Search
Saturday 23 November 2019
  • :
  • :

ಆಧ್ಯಾತ್ಮಿಕ ಭಾಗಲಬ್ಧ

 “ನಾನು ದೊಡ್ಡ ಶ್ರೀಮಂತನಾಗಬೇಕು. ನಾನು ತುಂಬ ಪ್ರಸಿದ್ಧಿ  ಹೊಂದಬೇಕು. ನಾನು ಯಶಸ್ವಿಯಾಗಬೇಕು. ನಾನು ಸಂತುಷ್ಟನಾಗಿರಬೇಕು. ನನಗೆ ಅದು ಬೇಕು! ನನಗೆ ಇದೂ ಬೇಕು!!” ಈ ಎಲ್ಲ ಬೇಕುಗಳನ್ನೂ ನಾವು ಹೇಗೆ ಈಡೇರಿಸಲು ಸಾಧ್ಯ? ಅಥವಾ ಇನ್ನಷ್ಟು ನಿಖರವಾಗಿ ಕೇಳುವುದಾದರೆ – ಬೇರೆಯವರಿಗಿಂತಲೂ ಉತ್ತಮ ರೀತಿಯಲ್ಲಿ ನಮ್ಮ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳುವಂತೆ ನಮಗೆ ಸಹಾಯವಾಗುವಂಥ ಅಂಶವೇನು?

ಈ ದಿಸೆಯಲ್ಲಿ ನಮ್ಮ ತಲೆಗೆ ಥಟ್ಟನೆ ಹೊಳೆಯುವ ಅಂಶವೆಂದರೆ, “ಬುದ್ಧಿಶಕ್ತಿ.” ಬುದ್ಧಿಶಕ್ತಿಯು ಒಂದು ಸಾಮರ್ಥ್ಯವಾಗಿದ್ದು, ಹೊಸ ಮತ್ತು ಬದಲಾಗುತ್ತಿರುವ ಸ್ಥಿತಿಗಳಿಗೆ ಅರ್ಥಪೂರ್ಣ ರೀತಿಯಲ್ಲಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಗ್ರಹಿಕೆ, ಕಲಿಯುವಿಕೆ, ಅಮೂರ್ತ ವಿಚಾರ ಮಾಡುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಇದು ಪ್ರದರ್ಶಿಸುತ್ತದೆ. ಸ್ವಂತದ ಪರಿಸರದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವುದು, ಬುದ್ಧಿವಂತಿಕೆಯಿಂದ ವಿಚಾರ ಮಾಡುವುದು, ಮತ್ತು ಉದ್ದೇಶ ಸಹಿತ ಸಮಯೋಚಿತವಾದ ಕೆಲಸ ಇವೆಲ್ಲವೂ ಬುದ್ಧಿಶಕ್ತಿಯನ್ನು ಸಂಪೂರ್ಣ ಸಾಮರ್ಥ್ಯವೆಂದು ಸಾಬೀತು ಪಡಿಸುತ್ತವೆ. ಸರಳವಾದ ಶಬ್ಧಗಳಲ್ಲಿ ಬುದ್ಧಿಶಕ್ತಿಯೆಂದರೆ: ಸರಿಯಾದದ್ದನ್ನು, ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳದಲ್ಲಿ ಮಾಡುವುದು.

ನಾವು ನಮ್ಮ ಬುದ್ಧಿಶಕ್ತಿಯನ್ನು ಹೇಗೆ ಅಳೆಯಬೇಕು ಮತ್ತು ಸುಧಾರಿಸಬೇಕು? ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ, ಮನೋವಿಜ್ಞಾನಿಗಳು ಬುದ್ಧಿಶಕ್ತಿಯನ್ನು ಅಳೆಯುವ ಮಾರ್ಗಗಳು ಮತ್ತು ಉಪಾಯಗಳನ್ನು ಶೋಧಿಸಿದಾಗ ಬುದ್ಧಿಶಕ್ತಿಯ ವಿವಿಧ  ಆಯಾಮಗಳ ಬಗ್ಗೆ ತಿಳುವಳಿಕೆಯಲ್ಲಿ ಪ್ರಗತಿಶೀಲ ಅಭಿವೃದ್ಧಿಯಾಯಿತು.

ಬುದ್ಧಿಶಕ್ತಿಯ ಭಾಗಲಬ್ಧ

ನಿಜದಲ್ಲಿ, ಬುದ್ಧಿಶಕ್ತಿಯ ಭಾಗಲಬ್ಧದ ಪರೀಕ್ಷೆಯ ಮೂಲಕ ಬುದ್ಧಿಶಕ್ತಿಯ ಮಟ್ಟ ಕಡಮೆಯಿರುವ ಜನರನ್ನು, ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರಿಗೆ ಪೂರಕವಾದ ಶೈಕ್ಷಣಿಕ ಲಾಭ ಒದಗಿಸಲಾಗುತ್ತಿತ್ತು. ಮನುಷ್ಯನು ಒಂದು “ಬುದ್ಧಿವಂತ ಪ್ರಾಣಿ” ಎಂಬ ಅರಿಸ್ಟಾಟಲ್‌ನ ಹೇಳಿಕೆಯೇ ಬುದ್ಧಿಶಕ್ತಿ ಭಾಗಲಬ್ಧದ ಬಗೆಗಿನ ಆಸಕ್ತಿ ವಿಪರೀತಗೊಳ್ಳಲು ಕಾರಣವಾಯಿತು. ಹೀಗಾಗಿ, ಈಗಾಗಲೇ ಬುದ್ಧಿವಂತಿಕೆ ಇರುವ ಜನರು ಸಹ ಅದನ್ನು ಇಮ್ಮಡಿಗೊಳಿಸಿಕೊಳ್ಳಲು ಬುದ್ಧಿಶಕ್ತಿ ಭಾಗಲಬ್ಧದ ಮೊರೆ ಹೋಗುವಂತಾಯಿತು.

ಬುದ್ಧಿಶಕ್ತಿಯ ಭಾಗಲಬ್ಧವು ಬುದ್ಧಿಶಕ್ತಿಯನ್ನು ಅಳೆಯುವ ಏಕೈಕ ಅಳತೆಯ ಮಾನವೆಂದು ನಾವೆಲ್ಲರೂ ಕಣ್ಣುಮುಚ್ಚಿ ನಂಬಿದ್ದೇವೆ. ಹೆಚ್ಚಿನ ಬುದ್ಧಿಶಕ್ತಿಮಟ್ಟವನ್ನು ಹೊಂದಿರುವ ಜನರು ಹೊರನೋಟಕ್ಕೆ ಉನ್ನತ ಶಿಕ್ಷಣ ಹೊಂದಿರಬಹುದು, ದೊಡ್ಡ ವರಮಾನಹೊಂದಿರಬಹುದು, ಉದ್ಯೋಗದಲ್ಲಿ ಉತ್ತಮ ಸಾಧನೆ ಮಾಡಿರಬಹುದು, ಕಡಮೆ ಅಪರಾಧಗಳನ್ನು ಎಸಗಬಹುದು ಮತ್ತು ಉತ್ತಮ ಆರೋಗ್ಯ ಹೊಂದಿರಬಹುದು.  ಆದರೆ, ಬುದ್ಧಿಶಕ್ತಿಯ ಭಾಗಲಬ್ಧವನ್ನು ಸಂತೋಷದ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಬರುವಂತೆ ವಿನ್ಯಾಸಗೊಳಿಸಿಲ್ಲವೆಂಬುದನ್ನು ಗಮನಿಸಬೇಕು.

ಬುದ್ಧಿಶಕ್ತಿಯ ಭಾಗಲಬ್ಧವನ್ನು ಹೆಚ್ಚಿಸುವುದು :-

ಡಾ. ಮ್ಯಾಕ್‌ಡೇನಿಯಲ್ಸ್‌ರವರು ತಮ್ಮ ಸಂಶೋಧನೆಗಳ ಪ್ರಕಾರ, ಬುದ್ಧಿಶಕ್ತಿಯನ್ನು ಯಾವುದೋ ಒಂದು ರಸಪ್ರಶ್ನೆ ಕಾರ್ಯಕ್ರಮ- ದಿಂದಾಗಲೀ ಅಥವಾ ಬುದ್ಧಿಶಕ್ತಿ ಭಾಗಲಬ್ಧದ ಪರೀಕ್ಷೆಯಿಂದಾಗಲೀ ಹೆಚ್ಚಿಸಬಹುದೆಂಬ ಬಯಕೆಯಿಟ್ಟುಕೊಂಡಿದ್ದರೆ, ಅದು ಬರೀ ಭ್ರಮೆ. ಅನೇಕ ಕಾರ್ಯಕ್ರಮಗಳು, ಪುಸ್ತಕಗಳು ಮತ್ತು ಶಿಕ್ಷಕರು ತಮ್ಮ ಹತ್ತಿರ ಬುದ್ಧಿಶಕ್ತಿಯನ್ನು ಸುಧಾರಿಸುವ ಒಂದು ಪ್ರಕಾರದ ಅದ್ಭುತವಾದ ವಿಧಾನವಿದೆ ಎಂದು  ಸಾರಿದರೂ, ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಪ್ರಕಾರ, ಬುದ್ಧಿಶಕ್ತಿಯ ಭಾಗಲಬ್ಧವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ, ನಮ್ಮ ಮೆದುಳನ್ನು ಜಾಸ್ತಿ ಬಳಸಿದಷ್ಟು ಕೆಲವು ಚಟುವಟಿಕೆಗಳಲ್ಲಿ ನಾವು ಸುಧಾರಿಸುತ್ತ ಹೋಗುತ್ತೇವೆ ಅಷ್ಟೆ.

