Search
Monday 18 November 2019
  • :
  • :

ವಿಜ್ಞಾನ ಮತ್ತು ಅಧ್ಯಾತ್ಮ

ಐಹಿಕ ಉಪಭೋಗಕ್ಕಿಂತ ಮಿಗಿಲಾದುದಕ್ಕೆ ಮಾನವ ಜೀವನವು ಉದ್ದಿಷ್ಟವಾಗಿದೆ ಎಂಬ ವೈದಿಕ ದೃಷ್ಟಿಕೋನವನ್ನು ಆಧುನಿಕ ಸಂಶೋಧನೆಯು ದೃಢೀಕರಿಸುತ್ತದೆ.

ಒಬ್ಬ ರೈತನಿಗೆ ಮರ್ಸಿಡೀಸ್ ಬೆಂಜ್ ಕಾರು ಉಡುಗೊರೆಯಾಗಿ ಬಂದಿತು ಎನ್ನುವುದನ್ನು ಕಲ್ಪಿಸಿಕೊಳ್ಳಿ. ಅವನು ನೋಡಿರುವ ಏಕಮೇವ ವಾಹನವೆಂದರೆ ಟ್ರ್ಯಾಕ್ಟರ್, ಮತ್ತು ಯಾವುದೇ ವಾಹನದ ಏಕಮೇವ ಉದ್ದೇಶವು ಉಳುವುದಕ್ಕಾಗಿ ಮಾತ್ರ ಎಂದು ಅವನು ಬಲ್ಲ. ಆದ್ದರಿಂದ ಅವನು ಅದಕ್ಕೊಂದು ನೇಗಿಲನ್ನು ಕಟ್ಟಿ ತನ್ನ ಹೊಲದಲ್ಲಿ ಚಲಾಯಿಸಲು ಪ್ರಾರಂಭಿಸುತ್ತಾನೆ. ಸಹಜವಾಗಿಯೇ ಅವನ ಉಳುವ ಪ್ರಯತ್ನ ವಿಫಲವಾಗುತ್ತದೆ, ಅಷ್ಟೇ ಅಲ್ಲ ಅವನ ಹೊಸ ಕಾರು ಕೆಟ್ಟು ಹೋಗುತ್ತದೆ. ಅವನು ತನ್ನ ಬಗೆಗೆ, ತನ್ನ ಕಾರಿನ ಬಗೆಗೆ ಮತ್ತು ತನ್ನ ಹೊಲದ ಬಗೆಗೆ ಸಂಪೂರ್ಣವಾಗಿ ಹತಾಶನಾಗುತ್ತಾನೆ.

ಹೊಲ ಉಳಲು ಯಾರೋ ಒಬ್ಬ ಮರ್ಸಿಡೀಸ್ ಕಾರನ್ನು ಬಳಸಿದ ಎನ್ನುವುದು ಹಾಸ್ಯಾಸ್ಪದ ಎಂದು ನಾವು ಹೇಳಬಹುದು. ಆದರೆ ಇದು ನಮ್ಮ ಜೀವನದ ಕಥೆಯೇ ಆಗಿದ್ದಿರಬಹುದೆ? ವೈದಿಕ ಧರ್ಮಗ್ರಂಥಗಳು – ಮತ್ತು ಜಗತ್ತಿನ ಎಲ್ಲ ಮಹಾನ್ ಧರ್ಮಗಳ ಧರ್ಮಗ್ರಂಥಗಳು – ಮಾನವ ಜನ್ಮವು ಉದ್ದಿಷ್ಟವಾಗಿರುವುದು ಐಹಿಕ ಉಪಭೋಗದ ಸಾಧನೆಗಾಗಿ ಅಲ್ಲ, ಬದಲಿಗೆ ಆಧ್ಯಾತ್ಮಿಕ ಪೂರ್ಣಸಿದ್ಧಿಯ ಸಾಧನೆಗಾಗಿ ಎಂದು ಹೇಳುತ್ತವೆ. ವೈದಿಕ ಧರ್ಮಗ್ರಂಥಗಳು ಮತ್ತೂ ಹೇಳುವುದೇನೆಂದರೆ ೮೪ಲಕ್ಷ ಜೀವಜಾತಿಗಳಲ್ಲಿ ದೇಹಾಂತರ ವಾಸವನ್ನು ಮಾಡಿದ ಮೇಲೆ ಆತ್ಮಕ್ಕೆ

