Search
Wednesday 22 January 2020
  • :
  • :

ಸುವರ್ಣಾವತಾರ ಭಾಗ – 2

ಚೈತನ್ಯ ಮಹಾಪ್ರಭು ಶ್ರೀ ರಾಧಾ ಮತ್ತು ಕೃಷ್ಣರ ಸಂಯೋಜಿತ ರೂಪವಲ್ಲದೇ ಬೇರೇನೂ ಅಲ್ಲ. ಅವರು ಶ್ರೀಲ ರೂಪ ಗೋಸ್ವಾಮಿಯವರ ಪಥವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಭಕ್ತರ ಬದುಕಾಗಿದ್ದಾರೆ. ಶ್ರೀಲ ರೂಪ ಗೋಸ್ವಾಮಿ ಮತ್ತು ಶ್ರೀಲ ಸನಾತನ ಗೋಸ್ವಾಮಿಯವರು ಶ್ರೀಲ ಸ್ವರೂಪ ದಾಮೋದರ ಗೋಸ್ವಾಮಿಯವರ ಇಬ್ಬರು ಪ್ರಮುಖ ಅನುಯಾಯಿಗಳಾಗಿದ್ದರು. ಸ್ವರೂಪ ದಾಮೋದರ ಗೋಸ್ವಾಮಿಯವರು ಶ್ರೀ ಕೃಷ್ಣಚೈತನ್ಯ ಮಹಾಪ್ರಭುಗಳ ಅತ್ಯಂತ ಆತ್ಮೀಯ ಸೇವಕರಾಗಿದ್ದರು. ಶ್ರೀಲ ರಘುನಾಥ ದಾಸ ಗೋಸ್ವಾಮಿಯವರು ಶ್ರೀಲ ರೂಪ ಗೋಸ್ವಾಮಿಯವರ ಒಬ್ಬ ನೇರ ಅನುಯಾಯಿಯಾಗಿದ್ದರು. ಶ್ರೀ ಚೈತನ್ಯ-ಚರಿತಾಮೃತದ ಲೇಖಕರಾದ ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಶ್ರೀಲ ರೂಪ ಗೋಸ್ವಾಮಿ ಮತ್ತು ಶ್ರೀಲ ರಘುನಾಥ ದಾಸ ಗೋಸ್ವಾಮಿಯವರ ನೇರ ಅನುಯಾಯಿಯಾಗಿದ್ದಾರೆ.

ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿಯವರ ನೇರ ಅನುಯಾಯಿ ಶ್ರೀಲ ನರೋತ್ತಮದಾಸ ಠಾಕುರರಾಗಿದ್ದು ಅವರು ಶ್ರೀಲ ವಿಶ್ವನಾಥ ಚಕ್ರವರ್ತಿಯವರನ್ನು ಅವರ ಸೇವಕರಾಗಿ ಸ್ವೀಕರಿಸಿದ್ದರು. ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಶ್ರೀಲ ಜಗನ್ನಾಥ ದಾಸ ಬಾಬಾಜೀಯವರನ್ನು ಸ್ವೀಕರಿಸಿದರು ಹಾಗೂ ಇವರು ಶ್ರೀಲ ಭಕ್ತಿವಿನೋದ ಠಾಕುರರ ಆಧ್ಯಾತ್ಮಿಕ ಗುರುವಾಗಿದ್ದರು ಹಾಗೂ ಭಕ್ತಿ ವಿನೋದ ಠಾಕುರರು ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರನ್ನು ಸ್ವೀಕರಿಸಿದರು ಹಾಗೂ ಗೌರಕಿಶೋರ ದಾಸ ಬಾಬಾಜಿಯವರು ಓಂ ವಿಷ್ಣುಪಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಮಹಾರಾಜರ ಆಧ್ಯಾತ್ಮಿಕ ಗುರುವಾಗಿದ್ದರು ಹಾಗೂ ಭಕ್ತಿ ಸಿದ್ಧಾಂತರು ಶ್ರೀ ಶ್ರೀಮದ್ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಆಧ್ಯಾತ್ಮಿಕ ಗುರುವಾಗಿದ್ದರು.

ಭಗವಾನ್ ಶ್ರೀ ಚೈತನ್ಯ ಮಹಾಪ್ರಭು ತ್ರಿಗುಣಾತ್ಮಕ ವಿಧಾನಗಳ ಪ್ರಾಪಂಚಿಕ ಸ್ತರದವರಲ್ಲ. ಅವರು ಅಲೌಕಿಕ ಸ್ತರದವರಾಗಿದ್ದು ಜೀವಿಯೊಬ್ಬನ ಅಪರಿಪೂರ್ಣ ಇಂದ್ರಿಯ ಗ್ರಹಿಕೆಗೆ ಮೀರಿದವರಾಗಿದ್ದಾರೆ.  ಅಪಾರ ಪಾಂಡಿತ್ಯ ಹೊಂದಿದ ಪ್ರಾಪಂಚಿಕ ವಿದ್ವಾಂಸರೂ ಕೂಡ ಒಂದು ಗ್ರಹಿಕೆಯ ಚಿತ್ತಸ್ಥಿತಿಯಿರದೇ ಅಲೌಕಿಕ ಸ್ತರವನ್ನು ತಲಪಲು ಸಾಧ್ಯವಿಲ್ಲ. ಏಕೆಂದರೆ ಕೇವಲ ಆ ಚಿತ್ತಸ್ಥಿತಿಯಲ್ಲಿ ಮಾತ್ರ ಅವರಿಗೆ ಶ್ರೀ ಚೈತನ್ಯ ಮಹಾಪ್ರಭುಗಳ ಸಂದೇಶದ ಅರಿವಾಗುತ್ತದೆ.

