Search
Sunday 25 August 2019
  • :
  • :

ಬೇಸಿಗೆಗೆ ತಂಪಾದ ಪಾನಕಗಳು

ಬೇಸಿಗೆಯ ಸುಡು ಬಿಸಿಲಿನ ದಿನಗಳಲ್ಲಿ ಬಾಯಾರಿಕೆಯನ್ನು ನೀಗಿಸಿ ದೇಹದ ದಣಿವನ್ನು ನಿವಾರಿಸುವ ವಿಶಿಷ್ಟ ರುಚಿಯ ಪಾನಕಕ್ಕೆ ಸಮನಾದ ಉಲ್ಲಾಸದಾಯಕ ತಂಪು ಪಾನೀಯ ಇನ್ನೊಂದಿಲ್ಲ. ಬೆಲ್ಲ, ಶುಂಠಿ, ಕರಿಮೆಣಸು, ನಿಂಬೆರಸ, ಉಪ್ಪು ಮತ್ತು ಏಲಕ್ಕಿಯನ್ನು ಬಳಸಿ ಸರಳವಾಗಿ ತಯಾರಿಸಬಹುದಾದ ಈ ಪಾನಕಗಳು ಆರೋಗ್ಯದಾಯಕ ಹಾಗೂ ಔಷಯ ಗುಣಗಳನ್ನು ಹೊಂದಿವೆ. ಮನೆಯಲ್ಲಿ ಅನೇಕ ಬಗೆಯ ಪಾನಕಗಳನ್ನು ತಯಾರಿಸಿ ಕುಡಿದರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ಸೌತೆಕಾಯಿ ತಿರುಳಿನ ಪಾನಕ

ಬೇಕಾಗುವ ಪದಾರ್ಥಗಳು:

  • ಸೌತೆಕಾಯಿ ತಿರುಳು – ೧ಕಪ್
  • ತೆಂಗಿನ ತುರಿ – ೨ ಚಮಚ
  • ಬೆಲ್ಲದ ಪುಡಿ – ೩ ಚಮಚ
  • ಏಲಕ್ಕಿಪುಡಿ – ೧ ಚಿಟಿಕೆ

ಮಾಡುವ ವಿಧಾನ: ಸೌತೆಕಾಯಿಯ ಸಿಪ್ಪೆ ತೆಗೆದು ತಿರುಳು, ಕಾಯಿತುರಿ, ಬೆಲ್ಲ ಹಾಕಿ ರುಬ್ಬಿಕೊಳ್ಳಿ, ಅನಂತರ ಇದಕ್ಕೆ ಬೇಕಾಗು- ವಷ್ಟು ತಣ್ಣನೆಯ ನೀರು, ಏಲಕ್ಕಿಪುಡಿ ಉದುರಿಸಿ ಚೆನ್ನಾಗಿ ಬೆರೆಸಿದರೆ ತಂಪಾದ ಸೌತೆಕಾಯಿ ಪಾನಕ ಕುಡಿಯಲು ಸಿದ್ಧ.

ಶುಂಠಿಯ ಗರಂ ಪಾನಕ

ಬೇಕಾಗುವ ಪದಾರ್ಥಗಳು:

  • ಶುಂಠಿರಸ – ೨ ಚಮಚ
  • ಕರಿಮೆಣಸಿನ ಪುಡಿ – ೧/೨ ಚಮಚ
  • ನಿಂಬೆರಸ – ೧ ಚಮಚ
  • ಬೆಲ್ಲದ ಪುಡಿ – ೨ ಚಮಚ

ಮಾಡುವ ವಿಧಾನ : ಒಂದು ಬಟ್ಟಲಿಗೆ ಶುಂಠಿರಸ, ಬೆಲ್ಲದಪುಡಿ, ನಿಂಬೆರಸ, ಕರಿಮೆಣಸಿನಪುಡಿ ಮತ್ತು ತಣ್ಣಗಿನ ಮೂರು ಲೋಟ ನೀರನ್ನು ಹಾಕಿ ಚೆನ್ನಾಗಿ ಕದಡಿದರೆ ಶುಂಠಿಯ ಗರಂ ಪಾನಕ ಕುಡಿಯಲು ಸಿದ್ಧ. ಇದು ಗಂಟಲು ಕೆರೆತಕ್ಕೆ ಒಳ್ಳೆಯ ಉಪಶಮನ ಕೊಡುತ್ತದೆ.

ಹೆಸರು ಕಾಳು ಪಾನಕ

ಬೇಕಾಗುವ ಪದಾರ್ಥಗಳು:

  • ಹೆಸರು ಕಾಳು – ೧/೨ ಕಪ್
  • ತೆಂಗಿನ ತುರಿ – ೨ ಚಮಚ
  • ಬೆಲ್ಲದ ಪುಡಿ – ೫ ಚಮಚ
  • ಉಪ್ಪು – ಚಿಟಿಕೆ
  • ಏಲಕ್ಕಿಪುಡಿ – ೧ ಚಿಟಿಕೆ

ಮಾಡುವ ವಿಧಾನ : ಹೆಸರುಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ತೊಳೆದು ಇದಕ್ಕೆ ತೆಂಗಿನತುರಿ, ಬೆಲ್ಲದಪುಡಿ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ನುಣ್ಣಗೆ ರುಬ್ಬಿ ಬೇಕಾದಷ್ಟು ನೀರು ಬೆರೆಸಿ ಕುಡಿಯಿರಿ. ಹೆಸರು ಕಾಳು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ.

