Search
Friday 7 August 2020
  • :
  • :

ವರಾಹ ಅವತಾರ

ಮಕ್ಕಳೇ, ತುಂಬ ಹಿಂದೆ ಹಿರಣ್ಯಾಕ್ಷನೆಂಬ ರಾಕ್ಷಸ ರಾಜ ಇದ್ದ. ಅವನು ಶಕ್ತಿವಂತನಾಗಿ  ಬೆಳೆದುಬಿಟ್ಟಿದ್ದ. ಅವನು ಅಹಂಕಾರದಿಂದ ಮೆರೆಯುತ್ತಿದ್ದ. ಅವನಿಗೆ ಇಡೀ ಭೂಮಿಯನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂಬ ದುರಾಸೆ. ಅವನ ಬಳಿ ಬ್ರಹ್ಮನಿಂದ ಪಡೆದಿದ್ದ ವರಗಳೂ ಇದ್ದವು. ಒಮ್ಮೆ ಅವನು “ಈ ವರಗಳಿಂದ ದೇವತೆಗಳ ಶಕ್ತಿ ಕುಂದಿಸುವೆ” ಎಂದು ಗರ್ಜಿಸಿದ. ಅದಕ್ಕೆ ಅವನು ಮಾಡಿದ್ದೇನು?

ಭೂಮಿಯನ್ನು ಸಮುದ್ರಕ್ಕೆ ಎಸೆದ. ಆಗ ಪೃಥ್ವಿಯು ಮುಳುಗುತ್ತಾ ಸಮುದ್ರದ ತಳದಲ್ಲಿ ಕುಗ್ಗತೊಡಗಿತು. `ಅಯ್ಯಯ್ಯೋ!’ ಎಂದು ದೇವತೆಗಳು ಚೀರಿದರು. `ನಮ್ಮ ಗತಿ ಏನು’ ಎಂದು ಭೂಮಿಯ ಮೇಲಿನ ಎಲ್ಲ ಜೀವಿಗಳೂ ಭಯಭೀತರಾದರು. `ಕಾಪಾಡು, ಕಾಪಾಡು,’ ಎಂದು ದೇವತೆಗಳು ವಿಷ್ಣುವಿನ ಮೊರೆ ಹೊಕ್ಕರು. ಆಗ ಭಗವಂತನು ವರಾಹ ಅವತಾರ ತಾಳಿದ.

ಅಸುರ ಹಿರಣ್ಯಾಕ್ಷನು ಭೂಮಿಯನ್ನು ಸಮುದ್ರಕ್ಕೆ ಎಸೆದಿದ್ದ. ಆದ್ದರಿಂದ‌ ಮೊದಲು ಅದರ ರಕ್ಷ‌ಣೆ ಮಾಡಬೇಕಾಗಿತ್ತು. ಹೀಗಾಗಿ ವರಾಹ ರೂಪದಲ್ಲಿದ್ದ ವಿಷ್ಣುವು ಗರ್ಜಿಸುತ್ತ ಜಲಪ್ರವೇಶಿಸಿದ. “ಓ!, ಸಾಗರ ತಳದಲ್ಲಿ ಭೂ ಮಂಡಲ ಇದೆ” ಎಂದು ಕಂಡುಕೊಂಡ.  ತತ್‌ಕ್ಷಣ ಭೂಮಿಯನ್ನು ತನ್ನ ಕೋರೆ ಹಲ್ಲುಗಳ ಮಧ್ಯೆ ಹಿಡಿದಿಟ್ಟುಕೊಂಡ. ಆ ರೀತಿ ಕೋರೆಗಳ ಮಧ್ಯೆ ಇರಿಸಿಕೊಂಡೇ ಪೃಥ್ವಿಯನ್ನು ಮೇಲಕ್ಕೆ ತಂದ.

ಆಗ ರಾಕ್ಷಸ ಹಿರಣ್ಯಾಕ್ಷನು “ಎಲೆ ಮೃಗವೇ, ನೀನೇನು ಭೂಮಿಯನ್ನು ಎತ್ತುವುದು?” ಎಂದು ಹಾಸ್ಯದ ದ್ವನಿಯಲ್ಲಿ ವರಾಹನನ್ನು ಕೆಣಕಲು ಪ್ರಯತ್ನಿಸಿದ. “ಪ್ರಾಣಿಯಾದ ನೀನು ನನ್ನನ್ನು ಅದು ಹೇಗೆ ಎದುರಿಸುವೆ?” ಎಂದು ಇನ್ನಷ್ಟು ಕೆಣಕಿದ.

ಹಿರಣ್ಯಾಕ್ಷ‌ನ ಮಾತಿಗೆ ವರಾಹ ಉತ್ತರಿಸಿದ, “ನೀನು ಹೇಳುವಂತೆ ನಾವು ಕಾಡು ಮೃಗಗಳೇ. ನಿನ್ನಂತಹ ಬೇಟೆ ನಾಯಿಗಳಿಗಾಗಿ ಹುಡುಕುತ್ತಿದ್ದೇವೆ.” ತನ್ನನ್ನು ಕೊಲ್ಲಲು ಬಂದ ಅಸುರನಿಗೆ ವರಾಹ ಸವಾಲು ಒಡ್ಡಿದ. ಆಗ ಆ ರಾಕ್ಷಸನು ಕೆರಳಿದ ಸರ್ಪದಂತೆ ಬುಸುಗುಟ್ಟಿದ. ವರಾಹನ ಮೇಲೆ ಎರಗಿ ತನ್ನ ಗದಾಪ್ರಹಾರ ಮಾಡಿದ. ವರಾಹನಿಗೆ ಪೆಟ್ಟೂ ಕೊಟ್ಟ. ಇಬ್ಬರೂ ಕೋಪದಿಂದ ಹೋರಾಡಿದರು. ರಾಕ್ಷಸನ ಪೆಟ್ಟಿನಿಂದ  ವರಾಹನು ಕಿಂಚಿತ್ತೂ ನೋವು ಅನುಭವಿಸಲಿಲ್ಲ. ಹಿರಣ್ಯಾಕ್ಷ ಮಾತ್ರ ವರಾಹ ರೂಪದ ಭಗವಂತನು ಕೊಟ್ಟ  ಪೆಟ್ಟಿನಿಂದ ಕೆಳಗುರುಳಿದ. `ಸದ್ಯ, ರಾಕ್ಷಸನ ಸಂಹಾರವಾಯಿತಲ್ಲಾ’ ಎಂದು ಎಲ್ಲರಿಗೂ ಸಮಾಧಾನ.




Leave a Reply

Your email address will not be published. Required fields are marked *