Search
Monday 18 November 2019
  • :
  • :

ತರ್ಕಬದ್ಧ ಪುರಾಣ ಸಾಹಿತ್ಯ

ಒಬ್ಬ ವಿವೇಚನಾಶೀಲ ವ್ಯಕ್ತಿ ಪುರಾಣ ಕಥೆಗಳನ್ನು ವಾಸ್ತವವಾಗಿ ನಿಜವೆಂದು ಸ್ವೀಕರಿಸಬಹುದೇ?

ಸ್ವಾಮಿ ವಿವೇಕಾನಂದ ಅವರು ೧೮೯೩ರಲ್ಲಿ ಚಿಕಾಗೋದ ‘ಪಾರ್ಲಿಮೆಂಟ್ ಆಫ್ ದಿ ವರ್ಲ್ಡ್ ರಿಲಿಜಿಯನ್ಸ್’ ಸಭೆಯಲ್ಲಿ ಹಿಂದೂ ಮತದ ಬಗ್ಗೆ ಮಾಡಿದ ತಮ್ಮ ಸುಪ್ರಸಿದ್ದ ಭಾಷಣವನ್ನು ಪಾರಂಪರಿಕ ಹಿಂದೂತ್ವದಲ್ಲಿ ಕಂಡು ಬರುವ ವಿಶಿಷ್ಟ ಲಕ್ಷಣಗಳ ಬಗ್ಗೆ ತಿಳಿಸುತ್ತ ಪ್ರಾರಂಭಿಸಿದರು. ಕರ್ಮ, ಪುನರ್ಜನ್ಮ ಮತ್ತು ಐಹಿಕ ಜಗತ್ತಿನ ಕೆಡಕುಗಳ ಸಮಸ್ಯೆಗಳು ಮೊದಲಾದವನ್ನು ಅವರು ಪ್ರಸ್ತಾವಿಸಿದರು. ಮತ್ತು ಈ ಎಲ್ಲ ಸಮಸ್ಯೆಗಳಿಗೂ ದೇವರಲ್ಲಿ ಶರಣಾಗುವುದರಲ್ಲಿ ಪರಿಹಾರವಿದೆ ಎಂದು ಮುಂದುವರಿದು ವಿವರಿಸಿದರು. “ಯಾರ ಆಜ್ಞೆಯಿಂದ ಗಾಳಿ ಬೀಸುತ್ತದೋ, ಬೆಂಕಿ ಉರಿಯುತ್ತದೋ, ಮೋಡಗಳು ಮಳೆ ಸುರಿಸುತ್ತವೆಯೋ, ಮತ್ತು ಭೂಮಿಯಲ್ಲಿ ಸಾವು ಆವರಿಸಿಕೊಳ್ಳುತ್ತದೋ, ಅವನೇ ದೇವರು. ಅವನು ಇಡೀ ವಿಶ್ವದ ಮೂಲ ಶಕ್ತಿ ಮತ್ತು ಮೂಲಾಧಾರ. ಅವನು ಎಲ್ಲೆಲ್ಲೂ ಇದ್ದಾನೆ. ಪರಿಶುದ್ಧ, ಸರ್ವಶಕ್ತ ಮತ್ತು ಅತ್ಯಂತ ಕರುಣಾಮಯಿ. ನಾವೆಲ್ಲರೂ ಅವನಿಗೆ, ತಂದೆಗೆ ಮಗುವಿನ ಹಾಗೆ ಮತ್ತು ಸ್ನೇಹಿತನೊಬ್ಬನಿಗೆ ಪ್ರೀತಿಯ ಸ್ನೇಹಿತನ ಹಾಗೆ ಸಂಬಂಧವುಳ್ಳವರಾಗಿದ್ದೇವೆ.”

ಅವರು ಮುಂದುವರಿದು ಮಾತನಾಡಿ, ನಾವು ದೇವರನ್ನು ನಿಸ್ವಾರ್ಥ ಪ್ರೀತಿಯಿಂದ ಆರಾಸಬೇಕು, ಎಂದರು. ಮತ್ತೆ, “ದೇವರ ಪ್ರೀತಿಯನ್ನು ಗಳಿಸುವ ದಾರಿಯನ್ನು, ಶ್ರೀಕೃಷ್ಣನು ಪರಿಪೂರ್ಣವಾಗಿ ರೂಪಿಸಿ, ತಿಳಿಸಿಕೊಟ್ಟಿದ್ದಾನೆ” – ಎಂದು ಹೇಳಿದರು.

ಪ್ರೀತಿಯ ಮೂಲಕ ನಾವು ನಮ್ಮನ್ನು ಪರಿಪೂರ್ಣರಾಗಿಸಿ- ಕೊಳ್ಳಬೇಕು, ದೇವರನ್ನು ಎಟುಕಿಸಿಕೊಳ್ಳಬೇಕು ಮತ್ತು ದೇವರೊಂದಿಗೆ ಆನಂದವನ್ನು ಅನುಭವಿಸಬೇಕು. ಈ ವಿಷಯವಾಗಿ ಎಲ್ಲ ಹಿಂದೂಗಳಲ್ಲೂ ಒಮ್ಮತವಿದೆ, ಎಂದರವರು.

ಆದರೆ ಅವರು ತಮ್ಮ ಉಪನ್ಯಾಸದಲ್ಲಿ ಹೀಗೂ ಹೇಳಿದರು: “ದೈವ ಸಾಕ್ಷಾತ್ಕಾರದ ಅಂತಿಮ ಘಟ್ಟದಲ್ಲಿ, ದೇವರು, ನಿರಾಕಾರ ಬ್ರಹ್ಮನ್. ಆಗ ಜೀವಿ, ಬ್ರಹ್ಮನ್‌ನೊಂದಿಗೆ ತನ್ನ ಗುರುತನ್ನು ಗ್ರಹಿಸಿಕೊಂಡು, ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳಚಿಕೊಳ್ಳುತ್ತಾನೆ.” ಭೌತ ವಿಜ್ಞಾನದೊಂದಿಗೆ ಒಂದು ಹೋಲಿಕೆಯನ್ನು ಮಾಡುತ್ತ ಅವರು ಹೇಳಿದರು: “ಬೇರೆ ಎಲ್ಲ ವಸ್ತುಗಳು, ಯಾವ ಶಕ್ತಿಯ ಅಭಿವ್ಯಕ್ತ ರೂಪಗಳೋ, ಆ ಶಕ್ತಿಯನ್ನು ಕಂಡು ಹಿಡಿದಾಗ ಭೌತಶಾಸ್ತ್ರವು ಅವಸಾನಗೊಳ್ಳುತ್ತದೆ. ಹಾಗೆ, ಬೇರೆ ಎಲ್ಲ ಆತ್ಮಗಳು ಯಾವ ಆತ್ಮದ ಭ್ರಾಂತಿಕಾರಕ ತೋರುವಿಕೆಗಳೋ, ಆ ಆತ್ಮವನ್ನು ಕಂಡು ಹಿಡಿದಾಗ ಧರ್ಮವು ಪರಿಪೂರ್ಣವಾಗುತ್ತದೆ.”

ಏಕ ತತ್ತ್ವ್ವವಾದದ ಸಾಧಕ-ಬಾಧಕಗಳು

ವಿವೇಕಾನಂದರ ಏಕತತ್ತ್ವವಾದದ ಕಲ್ಪನೆಗೆ ಒಂದು ದೊಡ್ಡ ಇತಿಹಾಸವಿದೆ. ಉದಾಹರಣೆಗೆ, ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿ, ಗ್ರೀಕ್ ದಾರ್ಶನಿಕ ಪಾರ್‌ಮೆನಿಡೀಸ್ ಊಹಾತ್ಮಕ ವಾದಗಳ ಬೆಂಬಲದಿಂದ ತೀರ್ಮಾನವೊಂದನ್ನು ಮುಂದಿರಿಸಿದ್ದ – “ಒಂದೇ ಒಂದು ವಸ್ತು ಮಾತ್ರ ಅಸ್ತಿತ್ವದಲ್ಲಿರಲು ಸಾಧ್ಯ ಮತ್ತು ಈ ವಸ್ತು ಸೃಷ್ಟಿಯಾಗದ್ದು, ಬದಲಾಯಿಸಲಾಗದ್ದು, ನಾಶಮಾಡದಂಥದ್ದು ಮತ್ತು ಚಲನೆಯಿಲ್ಲದ್ದು. ಬಹುತ್ವ, ಸೃಷ್ಟಿ, ಬದಲಾವಣೆ, ನಾಶ ಮತ್ತು ಚಲನೆ ಮೊದಲಾದವೆಲ್ಲ ಬರೀ ತೋರ್ಪಡಿಕೆಗಳು.”

ಪರಮ ಏಕತೆ ಅಥವಾ ಏಕತತ್ತ್ವವಾದ ಎನ್ನುವುದು ಆಕರ್ಷಕವಾಗಿ ಕಾಣಿಸಬಹುದು. ಆದರೆ, ಅದು ನಮಗೆ ಎಲ್ಲ ಸಂಭಾವ್ಯ ಉಪಾಗಳನ್ನು ಬಿಟ್ಟುಕೊಡುವಂತೆ ಮಾಡುವುದು, ಕೊನೆಗೆ ಆ ಆಲೋಚನೆಯನ್ನೇ ಬಿಟ್ಟು ಬಿಡುವಂತೆ ಮಾಡುವುದು.

ವಿವೇಕಾನಂದರು ಈ ಸಮಸ್ಯೆಯನ್ನು ಗುರುತಿಸಿದರು, ಮತ್ತು ಹಿಂದೂ ಧರ್ಮದಲ್ಲಿ  ದೇವತೆಗಳ ರೂಪಗಳು ಅಚಿಂತ್ಯವನ್ನು ಊಹಿಸಿಕೊಳ್ಳಲು ಸಂಕೇತಗಳಾಗಿ ನಮಗೆ ಸಹಾಯ ಮಾಡುತ್ತವೆ ಎಂದು ಅವರು ವಾದಿಸಿದರು.

ಆಲೋಚನೆ ಮಾಡಲೂ ಆಗದ ಪರಾತ್ಪರಕ್ಕೆ ಧಾರ್ಮಿಕ ಪ್ರತಿಮೆಯನ್ನು ಸಂಕೇತವಾಗಿಸಿಕೊಳ್ಳುವುದು ಈ ಆಧುನಿಕ ಯುಗದಲ್ಲಿ ಉಪಯುಕ್ತವೆಂಬಂತೆ ಕಾಣಿಸಬಹುದು.

ವಿವೇಕಾನಂದರು ೧೮೬೩ರಲ್ಲಿ ಕಲ್ಕತ್ತೆಯಲ್ಲಿ ನರೇಂದ್ರನಾಥ ದತ್ತನಾಗಿ ಹುಟ್ಟಿದ್ದರು. ಮತ್ತು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಬಲವಾಗಿದ್ದ ಕಾಲದಲ್ಲಿ ಬೆಳೆದರು. ಈ ಸಂದರ್ಭದಲ್ಲಿ, ಸುಪ್ರಸಿದ್ಧ ಫ್ರೆಂಚ್ ಜ್ಞಾನೋದಯದ ತಳಪಾಯದ ಮೇಲೆ ರೂಪುಗೊಂಡ ಯೂರೋಪಿನ ವಿಚಾರವಾದಿತನ, ಭಾರತದ ಮೇಲೆ ಶಕ್ತಿಯುತವಾದ ಪರಿಣಾಮ ಮೂಡಿತ್ತು. ಸಮಾಜ ಸುಧಾರಕರಾದ ರಾಜರಾಮಮೋಹನ್‌ರಾಯ್ ಮತ್ತು ದೇವೇಂದ್ರನಾಥ ಠಾಕೂರ ಅಂಥವರು ಹಿಂದೂತ್ವವನ್ನು ಸುಧಾರಿಸಿ ಅದನ್ನು ಆಧುನಿಕ ಪಾಶ್ಚಿಮಾತ್ಯ ಆಲೋಚನೆಗೆ ತಕ್ಕಂತೆ ರೂಪಿಸುವುದಕ್ಕಾಗಿ ‘ಬ್ರಹ್ಮ ಸಮಾಜ’ವನ್ನು ಸ್ಥಾಪಿಸಿದರು. ಈ ಪ್ರಯತ್ನವನ್ನು ಯಶಸ್ವಿಗೊಳಿಸಲು ಎರಡು ಸಮಸ್ಯೆಗಳನ್ನು ಪರಿಹರಿಸಬೇಕಾಗಿತ್ತು. ೧) ಧಾರ್ಮಿಕ ಅನೇಕತ್ವದ ಸಮಸ್ಯೆ ೨) ಪ್ರಾಚೀನ ಧಾರ್ಮಿಕ ನಂಬಿಕೆಗಳು ಮತ್ತು ಆಧುನಿಕ ವಿಜ್ಞಾನದ ನಡುವಿನ ವಿರೋಧಗಳ ಸಮಸ್ಯೆ.