ಈ ಕೆಳಗೆ ನೀಡಲಾಗಿರುವ ಒಂದು ಉದಾಹರಣೆಯು ಬರೀ ಬುದ್ಧಿಶಕ್ತಿ ಭಾಗಲಬ್ಧವನ್ನು ಪೋಷಿಸುವುದು ಪ್ರಮುಖವಾದದ್ದೇ ಎಂಬುದನ್ನು ಕುರಿತು ವಿಶ್ಲೇಷಿಸುತ್ತದೆ.

ಐಐಟಿಯಂತಹ ಬೃಹತ್ ತಂತ್ರಜ್ಞಾನ ಸಂಸ್ಥೆಗಳಲ್ಲಿ , ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಥವಾ ಅತ್ಯುತ್ತಮ ಕೆಲಸ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳ ಪಟ್ಟಿಗಳಿಗಿಂತಲೂ, ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಅನುತ್ತೀರ್ಣರಾಗುವ ಭಯದಿಂದಾಗಿ, ಅಭ್ಯಾಸದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ, ಪಟ್ಟಿಯೇ ಜಾಸ್ತಿ ಉದ್ದವಾಗಿದೆ. ಅಲ್ಲದೇ, ಆ ಪಟ್ಟಿಯು ಇನ್ನೂ ಉದ್ದವಾಗುತ್ತಲೇ ಇವೆ. ಈ ಆತ್ಮಹತ್ಯೆಯ ಪ್ರವೃತ್ತಿ ಎಳೆಯ ಮನಸ್ಸುಗಳಲ್ಲಿ ಬೆಳೆಯಲು ಕಾರಣವಾದರೂ ಏನು? ವಿದ್ಯಾರ್ಥಿಗಳು ತಮ್ಮದೇ ಆದ ಕಾಲ್ಪನಿಕ, ಅವಾಸ್ತವಿಕ, ಪೂರ್ವನಿಯೋಜಿತ ಗುರಿಗಳನ್ನು ಹೊಂದಿರುತ್ತಾರೆ. ಒಂದು ವೇಳೆ ಆ ಗುರಿಗಳನ್ನು ಸಾಸುವಲ್ಲಿ ವಿಫಲರಾದರೆ, ಆತ್ಮಹತ್ಯೆಯಂತಹ ಮಾರಣಾಂತಿಕ ನಿರ್ಧಾರಗಳಿಗೆ ಶರಣಾಗುತ್ತಾರೆ. ಕಾಲೇಜು ಕ್ಯಾಂಪಸ್‌ನಲ್ಲಿ ಉದ್ಯೋಗಕ್ಕಾಗಿ ನಡೆಸುವ ಸಂದರ್ಶನಗಳು, ಮತ್ತು ಇತ್ತೀಚಿನ ಜಾಗತಿಕ ಆರ್ಥಿಕ ಬಿಕ್ಕಟ್ಟಿನಂತಹ ಪರಿಸ್ಥಿತಿಗಳು ವಿದ್ಯಾರ್ಥಿಗಳಲ್ಲಿ ಜುಗುಪ್ಸೆ ಮೂಡಿಸಿ, ಮಾನಸಿಕವಾಗಿ ಅವರನ್ನು ನಿಶ್ಶಕ್ತರನ್ನಾಗಿ ಮಾಡಿ, ಜೀವವನ್ನೇ ಬಲಿಕೊಡುವಂತೆ ಮಾಡುತ್ತವೆ.

ನಾವು ಜೀವನದಲ್ಲಿ ಏನು ಸಾಸುತ್ತೇವೆ ಎಂಬುದನ್ನು ಕುರಿತು ಭವಿಷ್ಯ ನುಡಿಯುವಲ್ಲಿ ಬುದ್ಧಿಶಕ್ತಿ ಭಾಗಲಬ್ಧವು ಅತ್ಯುತ್ತಮ ವಿಧಾನವೇ?

ಮಾನವನ ಸಾಮರ್ಥ್ಯವನ್ನು ಅಳೆಯಲು ಬುದ್ಧಿಶಕ್ತಿಯ ಭಾಗಲಬ್ಧವೇ ಅತ್ಯುತ್ತಮವಾದ ಮಾನದಂಡವೆಂದು ನಂಬುವಂತಹ ಸ್ಥಿತಿ ನಿರ್ಮಿಸಲ್ಪಟ್ಟಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸಂಶೋಧಕರು ನಡೆಸಿದ ಸರ್ವೇಕ್ಷಣೆಗಳ ಪ್ರಕಾರ, ಇದು ನಿಜ ಸಂಗತಿಯಲ್ಲ. ಹಾಗೆ ನೋಡಿದರೆ ಭಾವಾತ್ಮಕ ಭಾಗಲಬ್ಧವು ನಿಮ್ಮ ಯಶಸ್ಸಿನ ಕುರಿತು ಭವಿಷ್ಯ ಹೇಳುವ ಅತ್ಯಂತ ಉತ್ತಮ ವಿಧಾನವಾಗಬಲ್ಲದು. ಪ್ರಸ್ತುತ ಅಧ್ಯಯನಗಳ ಪ್ರಕಾರ ಬುದ್ಧಿಶಕ್ತಿಯ ಭಾಗಲಬ್ಧದಿಂದ ನಮ್ಮ ಬುದ್ಧಿಶಕ್ತಿಯನ್ನು ಸಂಪೂರ್ಣವಾಗಿ ಅಳೆಯಲು ಸಾಧ್ಯವಿಲ್ಲ. ಅದು ನಮ್ಮ ಇಡಿಯಾದ ಬುದ್ಧಿಶಕ್ತಿಯ ಕೇವಲ ಒಂದು ಭಾಗದ ಅಳತೆಯಾಗಿದೆ ಅಷ್ಟೆ. ನಮ್ಮ ಅಭಿವೃದ್ಧಿಯನ್ನು ನೋಡಲು ಭಾವಾತ್ಮಕ ಭಾಗಲಬ್ಧವನ್ನು ಪರಿಗಣಿಸಬೇಕು.

ಭಾವಾತ್ಮಕ ಭಾಗಲಬ್ಧ

ಕ್ರಿ.ಶ. ೧೯೯೦ರ ಮಧ್ಯದಲ್ಲಿ ಅನೇಕ ನರವಿಜ್ಞಾನಿಗಳು ಮತ್ತು ಮನಃಶಾಸ್ತ್ರಜ್ಞರು ಬುದ್ಧಿಶಕ್ತಿಯ ಸಮರ್ಪಕ ಬಳಕೆಗಾಗಿ ಭಾವಾತ್ಮಕ ಶಕ್ತಿಯ ಆವಶ್ಯಕತೆ ಇದೆ ಎಂದು ಸಾಬೀತು ಪಡಿಸಿದರು.

ವಿವಿಧ ಕೈಗಾರಿಕೆಗಳು ಮತ್ತು ಔದ್ಯೋಗಿಕ ಹಂತಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ೧೬೦ ಜನರನ್ನು ಆಯ್ದು ನಡೆಸಿದ ಸಂಶೋಧನೆಯ ಪ್ರಕಾರ, ಕೆಲಸದಲ್ಲಿ ಉತ್ಕೃಷ್ಟತೆಯನ್ನು ಹೆಚ್ಚಿಸಲು ಬರೀ ಬುದ್ಧಿಶಕ್ತಿ ಮತ್ತು ಕೌಶಲ್ಯದಿಂದ ಸಾಧ್ಯವಾಗದು. ಇಲ್ಲಿ ಭಾವಾತ್ಮಕ ಬುದ್ಧಿಶಕ್ತಿಯು ಅವುಗಳಿಗಿಂತ ಎರಡು ಪಟ್ಟು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು ಕಂಡುಬಂದಿದೆ.

ಭಾವಾತ್ಮಕ ಬುದ್ಧಿ ಶಕ್ತಿ ಎಂದರೇನು? ಸರಳವಾದ ಶಬ್ದಗಳಲ್ಲಿ, ಭಾವಾತ್ಮಕ ಸಾಮರ್ಥ್ಯವೆಂದರೆ, “ತನ್ನ ಮತ್ತು ಇತರರ ಅನಿಸಿಕೆಗಳು ಮತ್ತು ಭಾವನೆಗಳ ಬಗ್ಗೆ ಕಾಳಜಿ ವಹಿಸಿ, ಅವುಗಳಲ್ಲಿ ವ್ಯತ್ಯಾಸ ಕಂಡುಹಿಡಿದು, ಆ ಮಾಹಿತಿಯ ಸಹಾಯದಿಂದ ತನ್ನ ವಿಚಾರ ಮತ್ತು ಚಟುವಟಿಕೆಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದಾಗಿದೆ.”

