Search
Sunday 25 August 2019
 • :
 • :

ಸಿಹಿ ಸವಿ

ಸಾಮಾನ್ಯವಾಗಿ ಹಬ್ಬಗಳ ದಿನ ನಡೆವ ಪೂಜಾ ಸಂಭ್ರಮದ ಜೊತೆ ಸಿಹಿ ಭಕ್ಷ್ಯಗಳನ್ನು ಮಾಡಿ ಸೇವಿಸುವ ಪರಿಪಾಠವಿರುತ್ತದೆ. ಈಗಿನ ದಿನಗಳಲ್ಲಿ ಪ್ರತಿಹಬ್ಬದ ಹಿನ್ನೆಲೆಯಲ್ಲಿರುವ ವಿಶಿಷ್ಟ ಅಡುಗೆ, ತಿಂಡಿಗಳಿಗೆ ಇರುವ ಮಾನ್ಯತೆಯೂ ಮಾಯವಾಗುತ್ತಿದೆ. ಅಜ್ಜಿಯೋ, ಅಮ್ಮನೋ ಕಷ್ಟಪಟ್ಟು ಅಕ್ಕರೆಯಿಂದ ಮಾಡುತ್ತಿದ್ದ ತಿಂಡಿಗಳ ಸವಿ ನೆನೆದರೆ ಎಂಥದೋ ಖುಷಿ. ಆದರೆ ಇಂದಿನ ಪೀಳಿಗೆಗೆ ಸುಲಭವಾಗಿ ಮತ್ತು ಕಡಮೆ ಸಮಯದಲ್ಲಿ ತಯಾರಿಸುವ ತಿನಿಸುಗಳು ಇಷ್ಟವಾಗುತ್ತವೆ. ಅಂತಹದೇ ಕೆಲವು ತಿನಿಸುಗಳನ್ನು ಮನೆಯಲ್ಲಿ ಮಾಡುವುದನ್ನು ಪರಿಚಯಿಸಲಾಗಿದೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಸಜ್ಜಪ್ಪ

ಬೇಕಾಗುವ ಪದಾರ್ಥಗಳು :

 • ಹಸಿತೆಂಗಿನ ತುರಿ – ೧ ಕಪ್
 • ಒಣಕೊಬ್ಬರಿ ತುರಿ – ೧ ಕಪ್
 • ಚಿರೋಟಿ ರವೆ – ೧ ಕಪ್
 • ಬೆಲ್ಲ – ೧ ೧/೨ ಕಪ್
 • ಮೈದಾ – ೨ ಕಪ್
 • ತುಪ್ಪ – ೩ ಚಮಚ
 • ಅರಿಶಿನ – ೧ ಚಿಟಕೆ
 • ಉಪ್ಪು – ೧ ಚಿಟಿಕೆ
 • ಏಲಕ್ಕಿಪುಡಿ – ೧/೪ ಚಮಚ
 • ಎಣ್ಣೆ – ಕರಿಯಲು