ಸಿಗುವ ಅಮೂಲ್ಯವಾದ ವಾಹನವೇ ಈ ಮಾನವ ದೇಹ. ಮಾನವ ದೇಹಕ್ಕಿಂತ ಕೆಳಸ್ತರದ ಎಲ್ಲ ದೇಹಗಳಲ್ಲಿ ಆತ್ಮಕ್ಕೆ ದೇಹದ ಅಗತ್ಯಗಳಾದ ತಿನ್ನುವುದು, ಮಲಗುವುದು, ಕೂಡುವುದು ಮತ್ತು ರಕ್ಷಣೆ ಮಾಡಿಕೊಳ್ಳುವುದು ಇವುಗಳನ್ನು ಈಡೇರಿಸಿಕೊಳ್ಳುವುದರ ಮೂಲಕ ಐಹಿಕ ಉಪಭೋಗಗಳನ್ನು ಅನುಭವಿಸಲು ಮಾತ್ರ ಅವಕಾಶವಿರುತ್ತದೆ. ಎಲ್ಲ ಐಹಿಕ ಉಪಭೋಗಗಳನ್ನು ಪಡೆಯುವುದು ಕಷ್ಟಕರ. ಪಡೆದ ಮೇಲೂ ಅದು ಅತೃಪ್ತಿಕರ. ಏಕೆಂದರೆ ದೇಹದ ಉಪಭೋಗದ ಸಾಮರ್ಥ್ಯವು ಪರಿಮಿತವಾಗಿರುತ್ತದೆ. ಈ ಅಲ್ಪ ಸುಖ ಕೂಡ ವ್ಯಾಮತ್ತು ವೃದ್ಧಾಪ್ಯದಿಂದ ಅನಿವಾರ್ಯವಾಗಿ ಮೊಟಕುಗೊಳ್ಳುತ್ತದೆ ಮತ್ತು ಮೃತ್ಯುವಿನಿಂದ ಮುಕ್ತಾಯಗೊಳ್ಳುತ್ತದೆ.

ಮಾನವ ದೇಹದಲ್ಲಿ ಮಾತ್ರ ಆತ್ಮದ ಪ್ರಜ್ಞೆಯು ದೈವ ಪ್ರೇಮವೆಂಬ ಉನ್ನತೋನ್ನತ ಆನಂದದ ಆಕರವನ್ನು ಎಟುಕಿಸಿಕೊಳ್ಳುವಷ್ಟು  ವಿಕಾಸವನ್ನು ಹೊಂದಿರುತ್ತದೆ. ಆತ್ಮವು ತನ್ನ ಮೂಲಧಾಮವಾದ ಆಧ್ಯಾತ್ಮಿಕ ಲೋಕದಲ್ಲಿ ಶಾಶ್ವತವಾದ ಸಂತೋಷವನ್ನು ಪಡೆಯಲು ದೈವ ಪ್ರೇಮವು ಸಾಮರ್ಥ್ಯವನ್ನು ನೀಡುತ್ತದೆ ಎಂದು ವೈದಿಕ ಧರ್ಮಗ್ರಂಥಗಳು ವಿವರಿಸುತ್ತವೆ. ದೇವರನ್ನು ಕುರಿತ ಈ ಪ್ರೇಮವನ್ನು ಸಾಸುವ ನಿರ್ದಿಷ್ಟವಾದ ಮತ್ತು ಏಕಮಾತ್ರವಾದ ಉಪಯೋಗಕ್ಕಾಗಿ ಆತ್ಮವು ಈ ಮಾನವ ದೇಹವನ್ನು ಉಪಯೋಗಿಸಬೇಕು.

ಕ್ಷಣಭಂಗುರವಾದ ದೈಹಿಕ ಸಂತೋಷಗಳನ್ನು ನೀಡುವ ಮಾನವನಿಗಿಂತ ಕೆಳಸ್ತರದ ದೇಹಗಳನ್ನು ನಾವು ಹೊಲವನ್ನು ಉಳಲು ನಿರ್ದಿಷ್ಟವಾದ ಟ್ರ್ಯಾಕ್ಟರ್ ಒಡನೆ ಹೋಲಿಸಬಹುದು. ಆತ್ಮಕ್ಕೆ ಶಾಶ್ವತವಾದ ಸಂತೋಷವನ್ನು ಕೊಡುವ ಮಾನವ ದೇಹವನ್ನು ಸುಲಲಿತವಾದ ಸವಾರಿಯನ್ನು ನೀಡುವ ವೈಭವೋಪೇತ ಮರ್ಸಿಡೀಸ್‌ಗೆ ಹೋಲಿಸಬಹುದು. ಮಾನವ ದೇಹವನ್ನು ಐಂದ್ರಿಯಕ ಉಪಭೋಗಗಳಿಗೆ ಬಳಸುವುದು ಹೊಲವನ್ನು ಉಳಲು ಕಾರನ್ನು ಬಳಸುವುದಕ್ಕಿಂತ ತೀರ ಬೇರೆ ಏನಲ್ಲ.

ನಮ್ಮ ಸುತ್ತಮುತ್ತ ಇರುವ ಬಹುತೇಕ ಪ್ರತಿಯೊಬ್ಬರೂ ಐಹಿಕ ಗುರಿಗಳನ್ನು – ಕಾಮ, ಸಂಪತ್ತು, ವೈಭವಗಳು, ಘನತೆ, ಅಕಾರ, ಕೀರ್ತಿ – ಅರಸುತ್ತಿರುವುದರಿಂದ, ಆ ರೀತಿ ಬೆಂಬತ್ತುವುದೇ ಮಾನವ ಜೀವನದ ಸಹಜವಾದ ಉದ್ದೇಶ ಎಂದು ಭಾವಿಸಿಕೊಳ್ಳುತ್ತೇವೆ. ಆದರೆ ನಾಣ್ಣುಡಿಯೊಂದು ಹೇಳುವಂತೆ, “ದಾರಿಯು ಸವೆದಿರುವ ಕಾರಣದಿಂದಲೇ ನೀನು ಸರಿಯಾದ ಮಾರ್ಗದಲ್ಲಿರುವೆಯೆಂದು ಭಾವಿಸಬೇಡ.”

