Search
Thursday 21 November 2019
  • :
  • :

ನಿಜ ನೆಲೆಯ ವೈಭವ

ಆಧ್ಯಾತ್ಮಿಕತೆಯತ್ತ ಒಲವಿರುವ ಜೀವಾತ್ಮನು ರಾತ್ರಿ ಹೊತ್ತು ನಕ್ಷತ್ರಗಳಿಂದಲಂಕೃತವಾದ ಆಗಸದತ್ತ ದೃಷ್ಟಿ ಹಾಯಿಸಿದಾಗ ಅವನ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳೆಂದರೆ, ಈ ಆಕಾಶವು ಎಷ್ಟು ಹರಡಿದೆ? ಇದರಾಚೆ ಜೀವನವೇನಾದರೂ ಇರುವುದೇ? ಅಲ್ಲಿಯೂ ಭೂಮಿಯಂತಹ ಗ್ರಹಗಳಿದ್ದು, ಅವುಗಳಲ್ಲಿ ಮನುಷ್ಯರಂತೆಯೇ  ಯಾರಾದರೂ ವಾಸವಾಗಿರುವರೇ? ಈ ಅಸಂಖ್ಯಾತ ನಕ್ಷತ್ರಗಳನ್ನು ಆಕಾಶದುದ್ದಗಲಕ್ಕೂ ಹರಡಿರುವವರು ಯಾರು? ಇವುಗಳಷ್ಟೇ ಅಲ್ಲದೇ ಇನ್ನೂ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಆಧುನಿಕ ವೈಜ್ಞಾನಿಕ ಸಮಾಜದಲ್ಲಿ ಪ್ರಚಲಿತ ವಿಚಾರವೆಂದರೆ, ಕೇವಲ ಈ ಭೂಮಿಯ ಮೇಲೆ ಬುದ್ಧಿಶಕ್ತಿ ಮತ್ತು ವೈಜ್ಞಾನಿಕ ಜ್ಞಾನವಿರುವ ಜೀವಾತ್ಮಗಳು ಅಸ್ತಿತ್ವದಲ್ಲಿದ್ದು, ಉಳಿದ ಗ್ರಹಗಳಲ್ಲಿ ಜೀವನವೇ ಇಲ್ಲ ಎಂಬುದು.

ಆದರೆ ವೈದಿಕ ಸಾಹಿತ್ಯವು ಇಂತಹ ಮೂರ್ಖತನದ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ದೇವತೆಗಳು, ಮುನಿಗಳು, ಪಿತೃಗಳು, ಗಂಧರ್ವರು, ಪನ್ನಗರು, ಕಿನ್ನರರು, ಚಾರಣರು, ಸಿದ್ಧರು ಮತ್ತು ಅಪ್ಸರೆಯರಂತಹ ವಿವಿಧ ಜೀವಾತ್ಮಗಳು ವಾಸವಾಗಿರುವ ಅನೇಕ ಗ್ರಹಗಳಿವೆಯೆಂಬುದನ್ನು ವೈದಿಕ ಜ್ಞಾನವನ್ನು ಅನುಸರಿಸುವವರು ಸಂಪೂರ್ಣವಾಗಿ ಅರಿತುಕೊಂಡಿದ್ದಾರೆ. ಈ ಲೌಕಿಕ ಆಕಾಶದಲ್ಲಷ್ಟೇ ಅಲ್ಲದೇ ಆಧ್ಯಾತ್ಮಿಕ ಆಕಾಶದಲ್ಲಿರುವ ಗ್ರಹಗಳು ಸೇರಿದಂತೆ ಎಲ್ಲ ಗ್ರಹಗಳಲ್ಲಿಯೂ ಅನೇಕ ಪ್ರಕಾರದ ಜೀವಾತ್ಮಗಳಿವೆಯೆಂದು ವೇದಗಳು ಸೂಚಿಸುತ್ತವೆ. ಭೂಮಿಯು ಭೂರ್ಲೋಕ ಗ್ರಹೀಯ ವ್ಯವಸ್ಥೆಯಲ್ಲಿ ಬರುವ ಅನೇಕ ಗ್ರಹಗಳಲ್ಲಿ ಒಂದು. ಭೂರ್ಲೋಕದ ಮೇಲೆ ಆರು ಮತ್ತು ಕೆಳಗೆ ಏಳು ಗ್ರಹೀಯ ವ್ಯವಸ್ಥೆಗಳಿವೆ. ಆದ್ದರಿಂದ ಇಡೀ ಬ್ರಹ್ಮಾಂಡವು ಚತುರ್ದಶ ಭುವನ ಎಂಬ ಹೆಸರನ್ನು ಪಡೆದಿದೆ; ಅದು ಹದಿನಾಲ್ಕು ವಿವಿಧ ಗ್ರಹೀಯ ವ್ಯವಸ್ಥೆಗಳನ್ನು ಹೊಂದಿದೆ ಎಂದು ತಿಳಿಸುತ್ತದೆ. ಈ ಬ್ರಹ್ಮಾಂಡದಲ್ಲಿ ಕೋಟ್ಯಂತರ ಗ್ರಹಗಳಿವೆ ಮತ್ತು ಸಾಸಿವೆ ಚೀಲವೊಂದರಲ್ಲಿ ಎಷ್ಟು ಸಾಸಿವೆ ಕಾಳುಗಳಿರುತ್ತವೆಯೋ ಅಷ್ಟು ಬ್ರಹ್ಮಾಂಡಗಳಿವೆ.