ಮಾಡುವ ವಿಧಾನ : ಹಸಿತೆಂಗಿನ ತುರಿಯ ಬಿಳಿಭಾಗ ಮತ್ತು ಒಣಕೊಬ್ಬರಿ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ಸಣ್ಣಗೆ ಗ್ರೈಂಡ್‌ಮಾಡಿ. ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಬಾಣಲೆಗೆ ಹಾಕಿ, ಗ್ರೈಂಡ್ ಮಾಡಿದ ಕೊಬ್ಬರಿ ತುರಿಯನ್ನು ಬೆರೆಸಿ ಒಲೆಯ ಮೇಲಿಟ್ಟು ಕೆದಕುತ್ತಿರಿ. ಪಾಕ ಗಟ್ಟಿಯಾಗುವ ಮೊದಲು ಚಿರೋಟಿರವೆ, ಏಲಕ್ಕಿಪುಡಿ ಸೇರಿಸಿ ಹೂರಣ ಮಾಡಿಕೊಳ್ಳಿ. ಮೈದಾಹಿಟ್ಟಿಗೆ ಉಪ್ಪು, ಅರಿಶಿನ, ತುಪ್ಪ ಸೇರಿಸಿ ಕಲಸಿಕೊಂಡು ಅನಂತರ ನೀರು ಸೇರಿಸಿ ಚೆನ್ನಾಗಿ ನಾದಿ, ಸ್ವಲ್ಪ ಹೊತ್ತಿನ ಅನಂತರ ಮೈದಾಹಿಟ್ಟಿನ ಮಿಶ್ರಣಕ್ಕೆ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ, ಮೃದುವಾದ ಕಣಕ ಸಿದ್ಧಗೊಂಡ ಅನಂತರ ಚಿಕ್ಕ ಗಾತ್ರದ ಕಣಕವನ್ನು ತೆಗೆದುಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ತಟ್ಟಿ ಇದರಲ್ಲಿ ಸಿಹಿ ಹೂರಣವನ್ನು ಉಂಡೆ ಮಾಡಿ ಇರಿಸಿ ಮೃದುವಾಗಿ ಪೂರಿಯಾಕಾರ ತಟ್ಟಿದ ಅನಂತರ ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಿರಿ. ಬಂಗಾರದ ಬಣ್ಣ ಬಂದಾಗ ಇನ್ನೊಂದು ಕಡೆ ತಿರುಗಿಸಿ ಬೇಯಿಸಿದರೆ ಹೋಳಿಗೆಗಿಂತಲೂ ರುಚಿಯಾದ ಸಜ್ಜಪ್ಪ ತಿನ್ನಲು ಸಿದ್ಧ.

ಖರ್ಜೂರದ ಚಂದ್ರಕಲಾ

ಬೇಕಾಗುವ ಪದಾರ್ಥಗಳು :

 • ಮೈದಾ – ೧ ಕಪ್
 • ಹಸಿ ಖರ್ಜೂರ – ೨ ಕಪ್
 • ಒಣಕೊಬ್ಬರಿ ತುರಿ – ೧/೨ ಕಪ್
 • ತುಪ್ಪ – ೪ ಚಮಚ
 • ಏಲಕ್ಕಿಪುಡಿ – ೧/೨ ಚಮಚ
 • ಸಕ್ಕರೆ – ೧ ಕಪ್
 • ಉಪ್ಪು – ೧ ಚಿಟಿಕೆ
 • ಎಣ್ಣೆ – ಕರಿಯಲು

ಮಾಡುವ ವಿಧಾನ : ಮೈದಾಹಿಟ್ಟಿಗೆ ಚಿಟಿಕೆ ಉಪ್ಪು ಹಾಕಿ ನೀರು ಚಿಮುಕಿಸುತ್ತಾ  ಪೂರಿ ಹಿಟ್ಟಿನಂತೆ ಗಟ್ಟಿಯಾಗಿ ಕಲೆಸಿಡಿ. ಇದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ನಾದಿಕೊಂಡು ಒಂದು ಗಂಟೆ ನೆನೆಯಲು ಬಿಡಿ. ಸಕ್ಕರೆಗೆ ಸ್ವಲ್ಪ ನೀರು ಸೇರಿಸಿ ಪಾಕ ತಯಾರಿಸಿ. ಹಸಿ ಖರ್ಜೂರವನ್ನು ಸಣ್ಣಗೆ ಕತ್ತರಿಸಿಕೊಂಡು ಇದಕ್ಕೆ ಏಲಕ್ಕಿಪುಡಿ, ಕೊಬ್ಬರಿತುರಿ ಸೇರಿಸಿ ಚೆನ್ನಾಗಿ ಬೆರೆಸಿ. ಇದೀಗ ಹೂರಣ ರೆಡಿ. ಮೈದಾಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ತೆಳುವಾದ ಪೂರಿಲಟ್ಟಿಸಿ. ಒಂದು ಪೂರಿ ಮೇಲೆ ಎರಡು ಚಮಚ ಹೂರಣ ಹರಡಿ. ಇದರ ಮೇಲೆ ಇನ್ನೊಂದು ಪೂರಿ ಇರಿಸಿ ಅಂಚನ್ನು ತಿರುಚುತ್ತಾ ಚಂದ್ರಕಲಾ ಆಕಾರ ಬರುವಂತೆ ಮಾಡಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದು ಅನಂತರ ಸಕ್ಕರೆ ಪಾಕಕ್ಕೆ ಹಾಕಿಡಿ. ಎರಡು ಗಂಟೆಗಳ ಅನಂತರ ಪಾಕದಿಂದ ತೆಗೆದರೆ ರುಚಿಯಾದ ಖರ್ಜೂರದ ಚಂದ್ರಕಲಾ ಸವಿಯಲು ಸಿದ್ಧ.