ಆದ್ದರಿಂದ ಇಲ್ಲಿ ವಿವರಿಸಲ್ಪಟ್ಟಿದ್ದು ನಿಷ್ಕ್ರಿಯ ಮನಸ್ಸುಗಳ ಊಹಾತ್ಮಕ ರೂಢಿಗಳಿಂದ ಸೃಷ್ಟಿಸಲ್ಪಟ್ಟ ಪ್ರಾಯೋಗಿಕ ಆಲೋಚನೆಗಳ ಜೊತೆ ಯಾವ ಸಂಬಂಧವನ್ನೂ ಹೊಂದಿಲ್ಲ. ಈ ವಿಷಯವು ಒಂದು ಮಾನಸಿಕ ಬೆರಕೆಯಾಗಿರದೇ ಒಂದು ವಾಸ್ತವಿಕ ಆಧ್ಯಾತ್ಮಿಕ ಅನುಭವವಾಗಿದ್ದು ಇದನ್ನು ಮೇಲೆ ವಿವರಿಸಿದ ಗುರು ಪರಂಪರೆಯನ್ನು ಸ್ವೀಕರಿಸುವುದರಿಂದ ಮಾತ್ರ ಪಡೆಯಬಹುದು.

ಅಜಾನುಬಾಹುಗಳಾದ, ಕರಗಿದ ಚಿನ್ನದ ಹೊಳಪಿನ ಸುಂದರವಾದ ಹಳದಿ ವರ್ಣವಿರುವ ಹಾಗೂ ಕೆಂಪು ಕಮಲದಂತಿರುವ ಉದ್ದನೆಯ ಕಣ್ಣುಗಳನ್ನು ಹೊಂದಿದ ಭಗವಾನ್ ಶ್ರೀ ಚೈತನ್ಯ ಮಹಾಪ್ರಭು ಮತ್ತು ಶ್ರೀ ನಿತ್ಯಾನಂದ ಪ್ರಭುಗಳನ್ನು ಪೂಜಿಸೋಣ. ಅವರು ಬ್ರಾಹ್ಮಣರಲ್ಲಿ ಅತ್ಯುನ್ನತರಾದವರು, ಈ ಯುಗದ ಧಾರ್ಮಿಕ ತತ್ತ್ವಗಳ ಪಾಲಕರು, ಎಲ್ಲ ಜೀವಾತ್ಮಗಳ ಕೊಡುಗೈ ಆಪದ್ಬಾಂಧವರು, ಮತ್ತು ದೇವರ ಅತ್ಯಂತ ದಯಾಮಯೀ ಅವತಾರಗಳು. ಅವರು ಭಗವಾನ್ ಕೃಷ್ಣನ ಹೆಸರುಗಳ ಸಾಮೂಹಿಕ ಪಠಣವನ್ನು ಆರಂಭಿಸಿದವರು.

ವೇದಿಕೆ ಸಜ್ಜುಗೊಳಿಸುವುದು:

ಧಾರ್ಮಿಕ ಆಚರಣೆ ದುರ್ಬಲವಾದಂತೆಲ್ಲ ಅಧಾರ್ಮಿಕತೆ ಕ್ರಮೇಣ ಹೆಚ್ಚಾಗುತ್ತದೆ. ಈ ಯುಗದ ಧಾರ್ಮಿಕ ಪ್ರಕ್ರಿಯೆಯನ್ನು ಪುನಃ ಸ್ಥಾಪಿಸಲು, ಸರ್ವೋಚ್ಚನಾದ ಭಗವಂತನು ತನ್ನ ಶಾಶ್ವತ ಸಹವರ್ತಿಗಳೊಡನೆ ಭೂಮಿಯ ಮೇಲೆ ಅವತರಿಸಿದನು. ಕಲಿಯುಗದ ಧರ್ಮವೆಂದರೆ ಭಗವಂತನ ಪವಿತ್ರ ಹೆಸರಿನ ಸಾಮೂಹಿಕ ಪಠಣವಾಗಿದ್ದು  ಈ ಧಾರ್ಮಿಕ ಪ್ರಕ್ರಿಯೆಯ ಪ್ರಚಾರದ ಸಲುವಾಗಿ ಭಗವಾನ್ ಚೈತನ್ಯರು ಮಾತೆ ಶಚಿಯ ಪುತ್ರನಾಗಿ ಜನಿಸಿದರು. ಶ್ರೀಮದ್ ಭಾಗವತದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಕೃಷ್ಣನ ಪವಿತ್ರ ಹೆಸರಿನ ಸಾಮೂಹಿಕ ಪಠಣದ ಪ್ರಸಾರಕ್ಕಾಗಿಯೇ ಜನ್ಮತಾಳಿದ ಪರಮ ಸತ್ಯ ಎಂದು ದೃಢೀಕರಿಸಲಾಗಿದೆ.

