Search
Monday 18 November 2019
  • :
  • :

ವಿಜ್ಞಾನ ಮತ್ತು ನಂಬಿಕೆ

ವಿಜ್ಞಾನದಲ್ಲಿ ಮಾತ್ರ ಗಾಢವಾದ ನಂಬಿಕೆ ಉಳ್ಳ ಇಂದಿನ ದಿನಗಳಲ್ಲಿ ತರ್ಕಬದ್ಧ ವೇದಿಕೆಯಿಂದ ಇನ್ನಿತರ ವಿಧದ ನಂಬಿಕೆ ಅಥವಾ ಶ್ರದ್ಧೆಯನ್ನು ಚರ್ಚಿಸುವ ಪ್ರಯತ್ನವು ವಿಜ್ಞಾನವನ್ನು ಕುರಿತ ತಮ್ಮ ನಂಬಿಕೆಯಿಂದ ಪೂರ್ವಗ್ರಹ ಪೀಡಿತರಾದ, ಬುದ್ಧಿಜೀವಿಗಳದೆಂದು ಹೇಳುವ ಸಮಾಜದ ದೊಡ್ಡ ಭಾಗದವರ (ಬಹು ಜನರ) ಸಿನಿಕತನವನ್ನು ಎದುರಿಸುತ್ತದೆ. ಭಾರತೀಯ ವಿದ್ಯಾ ಭವನವು ಶ್ರದ್ಧೆಗಳು ಮತ್ತು ಆಚೆಗೆ ಕುರಿತು ವ್ಯವಸ್ಥೆ ಮಾಡಿದ್ದ (ಮಾರ್ಚ್ ೮ ಮತ್ತು ೯, ೨೦೧೮) ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಶ್ರದ್ಧೆಗಳು, ನೇರ ಅರಿವು (ಅಂತರ್ಬೋಧೆ), ಮುನ್‌ಸೂಚನೆಗಳು ಮತ್ತು ಆಧ್ಯಾತ್ಮಿಕವು ಹೇಗೆ ಆಧುನಿಕ ವಿಜ್ಞಾನವನ್ನು ರೂಪಿಸಿದೆ ಎನ್ನುವುದನ್ನು ಚರ್ಚಿಸಿದೆವು.

ಆಧುನಿಕ ವೈಜ್ಞಾನಿಕ ಯುಗದಲ್ಲಿ ಶ್ರದ್ಧೆಯು ಪ್ರಸ್ತುತವೇ ?

ವಿಜ್ಞಾನದ ಇತಿಹಾಸದಿಂದಲೇ ಉದಾಹರಣೆಗಳನ್ನು ಉಲ್ಲೇಖಿಸುತ್ತ ಈ ಪ್ರಶ್ನೆಗೆ ಉತ್ತರಿಸುವುದು ಅತ್ಯುತ್ತಮ. ವಿಜ್ಞಾನದ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವಲ್ಲಿ ನೇರ ಅರಿವು, ಶ್ರದ್ಧೆ, ಮುನ್‌ಸೂಚನೆ ಮತ್ತು ಅಧ್ಯಾತ್ಮಗಳ ಪಾತ್ರಗಳನ್ನು ಈ ಉದಾಹರಣೆಗಳ ಮೂಲಕ ವಿವರಿಸಬಹುದು.

ಕಳೆದ ಶತಮಾನದಲ್ಲಿ ಜಗತ್ತನ್ನೇ ಬದಲಿಸಿದ, ಅತ್ಯಂತ ಪ್ರಮುಖವಾದ ಭೌತ ವಿಜ್ಞಾನ ಸಿದ್ಧಾಂತಗಳಲ್ಲಿ ಎರಡರತ್ತ ನೋಟ ಹರಿಸೋಣ.

ಆಲ್ಬರ್ಟ್ ಐನ್‌ಸ್ಟೀನ್‌ನ ಸಾಪೇಕ್ಷತಾ ಸಿದ್ಧಾಂತ ಮತ್ತು ನೀಲ್ಸ್ ಬೋರ್, ಇರ್ವಿನ್ ಶ್ರೋಡಿಂಗರ್ ಮತ್ತು ವಾರ್ನರ್ ಹೇಸನ್‌ಬರ್ಗ್ ಎಂಬ ಮೂರು ವೈಜ್ಞಾನಿಕ ಪ್ರತಿಭೆಗಳ ಕ್ವಾಂಟಂ ಮೆಕ್ಯಾನಿಕ್ಸ್ ಬಗೆಗೆ ನಮಗೆಲ್ಲರಿಗೂ ಗೊತ್ತು.

ಕಳೆದ ಶತಮಾನದ ಆದಿ ಭಾಗದಲ್ಲಿ ಚಿಮ್ಮಿದ ಆಧುನಿಕ ಭೌತ ವಿಜ್ಞಾನದ ಈ ಎರಡೂ ಸಿದ್ಧಾಂತಗಳು ವೈಜ್ಞಾನಿಕ ಇತಿಹಾಸದಲ್ಲಿ ಅಚ್ಚರಿಯ, ಅದ್ಭುತವಾದ ಪ್ರಗತಿ ಹೆಜ್ಜೆಯಾಗಿವೆ. ಆಗಿನಿಂದಲೂ ಅವು ಯಾಂತ್ರಿಕವಲ್ಲದ ಸಂಭವನೀಯತಾ ಸಿದ್ಧಾಂತದ ವಿಶ್ವ ದೃಷ್ಟಿಗೆ ದಾರಿ ಮಾಡಿಕೊಡಲು ಶತಮಾನಗಳಿಂದಲೂ ಸತ್ಯವೆಂದು ನಂಬಲಾಗಿದ್ದ ನ್ಯೂಟನ್‌ನ ಯಾಂತ್ರಿಕ ನಿಯಂತ್ರಣವಾದದ ವಿಶ್ವ ದೃಷ್ಟಿಯನ್ನು ಅಲ್ಲಾಡಿಸಿ ವಿಜ್ಞಾನವನ್ನೇ ಬದಲಿಸಿಬಿಟ್ಟಿವೆ.

ವಾಸ್ತವಿಕವಾಗಿ ಮೊಬೈಲ್‌ನಿಂದ ಇಂಧನ ಶಕ್ತಿಯವರೆಗೆ, ಮಾಹಿತಿ ತಂತ್ರಜ್ಞಾನದವರೆಗೆ ನಾವು ಇಂದು ನೋಡುವ ಪ್ರತಿಯೊಂದು ತಂತ್ರಜ್ಞಾನವನ್ನೂ ಭೌತವಿಜ್ಞಾನದ ಈ ಎರಡು ಶೋಧನೆಯಿಂದ ಪಡೆದುಕೊಳ್ಳಲಾಗಿದೆ.

ಸ್ವಪ್ನದಿಂದ ಸಾಪೇಕ್ಷತಾ ಸಿದ್ಧಾಂತ

ವಿಜ್ಞಾನಿಗಳು ಕಂಡ ಕನಸುಗಳು ಈ ಎರಡೂ ಸಿದ್ಧಾಂತಗಳಿಗೆ ಮೂಲವೆಂದರೆ ನಿಮಗೆ ಅಚ್ಚರಿಯಾಗಬಹುದು. ವಿಜ್ಞಾನಿಗಳು ತಾವು ಕಂಡ ಕನಸುಗಳನ್ನು ಅರ್ಥೈಸಲು ಅವುಗಳನ್ನು ಬೌದ್ಧಿಕವಾಗಿ ಮುಂದುವರಿಸಿದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ಯಾವುದು ವಿಜ್ಞಾನವನ್ನೇ ಬದಲಿಸಿತೋ ಅದರ ಮೂಲವು ವಿಜ್ಞಾನಿಗಳಿಗೆ ಅವರ ಕನಸಿನಲ್ಲಿರುವ ನಂಬಿಕೆಯಲ್ಲಿತ್ತು.