ಭಾವಾತ್ಮಕ ಭಾಗಲಬ್ಧದ ಆವಶ್ಯಕತೆ :-

ಇತ್ತೀಚೆಗೆ ನಡೆಸಿದ ಅಧ್ಯಯನಗಳ ಪ್ರಕಾರ, ೧೨೦ರಷ್ಟು ಬುದ್ಧಿಶಕ್ತಿ ಭಾಗಲಬ್ಧ ಹೊಂದಿರುವ, ನಕಾರಾತ್ಮಕ ಸ್ವಭಾವವುಳ್ಳ ವ್ಯಕ್ತಿಗಿಂತ, ೧೦೦ರಷ್ಟು ಬುದ್ಧಿಶಕ್ತಿ ಭಾಗಲಬ್ಧ ಹೊಂದಿರುವ ಆಶಾವಾದಿ ಸ್ವಭಾವದ ವ್ಯಕ್ತಿಯು ಹೆಚ್ಚು ಯಶಸ್ಸು ಗಳಿಸುತ್ತಾನೆಂದು ಕಂಡುಬಂದಿದೆ.

ಭಾವಾತ್ಮಕ ಭಾಗಲಬ್ಧದ ಸಹಾಯದಿಂದ ನಾವು ವಿಭಿನ್ನ ಭಾವನೆಗಳನ್ನು ಅರಿಯುತ್ತೇವೆ ಮತ್ತು ವಿಶ್ಲೇಷಿಸುತ್ತೇವೆ. ಇದೆಲ್ಲಕ್ಕೂ ಮಿಗಿಲಾಗಿ, ಅವುಗಳ ಸದುಪಯೋಗ ಮಾಡಿಕೊಂಡು, ನಮ್ಮ ಸಮಗ್ರ ವ್ಯಕ್ತಿತ್ವದ ಅಭಿವೃದ್ಧಿ ಮತ್ತು ಯಶಸ್ಸಿನತ್ತ ದಾಪುಗಾಲು ಹಾಕಲು ಸಾಧ್ಯವಾಗುತ್ತದೆ.

ಭಾವಾತ್ಮಕ ಭಾಗಲಬ್ಧದಲ್ಲಿ ಸುಧಾರಣೆ :-

ಈ ಹಂತವು ಬಹು ಮುಖ್ಯವಾದದ್ದು. ಇಲ್ಲಿ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಯಶಸ್ವಿ ವಿಧಾನವನ್ನು ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ. ಈ ವಿಧಾನವನ್ನು “೯೦/೧೦ರ ಸಿದ್ಧಾಂತ” ಎನ್ನುತ್ತಾರೆ.

*   ಈ ೯೦/೧೦ರ ಸಿದ್ಧಾಂತವೆಂದರೇನು?

ನಿಮ್ಮ ಜೀವನದ ಶೇ.೧೦ ರಷ್ಟು ಭಾಗವು, ನಿಮ್ಮ ಜೊತೆ ಏನು ಸಂಭವಿಸುವುದು ಎಂಬುದರಿಂದ ಕೂಡಿದೆ. ಉಳಿದ ಶೇ.೯೦ರಷ್ಟು ಭಾಗವು, ಶೇ. ೧೦ಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ.

*   ಹೀಗೆಂದರೇನು?

“ನಮ್ಮೊಂದಿಗೆ ಏನು ಸಂಭವಿಸಲಿದೆ” ಎಂಬ ಶೇ.೧೦ರಷ್ಟು ಭಾಗದ ಮೇಲೆ ನಮ್ಮ ಯಾವ ನಿಯಂತ್ರಣವೂ ಇಲ್ಲ.

*   ಹೇಗೆ?

ನಿಮ್ಮ ಪ್ರತಿಕ್ರಿಯೆಯಿಂದ.

ನೀವು ಆಫೀಸಿಗೆ ಹೋಗಲು ಮತ್ತು ನಿಮ್ಮ ಮಗಳು ಶಾಲೆಗೆ ಹೋಗಲು ತಯಾರಾಗಿ, ಅನಂತರ ನಿಮ್ಮ ಕುಟುಂಬದೊಂದಿಗೆ ಉಪಹಾರ ತೆಗೆದುಕೊಳ್ಳುತ್ತಿರುತ್ತೀರಿ. ನಿಮ್ಮ ಮಗಳು ಆಕಸ್ಮಿಕವಾಗಿ ಕಾಫಿಯನ್ನು ನಿಮ್ಮ ಅಂಗಿಯ ಮೇಲೆ ಚೆಲ್ಲುತ್ತಾಳೆ. ಈಗ ನಡೆದ ಘಟನೆಯ ಮೇಲೆ ನಿಮ್ಮ ನಿಯಂತ್ರಣವಿರಲಿಲ್ಲ. ಮುಂದೆ ಏನು ನಡೆಯುವುದು ಅದು ನಿಮ್ಮ ಪ್ರತಿಕ್ರಿಯೆಯಿಂದ ನಿರ್ಧರಿತವಾಗುತ್ತದೆ. ನಿಮ್ಮ ಮಗಳು ಕಾಫಿಯನ್ನು ಚೆಲ್ಲಿದಾಗ, ನೀವು ಕಠೋರ ಶಬ್ದಗಳನ್ನು ಬಳಸಿ ಅವಳನ್ನು ಬಯ್ದು ಶಪಿಸುತ್ತೀರಿ. ಅವಳು ಅಳುವುದಕ್ಕೆ ಪ್ರಾರಂಭಿಸುತ್ತಾಳೆ. ಇದಾದ ಮೇಲೆ, ನೀವು ನಿಮ್ಮ ಹೆಂಡತಿಯತ್ತ ತಿರುಗಿ, ಲೋಟವನ್ನು ಮೇಜಿನ ತುದಿಯಲ್ಲಿಟ್ಟದ್ದಕ್ಕಾಗಿ ಅವಳನ್ನು ಟೀಕಿಸುತ್ತೀರಿ. ಶಬ್ದಗಳ ಚಿಕ್ಕ ಯುದ್ಧವೇ ನಡೆಯುತ್ತದೆ. ನೀವು ಸರ್ರನೆ ಮೇಲಿನ ಕೋಣೆಗೆ ಹೋಗಿ, ನಿಮ್ಮ ಅಂಗಿಯನ್ನು ಬದಲಾಯಿಸುತ್ತೀರಿ. ಕೆಳಗಡೆ, ಬರಿ ಕಣ್ಣೀರಿಡುವುದರಲ್ಲಿಯೇ ನಿರತಳಾಗಿರುವ ನಿಮ್ಮ ಮಗಳು, ಉಪಹಾರವನ್ನು ತೀರಿಸಲು ತಡಮಾಡುವಳಲ್ಲದೆ, ಶಾಲೆಗಾಗಿ ತಯಾರಾಗಲು ತಡವಾಗಿ ಹೋಗುತ್ತದೆ.  ಹಾಗಾಗಿ, ಅವಳ ಶಾಲಾ ವಾಹನವು ತಪ್ಪಿ ಹೋಗುತ್ತದೆ.

ನಿಮ್ಮ ಹೆಂಡತಿಯು ತತ್‌ಕ್ಷಣವೇ ಕೆಲಸಕ್ಕೆ ಹೋಗಬೇಕಾಗಿದೆ. ನೀವು ರಭಸದಿಂದ ಕಾರಿನೆಡೆಗೆ ಸಾಗುತ್ತೀರಿ ಮತ್ತು ನಿಮ್ಮ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತೀರಿ. ಈಗಾಗಲೇ ತಡವಾಗಿರುವುದರಿಂದ, ಪ್ರತಿಘಂಟೆಗೆ ೩೦ಮೈಲಿ ವೇಗಮಿತಿಯಿರುವ ರಸ್ತೆಯಲ್ಲಿ ನೀವು ಕಾರನ್ನು ಪ್ರತಿಘಂಟೆಗೆ ೪೦ ಮೈಲಿ ವೇಗದಲ್ಲಿ ಓಡಿಸುತ್ತೀರಿ. ಇಷ್ಟಾದರೂ, ೧೦೦ ರೂಪಾಯಿಗಳಷ್ಟು ಟ್ರಾಫಿಕ್ ದಂಡ ಕಟ್ಟಿ, ೧೫ ನಿಮಿಷ ತಡವಾಗಿ ಸ್ಕೂಲಿಗೆ ಬರುತ್ತೀರಿ. ನಿಮ್ಮ ಮಗಳು ಸರಿಯಾಗಿ ಬೀಳ್ಕೊಡದೆಯೇ ದಡಬಡಾಯಿಸಿ ಶಾಲೆಯನ್ನು ಪ್ರವೇಶಿಸುತ್ತಾಳೆ. ಇತ್ತ ಕಛೇರಿಗೆ ೨೦ ನಿಮಿಷ ತಡವಾಗಿ ಬಂದ ನೀವು, ನಿಮ್ಮ ಕಾಗದ ಪತ್ರಗಳ ಪೆಟ್ಟಿಗೆಯನ್ನು ಮರೆತುಬಂದದ್ದು ತಿಳಿಯುತ್ತದೆ. ನಿಮ್ಮ ದಿನದ ಪ್ರಾರಂಭವೇ ಭಯಾನಕವಾಗಿದೆ. ಹಾಗೆಯೇ, ಮುಂದುವರಿದಂತೆಲ್ಲಾ ಅದು ಇನ್ನಷ್ಟು ಕೆಡುತ್ತಿದೆ ಎಂದೆನಿಸುತ್ತದೆ. ಯಾವಾಗಲಾದರೂ ಮನೆಗೆ ಹೋದೆನೋ ಅಂತ ಎದುರು ನೋಡುತ್ತೀರಿ.