ಅವರ ಅಪೇಕ್ಷೆಗನುಗುಣವಾಗಿ, ಅವರ ಶಾಶ್ವತ ಸಹವರ್ತಿಗಳು ಮಾನವ ಜನ್ಮ ಪಡೆದು ಅವರ ಮುಂಚೆ ಕಾಣಿಸಿಕೊಂಡರು. ಅನಂತ ಶೇಷ, ಶಿವ, ಬ್ರಹ್ಮ, ಋಷಿಗಳು ಮತ್ತು ದೇವರ ಇತರ ಸಹವರ್ತಿಗಳೆಲ್ಲರೂ ಅತ್ಯಂತ ಉನ್ನತ, ಶುದ್ಧ ಭಕ್ತರಾಗಿ ಜನ್ಮ ತಾಳಿದರು. ಅವರಲ್ಲಿ ಬಹಳಷ್ಟು ಜನರು ನವದ್ವೀಪದಲ್ಲಿ ಹುಟ್ಟಿದರು ಹಾಗೂ ಇನ್ನೂ ಕೆಲವರು ಬಂಗಾಳದಲ್ಲಿ ಮತ್ತು ಉಳಿದವರು ಒರಿಸ್ಸಾದಲ್ಲಿ ಜನ್ಮ ತಾಳಿದರು.

ಭಗವಾನ್ ಚೈತನ್ಯರ ಜನ್ಮಸ್ಥಳ ನವದ್ವೀಪವಾಗಿತ್ತು; ಆದ್ದರಿಂದ, ನವದ್ವೀಪ ಎಲ್ಲ ಭಕ್ತರು ಸೇರುವ ಸ್ಥಳವಾಗಿತ್ತು. ನವದ್ವೀಪದ ವೈಭವಗಳನ್ನು ವಿಶ್ವದ ಇತರ ಯಾವುದೇ ಸ್ಥಳಕ್ಕೂ ಹೋಲಿಸಲಾಗದು. ನವದ್ವೀಪದಲ್ಲಿ ಭಗವಾನ್ ಚೈತನ್ಯರ ಜನ್ಮದ ಅರಿವಿದ್ದ ನಿಯತಿಯು ಅದನ್ನು ಭಗವಂತನನ್ನು ಸ್ವೀಕರಿಸಲು ಒಂದು ಸಮೃದ್ಧ ಮತ್ತು ದೈವೀಕೃಪೆಯಿರುವ ನಗರವನ್ನಾಗಿಸಿತು.

ನವದ್ವೀಪದ ಸಿರಿಯನ್ನು ವಿವರಿಸುವ ಸಾಮರ್ಥ್ಯವನ್ನು ಯಾರು ಹೊಂದಿದ್ದಾರೆ? ನೂರಾರು ಸಾವಿರಾರು ಜನರು ಗಂಗಾತೀರದಲ್ಲಿ ಸ್ನಾನ ಮಾಡಲು ಕಿಕ್ಕಿರಿದರು. ದೇವಿ ಸರಸ್ವತಿಯ ಕೃಪೆಯಿಂದ, ನವದ್ವೀಪದ ವಿಭಿನ್ನ ವಯೋಮಾನದ ಎಲ್ಲ ನಿವಾಸಿಗಳೂ ಪವಿತ್ರಗ್ರಂಥಗಳ ಪಾಂಡಿತ್ಯವನ್ನು ಹೊಂದಿದ್ದರು. ಜನರು ತಮ್ಮ ಲೌಕಿಕ ಜ್ಞಾನದ ಬಗ್ಗೆ ಹೆಮ್ಮೆಯನ್ನು ಹೊಂದಿದ್ದರು; ಚಿಕ್ಕ ಹುಡುಗರು ಕೂಡ ಹಿರಿಯ ವಿದ್ವಾಂಸರ ಜೊತೆ ತರ್ಕದ ವಾದ ಮಾಡುತ್ತಿದ್ದರು. ನವದ್ವೀಪದಲ್ಲಿ ಶಾಸ್ತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಿದ್ದರಿಂದ ಅಲ್ಲಿ ಉನ್ನತ ತರಬೇತಿ ಪಡೆಯಲು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನವದ್ವೀಪದಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಎಣಿಸಲಾಗದಷ್ಟಿತ್ತು ಮತ್ತು ಶಿಕ್ಷಕರ ನಿಖರವಾದ ಎಣಿಕೆ ತೀರ್ಮಾನಿಸಲಾರದಷ್ಟಿತ್ತು.

ರಮಾ, ಅದೃಷ್ಟದೇವತೆಯಾದ ಲಕ್ಷ್ಮಿಯ ಕೃಪಾದೃಷ್ಟಿಯಿದ್ದುದರಿಂದ ನಿವಾಸಿಗಳು ಸಂತೋಷದಿಂದಿದ್ದರೂ ಇಂದ್ರಿಯಾನಂದಗಳು ಹಾಗೂ ಇತರ ಲೌಕಿಕ ವ್ಯವಹಾರಗಳಲ್ಲಿ ಹಣ ವ್ಯರ್ಥವಾಗಿಸುವ ಮೂಲಕ ಅವರು ತಮ್ಮ ಸಮಯ ಪೋಲು ಮಾಡುತ್ತಿದ್ದರು. ಅವರಲ್ಲಿ ಗರ್ವ ಮತ್ತು ಐಹಿಕತೆ ಬೆಳೆದಿತ್ತು ಮತ್ತು ಕಲಿಯುಗದ ಆರಂಭ ಅನೈತಿಕ ಚಟುವಟಿಕೆಗಳನ್ನು ಪ್ರಾರಂಭಿಸಿತ್ತು.