ಸಾಪೇಕ್ಷತಾ ಸಿದ್ಧಾಂತ. ಹರೆಯದಲ್ಲಿ ತಾವು ಕಂಡ ಕನಸೊಂದು ಮುಂದೆ ಜನಪ್ರಿಯವಾದ ಸಾಪೇಕ್ಷತಾ ಸಿದ್ಧಾಂತಕ್ಕೆ ಸೂರ್ತಿಯಾಯಿತು ಎಂದು ಐನ್‌ಸ್ಟೀನ್ ಸ್ವತಃ ಒಪ್ಪಿಕೊಂಡಿದ್ದಾರೆ. ಅವರದೇ ಮಾತಿನಲ್ಲಿ ಅವರ ಕನಸಿನ ವಿವರ :

ರಾತ್ರಿ ನಾನು ನನ್ನ ಗೆಳೆಯರೊಂದಿಗೆ ಜಾರು ಬಂಡಿಯಲ್ಲಿ ಸಾಗುತ್ತಿದ್ದೆ. ಬೆಟ್ಟದಿಂದ ಜಾರಿಕೊಂಡು ಇಳಿಯಲು ಆರಂಭಿಸಿದೆ. ಆದರೆ ನನ್ನ ಜಾರು ಬಂಡಿಯು ತುಂಬ ವೇಗವಾಗಿ ಹೋಗಲಾರಂಭಿಸಿತು. ನಾನು ತುಂಬ ವೇಗವಾಗಿ ಹೋಗುತ್ತಿದ್ದೆ ಮತ್ತು ಬೆಳಕಿನ ವೇಗವನ್ನು ಮುಟ್ಟುತ್ತಿರುವುದು ಅರಿವಾಯಿತು. ಆಗ ನಾನು ಮೇಲೆ ನೋಡಿದೆ ಮತ್ತು ನಾನು ನಕ್ಷತ್ರಗಳನ್ನು ಕಂಡೆ. ನಾನು ಹಿಂದೆಂದೂ ನೋಡಿರದಂತಹ ಬಣ್ಣಗಳಾಗಿ ಅವು ಪ್ರತಿಬಿಂಬಿಸುತ್ತಿದ್ದವು. ಭಯ ವಿಸ್ಮಿತ ಭಾವನೆಯು ನನ್ನಲ್ಲಿ ತುಂಬಿತು. ನಾನು ನನ್ನ ಬದುಕಿನ ಅತ್ಯಂತ ಮುಖ್ಯವಾದ ಅರ್ಥವನ್ನು ಯಾವುದೋ ಒಂದು ರೀತಿಯಲ್ಲಿ ನೋಡುತ್ತಿರುವೆನೆಂಬ ಅರಿವು ನನಗಾಯಿತು.

ತನ್ನ ಇಡೀ ವೈಜ್ಞಾನಿಕ ವೃತ್ತಿಯು ಈ ಕನಸಿನ ಮೇಲಿನ ಧ್ಯಾನವೆಂದು ಮತ್ತು ಈ ಕನಸಿನಲ್ಲಿ ಯಾವುದೋ ಅರ್ಥವನ್ನು ಗ್ರಹಿಸಿಕೊಳ್ಳುವಂತೆ ಈ ಅನುಭವದಿಂದ ಸಾಪೇಕ್ಷತಾ ಸಿದ್ಧಾಂತ ಉದಯಿಸಿತು ಎಂದೂ ಐನ್‌ಸ್ಟೀನ್ ಒಪ್ಪಿಕೊಂಡಿದ್ದಾರೆ.

ಕ್ವಾಂಟಂ ಮೆಕ್ಯಾನಿಕ್ಸ್. ೧೯೨೨ ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ನೀಲ್ಸ್ ಬೋರ್ ಕ್ವಾಂಟಂ ಮೆಕ್ಯಾನಿಕ್ಸ್‌ನ ಜನಕ. ಕ್ವಾಂಟೀಕರಿಸಿದ (ಕ್ವಾಂಟಂ ಮೆಕ್ಯಾನಿಕ್ಸ್ ಅನ್ನು ಅನ್ವಯಿಸಿ) ಕಕ್ಷೆಯಲ್ಲಿ ಕೇಂದ್ರದ ಸುತ್ತ ಎಲೆಕ್ಟ್ರಾನ್‌ಗಳು ಸುತ್ತುತ್ತಿರುವಂತೆ ಪರಮಾಣುವಿನ ಮಾದರಿಯನ್ನು ಅವರು ಅಭಿವೃದ್ಧಿಪಡಿಸಿದರು.

ಆವರೆಗೆ ಪರಮಾಣುವನ್ನು ಋಣ ವಿದ್ಯುದಾವಿಷ್ಟವಾದ ತುಂಬ ಸಣ್ಣ ಪದಾರ್ಥಗಳನ್ನು ಹೊಂದಿದ್ದ ಘನ ವಸ್ತು ಎಂದು ಗ್ರಹಿಸಲಾಗಿತ್ತು. ಅಣುವಿನ ಘನ ಆಕೃತಿಯ ನಿರೂಪಣೆ ಚಿತ್ರಣವನ್ನು ರೂಪಿಸಲು ತಾವು ಪ್ರಯತ್ನಿಸಿದುದಾಗಿಯೂ ಯಾವುದೂ ಸರಿಹೊಂದಲಿಲ್ಲ ಎಂದೂ ಬೋರ್ ಬರೆಯುತ್ತಾರೆ.

ಒಂದು ರಾತ್ರಿ, ಅವರು ಕನಸಿನಲ್ಲಿ ಪರಮಾಣುವಿನ ಕೇಂದ್ರದ ಸುತ್ತ ಎಲೆಕ್ಟ್ರಾನ್‌ಗಳು ಸುತ್ತುತ್ತಿರುವುದನ್ನು ಕಂಡರು. ಅದು ಸೂರ್ಯನ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಂಡಿತು. ಎಚ್ಚೆತ್ತ ಮೇಲೆ ತಾವು ಕಂಡಿದ್ದು ನಿಖರ ಎಂಬ ಭಾವನೆ ಅವರಿಗೆ ಉಂಟಾಯಿತು. ತಮ್ಮ ಕನಸಿನ ಸಮರ್ಥನೆಗಾಗಿ ಅವರು ವೈಜ್ಞಾನಿಕ ಪುರಾವೆಯನ್ನು ಶೋಧಿಸಲು ತತ್‌ಕ್ಷಣ ತಮ್ಮ ಪ್ರಯೋಗಾಲಯಕ್ಕೆ ಧಾವಿಸಿದರು.