ನೀವು ಮನೆಗೆ ಮರಳಿದ ಅನಂತರ, ನಿಮ್ಮ ಹೆಂಡತಿ ಮತ್ತು ಮಗಳೊಂದಿಗಿನ ನಿಮ್ಮ ಸಂಬಂಧದಲ್ಲಿ ಸಣ್ಣ ಬಿರುಕುಂಟಾಗಿರುವುದು ನಿಮ್ಮ ಅರಿವಿಗೆ ಬರುತ್ತದೆ.

ಏಕೆ?

ನೀವು ಪ್ರತಿಕ್ರಿಯಿಸಿದ ರೀತಿಯಿಂದಾಗಿ.
ನಿಮ್ಮ ಇಡೀ ದಿನ ಕೆಟ್ಟದಾಗಿ ಕಳೆಯಲು ಕಾರಣವೇನು?
ಅ. ಕಾಫಿಯಿಂದಾಗಿ ಹಾಗಾಯಿತೆ?
ಬ. ನಿಮ್ಮ ಮಗಳಿಂದ ಹಾಗಾಯಿತೆ ?
ಕ. ಟ್ರಾಫಿಕ್ ಪೊಲೀಸ್‌ನಿಂದಾಗಿ ಹಾಗಾಯಿತೆ?
ಡ. ನಿಮ್ಮಿಂದಾಗಿ ಹಾಗಾಯಿತೆ?

ಇದಕ್ಕೆ ಸರಿಯಾದ ಉತ್ತರ ಡ.

ಕಾಫಿ ಲೋಟದೊಂದಿಗೆ ಏನು ಸಂಭವಿಸಿತೋ, ಅದರ ಮೇಲೆ ನಿಮ್ಮ ನಿಯಂತ್ರಣ ಖಂಡಿತವಾಗಿಯೂ ಇರಲಿಲ್ಲ. ಆದರೆ, ಆ ಕಾಫಿ ಘಟನೆಯ ಅನಂತರ ೫ ಸೆಕೆಂಡಿನ ಸಮಯದಲ್ಲಿ ನೀವು ಪ್ರತಿಕ್ರಿಯಿಸಿದ ರೀತಿಯಿಂದಾಗಿಯೇ, ನಿಮ್ಮ ಇಡೀ ದಿನ ಕೆಟ್ಟದಾಗಿ ಕಳೆಯಿತು.

ನೀವು ಏನು ಮಾಡಬಹುದಾಗಿತ್ತು ಮತ್ತು ಏನು ಮಾಡಬೇಕಾಗಿತ್ತೆಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಕಾಫಿ ನಿಮ್ಮ ಮೇಲೆ ಚೆಲ್ಲುತ್ತದೆ. ಇನ್ನೇನು ನಿಮ್ಮ ಮಗಳು ಅಳುವುದರಲ್ಲಿದ್ದಾಳೆ. ಆಗ ನೀವು ಸೌಮ್ಯವಾಗಿ ಅವಳಿಗೆ ಹೇಳಿ, “ಹೋಗಲಿ ಬಿಡು ಚಿನ್ನ, ಇನ್ನು ಮುಂದೆ ನೀನು ಸ್ವಲ್ಪ ಹೆಚ್ಚು ಕಾಳಜಿ ವಹಿಸು.” ಅನಂತರ, ನೀವು ಟವಲನ್ನು ತೆಗೆದುಕೊಂಡು ಅವಸರದಿಂದ ಮೇಲ್ಗಡೆಯ ಕೋಣೆಯತ್ತ ಹೋಗುತ್ತೀರಿ. ಒಂದು ಹೊಸ ಅಂಗಿಯನ್ನು ಧರಿಸಿಕೊಂಡು, ನಿಮ್ಮ ಪೆಟ್ಟಿಗೆ ತೆಗೆದುಕೊಂಡು ಕೆಳಗಡೆ ಬರುತ್ತೀರಿ. ನಿಮ್ಮ ಮಗಳು ಶಾಲಾ ವಾಹನದಲ್ಲಿ ಹತ್ತುವುದನ್ನು ಕಿಟಕಿಯಿಂದ ನೋಡುತ್ತೀರಿ. ವಾಹನ ಬಿಟ್ಟ  ಅನಂತರ ನಿಮ್ಮ ಮಗಳು ನಿಮ್ಮತ್ತ ತಿರುಗಿ ಕೈಬೀಸಿ ಬೀಳ್ಕೊಡುತ್ತಾಳೆ. ನೀವು ಕಛೇರಿಗೆ ೫ ನಿಮಿಷ ಬೇಗ ಬಂದು, ಹರ್ಷದಿಂದ ನಿಮ್ಮ ಸಿಬ್ಬಂದಿಯವರನ್ನು ಭೇಟಿಯಾಗುತ್ತೀರಿ.

ಇಲ್ಲಿ ಕಂಡುಬರುವ ವ್ಯತ್ಯಾಸವನ್ನು ಗಮನಿಸಿದಿರಾ?

ಎರಡೂ ಬೇರೆ ಬೇರೆ ಸನ್ನಿವೇಶಗಳು. ಎರಡೂ ಸನ್ನಿವೇಶಗಳು ಒಂದೇ ರೀತಿಯಾಗಿ ಪ್ರಾರಂಭವಾದರೂ, ಅವುಗಳ ಮುಕ್ತಾಯ ಮಾತ್ರ ಬೇರೆ ರೀತಿಯದ್ದಾಗಿತ್ತು.

ಏಕೆ?

ನೀವು ಪ್ರತಿಕ್ರಿಯಿಸಿದ ರೀತಿಯಿಂದಾಗಿ.

ಮೂರು “ಭಾಗಲಬ್ಧ”ಗಳು

ನಮ್ಮಲ್ಲಿ ಹೆಚ್ಚು ಜನರಿಗೆ ಮೊದಲೆರಡು ಭಾಗಲಬ್ಧಗಳ  ಅಂದರೆ ಬುದ್ಧಿಶಕ್ತಿ ಮತ್ತು ಭಾವಾತ್ಮಕ ಭಾಗಲಬ್ಧಗಳ ಅರಿವಿದೆ.  ಆದರೆ ಮೂರನೇ ಭಾಗಲಬ್ಧ ಅಂದರೆ, ಆಧ್ಯಾತ್ಮಿಕ ಭಾಗಲಬ್ಧವು ಅತ್ಯಂತ ಮೂಲಭೂತ ಪ್ರಶ್ನೆಗಳೊಂದಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ನೇರವಾಗಿ ವ್ಯವಹರಿಸುವ ಸಾಮರ್ಥ್ಯವಾಗಿದೆ. ಅಲ್ಲದೆ, ಒಬ್ಬ ವ್ಯಕ್ತಿಯು ಇತರ ಎರಡು ಭಾಗಲಬ್ಧಗಳ ವಿಷಯದಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಸನ್ನದ್ಧವಾಗಿಸುತ್ತದೆ. ಈ ಪ್ರಕ್ರಿಯೆಯು, ಒಂದು ಗಿಡಕ್ಕೆ ನೀರು ಉಣಿಸಿದ ಹಾಗೆಯೆ. ಒಂದು ವೇಳೆ ಒಬ್ಬ ವ್ಯಕ್ತಿಯು ಪ್ರತ್ಯೇಕವಾಗಿ ಎಲೆಗಳಿಗೆ, ಹೂವುಗಳಿಗೆ, ಹಣ್ಣು ಅಥವಾ ಕೊಂಬೆಗಳಿಗೆ ನೀರು ಹಾಕ ಹತ್ತಿದರೆ ಅದು ಸಂಪೂರ್ಣವಾದ ಅಜ್ಞಾನ ಪ್ರದರ್ಶಿಸಿದಂತೆ. ಇದಕ್ಕೆ ಬದಲಾಗಿ, ವ್ಯಕ್ತಿಯು ನೇರವಾಗಿ ಆ ಗಿಡದ ಬೇರುಗಳಿಗೆ ನೀರು ಹಾಕಿದರೆ, ಗಿಡವನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಭಾಗಲಬ್ಧದ ಅಭ್ಯಾಸ ಮತ್ತು ಅಳವಡಣೆಯು ಆ ಗಿಡದ ಬೇರುಗಳಿಗೆ ನೀರು ಹಾಕಿದಂತೆಯೇ. ಇಲ್ಲಿ ಉಳಿದೆರಡು ಭಾಗಲಬ್ಧಗಳನ್ನು ಪೋಷಿಸಲು ಬೇರೆಯಾಗಿ ಪ್ರಯತ್ನ ಮಾಡುವ ಆವಶ್ಯಕತೆಯಿಲ್ಲ. ಗಿಡದ ಎಲೆಗಳು ಮತ್ತು ಕೊಂಬೆಗಳು ಹೇಗೆ ತಾವಾಗಿಯೇ ಪೋಷಿಸಲ್ಪಡುತ್ತವೆಯೋ, ಅದೇ ರೀತಿ ಅವುಗಳೂ ಬೆಳೆಯುತ್ತವೆ.