ಲೌಕಿಕ ಆಕಾಶದ ಗ್ರಹೀಯ ವ್ಯವಸ್ಥೆಗಳಿಗೂ ಮೇಲೆ ಇನ್ನೊಂದು ಆಕಾಶವಿದ್ದು ಅದನ್ನು ‘ಪರವ್ಯೋಮ’ ಅಥವಾ ಆಧ್ಯಾತ್ಮಿಕ ಆಕಾಶವೆನ್ನುತ್ತಾರೆ. ಈ ಆಧ್ಯಾತ್ಮಿಕ ಆಕಾಶದಲ್ಲಿ ಆಧ್ಯಾತ್ಮಿಕ ಗ್ರಹಗಳಿವೆ. ಈ ಗ್ರಹಗಳನ್ನು ವೈಕುಂಠಗಳೆನ್ನುತ್ತಾರೆ. ಈ ಗ್ರಹಗಳಲ್ಲಿ ವಾಸಿಸುವವರು ದೇವೋತ್ತಮ ಪರಮ ಪುರುಷನ ಪ್ರೀತ್ಯರ್ಥ ಅನೇಕ ಪ್ರಕಾರದ ಪ್ರೇಮಭರಿತ ಭಕ್ತಿ ಸೇವೆಗಳಲ್ಲಿ ತೊಡಗಿರುತ್ತಾರೆ. ಕೃಷ್ಣನು ವಾಸಿಸುವ ಗ್ರಹವನ್ನು ‘ಕೃಷ್ಣ ಲೋಕ’ ಅಥವಾ ‘ಗೋಲೋಕ ವೃಂದಾವನ’ ಎನ್ನುತ್ತಾರೆ. ಅಲೌಕಿಕ ಆನಂದದಿಂದ ಕೂಡಿರುವ ಸರ್ವೋಚ್ಚ ಮತ್ತು ಶಾಶ್ವತ ಧಾಮವಾದ ಗೋಲೋಕ ವೃಂದಾವನದಲ್ಲಿ ಕೃಷ್ಣನು ದಿವ್ಯ ಲೀಲೆಗಳಲ್ಲಿ ತೊಡಗಿದ್ದಾನೆ.

ಚಿಂತಾಮಣಿ ಧಾಮದ ವರ್ಣನೆ:

ಕೃಷ್ಣನ ಪರಮೋತ್ಕೃಷ್ಟ ಧಾಮವನ್ನು ಬ್ರಹ್ಮಸಂಹಿತೆಯಲ್ಲಿ ಎಲ್ಲ ಆಕಾಂಕ್ಷೆಗಳನ್ನೂ ಈಡೇರಿಸುವ ‘ಚಿಂತಾಮಣಿ ಧಾಮ’ ಎಂದು ಬಣ್ಣಿಸಲಾಗಿದೆ. ಕೃಷ್ಣನ ಪರಮೋತ್ಕೃಷ್ಟ ಧಾಮವಾದ ಗೋಲೋಕ ವೃಂದಾವನವು ಒರೆಗಲ್ಲುಗಳಿಂದ ತಯಾರಿಸಿದ ಅರಮನೆಗಳಿಂದ ತುಂಬಿದೆ. ಅಲ್ಲಿ ಎಂತಹ ಆಹಾರ ಪದಾರ್ಥವನ್ನು ಬಯಸುತ್ತೀರೋ ಅಂತಹ ಆಹಾರ ಪದಾರ್ಥಗಳನ್ನು ನೀಡುವ ‘ಕಲ್ಪವೃಕ್ಷ’ಗಳಿವೆ ಮತ್ತು ಎಷ್ಟು ಬೇಕಾದರೂ ಹಾಲನ್ನು ಪೂರೈಸುವ ‘ಸುರಭಿ’ ಎಂಬ ಹಸುಗಳಿವೆ. ಈ ಧಾಮದಲ್ಲಿ ಸಹಸ್ರಾರು ಭಾಗ್ಯ ದೇವತೆಯರು (ಲಕ್ಷ್ಮಿಯರು) ಭಗವಂತನ ಸೇವೆ ಮಾಡುತ್ತಾರೆ ಮತ್ತು ಅವನನ್ನು ‘ಆದಿದೇವ’, ‘ಸರ್ವಕಾರಣಗಳ ಕಾರಣ’ ಮತ್ತು ‘ಗೋವಿಂದ’ ಎಂದು ಕರೆಯಲಾಗುತ್ತದೆ. ಭಗವಂತನಿಗೆ ತನ್ನ ಕೊಳಲು ನುಡಿಸುವ ರೂಢಿಯುಂಟು. ಅವನ ಅಲೌಕಿಕ ರೂಪವು ಮೂರೂ ಲೋಕಗಳಲ್ಲಿಯೇ ಅತ್ಯಂತ ಆಕರ್ಷಕವಾದುದಾಗಿದೆ: ಕಂಗಳು ಕಮಲದ ದಳಗಳಂತಿದ್ದರೆ, ಅವನ ದೇಹ ನೀಲಮೇಘಗಳ ಬಣ್ಣವನ್ನು ಹೊಂದಿದೆ. ಅವನು ಎಷ್ಟೊಂದು ಆಕರ್ಷಕನಾಗಿದ್ದಾನೆಂದರೆ ಸಹಸ್ರಾರು ಮನ್ಮಥರ ಸೌಂದರ್ಯವೂ ಅವನೆದುರು ಶೂನ್ಯ. ಅವನು ಕೇಸರಿ ವಸ್ತ್ರವನ್ನು ಧರಿಸುತ್ತಾನೆ, ಕೊರಳಲ್ಲಿ ಹೂಮಾಲೆ ಮತ್ತು ತನ್ನ ಕೇಶದಲ್ಲಿ ನವಿಲು ಗರಿಯನ್ನು ಧರಿಸುತ್ತಾನೆ. ಭಗವದ್ಗೀತೆಯಲ್ಲಿ ಕೃಷ್ಣನು ಆಧ್ಯಾತ್ಮಿಕ ಸಾಮ್ರಾಜ್ಯದ ಸರ್ವೋಚ್ಚ ಗ್ರಹವೂ ಅವನ ವೈಯಕ್ತಿಕ ಧಾಮವೂ ಆದ ಗೋಲೋಕ ವೃಂದಾವನದ ಬಗ್ಗೆ ಸ್ವಲ್ಪ ಸುಳಿವು ನೀಡುತ್ತಾನೆ ಅಷ್ಟೆ. ಅದರ ಸವಿಸ್ತಾರ ವರ್ಣನೆಯನ್ನು ಬ್ರಹ್ಮಸಂಹಿತೆಯಲ್ಲಿ ನೀಡಲಾಗಿದೆ.

ವೈದಿಕ ಸಾಹಿತ್ಯಗಳು ಹೇಳುವಂತೆ, ಭಗವಂತನ ಧಾಮಕ್ಕಿಂತ ಶ್ರೇಷ್ಠವಾದದ್ದು ಬೇರೇನೂ ಇಲ್ಲ ಮತ್ತು ಆ ಧಾಮವೇ ಅಂತಿಮ ಗಮ್ಯಸ್ಥಾನವಾಗಿದೆ. ಆ ಧಾಮಕ್ಕೆ ಬಂದವರು ಎಂದಿಗೂ ಈ ಲೌಕಿಕ ಜಗತ್ತಿಗೆ ಮರಳುವುದಿಲ್ಲ. ಕೃಷ್ಣ ಮತ್ತು ಅವನ ಧಾಮ ಒಂದೇ ತೆರನಾದ ಗುಣವನ್ನು ಹೊಂದಿರುವುದರಿಂದ ಬೇರೆ ಬೇರೆಯಲ್ಲ. ಕೃಷ್ಣನ ಈ ಪರಮೋತ್ಕೃಷ್ಟ ಧಾಮವು ಕಮಲದ ಹೂವಿನ ಆಕಾರದಲ್ಲಿದೆ. ಭಗವಂತನು ಲೌಕಿಕ ಜಗತ್ತಿನಲ್ಲಿ ಆವಿರ್ಭವಿಸಿದರೂ, ಇಲ್ಲಿ ತನ್ನದೇ ಧಾಮವನ್ನು ಅದರ ಯಥಾರೂಪದಲ್ಲಿ ಸೃಷ್ಟಿಸುತ್ತಾನೆ. ಮಥುರಾ ಜಿಲ್ಲೆಯಲ್ಲಿರುವ ವೃಂದಾವನವು ಆಧ್ಯಾತ್ಮಿಕ ಬಾನಿನಲ್ಲಿ ನೆಲೆಸಿರುವ ಗೋಲೋಕ ವೃಂದಾವನದ ಪ್ರತಿರೂಪವಾಗಿದೆ.