ಖರ್ಜೂರದ ಪಾನಕ

ಬೇಕಾಗುವ ಪದಾರ್ಥಗಳು:

  • ಬೀಜ ತೆಗೆದ ಖರ್ಜೂರ – ೧/೨ ಕಪ್
  • ಹುಣಸೆ ಹಣ್ಣಿನ ರಸ – ೧ ಚಮಚ
  • ಉಪ್ಪು – ೧ ಚಿಟಿಕೆ
  • ಸಕ್ಕರೆ – ೪ ಚಮಚ

ಮಾಡುವ ವಿಧಾನ : ಖರ್ಜೂರವನ್ನು ನುಣ್ಣಗೆ ರುಬ್ಬಿ ಇದಕ್ಕೆ ಹುಣಸೆರಸ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕಲಸಿ. ಅನಂತರ ಬೇಕಾದಷ್ಟು ತಣ್ಣಗಿನ ನೀರನ್ನು ಬೆರೆಸಿ ಕುಡಿಯಿರಿ.

ಜೀರಿಗೆ ಪಾನಕ

ಬೇಕಾಗುವ ಪದಾರ್ಥಗಳು:

  • ಅಕ್ಕಿ ತೊಳೆದ ನೀರು – ೩ ಕಪ್
  • ಜೀರಿಗೆ ಪುಡಿ – ೧/೨ ಚಮಚ
  • ಕಲ್ಲು ಸಕ್ಕರೆ – ಸಿಹಿಗೆ ತಕ್ಕಷ್ಟು

ಮಾಡುವ ವಿಧಾನ: ಎರಡನೆ ಬಾರಿ ಅಕ್ಕಿ ತೊಳೆದ ನೀರಿಗೆ ಜೀರಿಗೆ ಪುಡಿ, ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿ ಮಾಡಿ ಚೆನ್ನಾಗಿ ಕದಡಿದರೆ ಜೀರಿಗೆ ಪಾನಕ ಕುಡಿಯಲು ಸಿದ್ಧ. ಅರ್ಧ ಗಂಟೆ ಪಾತ್ರೆಯ ಸುತ್ತಲೂ ಒದ್ದೆ ಬಟ್ಟೆ ಸುತ್ತಿಟ್ಟರೆ ಪಾನಕ ತಂಪಾಗಿರುತ್ತದೆ.

ರಾಗಿ ಪಾನಕ

ಬೇಕಾಗುವ ಪದಾರ್ಥಗಳು:

  • ರಾಗಿ – ೧/೨ ಕಪ್
  • ಬೆಲ್ಲದ ಪುಡಿ – ೪ ಚಮಚ
  • ಏಲಕ್ಕಿ ಪುಡಿ – ೧/೪ ಚಮಚ

ಮಾಡುವ ವಿಧಾನ: ರಾಗಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿ. ಅನಂತರ ಇದನ್ನು ಚೆನ್ನಾಗಿ ತೊಳೆದು ನೀರು ಹಾಕಿ ರುಬ್ಬಿಕೊಳ್ಳಿ, ಇದನ್ನು ತೆಳುವಾದ ಬಟ್ಟೆಯಲ್ಲಿ ಸೋಸಿ, ಬೆಲ್ಲ, ಏಲಕ್ಕಿಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಸೇವಿಸಿ.

ಬೇಲದ  ಹಣ್ಣಿನ ಪಾನಕ

ಬೇಕಾಗುವ ಪದಾರ್ಥಗಳು:

  • ಬೇಲದ ಹಣ್ಣು – ೧
  • ಬೆಲ್ಲ – ರುಚಿಗೆ ತಕ್ಕಷ್ಟು
  • ಉಪ್ಪು – ಚಿಟಿಕೆ
  • ಏಲಕ್ಕಿ ಪುಡಿ – ೧/೪ ಚಮಚ

ಮಾಡುವ ವಿಧಾನ: ಹಣ್ಣಾದ ಬೇಲದ ಹಣ್ಣನ್ನು ಒಡೆದು ತಿರುಳನ್ನು ಬೇರ್ಪಡಿಸಿ. ಇದಕ್ಕೆ ಬೆಲ್ಲ ಚಿಟಿಕೆ ಉಪ್ಪು, ಏಲಕ್ಕಿ ಪುಡಿಯನ್ನು ಮಿಶ್ರಮಾಡಿ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ಅನಂತರ ಇದನ್ನು ತೆಳುವಾದ ಬಟ್ಟೆಯಲ್ಲಿ ಸೋಸಿದರೆ ರುಚಿಯಾದ ಬೇಲದ ಹಣ್ಣಿನ ಪಾನಕ ಕುಡಿಯಲು ಸಿದ್ಧ.

ನೆಲ್ಲಿ ಕಾಯಿ ಪಾನಕ

ಬೇಕಾಗುವ ಪದಾರ್ಥಗಳು:

  • ನೆಲ್ಲಿಕಾಯಿ – ೬
  • ಸಕ್ಕರೆ – ೨ ಚಮಚ

ಮಾಡುವ ವಿಧಾನ: ನೆಲ್ಲಿಕಾಯಿಯನ್ನು  ಬೀಜದಿಂದ ಬೇರ್ಪಡಿಸಿ ಇದಕ್ಕೆ ಸಕ್ಕರೆ ಬೆರೆಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಬೇಕಾದಷ್ಟು ತಣ್ಣಗಿನ ನೀರನ್ನು ಬೆರೆಸಿ ತೆಳುವಾದ ಬಟ್ಟೆಯಲ್ಲಿ ಸೋಸಿದರೆ ನೆಲ್ಲಿಕಾಯಿ ಪಾನಕ ಸಿದ್ಧ.




Leave a Reply

Your email address will not be published. Required fields are marked *