Search
Wednesday 22 January 2020
  • :
  • :

ಸುವರ್ಣಾವತಾರ ಭಾಗ – 3

ಸೂರ್ಯ ಮತ್ತು ಚಂದ್ರನಂತಿರುವ ಶ್ರೀಕೃಷ್ಣ ಚೈತನ್ಯ ಮತ್ತು ಪ್ರಭು ನಿತ್ಯಾನಂದರಿಗೆ ನಾನು ಭಕ್ತಿಪೂರ್ವ ಪ್ರಣಾಮ ಸಲ್ಲಿಸುತ್ತೇನೆ. ಅಜ್ಞಾನದ ಕತ್ತಲನ್ನು ಚದುರಿಸಿ ಎಲ್ಲರಿಗೂ ಅದ್ಭುತವಾದ ದೈವಾನುಗ್ರಹ ದಯಪಾಲಿಸಲು ಈ ಕ್ಷಿತಿಜದ ಮೇಲೆ ಅವರಿಬ್ಬರೂ ಅವತರಿಸಿದರು.

ಉಪನಿಷತ್‌ಗಳು ನಿರಾಕಾರ ಬ್ರಹ್ಮನ್ ಎಂದು ವರ್ಣಿಸಿರುವುದು ಅವರಿಂದ ಹೊರಸೂಸುವ ಬೆಳಕೇ ಆಗಿದೆ. ಮತ್ತು ಪರಮಾತ್ಮನಾದ ಭಗವಂತನು ಅವನ ಶುದ್ಧಾಂಗದ ವಿಸ್ತರಣೆಯೇ ಆಗಿದ್ದಾನೆ. ಭಗವಾನ್ ಚೈತನ್ಯರು ಸಂಪೂರ್ಣ ಆರು ವೈಭವಗಳೊಂದಿಗೆ ದೇವೋತ್ತಮ ಪರಮ ಪುರುಷ ಕೃಷ್ಣನೇ ಆಗಿದ್ದಾರೆ. ಅವರೇ ಪರಮ ಸತ್ಯ, ಬೇರಾವುದೇ ಸತ್ಯವು ಅದಕ್ಕಿಂತ ಶ್ರೇಷ್ಠವಲ್ಲ ಅಥವಾ ಸಮನಾದುದೂ ಅಲ್ಲ. ಶ್ರೀಮತಿ ಶಚೀದೇವಿಯ ಪುತ್ರನಾದ ಭಗವಂತನು ಕರಗಿಸಿದ ಚಿನ್ನದ ತೇಜಸ್ಸಿನ ಉಜ್ಜ್ವಲತೆಯೊಂದಿಗೆ ಕಲಿಯುಗದಲ್ಲಿ ತಮ್ಮ ದಯಾಪರತೆಯೊಂದಿಗೆ ಅವತರಿಸಿದರು. ಹಿಂದಿನ ಯಾವ ಅವತಾರದಲ್ಲಿಯೂ ದಯಪಾಲಿಸದ್ದನ್ನು ಅನುಗ್ರಹಿಸಲು ಈ ಅವತಾರ – ಅತ್ಯಂತ ಉನ್ನತವಾದ ಸ್ನಿಗ್ಧ, ಭಕ್ತಿಪೂರ್ವ ಸೇವೆ, ದಾಂಪತ್ಯ ಪ್ರೀತಿಯ ಮಾಧುರ್ಯ.

ಶ್ರೀರಾಧಾಕೃಷ್ಣರ ಅಪರಿಮಿತ, ಅಮರ ಪ್ರೇಮವು ಭಗವಂತನ ಆಂತರ್ಯದ ಆನಂದ ನೀಡುವ ಶಕ್ತಿಯ ಅಲೌಕಿಕ ಅಭಿವ್ಯಕ್ತಿಯೇ ಆಗಿದೆ. ರಾಧಾ ಮತ್ತು ಕೃಷ್ಣ ಒಂದೇ ವ್ಯಕ್ತಿತ್ವ ಎನ್ನಿಸಿಕೊಂಡರೂ ಅವರು ಚಿರಂತನ, ಶಾಶ್ವತವಾಗಿ ಪ್ರತ್ಯೇಕಗೊಂಡರು. ಈಗ ಈ ಎರಡು ಅಲೌಕಿಕ ಆತ್ಮಗಳು ಮತ್ತೊಮ್ಮೆ ಒಂದಾಗಿವೆ, ಶ್ರೀಕೃಷ್ಣ ಚೈತನ್ಯರ ರೂಪದಲ್ಲಿ. ಅವರು ಕೃಷ್ಣನೇ ಆದರೂ ಶ್ರೀಮತಿ ರಾಧಾರಾಣಿಯ ಭಾವ ಮತ್ತು ಮೈಬಣ್ಣವನ್ನು ಆವಿರ್ಭವಿಸಿಕೊಂಡ ಆ ಭಗವಂತನಿಗೆ ಶರಣು.