ಶುದ್ಧ ಏಕತತ್ತ್ವವಾದ ಅಥವಾ ಅದ್ವೈತದ ಪ್ರಾಚೀನ ತತ್ತ್ವದರ್ಶನ ಎನ್ನುವುದು ಈ ಸಮಸ್ಯೆಗಳನ್ನು ಪರಿಹರಿಸಲು ಬಹಳ ಯಥೋಚಿತವಾಗಿತ್ತು. ಮೊದಲನೆಯದಾಗಿ, ಧಾರ್ಮಿಕ ಪ್ರತಿಮೆಗಳು ಬರೀ ಸಾಂಕೇತಿಕ ಅರ್ಥವುಳ್ಳವು ಎಂದಾದರೆ, ಎಲ್ಲ ವಿವಿಧ ಧರ್ಮಗಳ ಪ್ರತಿಮೆಗಳೂ ಬರೀ ಸಾಂಕೇತಿಕ ಅಷ್ಟೇ ಎಂದರ್ಥ. ಈ ರೀತಿಯಾಗಿ, ಎಲ್ಲ ಪ್ರಮುಖ ಧರ್ಮಗಳನ್ನು ಸಮನ್ವಯಗೊಳಿಸಬಹುದು. ಇದು ವಿವೇಕಾನಂದರ ಆಲೋಚನೆಯಾಗಿದ್ದು, ಅವರು ಎಲ್ಲ ಧರ್ಮಗಳ ಸಮಾನತೆಯನ್ನು ಒತ್ತಿ ಹೇಳಿದರು.

ಅದೇ ರೀತಿ, ಧಾರ್ಮಿಕ ಪ್ರತಿಮಾಶಿಲ್ಪವೆನ್ನುವುದು ಬರೀ ಸಾಂಕೇತಿಕವೆಂದರೆ, ಧರ್ಮ ಮತ್ತು ವಿಜ್ಞಾನದ ನಡುವೆ ಸಂಘರ್ಷವೆನ್ನುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸ್ಥಾಪಿತಗೊಂಡಿರುವ ವೈಜ್ಞಾನಿಕ ಸತ್ಯಗಳೊಂದಿಗೆ ವ್ಯತಿರಿಕ್ತವೆಂಬಂತೆ ಕಾಣುವ ಧಾರ್ಮಿಕ ಪ್ರಸಂಗವನ್ನು  ಒಂದು ಸಾಂಕೇತಿಕ ಸುಳಿವು ಎಂದು ಹೇಳಿಬಿಡಬಹುದು. ಹೀಗೆ ಹೇಳಿದ ವಿವೇಕಾನಂದರು ನಿರಾಕಾರ ಬ್ರಹ್ಮನ್‌ನ ಈ ಸದೃಢ ಸರಳತೆ, ಭೌತ ವಿಜ್ಞಾನಿಗಳು ಬಯಸುವ ‘ಪ್ರಾಕೃತಿಕ ಮಹಾನ್ ಏಕತಾ ಚಿಂತನೆ’ (Grand Unified Theory)ಯ ಸರಳತೆಗೆ ಹೊಂದಿಕೊಳ್ಳುತ್ತದೆ ಎಂದು ಪ್ರತಿಪಾದಿಸಿದರು.

ಆದರೆ ಶುದ್ಧ ಏಕತತ್ತ್ವವಾದದಲ್ಲಿ ದೇವರ ಪ್ರೀತಿಯೆನ್ನುವುದು ಅಥವಾ ಎಲ್ಲರೊಂದಿಗೆ ಪ್ರೀತಿ ಎನ್ನುವುದು ಏನಾಗುತ್ತದೆ? ಅಂತಿಮ ಸತ್ಯವೆನ್ನುವುದು ಶುದ್ಧ ಏಕತೆಯೆಂದರೆ ಮತ್ತು ಸ್ವಾಂಶ ಅಸ್ತಿತ್ವವೆನ್ನುವುದು ಒಂದು ಭ್ರಮೆಯೆಂದರೆ, ಪ್ರೀತಿ ಎನ್ನುವುದು ಕೂಡ ಒಂದು ಭ್ರಮೆಯಾಗಿ ಹೋಗುತ್ತದೆ. ಪ್ರೀತಿಯ ಸಂಬಂಧಕ್ಕೆ ಇಬ್ಬರು ವ್ಯಕ್ತಿಗಳು ಇರಬೇಕು. ಸಾಂಪ್ರದಾಯಿಕ ಹಿಂದೂ ಆಲೋಚನೆಗಳಲ್ಲಿ ಎರಡು ವಿಧವಾದ ಶಾಶ್ವತ ವ್ಯಕ್ತಿಗಳು ಇದ್ದಾರೆ. ೧) ಐಹಿಕ ಶರೀರಗಳಲ್ಲಿ ಅಡಗಿರುವ ಜೀವಾತ್ಮ ಮತ್ತು  ೨) ಮೂಲ ದೇವೋತ್ತಮ ಪರಮ ಪುರುಷ ಮತ್ತು ಅವನ ಅಸಂಖ್ಯಾತ ಆಧ್ಯಾತ್ಮಿಕ ವಿಸ್ತರಣೆಗಳು.

ಆದರೆ, ದುರದೃಷ್ಟವಶಾತ್, ವಿವೇಕಾನಂದರು, ಶ್ರೀಕೃಷ್ಣ ಮತ್ತು ಜೀವಾತ್ಮ ಎನ್ನುವುದೆರಡೂ ಕಲ್ಪನೆಗಳು ಎಂದು ನಿರಾಕರಿಸಿಬಿಟ್ಟರು. ಅವರು ಧಾರ್ಮಿಕತೆ ಕುರಿತಾದ ತಮ್ಮ ಏಕತತ್ತ್ವವಾದ ಪ್ರತಿಪಾದನೆಯಲ್ಲಿ, ಪರಾತ್ಪರನ ಎಲ್ಲ ಸಂಭಾವ್ಯ ಆಲೋಚನೆಗಳನ್ನೂ ಪಕ್ಕಕ್ಕೆ ತಳ್ಳಿಬಿಟ್ಟರು. ಸತ್-ಚಿತ್-ಆನಂದ ಎನ್ನುವ ಮೂರನ್ನು ಒಂದು ತಪ್ಪು ಗ್ರಹಿಕೆ ಎಂದು, ವರ್ಜಿಸಬೇಕು ಎಂದುಬಿಟ್ಟರು. ಸರ್ವಶಕ್ತ ಕರುಣಾಮಯಿ ಭಗವಂತನ ವಿಷಯದಲ್ಲೂ ಇದೇ ಅನಿಸಿಕೆ ನಿಜ ಎಂದರು.

ಇದೇ ರೀತಿ ನಿಜವಾದ ಸತ್ಯ ಪರಮ ಏಕತೆಯಾಗಿದ್ದರೆ, ಎಲ್ಲ ರೀತಿಯ ಶ್ಲಾಘನೆಗಳು, ಸ್ನೇಹಗಳು, ತಂದೆ ತಾಯಿ ಪ್ರೀತಿ ಅಥವಾ ದಾಂಪತ್ಯ ನಂಟು ಮೊದಲಾದ ವೈಯಕ್ತಿಕ ಸಂಬಂಧಗಳನ್ನು ಕೂಡ ಭ್ರಾಂತಿ ಎಂದು ವರ್ಜಿಸಿಬಿಡಬೇಕು.

ಭಕ್ತಿವಿನೋದ ಠಾಕೂರ ಅವರು ನೀಡಿದ ವೈಷ್ಣವ ಪರ್ಯಾಯ

ಆಧುನಿಕ ವಿಚಾರವಾದಿ ಆಲೋಚನೆ ವೈವಿಧ್ಯಮಯ ಧರ್ಮಗಳನ್ನು ಎದುರಾದಾಗ, ಉದ್ಭವವಾಗುವ ಸಮಸ್ಯೆಗಳಿಗೆ ಬೇರೇನಾದರೂ ಪರಿಹಾರಗಳಿವೆಯೇ ಎಂಬ ಪ್ರಶ್ನೆ ಹುಟ್ಟುತ್ತದೆ. ಇದನ್ನು ತಿಳಿದುಕೊಳ್ಳಲು ನಾವು ವಿವೇಕಾನಂದರ ಸಮಕಾಲೀನರಾಗಿದ್ದ ಭಕ್ತಿವಿನೋದ ಠಾಕುರರ ಜೀವನ ಚರಿತ್ರೆಯನ್ನು ಪರೀಕ್ಷಿಸೋಣ.

ಭಕ್ತಿವಿನೋದ ಠಾಕುರರು ೧೮೩೮ರಲ್ಲಿ ಪಶ್ಚಿಮ ಬಂಗಾಲದ ನದಿಯಾ ಜಿಲ್ಲೆಯಲ್ಲಿ, ಕೇದಾರನಾಥ ದತ್ತ ಎಂಬ ನಾಮಧೇಯದಲ್ಲಿ ಜನ್ಮತಾಳಿದರು. ಯುವಕರಾಗಿ ಅವರು ಆಂಗ್ಲ ವಿದ್ಯಾಭ್ಯಾಸವನ್ನು ಪಡೆದರು. ‘ಬ್ರಹ್ಮಸಮಾಜ’ದ ನಾಯಕರೂ ಮತ್ತು ವಿವೇಕಾನಂದರ ಪ್ರಾರಂಭದ ಶಿಕ್ಷಕರೂ ಆಗಿದ್ದ ದೇವೇಂದ್ರನಾಥ ಠಾಕುರರೊಂದಿಗೆ ಸಾಹಿತ್ಯ ಮತ್ತು ಆಧ್ಯಾತ್ಮಿಕ ವಿಷಯಗಳ ಕುರಿತು ಚರ್ಚಿಸುತ್ತಿದ್ದರು. ಮುಂದೆ ಅವರು ಕಾನೂನು ಶಿಕ್ಷಣ ಪಡೆದು ಅನೇಕ ವರ್ಷಗಳ ಕಾಲ ಬ್ರಿಟಿಷ್ ನ್ಯಾಯಾಲಯದಲ್ಲಿ ನ್ಯಾಯಾಶರಾಗಿ ಸೇವೆ ಸಲ್ಲಿಸಿದರು.

ಭಕ್ತಿವಿನೋದ ಠಾಕುರರು ಆ ಕಾಲದ ಧಾರ್ಮಿಕ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಯೂರೋಪಿಯನ್ ದಾರ್ಶನಿಕರ ಗ್ರಂಥಗಳನ್ನು ಪರಿಶೀಲಿಸಿದರು. ಅವರ ಪಾಶ್ಚಾತ್ಯ ಶಿಕ್ಷಣ, ಅವರನ್ನು ಕೃಷ್ಣಭಕ್ತಿಸೇವೆಯ ವೈಷ್ಣವ ಸಾಹಿತ್ಯದ ಬಗ್ಗೆ ನಿರ್ಲಕ್ಷಿಸುವಂತೆ ಮಾಡಿತು. ಅವರು ಕೃಷ್ಣನನ್ನು  ಬಹುವಾಗಿ ವಿವರಿಸಿದ್ದ ಪುರಾಣ ಗ್ರಂಥ  ಭಾಗತದ ಬಗ್ಗೆ ಹೀಗೆ ಬರೆದಿದ್ದರು -“ಭಾಗತವತವು ಹತ್ತೊಂಬತ್ತನೆಯ ಶತಮಾನಕ್ಕೆ ಅನ್ವಯಿಸದ ಅಪರೂಪ ಆಲೋಚನೆಗಳ ಉಗ್ರಾಣ.”