ಬ್ರಹ್ಮಜ್ಯೋತಿ:

ಕೃಷ್ಣನ ಸರ್ವೋಚ್ಚ ಧಾಮವು ಸೂರ್ಯ ಅಥವಾ ಚಂದ್ರ, ಬೆಂಕಿ ಅಥವಾ ವಿದ್ಯುತ್ತಿನಿಂದ ಬೆಳಗುತ್ತಿಲ್ಲ. ಈ ಧಾಮವನ್ನು ಸೇರುವವರು ಎಂದಿಗೂ ಲೌಕಿಕ ಜಗತ್ತಿಗೆ ಮರಳುವುದಿಲ್ಲ. ಭಗವಂತನ ಶಾಶ್ವತ ಆಕಾಶವನ್ನು ಬೆಳಗಿಸಲು ಈ ಸೂರ್ಯ ಅಥವಾ ಚಂದ್ರ, ವಿದ್ಯುತ್ ಅಥವಾ ಬೆಂಕಿಯ ಆವಶ್ಯಕತೆಯೇ ಇಲ್ಲ. ಏಕೆಂದರೆ ಆ ಶಾಶ್ವತ ಆಕಾಶವು ಪರಮ ಪುರುಷನ ದೇಹದಿಂದ ಹೊರಹೊಮ್ಮುವ ಬ್ರಹ್ಮಜ್ಯೋತಿಯಿಂದ ಬೆಳಗುತ್ತಿದೆ. ಈ ಜ್ಯೋತಿಯ ಕಿರಣಗಳಲ್ಲಿಯೇ ಆನಂದಮಯ ಮತ್ತು ಚಿನ್ಮಯ ಆಧ್ಯಾತ್ಮಿಕ ಗ್ರಹಗಳು ತೇಲುತ್ತಿರುತ್ತವೆ.

ವೈಕುಂಠ ನಿವಾಸಿಗಳು:

ಸಹಜವಾಗಿಯೇ ವೈಕುಂಠ ನಿವಾಸಿಗಳು ಮತ್ತು ಲೌಕಿಕ ನಿವಾಸಿಗಳ ರೂಪಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ. ಅವರ ಮೈಬಣ್ಣ ಕಾಂತಿಮಯವಾದ ಕಪ್ಪು ಬಣ್ಣವಾಗಿದ್ದರೂ ಲೌಕಿಕ ಜಗತ್ತಿನಲ್ಲಿರುವ ಕಳೆಯಿಲ್ಲದ ಶ್ವೇತವರ್ಣ ಮತ್ತು ಕಪ್ಪು ಮೈಬಣ್ಣಗಳಿಗಿಂತಲೂ ಎಷ್ಟೋ ಪಟ್ಟು ಆಕರ್ಷಕ ಮತ್ತು ಮನೋಹರ. ಈ ಲೌಕಿಕ ಜಗತ್ತಿನಲ್ಲಿ ಅವರ ಆಧ್ಯಾತ್ಮಿಕ ಶರೀರಗಳನ್ನು ಸರಿಗಟ್ಟುವವರೇ ಇಲ್ಲ. ಶುಭ್ರ ಮೋಡಗಳಿಂದ ಒಂದು ಕ್ಷಣ ಇಣುಕಿ ಮಾಯವಾಗುವ ಮಿಂಚಿನ ವರ್ಣನಾತೀತ ಸೌಂದರ್ಯ ನೋಡಿದರೆ ಅವರ ಸೌಂದರ್ಯ ಎಂತಹುದು ಎಂದು ಅರಿವಿಗೆ ಬರುತ್ತದೆ. ವೈಕುಂಠ ನಿವಾಸಿಗಳು ಸಾಮಾನ್ಯವಾಗಿ ಹಳದಿ ವಸ್ತ್ರಗಳನ್ನು ಧರಿಸುತ್ತಾರೆ. ಅವರ ತೆಳುವಾದ ಶರೀರಗಳು ಆಕರ್ಷಕ ರೀತಿಯಲ್ಲಿ ರೂಪಗೊಂಡಿವೆ ಮತ್ತು ಅವರ ಕಂಗಳು ಕಮಲದ ದಳಗಳಂತಿವೆ. ವಿಷ್ಣುವಿನಂತೆಯೇ ವೈಕುಂಠವಾಸಿಗಳೂ ಚತುರ್ಭುಜಗಳನ್ನು ಹೊಂದಿದ್ದು, ಅವುಗಳು ಶಂಖ, ಚಕ್ರ, ಗದೆ ಮತ್ತು ಕಮಲದ ಹೂವಿನಿಂದ ಅಲಂಕೃತಗೊಂಡಿವೆ. ಅಗಲವಾದ ಮನಮೋಹಕ ಎದೆಯನ್ನು ಆವರಿಸಿರುವ ವಜ್ರದ ಕೊರಳ ಮಾಲೆ, ಅದರ ಸುತ್ತಲೂ ಅತ್ಯಮೂಲ್ಯ ಆಭರಣಗಳು. ಇದೆಲ್ಲ ಲೌಕಿಕ ಜಗತ್ತಿನಲ್ಲಿ ದೊರಕುವುದುಂಟೇ? ಈ ವೈಕುಂಠ ನಿವಾಸಿಗಳು ಸದಾ ಜಾಜ್ವಲ್ಯಮಾನರಾಗಿರುತ್ತಾರೆ ಮತ್ತು ಬಲಿಷ್ಠರಾಗಿರುತ್ತಾರೆ. ಅವರಲ್ಲಿ ಕೆಲವರ ಮೈಬಣ್ಣ ಕೆಂಪು ಹವಳದ ಬಣ್ಣದ್ದಾಗಿದ್ದರೆ, ಇನ್ನು ಕೆಲವರ ಮೈಬಣ್ಣ ಕಮಲದ ಹೂವಿನಂತೆ. ಅವರಲ್ಲಿ ಪ್ರತಿಯೊಬ್ಬರೂ ಅಮೂಲ್ಯ ರತ್ನಗಳಿಂದ ತಯಾರಿಸಿದ ಕಿವಿಯೋಲೆಗಳನ್ನು ಧರಿಸಿರುತ್ತಾರೆ. ಹೂವಿನ ಕಿರೀಟಗಳು ಅವರ ಶಿರಗಳನ್ನಲಂಕರಿಸಿರುತ್ತವೆ.