ವಾಸ್ತವಾಂಶಗಳೇ ನುಡಿಯಲಿ

ಉಳಲು ನಾವು ಮರ್ಸಿಡೀಸ್ ಅನ್ನು ಬಳಸಿದಾಗ ಮೂರು ಸಂಗತಿಗಳು ನಡೆಯುತ್ತವೆ: ಹೊಲ ಹಾಳಾಗುತ್ತದೆ, ಕಾರು ಹಾಳಾಗುತ್ತದೆ, ಚಾಲಕ ಹತಾಶನಾಗುತ್ತಾನೆ. ಮಾನವ ದೇಹವನ್ನು ಐಂದ್ರಿಯಕ ಉಪಭೋಗಕ್ಕಾಗಿ ಮಾತ್ರ ಬಳಸಿದರೆ ಏನಾಗುತ್ತದೆಂದು ವಿಜ್ಞಾನವು ಕಂಡು ಹಿಡಿದಿದೆ ಎನ್ನುವುದನ್ನು ಹೋಲಿಕೆಯೊಡನೆ ನೋಡೋಣ. ನಿರ್ದಿಷ್ಟವಾಗಿ ಪರಿಸರಕ್ಕೆ (ಹೊಲ), ಮಾನವ ದೇಹಕ್ಕೆ (ಕಾರು) ಮತ್ತು ನಮಗೆ (ಚಾಲಕ) ಏನಾಗುತ್ತದೆ ಎಂದು ನೋಡೋಣ.

ಪರಿಸರ:

ಅನೇಕ ವಿಜ್ಞಾನಿಗಳ ಪೈಕಿ ಜೀವ ವಿಜ್ಞಾನಿ ಇ.ಓ. ವಿಲ್ಸನ್ ಜೀವಗೋಳದಲ್ಲಿ ನಾನಾ ಜೀವ ಜಾತಿಗಳ ನಡುವೆ ಇರುವ ಸಂಕೀರ್ಣವಾದ ಪರಸ್ಪರಾವಲಂಬನೆಯನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಈ ಭೂಮಿಯ ಪರಿಸರಕ್ಕೆ ಪ್ರತಿಯೊಂದು ಜೀವಜಾತಿಯೂ ಏನಾದರೊಂದು ಕೊಡುಗೆಯನ್ನು ನೀಡುತ್ತದೆ ಎಂದು ಅವರು ಕಂಡು ಹಿಡಿದಿದ್ದಾರೆ. ಉದಾಹರಣೆಗೆ ಸಸ್ಯವರ್ಗ ಕ್ಷೀಣಿಸಿದರೆ ಸಸ್ಯಾಹಾರಿಗಳು ಸಂಕಷ್ಟಕ್ಕೆ ಗುರಿಯಾಗುತ್ತವೆ, ಅದರಿಂದ ಮಾಂಸಾಹಾರಿಗಳು ಸಂಕಷ್ಟಕ್ಕೆ ಗುರಿಯಾಗುತ್ತವೆ. ಆದರೆ ಒಂದು ಜೀವಿಯು ಪರಿಸರಕ್ಕೆ ಯಾವ ಕಾಣಿಕೆಯನ್ನೂ ಕೊಡುವುದಿಲ್ಲ ಎಂದು ಅವರು ಕಂಡುಹಿಡಿದರು – ಅವನೇ ಮಾನವ. ಮನುಷ್ಯಜೀವಿಗಳು ಸಂಪೂರ್ಣವಾಗಿ ನಾಶವಾದರೆ ಬೇರೆ ಯಾವುದೇ ಪ್ರಾಣಿಗಳಿಗಾಗಲೀ ಅಥವಾ ಪರಿಸರಕ್ಕಾಗಲಿ ಯಾವುದೇ ಸಮಸ್ಯೆಯೂ ಇರುವುದಿಲ್ಲ. ದಿಟದಲ್ಲಿ, ಮಾನವನ ವಿನಾಶವು ಪರಿಸರದ ಬಹುಪಾಲು ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಭೂಲೋಕದಲ್ಲಿ ಮಾನವ ಜೀವಜಾತಿಯೇ ಅತ್ಯಂತ ಬುದ್ಧಿವಂತ ಎಂದು ವಾದಿಸಲಾಗಿದೆ. ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿಯು ಹೆಚ್ಚು ಬುದ್ಧಿವಂತನಾಗಿದ್ದರೆ ಅವನ ಕೊಡುಗೆಯೂ ಹೆಚ್ಚು ಧನಾತ್ಮಕವಾಗಿರುತ್ತದೆ. ಹಾಗಾದರೆ ಎಲ್ಲ ಜೀವಜಾತಿಗಳಲ್ಲಿ ಪರಿಸರಕ್ಕೆ ಮಾನವರಾದ ನಮ್ಮ ಕೊಡುಗೆಯು ಅತ್ಯಂತ ಧನಾತ್ಮಕವಾಗಿಲ್ಲದೆ ಅತ್ಯಂತ ಋಣಾತ್ಮಕವಾಗಿರುವುದೇಕೆ? ನಮ್ಮ ಕೊಡುಗೆಯು ದೈಹಿಕವಾಗಿರುವುದಕ್ಕಿಂತ ಒಂದು ಹಂತ ಎತ್ತರದಲ್ಲಿರಬೇಕೆನ್ನುವುದು ಇದರ ಉದ್ದೇಶವೇ?