ಅವರಿಗೆ ತಿಳಿದಿದ್ದ ಧಾರ್ಮಿಕ ಚಟುವಟಿಕೆಗಳು ದೇವತೆಗಳ, ವಿಶೇಷವಾಗಿ ದುರ್ಗಾ ದೇವಿಯ ಆವಾಹನೆ ಹಾಗೂ ತಾತ್ಕಾಲಿಕ ವಸ್ತುಗಳ ವರಗಳಿಗಾಗಿ ಪ್ರಾರ್ಥನೆಗಳು ಮಾತ್ರವೇ ಆಗಿದ್ದವು. ಕೆಲವರು ಗರ್ವದಿಂದ ಸರ್ಪಗಳ ದೇವತೆಯನ್ನೂ ಪೂಜಿಸುತ್ತಿದ್ದರು. ಅವರು ತಮ್ಮ ಪುತ್ರ ಪುತ್ರಿಯರ ವಿವಾಹಕ್ಕಾಗಿ ದೊಡ್ಡ ಮೊತ್ತವನ್ನು ಪೋಲುಮಾಡುತ್ತಿದ್ದರು, ಮತ್ತು ಈ ರೀತಿಯಾಗಿ ಅವರು ತಮ್ಮ ಮಾನವ ಜೀವನವನ್ನು ವ್ಯರ್ಥಮಾಡುತ್ತಿದ್ದರು.

ಗ್ರಂಥಗಳ ಪಾಂಡಿತ್ಯವಿದೆಯೆಂದು ಹೇಳಲಾದ ಉಚ್ಚ ಪುರೋಹಿತರಾದ ಭಟ್ಟಾಚಾರ್ಯರು, ಚಕ್ರವರ್ತಿಗಳು ಮತ್ತು ಮಿಶ್ರರು ಪವಿತ್ರ ಗ್ರಂಥಗಳ ಉದ್ದೇಶವನ್ನು ತಿಳಿದಿರಲಿಲ್ಲ. ಅವರು ಪವಿತ್ರ ಗ್ರಂಥಗಳನ್ನು ಬೋಸಿದರೂ ಅವರ ಚಟುವಟಿಕೆಗಳು ಧರ್ಮಗ್ರಂಥದ ಬೋಧನೆಗಳಿಗೆ ವಿರುದ್ಧವಾಗಿದ್ದವು; ಆದ್ದರಿಂದ ಅವರ ವಿದ್ಯಾರ್ಥಿಗಳ ಜೊತೆ ಅವರೂ ಕೂಡ ಅಧರ್ಮದ ಮಹಾಪೂರದಲ್ಲಿ ಮುಳುಗಿದರು. ಅವರು ಕೇವಲ ಇತರರ ದೋಷಗಳನ್ನು ಎತ್ತಿತೋರಿಸುವಲ್ಲೇ ತಮ್ಮ ಸಮಯ ಕಳೆದರು.

ಮೂಢನಂಬಿಕೆಯವರಾದ ತ್ಯಾಗಿಗಳು ಮತ್ತು ಸಂನ್ಯಾಸಿಗಳು ಎಂದು ಕರೆಯಲ್ಪಟ್ಟವರಲ್ಲಂತೂ ಕೃಷ್ಣನ ಒಂದು ನಾಮವೂ ಅವರ ಬಾಯಿಯಿಂದ ಬರಲಿಲ್ಲ. ಸಮಾಜದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿರುವವರೆಂದು ಪರಿಗಣಿಸಲಾದವರು ದೈನಂದಿನ ಶುದ್ಧೀಕರಣದ ಸಮಯದಲ್ಲಿ ಮಾತ್ರ ‘ಗೋವಿಂದಾ!’ ಅಥವಾ ‘ಪುಂಡರೀಕಾಕ್ಷ!’ ಎಂದು ಭಗವಂತನ ಹೆಸರುಗಳನ್ನು ಉಚ್ಚರಿಸುವುದು ಕೇಳಿಬರುತ್ತಿತ್ತು. ಅಲೌಕಿಕ ಸಾಹಿತ್ಯಗಳಾದ ಭಗವದ್ಗೀತೆ ಹಾಗೂ ಶ್ರೀಮದ್ ಭಾಗವತಗಳ ವಿವರಣೆಗಳಲ್ಲಿ ಭಕ್ತಿಯ ದೃಷ್ಟಿಕೋನಗಳು ಯಾವತ್ತೂ ಇರಲಿಲ್ಲ.

ಭಗವಂತನ ವೈಷ್ಣವ ಭಕ್ತರು ಸಾಮಾನ್ಯ ಜನರು ಭಗವಂತನ ಬಾಹ್ಯ ಶಕ್ತಿಯಲ್ಲಿ ಲೌಕಿಕ ಅಸ್ತಿತ್ವದಲ್ಲಿ ಮುಳುಗಿಹೋಗಿರುವುದನ್ನು ನೋಡಿ ಖೇದಗೊಂಡರು. ಅವರು ಕನಿಕರದಿಂದ ಯೋಚಿಸಿದರು: “ಈ ಎಲ್ಲ ಜೀವಾತ್ಮಗಳನ್ನು ಹೇಗೆ ವಿಮೋಚನೆಗೊಳಿಸಬಹುದು? ಅವರು ಇಂದ್ರಿಯ ಭೋಗಗಳ ಭ್ರಮೆಯಲ್ಲಿ ಸಂಪೂರ್ಣವಾಗಿ ಸಮ್ಮೋಹಿತರಾಗಿದ್ದಾರೆ.” ಭಕ್ತಾದಿಗಳು ಜನರಿಗೆ ಕೃಷ್ಣನ ಪವಿತ್ರವಾದ ಹೆಸರನ್ನು ಪಠಿಸಲು ಮನವಿ ಮಾಡಿದರೂ ಅವರು ಅದನ್ನು ನಿರಾಕರಿಸಿದರು ಹಾಗೂ ಅದರ ಬದಲಿಗೆ ಅವರು ಮೂರ್ಖತನದಿಂದ ಫಲಪ್ರದವಾಗದ ಐಹಿಕ ಜ್ಞಾನ ಪಡೆಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಜ್ಞಾನಿಗಳಾದ ವೈಷ್ಣವ ಭಕ್ತರು ಕೃಷ್ಣನನ್ನು ಪೂಜಿಸುವ ಮೂಲಕ ಗಂಗೆಯಲ್ಲಿ ಸ್ನಾನ ಮಾಡುವ ಮೂಲಕ ಹಾಗೂ ಕೃಷ್ಣನ ಅರಿವಿನ ವಿಷಯಗಳನ್ನು ಚರ್ಚಿಸುವ ಮೂಲಕ ತಮ್ಮ ಭಕ್ತಿ ಚಟುವಟಿಕೆಗಳನ್ನು ಮುಂದುವರಿಸಿದರು. ವೈಷ್ಣವರು ಮಾನವರಿಗೆ ವರವನ್ನು ನೀಡಲು ಭಗವಂತನಾದ ಕೃಷ್ಣನು ಶೀಘ್ರವೇ ಅವರ ಮೇಲೆ ಅವನ ಕರುಣೆ ತೋರಿಸಲಿ ಎಂದು ಪ್ರಾರ್ಥಿಸಿದರು.