ರಸಗುಲ್ಲಾ

ಬೇಕಾಗುವ ಪದಾರ್ಥಗಳು :

 • ಹಾಲು – ೩ ಲೀಟರ್
 • ಸಕ್ಕರೆ – ೨ ಕಪ್
 • ನಿಂಬೆರಸ – ೬ ಚಮಚ
 • ಚಿರೋಟಿ ರವೆ – ೨ ಚಮಚ
 • ನೀರು – ೩ ಕಪ್

ಮಾಡುವ ವಿಧಾನ : ಮೊದಲು ಹಾಲನ್ನು ಕಾಯಿಸಿ ನಿಂಬೆರಸ ಸೇರಿಸಿ ಒಡೆಸಿ ಪನ್ನೀರನ್ನು ಸಿದ್ಧಪಡಿಸಿ. ಇದನ್ನು ಚೆನ್ನಾಗಿ ನಾದಿ. ಇದಕ್ಕೆ ಚಿರೋಟಿ ರವೆ ಸೇರಿಸಿ ಮತ್ತೆ ಐದು ನಿಮಿಷ ನಾದಿ. ಇದನ್ನು  ಹದಿನೈದು ಭಾಗ ಮಾಡಿ ಅದರಿಂದ ಸಣ್ಣ ಉಂಡೆಗಳನ್ನು ಮಾಡಿ. ಒಂದು ಪಾತ್ರೆಯಲ್ಲಿ ೩ ಕಪ್ ನೀರು ಮತ್ತು ಸಕ್ಕರೆ ಹಾಕಿ ೫ ನಿಮಿಷ ಕುದಿಸಿ. ಅರ್ಧ ಪಾಕ ಎತ್ತಿಡಿ. ಉಳಿದ ಪಾಕದೊಳಗೆ ಪನ್ನೀರು ಉಂಡೆಗಳನ್ನು ನಿಧಾನವಾಗಿ ಹಾಕಿ. ಸಣ್ಣ ಉರಿಯಲ್ಲಿ ಕುದಿಸಿ. ಕುದಿಯುವಾಗ ಪಾತ್ರೆಯ ಮುಚ್ಚಳ ಮುಚ್ಚಿ. ಪ್ರತಿ ಐದು ನಿಮಿಷಕ್ಕೊಂದು ಬಾರಿ ಮುಚ್ಚಳ ತೆಗೆದು ಸ್ವಲ್ಪ ಸ್ವಲ್ಪವೇ ಸಕ್ಕರೆ ಪಾಕವನ್ನು  ಸೇರಿಸಿ. ಆಗ ಕುದಿಯುತ್ತಿರುವ ಪಾಕ ತುಂಬಾ ಗಟ್ಟಿಯಾಗುವುದಿಲ್ಲ. ಉಂಡೆಗಳು ಸ್ಪಂಜಿನಂತಾಗುವವರೆಗೂ ಹೀಗೆ ಕುದಿಸಿ. ಇದಕ್ಕೆ ಸುಮಾರು ೩೦ ರಿಂದ ೪೦ ನಿಮಿಷ ಬೇಕಾಗಬಹುದು. ಕೆಳಗಿಳಿಸಿ ಆರಿದ ಮೇಲೆ ಫ್ರಿಜ್‌ನಲ್ಲಿಟ್ಟು ಬಳಸಿದರೆ ತುಂಬ ರುಚಿಯಾಗಿರುತ್ತದೆ.

