Search
Saturday 23 November 2019
  • :
  • :

ನೀವೆಷ್ಟು ಸ್ವತಂತ್ರರು?

ಪಾಶ್ಚಾತ್ಯ ತತ್ತ್ವಜ್ಞಾನದ ಪ್ರಧಾನ ಚರ್ಚೆಗಳಲ್ಲೊಂದಕ್ಕೆ ವೈದಿಕ ಕೊಡುಗೆ.

ಸೂರಿಯು ತನ್ನ ನಗರದ ಅನಾಥಾಶ್ರಮಕ್ಕೆ ಒಂದು ದಿನ ಹೋಗಿ ಒಂದು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ. ಪಟ್ಟಣದ ಬೇರೊಂದು ಭಾಗದಲ್ಲಿ ಚಿಕ್ಕನು ಬ್ಯಾಂಕೊಂದನ್ನು ದರೋಡೆ ಮಾಡಿದ. ಅಂತಹ ತೀವ್ರವಾದ ವಿಭಿನ್ನ ಆಯ್ಕೆಗಳನ್ನು ಮಾಡಿಕೊಳ್ಳಲು ಈ ಇಬ್ಬರಿಗೆ ಪ್ರೇರಣೆ ನೀಡಿದ ಸಂಗತಿಯೇನು? ಅವು ಅವರ ಸಂಕಲ್ಪದ ಪರಿಣಾಮವೋ ಅಥವಾ ಬೇರೆ ಯಾವುದೋ ಅಂಶ ಬೀರಿದ ಪ್ರಭಾವವೋ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಅವರಿಬ್ಬರ ಈ ಕ್ರಿಯೆಗಳು ಪೂರ್ವ ನಿರ್ಧಾರಿತವೋ ಅಥವಾ ಸೂರಿ ಮತ್ತು ಚಿಕ್ಕನಿಗೆ ಇಚ್ಛಾಸ್ವಾತಂತ್ರ್ಯವಿದೆಯೋ?

ಈ ಪ್ರಶ್ನೆಗಳು ಪಾಶ್ಚಾತ್ಯ ತತ್ತ್ವಜ್ಞಾನದ ಕೇಂದ್ರೀಯ ಚರ್ಚೆಗಳಲ್ಲೊಂದನ್ನು ಕುರಿತದ್ದಾಗಿವೆ. ಮಾನವ ಜೀವಿಗಳು ಒಂದು ನಿರ್ದಿಷ್ಟವಾದ ದಾರಿಯಲ್ಲಿ ಸಾಗಲು ವಿಗೊಳ್ಳಲ್ಪಟ್ಟಿದ್ದಾರೆಯೆ? ಮನರಂಜನಾ ಉದ್ಯಾನದಲ್ಲಿ ಸವಾರಿ ಮಾಡುತ್ತಿರುವ ಮಕ್ಕಳು ಎಡಕ್ಕೂ ಬಲಕ್ಕೂ ತಿರುಗಿಸಬಹುದಾದರೂ ಅನಿವಾರ್ಯವಾಗಿ ನಿರ್ದಿಷ್ಟವಾದ ಪಥದಲ್ಲಿಯೇ ಸಾಗಬೇಕು ಎನ್ನುವ ರೀತಿಯಲ್ಲಿ ನಾವಿದ್ದೇವೆಯೇ? ಅಥವಾ ನಾವು ಬಯಸಿದ್ದನ್ನು ಇಚ್ಛೆಪಟ್ಟು ಮಾಡಲು ನಾವು ಸ್ವತಂತ್ರರೇ? ಏನನ್ನು ಬೇಕಾದರೂ ಮತ್ತು ಎಲ್ಲವನ್ನು ಬೇಕಾದರೂ ಬರೆಯಬಹುದಾದ ಖಾಲಿ ಸ್ಲೇಟೇ ನಮ್ಮ ಜೀವನ?