ಅಂತಿಮ ವೈಜ್ಞಾನಿಕ ಜ್ಞಾನವನ್ನು ವಿಜ್ಞಾನಿಗಳು ಅಳವಡಿಸಿಕೊಳ್ಳುವ ನಿಖರವಾದ ವೈಜ್ಞಾನಿಕ ವಿಧಾನಗಳ ಮೇಲೆ ರೂಪಿಸಲಾಗುವುದೇ ವಿನಾ ಕನಸಿನ ಮೇಲೆ ಅಲ್ಲ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಮೇಲಿನ ಎರಡು ಉದಾಹರಣೆಗಳಲ್ಲಿ ನಾವು ಗಮನಿಸಿದಂತೆ, ಕೇವಲ ಸಂಶೋಧನೆ ಮತ್ತು ನಿರ್ಭಾವ ತರ್ಕದಿಂದಲೇ ವಿಜ್ಞಾನವು ಪೂರ್ಣವಾಗಿ ಮುನ್ನಡೆಯುವುದಿಲ್ಲ.

ಈ ನಿಖರವಾದ ವಿಜ್ಞಾನವನ್ನು ಸ್ಥಾಪಿಸಿದ ವಿಜ್ಞಾನಿಗಳ ಮನಸ್ಸುಗಳು ಜಗತ್ತನ್ನೇ ಬದಲಿಸಿದ ಈ ಸಿದ್ಧಾಂತಗಳ ಕಲ್ಪನೆ ಮತ್ತು ಸೃಷ್ಟಿಗೆ ವಿಜ್ಞಾನದ ಆಚೆಗಿನ ವಿಧಾನಗಳನ್ನೂ ಬಳಸಿಕೊಂಡಿವೆ. ಅವರು ತಮ್ಮನ್ನು ಕೇವಲ ತರ್ಕಬದ್ಧ ವಿಧಾನಗಳಿಗೆ ಸೀಮಿತಗೊಳಿಸಿಕೊಳ್ಳಲಿಲ್ಲ. ಕೊನೆ ಪಕ್ಷ ಈ ಕಲ್ಪನೆಗಳನ್ನು ಸೃಷ್ಟಿಸಲು.

ವೈಜ್ಞಾನಿಕ ಇತಿಹಾಸದ ಕೆಲವು ಮಹತ್ತ್ವದ ಪ್ರಗತಿಗಳು ಕನಸು, ಅಂತಃಪ್ರe ಅಥವಾ ಮಾನವ ಮಿದುಳಿನ ಆಧ್ಯಾತ್ಮಿಕ ಭಾಗದ ಫಲಗಳಾಗಿವೆ. ಇವು ಕೇವಲ ಎರಡು ನಿದರ್ಶನಗಳಷ್ಟೆ.

ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದಾರೆ :

ಅಂತಃಪ್ರeಯ ಮನವು ಒಂದು ಪವಿತ್ರವಾದ ಉಡುಗೊರೆ ಮತ್ತು ತರ್ಕಬದ್ಧ ಅಥವಾ ವೈಚಾರಿಕ ಮನವು ಒಂದು ನಿಷ್ಠಾವಂತ ಸೇವಕ. ಸೇವಕನನ್ನು ಗೌರವಿಸುವ ಮತ್ತು ಉಡುಗೊರೆಯನ್ನು ಮರೆತಿರುವ ಸಮಾಜವನ್ನು ನಾವು ಸೃಷ್ಟಿಸಿದ್ದೇವೆ.

ಹೆನ್ರಿ ಪಾಯಿಂಕೇರ್ ಸರಿಯಾಗಿಯೇ ಹೇಳಿದ್ದಾರೆ :

ನಾವು ವಿಜ್ಞಾನದ ಮೂಲಕ ಸಾಬೀತುಗೊಳಿಸುತ್ತೇವೆ, ಆದರೆ ಅಂತಃಪ್ರeಯ ಮೂಲಕ ನಾವು ಕಂಡುಕೊಳ್ಳುತ್ತೇವೆ, ಆವಿಷ್ಕರಿಸುತ್ತೇವೆ.

ದಿಗ್ಭ್ರಾಂತಿ ಉಂಟುಮಾಡುವ ಕಲ್ಪನೆಗಳನ್ನು ಸೃಷ್ಟಿಸಲು ವಿಜ್ಞಾನಿಗಳ ಅಂತರ್ಬೋಧೆಯು ನಂಬಿಕೆಯ, ಶ್ರದ್ಧೆಯ ಶಕ್ತಿಯನ್ನು ಅಳವಡಿಸಿರದಿದ್ದರೆ ವಿಜ್ಞಾನವು ಇಂದು ಎಲ್ಲಿದೆಯೋ ಅಲ್ಲಿ ಇರುತ್ತಿರಲಿಲ್ಲ. ವಿಜ್ಞಾನಿಯು ಆಶಾಭರಿತ ಕಲ್ಪನೆಯನ್ನು ಸೃಷ್ಟಿಸಿದಾಗ, ಅವನು ಶ್ರದ್ಧೆಯ ಶಕ್ತಿಯನ್ನೂ ಬಳಸುತ್ತಾನೆ. ಅವನ ಅಭಿಪ್ರಾಯದಂತೆ ಅದು ಹೆಚ್ಚು ಸಂಭವನೀಯ ವಿವರಣೆ. ಆ ಆಶಯ, ಆ ಭರವಸೆಯೇ ಅವನಿಗೆ ಅದನ್ನು ಸಾಬೀತು ಪಡಿಸುವ ಅಪೂರ್ವ ಪ್ರಯೋಗಗಳನ್ನು ರೂಪಿಸಲು ನೆರವಾಗುತ್ತದೆ.

ಹೀಗೆ, ವಿಜ್ಞಾನದ ಗಡಿಗಳ ವಿಸ್ತರಣೆಯಲ್ಲಿ ನಂಬಿಕೆ ಪ್ರಮುಖ ಪಾತ್ರ ವಹಿಸುತ್ತದೆ.

ಒಂದೇ ಒಂದು ವ್ಯತ್ಯಾಸವೆಂದರೆ, ಈ ಕಲ್ಪನೆಯ ಸಮರ್ಥನೆಗೆ ವಿಜ್ಞಾನವು ಒಂದಷ್ಟು ಹೆಚ್ಚು ದೂರ ಸಾಗುತ್ತದೆ. ಮತ್ತು ಅನೇಕ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕವಾಗಿ ಹೊಂದಿರುವ ನಂಬಿಕೆಗಳೂ ಪ್ರಯೋಜನಕಾರಿಯಾಗಿವೆ. ಆದರೆ ಯಾರೂ ಅದನ್ನು ಸಮರ್ಥಿಸುವ ಗೋಜಿಗೇ ಹೋಗಿಲ್ಲ.

ನಮ್ಮ ಯುಗದ ಅತ್ಯಂತ ಪ್ರಬಲವಾದ ಸಿದ್ಧಾಂತಗಳನ್ನು ರೂಪಿಸಲು ಈ ಶ್ರೇಷ್ಠ ವಿಜ್ಞಾನಿಗಳು ತಮ್ಮ ವೈಚಾರಿಕ ವಿಧಾನಗಳಿಗೂ ಆಚೆಗೆ ಹೋಗಿರುವುದನ್ನು ಒಪ್ಪಿಕೊಂಡಿರುವುದಕ್ಕೆ ಐತಿಹಾಸಿಕ ಪುರಾವೆಗಳಿವೆ.