ಮಾನವ ದೇಹ:

ಅನೇಕರು ಆನಂದದಾಯಕವೆಂದು ಪರಿಗಣಿಸುವ ಚಟುವಟಿಕೆಗಳು ಮಾನವನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಧೂಮಪಾನವು ಶ್ವಾಸಕೋಶದ ಕಾಯಿಲೆಗೆ ಕಾರಣವಾಗುತ್ತದೆ, ಮದ್ಯಪಾನವು ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ. ಮಾಂಸಾಹಾರ ಮತ್ತು ಕಡಮೆ ಪೌಷ್ಟಿಕಾಂಶ (ಜಂಕ್ ಆಹಾರವುಳ್ಳ) ಆಹಾರ ತಿನ್ನುವುದರಿಂದ ಪಚನ ಕ್ರಿಯೆ ಹಾಳಾಗುತ್ತದೆ. ಕಾನೂನು ಬಾಹಿರ ಕಾಮ – ನಿರಂತರವಾಗಿ ಅತಿರೇಕದಲ್ಲಿರುವ ಲೈಂಗಿಕ ಆಮೋದ -ಏಯ್ಡ್ಸ್ ರೋಗವನ್ನು ತರುತ್ತದೆ, ಈ ಪಿಡುಗಿಗೆ ಚಿಕಿತ್ಸೆಯ ನೆರವೆಂಬುದೇ ಇಲ್ಲ. ಆಧುನಿಕ ಸಮಾಜ, ಶಿಕ್ಷಣ ಮತ್ತು ಮಾಧ್ಯಮಗಳು, ಐಹಿಕ ಆಮೋದಗಳೇ ಜೀವನದ ಗುರಿ ಎಂದು ನಾವು ನಂಬುವಂತೆ ನಮಗೆ ಬೋಸುತ್ತವೆ. ಆದರೆ ಈ “ಆಮೋದ”ವು ನಮಗೆ ಅತ್ಯಂತ ಕೆಟ್ಟದಾದ ಯಾತನೆಗೆ ಕಾರಣವಾಗುತ್ತದೆ. ಯಾವ ಚಟುವಟಿಕೆಗಳಿಗೆ ನಮ್ಮ ಈ ಮಾನವ ಶರೀರವು ವಿನ್ಯಾಸಗೊಂಡಿಲ್ಲವೋ ಅಂತಹವುಗಳಲ್ಲಿ ಭಾಗವಹಿಸುವಂತೆ ದುರಂತವಾಗಿ ನಮ್ಮನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆಯೇ?

ನಾವು:

ನಮ್ಮ ಮೇಲೆ ಇದರ ಪರಿಣಾಮವೇನು? ಆತ್ಮ ಎಂದರೆ ಯಾರು ಅಥವಾ ಏನು ಎಂದು ವಿಜ್ಞಾನಿಗಳು ಇನ್ನೂ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಆದರೆ ಒಂದು ಸಂಗತಿಯಂತೂ ಖಚಿತ: ಆಧುನಿಕ ಸಮಾಜವು ಆಧ್ಯಾತ್ಮಿಕ ಬೆಳವಣಿಗೆಯನ್ನು ನಿರ್ಲಕ್ಷಿಸಿದಷ್ಟೂ ಅಥವಾ ತಿರಸ್ಕರಿಸಿದಷ್ಟೂ ಆತ್ಮಕ್ಕೆ ಇನ್ನೂ ಹೆಚ್ಚು ತೊಂದರೆಗಳಾಗುತ್ತವೆ. ಇದು ಸುರುಳಿ ಸುರುಳಿಯಾಗಿ ಮೇಲೇರುತ್ತಿರುವ ನಮ್ಮ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದಲೇ ಸ್ಪಷ್ಟವಾಗುತ್ತದೆ. ವಿಶ್ವಆರೋಗ್ಯ ಸಂಸ್ಥೆ (Uಏu) ಪ್ರಸ್ತುತ ಶತಮಾನದಲ್ಲಿ ಮಾನಸಿಕ ರೋಗಗಳು – ಕರ್ಷಣೆ, ಖಿನ್ನತೆ, ವ್ಯಸನ, ಮನೋದೈಹಿಕ ಸಮಸ್ಯೆಗಳು – ಅತ್ಯಕವಾದ ಆರೋಗ್ಯ ಸಮಸ್ಯೆಯಾಗಿರುತ್ತವೆ ಎಂದು ಘೋಷಿಸಿದೆ. ಇದಕ್ಕಿಂತ ಕೇಡಿನ ಸಂಗತಿಯೆಂದರೆ, ಪ್ರತಿವರ್ಷ ೧೦ ಲಕ್ಷಕ್ಕಿಂತಲೂ ಅಕ ಸಂಖ್ಯೆಯ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು Uಏu ಅಂಕಿಅಂಶಗಳು ಸೂಚಿಸುತ್ತವೆ. ಇದು ಯುದ್ಧ ಮತ್ತು ಅಪರಾಧ ಕೃತ್ಯಗಳಿಂದ ಪ್ರತಿವರ್ಷ ಮರಣವನ್ನಪ್ಪುವ ಒಟ್ಟು ಜನರಿಗಿಂತ ಹೆಚ್ಚು. ಮತ್ತು ಈ ಸಂಖ್ಯೆಯು ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಮಾತ್ರ.

