Search
Wednesday 15 July 2020
  • :
  • :

ಬಾಯಲ್ಲಿ ನೀರೂರಿಸುವ ಪಲಾವ್‌ಗಳು

ಚಿತ್ರಾನ್ನ, ಬಿಸಿಬೇಳೆಬಾತ್, ಪುಳಿಯೋಗರೆ, ಪೊಂಗಲ್ ಮುಂತಾದ ಅನ್ನ ಆಧಾರಿತ ಅದೇ ಹಳೆಯ ಭಕ್ಷ್ಯಗಳನ್ನು ಮತ್ತೆ ಮತ್ತೆ ಮಾಡಲು ನಿಮಗೆ ನಿಜಕ್ಕೂ ಬೇಸರವಾಗುತ್ತಿರಬೇಕು. ಕೊಂಚ ಬದಲಾವಣೆ ಇರಲಿ ಎಂದು ನಾವು ಕೆಲವು ನವೀನವಾದ ಅನ್ನದ ಪದಾರ್ಥಗಳನ್ನು ಪ್ರಯತ್ನಿಸೋಣ. ಯಾವುದೇ ಸಂದರ್ಭಕ್ಕೆ ಬಿರಿಯಾನಿಯು ಒಂದು ಪರಿಪೂರ್ಣ ಭಕ್ಷ್ಯವಾಗಿದೆ. ಅದನ್ನೇ ಒಂದು ಸಂಪೂರ್ಣ ಭೋಜನವನ್ನಾಗಿ ಸೇವಿಸಬಹುದು. ಇದನ್ನು ಸಿದ್ಧಪಡಿಸಲು ಸ್ವಲ್ಪ ಹೆಚ್ಚು ಸಮಯ ಹಿಡಿಸುತ್ತದಾದರೂ ಕೊನೆಯಲ್ಲಿ ಸಿದ್ಧವಾದ ಪದಾರ್ಥವು ಶ್ರಮಕ್ಕೆ ಸಾರ್ಥಕ ಎನ್ನಿಸುತ್ತದೆ. ಬಿರಿಯಾನಿಯನ್ನು ಮನೆಯಲ್ಲಿ ತಾಜಾವಾಗಿ ಸಿದ್ಧಪಡಿಸಿದಾಗ ಅತ್ಯುತ್ತಮವಾಗಿರುತ್ತದೆ.

‘ಬಿರಿಯಾನಿ’ ಎಂಬ ಪದವು ಪರ್ಷನ್‌ಭಾಷೆಯ ‘ಬಿರಿಯನ್’ ಎಂಬ ಪದದಿಂದ ಬಂದಿದ್ದು “ಬೇಯಿಸುವ ಮೊದಲು ಹುರಿದದ್ದು” ಎಂಬ ಅರ್ಥವನ್ನು ಕೊಡುತ್ತದೆ. ಬಿರಿಯಾನಿಯಲ್ಲಿ ಅನೇಕ ಬಗೆಗಳಿವೆ. ಅದಕ್ಕೆ ಬಳಸುವ ಪದಾರ್ಥಗಳಿಗಿಂತ ಹೆಚ್ಚಾಗಿ ಬೇರೆ ಬೇರೆ ಭೌಗೋಳಿಕ ಪ್ರದೇಶಗಳಲ್ಲಿ ಅಲ್ಲಿನ ಸಾಂಸ್ಕೃತಿಕ ಪ್ರಭಾವ ಮತ್ತು ಪಾಕವಿಧಾನಗಳನ್ನು ಅವಲಂಬಿಸಿ ಈ ಬದಲಾವಣೆಗಳು ಕಂಡುಬರುತ್ತವೆ.