ಈ ಲೇಖನದಲ್ಲಿ ನಾವು ಪಾಶ್ಚಾತ್ಯ ತತ್ತ್ವಜ್ಞಾನವು ಹೇಗೆ ನಿಯತಿವಾದದ ವಿರುದ್ಧ ಮುಕ್ತ ಸಂಕಲ್ಪದ ಸಮಸ್ಯೆಯನ್ನು ಅನುಲಕ್ಷಿಸಿದೆ ಎಂದು ಸಂಕ್ಷಿಪ್ತವಾಗಿ ನೋಡೋಣ. ಅತ್ಯಂತ ನುಣುಚಿಕೊಳ್ಳುವ ಆದರೂ ಪ್ರಮುಖವಾದ ಈ ವಿವಾದಾಂಶಕ್ಕೆ ಹೆಚ್ಚುವರಿಯ ಒಳನೋಟವನ್ನು ವೈದಿಕ ಸಾಹಿತ್ಯವು ಹೇಗೆ ನೀಡಬಲ್ಲದು ಎಂದು ನೋಡೋಣ.

ನಾವು ಪ್ರಾರಂಭ ಮಾಡುವುದಕ್ಕೆ ಮುಂಚೆ ಸಂಕಲ್ಪ (ವಿಲ್) ಎಂಬ ಶಬ್ದದ ಬಗೆಗೆ ಸ್ಪಷ್ಟಪಡಿಸಿಕೊಳ್ಳೋಣ. ತತ್ತ್ವಜ್ಞಾನದ ದೃಷ್ಟಿಕೋನದಿಂದ ಕಾಲಾನುಕ್ರಮದಲ್ಲಿ ಈ ಶಬ್ದದ ಅರ್ಥವು ಸ್ಥಿತ್ಯಂತರಗಳನ್ನು ಹೊಂದಿರುವ ಸೂಕ್ಷ್ಮ ವ್ಯತ್ಯಾಸದ ಪರಿಕಲ್ಪನೆಯಾಗಿದೆ. ಆದಾಗ್ಯೂ, ಎಲ್ಲ ಕಾರ್ಯಸಾಧುವಾದ ಉದ್ದೇಶಗಳಿಗೂ ಅದನ್ನು “ಕ್ರಿಯೆ” ಎನ್ನುವುದಕ್ಕೆ ಸಮಾನಾರ್ಥಕವಾಗಿ ತೆಗೆದುಕೊಳ್ಳಬಹುದು. ಆದ್ದರಿಂದ ನಿಯತಿವಾದದ ವಿರುದ್ಧ ಮುಕ್ತ ಸಂಕಲ್ಪ ಎಂಬ ಚರ್ಚೆಯು ಮುಖ್ಯವಾಗಿ ಮಾನವನ ನಡವಳಿಕೆಯ ಕಾರಣವನ್ನು ಗುರುತಿಸುವ ಅನ್ವೇಷಣೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅಸಂಗತವಾದ ತತ್ತ್ವಶಾಸ್ತ್ರೀಯವಾದ ಪರಿಭಾಷೆಯ ಮಬ್ಬು ಕವಿದ ಗೋಜಲಿನಲ್ಲಿ ಹಾದಿ ತಪ್ಪಿಸಿಕೊಳ್ಳದಿರುವಂತೆ ನಿಮಗೆ ಸಹಾಯ ಮಾಡುತ್ತದೆ.

ಕಟ್ಟುನಿಟ್ಟಾದ ನಿಯಂತ್ರಣವಾದ (Strict Determinism)