ಈ ಮೂರೂ ವಿಜ್ಞಾನಿಗಳು ವೇದಗಳ ಸಂಪರ್ಕ, ಮುಖ್ಯವಾಗಿ ಉಪನಿಷತ್‌ಗಳ ಸಂಪರ್ಕ ಹೊಂದಿದ್ದರು ಎಂದು ಇತಿಹಾಸವು ದಾಖಲಿಸಿದೆ. ೨೦ನೆಯ ಶತಮಾನದ ಈ ಇಬ್ಬರು ಶ್ರೇಷ್ಠ ವಿಜ್ಞಾನಿಗಳು ಪೂರ್ವದ ಜ್ಞಾನದ ಬಗೆಗೆ ಏನು ಹೇಳುತ್ತಾರೋ ನೋಡೋಣ,

ಶ್ರೋಡಿಂಗರ್ ತಮ್ಮ ಪುಸ್ತಕ ಮೈ ವ್ಯೂ ಆಫ್ ದಿ ವರ್ಲ್ಡ್‌ನಲ್ಲಿ ಹೀಗೆ ಬರೆದರು –

ಪ್ರಜ್ಞೆಯನ್ನು ಬಹುವಚನದಲ್ಲಿ ನಾವು ಕಾಣುವಂತಹ ಚೌಕಟ್ಟಿನ ವಿಧವು ಈ ಪ್ರಪಂಚದಲ್ಲಿಯೇ ಇಲ್ಲ; ವ್ಯಕ್ತಿಗಳ ಐಹಿಕ ಬಹುತ್ವದ ಕಾರಣ ನಾವು ಇದನ್ನು ಸುಮ್ಮನೆ ರೂಪಿಸುತ್ತೇವೆ. ಆದರೆ ಅದು ಹುಸಿ ನಿರ್ಮಾಣ… ಈ ಸಂಘರ್ಷಕ್ಕೆ ನಮಗೆಲ್ಲ ಲಭ್ಯವಿರುವ ಪರಿಹಾರವೆಂದರೆ, ಅದು ಉಪನಿಷತ್‌ಗಳ ಪುರಾತನ ಜ್ಞಾನದಲ್ಲಿದೆ. ವೇದಾಂತದ ಏಕತೆ ಮತ್ತು ನಿರಂತರತೆಯು ತರಂಗ ಯಂತ್ರ ವಿಜ್ಞಾನದ ಏಕತೆ ಮತ್ತು ನಿರಂತರತೆಯಲ್ಲಿ ಪ್ರತಿಬಿಂಬಿತವಾಗಿದೆ. ಎಲ್ಲವೂ ಒಂದು ಎಂಬ ವೇದಾಂತದ ಕಲ್ಪನೆಯೊಂದಿಗೆ ಇದು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ನನ್ನ ಬಹುತೇಕ ಕಲ್ಪನೆಗಳು ಮತ್ತು ಸಿದ್ಧಾಂತಗಳು ಬಹಳವಾಗಿ ವೇದಾಂತದಿಂದ ಪ್ರಭಾವಿತವಾಗಿವೆ.

ನೀಲ್ಸ್ ಬೋರ್ ಹೇಳಿದರು :

ಪ್ರಶ್ನೆಗಳನ್ನು ಕೇಳಲು ನಾನು ಉಪನಿಷತ್‌ಗಳ ಮೊರೆ ಹೋಗುವೆ.

ರಾಮಾನುಜಂ ಪ್ರತಿಭೆ

ಶ್ರೇಷ್ಠ ಗಣಿತ ವಿಜ್ಞಾನಿ ಶ್ರೀನಿವಾಸ ರಾಮಾನುಜಂ ವಿಷಯವನ್ನೇ ತೆಗೆದುಕೊಳ್ಳಿ. ಬಹುತೇಕ ಏನೂ ಔಪಚಾರಿಕ ತರಬೇತಿ ಇಲ್ಲದೆ ತಮ್ಮ ೩೨ನೆಯ ವಯಸ್ಸಿನ ವೇಳೆಗೆ ಸುಮಾರು ೪೦೦೦ ಪ್ರಮೇಯಗಳನ್ನು ರೂಪಿಸಿದ್ದ ಶ್ರೀನಿವಾಸ ರಾಮಾನುಜಂ ಅವರ ಕಾರ್ಯ ಸಾಧನೆಯ ಸುತ್ತ ಇರುವ ವಿಚಾರ ಸರಣಿಗಳನ್ನೇ ಗಮನಿಸಿ. ಅವರು ನೋಟ್ ಪುಸ್ತಕದಲ್ಲಿ ಮಾಡಿದ್ದ ಅನೇಕ ಗೀಚು ಬರೆಹಗಳು ೫೦ ವರ್ಷಗಳ ಅನಂತರ ಪತ್ತೆಯಾಯಿತು. ಅವರ ಪತ್ನಿಯು ಅದನ್ನು ಕಾಪಾಡಿದ್ದರು.

ಅಂತಿಮವಾಗಿ ವಿಶ್ವವು ಮಾಡಲ್ಪಟ್ಟಿದೆ ಎಂದು ಹೇಳಲಾದ ಕಪ್ಪು ಕುಳಿ (ಬ್ಲಾಕ್ ಹೋಲ್) ಮತ್ತು ಸ್ಟ್ರಿಂಗ್ ಸಿದ್ಧಾಂತದಂತಹ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಭೌತವಿಜ್ಞಾನಿಗಳು ಇಂದು ರಾಮಾನುಜಂ ಅವರ ನೋಟ್ ಪುಸ್ತಕದಲ್ಲಿ ನಿರೂಪಿಸಿರುವ ಗಣಿತ ಸಾಧನಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ತಮ್ಮ ಸಾಧನೆಗೆ ನಾಮಕಲ್ ದೇವತೆ ನಾಮಗಿರಿ ದೇವಿಯ (ಶ್ರೀಮನ್ನಾರಾಯಣನ ಸತಿ ಲಕ್ಷ್ಮೀದೇವಿ) ಕೃಪೆಯೇ ಕಾರಣ ಎಂದು ರಾಮಾನುಜಂ ಹೇಳಿದ್ದಾರೆ. ದೇವಿಯು ಅವರ ಕನಸಿನಲ್ಲಿ ಪ್ರತ್ಯಕ್ಷಳಾಗಿ ಸಂಕೀರ್ಣವಾದ ಗಣಿತ ಸೂತ್ರಗಳ ಸುರುಳಿಯನ್ನು ನೀಡುತ್ತಿದ್ದಳು. ಅವರು ಅನಂತರ, ಎಚ್ಚೆತ್ತ ಮೇಲೆ ಅವುಗಳನ್ನು ಪರೀಕ್ಷಿಸಿ ಸಾಧಿಸುತ್ತಿದ್ದರು. ಗಣಿತ ಕ್ಷೇತ್ರದಲ್ಲಿ ಅವರ ಕಾರ್ಯವು ಪವಾಡವೆನ್ನಿಸಿಕೊಂಡಿದೆ.

ಔಪಚಾರಿಕ ತರಬೇತಿ ಇಲ್ಲದ ವ್ಯಕ್ತಿಯು ಅದು ಹೇಗೆ ನಿಬ್ಬೆರಗಾಗುವಂತಹ ಗಣಿತ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರಿಸುವುದು ಆಧುನಿಕ ಗಣಿತ ವಿಜ್ಞಾನಿಗಳಿಗೆ ಸಾಧ್ಯವಿಲ್ಲವಾಗಿದೆ. ಈ ಸೂತ್ರಗಳನ್ನು ಪ್ರತಿನಿಧಿಸುವ ಪ್ರಮೇಯಗಳನ್ನು ಕುರಿತಂತೆ ಶ್ರೇಷ್ಠ ಗಣಿತ ವಿಜ್ಞಾನಿಗಳು ಈಗಲೂ ಕಾರ್ಯ ನಿರತರಾಗಿದ್ದಾರೆ. ಈ ಪ್ರಮೇಯಗಳಲ್ಲಿ ಒಂದೂ ಕೂಡ ತಪ್ಪೆಂದು ಅವರು ಈವರೆಗೂ ಕಂಡುಹಿಡಿದಿಲ್ಲ.