ರಾಧಾರಾಣಿಯ ಪ್ರೇಮಾತಿಶಯವನ್ನು – ಆಕೆಯು ಮಾತ್ರವೇ ತನ್ನ ಪ್ರೀತಿಯಿಂದ ಸವಿಯುವ ಆ ಭಗವಂತನ ಗುಣಗಳು, ಆ ಭಗವತ್ಪ್ರೇಮದ ಸವಿಯನ್ನು ಅರಿತಾಗ ಆಕೆಗೆ ಆಗುವ ಸಂತಸ, ಇವುಗಳನ್ನು ತಿಳಿದುಕೊಳ್ಳುವ ಅಪೇಕ್ಷೆಯಿಂದ, ಪರಮ ಪ್ರಭುವಾದ ಹರಿಯು, ಆಕೆಯ ಭಾವ ಶ್ರೀಮಂತಿಕೆಯಿಂದ ತುಂಬಿ, ಚಂದ್ರನು ಸಮುದ್ರದಿಂದ ಹುಟ್ಟುವಂತೆ, ಶ್ರೀಮತಿ ಶಚೀದೇವಿಯ ಗರ್ಭದಲ್ಲಿ ಹುಟ್ಟಿದನು.

ಭಗವಾನ್ ಚೈತನ್ಯರ ಮಾತಾ, ಪಿತರು

ಶ್ರೇಷ್ಠ ಅಲೌಕಿಕ ವ್ಯಕ್ತಿ ಶ್ರೀ ಜಗನ್ನಾಥ ಮಿಶ್ರ ನವದ್ವೀಪದಲ್ಲಿ ವಾಸಿಸುತ್ತಿದ್ದರು. ಭಗವಾನ್ ಕೃಷ್ಣನ ಪಿತ ವಸುದೇವನಂತೆ ಮಿಶ್ರ ಅವರೂ ಸದಾ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು. ಅವರು ಉದಾತ್ತ ಹಾಗೂ ಎಲ್ಲ ಅತ್ಯುತ್ತಮ ಬ್ರಾಹ್ಮಣ್ಯಗುಣಗಳನ್ನು ಹೊಂದಿದ್ದರು. ಈ ಜಗತ್ತಿನಲ್ಲಂತೂ ಅವರ ಗುಣಗಳ ಹೋಲಿಕೆ ಸಾಧ್ಯವೇ ಇಲ್ಲ. ಕಶ್ಯಪ, ದಶರಥ, ವಸುದೇವ ಅಥವಾ ನಂದ ಅವರ ಆಧ್ಯಾತ್ಮಿಕ ವರ್ಗಕ್ಕೆ ಜಗನ್ನಾಥ ಮಿಶ್ರ ಅವರೂ ಸೇರುತ್ತಾರೆ. ಅವರ ಅರ್ಪಣಾ ಭಾವದ ಪತ್ನಿ ಶಚೀದೇವಿಯು ಪರಮಾತ್ಮನ ಭಕ್ತಿಯ ಸಾಕಾರ ರೂಪವಾಗಿದ್ದರು. ಅವರು ಜಗನ್ಮಾತೆ.