ಇಲ್ಲಿ ಅಕ್ಕಿಯಿಂದ ತಯಾರಿಸುವ ಕೆಲವು ನವೀನವಾದ ಭಕ್ಷ್ಯಗಳನ್ನು ಪರಿಚಯಿಸುತ್ತಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರು ಮಾಡಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ವೆಜಿಟೆಬಲ್ ದಮ್ ಬಿರಿಯಾನಿ

ಬೇಕಾಗುವ ಪದಾರ್ಥಗಳು :

ಬಾಸ್ಮತಿ ಅಕ್ಕಿ – ೨ ಲೋಟ

ದಪ್ಪಗೆ ಹೆಚ್ಚಿದ ತರಕಾರಿ – ೫೦೦ ಗ್ರಾಂ

(ಕ್ಯಾರೆಟ್, ಹೂಕೋಸು, ಹುರುಳಿಕಾಯಿ, ಹಸಿ ಬಟಾಣಿ, ಕ್ಯಾಪ್ಸಿಕಮ್, ಆಲೂಗೆಡ್ಡೆ)

ಕೊತ್ತಂಬರಿ ಸೊಪ್ಪು ಮತ್ತು ಪುದಿನಾ -೧/೨ ಕಟ್ಟು

ಹಸಿಮೆಣಸಿನಕಾಯಿ – ೫

ಶುಂಠಿಪೇಸ್ಟ್ – ೧/೨ ಚಮಚ

ಜೀರಿಗೆ – ೧ ಚಮಚ

ಕೆಂಪುಮೆಣಸಿನಕಾಯಿಪುಡಿ – ೧ ಚಮಚ

ಅರಿಶಿಣ – ೧/೪ ಚಮಚ

ಗರಂಮಸಾಲ ಪುಡಿ – ೧ ಚಮಚ

ಕೇಸರಿದಳ – ೧೦

ಮೊಸರು – ೧/೨ ಲೋಟ

ಎಣ್ಣೆ – ೫ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ನೀರಿನಲ್ಲಿ ನೆನೆಸಿಡಿ. ಮೊಸರಿಗೆ ಗರಂಮಸಾಲ, ಕೆಂಪುಮೆಣಸಿನಕಾಯಿಪುಡಿ, ಶುಂಠಿಪೇಸ್ಟ್ ಮತ್ತು ಉಪ್ಪನ್ನು ಹಾಕಿ ಕಲೆಸಿ ಇಡಿ. ಕೊತ್ತಂಬರಿ ಸೊಪ್ಪು, ಪುದಿನಾ, ಹಸಿಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಸೇರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಹೆಚ್ಚಿದ ತರಕಾರಿ ಮತ್ತು ಮಸಾಲ ಮಿಶ್ರಣವನ್ನು ಹಾಕಿ ಬೇಯಿಸಬೇಕು.

ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿಣ, ಗರಂಮಸಾಲ ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ಬೇಯಲು ಇಡಿ. ಅಕ್ಕಿ ಅರ್ಧ ಬೆಂದಾಗ ನೀರನ್ನು ಬಸಿದುಬಿಡಿ. ಉರಿಯನ್ನು ಸಣ್ಣಮಾಡಿ ಅದೇ ಪಾತ್ರೆಗೆ ಸ್ವಲ್ಪ ತರಕಾರಿ ಮಿಶ್ರಣ ಮತ್ತು ಸ್ವಲ್ಪ ಅನ್ನವನ್ನು ಒಂದರ ಮೇಲೆ ಒಂದು ಹಾಕುತ್ತ ಬನ್ನಿ. ಹಾಲಿನಲ್ಲಿ ನೆನೆಸಿದ ಕೇಸರಿದಳಗಳನ್ನು ಅನ್ನದ ಮೇಲೆ ಹಾಕಿ. ಈಗ ಪಾತ್ರೆಗೆ ಮುಚ್ಚಳ ಮುಚ್ಚಿ ೨೦ ನಿಮಿಷ ಹಬೆಯಲ್ಲಿ ಬೇಯಿಸಿದರೆ ವೆಜಿಟೆಬಲ್ ದಮ್ ಬಿರಿಯಾನಿ ಸವಿಯಲು ಸಿದ್ಧ.