ಶ್ರದ್ಧೆ ಇಲ್ಲದೆ ಜೀವನವಿಲ್ಲ

ನಂಬಿಕೆಗಳಿಲ್ಲದೆ ಯಾರೂ ಕೂಡ ಸಾಮಾನ್ಯ ಜೀವನವನ್ನು ನಡೆಸುವುದು ಸಾಧ್ಯವಿಲ್ಲ. ನಂಬಿಕೆ ಅಥವಾ ಶ್ರದ್ಧೆಯಲ್ಲಿನ ಶಬ್ದಾರ್ಥವು ಸರಿಯಾಗಿರುವುದಲ್ಲದೆ, ನಂಬಿಕೆಯು ಸ್ವತಃ ಪ್ರಯೋಜನಕಾರಿಯಾದ ಮಾನಸಿಕ ನಿರ್ಮಾಣ (ವ್ಯವಸ್ಥೆ) ಅಥವಾ ನಮ್ಮ ನಿತ್ಯ ಜೀವನದ ವಾಸ್ತವಿಕತೆಯನ್ನು ಗ್ರಹಿಸಿ ಪ್ರತಿಕ್ರಿಯಿಸುವ ಕ್ಷಿಪ್ರವಿಧಾನ.

ಜನರ, ಸ್ಥಳದ, ಘಟನೆಗಳ, ಪರಿಸ್ಥಿತಿ ಮುಂತಾದವುಗಳಿಂದ ಪ್ರಭಾವಿತವಾದ ನಮ್ಮ ಬದುಕಿನ ಯಾತ್ರೆಯಲ್ಲಿ ಸ್ವಯಂ ಕಲಿತದ್ದೇ ನಂಬಿಕೆಗಳು ಅಥವಾ ಶ್ರದ್ಧೆ. ಇದು ಅಧಿಕಾರ, ಜ್ಞಾನ, ಸುಖ ಮತ್ತು ಆನಂದಕ್ಕಾಗಿ ನಾವು ಮಾಡುವ ಗಾಢ ಸಹಜ ಪ್ರೇರಣೆಯ ಶೋಧದ ಮೇಲಿನ ಸಕಾರಾತ್ಮಕ ಮತ್ತು ಋಣಾತ್ಮಕ ಪ್ರಭಾವಗಳ ಮೇಲೆ ಆಧಾರಿತವಾದುದು.

ಸಾಂಸ್ಕೃತಿಕ ಶ್ರದ್ಧೆಯು ಮಾನವ ಕುಲದ ಕಲ್ಯಾಣಕ್ಕಾಗಿ ಮಹತ್ತರ ಕೊಡುಗೆಯನ್ನು ನೀಡಿದೆ. ಕೆಲವೇ ಜನರ ಹಿತಾಸಕ್ತಿಗಾಗಿ ಶ್ರದ್ಧೆಯ ದುರುಪಯೋಗವು ಯಾವ ತಡೆಯೂ ಇಲ್ಲದೆ ಸಮಾಜದಲ್ಲಿ ಹರಡುತ್ತಿರುವುದೂ ನಿಜ.

ವಿಶ್ವಾದ್ಯಂತ ನಂಬಿಕೆಗಳು, ಸಂಪ್ರದಾಯಗಳು ಮತ್ತು ಆಚರಣೆಗಳು ಹಾಗೂ ಮಾನವ ಜೀವಿಗಳ ಮೇಲೆ ಅವುಗಳ ಪ್ರಭಾವವು ತುಂಬ ಇವೆ. ನ್ಯೂನತೆ ಎಂದರೆ ಮಾನವ ಶ್ರದ್ಧೆಯ ವಿಷಯದ ನಿಂದನೆಯನ್ನು ತಡೆಯಲು ಅಗತ್ಯವಾದ ಪುರಾವೆ ಆಧಾರಿತ ನಂಬಿಕೆಯನ್ನು ಕುರಿತು ಕೆಲಸ ಮಾಡುವ ವಿಧಾನದ ಕೊರತೆ.

ನಂಬಿಕೆ ಅಥವಾ ಶ್ರದ್ಧೆಯು ಅತ್ಯಂತ ಪ್ರಯೋಜನಕಾರಿಯಾದ ಮಾನವ ಸಹಜ ಶಕ್ತಿ ಅಥವಾ ಸಾಮರ್ಥ್ಯ. ಕೆಲವರಿಂದ ಅದರ ದುರ್ಬಳಕೆಯಾಗುತ್ತಿದೆ ಮತ್ತು ಪ್ರಸ್ತುತದಲ್ಲಿ ಅದನ್ನು ಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲವೆಂಬ ಕಾರಣಕ್ಕಾಗಿ ಯಾರೂ ಕೂಡ ಅದನ್ನು ತೆಗೆದುಹಾಕಲಾಗದು. ಮಾನವನ ಜೀವನದಲ್ಲಿ ಶ್ರದ್ಧೆಯು ಅಂತಹ ಮಹತ್ತ್ವದ ಪಾತ್ರ ನಿರ್ವಹಿಸುವಾಗ, ಮಾನವ ಜೀವಿಗೆ ಲಾಭದಾಯಕವಾದ ಶ್ರದ್ಧೆಯ ಬಳಕೆಗೆ ಮತ್ತು ಮಾನವ ಕುಲಕ್ಕೆ ಹಾನಿ ಉಂಟು ಮಾಡುವ ಶ್ರದ್ಧೆಯ ನಿಂದನೆಯನ್ನು ತಡೆಯಲು ಜೊತೆಗೂಡಿ ಸಬಲಗೊಳಿಸಲು ಗಂಭೀರ ಪ್ರಯತ್ನ ಮಾಡುವ ಅಗತ್ಯವಿಲ್ಲವೇ?

ಶ್ರದ್ಧೆಯ ಆಚರಣೆಯು ಈವರೆಗೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುಂಪಗಳ ಎಲ್ಲೆಯಲ್ಲಿಯೇ ಉಳಿದಿದೆ.  ಪುರಾವೆ ಆಧಾರಿತ ಶ್ರದ್ಧೆಯನ್ನು ಒಟ್ಟುಗೂಡಿಸುವ ಪ್ರಯತ್ನಬೇಡವೇ? ಹೆಚ್ಚಿನ ಜನರ ಪ್ರಯೋಜನಕ್ಕಾಗಿ, ಮುಖ್ಯವಾಗಿ ಮಾನವ ಕುಲದ ಸಮಸ್ಯೆಗಳನ್ನು ಪರಿಹರಿಸುವುದನ್ನು ಅಧಿಕ ಸಂಖ್ಯೆಯ ಜನರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಬೇಕಲ್ಲವೇ?

ಈ ಅಂತಾರಾಷ್ಟ್ರೀಯ ಸಮಾವೇಶವು ಈ ದಿಕ್ಕಿನಲ್ಲಿ ಚಿಕ್ಕದಾದರೂ ಮಹತ್ತ್ವದ ಹೆಜ್ಜೆಯಾಗಿದೆ.