ಮಾನಸಿಕ ಅಸ್ವಸ್ಥತೆ ಮತ್ತು ಆತ್ಮಹತ್ಯೆಗೆ ಅನೇಕ ಕಾರಣಗಳಿವೆ. ಆದರೆ ಒಂದು ಸಾಮಾನ್ಯವಾದ ಮೂಲವೆಂದರೆ ವ್ಯಕ್ತಿಯು ತನ್ನ ಗುರಿಗಳನ್ನು ಸಾಸುವಲ್ಲಿ ವಿಫಲನಾಗುವುದರಿಂದ ಮೂಡುವ ಹತಾಶೆ (ಆ ಗುರಿಗಳು ಏನಾದರಾಗಿರಲಿ). ಈ ಹತಾಶೆಯು ತೀವ್ರವಾದ ಮತ್ತು ಆಶಾರಹಿತವಾದ ಹಂತವನ್ನು ಮುಟ್ಟಿದಾಗ, ವ್ಯಕ್ತಿಯು ತನ್ನ ಅಸ್ತಿತ್ವವೇ ಕಡುದುಃಖವಾಗಿದೆ ಎಂದು ಭಾವಿಸುತ್ತಾನೆ. ವ್ಯಕ್ತಿಯು ತನ್ನ ಅಸ್ತಿತ್ವವನ್ನು ಮುಕ್ತಾಯಗೊಳಿಸಿಕೊಳ್ಳುವುದು ಮಾತ್ರ ಇದಕ್ಕೆ ಪರಿಹಾರ ಎಂದು ತೋರುತ್ತದೆ. ಹಾಗಿಲ್ಲದ ಪಕ್ಷದಲ್ಲಿ, ಎಲ್ಲ ಜೀವಜಾತಿಗಳಲ್ಲಿ ಅತ್ಯಂತ ಬುದ್ಧಿವಂತನಾದ ಆಧುನಿಕ ಮಾನವನು ದಿಗಿಲುಂಟು ಮಾಡುವಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಏಕಮೇವ ಜೀವಜಾತಿಯಾಗಿರುವುದೇಕೆ? Uಏu, ಆತ್ಮಹತ್ಯೆಯನ್ನು “ದುರಂತಮಯವಾದ ಸಾಮಾಜಿಕ ಆರೋಗ್ಯ ಸಮಸ್ಯೆ” ಎಂದು ಕರೆಯುವುದೇಕೆ? ಮತ್ತು ಇದಕ್ಕೆ ಸಿದ್ಧವಾದ ಚಿಕಿತ್ಸೆ ಎಂಬುದಿಲ್ಲ ಎಂದು ಹೇಳುವುದೇಕೆ? ಸಮಾಜವು ನಮಗೆ ನಿಗದಿ ಮಾಡಿರುವ ಗುರಿಗಳು ಅಸಮಂಜಸವಾಗಿದ್ದು ಹತಾಶೆಗೆ ಆಹ್ವಾನ ನೀಡಿ ಅದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅಂತಿಮವಾಗಿ ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಿವೆಯೇ?

ನೋಡಿ, ನಂಬಿ

ನಮ್ಮ ಮಾನವ ಶಕ್ತಿಯನ್ನು ಆಧ್ಯಾತ್ಮಿಕ ಉನ್ನತಿಗೆ ನಿರ್ದೇಶಿಸುವುದು ಹೇಗೆ ಪರಿಸರ, ಮಾನವ ಆರೋಗ್ಯ ಮತ್ತು ಆತ್ಮದ ಮೇಲೆ ಪರಿಣಾಮ ಬೀರುತ್ತದೆ? ವಿಜ್ಞಾನವು ಇದಕ್ಕೆ ಏನು ಹೇಳುತ್ತದೆ ನೋಡೋಣ.