ಭಗವಾನ್ ಚೈತನ್ಯ ಮಹಾಪ್ರಭುಗಳ  ಅವತಾರಕ್ಕೆ ಮುನ್ನ, ಶ್ರೀ ಜಗನ್ನಾಥ ಮಿಶ್ರ ಅವರ ಪತ್ನಿ ಶ್ರೀಮತಿ ಶಚೀದೇವಿ ಗರ್ಭದಿಂದ ಒಂದಾದರೊಂದಂತೆ ಎಂಟು ಮಕ್ಕಳು ಜನಿಸಿದವು. ಹುಟ್ಟಿದ ತತ್‌ಕ್ಷಣ ಆ ಮಕ್ಕಳು ಸಾವನ್ನಪ್ಪಿದ್ದವು. ಒಂದಾದರೊಂದಂತೆ ಹೀಗೆ ಮಕ್ಕಳು ಸಾಯುವುದನ್ನು ಕಂಡು ಜಗನ್ನಾಥ ಮಿಶ್ರರು ಅತ್ಯಂತ ದುಃಖಿತರಾದರು. ಆದುದರಿಂದ,  ಅವರು ಗಂಡು ಮಗುವಿನ ಆಕಾಂಕ್ಷೆಯಿಂದ, ಭಗವಾನ್ ವಿಷ್ಣುವಿನ ಪಾದಕಮಲದಲ್ಲಿ ಪ್ರಾರ್ಥಿಸತೊಡಗಿದರು. ಅನಂತರ, ಜಗನ್ನಾಥ ಮಿಶ್ರರವರಿಗೆ ವಿಶ್ವರೂಪ ಹೆಸರಿನ ಪುತ್ರೋತ್ಸವವಾಯಿತು. ಅವನು ಬಲದೇವನ ಅವತಾರವೇ ಆಗಿದ್ದರಿಂದ ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯುನ್ನತ ಅರ್ಹತೆ ಹೊಂದಿದವನಾದನು.

ವಿಶ್ವರೂಪನನ್ನು ಮಗನಾಗಿ ಪಡೆದ ಜಗನ್ನಾಥ ಮಿಶ್ರ ಹಾಗೂ ಶಚೀದೇವಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಆನಂದಮಯವಾಗಿದ್ದ ಮನದಿಂದ ಅವರು ವಿಶೇಷವಾಗಿ ಗೋವಿಂದನ ಪಾದಕಮಲದಲ್ಲಿ ಸೇವೆ ಸಲ್ಲಿಸಿದರು. ಶ್ರೀ ವಿಶ್ವರೂಪ ಅತ್ಯಂತ ಸುಂದರ ಹಾಗೂ ಮನ್ಮಥನಂತೆ ಮೋಹನಾಂಗನಾಗಿದ್ದನು. ತನ್ನ ತಂದೆ ತಾಯಿಯರ ಅಪರಿಮಿತ ಸಂತೋಷಕ್ಕೆ ಮೂಲಪುರುಷನಾದನು.

ಆದರೆ ನವದ್ವೀಪದಲ್ಲಿ  ಸಮಾಜವು ಭಕ್ತಿಪೂರ್ವ ಸೇವೆಯಿಂದ ವಂಚಿತವಾಗಿತ್ತು. ಭವಿಷ್ಯದ ಬಗೆಗೆ ಭಯ ಮೂಡುವಂತಹ ವಾತಾವರಣ. ಆದರೂ ಧಾರ್ಮಿಕ ತತ್ತ್ವಗಳು ಕುಸಿದಾಗ ಹಾಗೂ ತನ್ನ ಭಕ್ತರು ಸಂಕಷ್ಟದಲ್ಲಿದ್ದಾರೆಂಬ ಅರಿವು ಮೂಡಿದಾಗ ದೇವೋತ್ತಮನು ಅವತರಿಸುತ್ತಾನೆ. ಈ ರೀತಿ ದೇವೋತ್ತಮ ಪರಮಪುರುಷ ಶ್ರೀ ಚೈತನ್ಯ ಮಹಾಪ್ರಭು ಶ್ರೀಮತಿ ಶಚೀದೇವಿ ಮತ್ತು ಶ್ರೀ ಜಗನ್ನಾಥ ಮಿಶ್ರರ ದೇಹದೊಳಗೆ ಪ್ರವೇಶಿಸಿದನು. ಅದು ಶಕಕಾಲದ ೧೪೦೬ (ಕ್ರಿ.ಶ.೧೪೮೫)