ಆದರೆ, ಬದುಕಿನ ಒಂದು ಘಟ್ಟದಲ್ಲಿ ಅವರಿಗೆ ಮಹಾನ್ ವೈಷ್ಣವ ಸುಧಾರಕರಾದ ಚೈತನ್ಯ ಮಹಾಪ್ರಭು ಅವರ ಸಾಹಿತ್ಯವನ್ನು ಓದುವ ಅವಕಾಶ ದೊರಕಿತು. ಅದರಲ್ಲಿ ಚೈತನ್ಯ ಮಹಾಪ್ರಭುಗಳು ‘ಭಾಗವತ’ ಕುರಿತು ಕಾಶಿಯ ಅದ್ವೈತ ವೇದಾಂತಿಗಳಿಗೆ ನೀಡಿದ್ದ ಒಂದು ವಿವರಣೆಯನ್ನು ಕಂಡರು. ವೈಷ್ಣವ ಭಕ್ತಿಮಾರ್ಗದ ಉಪದೇಶಗಳನ್ನು ಶ್ರೀ ಚೈತನ್ಯರು ವಿವರಿಸಿದಂತೆ ತಿಳಿದುಕೊಂಡಾಗ ಅದರಲ್ಲಿ ಅವರಿಗೆ ಅಪಾರ ಪ್ರೀತಿ ಮೂಡಿತು. ಕ್ರಮೇಣ ಅವರು ಚೈತನ್ಯ ಮಹಾಪ್ರಭುಗಳ ಉಪದೇಶಗಳನ್ನು ಅನುಸರಿಸಿ ಆಧ್ಯಾತ್ಮಿಕ ಸಾಕ್ಷಾತ್ಕಾರದ ಒಂದು ಉತ್ಕರ್ಷಿತ ಸ್ಥಿತಿಯನ್ನು ಸಾಸಿದರು, ಮತ್ತು ದೇಶವಿದೇಶದವರಿಗಾಗಿ ಈ ಉಪದೇಶಗಳನ್ನು ಕುರಿತ ಅನೇಕ ಗ್ರಂಥಗಳನ್ನು ರಚಿಸಿದರು.

ಒಂದು ಐತಿಹಾಸಿಕ ವಿರಾಮ

ಭಕ್ತಿವಿನೋದ ಠಾಕುರ ಅವರ ಆಧ್ಯಾತ್ಮಿಕ ಉಪದೇಶಗಳನ್ನು ನಾವು ಗಮನಿಸುವ ಮೊದಲು, ಹತ್ತೊಂಬತ್ತನೆಯ ಶತಮಾನದ ಬಂಗಾಳದಲ್ಲಿ ಇದ್ದ ಬೌದ್ಧಿಕ ಪರಿಸರವನ್ನು ಕುರಿತು ಚರ್ಚಿಸೋಣ.  ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಒಬ್ಬ ನ್ಯಾಯವಾದಿಯಾಗಿಯೂ ಮತ್ತು ‘ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ನ ಮೊದಲ ಅಧ್ಯಕ್ಷರಾಗಿಯೂ ಕೆಲಸ ಮಾಡಿದ, ಸರ್ ವಿಲಿಯಂ ಜೋನ್ಸ್‌ರವರು ೧೭೮೮ರಲ್ಲಿ ಬರೆದ ಹಿಂದೂ ಕಾಲಘಟನಾ ಸೂಚಿಯಲ್ಲಿ, ಭಾರತೀಯ ಪುರಾಣಗಳ ಮೂರನೆಯ ಘಟ್ಟವಾದ ದ್ವಾಪರಯುಗದ ಮುಕ್ತಾಯ ಸಂದರ್ಭ ಮತ್ತು ಮಹಾಭಾರತದ ಕುರಿತು ಕೆಳಕಂಡಂತೆ ವಿವರಿಸಿದ್ದಾರೆ:

“ನಾನು ಮಾನವ ಗುಣಾವಗುಣಗಳು ಸಮಾನವಾಗಿದ್ದವು ಎಂದು ಕಾಣಿಸುವ, ಈ ಮೂರನೆಯ ಭಾರತೀಯ ಯುಗವನ್ನು ಸರಿಯಾಗಿ ಗಮನಿಸದಂತೆ ಬಿಡಲಾಗುವುದಿಲ್ಲ. ಇದರ ಮುಕ್ತಾಯ ಘಟ್ಟ ಕೂಡ, ಗ್ರೀಕ್ ಚರಿತ್ರೆಗಿಂತಲೂ ಉತ್ಪ್ರೇಕ್ಷಿತ ಮತ್ತು ಕಾವ್ಯಮಯ ಅಭಿವ್ಯಕ್ತಿಯ ಹಾಗೆ ತೋರುತ್ತದೆ. ಉದಾಹರಣೆಗೆ, ಯುಷ್ಠಿರ -ನ್ಯಾಯದೇವತೆ ಧರ್ಮರಾಜನ ಮಗನಂತೆ, ಭೀಮ-ವಾಯುದೇವರ ಮಗನಂತೆ, ಅರ್ಜುನ -ಇಂದ್ರದೇವನ ಮಗನಂತೆ, ನಕುಲ ಸಹದೇವರು – ಅಶ್ವಿನಿ ದೇವತೆಗಳ ಮಕ್ಕಳಂತೆ, ಮತ್ತು ಭೀಷ್ಮ – ಗಂಗೆಯ ಮಗನಂತೆ, ಶಂತನುವಿನ ಸೋದರ ದೇವಪಿ ಈಗಲೂ ಜೀವಂತವಾಗಿ  ಕಾಲಪ ನಗರದಲ್ಲಿ ಇದ್ದಾನಂತೆ. ಎಲ್ಲ ಕಲ್ಪಿತ ಕಥೆಗಳೂ ಸಾಹಸೀ ಕಾವ್ಯವೊಂದರ ಮನೋಹರ ಅಲಂಕಾರಗಳು ಆಗಿದ್ದರೂ ಮಾನವ ಇತಿಹಾಸದಲ್ಲಿ ಅಸಂಬದ್ಧ.”

ಇಲ್ಲಿ ಜೋನ್ಸ್ ಹೇಳುತ್ತಿರುವುದೇನೆಂದರೆ, ಶ್ರೀಕೃಷ್ಣನ ಕಾಲದ, ಮಹಾಭಾರತದ ಘಟನೆಗಳ ಬಗ್ಗೆ. ಭಾರತೀಯ ಪರಂಪರೆಯ ಪ್ರಕಾರ, ಈ ಘಟನೆಗಳು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರಯುಗ ಮುಕ್ತಾಯವಾಗಿ, ಕಲಿಯುಗ ಪ್ರಾರಂಭವಾದ ಸಮಯದಲ್ಲಿ ಘಟಿಸಿದ್ದವು.. ಯುಷ್ಠಿರ, ಅರ್ಜುನ, ಭೀಮ, ನಕುಲ ಮತ್ತು ಸಹದೇವರು – ಶ್ರೀಕೃಷ್ಣನ ಲೀಲಾವಿನೋದಗಳಲ್ಲಿ ಕಂಡವರು.

ಜೋನ್ಸ್‌ನ ಈ ಹೇಳಿಕೆಗಳಿಂದ ಒಂದು ಅಂಶವನ್ನು ನಾವು ಗಮನಿಸಬಹುದು – ಆತ ಪಾಂಡವರ ಕಥೆಯನ್ನು ನಿಜವಾದ ಇತಿಹಾಸ ಎಂದು ಪರಿಗಣಿಸುವುದಿಲ್ಲ. ಏಕೆ? ಏಕೆಂದರೆ, ಇಲ್ಲಿನ ಕಥೆಗಳು, ಆಧುನಿಕ ವಿಚಾರವಾದಿ ದೃಷ್ಟಿಯನ್ನು ರೂಢಿಸಿಕೊಂಡಿರುವ ವ್ಯಕ್ತಿಗೆ ವಿಶ್ವಾಸಯೋಗ್ಯವೆನಿಸದಿರುವುದು. ಜನರು ದೇವತಾ ಮೂಲಗಳಿಂದ ಇಳಿದು ಬರುವುದಿಲ್ಲ ಎಂದು ನಮಗೆ ಗೊತ್ತು. ಹೀಗೊಂದು ಮೂಲ ಅನಿಸಿಕೆಯನ್ನು ಮುಂದಿಡುವ ಎಲ್ಲ ದಾಖಲೆಗಳನ್ನು ಗೌರವಾರ್ಹ ಇತಿಹಾಸಕಾರರು ತಿರಸ್ಕರಿಸುತ್ತಾರೆ. ಅಂತೆಯೇ ಐತಿಹಾಸಿಕ ದಾಖಲೆಗಳು ಇಂಥ ಯಾವ ಅಸಂಬದ್ಧಗಳನ್ನೂ ಒಳಗೊಂಡಿಲ್ಲ. ಇಂಥವು ಯಾವುದೂ ಘಟಿಸಿಲ್ಲ, ಮತ್ತು ನಮ್ಮ ಇತಿಹಾಸ ಗ್ರಂಥಗಳು ಇದನ್ನು ಖಚಿತಪಡಿಸುತ್ತವೆ.

ಸರ್ ವಿಲಿಯಂ ಜೋನ್ಸ್ ಸ್ಪಷ್ಟವಾಗಿ ಈ ರೀತಿಯಲ್ಲಿ ಆಲೋಚಿಸುತ್ತಿದ್ದರು. ಆದರೆ, ಅವರು ನಿಜವಾಗಿ ಒಬ್ಬ ಆಧುನಿಕ ವಿಚಾರವಾದಿ ಆಗಿರಲಿಲ್ಲ. ಜೋನ್ಸ್ ಒಬ್ಬರು ಕ್ರಿಶ್ಚಿಯನ್‌ರಾಗಿದ್ದು ಬೈಬಲ್‌ನ ಮೋಸೆಸ್‌ನ ಕಾಲಘಟನಾ ಸೂಚಿಯಲ್ಲಿ ಪೂರ್ತಿಯಾಗಿ ನಂಬಿಕೆಯುಳ್ಳವರಾಗಿದ್ದರು. ಒಂದು ಕಡೆಯಂತೂ ಅವರು ಕ್ರಿಶ್ಚಿಯನ್ ಕಾಲಘಟನಾ ಸಂಚಿಕೆಯನ್ನು ಹಿಂದೂ ಸೂಚಿಯೊಂದಿಗೆ ಪುನರ್ ರಚಿಸಲು ಉತ್ಸಾಹ ತೋರಿದ್ದರು. ಹಿಂದೂ ಪುರಾಣ ಕಥನಗಳನ್ನು ಅಸಂಬದ್ಧ ಎಂದು ತೆಗಳಿ, ಅದೇ ಸಮಯದಲ್ಲಿ ಬೈಬಲ್‌ನ ಅತಿಲೌಕಿಕ ಘಟನೆಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತಾರೆ.

ಅಂತಿಮವಾಗಿ ಆದದ್ದೇನೆಂದರೆ, ಭಾರತೀಯ ಪುರಾಣಗಳನ್ನು ಕುರಿತು ಜೋನ್ಸ್ ಮಾಡಿದ ತೆಗಳಿಕೆಗಳು ಬಹುಬೇಗ ಬೈಬಲ್ ಕುರಿತೂ ಅನ್ವಯವಾದವು. ಜೋನ್ಸ್‌ನ ಜೀವಿತಕಾಲದಲ್ಲಿಯೇ, ಜರ್ಮನಿಯಲ್ಲಿ ಬೈಬಲ್ ಬಗ್ಗೆ ಉನ್ನತ ವೈಜ್ಞಾನಿಕ  ಕಟು ಟೀಕೆಗಳು ವಿಸ್ತೃತರೂಪ ತಾಳತೊಡಗಿ, ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡ್ ಮೇಲೂ ಪ್ರಭಾವ ಬೀರಿದವು. ೧೮೬೦ರಲ್ಲಿ, ಆಂಗ್ಲೇಯ ದೇವತಾಶಾಸ್ತ್ರಜ್ಞರಾದ, ಬೆಂಜಮಿನ್ ಜೊವೆಟ್ ಮತ್ತು ಬಾಡೆನ್ ಪೂವೆಲ್ ಎಂಬ ಇಬ್ಬರು ಪವಾಡಗಳನ್ನು ತಿರಸ್ಕರಿಸುವ ಒಂದು ವಿವಾದಾತ್ಮಕ ಪ್ರಬಂಧ ಬರೆದು ಎಲ್ಲರ ಗಮನ ಸೆಳೆದರು. ಕೂಡಲೇ ಡಾರ್ವಿನ್ ಅನುಯಾಯಿಗಳು ಮತ್ತು ಬೈಬಲ್ ಟೀಕಾಕಾರರು ಒಟ್ಟಾಗಿ ಸೇರಿಕೊಂಡರು. ಜೊತೆಗೆ ಡಾರ್ವಿನ್‌ನ ಬೆಂಬಲಿಗ ಥಾಮಸ್ ಹಕ್‌ಸ್ಲೆ ತನ್ನ ಪ್ರಬಂಧಗಳಲ್ಲಿ ಪ್ರಪಂಚ ಸೃಷ್ಟಿ ಉತ್ಪತ್ತಿಯ ಅರ್ಥವಿವರಣೆ ಕುರಿತು ಜರ್ಮನ್ ಬೈಬಲ್ ಪಂಡಿತರ ಮಾತುಗಳನ್ನು ಉಲ್ಲೇಖಿಸಲು ಪ್ರಾರಂಭಿಸಿದ. ಹತ್ತೊಂಬತ್ತನೆಯ ಶತಮಾನ ಕೊನೆಗೊಳ್ಳುತ್ತ ಬಂದಂತೆ, ವಿಚಾರವಾದಿ-ವೈಜ್ಞಾನಿಕ ಸಂದೇಹವಾದ ಎನ್ನುವುದೇ – ಎಲ್ಲ ಅಧ್ಯಯನ ಪ್ರಕಾರಗಳ  ವಿದ್ವಾಂಸರ ಅಥವಾ ಬುದ್ಧಿಜೀವಿಗಳ ಸ್ವೀಕೃತ ಮಾರ್ಗ ಎಂದಾಗಿ ಹೋಯಿತು.