ಅದ್ವೈತಾಚಾರ್ಯರ ಮನವಿ:

ನವದ್ವೀಪದ ವೈಷ್ಣವರಲ್ಲಿ ಅಗ್ರಗಣ್ಯರೆಂದರೆ ಅದ್ವೈತ ಆಚಾರ್ಯರಾಗಿದ್ದರು. ಈ ಸರ್ವಶ್ರೇಷ್ಠ ಆಧ್ಯಾತ್ಮಿಕ ಗುರುಗಳು ಭಕ್ತಿ ಮತ್ತು ತ್ಯಾಗದ ಪರಿಪೂರ್ಣ ವಿಜ್ಞಾನದ ಅದ್ಭುತ ಪ್ರತಿಪಾದಕರಾಗಿದ್ದರು; ಕೃಷ್ಣ ಜಾಗೃತಿ ವಿಷಯಗಳ ಅವರ ವರ್ಣನೆ ಭಗವಾನ್ ಶಿವನ ಬೋಧನೆಯನ್ನು ಸರಿಗಟ್ಟುತ್ತಿದ್ದವು. ಎಲ್ಲ ಅಸ್ತಿತ್ವದಲ್ಲಿರುವ ಪವಿತ್ರ ಗ್ರಂಥಗಳ ಅವರ ವಿವರಣೆ ಒಂದೇ ತೀರ್ಮಾನಕ್ಕೇ ಬಂದಿತು-ಎಲ್ಲದರ ಮೂಲವೂ ಭಗವಂತ ಕೃಷ್ಣನ ಪಾದಕಮಲಗಳಿಗೆ ತೋರುವ ಭಕ್ತಿಯಾಗಿದೆ.

ಅದ್ವೈತಾಚಾರ್ಯ ಪ್ರಭುಗಳು ವೈಷ್ಣವರ ನಾಯಕರಾಗಿದ್ದರು. ಈ ರೀತಿಯಲ್ಲಿ, ಅದ್ವೈತಾಚಾರ್ಯರು ತಮ್ಮ ಸಮಯವನ್ನು ನವದ್ವೀಪದಲ್ಲಿ ಭಕ್ತಿ ಸೇವೆಯಲ್ಲಿ ತನ್ಮಯರಾಗಿ ಕಳೆದರು. ಆದರೆ, ಅವರು ಭಕ್ತಿ ಸೇವೆಯಿರದ ವ್ಯಕ್ತಿಗಳನ್ನು ನೋಡಿ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರು. ಜನರೆಲ್ಲರೂ ಲೌಕಿಕ ಸಂತೋಷಗಳ ಹಿಂದೆ ಹುಚ್ಚರಂತೆ ಅಲೆಯುತ್ತಿದ್ದರು; ಯಾರೂ ಭಗವಂತನಾದ ಕೃಷ್ಣನನ್ನು ಪೂಜಿಸುವ ಅಥವಾ ಸೇವೆ ಮಾಡುವ ಆಸಕ್ತಿಯನ್ನು ಹೊಂದಿರಲಿಲ್ಲ. ಕೆಲವರು ಚಂಡಿಯೊಂದಿಗೆ ಗುರುತಿಸಲಾದ ವಾಸುತಿ ಎಂಬ ಸ್ತ್ರೀ ದೇವತೆಯನ್ನು ಅನೇಕ ಉಡುಗೊರೆಗಳಿಂದ ಪೂಜಿಸಿದರೆ ಇತರರು ಮಾಂಸ ಮದ್ಯಗಳೊಂದಿಗೆ ಯಕ್ಷರನ್ನು ಪೂಜಿಸುತ್ತಿದ್ದರು. ಅವರು ಅಂತ್ಯವಿಲ್ಲದ ಹಾಡುಗಾರಿಕೆ, ನೃತ್ಯ ಮತ್ತು ಸಂಗೀತದ ಅಬ್ಬರದಲ್ಲಿ ಮುಳುಗಿದ್ದರಿಂದ ಅವರ ಕಿವಿಗಳು ಭಗವಾನ್ ಕೃಷ್ಣನ ಮಂಗಳಕರ ಹೆಸರುಗಳ ಅಮೃತಮಯೀ ಕರೆಗೆ ಕಿವುಡಾಗಿ ಹೋಗಿದ್ದವು. ಅಂತಿಮವಾಗಿ ಭಗವಾನ್ ಕೃಷ್ಣನ ಸಂತೋಷಕ್ಕೆ ಮೀಸಲಾಗಿರದ ಮಾನವಕುಲದ ಪೂಜೆಯಿಂದ ದೇವತೆಗಳಿಗೆ ತೃಪ್ತಿಯಾಗುವುದಿಲ್ಲ. ವಿಶೇಷವಾಗಿ ಅದ್ವೈತಾಚಾರ್ಯರಿಗೆ ಇಂತಹ ಪೂಜೆಯ ಬಗ್ಗೆ ಬಹಳಷ್ಟು ಅಸಂತೋಷವಿತ್ತು