ದೇವತೆಗಳ ಪ್ರಾರ್ಥನೆ

ಜಗನ್ನಾಥ ಮಿಶ್ರ ಶಚೀದೇವಿಗೆ ಹೇಳುತ್ತಾರೆ – ‘ನಾನು ಅದ್ಭುತಗಳನ್ನು ಕಾಣುತ್ತಿದ್ದೇನೆ. ನಿನ್ನ ದೇಹ ಉಜ್ಜ್ವಲವಾಗಿದೆ. ಅದೃಷ್ಟ ದೇವತೆ ನಮ್ಮ  ಮನೆಯಲ್ಲೇ ವಾಸಿಸುತ್ತಿರುವಂತೆ ಭಾಸವಾಗುತ್ತದೆ. ‘ನಾನೆಲ್ಲಿಗೆ ಹೋದರು ಜನ ಹೆಚ್ಚಿನ ಗೌರವ ನೀಡುತ್ತಿದ್ದಾರೆ. ನಾನು ಕೇಳದಿದ್ದರೂ ಅವರು ಸ್ವಯಂಪ್ರೇರಿತರಾಗಿ ಐಶ್ವರ್ಯ, ಉಡುಪು, ಧಾನ್ಯ ನೀಡುತ್ತಿದ್ದಾರೆ.’ ಶಚೀದೇವಿ ತನ್ನ ಪತಿಗೆ ‘ಅದ್ಭುತವಾದ, ಅಸಾಧಾರಣ ಬುದ್ಧಿಯ ಮಾನವರು  ಜಗತ್ತಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಂತೆ ಕಾಣುತ್ತದೆ’ ಎಂದು ಹೇಳಿದರು. ‘ಭಗವಂತನ ಉಜ್ಜ್ವಲ ವಾಸಸ್ಥಾನವು ನನ್ನ ಹೃದಯ ಪ್ರವೇಶಿಸಿದಂತೆ ಕನಸುಕಂಡೆ. ನನ್ನ ಹೃದಯದಿಂದ ಅದು ನಿನ್ನ ಹೃದಯ ಪ್ರವೇಶಿಸಿತು. ಅತ್ಯಂತ ಶ್ರೇಷ್ಠ ವ್ಯಕ್ತಿಯೊಂದರ ಉದಯ/ಅವತಾರವಾಗಲಿದೆ ಎಂದು ನಾನು ಗ್ರಹಿಸಿದೆ’ ಎಂದು ಜಗನ್ನಾಥ ಮಿಶ್ರರು ಪತ್ನಿ ಶಚಿ ಬಳಿ ಅನುಭವ ಹಂಚಿಕೊಂಡರು. ಇದರ ಅನಂತರ ಆನಂದಭರಿತರಾದ ದಂಪತಿ ಮನೆಯ ಸಾಲಿಗ್ರಾಮ ಶಿಲೆಗೆ ಸೇವೆ ಸಲ್ಲಿಸಿದರು. ಭಗವಾನ್ ಅನಂತನು ಪ್ರಭುವಿನಸ್ತುತಿ ಮಾಡಿದನು. ಕನಸೋ ಎಂಬಂತೆ ಜಗನ್ನಾಥ ಮಿಶ್ರ ಹಾಗೂ ಶಚೀದೇವಿ ಈ ವೈಭವವನ್ನು ಕೇಳಿದರು. ಸಾಮಾನ್ಯ ದೃಷ್ಟಿಗೆ ಗೋಚರವಾಗದಂತಹ ಆಧ್ಯಾತ್ಮಿಕ ಪ್ರಭೆಯಲ್ಲಿ ಈ ದಂಪತಿ ಕಂಗೊಳಿಸಿದರು. ಭೂಮಿಯ ಮೇಲೆ ದೇವೋತ್ತಮನ ಅವತಾರವಾಗುತ್ತದೆ ಎಂದು ಅರ್ಥಮಾಡಿಕೊಂಡ ಬ್ರಹ್ಮ , ಶಿವ ಮತ್ತು ಇತರ ದೇವತೆಗಳು ಬಂದು ಪ್ರಾರ್ಥನೆ ಸಲ್ಲಿಸಿದರು.