ಕಾಶ್ಮೀರಿ ಪಲಾವ್

ಬಾಸ್ಮತಿ ಅಕ್ಕಿ – ೨ ಲೋಟ

ಹಸಿ ಬಟಾಣಿ – ೧ ಲೋಟ

ಹಾಲು – ೪ ಚಮಚ

ಲವಂಗ – ೪

ಚಕ್ಕೆ -೩

ಏಲಕ್ಕಿ – ೪

ಲವಂಗ – ೪

ಕಾಳು ಮೆಣಸು – ೧/೨ ಚಮಚ

ಕತ್ತರಿಸಿದ ಬಾದಾಮಿ – ೧೫

ಗೋಡಂಬಿ – ೧೫

ಒಣದ್ರಾಕ್ಷಿ – ೪ ಚಮಚ

ತುಪ್ಪ – ೪ ಚಮಚ

ಕೇಸರಿದಳ – ೧೨

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮೊದಲಿಗೆ ಅಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಕೇಸರಿ ದಳಗಳನ್ನು ಹಾಲಿನಲ್ಲಿ ನೆನೆಹಾಕಿ. ಚಿಕ್ಕ ಬಾಣಲೆಯಲ್ಲಿ ೧ ಚಮಚ ತುಪ್ಪ ಬಿಸಿಮಾಡಿಕೊಂಡು ಅದರಲ್ಲಿ ಡ್ರೈಫ್ರೂಟ್ಸ್ ಹುರಿದು ಬೇರೆಯಾಗಿಡಿ.

ಈಗ ಪ್ರೆಷರ್‌ಕುಕ್ಕರಿನಲ್ಲಿ ಉಳಿದ ತುಪ್ಪ ಬಿಸಿಮಾಡಿ ಅದರಲ್ಲಿ ಎಲ್ಲ ಮಸಾಲ ಪದಾರ್ಥಗಳನ್ನು ಹಾಕಿ ಬಾಡಿಸಿಕೊಳ್ಳಿ. ಅನಂತರ ಹಾಲಿನಲ್ಲಿ ನೆನೆಸಿದ ಕೇಸರಿ, ಒಣದ್ರಾಕ್ಷಿ, ಬಟಾಣಿಕಾಳು ಮತ್ತು ಉಪ್ಪು ಸೇರಿಸಿ ೨ ನಿಮಿಷ ಕುದಿಸಿ. ನೆನೆಸಿದ ಅಕ್ಕಿಗೆ ಬೇಯಲು ಬೇಕಾಗುವಷ್ಟು ನೀರು ಹಾಕಿ ಮುಚ್ಚಿಡಿ. ೨ ಸೀಟಿಬಂದ ಅನಂತರ ಆರಲು ಬಿಡಿ. ಬಡಿಸುವ ಮುನ್ನ ಇದಕ್ಕೆ ಹುರಿದ ಡ್ರೈಫ್ರೂಟ್ಸ್ ಬೆರೆಸಿ. ರಾಯಿತ ಅಥವಾ ಚಟ್ನಿಯೊಂದಿಗೆ ಸವಿಯಲು ಕೊಡಿ.

ಪೈನಾಪಲ್ ಪಲಾವ್

ಬೆಳಗಿನ ಅಥವಾ ಸಂಜೆಯ ಉಪಹಾರ ವಾಗಿ ಇದನ್ನು ತಯಾರಿಸಬಹುದು.

ಬೇಕಾಗುವ ಪದಾರ್ಥಗಳು :

ಅಕ್ಕಿ – ೧ ಲೋಟ

ಪೈನಾಪಲ್ ಹಣ್ಣಿನಚೂರು -೩/೪ ಲೋಟ

ಸಕ್ಕರೆ – ೩/೪ ಲೋಟ

ತುಪ್ಪ – ೩ ಚಮಚ

ದ್ರಾಕ್ಷಿ, ಗೋಡಂಬಿ – ೩ ಚಮಚ

ಚೆರಿ ಹಣ್ಣು -೪

ಕೇಸರಿದಳ -೪

ಏಲಕ್ಕಿ – ೨

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲು ಉದುರಾಗಿ ಅನ್ನಮಾಡಿಕೊಳ್ಳಿ. ಪೈನಾಪಲ್ ಚೂರುಗಳಿಗೆ ೧ ಚಮಚ ತುಪ್ಪ ಹಾಕಿ ಹುರಿದುಕೊಂಡು ಸ್ವಲ್ಪ ನೀರು ಚಿಮುಕಿಸಿ ಬೇಯಲುಬಿಡಿ. ಅನಂತರ ಸಕ್ಕರೆ ಹಾಕಿ ಕರಗುವವರೆಗೂ ಬಿಸಿಮಾಡಿ ಅನ್ನ ಸೇರಿಸಿ. ಅನಂತರ ಹಾಲಿನಲ್ಲಿ ನೆನೆಸಿದ ಕೇಸರಿದಳಗಳನ್ನು ಸೇರಿಸಿ ಕುದಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ. ಚೆರಿ ಹಣ್ಣಿನಿಂದ ಅಲಂಕರಿಸಿದರೆ ಸುವಾಸನೆಯ ಪೈನಾಪಲ್ ಪಲಾವ್ ಸಿದ್ಧ.