ಅದ್ವೈತಾಚಾರ್ಯ ಪ್ರಭುಗಳು ಅತ್ಯಂತ ಸಹಾನುಭೂತಿಯ ಸ್ವಭಾವವನ್ನು ಹೊಂದಿದ್ದರು; ಯಾವಾಗಲೂ ಅವರು ಬದ್ಧಾತ್ಮರನ್ನು ಹೇಗೆ ಸ್ವತಂತ್ರಗೊಳಿಸುವುದೆಂದು ಯೋಚಿಸುತ್ತಿದ್ದರು. “ನನ್ನ ಭಗವಂತ ಅವತರಿಸಿದಲ್ಲಿ ಅವನು ಎಲ್ಲರಿಗೂ ಮೋಕ್ಷ ಕರುಣಿಸಬಹುದು. ನಾನು ‘ಅದ್ವೈತ ಸಿಂಹ’ ಎಂದು ಕರೆಯಲ್ಪಡುತ್ತೇನೆ. ಆದರೆ ವೈಕುಂಠದ ಪರಮಪ್ರಿಯ ಭಗವಂತನು ಈ ಜಗತ್ತಿನಲ್ಲಿ ಅವತರಿಸಲು ಅವನನ್ನು ಒಪ್ಪಿಸಿದಲ್ಲಿ ಮಾತ್ರ ಈ ಹೆಸರನ್ನು ಸಮರ್ಥಿಸಿಕೊಳ್ಳಬಹುದು! ನಾನು ವೈಕುಂಠದ ಭಗವಂತನನ್ನು ಸಾಕ್ಷಾತ್ ಅವತರಿಸುವಂತೆ ಮಾಡುತ್ತೇನೆ, ಮತ್ತು ಅನಂತರ ಎಲ್ಲರೂ ಅಲೌಕಿಕ ಸಂತೋಷದಿಂದ ಹಾಡುತ್ತಾರೆ ಮತ್ತು ನರ್ತಿಸುತ್ತಾರೆ. ಈ ರೀತಿಯಾಗಿ, ಎಲ್ಲ ಬದ್ಧಾತ್ಮಗಳು ವಿಮೋಚನೆ ಹೊಂದುತ್ತವೆ! “ಈ ರೀತಿಯಲ್ಲಿ ವಿಷಯಗಳನ್ನು ಪರಿಗಣಿಸಿ, ಅದ್ವೈತರು ವಿಪಥಗೊಳ್ಳದ ಸಂಕಲ್ಪದೊಂದಿಗೆ ನಿರಂತರವಾಗಿ ಶ್ರೀ ಕೃಷ್ಣನ ಪಾದಪದ್ಮಗಳನ್ನು ಪೂಜಿಸಿದರು. ಭಗವಾನ್ ಚೈತನ್ಯರು ಅದ್ವೈತಾಚಾರ್ಯ ಪ್ರಭುವಿನ ಪ್ರಾಮಾಣಿಕ ಮನವಿಯಿಂದಾಗಿ ಅವತರಿಸಿದರು.

ಭಕ್ತರು ಐಹಿಕ ಜೀವನದ ಜ್ವಾಲೆಗಳಲ್ಲಿ ಉರಿದುಹೋಗುತ್ತಿರುವ ಜಗತ್ತನ್ನು ನೋಡಿದರೂ, ಅವರಿಗೆ ಜನರನ್ನು ಕೃಷ್ಣನ ಅರಿವನ್ನು ಹೊಂದುವಂತೆ ಸೂರ್ತಿ ನೀಡಲು ಅವಕಾಶ ದೊರಕಲಿಲ್ಲ. ಇದು ಅವರಿಗೆ ತುಂಬ ದುಃಖವನ್ನು ಉಂಟುಮಾಡಿತು. ಶ್ರೀ ಅದ್ವೈತಾಚಾರ್ಯರು ವೈಷ್ಣವ ಸಮುದಾಯದವರನ್ನು ಒಗ್ಗೂಡಿಸಿ ಕೃಷ್ಣನ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರೂ ಒಂದೇ ಒಂದು ಆತ್ಮಕ್ಕೂ ಇದರ ಅರಿವು ಮೂಡಲಿಲ್ಲ. ಜನರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ದುಃಖದಿಂದ ಜರ್ಜರಿತರಾದ ಶ್ರೀ ಅದ್ವೈತಾಚಾರ್ಯರು ಉಪವಾಸ ಆರಂಭಿಸಿದರು -ಎಲ್ಲ  ವೈಷ್ಣವರು ಈ ಪರಿಸ್ಥಿತಿಯ ಬಗ್ಗೆ ಆಳವಾದ ನಿಟ್ಟುಸಿರಿಟ್ಟರು.