ಈ ಚರ್ಚೆಯನ್ನು ಕುರಿತ ಒಂದು ಪರಿಪ್ರೇಕ್ಷ್ಯೆ ಎಂದರೆ ದೇಣಿಗೆ ನೀಡುವುದು ಸೂರಿಯ ವಿ ಲಿಖಿತವಾಗಿತ್ತು ಮತ್ತು ಕಳ್ಳತನ ಮಾಡುವುದು ಚಿಕ್ಕನ ವಿಲಿಖಿತವಾಗಿತ್ತು, ಮತ್ತು ಅವರಿಬ್ಬರಿಗೂ ಅದರಲ್ಲಿ ಎಂದಿಗೂ ಬೇರೆ ರೀತಿ ವರ್ತಿಸುವ ಅಕಾರವಿರಲಿಲ್ಲ. ಈ ಸಿದ್ಧಾಂತವು ಕಟ್ಟುನಿಟ್ಟಾದ ನಿಯತವಾದ ಎಂದು ಪ್ರಸಿದ್ಧವಾಗಿದೆ. ಎಲ್ಲ ಮಾನವಕ್ರಿಯೆಗಳೂ ಸರಣಿ ಸರಣಿಯಾದ ಕಾರಣಗಳು ಮತ್ತು ಪರಿಣಾಮಗಳ ನೇರ ಫಲಿತಾಂಶಗಳು. ಆದ್ದರಿಂದ ಅವು ಪೂರ್ವನಿಶ್ಚಿತವಾದವು ಮತ್ತು ಒಂದೇ ಒಂದು ರೀತಿಯಲ್ಲಿ ಮಾತ್ರ ಅನಾವರಣಗೊಳ್ಳಬಲ್ಲವು. ಆದ್ದರಿಂದ ನಾವು ನಮ್ಮ ಕ್ರಿಯೆಗಳನ್ನು ನಿರ್ಧರಿಸುವಲ್ಲಿ ವಾಸ್ತವವಾಗಿ ಯಾವುದೇ ಪಾತ್ರವನ್ನೂ ವಹಿಸುವುದಿಲ್ಲ. ಬದಲಾಗಿ ಅವು ನಮ್ಮನ್ನು ಮೀರಿದ ಬೇರೆ ಯಾವುದರಿಂದಲೋ ಘಟಿಸುತ್ತವೆ. ಪಾಶ್ಚಾತ್ಯ ತತ್ತ್ವಜ್ಞಾನಿಗಳು ಈ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಮಾನ್ಯವಾಗಿ ಇಷ್ಟಪಡುವುದಿಲ್ಲ. ಅದು ಸಕಾರಣವಾಗಿಯೇ ಇದೆ: ಕಟ್ಟುನಿಟ್ಟಾದ ನಿಯತಿವಾದವು ನಾಗರಿಕತೆಯ ಸಾಮಾನ್ಯ ಅನುಭವ ಮತ್ತು ರೂಢಿಗಳಿಗೆರಡಕ್ಕೂ ತದ್ವಿರುದ್ಧವಾಗಿದೆ.೧

ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಬಲಾತ್ಕಾರದಿಂದ ನಮ್ಮನ್ನು ತಳ್ಳಲಾಗಿದೆ ಎಂಬ ಭಾವನೆಗಿಂತ ದೂರವಾಗಿ, ನಮ್ಮ ಜೀವನದಲ್ಲಿ ನಮ್ಮದೇ ಆದ ಆಯ್ಕೆಗಳನ್ನು ನಾವು ಮಾಡಬಹುದು ಎಂದು ಸಹಜ ಪ್ರವೃತ್ತಿಯಿಂದ ನಮಗೆ ಅನಿಸುತ್ತದೆ. ಆದ್ದರಿಂದ ನಾವು ಏನೆಲ್ಲವನ್ನು ಮಾಡುತ್ತೇವೆಯೋ ಅದರ ಮೇಲೆ ನಮಗೇನೂ ನಿಯಂತ್ರಣವಿಲ್ಲ ಎಂಬ ಯೋಚನೆಯೇ ಹೇವರಿಕೆ ಹುಟ್ಟಿಸುವಂಥದು. ಸಮಾಜವನ್ನು ಪಾಲಿಸುತ್ತಿರುವ ನಿಯಮಗಳನ್ನು ಅನುಸರಿಸಲು ಅಥವಾ ಅನುಸರಿಸದಿರಲು ನಾಗರಿಕರು ನಿರ್ಧರಿಸಿದಾಗ ಮಾತ್ರ ಅವು ಅರ್ಥಪೂರ್ಣವಾಗುತ್ತವೆ. ಉದಾಹರಣೆಗೆ ಚಿಕ್ಕನನ್ನು ಶಿಕ್ಷಿಸುವುದನ್ನು ನಾವು ಪ್ರಾಯಃ ಬೆಂಬಲಿಸಬಹುದು. ಕದಿಯುವುದು ಕೆಟ್ಟದ್ದು, ಬೇರೆಯವರು ಅವನ ಉದಾಹರಣೆಯನ್ನು ಅನುಸರಿಸಬಾರದು ಎಂಬ ಸಂದೇಶವನ್ನು ಸಮುದಾಯಕ್ಕೆ ತಲಪಿಸುವ ಉದ್ದೇಶದಿಂದ ನಾವು ಹೀಗೆ ಮಾಡುತ್ತೇವೆ. ಆದರೆ ನಾಗರಿಕರಿಗೆ ಕದಿಯಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುವ ಶಕ್ತಿ ಇಲ್ಲದಿದ್ದರೆ ಅಂತಹ ಸಂದೇಶವನ್ನು ಕಳುಹಿಸುವುದರಿಂದ ಏನು ಪ್ರಯೋಜನ? ಆದ್ದರಿಂದ ಕಟ್ಟುನಿಟ್ಟಾದ ನಿಯತಿವಾದವನ್ನು ಪ್ರತಿ-ಅಂತರ್ಬೋಧೆ ಮತ್ತು ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಬಹುದು.