ನವರತ್ನ ಪಲಾವ್

ನವರತ್ನ ಪಲಾವ್ ಎಂದರೆ ಇದರಲ್ಲಿ ನವಧಾನ್ಯಗಳನ್ನೇನು ಬಳಸಿಲ್ಲ. ಆದರೆ ಒಂಬತ್ತು ವಿಧದ ತರಕಾರಿಗಳನ್ನು ಬಳಸಲಾಗಿದೆ. ಹೀಗಾಗಿ ಇದಕ್ಕೆ ನವರತ್ನ ಪಲಾವ್ ಎಂದು ಹೆಸರಿಸಲಾಗಿದೆ.

ಬೇಕಾಗುವ ಪದಾರ್ಥಗಳು :

ಬಾಸ್ಮತಿ ಅಕ್ಕಿ – ೧ ಲೋಟ

ಕತ್ತರಿಸಿದ ಆಲೂಗಡ್ಡೆ – ೧/೪ ಲೋಟ

ಪನ್ನೀರಿನ ತುಂಡುಗಳು -೧/೪ ಲೋಟ

ಕ್ಯಾಪ್ಸಿಕಮ್ – ೨

ಕ್ಯಾರೆಟ್ -೨

ಹಸಿ ಬಟಾಣಿ -೧/೪ ಲೋಟ

ಚಪ್ಪರದ ಅವರೆಕಾಯಿ – ೧೦೦ ಗ್ರಾಂ

ಪೈನಾಪಲ್ ಚೂರುಗಳು – ೧/೪ ಲೋಟ

ಸೇಬಿನ ಚೂರುಗಳು – ೧/೨ ಲೋಟ

ಹುರುಳಿಕಾಯಿ – ೧/೨ ಲೋಟ

ಹೂಕೋಸು – ೧ ಚಿಕ್ಕದು

ಟೊಮೆಟೊ – ೩

ಒಣದ್ರಾಕ್ಷಿ – ೧ ಚಮಚ

ಗೋಡಂಬಿ -೧ ಚಮಚ

ಗಟ್ಟಿಮೊಸರು – ೧ ಲೋಟ

ಪಲಾವ್ ಎಲೆ -೨

ತುಪ್ಪ – ೪ ಚಮಚ

ಉಪ್ಪು ಮತ್ತು ಸಕ್ಕರೆ – ರುಚಿಗೆ ತಕ್ಕಷ್ಟು

ಕತ್ತರಿಸಿದ ಚೆರಿ ಹಣ್ಣು – ೨

ಮಸಾಲೆಗೆ:

ಹಸಿಮೆಣಸಿನಕಾಯಿ – ೪

ಕಾಶ್ಮೀರಿ ಕೆಂಪುಮೆಣಸಿನಕಾಯಿ -೫

ಶುಂಠಿ – ೧/೨ ಇಂಚು

ಕೊತ್ತಂಬರಿ ಬೀಜ – ೧ಚಮಚ

ಜೀರಿಗೆ – ೧/೪ ಚಮಚ

ಏಲಕ್ಕಿ – ೨

ಕಪ್ಪು ಜೀರಿಗೆ (ಶಾಹಿ ಜೀರಿಗೆ) – ೧/೪ ಚಮಚ.  ಇದನ್ನೆಲ್ಲ ಸೇರಿಸಿ ರುಬ್ಬಿಕೊಳ್ಳಿ.

