Search
Wednesday 15 July 2020
  • :
  • :

ಸುವರ್ಣಾವತಾರ ಭಾಗ – 1

ಸುಮಾರು ಐನೂರು ವರ್ಷಗಳ ಹಿಂದೆ ಭಾರತದಲ್ಲಿ ಪ್ರಾರಂಭವಾದ ಒಂದು ಮಹಾನ್ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನಕ್ಕೆ ಶ್ರೀ ಚೈತನ್ಯ ಮಹಾಪ್ರಭುಗಳು ನಾಂದಿ ಹಾಡಿದರು. ಅದು ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಮುಂದಿನ ಧಾರ್ಮಿಕ ಮತ್ತು ದಾರ್ಶನಿಕ ಚಿಂತನಾಕ್ರಮದ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರಿತು. ಶ್ರೀಕೃಷ್ಣ ಚೈತನ್ಯರ ಪ್ರಭಾವವು ದೂರದೂರಕ್ಕೆ ಪಸರಿಸಿದ್ದಕ್ಕೆ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಶ್ರಮ ಬಹುಪಾಲು ಕೊಡುಗೆಯನ್ನು ನೀಡಿದೆ.

ಪಶ್ಚಿಮದಲ್ಲಿ ಮಾನವನು ನವೀನ ಸಾಗರಗಳು ಮತ್ತು ಖಂಡಗಳನ್ನು ಅನ್ವೇಷಿಸಲು ಹಡಗಿನಲ್ಲಿ ಭೂಪ್ರದಕ್ಷಿಣೆ ಮಾಡುತ್ತಾ ಭೌತಿಕ ಜಗತ್ತಿನ ರಚನೆಯನ್ನು ಅಧ್ಯಯನ ಮಾಡಲು ತನ್ನ ಅನ್ವೇಷಣಾತ್ಮಕ ಚೇತನವನ್ನು ನಿರ್ದೇಶಿಸುತ್ತಿದ್ದ ಸಮಯದಲ್ಲಿ, ಇತ್ತ ಪೂರ್ವದಲ್ಲಿ ಶ್ರೀಕೃಷ್ಣ ಚೈತನ್ಯರು ಮನುಷ್ಯನ ಆಧ್ಯಾತ್ಮಿಕ ಪ್ರಕೃತಿಯ ಅತ್ಯುನ್ನತ ಜ್ಞಾನವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವತ್ತ ನಿರ್ದೇಶಿತವಾದ ಒಂದು ಕ್ರಾಂತಿಯನ್ನು ಉದ್ಘಾಟಿಸುತ್ತಿದ್ದರು ಮತ್ತು ಯೋಜಿಸಿ ನಿರ್ದೇಶಿಸುತ್ತಿದ್ದರು.

ಮುರಾರಿ ಗುಪ್ತ ಮತ್ತು ಸ್ವರೂಪ ದಾಮೋದರ ಗೋಸ್ವಾಮೀ ಅವರು ದಾಖಲೆ ಮಾಡಿದ ದಿನಚರಿಗಳೇ ಶ್ರೀ ಕೃಷ್ಣ ಚೈತನ್ಯರ ಜೀವನವನ್ನು ಕುರಿತ ಪ್ರಮುಖ ಐತಿಹಾಸಿಕ ಆಕರಗಳು. ವೈದ್ಯರಾಗಿದ್ದ ಮುರಾರಿಗುಪ್ತರು ಶ್ರೀ ಕೃಷ್ಣಚೈತನ್ಯರ ನಿಕಟ ಅನುಯಾಯಿಯಾಗಿದ್ದು ಅವರ ಜೀವನದ ಮೊದಲ ಇಪ್ಪತ್ತನಾಲ್ಕು ವರ್ಷಗಳನ್ನು ಕುರಿತು ವ್ಯಾಪಕವಾದ ಟಿಪ್ಪಣಿಗಳನ್ನು ದಾಖಲಿಸಿದ್ದಾರೆ. ಚೈತನ್ಯರು ಸಂನ್ಯಾಸ ದೀಕ್ಷೆ ತೆಗೆದುಕೊಳ್ಳುವುದರೊಡನೆ ಈ ಟಿಪ್ಪಣಿಗಳು ಮುಕ್ತಾಯವಾಗುತ್ತವೆ. ಚೈತನ್ಯ ಮಹಾಪ್ರಭುಗಳ ಜೀವನದ ನಲವತ್ತೆಂಟು ವರ್ಷಗಳಲ್ಲಿ ಉಳಿದ ಅವಯ ಘಟನೆಗಳನ್ನು ಅವರ ನಿಕಟ ಅನುಯಾಯಿಗಳಲ್ಲಿ ಇನ್ನೊಬ್ಬರಾದ ಸ್ವರೂಪ ದಾಮೋದರ ಗೋಸ್ವಾಮಿ ಅವರು ದಿನಚರಿಯಲ್ಲಿ ದಾಖಲಿಸಿದ್ದಾರೆ.