ಪ್ರಭುಪಾದರು ಹೇಳುವಂತೆ, ಆಧ್ಯಾತ್ಮಿಕ eನದಿಂದಾಗಿಯೇ ನಾವು ಪ್ರಾಣಿಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತೇವೆ. ನಾಯಿ ಮತ್ತು ಬೆಕ್ಕುಗಳಲ್ಲಿ ತರ್ಕಿಸುವ ಶಕ್ತಿ (ಬುದ್ಧಿಶಕ್ತಿ ಭಾಗಲಬ್ಧ) ಇರುತ್ತದೆ. ಒಂದು ವೇಳೆ ನಾಯಿಯು ನಿಮ್ಮ ಹತ್ತಿರ ಬಂದಾಗ ನೀವು ಅದಕ್ಕೆ “ಹಟ್!” ಎಂದು ಬಿಟ್ಟರೆ, ಅದಕ್ಕೆ ತಿಳಿಯುತ್ತದೆ. ಅಂದರೆ, ನಿಮಗೆ ಅದರ ಆವಶ್ಯಕತೆಯಿಲ್ಲ ಎಂಬುದು ಅದಕ್ಕೆ ಅರಿವಾಗುತ್ತದೆ. ಹಾಗೆ ನೋಡಿದರೆ, ಕಾಡುಪ್ರಾಣಿಗಳಿಗೂ ತಾರ್ಕಿಕ ಶಕ್ತಿ ಇರುತ್ತದೆ. ಹಾಗಾದರೆ ಮನುಷ್ಯರಲ್ಲಿರುವ ತಾರ್ಕಿಕ ಶಕ್ತಿಯ ಬಗ್ಗೆ ಅಂಥದ್ದೇನು ವಿಶೇಷ?

ನಾಯಿಗಳಲ್ಲಿಯೂ, ಭಾವನೆ (ಭಾವಾತ್ಮಕ ಭಾಗಲಬ್ಧ) ಗಳಿರುತ್ತವೆ. ಉದಾಹರಣೆಗೆ, ಸಿಟ್ಟು (ಬೊಗಳುವುದು ಮತ್ತು ಕಚ್ಚುವುದು), ಸ್ನೇಹಪರತೆ (ಬಾಲ ಅಲ್ಲಾಡಿಸುವುದು). ಅಲ್ಲದೇ ಬೇರೆಯವರ ಭಾವನೆಗಳನ್ನು ಅವು ಚೆನ್ನಾಗಿ ಅರಿತುಕೊಳ್ಳುತ್ತವೆ. ಆದರೆ, ಒಂದು ನಾಯಿಗೆ ಆಧ್ಯಾತ್ಮಿಕ ಭಾಗಲಬ್ಧ ಎಂಬ ಅತ್ತ್ಯುತ್ಕೃಷ್ಟ ಭಾಗಲಬ್ಧವನ್ನು ತಿಳಿಯುವುದು ಸಾಧ್ಯವಿಲ್ಲ. ಅದನ್ನು ಅರಿಯುವ ಕ್ಷಮತೆ ಕೇವಲ ಮಾನವರಲ್ಲಿ ಮಾತ್ರವಿದೆ. ಆದರೆ, ದುರದೃಷ್ಟವಶಾತ್, ಆಧುನಿಕ ಶಿಕ್ಷಣದಲ್ಲಿ ಅದನ್ನು ಅಳವಡಿಸಲಾಗಿಲ್ಲ. ಹೀಗಾಗಿ ಒಂದು “ಪಶುಮಾದರಿ”ಯ ಶಿಕ್ಷಣ ವ್ಯವಸ್ಥೆಯ ಸೃಷ್ಟಿಯಾದಂತಾಗಿದೆ.

ಮಹೋನ್ನತಿಯತ್ತ ಪಯಣ

ಬೀಟಲ್ಸ್ ಎಂಬ ಜಗತ್ಪ್ರಸಿದ್ಧ ಗಾಯನ ತಂಡದ (ಪಾಪ್‌ಸಂಗೀತ) ಜಾರ್ಜ್ ಹ್ಯಾರಿಸನ್ ಹೀಗೆ ಹೇಳಿದ್ದಾರೆ, “ನಾನು ಯಶಸ್ಸಿನ ಶೃಂಗವನ್ನನುಭವಿಸಿದ್ದು, ನಾವೆಲ್ಲರೂ ನಮ್ಮ ಹಾಡುಗಳಿಂದ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿ, ಯಾರೂ ಗಳಿಸದಷ್ಟು ಯಶಸ್ಸನ್ನು ಗಳಿಸಿ ಪ್ರಸಿದ್ಧಿಯ ಔನ್ನತ್ಯವನ್ನು ತಲಪಿದಾಗ, ಆ ಯಶಸ್ಸು ಒಂದು ಬೃಹತ್ ಗೋಡೆಯ ಮೇಲೆ ತಲಪಿದಂತಿತ್ತು. ಅಲ್ಲಿಗೆ ತಲಪಿದ ಅನಂತರ, ಬೇರೆ ಆಯಾಮವೊಂದನ್ನು ಕಂಡು, ಜೀವನದ ಆ ಕಡೆಗೆ ಭೌತಿಕತೆಗಿಂತ ಹೆಚ್ಚಿನದು ಸಾಕಷ್ಟಿದೆ ಎನಿಸಿತು. ಆಗ ಈ ನನ್ನ ಮನದಾಳದ ಮಾತನ್ನು ಹಂಚಿಕೊಳ್ಳುವುದು ನನ್ನ ಕರ್ತವ್ಯವೆನಿಸಿತು, ‘ಓಹ್, ಸರಿ, ನೀವು ಶ್ರೀಮಂತರಾಗಿರಬೇಕು ಮತ್ತು ಪ್ರಸಿದ್ಧಿ ಹೊಂದಬೇಕು ಎನ್ನುವುದೇ ನಿಮ್ಮ ಅಗತ್ಯತೆಯೆಂದು ನೀವು ಯೋಚಿಸುತ್ತಿರಬಹುದು. ಆದರೆ ನಿಮಗೆ ಬೇಕಾಗಿರುವುದು ಅದಲ್ಲ.’ ಹೀಗೆ ನಾನು ನನ್ನ ಆಧ್ಯಾತ್ಮಿಕ ಪಯಣ ಪ್ರಾರಂಭಿಸಿದೆ.”ಈ ಮೂರು ಭಾಗಲಬ್ಧಗಳು ನಮ್ಮ ನಿತ್ಯ ಜೀವನದಲ್ಲಿ ಎಷ್ಟು ಪ್ರಮುಖವಾಗಿವೆ ಎಂಬುದನ್ನು ಸ್ಪಷ್ಟಗೊಳಿಸಲು ಏಣಿ ಹತ್ತುವ ಉದಾಹರಣೆಯೊಂದನ್ನು ವಿಶ್ಲೇಷಿಸೋಣ. ನಾವು ಮೊದಲು ಏಣಿಯ ಉದ್ದ, ಅದರ ಬಾಗುವಿಕೆಯ ದಿಕ್ಕು, ಅದರ ಮೆಟ್ಟಿಲುಗಳ ನಡುವಿನ ಸ್ಥಳಾವಕಾಶ, ಇತ್ಯಾದಿಗಳನ್ನು ನಿರ್ಧರಿಸುತ್ತೇವೆ. ಈ ರೀತಿಯ ವಿಶ್ಲೇಷಣೆಗಾಗಿ ನಾವು ನಮ್ಮ ವಿಶ್ಲೇಷಣಾ ಬುದ್ಧಿಶಕ್ತಿಯನ್ನು ಅಂದರೆ ಬುದ್ಧಿಶಕ್ತಿ ಭಾಗಲಬ್ಧವನ್ನು ಬಳಸುತ್ತೇವೆ. ಅನಂತರ ನಾವು ಭಾವಾತ್ಮಕ ಭಾಗಲಬ್ಧವನ್ನು ಬಳಸಿಕೊಂಡು, ನಮ್ಮಲ್ಲಿರುವ ಭಯವನ್ನು ತೊಡೆದು ಹಾಕಿ, “ಹೌದು! ಇದನ್ನು ನಾನು ಮಾಡಬಲ್ಲೆ!!” ಎಂಬ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೆ. ಭಾವಾತ್ಮಕ ಮತ್ತು ಬುದ್ಧಿಶಕ್ತಿ ಭಾಗಲಬ್ಧಗಳನ್ನು ಬಳಸಿ ನಾವು ಗೋಡೆಯನ್ನು ಹತ್ತಬಹುದಾಗಿದೆ.