ವೈಕುಂಠಗಳಲ್ಲಿ ವಿಮಾನಗಳಿದ್ದರೂ ಅವುಗಳು ಕರ್ಕಶ ಶಬ್ದ ಮಾಡುವುದಿಲ್ಲ. ಭೌತದ್ರವ್ಯವು ಎಲ್ಲ ದೃಷ್ಟಿಯಿಂದಲೂ ಅಪರಿಪೂರ್ಣವಾಗಿರುವುದರಿಂದ ಲೌಕಿಕ ವಿಮಾನಗಳು ಅಸುರಕ್ಷಿತ: ಅವುಗಳು ಯಾವಾಗ ಬೇಕಾದರೂ ಅಪಘಾತಕ್ಕೀಡಾಗಿ ಕೆಳಗೆ ಬೀಳಬಹುದು. ಆದರೆ ಆಧ್ಯಾತ್ಮಿಕ ಆಕಾಶದಲ್ಲಿ ಹಾರಾಡುವ ವಿಮಾನಗಳು ಆಧ್ಯಾತ್ಮಿಕವಾಗಿದ್ದು, ಸದಾ ತೇಜಸ್ಸಿನಿಂದ ಕೂಡಿರುತ್ತವೆ. ವ್ಯಾಪಾರಸ್ಥರು, ಕಾರ್ಯನಿರ್ವಾಹಕರು, ರಾಜಕಾರಣಿಗಳು ಅಥವಾ ಯೋಜನಾ ಆಯುಕ್ತರು ಮತ್ತು ಸರಕು ಅಥವಾ ಅಂಚೆ ಚೀಲಗಳು – ಇವೆಲ್ಲ ಆಧ್ಯಾತ್ಮಿಕ ಲೋಕದಲ್ಲಿ ಅಪರಿಚಿತವಾಗಿರುವುದರಿಂದ ಅಲ್ಲಿನ ವಿಮಾನಗಳು ಇವುಗಳಲ್ಲಿ ಯಾವುದನ್ನೂ ಹೊತ್ತು ಹಾರುವ ಪ್ರಶ್ನೆಯೇ ಇಲ್ಲ. ಈ ವೈಕುಂಠ ವಿಮಾನಗಳು ವಿನೋದ ವಿಹಾರಕ್ಕಾಗಿ ಮಾತ್ರ. ವೈಕುಂಠ ನಿವಾಸಿಗಳು ತಮ್ಮ ಅತ್ಯಂತ ಸುಂದರ, ದಂತದ ಗೊಂಬೆಗಳಂತಹ ಮಡದಿಯರೊಂದಿಗೆ ಈ ವಿಮಾನಗಳಲ್ಲಿ ಕುಳಿತು ವಿಹರಿಸುತ್ತಿರುತ್ತಾರೆ. ಒಟ್ಟಾರೆ, ಸುಂದರ ಜೋಡಿಗಳನ್ನು ಹೊತ್ತು ಸಾಗುವ ಈ ವಿಮಾನಗಳು ಆಧ್ಯಾತ್ಮಿಕ ಆಕಾಶದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಆಗಸದಲ್ಲಿನ ದಟ್ಟನೆಯ ಮೋಡಗಳ ತೋಟದಲ್ಲಿ ತಲೆಯೆತ್ತುವ ಮಿಂಚಿನ ಸಸ್ಯಗಳ ಅತ್ಯದ್ಭುತ ದೃಶ್ಯಕ್ಕೆ ಅವುಗಳನ್ನು ಹೋಲಿಸಬಹುದು. ವೈಕುಂಠಲೋಕದ ಆಧ್ಯಾತ್ಮಿಕ ಆಕಾಶವು ಸದಾ ಹೀಗೆಯೇ ನಳನಳಿಸುತ್ತಿರುತ್ತದೆ.