ಭಾಗವತ

ಭಕ್ತಿವಿನೋದ ಠಾಕುರರಿಗೆ ಆ ಕಾಲದ ಬಂಗಾಳಿ ಯುವಕರಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಬಿತ್ತುವ ಪ್ರಯತ್ನಗಳಲ್ಲಿ, ಇಂಥದೊಂದು ಪ್ರತಿಕೂಲ ಪರಿಸರ ಎದುರಿಸಬೇಕಾಗಿ ಬಂದಿತು. ವಿಲಿಯಂ ಜೋನ್ಸ್ ಮತ್ತು ಇತರ ಪಾಶ್ಚಾತ್ಯ ಪಂಡಿತರ ಬೋಧನೆಗಳಿಂದ ತಮ್ಮ ತಲೆ ತುಂಬಿಸಿಕೊಂಡ ಈ ಭಾರತೀಯ ಯುವಕರು, ಭಾರತೀಯ ಪುರಾಣಗಳಿಗೆ ಮಹತ್ವ ನೀಡಲು ಸಿದ್ದರಾಗಿಯೇ ಇರಲಿಲ್ಲ. ಹೀಗಾದಾಗ, ಭಗವತ್ಪ್ರೇಮದ ಬಗ್ಗೆ ಶ್ರೀಕೃಷ್ಣನ ಉಪದೇಶಗಳನ್ನು ಸಾರ್ವತ್ರಿಕಗೊಳಿಸುವುದಾದರೂ ಹೇಗೆ? ಭಕ್ತಿವಿನೋದ ಠಾಕುರ ಅವರು, ಯುಕ್ತಾಯುಕ್ತ ಪರಿಜ್ಞಾನ ಪ್ರದರ್ಶಿಸಿ ವಾಸ್ತವಿಕತೆಯ ಒಂದು ಮುಖವನ್ನು ಮಾತ್ರ,  ಯುವಜನಾಂಗದ ಮುಂದಿಡಲು ನಿರ್ಧರಿಸಿದರು.

ಪಶ್ಚಿಮ ಬಂಗಾಳದ ದಿನಾಜ್‌ಪುರ ಎಂಬಲ್ಲಿ ೧೮೬೯ರಲ್ಲಿ ನೀಡಿದ ಒಂದು ಉಪನ್ಯಾಸದಲ್ಲಿ, ಅವರು ದೇವೋತ್ತಮ ಪರಮಪುರುಷನ ಸ್ವರೂಪ ಲಕ್ಷಣದ ಬಗ್ಗೆ  ಮತ್ತು ಆತನೊಂದಿಗೆ ನಮ್ಮ ಸಂಬಂಧವನ್ನು ಸಾಕ್ಷಾತ್ಕರಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ವಿವರಿಸಿದರು. ಶುದ್ಧ ಏಕತತ್ತ್ವವಾದವನ್ನು ಒಂದು ನಿರುಪಯುಕ್ತ ಆಲೋಚನೆ ಎಂದು ತಿರಸ್ಕರಿಸಿದ ಅವರು, ದೇವರು ಒಬ್ಬ ಶಾಶ್ವತ ವ್ಯಕ್ತಿ ಎಂದು ಹೇಳಿದರು.

ಅವರು ಈ ಅಂಶಗಳನ್ನೆಲ್ಲ ನೇರವಾಗಿ ಭಾಗವತದಿಂದ ಆಯ್ದುಕೊಂಡಿದ್ದರು. ಆದರೆ ಐಹಿಕ ಪ್ರಪಂಚದ ಬಗ್ಗೆ ಭಾಗವತ ಏನು ಹೇಳುತ್ತದೆ ಎಂದು ವಿವರಿಸುವಾಗ, ಭಕ್ತಿವಿನೋದ ಠಾಕುರ ಅವರು ಒಂದು ಪರೋಕ್ಷ ಹಾದಿಯನ್ನು ಅಳವಡಿಸಿಕೊಂಡರು. ಅವರು ಹೀಗೆಂದರು –

“ಸಾಮಾನ್ಯವಾಗಿ ಹಿಂದೂಧರ್ಮದ ಗ್ರಂಥಗಳಲ್ಲಿ ಒಂದು ಸ್ಥಳೀಯ ಸ್ವರ್ಗವನ್ನೂ ಮತ್ತು ಒಂದು ಸ್ಥಳೀಯ ನರಕವನ್ನೂ ವಿವರಿಸಿರುವುದನ್ನು ಕಾಣುತ್ತೇವೆ; ಸ್ವರ್ಗವನ್ನು ಲೋಕಗಳಲ್ಲಿಯೇ ಅತಿ ಸುಂದರವಾದ ತಾಣ ಮತ್ತು ನರಕವೆನ್ನುವುದು ಕೆಡಕುಗಳೆಲ್ಲದರ ಪ್ರತಿನಿಯಾದ ಒಂದು ಕೆಟ್ಟ ತಾಣ ಎನ್ನುವ ವಿವರಣೆಗಳು ಕಾಣಸಿಗುತ್ತವೆ… ಭಾಗವತದ ಧರ್ಮ ಇಂಥ ಕಲ್ಪನೆಗಳಿಂದ  ಮುಕ್ತವಾಗಿದೆ. ವಾಸ್ತವವಾಗಿ, ಕೆಲವು ಅಧ್ಯಾಯಗಳಲ್ಲಿ ನಾವು ನರಕ ಮತ್ತು ಸ್ವರ್ಗಗಳ ಚಿತ್ರಣವನ್ನು ಸಂಸುತ್ತೇವೆ. ಜೊತೆಗೆ ವಿಚಿತ್ರ ಕಥೆಗಳೂ ಇವೆ. ಮತ್ತೆ, ಗ್ರಂಥದ ಒಂದು ಭಾಗದಲ್ಲಿ ನಮಗೊಂದು ಎಚ್ಚರಿಕೆಯನ್ನೂ ನೀಡಲಾಗಿದೆ – ಇವನ್ನೇ ನಿಜವಾದ ಸತ್ಯ ಎಂದು ಸ್ವೀಕರಿಸಬಾರದು, ಬದಲಾಗಿ ಅವನ್ನು, ಕೇಡಿಗತನ-ದುರುದ್ದೇಶಗಳು ಇರುವವರನ್ನು ಭೀತಿಗೊಳಿಸುವ ಮತ್ತು ಸರಳರನ್ನು ಉತ್ತಮಗೊಳಿಸುವ ಸಲುವಾಗಿ ಹೇಳಿದ ಕಲ್ಪಿತ ಕಥೆಗಳು ಎಂದು ಭಾವಿಸಬೇಕು ಎಂದು ತಿಳಿಸಲಾಗಿದೆ.”

ಆದರೆ ವಾಸ್ತವವಾಗಿ ಭಾಗವತ, ಸ್ವರ್ಗಗಳಿಗೂ ನರಕಗಳಿಗೂ ಮತ್ತದರ ವಾಸಿಗಳಿಗೂ ಒಂದು ನಿಜ ಅಸ್ತಿತ್ವವನ್ನು ಕಲ್ಪಿಸುತ್ತದೆ. ಪರಲೋಕಗಳನ್ನೂ ಮತ್ತು ಅಲ್ಲಿ ವಾಸಿಸುವ ವಿವಿಧ ದೇವತೆಗಳನ್ನೂ ವಿಸ್ತಾರವಾಗಿ ವಿವರಿಸುತ್ತದೆ. ಈ ಜೀವಿಗಳೆಲ್ಲ ನಿಜವಾಗಿ ಇರುವವರು ಎಂದು ಹೇಳುವುದಲ್ಲದೆ ಭಾಗವತ ಅವರಲ್ಲಿ ಒಬ್ಬೊಬ್ಬರಿಗೂ ಸೃಷ್ಟಿ, ಸ್ಥಿತಿ, ಲಯಗಳಲ್ಲಿ ಮುಖ್ಯವಾದ ಪಾತ್ರಗಳನ್ನೂ ಕಲ್ಪಿಸುತ್ತದೆ. ಜೊತೆಗೆ, ಅವರೆಲ್ಲರಿಗೂ ಶ್ರೀಕೃಷ್ಣನ ಐಹಿಕ ಪ್ರಪಂಚದ ಅನೇಕಾನೇಕ ಲೀಲೆಗಳಲ್ಲಿ ಒಂದೊಂದು ಕಾರ್ಯಭಾಗವನ್ನೂ ಕೊಡುತ್ತದೆ. ಉದಾಹರಣೆಗೆ, ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಿಂದ ಮೇಲಕ್ಕೆತ್ತುವ ಕಥೆಯಲ್ಲಿ, ಶ್ರೀಕೃಷ್ಣನು ಇಂದ್ರಯಜ್ಞವೊಂದಕ್ಕೆ ಅಡ್ಡಿ ಮಾಡಿದಾಗ, ಇಂದ್ರದೇವ ಅಲ್ಲಿ  ಮಳೆ ಮತ್ತು ಬಿರುಗಾಳಿ ಎಬ್ಬಿಸಿದನು.

ಆಧುನಿಕ ಶಿಕ್ಷಣದ ಕಾರಣ ಈ ಪುರಾಣಗಳನ್ನು ಅಸಂಬದ್ಧ ಕಲ್ಪನೆ ಎಂದು ಕರೆದ ಬುದ್ಧಿ ಜೀವಿಗಳನ್ನು ತಲಪಲು ಭಕ್ತಿವಿನೋದ ಠಾಕುರ ಅವರು ಭಾಗವತದ ಈ ವಿವರಗಳನ್ನು, ಪಕ್ಕಕ್ಕೆ ತಳ್ಳುತ್ತಾರೆ. ಕೊನೆಗೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ೧೮೮೦ರಲ್ಲಿ ‘ಶ್ರೀಕೃಷ್ಣ ಸಂಹಿತ’ ಎನ್ನುವುದೊಂದು ಗ್ರಂಥ ಪ್ರಕಟಿಸಿ, ಅದರಲ್ಲಿ ಕೃಷ್ಣಪ್ರಜ್ಞೆಯ ತತ್ತ್ವಳನ್ನು ವಿಸ್ತಾರವಾಗಿ ವಿವರಿಸುತ್ತಾರೆ. ಈ ಗ್ರಂಥದಲ್ಲಿ ಅವರು, ಸರ್‌ವಿಲಿಯಂ ಜೋನ್ಸ್ ಬೈಬಲ್‌ನ ಮೋಸೆಸ್‌ನ ಕಾಲಘಟನಾ ಸೂಚಿ ರೂಪಿಸಿದ ಹಾಗೆ, ತಾವೂ ಹಿಂದೂ ಕಾಲ ಘಟನಾ ಸೂಚಿಯನ್ನು ಪುನರ್ ರಚಿಸಿದ್ದಾರೆ. ಈ ಕೆಲಸದಲ್ಲಿ ಅವರು ದೇವತೆಗಳನ್ನು ಮತ್ತು ಮನುಗಳನ್ನು ಮಾನವ ದೊರೆಗಳನ್ನಾಗಿ ಪರಿವರ್ತಿಸಬೇಕಾಯಿತು.

ಆದರೆ,  ಭಕ್ತಿವಿನೋದ ಠಾಕುರರು ತಾವು ಬಂಗಾಳಿ ಬುದ್ಧಿಜೀವಿಗಳಿಗಾಗಿ ಸಮರ್ಪಿಸಿದ ಈ ಪರಿವರ್ತಿತ ಭಾಗವತವನ್ನು ಸ್ವತಃ ಒಪ್ಪಿಕೊಳ್ಳಲಿಲ್ಲ. ಅವರು ವಾಸ್ತವವಾಗಿ ಭಾಗವತದ ಪುರಾಣ ಕಥೆಗಳನ್ನು ನಿಜವೆಂದು ಒಪ್ಪಿಕೊಂಡಿದ್ದರು. ಇದನ್ನು ತಮ್ಮ ಅನೇಕ ಬರವಣಿಗೆಗಳಲ್ಲಿ ಕಾಣಿಸಿಯೂ ಇದ್ದಾರೆ.