ಪುನರ್ಜನ್ಮ ಸಂಶೋಧನೆ

ಪುನರ್ಜನ್ಮ ವಿಷಯವು ಸಂಶೋಧನೆಗೆ ಅತ್ಯುತ್ತಮವಾದ ಪ್ರಬಲ ವಿಷಯ. ಸಾವಿನ ಸಮೀಪದ ಅನುಭವಗಳನ್ನು ಕುರಿತಂತೆ ಪ್ರಪಂಚದಾದ್ಯಂತ ಅನೇಕ ಪ್ರಕರಣಗಳ ವರದಿಗಳಿವೆ. ಮಕ್ಕಳು ತಮ್ಮ ಹಿಂದಿನ ಜನ್ಮದ ವಿವರಗಳನ್ನು ನೀಡಿದ ಮತ್ತು ಪರಿಶೀಲಿಸಿದಾಗ ಅವು ನಿಜವೆಂದು ವ್ಯಕ್ತವಾಗಿರುವ ಪ್ರಕರಣಗಳಿವೆ. ಆದರೆ ಪುರಾವೆಗಳನ್ನು ದಾಖಲಿಸಲು ನಮ್ಮ ಬಳಿ ಅಧಿಕೃತವಾದ ಶೋಧಕ ವಿಧಾನಗಳಿಲ್ಲದಿದ್ದರೆ ನಾವು ಅವುಗಳಲ್ಲಿ ಹುಸಿಯಾದುದನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಮತ್ತು ಈ ನಂಬಿಕೆಗಳು ಅಂತಿಮವಾಗಿ ಸಾಬೀತಾಗುವುದೂ ಇಲ್ಲ.

ಎಂಐಟಿ ಮತ್ತು ಹಾರ್ವರ್ಡ್‌ಗಳು ಪುನರ್ಜನ್ಮವನ್ನು ಕುರಿತ ಅಧ್ಯಯನಕ್ಕಾಗಿ ಪೀಠವನ್ನೇಕೆ ಸ್ಥಾಪಿಸುತ್ತಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಸಾವಿನ ಅನಂತರ ಬದುಕಿಲ್ಲ ಎಂಬ ಅವರ ಈಗಿನ ವೈಜ್ಞಾನಿಕ ನಂಬಿಕೆಯ ವೈಜ್ಞಾನಿಕ ಪೂರ್ವಗ್ರಹವೇ? ಆ ಪೂರ್ವಗ್ರಹವೇ ಅವರನ್ನು ಪುನರ್ಜನ್ಮವನ್ನು ಕುರಿತ ಸಂಶೋಧನೆ ಅಧ್ಯಯನಕ್ಕೆ ತಡೆ ಒಡ್ಡುತ್ತಿದೆಯೇ?

ಈ ಲೋಕದ ಅಸಂಖ್ಯ ಜನರ ನಂಬಿಕೆ ಇದಾಗಿದ್ದರೂ ಪ್ರಪಂಚದ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಅಥವಾ ಸಂಶೋಧನೆ ಕೇಂದ್ರದಲ್ಲಿ ಈ ನಂಬಿಕೆಯ ಶೋಧಕ್ಕಾಗಿ ಒಂದೇ ಒಂದು ಔಪಚಾರಿಕ ಅಧ್ಯಯನವಿಲ್ಲ. ನಿಜವಾಗಿಯೂ ಸೋಜಿಗ.

ಒಂದು ನಿಜವಾದ ಬುದ್ಧಿವಂತ ಪ್ರಗತಿಪರ ಸಮಾಜವು ಜ್ಞಾನದ ಯಾವುದೇ ಕ್ಷೇತ್ರವನ್ನು ಶೋಧಿಸಲು ಹಿಂಜರಿಯಬಾರದು. ವಾಸ್ತವದ, ಇನ್ನೂ ಅಪರಿಚಿತವಾದ ಕ್ಷೇತ್ರಗಳ ಜೊತೆ ವ್ಯವಹರಿಸಲು ಪ್ರಸಕ್ತ ಚಿಂತನಾ ಸಾಧನಗಳು ಸಮರ್ಥವಾಗಿಲ್ಲ ಎಂಬ ಕಾರಣದಿಂದಲೇ ಈ ಸೂಕ್ಷ್ಮ ಸತ್ಯದ ಅನ್ವೇಷಣೆಯನ್ನು ನಿಲ್ಲಿಸಬಾರದು. ಪ್ರಕೃತಿಯ ರಹಸ್ಯಗಳನ್ನು ಶೋಧಿಸಲು ಪರ್ಯಾಯ ಸಾಧನಗಳನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಬೇಕು. ಅಸಂಖ್ಯ ವೈಜ್ಞಾನಿಕ ಆಸಕ್ತ ವಿಷಯಗಳು ನಮ್ಮನ್ನು ದಿಟ್ಟಿಸಿ ನೋಡುತ್ತಿವೆ. ಪ್ರಸ್ತುತ ವಿಜ್ಞಾನದ eತ ನಿಯಮಗಳಿಂದ ವಿವರಿಸಲಾಗದ ನಮ್ಮ ಗ್ರಹಿಕೆಗೆ ಅವು ಸವಾಲು ಒಡ್ಡುತ್ತಿವೆ. ನಮ್ಮ ಸುತ್ತ ವಿವರಿಸಿರುವುದಕ್ಕಿಂತ ವಿವರಿಸದೇ ಇರುವ ವಸ್ತುಗಳು ಅಪಾರವಾಗಿವೆ.

ನಾವು ವೈಜ್ಞಾನಿಕ ಯುಗದಲ್ಲಿ ಜೀವಿಸುತ್ತಿದ್ದರೂ ಕೂಡ ವೈಜ್ಞಾನಿಕ ಜ್ಞಾನ ಒಂದೇ ನಮ್ಮ ಗಮನ ಸೆಳೆಯುವ ಚಿಂತನಾ ಪದ್ಧತಿಯಾಗಬಾರದು. ಶತಮಾನಗಳಿಂದ ಜೀವಂತವಾಗಿರುವ ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಿಂತನಾ ಪದ್ಧತಿ ಮತ್ತು ಪರಂಪರೆಗಳನ್ನು ನಿರ್ಲಕ್ಷಿಸಬಾರದು.

ತಾನು ಸತ್ಯದೊಂದಿಗೆ ವ್ಯವಹರಿಸುತ್ತಿರುವೆ ಎಂದು ವಿಜ್ಞಾನವು ಮೊದಲು ಹೇಳಿಕೊಂಡಿತ್ತು. ಆದರೆ, ಈಗ ಆಧುನಿಕ ಭೌತ ವಿಜ್ಞಾನದ ದಿಗ್ಭ್ರಮೆ ಹುಟ್ಟಿಸುವ ಸಿದ್ಧಾಂತಗಳ ಅಭಿವೃದ್ಧಿಯಿಂದ ವಿಜ್ಞಾನಿಗಳ ಸಮುದಾಯದಲ್ಲಿ ತೀವ್ರವಾದ ಭಿನ್ನತೆ ಉಂಟಾಗಿದೆ. ವಿಜ್ಞಾನವು ಅಲ್ಲಿರುವ ವಾಸ್ತವ ಸತ್ಯವನ್ನು ಕಂಡುಹಿಡಿಯುವುದೇ ಅಥವಾ ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ಅದು ವಾಸ್ತವದ ಪ್ರತಿರೂಪ ಮಾತ್ರವೇ ಎನ್ನವುದರ ಬಗೆಗೆ ಅವರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಇದು ಏಕೆಂದರೆ ಭೌತ ವಿಜ್ಞಾನವನ್ನು ಕುರಿತ ಬಹುತೇಕ ಆಧುನಿಕ ಗ್ರಹಿಕೆಯು ಸೈದ್ಧಾಂತಿಕ ಗಣಿತ ವಿಜ್ಞಾನದ ಮಾದರಿಗಳ ಮೇಲೆ ಆಧಾರಿತವಾಗಿದೆ ಮತ್ತು ನಮ್ಮ ಇಂದ್ರಿಯಗಳಿಗೆ ನಿಜವಾಗಿಯೂ ಗೋಚರವಾಗುವಂತೆ ವಾಸ್ತವದ ವಿವರಣೆ ಬಗೆಗೆ ಅದಕ್ಕೆ ಮಾಡಲೇನೂ ಇಲ್ಲ.