ಏಣಿಯ ಮೂಲಕ ಗೋಡೆಯನ್ನೇರುವ ಮುಂಚೆ, ನಾವು ಕೆಲವು ಅತ್ಯಂತ ಮೂಲಭೂತವಾದ ಪ್ರಶ್ನೆಗಳನ್ನು ಕೇಳುವುದನ್ನೇ ಮರೆತುಬಿಡುತ್ತೇವೆ. ಆ ಪ್ರಶ್ನೆಗಳೆಂದರೆ: “ನಾನೇಕೆ ಗೋಡೆಯನ್ನು ಹತ್ತಬೇಕು?” “ನಾನು ಯಾವ ಗೋಡೆಯನ್ನು ಹತ್ತಬೇಕು?” “ಈ ಗೋಡೆಯನ್ನು ಹತ್ತುವುದರಿಂದ ನಾನೇನು ಸಾಸುತ್ತೇನೆ?”

ಜೀವನದಲ್ಲಿ ಮೂಲಭೂತ ಪ್ರಶ್ನೆಗಳನ್ನು ಕೇಳಲು ಮತ್ತು ಅವುಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಬೇಕಾಗಿರುವ ಬುದ್ಧಿಶಕ್ತಿಗೆ, ಆಧ್ಯಾತ್ಮಿಕ ಬುದ್ಧಿಶಕ್ತಿ ಅಥವಾ ಆಧ್ಯಾತ್ಮಿಕ ಭಾಗಲಬ್ಧವೆನ್ನುತ್ತಾರೆ. ಅವಶ್ಯವಿರುವಷ್ಟು ಆಧ್ಯಾತ್ಮಿಕ ಭಾಗಲಬ್ಧವಿಲ್ಲದಿದ್ದಲ್ಲಿ, ನಾವು ನಮ್ಮ ಗುರಿಗಳನ್ನು ಮತ್ತು ಆಸೆಗಳನ್ನು (ಇಲ್ಲಿ ಗೋಡೆ ಹತ್ತುವುದು) ಸಾಸಿದ ಅನಂತರವೂ ನಮ್ಮಲ್ಲಿ ಇಂದು ಈ ತರಹದ ಭಾವನೆ  ಮೂಡಬಹುದು: “ಓಹ್!!! ನಾನು ತಪ್ಪು ಗೋಡೆಯನ್ನು ಹತ್ತಿದ್ದೇನೆ.” ಇಂದು ಇದೇ ಪರಿಸ್ಥಿತಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಎದುರಿಸುತ್ತಿದ್ದೇವೆ. ಈ ಉದಾಹರಣೆಯು ನಮ್ಮ ವಿಚಾರವನ್ನು ತೀಕ್ಷ್ಣಗೊಳಿಸಿಕೊಳ್ಳುವುದು ಮತ್ತು ಇಲ್ಲಿಯವರೆಗೆ ನಿರ್ಲಕ್ಷಿಸಲಾಗಿರುವ ಆಧ್ಯಾತ್ಮಿಕ ಭಾಗಲಬ್ಧವನ್ನು ಕುರಿತು ಒತ್ತಿ ಹೇಳುತ್ತದೆ.

ಆತ್ಮಹತ್ಯೆಗೆ ಶರಣಾದ ಐಐಟಿ ವಿದ್ಯಾರ್ಥಿಗಳ ಉದಾಹರಣೆಯನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ಅವರು ವಿವಿಧ ಪ್ರಕಾರದ ಗೊಂದಲದ ಜಾಲದಲ್ಲಿ ಸಿಲುಕಿಕೊಂಡಿದ್ದರು. ಅವರಲ್ಲಿ ಕೆಲವರು ತಪ್ಪು ಗೋಡೆಯನ್ನು (ಬಹುಶಃ ಐಐಟಿಯು ಅವರ ಸಾಮರ್ಥ್ಯಕ್ಕೂ ಮೀರಿದ್ದಾಗಿತ್ತು) ಹತ್ತಿದರು, ತಪ್ಪು ಏಣಿಯನ್ನು ಆಯ್ದುಕೊಂಡರು (ಬಹುಶಃ ಐಐಟಿ ಶಿಕ್ಷಣ ಮುಗಿದ ಮೇಲೆ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಜೀವನ ಎಂದು ತಿಳಿದಿದ್ದರು) ಮತ್ತು ಕೆಲವರಿಗೆ ಗೋಡೆ ಹತ್ತಿದ ಅನಂತರ ಏನು ಮಾಡಬೇಕೆಂದೇ ಗೊತ್ತಿರಲಿಲ್ಲ.

ಆಧ್ಯಾತ್ಮಿಕ ಭಾಗಲಬ್ಧದ ವ್ಯಾಖ್ಯಾನ :

ಆಧ್ಯಾತ್ಮಿಕ ಭಾಗಲಬ್ಧದ ಆಧುನಿಕ ಹರಿಕಾರರಾದ ಡಾನಾ ಜೋಹರ್ ಮತ್ತು ಇಯನ್ ಮಾರ್ಷಲ್‌ರು,  ಕ್ರಿ.ಶ. ೨೦೦೦ ದಲ್ಲಿ ಪ್ರಕಟವಾದ ತಮ್ಮ ಪುಸ್ತಕ “ಎಸ್‌ಕ್ಯು: ಅವರ್ ಅಲ್ಟಿಮೇಟ್ ಇಂಟಲಿಜನ್ಸ್” ನಲ್ಲಿ ಹೇಳುತ್ತಾರೆ: “ಆಧ್ಯಾತ್ಮಿಕ ಶಕ್ತಿಯು ಎಂತಹ ಬುದ್ಧಿಶಕ್ತಿಯೆಂದರೆ, ಅದರ ಸಹಾಯದಿಂದಲೇ ನಾವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತೇವೆ ಮತ್ತು ನಮ್ಮ ಉತ್ತರಗಳನ್ನು ಮರುಜೋಡಿಸುತ್ತೇವೆ.”

ರಾಬರ್ಟ್ ಎಮನ್ಸ್ ಪ್ರಕಾರ: “ಪ್ರತಿನಿತ್ಯದ ಸಮಸ್ಯೆಗಳ ಪರಿಹಾರ ಮತ್ತು ಗುರಿ ಸಾಧನೆಗಾಗಿ ಆಧ್ಯಾತ್ಮಿಕ ಮಾಹಿತಿಯನ್ನು ಅನುಕೂಲಕರ ರೀತಿಯಲ್ಲಿ ಬಳಸುವುದೇ ಆಧ್ಯಾತ್ಮಿಕ ಬುದ್ಧಿಶಕ್ತಿಯಾಗಿದೆ.”
ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹೇಳಿರುವಂತೆ, “ಮಾನವನು ಒಂದು ಬುದ್ಧಿವಂತ ಪ್ರಾಣಿ ಎಂಬುವುದು ಪರಿಪೂರ್ಣವಾದ ವ್ಯಾಖ್ಯಾನವಲ್ಲ. ಮಾನವನು ಒಂದು ಆಧ್ಯಾತ್ಮಿಕ ಪ್ರಾಣಿ.” ನಮ್ಮ ನಿತ್ಯ ಜೀವನದಲ್ಲಿ ಆಧ್ಯಾತ್ಮಿಕ ಭಾಗಲಬ್ಧವು ಎಷ್ಟು ಪ್ರಮುಖವಾದದ್ದು ಎಂಬುದನ್ನು ಈ ಹೇಳಿಕೆಯು ಒತ್ತಿ ಹೇಳುತ್ತದೆ. ಆಧ್ಯಾತ್ಮಿಕ ಭಾಗಲಬ್ಧವೆಂದರೆ ಮೂಲಭೂತವಾದ ಪ್ರಶ್ನೆಗಳನ್ನು ಕೇಳುವುದು ಮತ್ತು ಅಕೃತ ಮೂಲಗಳಿಂದ ಅವುಗಳಿಗೆ ಉತ್ತರಗಳನ್ನು ಪಡೆದುಕೊಳ್ಳುವುದಾಗಿದೆ.

ಆಧ್ಯಾತ್ಮಿಕ ಭಾಗಲಬ್ಧದ ಕುರಿತು ಶ್ರೀಲ ಪ್ರಭುಪಾದರು :

ಬುದ್ಧಿಶಕ್ತಿಯಿಂದ ಮತ್ತು ಭಾವಾತ್ಮಕ ಸಾಮರ್ಥ್ಯದಿಂದ ಮಾತ್ರ ಪ್ರಗತಿ ಸಾಧ್ಯ ಎಂದು ನಂಬಿ ನಡೆದಿರುವ ಮಾನವ ಜೀವಿಗಳು “ಮೂಢರು” ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.