ಆಧ್ಯಾತ್ಮಿಕ ದೃಷ್ಟಿ

ಬುದ್ಧಿಜೀವಿಗಳನ್ನು ತಲುಪಲು ಪೌರಾಣಿಕ ಕಥನಗಳನ್ನು ವ್ಯತ್ಯಾಸ ಮಾಡಿದ ಭಕ್ತಿವಿನೋದ ಠಾಕೂರರ ಕಾರ್ಯ ಒಪ್ಪುವಂಥದ್ದು. ಆದರೆ, ಇಂದು ಇಂಥ ವ್ಯತ್ಯಾಸದ ಆಧ್ಯಾತ್ಮಿಕ ಅಭಿಪ್ರಾಯಗಳನ್ನು ಸಾರ್ವಜನಿಕಗೊಳಿಸಲು ಸಾಧ್ಯವೇ? ಮತ್ತು ಎಷ್ಟರ ಮಟ್ಟಿಗೆ ಈ ಅಭಿಪ್ರಾಯಗಳನ್ನು ಸತ್ಯ ಎಂದು ಪರಿಗಣಿಸಲಾಗಬಹುದು? ನಾವು ಆಧುನಿಕ ಜ್ಞಾನದಿಂದ ಹಿಂದೂ ಪೌರಾಣಿಕ ಕಥನಗಳನ್ನು ನಿಜವಾಗಲೂ ಸುಳ್ಳು ಎಂದು ಒಪ್ಪಿಕೊಳ್ಳಬೇಕೇ? ಮತ್ತು ತನ್ಮೂಲಕ, ಕಲ್ಪನಾ ಕಥನಗಳನ್ನು ಹೊರದೂಡಿ, ಭಗವತ್ಪ್ರೇಮದ ಸಾರಭೂತ ಆಲೋಚನೆಯನ್ನು ಕಾಪಾಡುವ ಒಂದು ತತ್ತ್ವಜ್ಞಾನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕೇ?

ಈ ಪ್ರಶ್ನೆಗಳನ್ನು ಉತ್ತರಿಸಲು, ಇಪ್ಪತ್ತೊಂದನೆಯ ಶತಮಾನದಲ್ಲಿ ಪಾಶ್ಚಿಮಾತ್ಯ ಬುದ್ದಿಜೀವಿಗಳಿಗೆ ತತ್‌ಕ್ಷಣ ಒಪ್ಪಿಗೆಯಾಗುವಂತೆ ವೈಷ್ಣವ ತತ್ತ್ವವನ್ನು ನಾವು ಹೇಗೆ ಪುನರ್ ರಚಿಸಬಹುದೆಂದು ಪರಿಶೀಲಿಸಬಹುದು. ಇದನ್ನು ಮಾಡಲು ನಾವು ಸ್ವಲ್ಪ ಮಟ್ಟಿಗೆ ಸದ್ಯದ ಆಧುನಿಕ ವಿಜ್ಞಾನದ ಐಹಿಕ ಚೌಕಟ್ಟಿನಿಂದ ಬದಿಗೆ ಸರಿಯಬೇಕಾಗುತ್ತದೆ. ಭೌತವಿಜ್ಞಾನಿಗಳು, ತನ್ನೆಲ್ಲ ಪ್ರಜ್ಞಾಪೂರ್ವಕ ಅನುಭವಗಳಿಂದ, ಮನಸ್ಸು ಎನ್ನುವುದು ಮಿದುಳಿನ ಒಂದು ಸೃಷ್ಟಿ ಎಂದು ಹೇಳುತ್ತಾರೆ. ನಾವಿದನ್ನು ಒಪ್ಪಿಕೊಂಡರೆ, ಆಗ ಎಲ್ಲ ಧಾರ್ಮಿಕ ಅನುಭವಗಳು – ಬ್ರಹ್ಮಾನಂದವೋ, ಭಗವತ್ಪ್ರೇಮವೋ – ಬರೀ ಭ್ರಮೆಗಳಾಗಿಯೇ ಉಳಿದುಕೊಳ್ಳುತ್ತವೆ. ಇದು ನಿಜವಾದರೆ, ನಾವು ಧರ್ಮವನ್ನು ಮರೆತುಬಿಡಬಹುದು.

ಮನಃಶಾಸ್ತ್ರಜ್ಞ ವಿಲಿಯಂ ಜೇಮ್ಸ್ ಅವರದು ಒಂದು ಭಿನ್ನವಾದ ಚಿಂತನೆ. ಜೇಮ್ಸ್ ಹತ್ತೊಂಬತ್ತನೆಯ ಶತಮಾನದ ಮನುಷ್ಯನಾಗಿದ್ದರೂ, ವೈಜ್ಞಾನಿಕ ಸಂಶೋಧನ ರೀತಿಗಳನ್ನು,  ಧರ್ಮಕ್ಕೆ ಅನ್ವಯಿಸುತ್ತಿದ್ದರು. ಹೀಗಾಗಿ ಅವರ ಅವಲೋಕನಗಳು ಇಂದಿಗೂ ಸುಸಂಗತವಾಗಿ ಉಳಿದಿವೆ.

ತಮ್ಮ ಅಧ್ಯಯನಗಳ ಫಲವಾಗಿ ಜೇಮ್ಸ್ ಕೆಳಕಾಣಿಸಿದ ನಿರ್ಧಾರಗಳನ್ನು ತಲಪಿದರು-

“ನಮ್ಮ ಹುಡುಕಾಟಗಳ ಮುಂದಿನ ಹೆಜ್ಜೆಯಾಗಿ, ಇಂದ್ರಿಯವೇದ್ಯ ಮತ್ತು ‘ಅರ್ಥಮಾಡಿಕೊಳ್ಳುವಂಥ’ ಪ್ರಪಂಚದಿಂದ ನಾವು ಇಡಿಯಾಗಿ ಅಸ್ತಿತ್ವದ ಇನ್ನೊಂದು ಆಯಾಮಕ್ಕೆ ಇಳಿದು ಬಿಡುತ್ತೀವೇನೋ ಎಂದನ್ನಿಸುತ್ತದೆ. ಅದನ್ನು ಅಧ್ಯಾತ್ಮ ತಾಣ, ಅಥವಾ ಪವಾಡ ತಾಣವೋ, ಹೇಗೆ ಬೇಕಾದರೂ ಕರೆಯಬಹುದು… ಆದರೂ ನಮ್ಮ ಆಲೋಚನೆಯ ಈ ಅಪರಿಮಿತ ತಾಣ ಬರೀ ಭಾವಾತ್ಮಕವಾದದ್ದಲ್ಲ, ಏಕೆಂದರೆ ಅದು ಈ ಪ್ರಪಂಚದಲ್ಲಿ ಪರಿಣಾಮಗಳನ್ನು ಸೃಷ್ಟಿಸುತ್ತದೆ. ನಾವು ಅದರೊಂದಿಗೆ ಸ್ಪಂದಿಸಿದಾಗ, ಕೆಲಸ ಕಾರ್ಯಗಳು ನಮ್ಮ ಪರಿಮಿತ ವ್ಯಕ್ತಿತ್ವದೊಳಗೇ ಜರುಗುತ್ತವೆ, ನಾವು ಹೊಸ ಮನುಷ್ಯರಾಗಿ ಪರಿವರ್ತನೆಗೊಂಡಿರುತ್ತೇವೆ, ಆದರೆ, ಯಾವುದು ಇನ್ನೊಂದು ವಾಸ್ತವಿಕತೆಯೊಂದಿಗೆ  ಪರಿಣಾಮಗಳನ್ನು  ರೂಪಿಸುತ್ತದೆಯೊ ಅದನ್ನು ವಾಸ್ತವವೆಂದೇ ಹೇಳಿಬಿಡಬೇಕು. ಆದ್ದರಿಂದ, ಅಗೋಚರ ಅಥವಾ ಗೂಢ ಪ್ರಪಂಚವನ್ನು ಅವಾಸ್ತವಿಕ ಎಂದು ಕರೆಯಲು ನಮಗೆ ಯಾವ ತಾತ್ತ್ವಿಕವಾದ ನೆಪಗಳೂ ಇಲ್ಲ ಎಂದು ನನಗನ್ನಿಸಿದೆ.”

ನಾವು ಈ ಅತೀಂದ್ರಿಯ ಅಥವಾ ಪಾರಮಾರ್ಥಿಕ ಆಯಾಮದ ಆಲೋಚನೆಯನ್ನು ತೆಗೆದುಕೊಂಡು ಈ ಕೆಳಕಂಡ  ವೈಷ್ಣವ ಸಿದ್ಧಾಂತಕ್ಕೆ ಬರಬಹುದು : ಇಂಥದೊಂದು ಪಾರಮಾರ್ಥಿಕ ತಾಣ ಅಸ್ತಿತ್ವದಲ್ಲಿ ಇದೆ. ಅದೇ ಶ್ರೀಕೃಷ್ಣನ ಅನಂತ ಬೀಡು. ಪ್ರೌಢಾತ್ಮಗಳು ಧ್ಯಾನದಲ್ಲಿ ನಿರತರಾಗಿ ಕೃಷ್ಣಾನುಗ್ರಹದಿಂದ ಆ ಬೀಡನ್ನು ಗ್ರಹಿಸಿಕೊಳ್ಳಬಹುದು. ಅವರು ಶ್ರೀಕೃಷ್ಣ ಲೀಲೆಗಳ ಲೋಕವನ್ನು ಪ್ರವೇಶಿಸಬಹುದು.

“ಆದರೆ ಐಹಿಕ ಪ್ರಪಂಚದಲ್ಲಿನ ಎಲ್ಲ ಪೌರಾಣಿಕ ಆಗುಹೋಗುಗಳ ವಿವರಗಳನ್ನು ಆಧುನಿಕ ವೈಜ್ಞಾನಿಕ ತಿಳುವಳಿಕೆಯ ಮೂಲಕವೇ ಗ್ರಹಿಸಿಕೊಳ್ಳಬೇಕಾಗುತ್ತದೆ. ಸಾರಾಂಶವಾಗಿ ಹೇಳುವುದಾದರೆ, ಪುರಾಣಗಳ ಅತಿಶಯಗಳು ವಾಸ್ತವವಾಗಿ ನಿಜವಲ್ಲ. ಆದರೆ, ಶ್ರೀಕೃಷ್ಣಲೀಲೆಯ ಕಥೆಗಳು ಬರೀ ಭಾವನಾಚಿತ್ರಗಳಲ್ಲ. ಬದಲಾಗಿ, ಅವು ಮಹಾನ್ ಆತ್ಮಗಳ ತಪಸ್ವೀ ಮನಸ್ಸುಗಳಿಗೆ ಹರಿದುಬಂದ ಆಧ್ಯಾತ್ಮಿಕ ರವಾನೆಗಳು. ಮತ್ತು ಇವು ಈ ಐಹಿಕ ಲೋಕವನ್ನು ಕುರಿತಾದ್ದಲ್ಲ, ಆದರೆ, ಶುದ್ಧವಾದ ಆಧ್ಯಾತ್ಮಿಕ ಪ್ರಭಾವಲಯಕ್ಕೆ ಸೇರಿದ್ದು.”

ಈ ತರಹದ ಸಿದ್ಧಾಂತ ಬಹಳ ಜನರಿಗೆ  ಹಿಡಿಸಬಹುದು, ಮತ್ತು ನಾವು ಇದನ್ನು  ‘ಆಧ್ಯಾತ್ಮಿಕ ದೃಷ್ಟಿ’ ಎಂದು ಕರೆಯೋಣ. ಇದು ಭಗವತ್ಪ್ರೇಮವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಸುತ್ತದೆ, ಅದೇ ವೇಳೆಗೆ, ಆಧುನಿಕ ಜ್ಞಾನ ಮತ್ತು ಪೌರಾಣಿಕ ಕಥನಗಳ ನಡುವಿನ ಕಂಗೆಡಿಸುವ ಸಂಘರ್ಷವನ್ನೂ ತಡೆಹಿಡಿಯುತ್ತದೆ.

ಭಕ್ತಿ ಪರಂಪರೆಯನ್ನು ಅಧ್ಯಯನ ಮಾಡುವ ಕೆಲವು ಆಧುನಿಕ ಧಾರ್ಮಿಕ ವಿದ್ವಾಂಸರ ಬರವಣಿಗೆಯಲ್ಲೂ ವಿಧೇಯವಾಗಿ ಈ ಸಿದ್ಧಾಂತ ಕಾಣಿಸಿಕೊಳ್ಳುತ್ತದೆ.