ಈ ರೀತಿ ಗರ್ಭವು ೧೩ನೇ ತಿಂಗಳನ್ನು ಪ್ರವೇಶಿಸಿತು. ಆದರೂ ಮಗುವಿನ ಜನನದ ಸೂಚನೆಯೇ ಇಲ್ಲ. ಜಗನ್ನಾಥ ಮಿಶ್ರ ಆತಂಕಗೊಂಡರು. ಆಗ ನೀಲಾಂಬರ ಚಕ್ರವರ್ತಿ (ಶ್ರೀ ಚೈತನ್ಯ ಮಹಾಪ್ರಭುಗಳ ತಾತ)ಜ್ಯೋತಿಶಾಸ್ತ್ರ ಲೆಕ್ಕಚಾರ ಮಾಡಿ ಇದೇ ತಿಂಗಳು ಪವಿತ್ರವಾದ ಕ್ಷಣದಲ್ಲಿ ಮಗುವಿನ ಜನನವಾಗುತ್ತದೆ ಎಂದರು. ಹಾಗೆ, ಶಕಕಾಲದ ೧೪೦೭ (ಕ್ರಿ.ಶ. ೧೪೮೬)ರಲ್ಲಿ, ಫಾಲ್ಗುಣ ಮಾಸದಲ್ಲಿ  ಹುಣ್ಣಿಮೆಯ ಸಂಜೆ, ಅಪೇಕ್ಷಿತ ಪುಣ್ಯಕ್ಷಣ ಬಂದಿತು.

ಶ್ರೀ ಚೈತನ್ಯರ ಜನನ

ಇಡೀ ಸೃಷ್ಟಿಯ ಪರಮೋಚ್ಚ ಮಾಲೀಕನು ಶ್ರೀಮತಿ ಶಚೀದೇವಿಯ ಗರ್ಭದಲ್ಲಿ ಇದ್ದುಕೊಂಡು ಫಾಲ್ಗುಣ ತಿಂಗಳಿನಲ್ಲಿ ಹುಣ್ಣಿಮೆಯಂದು ಅವತರಿಸಿದರು. ಆ ಹುಣ್ಣಿಮೆಯ ರಾತ್ರಿಯು ಎಲ್ಲ ಪವಿತ್ರ ಸಂದರ್ಭಗಳ ಪರಮಾರ್ಥದಂತಿತ್ತು. ಚೈತನ್ಯ ಮಹಾಪ್ರಭುಗಳ ನಿಷ್ಕಳಂಕ ಚಂದ್ರ ಉದಯಿಸಿದಾಗ, ಕಪ್ಪು ಕಲೆ ಆವೃತವಾಗಿರುವ ಚಂದ್ರನ ಅಗತ್ಯವಾದರೂ ಏನು? ಇದನ್ನರಿತು, ಕಪ್ಪು ಗ್ರಹ ರಾಹುವು ಪೂರ್ಣಚಂದ್ರನನ್ನು  ಆವರಿಸಿತು. ತತ್‌ಕ್ಷಣವೇ ತ್ರಿಲೋಕದಲ್ಲಿ ‘ಕೃಷ್ಣ ! ಕೃಷ್ಣ ! ಹರಿ!’ ಪ್ರತಿಧ್ವನಿಸಿತು. ಆ ರೀತಿ ಎಲ್ಲರೂ ಚಂದ್ರಗ್ರಹಣ ಸಂದರ್ಭದಲ್ಲಿ ಹರೇಕೃಷ್ಣ ಮಹಾಮಂತ್ರ ಜಪಿಸಿದರು ಹಾಗೂ ಅವರ ಮನದಲ್ಲಿ  ಅದ್ಭುತವೇ ಆಗಿ ಹೋಯಿತು. ಲಕ್ಷಾಂತರ ಜನ ಪುಣ್ಯಸ್ನಾನಕ್ಕಾಗಿ ಗಂಗೆ ತಟದಲ್ಲಿ ಸಾಲುಗಟ್ಟಿ ನಿಂತು ಭಗವಂತನ ನಾಮಸ್ಮರಣೆ ಮಾಡಿದರು. ಅವರ ಈ ಉದ್ರೇಕದ ನಾಮಪಠನೆ ದನಿಯು ಲೌಕಿಕ ಜಗತ್ತನ್ನು ಆವರಿಸಿ ಬ್ರಹ್ಮಲೋಕದ ಆಚೆಗೂ ಸಾಗಿತ್ತು. ಎಲ್ಲ ಸಾಧುಸಂತರು  ಈ ಅದ್ಭುತ ನಾಮಸ್ಮರಣೆಯಿಂದ ಚಕಿತಗೊಂಡು ಶಾಶ್ವತ ಗ್ರಹಣಕ್ಕಾಗಿ ಪ್ರಾರ್ಥಿಸಿದರು. ಹಾಗೆ, ಇಡೀ ಜಗತ್ತು ದೇವೋತ್ತಮ ಪರಮ ಪುರುಷನ ನಾಮ  ಪಠಿಸುತ್ತಿದ್ದಾಗ, ಗೌರಹರಿಯ ರೂಪದಲ್ಲಿ ಕೃಷ್ಣನು ಈ ಭೂಮಿ ಮೇಲೆ ಅವತರಿಸಿದನು. ಜಗತ್ತೇ ಆನಂದಮಯ- ಗೊಂಡಿತು. ಹಿಂದೂಗಳು ಭಗವಂತನ ಪವಿತ್ರ ನಾಮಪಠನೆ ಮಾಡಿದರೆ, ಮುಸ್ಲಿಮರು ತಮಾಷೆಯಾಗಿ ಅದನ್ನೇ ಪುನರುಕ್ತಿ ಮಾಡಿದರು. ಸ್ತ್ರೀಯರು ಭೂಮಿಯ ಮೇಲೆ ಹರಿಯ ನಾಮವನ್ನು ಪ್ರತಿಧ್ವನಿಸುತ್ತಿದ್ದರೆ ಸ್ವರ್ಗಲೋಕದಲ್ಲಿ ಸಂಗೀತ ನೃತ್ಯ ನಿರಂತರ ನಡೆದಿತ್ತು. ದೇವತೆಗಳಿಗೆ  ವಿಸ್ಮಯ, ಕುತೂಹಲ. ಇಂತಹ ವಾತಾವರಣದಲ್ಲಿ, ಎಲ್ಲ ದಶದಿಕ್ಕುಗಳಲ್ಲಿಯೂ ಹರ್ಷಾತಿರೇಕವಿದ್ದರೆ, ನದಿಗಳ ಅಲೆಗಳೂ ಸಂಭ್ರಮಿಸಿದವು. ಹೆಚ್ಚಾಗಿ, ಎಲ್ಲ ಜೀವಿಗಳೂ ಅಲೌಕಿಕ ಪರಮಾನಂದದಿಂದ ಸಂತೋಷಭರಿತರಾದರು.