ಪರಮಾಣು ಮತ್ತು ಆತ್ಮ

ನಾವು ದೃಶ್ಯೀಕರಿಸುವಂತೆ ಪರಮಾಣು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ?

ಎಲೆಕ್ಟ್ರಾನ್‌ಗಳು ಅಸ್ತಿತ್ವದಲ್ಲಿವೆಯೇ?

ವಿಜ್ಞಾನವು ಆ ಪ್ರಶ್ನೆಗೆ ಎಂದಿಗೂ ಉತ್ತರಿಸುವುದಿಲ್ಲ ಎಂದು ವಿಜ್ಞಾನ ಅಥವಾ ಈ ಕಲ್ಪನೆಗಳ ಸಂಸ್ಥಾಪಕರು ಒಪ್ಪಿಕೊಂಡಿದ್ದಾರೆ. ಆದರೂ ಅವರು ಈ ಕಲ್ಪನೆಗಳನ್ನು ಬಳಸುತ್ತಾರೆ ಮತ್ತು ಪ್ರಕೃತಿಯ ತೀಕ್ಷ್ಣವಾದ ರಹಸ್ಯಗಳನ್ನು ಹೊರತರುತ್ತಾರೆ. ನಾವು ಎಲೆಕ್ಟ್ರಾನ್ ತರಹದ ಪ್ರಭಾವಗಳ ಬಗೆಗೆ ಅಧ್ಯಯನ ನಡೆಸುತ್ತಿದ್ದೇವೆ, ಎಲೆಕ್ಟ್ರಾನ್ ಬಗೆಗೆ ಅಲ್ಲ ಎನ್ನುವುದು ವಿಜ್ಞಾನಿಗಳ ಉತ್ತರ.

ಆತ್ಮವು ಅಸ್ತಿತ್ವದಲ್ಲಿ ಇದೆ ಎನ್ನುವುದನ್ನು ನೀವು ಸಾಬೀತುಗೊಳಿಸುವಿರಾ ಎಂದು ಜನರು ಸವಾಲು ಹಾಕುತ್ತಾರೆ. ಎಲೆಕ್ಟ್ರಾನ್ ಅಸ್ತಿತ್ವದಲ್ಲಿದೆಯೇ ಎನ್ನುವ ಪ್ರಶ್ನೆಯಷ್ಟೇ ಮೂರ್ಖತನದ್ದು ಈ ಪ್ರಶ್ನೆ ಕೂಡ. ದೇಹದಲ್ಲಿ ಆತ್ಮದ ಪ್ರಭಾವವನ್ನು ನಾವು ನೋಡಬಹುದು ಎನ್ನುವ ಉತ್ತರವನ್ನು ಮಾತ್ರ ನಾವು ನೀಡುತ್ತೇವೆ.

ನಮ್ಮ ಉತ್ತರವೆಂದರೆ, ಮೃತ ದೇಹ ಮತ್ತು ಸಾಯುವ ಮುನ್ನ ಅದೇ ಜೀವಿತ ವ್ಯಕ್ತಿಯ ನಡುವಣ ವ್ಯತ್ಯಾಸವನ್ನು ಅಧ್ಯಯನ ಮಾಡುವುದು. ಎಲೆಕ್ಟ್ರಾನ್ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆಗೆ ವಿಜ್ಞಾನವು ನೀಡುವ ಉತ್ತರಕ್ಕೆ ಇದೇನೂ ವೈಜ್ಞಾನಿಕವಾಗಿ ಕಡಮೆ ಉತ್ತರವಲ್ಲ.

ವಿಜ್ಞಾನದಲ್ಲಿ ನ್ಯೂಟನ್‌ನ ಯಾಂತ್ರಿಕವಾದದ ಸರಳೀಕರಣ ತತ್ತ್ವದಿಂದ ಸಮಗ್ರತಾ ಸಿದ್ಧಾಂತಕ್ಕೆ ತೀವ್ರವಾದ ಬದಲಾವಣೆಯಾಗಿದೆ.

ವೈಜ್ಞಾನಿಕ ವಿಧಾನ ವಿಸ್ತರಣೆ

ವಿಜ್ಞಾನವು ನಿಜವಾಗಿಯೂ ಅಲ್ಲಿರುವ ಸತ್ಯವನ್ನು ಕುರಿತು ಅಲ್ಲ, ಸಮಗ್ರ ಅಥವಾ ಮೊತ್ತ ಮತ್ತು ಸಂಕೀರ್ಣ ಪದ್ಧತಿಗಳ ಅಧ್ಯಯನದತ್ತ ಹೆಚ್ಚಾಗಿ ಸಾಗುತ್ತಿರುವಾಗ, ನಂಬಿಕೆಗಳನ್ನು ರೂಪಿಸಲು, ಅದರ ಪರಿಣಾಮವನ್ನು ಅಧ್ಯಯನ ಮಾಡಲು ಮತ್ತು ನಂಬಿಕೆಗಳು ಹೇಗೆ ಮತ್ತು ಏಕೆ ಕೆಲಸ ಮಾಡುತ್ತವೆ (ಅವು ಕೆಲಸ ಮಾಡಿದರೆ) ಎನ್ನುವ ಬಗೆಗೆ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಲು ನಾವು ಏಕೆ ನಿಖರವಾದ ವೈಜ್ಞಾನಿಕ ವಿಧಾನಗಳನ್ನು ವಿಸ್ತರಿಸಬಾರದು?

ತಲೆಮಾರುಗಳಿಂದ ಮಾನವ ಸಮಾಜಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಂಪ್ರದಾಯಿಕ ನಂಬಿಕೆಗಳ ಅಧ್ಯಯನಕ್ಕಾಗಿ ವೈಜ್ಞಾನಿಕ ವಿಧಾನಗಳನ್ನು ನಾವು ಈ ರೀತಿ ವಿಸ್ತರಿಸಿಕೊಳ್ಳಬಹುದು. ಒಮ್ಮೆ ರಹಸ್ಯ ಭೇದಿಸಿದರೆ, ಈ ಸಾಂಪ್ರದಾಯಿಕ ನಂಬಿಕೆಗಳು ಖಂಡಿತವಾಗಿಯೂ ಮಾನವನಿಗೆ ಪ್ರಕೃತಿಯ ತೀಕ್ಷ್ಣವಾದ ರಹಸ್ಯಗಳೊಳಗೆ ಪ್ರವೇಶಿಸಲು ನೆರವಾಗುತ್ತವೆ.