ಉದಾಹರಣೆಗೆ, ‘Shrines of the Mind’ (ಮನಸ್ಸಿನ ಪುಣ್ಯ ತಾಣಗಳು) ಎಂಬ ಲೇಖನವನ್ನು ಪರಿಗಣಿಸೋಣ. ಇದನ್ನು ಬರೆದವರು, ವಿಲಿಯಮ್ಸ್ ಕಾಲೇಜಿನಲ್ಲಿ ಧಾರ್ಮಿಕ ವಿಭಾಗದಲ್ಲಿ ಉಪ ಪ್ರಾಧ್ಯಾಪಕರಾಗಿರುವ, ಡೇವಿಡ್ ಹೇಬರ್‌ಮನ್. ಈ ಲೇಖನದಲ್ಲಿ ಅವರು, ಕೃಷ್ಣಾವತಾರದ ಲೀಲೆಗಳ ಸಾಂಪ್ರದಾಯಿಕ ಸ್ಥಳವಾಗಿರುವ, ವ್ರಜಭೂಮಿಯು  ಕೇವಲ ಒಂದು ಮನೋಕ್ಷೇತ್ರ. ಧ್ಯಾನದಲ್ಲಿ ಅನುಭವಿಸಬಹುದಾದ ಮತ್ತು ಪ್ರವೇಶಿಸಬಹುದಾದ ಪುಣ್ಯಸಾಮ್ರಾಜ್ಯ ಎಂದು ವಾದಿಸುತ್ತಾರೆ.

ಉತ್ತರ ಭಾರತದ ಮಥುರಾದಲ್ಲಿರುವ ವ್ರಜಭೂಮಿ ಕೇವಲ ಹದಿನಾರನೆಯ ಶತಮಾನದಿಂದ ಮಾತ್ರ ಶ್ರೀಕೃಷ್ಣ ಆರಾಧನೆಗೆ ಪ್ರಧಾನ ಕೇಂದ್ರವಾಗಿದೆ ಎಂದವರು ಹೇಳುತ್ತಾರೆ.  ಧ್ಯಾನದಲ್ಲಿ ಕಲ್ಪಿಸಿಕೊಂಡ ದಿವ್ಯ ದೃಶ್ಯಗಳನ್ನು ವ್ರಜಭೂಮಿ ಪ್ರದೇಶದಲ್ಲಿ ಮೂಡಿಸಿ ಒಂದು ಮನೋಬಿಂಬವನ್ನು ರೂಪಿಸಿಕೊಳ್ಳಲಾಯಿತು, ಎಂದು ಹೇಬರ್‌ಮನ್ ಹೇಳುತ್ತಾರೆ.

‘ನಾವು ಕೃಷ್ಣನ ದಿವ್ಯಲೋಕವನ್ನು ಧ್ಯಾನದ ಮೂಲಕ ಪ್ರವೇಶಿಸಬಹುದು. ಆದರೆ, ಕೃಷ್ಣನು ಭೌತಿಕ ಪ್ರಪಂಚದಲ್ಲಿ ಎಂದಿಗೂ ನಿಜವಾದ ಲೀಲೆಗಳನ್ನು ತೋರಲಿಲ್ಲ. ಅಂದರೆ ಅನೇಕ ಶತಮಾನಗಳ ಹಿಂದೆ ವ್ರಜಭೂಮಿಯಲ್ಲಿ ಅನೇಕ ಅನಾದಿ ಬುಡಕಟ್ಟುಗಳು ಇದ್ದಿರಬಹುದು. ಆದರೆ ಗೋವರ್ಧನಗಿರಿಯನ್ನು ಹಿಡಿದೆತ್ತಿದ ಕೃಷ್ಣ ಎನ್ನುವನೇ ಇದ್ದಿರಲಾರನು.’

ಈ ಧಾರ್ಮಿಕ ಅನಿಸಿಕೆ, ಆಧುನಿಕ ಪಂಡಿತವರ್ಗದೊಂದಿಗೆ ಕೆಲವು ಸಂಘರ್ಷಗಳನ್ನು ತಪ್ಪಿಸಲು ಸಹಾಯ ಮಾಡಿದರೂ, ಇದರಲ್ಲಿ ಅನೇಕ ಹಿನ್ನಡೆಗಳಿವೆ.

ಈ ರೀತಿ ಈ ಆಧ್ಯಾತ್ಮಿಕ ದೃಷ್ಟಿಯನ್ನು ಬರೀ ಒಂದು ಶುದ್ಧ ಮಾನಸಿಕ ವಿಚಾರ ಎಂದು ಬಿಡಬಹುದು. ಎಲ್ಲ ರೀತಿಯ ಮನಃಶಾಸ್ತ್ರಜ್ಞರು, ನರವಿಜ್ಞಾನಿಗಳು ಮತ್ತು ಭೌತ ವಿಜ್ಞಾನಿಗಳು ಅಕ ಸಂಖ್ಯೆಯಲ್ಲಿ ಬೆಂಬಲಿಸಬಹುದಾದ ಅಭಿಪ್ರಾಯ ಇದೇ ಅಲ್ಲವೇ?

ಇಂಥ ಅಹಿತ ತೀರ್ಮಾನಗಳನ್ನು, ಸಾಂಪ್ರದಾಯಿಕ ವೈಷ್ಣವರು ಕೈಗೊಂಡ ಸಮತೂಕದ ನಿರ್ಧಾರಗಳಲ್ಲಿ, ನಿರರ್ಥಕಗೊಳಿಸಲಾಗಿದೆ. ಈ ವೈಷ್ಣವರು, ಶ್ರೀಕೃಷ್ಣನನ್ನು ಪರಮೋತ್ತಮ ಸೃಷ್ಟಿಕರ್ತ ಮತ್ತು ಅತಿಮಾನುಷ ಲೀಲೆಗಳನ್ನು ಭೂಮಿಯ ಮೇಲೆ ಪ್ರದರ್ಶಿಸಿದವನು ಎಂದು ಒತ್ತಿ ಹೇಳಿದ್ದಾರೆ.

ಕಾಲ್ಪನಿಕ ಕಥನ ಮತ್ತು ವಿಜ್ಞಾನದ ನಡುವಿನ ಎಲ್ಲೆಯನ್ನು ಸ್ಥಳಾಂತರಗೊಳಿಸುವುದು

ಇನ್ನು ನಾವು ಆಧ್ಯಾತ್ಮಿಕ ದೃಷ್ಟಿಯಿಂದ ಪ್ರಾರಂಭಿಸಿ, ಭೌತಿಕ ಪಂಡಿತರ ರೀತಿಯಲ್ಲಿ ಮುಂದುವರಿದರೆ, ಒಂದು ತೃಪ್ತಿಕರ ವಿಚಾರ ಸರಣಿಯತ್ತ ಹೋಗಲು ಒಂದು ಮೆಟ್ಟುಗಲ್ಲಾಗಿ ಅದು ಹೇಗೆ ಸಹಾಯಮಾಡಬಹುದು ಎನ್ನುವುದನ್ನು ಗಮನಿಸಬಹುದು. ಇಂಥದೊಂದು ವಿಚಾರ ಸರಣಿಯನ್ನು ರೂಪಿಸಲು ಮೊದಲನೇ ಮೆಟ್ಟಿಲೆಂಬಂತೆ ಹೇಬರ್‌ಮನ್ ಅವರು ವೈಷ್ಣವ ಸಂತರಾದ ನರೋತ್ತಮದಾಸ ಠಾಕುರ ಅವರಿಗೆ ಸಂಬಂಸಿದ ಪ್ರಸಂಗವೊಂದನ್ನು ಉದ್ಧರಿಸುತ್ತಾರೆ –

ನರೋತ್ತಮದಾಸ ಠಾಕುರರು ತಮ್ಮ ಧ್ಯಾನದಲ್ಲಿ ರಾಧಾಕೃಷ್ಣರಿಗೆ ಅರ್ಪಿಸಲು, ಹಾಲು ಕಾಯಿಸುತ್ತಿದ್ದರು. ಹಾಲು ಉಕ್ಕಿ ಚೆಲ್ಲುವಂತಾದಾಗ ಥಟ್ಟನೆ ಆ ಪಾತ್ರೆಯನ್ನು ತಮ್ಮ ಬರಿಗೈಯಲ್ಲಿ ಕೆಳಗಿಳಿಸಿದರು. ಅವರ ಕೈಗಳು ಸುಟ್ಟವು. ನರೋತ್ತಮ ಅವರು ತಮ್ಮ ಧ್ಯಾನದಿಂದ ಎಚ್ಚೆತ್ತಾಗ ವಾಸ್ತವವಾಗಿ ತಮ್ಮ ಕೈಗಳು ಸುಟ್ಟುಹೋಗಿರುವುದನ್ನು ನೋಡಿದರು.

ಇಂಥ ಅನೇಕ ಕಥೆಗಳಿವೆ. ಎರಡನೇ ಕಥೆಯಲ್ಲಿ, ನರೋತ್ತಮದಾಸ ಠಾಕುರರ ಸಮಕಾಲೀನರಾಗಿದ್ದ ಶ್ರೀನಿವಾಸ ಆಚಾರ್ಯ ಅವರು ಧ್ಯಾನದಲ್ಲಿ ತಮ್ಮ ಚೈತನ್ಯ ಮಹಾಪ್ರಭುಗಳಿಗೆ ಗಾಳಿ ಬೀಸುತ್ತಿದ್ದರು. ಚೈತನ್ಯರು ತಮ್ಮ ಹೂವಿನ ಹಾರವನ್ನು ಶ್ರೀನಿವಾಸರ ಕೊರಳಿಗೆ ಹಾಕಿದರು. ಶ್ರೀನಿವಾಸರು ಧ್ಯಾನದಿಂದ ಎಚ್ಚೆತ್ತಾಗ, ಆ ಅಪಾರ ಸುವಾಸನೆಯ ಹಾರ ವಾಸ್ತವವಾಗಿ ತಮ್ಮ ಕೊರಳಲ್ಲಿರುವುದನ್ನು ಕಂಡರು.

ಮೂರನೆಯ ಕಥೆಯಲ್ಲಿ  ದುಃಖಿ ಕೃಷ್ಣದಾಸ್ ಎನ್ನುವ ಒಬ್ಬ ವೈಷ್ಣವ ಸಂತರು, ಕೃಷ್ಣ ರಾಸಲೀಲೆಯ ಸ್ಥಳದಲ್ಲಿ ಕಸಗುಡಿಸುತ್ತಿದ್ದರು. ಅವರಿಗಲ್ಲಿ ಅಪರೂಪವಾದೊಂದು ಚಿನ್ನದ ಕಾಲ್ಗಡಗ ಸಿಕ್ಕಿತು. ಅದು ಅತಿ ಮುಖ್ಯವಾದದ್ದು ಎಂದವರಿಗೆ ಅನ್ನಿಸಿದರಿಂದ ಅವರದನ್ನು ಬಚ್ಚಿಟ್ಟರು. ಅನಂತರ ಒಬ್ಬ ವೃದ್ಧೆ  ಬಂದು ಆ ಕಾಲ್ಗಡಗವನ್ನು ಕೇಳಿದಳು. ಆಕೆ ನಿಜವಾಗಲೂ ರಾಧಾ ಮತ್ತು ಕೃಷ್ಣರ ಸೇವಕಿ, ಲಲಿತಾ. ಆ ಕಾಲ್ಗಡಗ ನಿಜವಾಗಲೂ ರಾಧಾಗೆ ಸೇರಿದ್ದು ಎಂದು ಆಕೆ ತಿಳಿಸಿ, ತನ್ನ ನಿಜರೂಪವನ್ನು  ತೋರಿದಳು.

ಇಂಥ ಕಥೆಗಳಿಂದ ನಾವು ಏನು ತಿಳಿದುಕೊಳ್ಳಬಹುದು? ಕೈಗಳು ಸುಟ್ಟುಹೋಗುವ ಕಥೆಯನ್ನು ವಿದ್ವಾಂಸರು ಒಪ್ಪಿಕೊಳ್ಳಬಹುದು. ಕ್ರಿಸ್ತನ ಶಿಲುಬೆಗೇರುವಿಕೆಯನ್ನು ಕ್ಯಾಥೋಲಿಕ್ಕರು ಧ್ಯಾನಿಸುವಾಗ ಕೆಲವೊಮ್ಮೆ ಕ್ರಿಸ್ತನ ಶಿಲುಬೆ ಗಾಯದ ಕಲೆಗಳನ್ನು ತಮ್ಮ ಕೈಕಾಲುಗಳ ಮೇಲೆ ಪಡೆಯುತ್ತಾರೆ ಎನ್ನುವ ಮಾತು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಧ್ಯಾನವು ರಕ್ತದ ಗಾಯಗಳನ್ನುಂಟುಮಾಡಬಹುದಾದರೆ, ಅದು ಸುಟ್ಟಗಾಯಗಳನ್ನೂ ಕೂಡ ಕಾಣಿಸಬಹುದು.