ಪರಿಸರ:

ಆಧ್ಯಾತ್ಮಿಕತೆಯ ಇಳಿಮುಖತೆ ಮತ್ತು ಅದರ ಅಂತರ್ಗತವಾದ ಸ್ವನಿಯಂತ್ರಣಕ್ಕೆ ಹೊಂದಿಕೊಂಡು ಬಂದಿರುವ ಐಹಿಕವಾದ ಮತ್ತು ಗಿರಾಕಿಯ ಹಿತರಕ್ಷಣೆಗಳಿಂದ ಬಹುಪಾಲು ಪರಿಸರ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ವರ್ಲ್ಡ್ ವಾಚ್ ಸಂಸ್ಥೆಯ ಆಲನ್ ಡರ್ನಿಂಗ್ ಅವರ ಕೆಳಕಂಡ ಹೇಳಿಕೆಯು, ಪರಿಸರವನ್ನು ರಕ್ಷಿಸಲು ಇರುವ ಏಕಮೇವ ಭರವಸೆಯೆಂದು ಯಾವುದನ್ನು ಅನೇಕ ವಿಜ್ಞಾನಿಗಳು ಪರಿಗಣಿಸಿದ್ದಾರೆಯೋ ಅದನ್ನು ಪ್ರತಿನಿಸುತ್ತದೆ: “ಭಂಗುರವಾದ ಜೀವಗೋಳದಲ್ಲಿ ಮನುಕುಲದ ಅಂತಿಮ ಹಣೆಬರಹವು, ಪರಿಮಿತ ಬಳಕೆ ಹಾಗೂ ಐಹಿಕಕ್ಕೆಅತೀತವಾದ ಶ್ರೀಮಂತಗೊಳಿಸುವಿಕೆ ಎಂಬ ವ್ಯಾಪಕವಾದ ನೀತಿಯ ಮೇಲೆ, ಸ್ವ ನಿಯಂತ್ರಣದ ಗಾಢವಾದ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳುತ್ತೇವೆಯೇ ಎನ್ನುವುದರ ಮೇಲೆ ಅವಲಂಬಿತವಾಗಬಹುದು.” ಐಹಿಕಕ್ಕೆ ಅತೀತವಾದ ಎಲ್ಲ ಬಗೆಯ ಶ್ರೀಮಂತಗೊಳಿಸುವಿಕೆಯು – ಪ್ರಾರ್ಥನೆ, ಧ್ಯಾನ, ಯೋಗ, ಪವಿತ್ರ ನಾಮಗಳ ಸಂಕೀರ್ತನೆ ಸ್ಪಷ್ಟವಾಗಿ ಜೀವನದ ಆಧ್ಯಾತ್ಮಿಕ ಆಯಾಮದ ಕಡೆಗೆ ಬೆರಳು ತೋರುತ್ತದೆ. ಈ ಆಧ್ಯಾತ್ಮಿಕ ಆಯಾಮವನ್ನು ಅತ್ಯಂತ ವ್ಯಾಪಕವಾಗಿ ವೈದಿಕ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ವಾಸ್ತವದಲ್ಲಿ, ವೇದಾಂತ ಸೂತ್ರವು ಕಹಳೆ ದನಿಯಲ್ಲಿ ಕರೆ ನೀಡಿ ಪ್ರಾರಂಭಿಸುವುದೇನೆಂದರೆ: ಅಥಾತೋ ಬ್ರಹ್ಮ ಜಿಜ್ಞಾಸ, “ಆದ್ದರಿಂದ ಈಗ (ನಿಮಗೆ ಮಾನವ ದೇಹವಿರುವುದರಿಂದ) ಆಧ್ಯಾತ್ಮಿಕ ಜಿಜ್ಞಾಸೆಗೆ ನಿಮ್ಮನ್ನು ಮುಡಿಪಾಗಿರಿಸಿ.” (ವೇದಾಂತ ಸೂತ್ರ ೧.೧.೧).

ಮಾನವನ ಆರೋಗ್ಯ:

ಲೋಲುಪತೆಯಿಂದ ಹುಟ್ಟುವ ಪ್ರಸ್ತುತ ಪಿಡುಗುಗಳು ತೋರಿಸುವುದೇನೆಂದರೆ – ಉದಾ. ಸಂಯಮ (ಅಮಲು ಪದಾರ್ಥಗಳ ಸೇವನೆಯಿಲ್ಲ) ಮತ್ತು ಇಂದ್ರಿಯ ನಿಗ್ರಹ (ಕಾನೂನು ಬಾಹಿರ ಕಾಮವಿಲ್ಲ) – ಸ್ವ ನಿಯಂತ್ರಣಕ್ಕೆ ಜಾಗತಿಕ ಆಧ್ಯಾತ್ಮಿಕ ಕಟ್ಟಳೆಗಳು ಸದೃಢವಾದ ಆರೋಗ್ಯಕ್ಕೆ ಉಪದೇಶಗಳೂ ಆಗಿವೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಹರ್ಬರ್ಟ್ ಬೆನ್‌ಸನ್ ಅವರು ಆಧ್ಯಾತ್ಮಿಕ ಜೀವನದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳ ಮೇಲೆ ವ್ಯಾಪಕವಾದ ಸಂಶೋಧನೆಯನ್ನು ಮಾಡಿದ್ದು  ಹೇಳುವುದೇನೆಂದರೆ ಮಾನವನ ದೇಹ ಮತ್ತು ಮನಸ್ಸುಗಳು ದೇವರೊಡನೆ ತಂತು ಸಂಬಂಧವನ್ನು ಹೊಂದಿವೆ. ಅಷ್ಟೇ ಅಲ್ಲ ರೀಡರ್ಸ್ ಡೈಜೆಸ್ಟ್‌ನಲ್ಲಿ (ಜನವರಿ – ೨೦೦೧) ಪ್ರಕಟವಾದ ಒಂದು ಸರ್ವೇಕ್ಷಣೆ ಹೇಳುವ ಪ್ರಕಾರ ಆಸ್ತಿಕರು ನಾಸ್ತಿಕರಿಗಿಂತ ಸರಾಸರಿ ಹನ್ನೊಂದು ವರ್ಷಗಳ ಕಾಲ ಹೆಚ್ಚಾಗಿ ಬದುಕುತ್ತಾರೆ.