ಚಿಕ್ಕಿ

ಬೇಕಾಗುವ ಪದಾರ್ಥಗಳು :

 • ಕಡಲೆಕಾಯಿ ಬೀಜ – ೩ ಕಪ್
 • ಬೆಲ್ಲದಪುಡಿ – ೨ ಕಪ್
 • ಒಣಕೊಬ್ಬರಿ ತುರಿ – ೬ ಚಮಚ
 • ತುಪ್ಪ – ೪ ಚಮಚ
 • ಏಲಕ್ಕಿಪುಡಿ – ೧/೨ ಚಮಚ

ಮಾಡುವ ವಿಧಾನ : ಕಡಲೆಕಾಯಿ ಬೀಜವನ್ನು ಹುರಿದು, ಉಜ್ಜಿ ಅದರ ಸಿಪ್ಪೆ ತೆಗೆದು ಸ್ವಲ್ಪ ಪುಡಿಮಾಡಿ, ದಪ್ಪತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಕರಗಿಸಿ. ಅದಕ್ಕೆ ಬೆಲ್ಲದಪುಡಿ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ. ಬೆಲ್ಲ ಕರಗಿ ಕುದಿಯಲಾರಂಭಿಸುತ್ತದೆ. ಅದು ಹೊಂಬಣ್ಣವಾದಾಗ ಕಡಲೆಕಾಯಿಬೀಜ, ಕೊಬ್ಬರಿತುರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಕಲೆಸಿ. ಜಿಡ್ಡು ಹಚ್ಚಿದ ತಟ್ಟೆಯಲ್ಲಿ ಹರಡಿ. ಸ್ವಲ್ಪ ಬಿಸಿ ಇದ್ದಾಗಲೇ ಬೇಕಾದ ಆಕಾರಕ್ಕೆ ಕತ್ತರಿಸಿ ಬೇರೆ ಮಾಡಿ. ಆರಿದ ಮೇಲೆ ಬೇಕಾದಂತೆ ಕತ್ತರಿಸುವುದು ಕಷ್ಟ.

ಇದೇ ರೀತಿ ಬಾದಾಮಿ ಅಥವಾ ಗೋಡಂಬಿಯನ್ನು ಬಳಸಿ ಚಿಕ್ಕಿಯನ್ನು ತಯಾರಿಸಬಹುದು.

ಗೋಧಿ ತರಿ ಹುಗ್ಗಿ

ಬೇಕಾಗುವ ಪದಾರ್ಥಗಳು :

 • ಗೋಧಿ ತರಿ – ೨ ಕಪ್
 • ಸಕ್ಕರೆ – ೧ ಕಪ್
 • ತುಪ್ಪ – ೧ ಕಪ್
 • ಏಲಕ್ಕಿಪುಡಿ – ೧/೨ ಚಮಚ
 • ಕೇಸರಿ ದಳ – ೧೦
 • ಅರಿಶಿನ – ೧ ಚಿಟಿಕೆ
 • ಬಾದಾಮಿ ಚೂರು – ೨ ಚಮಚ
 • ಪಿಸ್ತಾ ಚೂರು – ೨ ಚಮಚ

ಮಾಡುವ ವಿಧಾನ : (ಹಿಂದಿನ ದಿನ ಗೋಧಿ ತೊಳೆದು, ನೆರಳಲ್ಲಿ ಒಣಗಿಸಿ ತರಿ ಮಾಡಿಕೊಳ್ಳಿ) ಕೇಸರಿ ದಳಗಳನ್ನು ಒಂದು ಚಮಚ ಹಾಲಿನಲ್ಲಿ ನೆನೆಸಿ. ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದರಲ್ಲಿ ಗೋಧಿ ತರಿಯನ್ನು ಘಮ್ಮೆನ್ನುವಂತೆ ಹುರಿದು ಕೆಳಗಿಳಿಸಿ. ಪ್ರೆಶರ್ ಕುಕ್ಕರಿನಲ್ಲಿ ಅಗತ್ಯವಿದ್ದಷ್ಟು ನೀರು ಮತ್ತು ಹುರಿದ ಗೋಧಿ ತರಿ ಸೇರಿಸಿ ೩ ಸೀಟಿ ಬರುವಂತೆ ಬೇಯಿಸಿ. ಇನ್ನೊಂದು ಒಲೆಯಲ್ಲಿ ಸಕ್ಕರೆಗೆ ನೀರು ಸೇರಿಸಿ ಒಂದೆಳೆ ಪಾಕ ತಯಾರಿಸಿ ಇದಕ್ಕೆ ಬೇಯಿಸಿದ ಗೋಧಿ ತರಿಯನ್ನು ಸೇರಿಸಿ ಕೈಯಾಡಿಸಿ. ಅನಂತರ ಕತ್ತರಿಸಿದ ಬಾದಾಮಿ, ಪಿಸ್ತಾ ಚೂರನ್ನು ಬೆರೆಸಿ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿದರೆ ಬಿಸಿಯಾದ ಗೋಧಿ ತರಿ ಹುಗ್ಗಿ ಸವಿಯಲು ಸಿದ್ಧ.