ಪವಾಡರೀತಿಯ ಕಂಠೀಹಾರದ ಕಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಇಲ್ಲಿ ಹಿಡಿತಕ್ಕೆ ಸಿಕ್ಕುವ ವಸ್ತುವೊಂದು ಮೂರ್ತರೂಪ ತಾಳಿ ಬರುವುದು ಎಂದಿದೆ. ಇದೊಂದು ಅದ್ಭುತ ಎಂದನಿಸುತ್ತದೆ, ಆದರೆ ಮೂರ್ತರೂಪ ತಾಳುವುದರ ಕುರಿತು ಬೇಕಾದಷ್ಟು ಸಾಹಿತ್ಯವಿದೆ. ಉದಾಹರಣೆಗೆ, ಸ್ಟೀಫನ್ ಬ್ರಾಡ್ ಎನ್ನುವ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರು, ಗಾಳಿಯಲ್ಲಿ ವಸ್ತು ಸೃಷ್ಟಿಯಾಗುವುದು ಎನ್ನುವ ಪ್ರದರ್ಶನಗಳಲ್ಲೆಲ್ಲ ಭೂತಚೇಷ್ಟೆಯ ಹಿನ್ನೆಲೆಯಿದೆ, ಇದು ಗಂಭೀರ ಅಧ್ಯಯನಕ್ಕೊಂದು ವಸ್ತು ಎಂದಿದ್ದಾರೆ. ಮಂತ್ರತಂತ್ರವಾದಿಗಳು ಹೀಗೆ ಗಾಳಿಯಲ್ಲಿ ವಸ್ತು ಸೃಷ್ಟಿಸುವುದು ನಿಜ ಎಂದಾಗಿದ್ದರೆ, ಸಂತಪುರುಷರಿಂದ ಸುಂದರವಾದ ಹಾರವೊಂದು ಗಾಳಿಯಲ್ಲಿ ತೇಲಿ ಬರುವುದು ಏಕೆ ನಿಜವಾಗಿರಬಾರದು?

ಈಗ ಮೂರನೆಯ ಕಥೆಯತ್ತ ಬರೋಣ. ಈ ಕಥೆ ಅತಿಶಯ ಎಂಬಂತೆ ಕಂಡರೂ, ಇಂಥ ಅನೇಕ ಕಥೆಗಳಿವೆ. ಒಬ್ಬ ದಿವ್ಯ ಲೋಕದ ವ್ಯಕ್ತಿ ನಮ್ಮ ಐಹಿಕ ಪ್ರಪಂಚಕ್ಕೆ ಕಾಲಿಟ್ಟು, ಏನಾದರೂ ವಿಶೇಷವಾದ್ದನ್ನು ತೋರಿ, ಅನಂತರ ಮಾಯಾವಾಗುವುದು ಕಾಣುತ್ತದೆ. ಇನ್ನೊಂದು ಉದಾಹರಣೆಯಾಗಿ ‘ಚೈತನ್ಯ ಚರಿತಾಮೃತ’ದ ಒಂದು ಕಥೆ: ಸಂತ ಮಾಧವೇಂದ್ರ ಪುರಿ ಅವರ ಮುಂದೆ ಒಮ್ಮೆ ಪುಟ್ಟ ಕೃಷ್ಣ ಕಾಣಿಸಿಕೊಂಡು ಒಂದು ಪಾತ್ರೆ ಹಾಲನ್ನು ನೀಡಿ ಮಾಯವಾಗಿಬಿಟ್ಟ. ಮಾಧವೇಂದ್ರಪುರಿ ಆ ಹಾಲನ್ನು ಕುಡಿದು, ಈ ಘಟನೆ ಸುಟವಾಸ್ತವ ಎಂದು ತೋರಿಸಿದರು. ಅದೇ ದಿನ ರಾತ್ರಿ ಶ್ರೀಕೃಷ್ಣ ಅವರ ಕನಸಿನಲ್ಲಿ ಕಾಣಿಸಿಕೊಂಡು, ಗೋಪಾಲವಿಗ್ರಹದ ತಾಣವನ್ನು ತಿಳಿಸಿದ; ಮೂಲತಃ ಈ ವಿಗ್ರಹ ಕೃಷ್ಣನ ಮೊಮ್ಮಗ ವಜ್ರನಿಂದ ಸ್ಥಾಪನೆಯಾದದ್ದು, ಮತ್ತು ಒಂದು ಮುಸ್ಲಿಂ ದಾಳಿಯಲ್ಲಿ ಭೂಮಿಯಲ್ಲಿ ಅಡಗಿಸಲಾಗಿತ್ತು.

ಸುಟ್ಟು ಹೋದ ಕೈಗಳ, ಅತಿಶಯ ಹಾರದ ಮತ್ತು ದಿವ್ಯ ಭೇಟಿಗಳ ಕಥೆಗಳು, ಸಾಂಪ್ರದಾಯಿಕ ವೈಜ್ಞಾನಿಕ ದೃಷ್ಟಿಕೋನದಿಂದ ಆಧುನಿಕ ದಿನಗಳಲ್ಲಿ ಸ್ವೀಕರಿಸಲು ಒಂದಕ್ಕಿಂತ ಒಂದು ಹೆಚ್ಚಾಗಿ ಕಷ್ಟವಾಗುತ್ತದೆ. ಆದರೆ, ಇಂಥ ಕಥೆಗಳಲ್ಲಿ ಯಾವುದು ಬಹುಶಃ ನಿಜವಾಗಿರಬಹುದು ಮತ್ತು ಯಾವುದು ನಿಜವಾಗಿರಲಾರದು ಎಂಬುದರ ನಡುವೆ ಒಂದು ಗೆರೆ ಬರೆಯುವುದು ನಿಜವಾಗಲೂ ಅಸಾಧ್ಯವಾದ ಕೆಲಸ. ಮತ್ತು ಬಹುಶಃ ಇವೆಲ್ಲ ಕಥೆಗಳು, ಆಧ್ಯಾತ್ಮಿಕ ಮತ್ತು ಐಹಿಕ ಶಕ್ತಿಗಳ ನಡುವಿನ ಶಕ್ತಿಯುತ ಸಂಘರ್ಷಗಳನ್ನು ಕಾಣಿಸುವಂತಿರುವುದರಿಂದ, ಇವೆಲ್ಲವನ್ನೂ ಸರಿಯಾಗಿ ಅಧ್ಯಯನ ಮಾಡಿದರೆ, ಅದು ನಮ್ಮ ವೈಜ್ಞಾನಿಕ ಜ್ಞಾನಕ್ಕೊಂದು ಮುಖ್ಯವಾದ ಹೊಸ ಅಧ್ಯಾಯವನ್ನು ಸೇರಿಸುವಂತಾಗಬಹುದು.

ನಾವು ಬರೀ ಒಂದು ಪ್ರಯೋಗಾತ್ಮಕ ಅಧ್ಯಾಯವನ್ನು ಅಧ್ಯಯನ ಮಾಡುವಾಗ, ನಮ್ಮ ಪರಿಮಿತ ಅನಿಸಿಕೆಗಳ ಆಧಾರದ ಮೇಲೆಯೇ ಅವುಗಳ ಮೌಲ್ಯ ಮಾಡುತ್ತೇವೆ. ಕೊನೆಗೆ, ನಾವು ಕಂಡುಕೊಳ್ಳುವ ತೀರ್ಮಾನಗಳೆಲ್ಲ, ಮೂಲ ಸಾಕ್ಷ್ಯಾಧಾರಗಳಿಗಿಂತಲೂ, ನಮ್ಮ ಪರಿಮಿತ ತಿಳಿವಳಿಕೆಯನ್ನೇ ಪ್ರತಿಬಿಂಬಿಸುತ್ತವೆ. ಸ್ವ-ಅನಿಸಿಕೆಗಳು ಬದಲಾದರೆ, ತೀರ್ಮಾನಗಳೂ ಬದಲಾಗುತ್ತವೆ, ಆದರೆ, ಸಾಕ್ಷ್ಯಾಧಾರಗಳು ಅದೇ ಆಗಿರುತ್ತವೆ.

ಒಂದು ವೇಳೆ, ಲಭ್ಯವಿರುವ ಎಲ್ಲ ಮಾನವ ಅನುಭವದ ಇತಿಹಾಸವನ್ನು, ಹತ್ತೊಂಬತ್ತನೆಯ ಶತಮಾನದ ವಿಚಾರವಾದ ಕೋನದ ಮೂಲಕ ಅಧ್ಯಯನ ಮಾಡದೆ, ಭೌತವಸ್ತುವಿನ ಆಧ್ಯಾತ್ಮಿಕ ಪರಿವರ್ತನೆಗಳು ಒಂದು ನಿಜವಾದ ಸಾಧ್ಯತೆ ಎಂದು ಪರಿಗಣಿಸುವ ಆಧುನಿಕ ಹೊಸ ವಿಜ್ಞಾನದ ಮೂಲಕ ಅಧ್ಯಯನ ಮಾಡುವುದಾದರೆ ಏನಾಗಬಹುದು? ಇದರ ಫಲಿತಾಂಶಗಳು, ಈಗ ವಿದ್ವಾಂಸರು ಒಪ್ಪಿಕೊಂಡಿರುವುದಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿರಬಹುದು.

ಒಂದಂತೂ ನಿಜ, ಸರ್‌ವಿಲ್ಲಿಯಂ ಜೋನ್ಸ್ ಅವರು ಪಾಂಡವ ಸೋದರರ ಇತಿಹಾಸದ ಬಗ್ಗೆ ವ್ಯಕ್ತಪಡಿಸಿರುವ ವಿರೋಧಗಳು ತೂಕದವು ಎನ್ನಿಸುವುದಿಲ್ಲ.  ಉನ್ನತ ಜೀವಿಗಳು ಇನ್ನೊಂದು ಲೋಕದಿಂದ ನಮ್ಮ ಖಂಡಗಳಿಗೆ ಕಾಲಿಡಬಹುದಾದರೆ, ಮಾನವ ಕೂಡ ಅಂತಹ ಜೀವಿಗಳಿಂದ ಹುಟ್ಟಬಹುದು. ಹೊಸ ಅಧ್ಯಯನದಿಂದ ಪ್ರಕಟವಾಗಬಹುದಾದ ನಮ್ಮ ಪ್ರಾಚೀನದ ಚಿತ್ರ, ಸಾಂಪ್ರದಾಯಿಕ ಆಧ್ಯಾತ್ಮಿಕ ತತ್ತ್ವಗಳೊಂದಿಗೆ, ಈಗಿರುವುದಕ್ಕಿಂತಲೂ ಹೆಚ್ಚು ಹೊಂದಿಕೊಳ್ಳಬಹುದು.

ಇಪ್ಪತ್ತೊಂದನೆಯ ಶತಮಾನದಲ್ಲಿ ವಿಜ್ಞಾನದ ಬಗ್ಗೆ ವಿಶಾಲವಾದ ಚಿಂತನೆಯೊಂದು ರೂಪುಗೊಳ್ಳುವ ಚಿಹ್ನೆಗಳು ಕಾಣಿಸುತ್ತವೆ. ವಿವೇಕಾನಂದ ಮತ್ತು ಭಕ್ತಿ ವಿನೋದ ಠಾಕುರರ ಕಾಲದಲ್ಲಿ, ಯಾಂತ್ರಿಕ, ಅತಿವಾದ ರೂಪದ ವಿಜ್ಞಾನ ಅಡೆತಡೆಯಿಲ್ಲದೆ ಮುನ್ನಡೆಯುತ್ತ ವಿಜಯಧ್ವಜ ನೆಟ್ಟಿರುವಂತೆ ಕಂಡಿತು ಮತ್ತು ಬಹುಜನರು, ಇನ್ನು ಮೇಲೆ ಎಲ್ಲದಕ್ಕೂ ವಿವರಣೆಗಳು ಸಿಕ್ಕಿಬಿಡುತ್ತದೆ ಎಂದು ನಂಬಿಬಿಟ್ಟರು, ಆದರೆ, ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಈ ವಿಜಯೋತ್ಸವವನ್ನು ಅನೇಕ ಸಂದರ್ಭಗಳಲ್ಲಿ ತಡೆಹಿಡಿಯಲಾಗಿದೆ.