ಆತ್ಮ :

ಹಾಗಾದರೆ ಆತ್ಮದ ಸಂಗತಿ ಏನು? ವಿಜ್ಞಾನವು ಒಂದು ಅಮೂಲ್ಯವಾದ ಅಂಶವನ್ನು ಕಂಡುಹಿಡಿದಿದೆ: ಆಧ್ಯಾತ್ಮಿಕತೆಯು ಆತ್ಮಕ್ಕೆ ಖಚಿತವಾದ ಒಂದು ಸಾಂತ್ವನ. ಅನೇಕಾನೇಕ ಸರ್ವೇಕ್ಷಣೆಗಳು ತೋರಿಸಿರುವು- ದೇನೆಂದರೆ ಆಧ್ಯಾತ್ಮಿಕ ಆಚರಣೆಗಳು ಜನರನ್ನು ಸ್ವನಾಶದ ನಡವಳಿಕೆ ಮತ್ತು ಹವ್ಯಾಸದಿಂದ ರಕ್ಷಿಸುತ್ತವೆ. ಜಾರ್ಜ್ ವಾಷಿಂಗ್‌ಟನ್ ವಿಶ್ವವಿದ್ಯಾನಿಲಯದ ಪ್ಯಾಟ್ರಿಕ್ ಗ್ಲಿನ್ ಅವರು ತಮ್ಮ ದೇವರು ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಸರ್ವೇಕ್ಷಣೆಗಳು ತೋರುವ ಸಾಕ್ಷ್ಯಾಧಾರಗಳ ಪ್ರಕಾರ ಪ್ರಾರ್ಥನಾ ಸಭೆಗಳಿಗೆ ಹಾಜರಾಗದವರು ಹಾಜರಾಗುವವರಿಗಿಂತ ನಾಲ್ಕು ಪಟ್ಟು ಅಕವಾಗಿ ಆತ್ಮಹತ್ಯಾ ಪ್ರವೃತ್ತಿಗೆ ತುತ್ತಾಗುತ್ತಾರೆ. ಮಿಗಿಲಾಗಿ, ಅಂತಹ ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸುವವರು ಆತ್ಮಹತ್ಯೆಗೆ ಶರಣಾಗಬಹುದೆಂದು ಖಚಿತವಾಗಿ ಮುನ್ನುಡಿಯಬಹುದು. ನಿರುದ್ಯೋಗಕ್ಕಿಂತಲೂ ಇದು ತೀವ್ರವಾದದ್ದು. ಈ ಶೋಧನೆಗಳು, ಆಧ್ಯಾತ್ಮಿಕತೆಯು ಆಂತರಿಕ ಆನಂದವನ್ನು ಒದಗಿಸುತ್ತದೆ ಎಂದು ಸೂಚಿಸುತ್ತವೆ. ಅದು ಜನರನ್ನು, ನಿಯಂತ್ರಿಸಲಾಗದ ಮತ್ತು ತೃಪ್ತಿಪಡಿಸಲಾಗದ ಬಾಹ್ಯ ಉಪಭೋಗಗಳಿಗೆ ಹಾತೊರೆಯುವುದರಿಂದ ವಿಮುಕ್ತಗೊಳಿಸುತ್ತದೆ. ಈ ಬಾಹ್ಯ ಉಪಭೋಗಗಳೇ ವ್ಯಸನಗಳು ಮತ್ತು ಆತ್ಮಹತ್ಯೆಗಳ ಕಡೆಗೆ ಜನರನ್ನು ಒಯ್ಯುತ್ತವೆ. ಇಂತಹ ಶೋಧನೆಗಳು, ಆಧ್ಯಾತ್ಮಿಕತೆಯು ಕೇವಲ ನಮ್ಮ ಜೀವನದ ಒಂದು ಭಾಗವಲ್ಲ, ಅದು ನಮ್ಮ ಜೀವನದ ಸಾರಸರ್ವಸ್ವ ಎಂಬ ವೈದಿಕ ನಿರ್ಣಯವನ್ನು ಪ್ರತಿಧ್ವನಿಸಲು ಕೆಲವು ಆಧುನಿಕ ವಿಚಾರವಾದಿಗಳಿಗೆ ಸೂರ್ತಿಯನ್ನು ನೀಡಿವೆ. ಏಳು ಹವ್ಯಾಸಗಳು ಎಂಬ ಮಾಲಿಕೆಯ ಪ್ರಸಿದ್ಧ ಲೇಖಕರಾದ ಸ್ಟೀಫನ್ ಕೋವೆ ಅವರು ಯುಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ, “ನಾವು ಆಧ್ಯಾತ್ಮಿಕ ಪ್ರವಾಸದಲ್ಲಿರುವ ಮಾನವ ಜೀವಿಗಳಲ್ಲ. ನಾವು ಮಾನವ ಪ್ರವಾಸದಲ್ಲಿರುವ ಆಧ್ಯಾತ್ಮಿಕ ಜೀವಿಗಳು.”