ಸ್ಪಷ್ಟ ಮುಕ್ತ ಸಂಕಲ್ಪ (Categorical Free-will)

ಈ ಅತಿರೇಕವನ್ನು ತಿರಸ್ಕರಿಸಿದ ಮೇಲೆ, ಬೇರೆಯದನ್ನು ಪರೀಕ್ಷಿಸಿ ನೋಡೋಣ. ಕಟ್ಟುನಿಟ್ಟಾದ ನಿಯತಿವಾದವು ಸೂರಿ ಮತ್ತು ಚಿಕ್ಕ ಒಂದು ನಿರ್ದಿಷ್ಟವಾದ ರೀತಿಯಲ್ಲಿಯೇ ಪ್ರವರ್ತಿಸಬೇಕಾಗಿತ್ತು ಎಂದು ನಮಗೆ ಹೇಳುತ್ತದೆ. ಇದಕ್ಕೆ ವಿರುದ್ಧ ದೃಷ್ಟಿಕೋನವು ಅವರು ಸಂಪೂರ್ಣವಾಗಿ ಮನಬಂದಂತೆ  ಪ್ರವರ್ತಿಸಬಹುದಾಗಿತ್ತು ಎಂದು ಹೇಳುತ್ತದೆ. ಈ ಸಿದ್ಧಾಂತವು ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪ ಎಂದು ಹೆಸರಾಗಿದೆ. ಅದರ ಪ್ರಕಾರ ಮಾನವನ ಕ್ರಿಯೆಗಳು ಸೈದ್ಧಾಂತಿಕವಾಗಿ ಸಂಪೂರ್ಣವಾಗಿ ಅನಿಯಂತ್ರಿತವಾಗಿವೆ ಮತ್ತು ಅಸಂಖ್ಯಾತವಾದ ರೀತಿಯಲ್ಲಿ ಅವು ಅನಾವರಣಗೊಳ್ಳಬಹುದು. ನಮ್ಮ ನಡವಳಿಕೆಯು ಯಾವುದೇ ಭವ್ಯವಾದ ವಿಶ್ವಯೋಜನೆಯ ಪೂರ್ವನಿಶ್ಚಿತವಾದ ಉತ್ಪನ್ನವಲ್ಲ, ಆದರೆ ಅದು ಅನಿಶ್ಚಿತವೂ ನಮ್ಯವೂ ಆಗಿದೆ. ಅದಕ್ಕೆ ಮೂಲಭೂತವಾಗಿ ಯಾವುದೇ ಕಾರಣವಿಲ್ಲ. ಏಕೆಂದರೆ ಕಾರಣವು ಅದರ ಮಾರ್ಗವನ್ನೇ ಬದಲಾಯಿಸಿಬಿಡಬಲ್ಲದು.