ಭಗವಂತನ ಆಂತರಿಕ ಓಜಸ್ಸಿನ ಪೂರ್ಣ ಕಾಂತಿಯು ವೈಕುಂಠಲೋಕದಲ್ಲಿ ಸದಾ ಅಪಾರವಾಗಿ ಬೆಳಗುವಂಥದ್ದು. ಇಲ್ಲಿ ಭಾಗ್ಯ ದೇವತೆಗಳು ಸದಾ ದೇವೋತ್ತಮ ಪರಮ ಪುರುಷನ ಪಾದಕಮಲಗಳಲ್ಲಿ ಸೇವೆ ಸಲ್ಲಿಸುವುದರಲ್ಲಿಯೇ ತಲ್ಲೀನರಾಗಿರುತ್ತಾರೆ. ಈ ಭಾಗ್ಯದೇವತೆಗಳು ತಮ್ಮ ಸ್ನೇಹಿತೆಯರೊಂದಿಗೆ ಕೂಡಿಕೊಂಡು ಅಮಿತವಾದ ಅಲೌಕಿಕ ಆನಂದದಿಂದ ಆವೃತವಾದ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಾರೆ. ಸತತವಾಗಿ ಭಗವಂತನ ಮಹಿಮೆಗಳನ್ನು ಸ್ತುತಿಸುತ್ತಿರುವ ಇವರು ಕ್ಷಣಮಾತ್ರವೂ ಮೌನತಾಳುವುದಿಲ್ಲ.

ಅಲ್ಲಿಗೆ ತಲಪುವುದು ಹೇಗೆ?

ಕೃಷ್ಣನ ಧಾಮವನ್ನು ಗೋಲೋಕ ವೃಂದಾವನವೆನ್ನುತ್ತಾರೆ. ಅವನ ದಿವ್ಯ ವಿಸ್ತರಣೆಗಳು ವಾಸವಾಗಿರುವ ಧಾಮಗಳನ್ನು ವೈಕುಂಠ ಎನ್ನುತ್ತಾರೆ ಮತ್ತು ಇಲ್ಲಿ ಭಗವಂತನು ನಾರಾಯಣನ ರೂಪದಲ್ಲಿ ಉಪಸ್ಥಿತನಿದ್ದಾನೆ. ಜೀವಾತ್ಮಗಳಲ್ಲಿ ಭಗವತ್ಪ್ರೇಮವು ಸುಪ್ತವಾಗಿದ್ದು, ಅದನ್ನು ಜಾಗೃತಗೊಳಿಸಿದ ಹೊರತು ಯಾವ ಜೀವಾತ್ಮನೂ ಭಗವತ್ ಕೃಪೆಗೆ ಪಾತ್ರನಾಗಲು ಮತ್ತು ಅವನ ಧಾಮವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ತನ್ನಲ್ಲಿ ಶಾಶ್ವತವಾದ ಭಗವತ್ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದರೆ ಭಕ್ತಿಸೇವೆಯ ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು. ಆದರೆ ಈ ತೆರನಾದ ಆಧ್ಯಾತ್ಮಿಕ ಜಾಗೃತಿಯಲ್ಲಿ ವಿವಿಧ ಹಂತಗಳಿವೆ. ಯಾರಲ್ಲಿ ಭಗವತ್ಪ್ರೇಮವು ಸಂಪೂರ್ಣವಾಗಿ ಜಾಗೃತಗೊಂಡಿದೆಯೋ ಅಂಥವರು ಆಧ್ಯಾತ್ಮಿಕ ಆಕಾಶದಲ್ಲಿರುವ ಗೋಲೋಕ ವೃಂದಾವನ ಗ್ರಹಕ್ಕೆ ಹೋಗುತ್ತಾರೆ. ಯಾರಲ್ಲಿ ಈಗ ತಾನೆ ಆಕಸ್ಮಿಕವಾಗಿ ಅಥವಾ ಭಕ್ತರ ಸಾಂಗತ್ಯದಿಂದಾಗಿ ಭಗವತ್ಪ್ರೇಮವು ಜಾಗೃತವಾಗಿದೆಯೋ ಅಂಥವರು ವೈಕುಂಠ ಗ್ರಹಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಮೂಲಭೂತವಾಗಿ ಗೋಲೋಕ ಮತ್ತು ವೈಕುಂಠಗಳ ನಡುವೆ ಭೌತಿಕ ವ್ಯತ್ಯಾಸಗಳು ಇಲ್ಲದಿದ್ದರೂ ವೈಕುಂಠಗಳಲ್ಲಿ ಅಮಿತವಾದ ಸಿರಿತನದಿಂದ ಭಗವಂತನನ್ನು ಸೇವಿಸಲಾಗುತ್ತದೆ, ಆದರೆ ಗೋಲೋಕದಲ್ಲಿ ಸಹಜ ಒಲವಿನೊಂದಿಗೆ ಭಗವಂತನನ್ನು ಸೇವಿಸಲಾಗುತ್ತದೆ.

ಲೌಕಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳ ನಡುವಿನ ವ್ಯತ್ಯಾಸ:

ಲೌಕಿಕ ಜಗತ್ತಿನಲ್ಲಿ ಎಲ್ಲವನ್ನೂ ಸೃಷ್ಟಿಸಲಾಗಿದೆ. ನಮ್ಮ ಅನುಭವಕ್ಕೆ ಬರುವ ಎಲ್ಲವೂ, ನಮ್ಮ ದೇಹ ಮತ್ತು ಮನಸ್ಸು ಕೂಡ, ಸೃಷ್ಟಿಸಲಾಗಿವೆ. ಈ ಸೃಷ್ಟಿಯ ಪ್ರಕ್ರಿಯೆ ಪ್ರಾರಂಭವಾಗಿದ್ದು ಬ್ರಹ್ಮದೇವನ ಜೀವನದಿಂದ. ಈ ಸೃಷ್ಟಿಯ ಸಿದ್ಧಾಂತವು ಲೌಕಿಕ ಬ್ರಹ್ಮಾಂಡದೆಲ್ಲೆಡೆ ವ್ಯಾಪಿಸಿಕೊಂಡಿರಲು ಕಾರಣ ರಜೋಗುಣ.

ಆದರೆ ಈ ರಜೋಗುಣವು ವೈಕುಂಠ ಗ್ರಹಗಳಲ್ಲಿ ಅನುಪಸ್ಥಿತವಾಗಿರುವುದರಿಂದ ಅಲ್ಲಿ ಏನನ್ನೂ ಸೃಷ್ಟಿಸಲಾಗಿಲ್ಲ. ಎಲ್ಲವೂ ಚಿರಂತನವಾಗಿ ಅಸ್ತಿತ್ವದಲ್ಲಿವೆ. ಅಲ್ಲದೇ ಅಲ್ಲಿ ತಮೋಗುಣವೂ ಇಲ್ಲದಿರುವ ಕಾರಣ ವಿನಾಶದ ಪ್ರಶ್ನೆಯೇ ಬರುವುದಿಲ್ಲ.

ಲೌಕಿಕ ಜಗತ್ತಿನಲ್ಲಿ ನಾವು ಎಲ್ಲವನ್ನೂ  ಶಾಶ್ವತಗೊಳಿಸುವ ಪ್ರಯತ್ನ ನಡೆಸಬಹುದು. ಆದರೆ ಅದು ಸಫಲವಾಗದು. ಆದ್ದರಿಂದ ಈ ಲೌಕಿಕ ಜಗತ್ತಿನಲ್ಲಿ ಶಾಶ್ವತತೆ, ಆನಂದ ಮತ್ತು ಪರಿಪೂರ್ಣ ಜ್ಞಾನವನ್ನು ನಾವು ಅನುಭವಿಸುವುದು ಅಸಾಧ್ಯ.

ಆಧ್ಯಾತ್ಮಿಕ ಜಗತ್ತಿನಲ್ಲಿ ತ್ರಿಗುಣಗಳು ಇಲ್ಲದಿರುವುದರಿಂದ ಅಲ್ಲಿ ಎಲ್ಲವೂ ಶಾಶ್ವತ, ಆನಂದಮಯ ಮತ್ತು ಜ್ಞಾನಪೂರ್ಣವಾಗಿವೆ. ಪ್ರತಿಯೊಂದೂ ಮಾತನಾಡಬಲ್ಲದು, ಚಲಿಸಬಲ್ಲದು, ಶ್ರವಣ ಮಾಡಬಲ್ಲದು ಮತ್ತು ಪೂರ್ಣ ಕೃಪೆಯ ಜೀವನವನ್ನು ನೋಡಬಲ್ಲದು. ಈ ರೀತಿಯ ಪರಿಸ್ಥಿತಿಯಿರುವುದರಿಂದ ಅಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲಗಳು ಪ್ರಭಾವ ಬೀರವು. ಅಂದರೆ ಅಲ್ಲಿ ಸಮಯ ಮತ್ತು ಸ್ಥಳದ ನಿರ್ಬಂಧವೇ ಇಲ್ಲ. ಆದ್ದರಿಂದಲೇ ಈ ಆಧ್ಯಾತ್ಮಿಕ ಆಕಾಶದಲ್ಲಿ ಬದಲಾವಣೆಯೆಂಬುದೇ ಇರುವುದಿಲ್ಲ. ಅಲ್ಲದೇ, ನಮ್ಮ ಮತ್ತು ಭಗವಂತನ ನಡುವಿನ ಸಂಬಂಧ ಮರೆಮಾಚುವಂತೆ ಮಾಡಿ, ನಾವು ಹೆಚ್ಚು ಲೌಕಿಕರಾಗುವಂತೆ ಮಾಡುವ ಸಂಪೂರ್ಣ ಬಾಹ್ಯ ಶಕ್ತಿಯಾದ ಮಾಯೆಯು ಕೂಡ ಅಲ್ಲಿ ಅನುಪಸ್ಥಿತ.