ಗೋಲ್ಡನ್ ಟ್ರಯಾಂಗಲ್

ಬೇಕಾಗುವ ಪದಾರ್ಥಗಳು :

 • ಬ್ರೆಡ್ ಸ್ಲೈಸ್ – ೮
 • ಸಕ್ಕರೆ ಪಾಕ – ೧ ಕಪ್
 • ವೆನಿಲಾ ಎಸೆನ್ಸ್ – ೧/೪ ಚಮಚ
 • ಸಣ್ಣ ಗೋಡಂಬಿ ಚೂರು – ೩ ಚಮಚ
 • ತುಪ್ಪ – ಕರಿಯಲು

ಮಾಡುವ ವಿಧಾನ : ಮೊದಲು ಸಕ್ಕರೆಗೆ ನೀರು ಸೇರಿಸಿ ಸ್ವಲ್ಪ ಗಟ್ಟಿಯಾದ ಪಾಕವನ್ನು ತಯಾರಿಸಿ. ಬ್ರೆಡ್‌ನ್ನು ತ್ರಿಕೋನ ಆಕಾರವಾಗಿ ಕತ್ತರಿಸಿ. ಇದನ್ನು ತುಪ್ಪದಲ್ಲಿ ಹೊಂಬಣ್ಣ ಬರುವವರೆಗೆ  ಕರಿದು ತೆಗೆದಿಡಿ. ಸಕ್ಕರೆ ಪಾಕಕ್ಕೆ ವೆನಿಲಾ ಎಸೆನ್ಸ್‌ನ್ನು ಬೆರೆಸಿ. ಈ ಪಾಕದಲ್ಲಿ  ತುಪ್ಪದಲ್ಲಿ ಕರಿದ ಬ್ರೆಡ್ ಚೂರನ್ನು ಅದ್ದಿ ತೆಗೆದು ತಟ್ಟೆಯೊಂದರಲ್ಲಿ ಜೋಡಿಸಿ. ಬಿಸಿ ಇರುವಾಗಲೇ ಗೋಡಂಬಿ ಚೂರನ್ನು ಉದುರಿಸಿ. ಆರಿದ ಮೇಲೆ ಬಳಸಿ.

 

ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು

 1. ಮಸಾಲೆ ಸಾರುಗಳನ್ನು ಮಾಡುವಾಗ ಚೆಕ್ಕೆ, ಲವಂಗ, ಮೊಗ್ಗು, ಮೆಣಸು ಮತ್ತು ಶುಂಠಿಯನ್ನು ಒಂದು ಚಮಚ ಎಣ್ಣೆಯೊಂದಿಗೆ ಹುರಿದು ಮಸಾಲೆಯನ್ನು ತಯಾರಿಸಿ.
 2. ಸಾರಿಗೆ ಉಪ್ಪು ಜಾಸ್ತಿಯಾದರೆ ಅದಕ್ಕೆ ಆಲೂಗಡ್ಡೆಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿ ಎರಡು ನಿಮಿಷ ಕುದಿಸಿ, ತೆಗೆಯಿರಿ. ಆಲೂಗಡ್ಡೆಯು ಉಪ್ಪನ್ನು ಹೀರಿಕೊಳ್ಳುತ್ತದೆ.
 3. ಗ್ಯಾಸ್ಕೆಟ್ ಫ್ರೀಜರ್‌ನಲ್ಲಿಟ್ಟರೆ ಹೆಚ್ಚು ಬಾಳಿಕೆ ಬರುತ್ತದೆ.
 4. ಮೈದಾಹಿಟ್ಟನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟರೆ ಹುಳುಗಳು ಬರುವುದಿಲ್ಲ.

 

 
Leave a Reply

Your email address will not be published. Required fields are marked *