ಕೃಷ್ಣನ ಬಗ್ಗೆ ಏಕೆ ಹಾಡಬೇಕು ಹಾಗೂ ನರ್ತಿಸಬೇಕು? ವೈಷ್ಣವ ಎಂದರೇನು? ಭಗವಂತನ ಪವಿತ್ರ ಹೆಸರಿನ ಸಾಮೂಹಿಕ ಉಚ್ಚಾರಣೆಯ ಲಾಭವೇನು? ಸಂಪತ್ತು ಮತ್ತು ಕುಟುಂಬದ ಹಿಂದೆ ಓಡುತ್ತಿರುವ ಪ್ರಾಪಂಚಿಕ ಜನರಿಗೆ ಇವುಗಳ ಬಗ್ಗೆ ತಿಳಿಯುವುದಿಲ್ಲ. ನಿಜ ಹೇಳಬೇಕೆಂದರೆ, ಇಂತಹ ನಾಸ್ತಿಕರು ವೈಷ್ಣವರನ್ನು ನೋಡಿ ಮೂದಲಿಸುವುದು ಮತ್ತು ನಗುವುದನ್ನು ಮಾತ್ರ ಮಾಡುತ್ತಾರೆ.

ಪ್ರತಿದಿನ ಸಂಜೆಯಾಗುತ್ತಿದ್ದಂತೆ ಶ್ರೀವಾಸ ಠಾಕುರ ಮತ್ತು ಆತನ ಮೂವರು ಸಹೋದರರು ಅವರ ಮನೆಯಲ್ಲಿ ಗಟ್ಟಿಯಾಗಿ ಭಗವಂತನ ನಾಮಸ್ಮರಣೆ ಮಾಡುತ್ತಿದ್ದರು. ನಾಸ್ತಿಕರಾದ ನೆರೆಹೊರೆಯವರು ಶ್ರೀವಾಸ ಠಾಕುರರನ್ನು ಅವಹೇಳನ ಮಾಡಿ ಅವರಿಗೆ ಹುಚ್ಚು ಹಿಡಿದಿದೆಯೆಂದು ಆರೋಪಿಸಿದರು. ಇವರಿಂದಾಗಿ ಇಡೀ ಹಳ್ಳಿಯೇ ನಾಶವಾಗುತ್ತದೆಂದು ಅವರು ಹೇಳಿದರು. ಜನರು ಜೋರಾಗಿ ಕೃಷ್ಣನ ಹೆಸರನ್ನು ಪಠಿಸುವುದನ್ನು ಕೇಳಿದರೆ ನಿರಂಕುಶ ಮುಸ್ಲಿಂ ಆಡಳಿತಗಾರರು ಹಳ್ಳಿಯನ್ನು ನಾಶ ಮಾಡುವುದಾಗಿ ಅವರು ಹೇಳಿದರು. ಕೆಲವು ಹೊಟ್ಟೆಕಿಚ್ಚಿನ ನೆರೆಹೊರೆಯವರು ಶ್ರೀವಾಸ ಠಾಕುರರ ಮನೆಯನ್ನು ನಾಶ ಮಾಡಿ ಅವರನ್ನು ತೊಲಗಿಸಲು ಆ ಮನೆಯನ್ನು ಗಂಗಾ ನದಿಯಲ್ಲಿ ತೇಲಿಬಿಡುವುದಾಗಿ ಹೇಳಿದರು. “ಶ್ರೀವಾಸ ಠಾಕುರರು ಹೋದಾಗ ಮಾತ್ರ ಈ ಗ್ರಾಮ ಮತ್ತೆ ಶಾಂತಿಯುತವಾಗುತ್ತದೆ. ಇಲ್ಲದಿದ್ದಲ್ಲಿ ಮುಸ್ಲಿಂ ಆಡಳಿತಗಾರರು ನಮ್ಮನ್ನು ಹಿಂಸಿಸುತ್ತಾರೆ.”

ನಾಸ್ತಿಕರಿಂದ ಇಂತಹ ಬೆದರಿಕೆಗಳನ್ನು ಕೇಳಿದಾಗ ಸಾಧುಗಳಾದ ವೈಷ್ಣವರು ಕಣ್ಣೀರಿಟ್ಟರು ಹಾಗೂ ತಮ್ಮ ದುಃಖವನ್ನು ಭಗವಾನ್ ಕೃಷ್ಣನಲ್ಲಿ ತೋಡಿಕೊಂಡರು. ಈ ಸುದ್ದಿ ಕೇಳಿದ ಶ್ರೀ ಅದ್ವೈತಾಚಾರ್ಯರು ಕ್ರೋಧದಿಂದ ಕುದಿದು ಹೋದರು ಮತ್ತು ಅವರು ವೈಷ್ಣವರನ್ನು ಉದ್ದೇಶಿಸಿ ಮಾತನಾಡಿದರು, “ಶ್ರೀವಾಸ ಠಾಕುರ, ಶ್ರೀ ಗಂಗಾದಾಸ ಮತ್ತು ಶುಕ್ಲಾಂಬರರೇ ಆಲಿಸಿ, ನಾನು ಭಗವಾನ್ ಕೃಷ್ಣನನ್ನು ಎಲ್ಲರೆದುರಿಗೂ ಪ್ರತ್ಯಕ್ಷನಾಗುವಂತೆ ಮಾಡುತ್ತೇನೆ. ಭಗವಾನ್ ಕೃಷ್ಣನು ಖುದ್ದಾಗಿ ಬಂದು ಎಲ್ಲರಿಗೂ ವಿಮೋಚನೆ ನೀಡುತ್ತಾನೆ. ವೈಷ್ಣವರಾದ ನಿಮ್ಮ ಜೊತೆಯಲ್ಲಿ, ಭಗವಂತನು ನಾಸ್ತಿಕರಿಗೆ ಕೃಷ್ಣಪ್ರೇಮವನ್ನು ಬೋಸುತ್ತಾನೆ.”