ಕೊನೆಯ ಮಾತು:

ನೋಡಿದಿರಲ್ಲಾ, ಮನುಷ್ಯನ ಶಕ್ತಿಯನ್ನು ಮೀರಿದ ಅಸಂಖ್ಯಾತ ಶಕ್ತಿಗಳು ಮತ್ತು ಅವನ ಕಲ್ಪನೆಗೂ ಸವಾಲೆಸೆಯುವಂತಹ ಲೋಕಗಳು ಅಸ್ತಿತ್ವದಲ್ಲಿವೆ ಎಂಬುದನ್ನು? ಭೂಮಿಯೊಂದೇ ಜೀವಿಗಳ ಬದುಕಿಗೆ ಯೋಗ್ಯವಾದ ಗ್ರಹ, ಲೌಕಿಕ ಜೀವನವೇ ಸ್ವರ್ಗಸುಖ ಮತ್ತು ಮಾನವನ ಸಾಧನೆಗಳೇ ಸರ್ವಶ್ರೇಷ್ಠ ಎಂಬ ನಂಬಿಕೆಗಳು ಬರೀ ಭ್ರಮೆಯಷ್ಟೆ. ಇವೆಲ್ಲವನ್ನೂ ಸೃಷ್ಟಿಸಿದ ಸರ್ವಶಕ್ತ, ಸರ್ವವ್ಯಾಪಿ ಪರಮ ಪುರುಷನೊಬ್ಬನಿದ್ದಾನೆ, ಅವನ ಲೀಲೆಗಳೇ ಪರಮಾನಂದದ ಆಗರ ಮತ್ತು ಅವನ ಧಾಮವು ನಮ್ಮೆಲ್ಲರ ಆತ್ಮಗಳಿಗೆ ಕೊನೆಯ ಗಮ್ಯಸ್ಥಾನ ಎಂಬುದೊಂದೇ ಸತ್ಯ. ಈ ಲೌಕಿಕ ಜಗತ್ತಿನ ಗೊಂದಲಮಯ ವಾತಾವರಣದಲ್ಲಿ ಬಳಲುವುದೋ ಅಥವಾ ಪರಿಶುದ್ಧ ಭಕ್ತಿಸೇವೆಯನ್ನು ಸಲ್ಲಿಸುವ ಮೂಲಕ ಭಗವತ್ಪ್ರೇಮವನ್ನು ಗಳಿಸಿ ಶಾಶ್ವತ ಆನಂದದಿಂದ ತುಂಬಿರುವ ಅವನ ಧಾಮಕ್ಕೆ ಮರಳುವ ಪ್ರಯತ್ನ ಮಾಡುವುದೋ ಎಂಬುದನ್ನು ನಿರ್ಧರಿಸುವುದು ಅತಿ ಮುಖ್ಯ.

ಲೌಕಿಕ ಜಗತ್ತಿನಲ್ಲಿ ಆನಂದ, ನೆಮ್ಮದಿಗಳು ಬಿಸಿಲ್ಗುದುರೆಯ ಹಾಗೆ, ಮುಷ್ಟಿಯಲ್ಲಿ ಒತ್ತಿ ಹಿಡಿಯಲು ಎಷ್ಟು ಪ್ರಯತ್ನಿಸಿದರೂ ಜಾರಿ ಹೋಗುವ ಮರಳಿನ ಹಾಗೆ. ನಮ್ಮ ಜೀವನವೂ ಅಷ್ಟೆ. ಆದ್ದರಿಂದಲೇ ಶಾಶ್ವತ ಆನಂದವನ್ನು ಗಳಿಸುವುದು ನಮ್ಮ ಜೀವನದ ಗುರಿಯಾಗಬೇಕು. ಅಂತಹ ಆನಂದ ಸಿಗುವುದೆಲ್ಲಿ? ಗೋಲೋಕ ವೃಂದಾವನದಲ್ಲಿ, ಭಗವಂತನ ಪಾದಕಮಲಗಳಲ್ಲಿ. ಆದ್ದರಿಂದ ಭಗವತ್ಪ್ರಜ್ಞೆ ಮತ್ತು ಭಗವತ್ಪ್ರೇಮವನ್ನು ಜಾಗೃತಗೊಳಿಸಿಕೊಂಡು, ಭಗವಂತನೆಡೆಗೆ, ಅವನ ಧಾಮದೆಡೆಗೆ ಮರಳುವ ಸಕಲ ಪ್ರಯತ್ನಗಳನ್ನೂ ಮಾಡಬೇಕು. ನಮ್ಮ ಅಂತಹ ಪ್ರಯತ್ನಗಳಿಂದ ಆಧ್ಯಾತ್ಮಿಕ ಆಕಾಶವನ್ನು ತಲಪಿದರೆ, ನಮ್ಮ ಬಹುಮೂಲ್ಯ ಮಾನವ ಜನ್ಮವು ಸಾರ್ಥಕವಾಗುವುದು.
Leave a Reply

Your email address will not be published. Required fields are marked *