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ತೊಳೆದು ೧೦ ನಿಮಿಷ ನೀರಿನಲ್ಲಿ ನೆನೆಸಿಡಿ. ಅನಂತರ ಹೆಚ್ಚಿಕೊಂಡ ಆಲೂಗೆಡ್ಡೆ ಹಾಗೂ ಪನ್ನೀರಿನ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಹೆಚ್ಚಿಕೊಂಡ ಕ್ಯಾರೆಟ್, ಚಪ್ಪರದ ಅವರೆಕಾಯಿ ಮತ್ತು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿ. ದಪ್ಪಮೆಣಸಿನ- ಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಮೊಸರನ್ನು ಕಡೆದುಕೊಳ್ಳಿ, ಟೊಮೆಟೊವನ್ನು ಬಿಸಿನೀರಿನಲ್ಲಿ ನೆನೆಸಿ, ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಅನಂತರ ದಪ್ಪತಳದ ಅಗಲವಾದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ. ಇದಕ್ಕೆ ಪಲಾವ್ ಎಲೆ, ದಪ್ಪಮೆಣಸಿನಕಾಯಿ ಮತ್ತು ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಇಂಗುವವರೆಗೆ ಹುರಿಯಿರಿ. ಇದಕ್ಕೆ ನೆನೆಸಿದ ಅಕ್ಕಿಯನ್ನು ಸೇರಿಸಿ ಕೆಲನಿಮಿಷಗಳ ಕಾಲ ಹುರಿಯಿರಿ. ಬೇಯಿಸಿದ ತರಕಾರಿ, ಮೊಸರು, ರುಬ್ಬಿದ ಟೊಮೆಟೊರಸ, ಉಪ್ಪು, ಸಕ್ಕರೆ ಮತ್ತು ನೀರನ್ನು ಸೇರಿಸಿ ಕಲೆಸಿ.

ಉರಿಯನ್ನು ಸಣ್ಣಗೆ ಮಾಡಿ ಮುಚ್ಚಳ ಹಾಕಿ ಅನ್ನವನ್ನು ಬೇಯಿಸಿಕೊಳ್ಳಿರಿ. ಅನ್ನಬೆಂದ ಅನಂತರ ಅದಕ್ಕೆ ಎಣ್ಣೆಯಲ್ಲಿ ಕರಿದ ಆಲೂಗೆಡ್ಡೆ, ಪನ್ನೀರಿನ ತುಂಡುಗಳು, ಹುರಿದ ದ್ರಾಕ್ಷಿ, ಗೋಡಂಬಿ, ಪೈನಾಪಲ್ ಚೂರು ಮತ್ತು ಚೆರಿಯನ್ನು ಹದವಾಗಿ ಬೆರೆಸಿ. ಈಗ ಬಿಸಿಯಾದ ನವರತ್ನ ಪಲಾವನ್ನು ಸವಿಯಲು ಕೊಡಿ.

ಈ ಉಪಾಯ ನಿಮಗೆ ತಿಳಿದಿರಲಿ

  1.  ದೋಸೆ ಮತ್ತು ಇಡ್ಲಿ ಮಲ್ಲಿಗೆ ಹೂವಿನಂತೆ ಮೃದುವಾಗಿರಲು ರುಬ್ಬುವಾಗ ಒಂದಿಷ್ಟು ಅನ್ನ ಅಥವಾ ಸ್ವಲ್ಪ ಅವಲಕ್ಕಿಯನ್ನು ನೆನೆಸಿ ರುಬ್ಬಿ.
  2. ಚಪಾತಿ ಮೃದುವಾಗಿ ಬರಲು ಹಿಟ್ಟು ಕಲೆಸುವಾಗ ಅದಕ್ಕೆ ಸ್ವಲ್ಪ ಮೊಸರು ಅಥವಾ ಬಾಳೆಹಣ್ಣನ್ನು ಕಿವುಚಿ ಹಾಕಿ ಕಲೆಸಿ.
  3. ಆಲೂಗೆಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ನೆನೆಸಿಟ್ಟು ಅನಂತರ ಬೇಯಿಸಿ.
  4. ಉಪ್ಪಿಟ್ಟು, ಅವಲಕ್ಕಿಯಂಥ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಮೆಯಾಗುತ್ತದೆ.
  5. ಹಾಲು ಕಾಯಿಸದೆ ಬಹಳ ಹೊತ್ತು ಇಟ್ಟು ಅನಂತರ ಕಾಯಿಸುವಾಗ ಚಿಟಿಕೆ ಅಡಿಗೆಸೋಡ ಹಾಕಿದರೆ ಹಾಲು ಒಡೆಯುವುದಿಲ್ಲ.Leave a Reply

Your email address will not be published. Required fields are marked *