ಈ ರೀತಿ ದಯಾಪರನಾದ ಗೌರಹರಿಯು ಉದಯಗಿರಿಗೆ ಹೋಲಿಸುವ ನದಿಯಾ ಜಿಲ್ಲೆಯಲ್ಲಿ ಉದಯಿಸಿದರು. ಇಲ್ಲಿ ಸೂರ್ಯ ಮೊದಲು ಕಾಣಿಸಿಕೊಳ್ಳುವುದು. ಭಗವಂತನ ಉದಯದೊಂದಿಗೆ ಪಾಪದ ಕತ್ತಲು ಚದುರಿತು. ತ್ರಿಲೋಕದಲ್ಲಿ ಸಂಭ್ರಮ, ಸಂತೋಷ, ಎಲ್ಲೆಡೆ ಭಗವಂತನ ನಾಮಪಠಣ. ಚಂದ್ರನಂಥ ಭಗವಾನ್ ಚೈತನ್ಯ, ಗೌರಾಂಗ, ಅವತರಿಸಿದರು. ಪ್ರಭುವನ್ನು ನೋಡುವುದರಿಂದಲೇ ನದಿಯಾದ ಜನತೆ ಎಲ್ಲ ಶೋಕದಿಂದ ಮುಕ್ತರಾಗುತ್ತಿದ್ದರು ಅವರ ಸಂತೋಷ ಹಾಗೂ ಪ್ರಗತಿ ದಿನೇ ದಿನೇ ಇಮ್ಮಡಿಗೊಳ್ಳುತ್ತ ಹೋಗುತ್ತದೆ.

(ಮುಂದುವರಿಯುವುದು)
Leave a Reply

Your email address will not be published. Required fields are marked *