ಕಟ್ಟುನಿಟ್ಟಾದ ನಿಯತವಾದದ ಸಿದ್ಧಾಂತಕ್ಕೆ ಪಾಶ್ಚಾತ್ಯ ತತ್ತ್ವಜ್ಞಾನಿಗಳಲ್ಲಿ ಕೆಲವೇ ಮಂದಿ ಅನುಯಾಯಿಗಳಿದ್ದರು. ಆದರೆ ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪದ ಸಿದ್ಧಾಂತವನ್ನು ಅನೇಕ ಮಂದಿ ಅಪ್ಪಿಕೊಂಡಿದ್ದರು. ಅದರಲ್ಲಿ ಹದಿನೇಳನೆಯ ಶತಮಾನದ ಆರಂಭಕಾಲದ ಫ್ರೆಂಚ್ ತತ್ತ್ವಜ್ಞಾನಿ ರೆನಾ ಡೇಕಾರ್ಟ್ ಮತ್ತು ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ಜರ್ಮನ್ ತತ್ತ್ವಜ್ಞಾನಿ ಇಮ್ಯಾನ್ಯುಯಲ್ ಕಾಂಟ್ ಸೇರಿದ್ದರು. ದಿಟದಲ್ಲಿ ಅದು ನಿಯತಿವಾದದ ಉಸಿರುಕಟ್ಟಿಸುವ ನಿಷ್ಠುರತೆಯಿಂದ ಒಂದು ಸ್ವಾಗತಾರ್ಹವಾದ ಉಪಶಮನವಾಗಿತ್ತು. ಅಲ್ಲದೆ ಅದು ಪಾಶ್ಚಾತ್ಯ ಕಲ್ಪನೆಗಳಾದ ಬಿಡುಗಡೆ ಮತ್ತು ಸ್ವಾತಂತ್ರ್ಯಗಳೊಡನೆ ಅನುರಣಿಸುತ್ತಿತ್ತು. ಆದರೆ ಇತರ ತತ್ತ್ವಜ್ಞಾನಿಗಳು ಬೆರಳು ಮಾಡಿ ತೋರಿದಂತೆ (ಮುಂದಿನ ಭಾಗದಲ್ಲಿ ಹೆಸರಿಸಿರುವವರೂ ಸೇರಿದಂತೆ) ಅದು ಬಹುದೂರ ಕ್ರಮಿಸುತ್ತದೆ. ಅವರು ವಾದಿಸುವುದೇನೆಂದರೆ ಒಂದು ವಿದ್ಯಮಾನವು ಒಂದು ಕಾರಣವನ್ನು (ಅಥವಾ ಕಾರಣಗಳನ್ನು) ಹೊಂದಿರುತ್ತದೆ ಅಥವಾ ಸಂಪೂರ್ಣವಾಗಿ ಯಾದೃಚ್ಛಿಕವಾಗಿರುತ್ತದೆ; ಅದಕ್ಕೆ ಮೂರನೆಯ ಆಯ್ಕೆ ಎನ್ನುವುದಿರುವುದಿಲ್ಲ. ಆದ್ದರಿಂದ ಮಾನವನ ಕ್ರಿಯೆಗಳಿಗೆ ಕಾರಣವಿಲ್ಲ ಎಂದು ಹೇಳಿದರೆ, ಅವು ಯಾದೃಚ್ಛಿಕ ಎಂದು ಹೇಳಿದಂತಾಯಿತು. ಆದರೆ ನಮ್ಮ ಸುತ್ತುಮುತ್ತಿನ ಜಗತ್ತನ್ನು ಅವಲೋಕಿಸಿದರೆ ಸಂಗತಿಯು ಶುದ್ಧಾಂಗವಾಗಿ ಹೀಗಿಲ್ಲ ಎಂದು ಕಂಡುಬರುತ್ತದೆ. ತಾಯಂದಿರು ಒಗೆಯುವ ಬಟ್ಟೆಗಳನ್ನು ಬಗಲಿಗೆ ಅವಚಿಕೊಂಡು ತಮ್ಮ ಕೂಸುಗಳನ್ನು ಬಟ್ಟೆ ಒಗೆಯುವ ಯಂತ್ರಕ್ಕೆ ಹಾಕುವುದನ್ನು ನಾವು ನೋಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಅಂತಹ ವಿವರಿಸಲಸಾಧ್ಯವಾದ ಅಸ್ತವ್ಯಸ್ತತೆಯ ಬದಲು (ಸಿದ್ಧಾಂತದ ತಾರ್ಕಿಕ ಪರಿಣಾಮ) ಮಾನವನ ನಡವಳಿಕೆಯಲ್ಲಿ ಸುವ್ಯವಸ್ಥೆ ಮತ್ತು ಅರ್ಥಪೂರ್ಣತೆಯನ್ನು ನಾವು ಗಮನಿಸುತ್ತೇವೆ. ಆದ್ದರಿಂದ ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪವನ್ನು ಕೂಡ ಅಲೌಕಿಕ ಮತ್ತು ಅವಾಸ್ತವಿಕ ಎಂದು ತಿರಸ್ಕರಿಸಬೇಕಾಗುತ್ತದೆ.