ಶ್ರೀ ಚೈತನ್ಯ ಮಹಾಪ್ರಭುಗಳ ಪ್ರಮುಖ ಜೀವನ ಚರಿತ್ರಕಾರರಲ್ಲಿ ಒಬ್ಬರಾದ ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮೀ ಅವರು ವೈದಿಕ ಧರ್ಮಗ್ರಂಥಗಳ ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸುವ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳು ಪ್ರಸ್ತುತ ಕಲಿಯುಗದಲ್ಲಿನ ದೇವರ ಅವತಾರ ಎಂದು ಸ್ಥಾಪಿಸುತ್ತಾರೆ. ಶ್ರೀ ಚೈತನ್ಯ ಮಹಾಪ್ರಭುಗಳು ಶ್ರೀಕೃಷ್ಣನಿಗೆ ಅನುರೂಪರಾಗಿದ್ದಾರೆ ಎಂದೂ ಈ ಲೇಖಕರು ಸಾಸಿ ತೋರಿಸುತ್ತಾರೆ ಮತ್ತು ಅಧಃಪತನಕ್ಕಿಳಿದ ಈ ಕಲಿಯುಗದ ಪತಿತಾತ್ಮರಿಗೆ ಹರೇ ಕೃಷ್ಣ, ಹರೇ ಕೃಷ್ಣ , ಕೃಷ್ಣ ಕೃಷ್ಣ , ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂಬ ಮಹಾಮಂತ್ರವನ್ನು ಸಾಮೂಹಿಕವಾಗಿ ಸಂಕೀರ್ತನೆ ಮಾಡುವ ಮೂಲಕ ದೇವರ ಪರಿಶುದ್ಧ ಪ್ರೇಮವನ್ನು ಉದಾರವಾಗಿ ಅನುಗ್ರಹಿಸಲು ಅವರು ಅವತರಿಸಿದ್ದಾರೆ ಎಂದು ವಿವರಿಸುತ್ತಾರೆ.

ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಬೋಸಿದ್ದಕ್ಕೂ ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳು ಶ್ರೀಕೃಷ್ಣನ ಬೋಧನೆಗಳ ಪ್ರಾಯೋಗಿಕ ನಿದರ್ಶನಗಳು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನೀಡಿದ ಅಂತಿಮ ಆದೇಶವೆಂದರೆ ಪ್ರತಿಯೊಬ್ಬನೂ ಅವನಿಗೆ ಶರಣಾಗತನಾಗಬೇಕು. ಅಂತಹ ಶರಣಾಗತಾತ್ಮನ ಜವಾಬ್ದಾರಿಯನ್ನು ತಾನು ಕೂಡಲೇ ತೆಗೆದುಕೊಳ್ಳುವುದಾಗಿ ಶ್ರೀಕೃಷ್ಣನು ಭರವಸೆ ನೀಡುತ್ತಾನೆ. ದೇವೋತ್ತಮ ಪರಮ ಪುರುಷನಾದ ಪ್ರಭುವು ಈ ಸೃಷ್ಟಿಯ ಪಾಲನೆಯ  ಹೊಣೆಯನ್ನು ಆಗಲೇ ಹೊತ್ತಿದ್ದಾನೆ. ಆದರೆ ಈ ಪಾಲನೆಯು ಪರೋಕ್ಷವಾಗಿದೆ. ಆದರೆ ಪ್ರಭುವು ತನ್ನ ಪರಿಶುದ್ಧ ಭಕ್ತರ ಹೊಣೆಯನ್ನು ತೆಗೆದುಕೊಳ್ಳುವುದಾಗಿ ಹೇಳಿದಾಗ, ಅವನು ವಾಸ್ತವವಾಗಿಯೇ ನೇರ ಹೊಣೆಯನ್ನು ತೆಗೆದುಕೊಳ್ಳುತ್ತಾನೆ.