ಕೊನೆಯದಾಗಿ, ಒಂದು ವಸ್ತುವಿನ ದುರುಪಯೋಗವು ಆ ವಸ್ತುವನ್ನು ನಿರುಪಯೋಗಗೊಳಿಸುವುದಿಲ್ಲ. ಕಣ್ಣುಗಳಲ್ಲಿ ಪೊರೆ ಇದ್ದರೆ, ಕಣ್ಣುಗಳನ್ನು ಕೀಳುವುದು ಪರಿಹಾರವಲ್ಲ, ಪೊರೆಯನ್ನು ತೆಗೆಯುವುದೇ ಪರಿಹಾರ.

ನಂಬಿಕೆಗಳನ್ನು ಕುರಿತ ಮಾನವ ಶಕ್ತಿಯನ್ನು ಮುಗ್ಧರ ಶೋಷಣೆಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಕಾರಣಕ್ಕಾಗಿ ನಾವು ನಮ್ಮ ಸಮಾಜದಿಂದ ನಂಬಿಕೆಯನ್ನು, ಮುಖ್ಯವಾಗಿ ಕಾಲದ ಪರೀಕ್ಷೆಯಲ್ಲಿ ಸ್ಥಿರವಾಗಿ ನಿಂತಿರುವ ನಂಬಿಕೆಗಳನ್ನು ಹೊರಹಾಕುವುದು ಸಾಧ್ಯವಿಲ್ಲ.

ಆ ರೀತಿಯಲ್ಲಿ ನಿಂದನೆಗೆ ವಿಜ್ಞಾನವೇನೂ ಹೊರತಾಗಿಲ್ಲ.  ಭಾರೀ ವಾಣಿಜ್ಯ ಲಾಭಕ್ಕಾಗಿ, ಸಮಾಜ ಮತ್ತು ವೈದ್ಯ ವಿಜ್ಞಾನಗಳಲ್ಲಿ, ಏನನ್ನೋ ಸಾಬೀತು ಪಡಿಸಲು ಕೀಳುಮಟ್ಟದ ಕಾರ್ಯಾಚರಣೆಗೆ ಕುತಂತ್ರದ ವೈಜ್ಞಾನಿಕ ಮಾಹಿತಿ ಮತ್ತು ಅಂಕಿಅಂಶಗಳನ್ನು ಅನೈತಿಕ ವಿಧಾನಗಳಿಂದ ಸೃಷ್ಟಿಸಿದ, ಸಾಬೀತುಪಡಿಸಿದ ಅನೇಕ ಪ್ರಕರಣಗಳಿವೆ.

ಸತ್ಯದ ಅನ್ವೇಷಣೆಗೆ ಬದಲಾಗಿ ಬೇರೆ ಕಾರಣಗಳಿಗಾಗಿ ಇಂದು ಬಹಳ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.

ಹಾಗಾದರೆ ವಿಜ್ಞಾನಗಳನ್ನು ಬಿಟ್ಟುಬಿಡಬೇಕೆಂದು ಅದರ ಅರ್ಥವೇ?

ಖಂಡಿತವಾಗಿಯೂ ಅಲ್ಲ.

ಹುಸಿಯಾಗಿರುವುದನ್ನು ಹೊರಹಾಕಲು ಶಿಸ್ತುಬದ್ಧವಾದ ವಿಧಾನಗಳಿಲ್ಲದೆ ಮತ್ತು ಮಾನವ ಅಂತರ್ಬೋಧೆಯಿಂದ ಬೆಂಬಲಿತವಾದ ನಾವಿನ್ಯ, ಪರೀಕ್ಷಾತ್ಮಕ ಮತ್ತು ತರ್ಕಬದ್ಧ ವಿಧಾನಗಳ ಮೂಲಕ ನಿಜವಾದುವನ್ನು ಆಳವಾಗಿ ಅಧ್ಯಯನ ಮಾಡದೆಯೇ ವಿಧವಿಧವಾದ ಶ್ರದ್ಧೆಗಳನ್ನು ಹೊರಹಾಕಬೇಡಿ ಎಂದು ನಾವು ಪ್ರತಿಪಾದಿಸುತ್ತಿದ್ದೇವೆ.

ಮಾನವ ಮನಸ್ಸು ಮತ್ತು ಅಸ್ತಿತ್ವದ ಬಗೆಗೆ ಈ ರೀತಿ ಶ್ರದ್ಧೆಗಳ ಬಗೆಗೆ ವಿಶ್ವವು ಅಪಾರವಾದ ಮಾಹಿತಿಯಿಂದ ತುಂಬಿದೆ. ಆಧುನಿಕ ಮಾನವನು ಮುಕ್ತ ಮನಸ್ಕನಾಗಿರಬೇಕು ಮತ್ತು ಮಾನವ ಕುಲಕ್ಕೆ ಒಳ್ಳೆಯದನ್ನು ಮಾಡುವ ಪುರಾವೆ ಆಧಾರಿತ ಶ್ರದ್ಧೆಗಳ ಸಂಸ್ಥೆಯನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು.

ಉದಾಹರಣೆಗೆ, ಕರ್ಮ ಮತ್ತು ಪುನರ್ಜನ್ಮವು ನಮ್ಮ ದೇಶದ ಎರಡು ಶ್ರದ್ಧೆಗಳಾಗಿದ್ದು, ಕಾಮ, ಲೋಭ ಮತ್ತು ಇತರ ಜೀವಿಗಳ ವಿರುದ್ಧ ಹಿಂಸೆಯನ್ನು ನಿಯಂತ್ರಿಸಲು ಮಾನವ ಜೀವಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ.

ಮಾನವನ ಅನೈತಿಕ ನಡತೆ, ಆಕ್ರಮಣಕಾರಿ ಮತ್ತು ಲೋಭ ಪ್ರವೃತ್ತಿಯನ್ನು ನಿಯಂತ್ರಿಸುವ ಮತ್ತು ಪ್ರಸ್ತುತದಲ್ಲಿ ಅತ್ಯಗತ್ಯವಾಗಿರುವ ಶಾಂತಿ ಹಾಗೂ ಸೌಹಾರ್ದತೆಯನ್ನು ಸಮಾಜದಲ್ಲಿ ತರುವ ಒಂದು ಶ್ರದ್ಧೆ ಪದ್ಧತಿಗಿಂತ ಉತ್ತಮವಾದ ಶ್ರದ್ಧೆಯ ಅಳವಡಿಕೆಯನ್ನು ಯಾರು ತಾನೇ ನಿರೀಕ್ಷಿಸುತ್ತಾರೆ?

ವಿಶ್ವವನ್ನು ಅರ್ಥ ಮಾಡಿಕೊಳ್ಳಲು ನೈತಿಕ ವೈಜ್ಞಾನಿಕ ಸಂಶೋಧನೆಯು ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ. ನೈತಿಕ ಶೋಧನೆ ಮತ್ತು ಸಂಶೋಧನೆಯನ್ನು ಸಾಂಪ್ರದಾಯಿಕ ಶ್ರದ್ಧೆಗಳಿಗೆ ವಿಸ್ತರಿಸುವುದರಿಂದ ಅದು ಪ್ರಕೃತಿಯಲ್ಲಿ ಈವರೆಗೆ ಶೋಧಿಸಿಲ್ಲದ ಕ್ಷೇತ್ರಗಳಿಗೆ ಮಾನವನು ಹೆಜ್ಜೆ ಇಡಲು ನೆರವಾಗುತ್ತದೆ ಮತ್ತು  ಅವನ ಜ್ಞಾನ ಶೋಧನೆಯನ್ನು ತೆರೆಯುತ್ತದೆ.
Leave a Reply

Your email address will not be published. Required fields are marked *