ಆಹಾರ ನಿದ್ರಾ ಭಯ ಮೈಥುನಂಚ
ಸಾಮಾನ್ಯಮ್ ಏತತ್ ಪಶುಭೀರ ನರಾಣಾಮ್ |
ಧರ್ಮೋಹಿ ತೇಶಮ್ ಅಕೋ ವಿಶೇಷೋ
ಧರ್ಮೇಣ ಹೀನಾಃ ಪಶುಭಿಃ ಸಮಾನಾಃ ||

ಇದರ ಅರ್ಥ ಇಷ್ಟೇ, ತಿನ್ನುವುದು, ಮಲಗುವುದು, ಲೈಂಗಿಕ ಸುಖ ಮತ್ತು ಸ್ವರಕ್ಷಣೆ ಈ ನಾಲ್ಕು ಅಂಶಗಳು ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ ಸಾಮಾನ್ಯವಾಗಿರುತ್ತವೆ. ಇವರಿಬ್ಬರ ನಡುವೆ ಇರುವ ವ್ಯತ್ಯಾಸವೆಂದರೆ, ಒಬ್ಬ ಮನುಷ್ಯನು ಪರಮಾತ್ಮನನ್ನು ಶೋಸಬಲ್ಲ. ಆದರೆ ಪ್ರಾಣಿಗಳಿಗೆ ಅದು ಅಸಾಧ್ಯ. ಇದೇ ವ್ಯತ್ಯಾಸ. ಹಾಗಾಗಿ, ಪರಮಾತ್ಮನನ್ನು ಶೋಸುವ ಹಂಬಲವಿಲ್ಲದ ಮನುಷ್ಯನು ಪ್ರಾಣಿಗಿಂತಲೂ ಕೆಳಮಟ್ಟದವನಾಗಿರುತ್ತಾನೆ. ಅಂದರೆ, ಜೀವನದ ಪರಿಪೂರ್ಣತೆಯ ರಹಸ್ಯ ಅಡಗಿರುವುದು ಆಧ್ಯಾತ್ಮಿಕ ಭಾಗಲಬ್ಧದಲ್ಲಿ.

“ಜಗತ್ತಿನ ಕಣ್ಣಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳೆಲ್ಲರೂ ಪಲಾಯನವಾದಿಗಳಿದ್ದಂತೆ. ಅವರು ವಾಸ್ತವಿಕತೆಯಿಂದ ದೂರ ಓಡುತ್ತಾರಂತೆ” ಎಂದು ಶಿಷ್ಯನೊಬ್ಬ  ಪ್ರಭುಪಾದರನ್ನು  ಕೇಳಿದಾಗ, ಅದಕ್ಕೆ ಪ್ರಭುಪಾದರು ಈ ರೀತಿ ಉತ್ತರಿಸಿದರು, “ಹೌದು, ನಾವು ಅವರೆಲ್ಲರ ವಾಸ್ತವಿಕತೆಯಿಂದ ಪಲಾಯನಗೈಯ್ಯುತ್ತಿದ್ದೇವೆ. ವ್ಯತ್ಯಾಸವಿಷ್ಟೆ, ಅವರ ವಾಸ್ತವಿಕತೆಯು ನಾಯಿಯ ಜಾತಿಯದ್ದು, ಆದರೆ ನಮ್ಮ ವಾಸ್ತವಿಕತೆಯೆಂದರೆ, ಸ್ವಸಾಕ್ಷಾತ್ಕಾರದಲ್ಲಿ ಅಭಿವೃದ್ಧಿ ಸಾಸುವುದು, ಅದೇ ಕೃಷ್ಣಪ್ರಜ್ಞೆ. ಆದ್ದರಿಂದ, ಈ ಪ್ರಾಪಂಚಿಕ ಶ್ರಮಿಕರನ್ನು ಮೂಢರು, ಕತ್ತೆಗಳು ಎಂದು ಕರೆಯಲಾಗಿದೆ. ಏಕೆ? ಏಕೆಂದರೆ ಯಾವ ಉಪಯುಕ್ತಕಾರಿ ಲಾಭವಿಲ್ಲದೆ ಕತ್ತೆಯು ತುಂಬ ಕಠಿಣ ಪರಿಶ್ರಮವನ್ನು ವ್ಯಯಿಸುತ್ತದೆ. ಅದರ ಮೇಲೆ ಟನ್‌ಗಟ್ಟಲೆ ಬಟ್ಟೆ ಹೊರಿಸುವ ಅಗಸನು, ಪ್ರತಿಫಲವಾಗಿ ಅದಕ್ಕೆ ಸ್ವಲ್ಪ ಹುಲ್ಲನ್ನು ತಿನ್ನಲು ನೀಡುತ್ತಾನೆ. ಕತ್ತೆಯು ಅವನ ಮನೆ ಮುಂದೆ ನಿಂತು ಆ ಹುಲ್ಲನ್ನು ಅಗೆಯುತ್ತಿರುವಾಗಲೇ, ಅಗಸನು ಮತ್ತೆ ಬಟ್ಟೆಗಳ ಮೂಟೆಯನ್ನು ಅದರ ಮೇಲೆ ಹೊರಿಸುತ್ತಾನೆ. ಕತ್ತೆಗೆ ಇಷ್ಟು ವಿಚಾರ ಮಾಡುವ ಸಾಮರ್ಥ್ಯವೂ ಇಲ್ಲ, ನಾನು ಈ ಅಗಸನ ಕೈಯಿಂದ ತಪ್ಪಿಸಿಕೊಂಡರೆ, ನನಗೆ ಎಲ್ಲಿ ಬೇಕಾದಲ್ಲಿ ಹುಲ್ಲು ದೊರಕುವುದು. ನಾನೇಕೆ ಇಷ್ಟೆಲ್ಲವನ್ನು ಹೊರುತ್ತಿದ್ದೇನೆ? ಈ ಪ್ರಾಪಂಚಿಕ ಕೆಲಸಗಾರರು ಹೀಗೇ ಇರುತ್ತಾರೆ. ಒಬ್ಬ ಉದ್ಯೋಗಿಯು ದಿನವಿಡೀ ತುಂಬ ಕಾರ್ಯನಿರತನಾಗಿರುತ್ತಾನೆ. ಏಕೆಂದರೆ, ದಿನದ ಕೊನೆಗೆ, ತನ್ನ ಲೆಕ್ಕಪತ್ರಗಳತ್ತ ಕಣ್ಣು ಹಾಯಿಸಿ ‘ಓಹ್, ಮೊದಲು ಒಂದು ಲಕ್ಷ ರೂಪಾಯಿಗಳಷ್ಟಿದ್ದ ಮೊತ್ತವು ಈಗ ಎರಡು ಲಕ್ಷ ರೂಪಾಯಿಗಳಷ್ಟಾಗಿದೆ,’ ಎಂದು ಹೇಳಲು ಮಾತ್ರ. ಅದೇ ಅವನಿಗೆ ಸಂತೃಪ್ತದಾಯಕವಾದದ್ದು. ಆದರೆ ಅವನು ಸೇವಿಸುವುದು ಮಾತ್ರ ಎರಡು ತುಣುಕು ರೊಟ್ಟಿ ಮತ್ತು ಒಂದು ಲೋಟ ಚಹಾ. ಅವನ ಬ್ಯಾಂಕ್ ಖಾತೆಯಲ್ಲಿ ಹಣ ಲಕ್ಷದಿಂದ ಎರಡು ಲಕ್ಷಕ್ಕೇರಿದರೂ, ಅವನು ಅದಕ್ಕಿಂತ ಹೆಚ್ಚು ಸೇವಿಸಲಾರ. ಆದರೆ, ಇನ್ನೂ ಹೆಚ್ಚೆಚ್ಚು ಶ್ರಮವಹಿಸುತ್ತಾನೆ. ಹೀಗಾಗಿ ಕರ್ಮಿಗಳನ್ನು ಮೂಢರು ಎಂದು ಕರೆಯಲಾಗುತ್ತದೆ. ಅವರು ಕತ್ತೆಗಳಂತೆ, ಜೀವನದಲ್ಲಿ ನಿಜವಾದ ಗುರಿಯೇ ಇರುವುದಿಲ್ಲ.”