ಆದ್ದರಿಂದ, ವ್ರಜದ ರಾಜನ ಸಾಕುಮಗನಾಗಿ ಅವತರಿಸಿದ ಶ್ರೀಕೃಷ್ಣನನ್ನು ನೇರವಾಗಿ ಆರಾಸಬೇಕು ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಬೋಸುತ್ತಾರೆ. ಅಲ್ಲದೆ ವೃಂದಾವನವೆಂದು ಹೆಸರಾದ ಪ್ರದೇಶವು ಪ್ರಭು ಶ್ರೀಕೃಷ್ಣನಿಗೆ ಸಮಾನವಾದದ್ದು ಎಂದೂ ಅವರು ಸೂಚಿಸುತ್ತಾರೆ. ಏಕೆಂದರೆ ಶ್ರೀಕೃಷ್ಣನ ನಾಮ,ಗುಣ, ರೂಪ, ಲೀಲೆಗಳು, ಪರಿವಾರ ಮತ್ತು ಪರಿಕರಗಳಿಗೂ ಮತ್ತು ಸ್ವತಃ ಶ್ರೀಕೃಷ್ಣನಿಗೂ ಯಾವುದೇ ವ್ಯತ್ಯಾಸವಿಲ್ಲ. ಅದೇ ಪರಮ ಸತ್ಯನ ಪರಮ ಸ್ವರೂಪ.

ಅತ್ಯುನ್ನತ ಪರಿಪೂರ್ಣ ಹಂತದಲ್ಲಿ ಅತ್ಯುನ್ನತ ಆರಾಧನಾ ವಿಧಾನವೆಂದರೆ ವ್ರಜದ ಗೋಪಿಯರು ಅನುಸರಿಸಿದ ವಿಧಾನ ಎಂದೂ ಶ್ರೀ ಚೈತನ್ಯ ಮಹಾಪ್ರಭುಗಳು ಸಲಹೆ ಮಾಡುತ್ತಾರೆ. ಈ ಗೋಪಿಯರು ಯಾವುದೇ ಐಹಿಕ ಅಥವಾ ಆಧ್ಯಾತ್ಮಿಕ ಲಾಭದ ಉದ್ದೇಶವಿಲ್ಲದೆ ಶ್ರೀಕೃಷ್ಣನನ್ನು ಸುಮ್ಮನೆ ಪ್ರೀತಿಸಿದರು. ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತೂ ಸಲಹೆ ಮಾಡುವುದೇನೆಂದರೆ ಶ್ರೀಮದ್ ಭಾಗವತವೇ ದಿವ್ಯಜ್ಞಾನದ ನಿಷ್ಕಳಂಕ ನಿರೂಪಣೆ. ದೇವೋತ್ತಮ ಪರಮಪುರುಷನಾದ ಶ್ರೀಕೃಷ್ಣನನ್ನು ಕುರಿತು ಪರಿಶುದ್ಧ ಪ್ರೇಮವನ್ನು ಬೆಳೆಸಿಕೊಳ್ಳುವುದೇ ಮಾನವ ಜೀವನದ ಅತ್ಯುನ್ನತ ಗುರಿ ಎಂದು ಅವರು ತೋರುತ್ತಾರೆ.

ಪ್ರಭುವಿನ ಪವಿತ್ರ ನಾಮವು ಪ್ರಭುವಿನ ಶಬ್ದಾವತಾರ ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಬೋಸಿದ್ದಾರೆ. ಪ್ರಭುವು ಪರಮ ಪೂರ್ಣನಾದುದರಿಂದ ಅವನ ದಿವ್ಯ ನಾಮಕ್ಕೂ ದಿವ್ಯ ರೂಪಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು  ಅವರು ಬೋಸಿದ್ದಾರೆ. ಹೀಗೆ ಪ್ರಭುವಿನ ಪವಿತ್ರ ನಾಮವನ್ನು ಜಪಿಸುವ ಮೂಲಕ ಒಬ್ಬ ವ್ಯಕ್ತಿಯು ಶಬ್ದ ಕಂಪನದ ಮೂಲಕ ಪರಮ ಪ್ರಭುವಿನೊಡನೆ ನೇರ ಸಂಪರ್ಕಕ್ಕೆ ಬರಬಹುದು. ಹೀಗೆ ಒಬ್ಬ ವ್ಯಕ್ತಿಯು ಶಬ್ದಕಂಪನವನ್ನು ಅಭ್ಯಾಸ ಮಾಡಿಕೊಳ್ಳುತ್ತಾ ದಿವ್ಯ ನೆಲೆಯಲ್ಲಿ ಸ್ಥಾಪಿತನಾಗಿ ಎಲ್ಲರೂ ಬಯಸುವಂತಹ ಸ್ಥಾನವಾದ ದೈವಪ್ರೇಮದ ಹಂತವನ್ನು ಐದುತ್ತಾನೆ. ಈ ಹಂತವೇ ಮಾನವ ಜೀವಿಗಳ ಪರಿಪೂರ್ಣತೆಯ ಅತ್ಯುನ್ನತ ಹಂತ ಎಂದು ಶ್ರೀ ಚೈತನ್ಯ ಮಹಾಪ್ರಭುಗಳು ಬೋಸಿದ್ದಾರೆ.