ಸೌಮ್ಯ ನಿಯತಿವಾದ (Soft Determinism)

ಹೀಗೆ ಕಟ್ಟುನಿಟ್ಟಾದ ನಿಯತಿವಾದವು ನಮಗೆ ಉಸಿರಾಡಲೇ ಅವಕಾಶವನ್ನು ನೀಡುವುದಿಲ್ಲ ಎನ್ನುವಾಗ, ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪವು ಬಾಗಿಲನ್ನು ತೀರ ವಿಶಾಲವಾಗಿ ತೆರೆದಿಡುತ್ತದೆ. ಎರಡು ಸಿದ್ಧಾಂತಗಳು ಕೂಡ ನಮ್ಮ ಕ್ರಿಯೆಗಳ ಮೇಲೆ ಪ್ರಜ್ಞಾಪೂರ್ವಕ ಪ್ರಭಾವವನ್ನು ಹೊಂದಿರಲು ಅವಕಾಶ ಕೊಡುವುದಿಲ್ಲ. ಈ ಎರಡು ಅತಿರೇಕಗಳ ನಡುವೆ ಇರುವ ಮಧ್ಯಮ ನೆಲೆಯ ಸಂಗತಿಯೇನು? ಅಂತಹ ದೃಷ್ಟಿಕೋನವು ಸೂರಿ ಮತ್ತು ಚಿಕ್ಕರಿಗೆ ನಿಯತಿವಾದ ಮತ್ತು ಮುಕ್ತ ಸಂಕಲ್ಪಗಳ ನಡುವೆ ಎಲ್ಲೋ ರಾಜಿಮಾಡಿಕೊಳ್ಳುವ ರೀತಿಯಲ್ಲಿ ತಮ್ಮ ಕ್ರಿಯೆಗಳನ್ನು ನಡೆಸಲು ಅವಕಾಶ ನೀಡಬಹುದು. ಆಗ ಮಾನವನ ನಡವಳಿಕೆಯನ್ನು, ಬಿಡಿ ವ್ಯಕ್ತಿಗಳ ಆಶಯಗಳು ಏನೇ ಆಗಿದ್ದರೂ, ಮನಬಂದಂತೆ ನಡೆದವೂ ಅಲ್ಲ ಅಥವಾ ತನ್ನಷ್ಟಕ್ಕೆ ತಾನೆ ನಿರ್ವಹಿಸಿದವೂ ಅಲ್ಲ ಎಂದು ಅರ್ಥಮಾಡಿಕೊಳ್ಳಬಹುದು.