ವಿಜ್ಞಾನವು ಸ್ಪಷ್ಟವಾಗಿ ತೋರುವುದೇನೆಂದರೆ ಐಹಿಕ ಉಪಭೋಗಗಳಿಗಾಗಿ ಕಳೆದ ಮಾನವ ಜೀವನವು ಪರಿಸರಾತ್ಮಕವಾಗಿ, ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅಸಾಮಂಜಸ್ಯದಿಂದ ಕೂಡಿದ್ದು ಮತ್ತು ವಿಪತ್ಕಾರಕವಾದದ್ದು. ನಾವು ಆಧ್ಯಾತ್ಮಿಕ ಸಂತೋಷಕ್ಕಾಗಿ ಪ್ರಯತ್ನಿಸಿದಾಗ, ನಮ್ಮ ಭೂಲೋಕಕ್ಕೂ ಮತ್ತು ನಮ್ಮ ದೇಹಕ್ಕೂ ಪ್ರಯೋಜನವನ್ನು ಉಂಟು ಮಾಡುತ್ತೇವೆ ಎನ್ನುವುದನ್ನೂ ವಿಜ್ಞಾನವು ದೃಢವಾಗಿ ಸೂಚಿಸುತ್ತದೆ. ಮಾನವ ಜೀವನದ ಅತ್ಯುನ್ನತವಾದ ಅಂತರ್ನಿಹಿತ ಸಾಮರ್ಥ್ಯವನ್ನು ಸಾಸಲು ಅಗತ್ಯವಾದ ಐಹಿಕ ನಿಯಂತ್ರಣ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಸಮತೋಲನದಿಂದ ಕೂಡಿದ ಕಾರ್ಯಕ್ರಮವನ್ನು ವೈದಿಕ ಧರ್ಮಗ್ರಂಥಗಳು ನಮಗೆ ಒದಗಿಸುತ್ತವೆ. ಆಹಾರ, ನಿದ್ರೆ, ಕೆಲಸ, ಮನರಂಜನೆಗಳ ನಿಯಂತ್ರಣಗಳು ಆಧ್ಯಾತ್ಮಿಕ ಆಚರಣೆಗಳೊಡನೆ ಸಂಲಗ್ನಗೊಂಡಾಗ ಎಲ್ಲ ಐಹಿಕ ಯಾತನೆಗಳಿಂದಲೂ ಮುಕ್ತರಾಗುವ ಮಾರ್ಗವನ್ನು ರೂಪಿಸುತ್ತವೆ ಎಂದು ಭಗವದ್ಗೀತೆಯು (೬.೧೭) ಹೇಳುತ್ತದೆ. ಆಧುನಿಕ ಯುಗಕ್ಕೆ ಅತ್ಯಂತ ಶಕ್ತಿಶಾಲಿಯಾದ ಮತ್ತು ಕಾರ್ಯಸಾಧುವಾದ ಆಧ್ಯಾತ್ಮಿಕ ಆಚರಣೆಯೆಂದರೆ ಹರೇಕೃಷ್ಣ ಮಹಾಮಂತ್ರದ ಜಪ. ಅದನ್ನು ಜಪಿಸುವ ಮೂಲಕ ನಮ್ಮನ್ನು ಸಂಪೂರ್ಣವಾಗಿ ತುಷ್ಟಿಗೊಳಿಸುವ ಸಂತೋಷದ ಸ್ಥಿತಿಯನ್ನು ಸಾಸಬಹುದು, ಮತ್ತು ಯಾವುದೇ ಐಹಿಕ ಏರುಪೇರುಗಳಿಂದ ನಾವೆಂದೂ ವಿಚಲಿತರಾಗುವುದಿಲ್ಲ. (ಭಗವದ್ಗೀತೆ ೬.೨೨)

ಮರ್ಸಿಡೀಸ್ ಕಾರನ್ನು ಉಳಲು ಉಪಯೋಗಿಸುವುದನ್ನು ನಿಲ್ಲಿಸಲು ಇದು ಸಕಾಲ. ಹರೇಕೃಷ್ಣ ಮಂತ್ರವನ್ನು ಜಪಿಸುವ ಮೂಲಕ ನಮ್ಮ ಮಾನವ ವಾಹನವನ್ನು ಚಲನೆಯಲ್ಲಿಡಲು ಇದು ಸಕಾಲ. ಆಗ ನಾವು ಭಕ್ತಿಸೇವೆಯೆಂಬ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತ, ಬಹಳ ಹಿಂದೆಯೇ ಕಳೆದುಕೊಂಡಿರುವ ಕೃಷ್ಣನ ಧಾಮಕ್ಕೆ ಮರಳಿ ಹೋಗಬಹುದು.
Leave a Reply

Your email address will not be published. Required fields are marked *