ಸಂನ್ಯಾಸವನ್ನು ಸ್ವೀಕರಿಸುವುದಕ್ಕೆ ಮುಂಚೆ ಶ್ರೀ ಚೈತನ್ಯ ಮಹಾಪ್ರಭುಗಳು ವಿಶ್ವಂಭರ ಎಂದು ಹೆಸರಾಗಿದ್ದರು. ಸಮಸ್ತ ವಿಶ್ವವನ್ನು ಪಾಲಿಸುವವನು ಮತ್ತು ಎಲ್ಲ ಜೀವಿಗಳಿಗೆ ಮಾರ್ಗದರ್ಶಕನಾದವನು ಎನ್ನುವುದು ವಿಶ್ವಂಭರ ಎನ್ನುವ ಶಬ್ದದ ಅರ್ಥ. ಈ ಪಾಲಕ ಮತ್ತು ನೇತಾರನು ಶ್ರೀಕೃಷ್ಣ ಚೈತನ್ಯ ಮಹಾಪ್ರಭುಗಳಾಗಿ ಮನುಕುಲಕ್ಕೆ ಸರ್ವೋನ್ನತವಾದ ಬೋಧನೆಗಳನ್ನು ನೀಡಲು ಅವತರಿಸಿದನು. ಶ್ರೀ ಚೈತನ್ಯ ಮಹಾಪ್ರಭುಗಳು ಜೀವನದ ಅತ್ಯಂತ ಮುಖ್ಯವಾದ ಅಗತ್ಯಗಳನ್ನು ಕುರಿತು ಬೋಸಿದ ಒಬ್ಬ ಆದರ್ಶ ಗುರುಗಳಾಗಿದ್ದರು. ಅವರು ಕೃಷ್ಣಪ್ರೇಮವನ್ನು ಅತ್ಯಂತ ಉದಾರವಾಗಿ ಅನುಗ್ರಹಿಸಿದವರು. ಅವರು ಎಲ್ಲ ಕರುಣೆ ಮತ್ತು ಸೌಭಾಗ್ಯಗಳ ಸಂಪೂರ್ಣ ಭಂಡಾರವೇ ಆಗಿದ್ದಾರೆ. ಶ್ರೀಮದ್ ಭಾಗವತ, ಭಗವದ್‌ಗೀತಾ, ಮಹಾಭಾರತ ಮತ್ತು ಉಪನಿಷತ್ತುಗಳಲ್ಲಿ ಖಚಿತಪಡಿಸಿದಂತೆ ಅವರು ಸ್ವತಃ ದೇವೋತ್ತಮ ಪರಮ ಪುರುಷನಾದ ಕೃಷ್ಣನೇ ಆಗಿದ್ದಾರೆ. ಈ ಕಲಹ ಯುಗದಲ್ಲಿ ಎಲ್ಲರೂ ಅವರನ್ನು ಆರಾಸಬಹುದಾಗಿದೆ. ಪ್ರತಿಯೊಬ್ಬರೂ ಅವರ ಸಂಕೀರ್ತನ ಆಂದೋಲನದಲ್ಲಿ ಸೇರಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಬಗೆಯ ಪೂರ್ವಾರ್ಹತೆಯ ಅಗತ್ಯವಿಲ್ಲ. ಕೇವಲ ಅವರ ಬೋಧನೆಗಳನ್ನು ಅನುಸರಿಸುವ ಮಾತ್ರದಿಂದಲೇ ಯಾರು ಬೇಕಾದರೂ ಒಬ್ಬ ಪರಿಪೂರ್ಣ ಮಾನವ ಜೀವಿಯಾಗಬಹುದು. ಅವರ ಗುಣಲಕ್ಷಣಗಳಿಂದ ಆಕರ್ಷಿತನಾಗುವ ಅದೃಷ್ಟ ಒಬ್ಬ ವ್ಯಕ್ತಿಗೆ ದೊರೆತರೆ ಅವನು ತನ್ನ ಜೀವನದ ಅಭಿಯಾನದಲ್ಲಿ ಯಶಸ್ವಿಯಾಗುತ್ತಾನೆ ಎನ್ನುವುದು ನಿಶ್ಚಿತ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆಧ್ಯಾತ್ಮಿಕ ಅಸ್ತಿತ್ವವನ್ನು ಗಳಿಸಬೇಕೆಂದು ಆಸಕ್ತರಾಗಿರುವವರು ಶ್ರೀಚೈತನ್ಯ ಮಹಾಪ್ರಭುಗಳ ಅನುಗ್ರಹದಿಂದ ಬಹಳ ಸುಲಭವಾಗಿ ಮಾಯೆಯ ಬಂಧನದಿಂದ ಪಾರಾಗಬಹುದು.

(ಮುಂದುವರಿಯುವುದು)
Leave a Reply

Your email address will not be published. Required fields are marked *