೆಯನ್ನು ಓದಿದವನು ತನ್ನ ಇಂದ್ರಿಯಗಳನ್ನು ಜಯಿಸಿ ಅವುಗಳನ್ನು ತನ್ನ ವಶದಲ್ಲಿಟ್ಟುಕೊಂಡು ಮಕ್ಕಳು, ಮೊಮ್ಮಕ್ಕಳ ಜೊತೆ ನೂರು ವರುಷ ದೀರ್ಘಕಾಲ ಬದುಕುತ್ತಾನೆ.

                ನ ಚಾಪ್ಯಧರ್ಮೇ ನ ಸುಹೃದ್ವಿಭೇದನೇ |

                                  ಪರಸ್ವಹಾರೇ ಪರದಾರಮರ್ಶನೇ ||

                ಕದರ್ಯಭಾವೇ ನ ರಮೇನ್ಮನಃ ಸದಾ |

                                   ನೃಣಾಂ ಸದಾಖ್ಯಾನಮಿದಂ ವಿಜಾನತಾಂ ||

ಈ ಆಖ್ಯಾನವನ್ನು ತಿಳಿದುಕೊಂಡಿರುವವರು ಅಧರ್ಮ, ಸ್ನೇಹ ಮುರಿಯುವುದು, ಪರರ ಆಸ್ತಿಯನ್ನು ಅತಿಕ್ರಮಿಸುವುದು ಅಥವಾ ಬೇರೆಯವರ ಹೆಂಡತಿಯತ್ತ ಕೆಟ್ಟ ದೃಷ್ಟಿ ಬೀರುವುದು ಇವುಗಳಿಂದ ಸದಾ ದೂರ ಇರುವರಲ್ಲದೆ ದುಷ್ಟ ವಿಚಾರಗಳಲ್ಲಿ ಅವರ ಮನಸ್ಸು ಎಂದಿಗೂ ಸಂತಸ ಹೊಂದುವುದಿಲ್ಲ.




Leave a Reply

Your email address will not be published. Required fields are marked *