ಶ್ರೀ ಅದ್ವೈತಾಚಾರ್ಯರು ವಿವರವಾಗಿ ಮಾತನಾಡಿದರು ಹಾಗೂ ಅನಂತರ ತಮ್ಮಲ್ಲಿ ತಾವೇ ಸಂಕಲ್ಪ ತೆಗೆದುಕೊಂಡು ಭಗವಂತನ ಪ್ರತ್ಯಕ್ಷವಾಗುವಿಕೆಗೆ ಕಟಿಬದ್ಧರಾಗಿ ಭಗವಾನ್ ಕೃಷ್ಣನ ಪಾದಪದ್ಮಗಳನ್ನು ಪೂಜಿಸಿದರು. ಎಲ್ಲ ಭಕ್ತರು ಕೂಡ ಹೆಚ್ಚಿನ ಶ್ರದ್ಧೆ ಮತ್ತು ನಿರಂತರ ಕಣ್ಣೀರಿನಿಂದ ಭಗವಾನ್ ಕೃಷ್ಣನ ಪಾದಪದ್ಮಗಳನ್ನು ಪೂಜಿಸಿದರು. ಅಂತಿಮವಾಗಿ ಅವರು ಯಾವುದೇ ಐಹಿಕ ವಸ್ತುವಿನ ಆರಾಮವನ್ನು ತ್ಯಜಿಸಿದರು ಹಾಗೂ ಸರ್ವೋಚ್ಚ ಭಗವಂತನು ಐಹಿಕ ಲೋಕದಲ್ಲಿ ಅವತರಿಸಲು ಸಿದ್ಧನಾದನು.

ಶ್ರೀ ನಿತ್ಯಾನಂದರ ಅವತಾರ:

ಸರ್ವೋಚ್ಚ ಭಗವಂತನ ಆಸೆಯ ಮೇರೆಗೆ, ಭಗವಂತನಾದ ಅನಂತ ಶೇಷನ ಮೂಲನಾದ ಭಗವಾನ್ ನಿತ್ಯಾನಂದರು ರಾಢದೇಶ ಎಂಬ ಪ್ರದೇಶದಲ್ಲಿ ಅವನಿಗಿಂತ ಮೊದಲು ಅವತರಿಸಿದರು. ಪ್ರಭು ನಿತ್ಯಾನಂದರು ಏಕಚಕ್ರ ಎಂಬ ಹಳ್ಳಿಯಲ್ಲಿ ಮಾಘಮಾಸ ಶುಕ್ಲಪಕ್ಷ ತ್ರಯೋದಶಿಯ ದಿನ ಶ್ರೀಮತಿ ಪದ್ಮಾವತೀ ದೇವಿಯವರ ಗರ್ಭದಿಂದ ಅವತರಿಸಿದರು. ಸ್ವತಃ ತಾವೇ ಎಲ್ಲರ ಸರ್ವೋಚ್ಚ ಪಿತನಾದರೂ ನಿತ್ಯಾನಂದರು ಶುದ್ಧ ಮತ್ತು ಉನ್ನತ ಬ್ರಾಹ್ಮಣನಾದ ಶ್ರೀ ಹಡಾಯಿ ಪಂಡಿತರಿಗೆ ಅವರ ತಂದೆಯಾಗುವ ಅವಕಾಶವನ್ನು ಕರುಣಿಸಿದರು. ಸರ್ವೋಚ್ಚ ಭಗವಂತನಾದ ಶ್ರೀ ಬಲರಾಮನು ಕರುಣೆಯ ಸಾಗರನಾಗಿದ್ದಾನೆ ಮತ್ತು ಕೃಷ್ಣನಿಗೆ ಶುದ್ಧ ಭಕ್ತಿಯ ಸೇವೆಯನ್ನು ನೀಡುತ್ತಾನೆ; ಅವರು ಈ ಬಾರಿ ನಿತ್ಯಾನಂದ ಎನ್ನುವ ಹೆಸರಿನೊಂದಿಗೆ ಮತ್ತೆ ಅವತರಿಸಿದರು. ಸ್ವರ್ಗವಾಸಿಗಳು ಈ ಘಟನೆಯನ್ನು ರಹಸ್ಯವಾಗಿ ಆಚರಿಸಿ ಸಂತೋಷ ಮತ್ತು ಹೊಗಳಿಕೆಯ ಭಾರೀ ಧ್ವನಿಗಳ ಜೊತೆ ಹೂಗಳನ್ನು ಸುರಿಸಿದರು. ರಾಢದೇಶದಲ್ಲಿ ಭಗವಾನ್ ನಿತ್ಯಾನಂದರ ಅವತಾರ ಕ್ರಮೇಣ ಆ ಜಿಲ್ಲೆಯ ಅದೃಷ್ಟವನ್ನು ಎಲ್ಲ ರೀತಿಯಲ್ಲೂ ಹೆಚ್ಚಿಸಿತು. ಅವನತಿಗೊಂಡ ಆತ್ಮಗಳ ವಿಮೋಚನೆಗಾಗಿ ಅವತರಿಸಿದ ದೇವೋತ್ತಮ ಪರಮಪುರುಷನು ಅನಂತರ ಅವಧೂತನ ರೂಪ ಧರಿಸಿ ಎಲ್ಲೆಡೆ ಪ್ರವಾಸ ಮಾಡಿದನು.

ಈ ರೀತಿ, ಭಗವಾನ್ ಅನಂತನು ಅವತರಿಸಿದನು.

(ಮುಂದುವರಿಯುವುದು)
Leave a Reply

Your email address will not be published. Required fields are marked *