ಉದಾಹರಣೆಗೆ, ೧೮೯೦ರಲ್ಲಿ ಭೌತಶಾಸ್ತ್ರವೆನ್ನುವುದು ಒಂದು ಮುಗಿದ ವಿಷಯ ಎಂಬಂತೆ ಕಂಡಿತು. ಆದರೆ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಸಾಪೇಕ್ಷ ಸಿದ್ಧಾಂತ (Theory of Relativity) ಮತ್ತು ‘ಕ್ವಾಂಟಂ’ ಪ್ರಯೋಗಗಳ ಬೆಳವಣಿಗೆ ಕಾರಣ, ಭೌತಶಾಸ್ತ್ರ ಒಂದು ವಿರೋಧಾಭಾಸ ಮತ್ತು ಗೂಢತೆಯ ಘಟ್ಟವನ್ನು ಪ್ರವೇಶಿಸಿತು. ‘ಕ್ವಾಂಟಂ’ ಸಿದ್ಧಾಂತದ ವಿಸ್ಮಯಗಳು ಇಂದಿಗೂ ವಿಜ್ಞಾನಿಗಳನ್ನು, ಶತಮಾನದ ಪ್ರಾರಂಭದಲ್ಲಿ ವಿಪರೀತ ರಹಸ್ಯ ಗರ್ಭಿತ ಎಂದನ್ನಿಸುತ್ತಿದ್ದ ಆಲೋಚನೆಗಳನ್ನು ಅವಲೋಕಿಸಲು ಸೂರ್ತಿಯಾಗಿ ಮುಂದುವರಿಯುತ್ತಿವೆ.

ಇಪ್ಪತ್ತನೆಯ ಶತಮಾನದ ಮಧ್ಯದಲ್ಲಿ, ಕಂಪ್ಯೂಟರ್ ವಿಜ್ಞಾನಿಗಳು, ಆಲೋಚನೆ ಯಾಂತ್ರಿಕ ಎಂದು ರುಜುವಾತುಪಡಿಸುವ ನಿಟ್ಟಿನಲ್ಲಿ ಇದ್ದೇವೆಂದು ನಂಬಿದ್ದರು. ಮತ್ತೆ ಫ್ರೆಂಚ್ ವಿಜ್ಞಾನಿ ಲಾ ಮೆಟ್ರೀಸ್ ಅವರ ಹದಿನೆಂಟನೇ ಶತಮಾನದ ‘ಮನುಷ್ಯ ಒಂದು ಯಂತ್ರ’ ಎನ್ನುವುದೊಂದು ಕನಸಿನ ಆಲೋಚನೆಯನ್ನು ನನಸು ಮಾಡುವೆವು ಎಂದುಕೊಂಡಿದ್ದರು. ಆದರೆ, ಈಚಿನ ವರ್ಷಗಳಲ್ಲಿ, ಕಂಪ್ಯೂಟರ್‌ಗಳು ಹೆಚ್ಚು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದರೂ, ಮಾನವ ಬುದ್ಧಿಶಕ್ತಿಗಳನ್ನು ಅನುಕರಿಸುವ ಕನಸು ಕರಗಿಹೋಗುತ್ತ ಭವಿಷ್ಯಕ್ಕೆ ತೇಲಿ ತೇಲಿ ಹೋಗುತ್ತಿದೆ.

೧೯೫೩ರಲ್ಲಿ ವಾಟ್ಸನ್ ಮತ್ತು ಕ್ರಿಕ್ ಅವರು ಕಂಡುಹಿಡಿದ ‘ಡಿಎನ್‌ಎ-ಆವರ್ತ ಸುರುಳಿ’ (DNA-Spiral Helix) ಫಲವಾಗಿ, ಜೀವನದ ಅಂತಿಮ ರಹಸ್ಯವನ್ನು ಬಹಿರಂಗಗೊಳಿಸಿದಂತಾಯಿತು ಎಂದು ಅನೇಕ ವಿಜ್ಞಾನಿಗಳು ಆಲೋಚಿಸಿದರು. ಅಲ್ಲಿಂದೀಚೆಗೆ, ಪರಮಾಣು ಜೀವವಿಜ್ಞಾನಿಗಳು, ಜೀವ ಕಣಗಳ ಜೀವ ವ್ಯಾಪಾರಗಳ ಬಗ್ಗೆ ಬೆಳಕು ಬೀರುವುದರಲ್ಲಿ ಅಪಾರ ಯಶಸ್ಸು ಸಾಸಿದ್ದಾರೆ. ಆದರೆ, ಪರಮಾಣು ಜೀವಶಾಸ್ತ್ರ ಇಂಥ ಅತಿ ಕರಾರುವಾಕ್ಕು ಕಾರ್ಯಕುಶಲಗಳ ಆಶ್ಚರ್ಯಕರ ಜಟಿಲತೆಗಳನ್ನು ಅನಾವರಣಗೊಳಿಸಿದರೂ ಜೀವದ ಮೂಲವನ್ನು ವಿವರಿಸುವ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.

ಯಂತ್ರಲಕ್ಷಣ ಅತಿವಾದ ಎನ್ನುವುದು ಅಂತಿಮ ಮಿತಿಗಳನ್ನು ತಲಪುತ್ತಿದೆ ಎನ್ನುವುದರ ಬಗ್ಗೆ  ಇವು ಬರೀ ಕೆಲವು ಉದಾಹರಣೆಗಳು ಮಾತ್ರ. ಪ್ರಾಯಃ ಇಂಥ ಬೆಳವಣಿಗೆಗಳ ಫಲವಾಗಿ, ಅನೇಕ ವೃತ್ತಿಪರ ವಿಜ್ಞಾನಿಗಳು ಸಾಂಪ್ರದಾಯಿಕವಾಗಿ ನಿಷೇಸಲ್ಪಟ್ಟಿದ್ದ ಸಂಶೋಧನಾತ್ಮಕ ಅಂಗಗಳನ್ನು ಪರಿಶೀಲಿಸಲು ಒಪ್ಪುತ್ತಿದ್ದಾರೆ.

ಉದಾಹರಣೆಗೆ, ಭೌತ ವಿಜ್ಞಾನ ಮತ್ತು ಅತೀಂದ್ರಿಯ ತಾಣಗಳ ನಡುವಿನ ಅತಿಶಯಗಳನ್ನು ಮುಕ್ತವಾಗಿ ಅಧ್ಯಯನ ಮಾಡಲು ವೃತ್ತಿಪರ ವಿಜ್ಞಾನಿಗಳು ಮತ್ತು ಸಂಸ್ಥೆಗಳು ಮುಂದೆ ಬರುತ್ತಿದ್ದಾರೆ. ‘ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ನ್ಯೂ ಸೈನ್ಸ್’ (IANS), ‘ದಿ ಸೊಸೈಟಿ ಫಾರ್ ಸೈಂಟಿಫಿಕ್ ಎಕ್ಸ್‌ಪ್ಲೊರೇಷನ್ (SSE), ‘ದಿ ಇನ್ಸ್‌ಟಿಟ್ಯೂಟ್ ಆಫ್ ನಾವೊಟಿಕ್ ಸೈನ್ಸ್‌ಸ್’ (IONS), ಮತ್ತು ‘ದಿ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಸಟಲ್ ಎನರ್ಜೀಸ್ ಅಂಡ್ ಎನರ್ಜಿ ಮೆಡಿಸನ್ಸ್’ (ISSSEEM). ಈ ಸಂಸ್ಥೆಗಳು ನಿರಂತರವಾಗಿ ವೈಜ್ಞಾನಿಕ ಸಮ್ಮೇಳನಗಳನ್ನು ಪ್ರಾಯೋಜಿಸುತ್ತವೆ.

ಈ ಸಂಸ್ಥೆಗಳು ಅಧ್ಯಯನ ಮಾಡುವ ಕೆಲವು ಅಂಶಗಳು – ಹಿಂದಿನ ಧಾರ್ಮಿಕ ಸಾಹಿತ್ಯಗಳಲ್ಲಿ ಮತ್ತು ಈಚಿನ ಧಾರ್ಮಿಕ ಅನುಭವಗಳ ಹಿನ್ನೆಲೆಯಲ್ಲಿ ಆಗಾಗ ಹೇಳಲಾಗಿರುವ “ಪೌರಾಣಿಕ ಕಾಲ್ಪನಿಕ” ವಿಷಯಗಳು. ಧಾರ್ಮಿಕ ವಿದ್ವಾಂಸರು ಮತ್ತು ಈ ಆಧುನಿಕ ವೈಜ್ಞಾನಿಕ ಸಂಸ್ಥೆಗಳ ನಡುವಿನ ಒಂದು ಪರಸ್ಪರ ಕ್ರಿಯೆಯು ಸಂಶೋಧಕರ ಗುಂಪುಗಳಿಗೆ ಉಪಯುಕ್ತ ಆಕರವೆನಿಸಿ, ಹೊಸ ಒಳನೋಟವಾಗಬಹುದು.

ವೈಷ್ಣವ ಉಪದೇಶಗಳ ನೇರ ನಿರೂಪಣೆ

ಈಗಾಗಲೇ ನಾವು ಹೇಗೆ ಭಕ್ತಿವಿನೋದ ಠಾಕುರ ಅವರು, ಬ್ರಿಟಿಷ್ ಆಡಳಿತ ಕಾಲದಲ್ಲಿ ಯುವ ಬಂಗಾಲಿ ಬುದ್ಧಿಜೀವಿಗಳಿಗೆ ಪುನರ್ ರಚಿತ ಆವೃತ್ತಿಯಾದ ವೈಷ್ಣವ ಉಪದೇಶಗಳನ್ನು ಸಮರ್ಪಿಸುವ ಅನಿವಾರ್ಯ ಎದುರಾಯಿತು ಎನ್ನುವುದನ್ನು ಕಂಡಿದ್ದೇವೆ. ಆದರೆ, ಅಂತಿಮವಾಗಿ ಬ್ರಿಟಿಷ್ ಆಡಳಿತದ ಸೂರ್ಯ ಮುಳುಗತೊಡಗಿದಾಗ, ಅವರ ಸುಪುತ್ರ ಮತ್ತು ಉತ್ತರಾಕಾರಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಅವರು, ಇಡೀ ಭಾರತದಲ್ಲಿ ವೈಷ್ಣವ ಸಿದ್ಧಾಂತವನ್ನು ನೇರವಾಗಿ ಹರಡಿಸಲು ಶಕ್ತಿಯುತ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಇದೇ ಕಾರ್ಯಕ್ರಮವನ್ನು ವಿದೇಶಗಳಿಗೆ ಕೊಂಡೊಯ್ದವರು, ಅವರ ಶಿಷ್ಯರಾದ ಶ್ರೀಲ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದ ಅವರು. ಅತಿ ಧೈರ್ಯದಿಂದ ಅವರು ಲಂಡನ್‌ನ  ಟ್ರಫಾಲ್ಗರ್ ಚೌಕಿಯಲ್ಲಿ  ಪ್ರಾಚೀನ ಜಗನ್ನಾಥಪುರಿ ರಥಯಾತ್ರೆ ಉತ್ಸವವನ್ನು ಆಚರಿಸಿದರು.

ಇಪ್ಪತ್ತೊಂದನೆಯ ಶತಮಾನದ ಬದಲಾಗುತ್ತಿರುವ ವೈeನಿಕ ಅಭಿಪ್ರಾಯಗಳ ಪರಿಸರದಲ್ಲಿ, ವಿಶ್ವದ ಬುದ್ಧಿಜೀವಿ ಸಮುದಾಯಗಳಿಗೆ ಮುಕ್ತವಾಗಿ ಭಕ್ತಿಯ ಸಾಂಪ್ರದಾಯಿಕ ಉಪದೇಶಗಳನ್ನು ಪರಿಚಯಿಸುವ ಕಾಲ ಬಂದಿದ್ದಿರಬಹುದು. ವಿeನವೆನ್ನುವುದು ಪಕ್ವಗೊಂಡು ಅತೀಂದ್ರಿಯ ಅತಿಶಯ ಅಧ್ಯಯನಕ್ಕೆ ತೆರೆದ ಮನಸ್ಸು ತೋರಿದಾಗ, ವಿಚಾರವಾದ ಮತ್ತು ಸಾಂಪ್ರದಾಯಿಕ ಧರ್ಮಗಳ ನಡುವಿನ ಸಂಘರ್ಷ ಹಂತಹಂತವಾಗಿ ಕರಗಿ ಹೋಗಬಹುದು. ಬೌದ್ಧಿಕವಾಗಿ ಸ್ವೀಕಾರಾರ್ಹವಾಗುವಂಥ ಮತ್ತು ಅದೇ ಸಮಯದಲ್ಲಿ ದಿವ್ಯಸಂಬಂಧಗಳಲ್ಲಿ ಆತ್ಮದ ಆಂತರಿಕ ಅಭಿಲಾಷೆಗಳನ್ನು ಪೂರೈಸುವ ಒಂದು ಧಾರ್ಮಿಕ ತೋಡುದಾರಿಯ ಸಾಧ್ಯತೆ ಇದರಿಂದ ತೆರೆದುಕೊಳ್ಳಬಹುದು.
Leave a Reply

Your email address will not be published. Required fields are marked *