ನಿಜವಾದ ಪ್ರಗತಿ :

ಪ್ರಭುಪಾದರು ನಿಜವಾದ ‘ಪ್ರಗತಿ’ ಎಂದರೇನು ಎಂಬುದನ್ನು ತಿಳಿದುಕೊಳ್ಳಲು ಮೊದಲು ಪ್ರಯತ್ನ ಮಾಡಬೇಕೆನ್ನುತ್ತಾರೆ. ವ್ಯರ್ಥ ಪ್ರಗತಿ ಸಾಸುವತ್ತ ಪ್ರಯತ್ನ ವಿನಿಯೋಗಿಸಿದರೆ, ಆ ಪ್ರಯತ್ನಕ್ಕೆ ಬೆಲೆಯಿಲ್ಲ. ನಮ್ಮ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದಾದ ಮೇಲೆ, ಅದನ್ನು ಬದಲಾಯಿಸುವ ವ್ಯರ್ಥ ಪ್ರಯತ್ನ ಬಿಟ್ಟು, ನಮ್ಮಲ್ಲಿರುವ ಶಕ್ತಿಯನ್ನು ಕೃಷ್ಣಪ್ರಜ್ಞೆಯನ್ನು ತಿಳಿದುಕೊಳ್ಳಲು ಬಳಸುವಂತೆ ಪ್ರಭುಪಾದರು ಹೇಳಿದ್ದಾರೆ. ನಮ್ಮ ಆಧ್ಯಾತ್ಮಿಕ ಜ್ಞಾನ, ಅಂದರೆ ದೇವರ ಮತ್ತು ಸ್ವಜ್ಞಾನವು ಸಂಪೂರ್ಣವಾಗಿ ಸ್ಪಷ್ಟವಾಗಬೇಕು. ಬುದ್ಧಿಶಕ್ತಿ ಮತ್ತು ಭಾವಾತ್ಮಕ ಶಕ್ತಿಗಳೆರಡರಿಂದಲೂ ಸಾಸಿದ ಆರ್ಥಿಕ ಅಭಿವೃದ್ಧಿಯಿಂದಾಗಿ ನಾವು ಸಂತೋಷದಿಂದಿರಲು ಸಾಧ್ಯವಿಲ್ಲ. ಆಗ ಆಧ್ಯಾತ್ಮಿಕ ಶಕ್ತಿಯೇ ಕೈ ಹಿಡಿಯುವುದು. ಅಂದರೆ, ಕೃತಕ ಸುಖ, ಸಂತೋಷಗಳ ಆಸೆ ಬಿಟ್ಟು ನಾವು ಕೃಷ್ಣನಿಗೆ ಶರಣಾಗತರಾಗಬೇಕು. ಶ್ರೀಲ ಪ್ರಭುಪಾದರು ಆಧ್ಯಾತ್ಮಿಕ ಶಕ್ತಿಯ ಪ್ರಾಮುಖ್ಯವನ್ನು ಒಂದು ಸುಂದರವಾದ ಉದಾಹರಣೆಯ ಮೂಲಕ ವ್ಯಕ್ತಪಡಿಸುತ್ತಾರೆ. ಒಬ್ಬ ತಂತ್ರಜ್ಞಾನದ ವಿದ್ಯಾರ್ಥಿಯು ಒಂದು ದೋಣಿಯಲ್ಲಿ ಕುಳಿತುಕೊಂಡು ನದಿ ದಾಟುತ್ತಿದ್ದಾಗ, ಅನಕ್ಷರಸ್ಥ ನಾವಿಕನನ್ನು ಅನೇಕ ವಿಷಯಗಳ ಕುರಿತು ಕೇಳುತ್ತಾನೆ. ಮೊದಲಿಗೆ ನಕ್ಷತ್ರಗಳ ಕುರಿತು ಆ ಯುವಕನು ನಾವಿಕನನ್ನು ಕೇಳಿದಾಗ, ನಾವಿಕನು ತನಗೆ ಅದರ ಬಗ್ಗೆ ಏನೂ ಗೊತ್ತಿಲ್ಲವೆಂದು ಉತ್ತರಿಸುತ್ತಾನೆ. ಆಗ ಆ ನಾವಿಕನ  ಶೇ ೨೫ರಷ್ಟು ಜೀವನವೇ ವ್ಯರ್ಥ ಎಂದು ಹುಡುಗ ಹೇಳುತ್ತಾನೆ. ಅನಂತರ, ನದಿಯ ದಡದ ಮೇಲಿದ್ದ ಮರಗಳ ಬಗ್ಗೆ ಕೇಳಿದಾಗ, ಆ ನಾವಿಕನು ತನಗೆ ಅವುಗಳ ಬಗ್ಗೆ ಸಹ ಏನೂ ಗೊತ್ತಿಲ್ಲವೆಂದು ಉತ್ತರಿಸುತ್ತಾನೆ. ಆಗ ಹುಡುಗನು ನಾವಿಕನ ಶೇ ೫೦ರಷ್ಟು ಜೀವನ ವ್ಯರ್ಥ ಎಂದು ಹೇಳುತ್ತಾನೆ. ಅನಂತರ ಹುಡುಗನು ಗ್ರಹಗಳ ಬಗ್ಗೆ ಕೇಳುತ್ತಾನೆ. ಅವುಗಳ ಬಗ್ಗೆಯೂ ತನಗೆ ಏನು ಗೊತ್ತಿಲ್ಲವೆಂದು ನಾವಿಕ ಹೇಳಿದಾಗ, ಆತನ ಶೇ ೭೫ರಷ್ಟು ಜೀವನವೇ ವ್ಯರ್ಥ ಎಂದು ಹುಡುಗ ಹೇಳುತ್ತಾನೆ. ಇಲ್ಲಿ ಪ್ರಶ್ನಿಸುತ್ತಿರುವ ಆ ಯುವಕನು ಬುದ್ಧಿಶಕ್ತಿ ಮತ್ತು ಭಾವಾತ್ಮಕ ಶಕ್ತಿಯ ಅಮಲಿನಲ್ಲಿದ್ದು, ಹುಸಿ ಜ್ಞಾನವನ್ನು ಪ್ರತಿನಿಸುವ ಮಾನವ ಸಂಕುಲದ ಸಂಕೇತವಾಗಿದ್ದಾನೆ. ಇದಾದ ಸ್ವಲ್ಪ ಸಮಯದಲ್ಲಿ, ಬಿರುಗಾಳಿ ಬೀಸಿ ದೋಣಿ ಮುಳುಗುವ ಪರಿಸ್ಥಿತಿ ಬರುತ್ತದೆ. ನಾವಿಕನು ಯುವಕನನ್ನು ಕೇಳಿದ, “ನಿಮಗೆ ಈಜಲು ಬರುತ್ತದೆಯೇ?”  ಅದಕ್ಕೆ ಹುಡುಗನು “ಇಲ್ಲ ನನಗೆ ಈಜಲು ಗೊತ್ತಿಲ್ಲ,” ಎಂದು ಉತ್ತರಿಸಲು, ನಾವಿಕನು ಆ ಹುಡುಗನ ಜೀವನ ಶೇ. ೧೦೦ರಷ್ಟು ವ್ಯರ್ಥವೆಂದು ಹೇಳಿ, ನೀರಿಗೆ ಜಿಗಿದು  ಈಜಿ ಪಾರಾಗುತ್ತಾನೆ. ಅದೇ ತಂತ್ರಜ್ಞಾನ ವಿದ್ಯಾರ್ಥಿಯು ಈಜು ಬರದ ಕಾರಣ ಬಿರುಗಾಳಿ ಮತ್ತು ನದಿಗೆ ಬಲಿಯಾಗುತ್ತಾನೆ. ಇದರ ತಾತ್ಪರ್ಯವಿಷ್ಟೇ, ನಾವೆಲ್ಲರೂ ನಮ್ಮ ಮಿತಿಯಾದ ಜ್ಞಾನ ಮತ್ತು ಗ್ರಹಿಕೆಯ ಶಕ್ತಿಯಿಂದ ನಾವೇ ಶ್ರೇಷ್ಠರೆಂದು ತಿಳಿದುಕೊಂಡಿದ್ದೇವೆ. ಆ ಭ್ರಮೆಯಿಂದಾಗಿಯೇ ಜೀವನವನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೇವೆ. ನಮಗೆ ತಿಳಿದದ್ದೇ ಕಟ್ಟಕಡೆಯ ವಿಚಾರವೆಂದು ಕಲ್ಪಿಸಿ, ತಿಳಿಯದೇ ಇರುವ ಅನೇಕ ಸತ್ಯಗಳ ಬಗ್ಗೆ ಮೂಢರಾಗಿದ್ದೇವೆ. ಈ ಮೇಲೆ ಹೇಳಿದ ಉದಾಹರಣೆಯಲ್ಲಿ ಆ ಹುಡುಗನಿಗೆ ನಕ್ಷತ್ರಗಳು ಮತ್ತು ಗಿಡಗಳ ಜ್ಞಾನವಿದ್ದರೂ, ಆ ಜ್ಞಾನದ ಕುರಿತು ಹೆಮ್ಮೆ ಇದ್ದರೂ, ಈಜುವುದು ತಿಳಿಯದಿದ್ದ ಕಾರಣ ಆಘಾತಕ್ಕೊಳಗಾಗುತ್ತಾನೆ. ಸರಳವಾಗಿ ಹೇಳುವುದಾದರೆ, ದುಃಖ, ಸಂಕಟಗಳಿಂದ ಕೂಡಿರುವ ಈ ಪ್ರಾಪಂಚಿಕ ನದಿಯನ್ನು ದಾಟಿ ದಡ (ಮೋಕ್ಷ) ಸೇರಲು ಈಜು (ಆಧ್ಯಾತ್ಮಿಕ ಶಕ್ತಿ) ಬರುತ್ತಿದ್ದರೆ ಸಾಕು.
Leave a Reply

Your email address will not be published. Required fields are marked *