ಅಂತಹ ಹೊಂದಾವಣೆಗೆ ಅಸಂಖ್ಯಾತ ಜನರು ಅನುಮೋದನೆ ನೀಡಿದ್ದಾರೆ. ಅದರಲ್ಲಿ ಇಂಗ್ಲಿಷ್ ತತ್ತ್ವಜ್ಞಾನಿಗಳಾದ ಥಾಮಸ್ ಹಾಬ್ಸ್, ಜಾನ್‌ಲಾಕ್ ಮತ್ತು ಜಾನ್ ಸ್ಟೂಅರ್ಟ್ ಮಿಲ್ ಕೂಡ ಸೇರಿದ್ದಾರೆ. ಅಲ್ಲದೆ ಅದು ಹೆಚ್ಚು ಕಡಮೆ ಸಮಕಾಲೀನ ಪಾಶ್ಚಾತ್ಯ ತತ್ತ್ವಜ್ಞಾನದ ಸರ್ವಸಮ್ಮತಿಯನ್ನೂ ಪ್ರತಿನಿಸುತ್ತದೆ. ಇವರ ಪೈಕಿ ಹದಿನೆಂಟನೆಯ ಶತಮಾನದ ಮಧ್ಯಭಾಗದ ಸ್ಕಾಟ್ ತತ್ತ್ವಜ್ಞಾನಿ ಡೇವಿಡ್ ಹ್ಯೂಮ್ ಪ್ರಮುಖ ಎಂದು ಹೇಳಲಾಗುವಂತಹ ಮಂಡನೆಯನ್ನು ಮಾಡಿದ. ಅವನ ಸಿದ್ಧಾಂತವನ್ನು ಸೌಮ್ಯ ನಿಯತಿವಾದ ಎಂದು ಹೇಳಲಾಗುತ್ತಿದೆ. ಏಕೆಂದರೆ ಅದು ಕಟ್ಟುನಿಟ್ಟಾದ ನಿಯತಿವಾದವನ್ನು ತೆಗೆದುಕೊಂಡು ವೈಯಕ್ತಿಕ ಸ್ವಾತಂತ್ರ್ಯಕ್ಕೂ ನೈತಿಕ ಉತ್ತರದಾಯಿತ್ವಕ್ಕೂ ಅವಕಾಶ ನೀಡುವ ರೀತಿಯಲ್ಲಿ ಅದನ್ನು ಮಾರ್ಪಡಿಸುತ್ತದೆ. ಪ್ರತಿಯೊಂದು ಮಾನವ ಕ್ರಿಯೆಗೂ ಒಂದು ಕಾರಣವಿರುತ್ತದೆ, ಅದು ಹೇಗೆ ಪ್ರಕಟಗೊಳ್ಳುತ್ತದೆ ಎನ್ನುವುದನ್ನು ಈ ಕಾರಣವು ನಿರ್ಣಯಿಸುತ್ತದೆ ಎಂಬ ಕಲ್ಪನೆಯಿಂದ ಅವನು ಪ್ರಾರಂಭಿಸುತ್ತಾನೆ. ಈ ಕಾರಣವು ಬಿಡಿವ್ಯಕ್ತಿಗೆ ಬಾಹ್ಯ ಸ್ವರೂಪದ್ದಾಗಿದ್ದರೆ, ಅದರಿಂದ ಹೊರಹೊಮ್ಮುವ ಕ್ರಿಯೆಯನ್ನು ಅನುದ್ದಿಷ್ಟವಾದದ್ದು ಎಂದು ಅವನು ಹೇಳುತ್ತಾನೆ. ಈ ಕಾರಣವು ಬಿಡಿವ್ಯಕ್ತಿಯ ಆಂತರಿಕ ಅಭಿಲಾಷೆಯಾಗಿದ್ದರೆ, ತತ್ಪರಿಣಾಮವಾದ ಕ್ರಿಯೆಯು ಉದ್ದಿಷ್ಟ ಪೂರ್ವಕವಾದದ್ದು ಎಂದು ಅವನು ಹೇಳುತ್ತಾನೆ. ಕಟ್ಟುನಿಟ್ಟಾದ ನಿಯತಿವಾದದಲ್ಲಾದರೋ ಎಲ್ಲ ಕ್ರಿಯೆಗಳೂ ಉಂಟಾಗುವುದು ಬಾಹ್ಯ ಶಕ್ತಿಗಳಿಂದ. ಆದ್ದರಿಂದ ಹ್ಯೂಮ್ ಅದನ್ನು ಅನುದ್ದಿಷ್ಟವಾದದ್ದು ಎಂದು ಕರೆದಿರಬಹುದು. ಅವನ ಸೌಮ್ಯ ನಿಯತಿವಾದವು  ಬಾಹ್ಯ ಮತ್ತು ಆಂತರಿಕ ಕಾರಣಗಳೆರಡಕ್ಕೂ ಅವಕಾಶ ಮಾಡಿಕೊಡುತ್ತದೆ. ದಿಟದಲ್ಲಿ ಎರಡನೆಯದನ್ನು ಕುರಿತಂತೆಯೇ ಅವನು ಒತ್ತಿ ಹೇಳುತ್ತಾನೆ. ಅದಕ್ಕೆ ಅವನು ನೀಡುವ ವಿವರಣೆಯೆಂದರೆ ಮಾನವ ಜೀವಿಗಳು ಸದಾ ತಮ್ಮ ಪ್ರಬಲವಾದ ಆಂತರಿಕ ಅಭಿಲಾಷೆಗೆ ಅನುಸಾರವಾಗಿಯೇ ವರ್ತಿಸುತ್ತಾರೆ. ಬೇರೆ ಬಾಹ್ಯ ಅಂಶದಿಂದ ಬಲಾತ್ಕಾರವಾಗಿ ನಿರ್ಬಂಧವುಂಟಾದಾಗ ಇದು ಬೇರೆಯಾಗಬಹುದಷ್ಟೆ.

ಅಂತಹ ಉದ್ದಿಷ್ಟಪೂರ್ವಕ ಕ್ರಿಯೆಯು ಮುಕ್ತವೆಂದೂ ಆದ್ದರಿಂದ ನೈತಿಕ ಪರಿಶೀಲನೆಗೆ ಬದ್ಧವಾದದ್ದೆಂದೂ ಪರಿಗಣಿಸುವ ಮೂಲಕ ಹ್ಯೂಮ್ ಈ ನಿರ್ಣಯಕ್ಕೆ ಬರುತ್ತಾನೆ. ಹೀಗೆ, ಹ್ಯೂಮ್‌ನ ಸಿದ್ಧಾಂತದ ಪ್ರಕಾರ ಸೂರಿ ದೇಣಿಗೆಯನ್ನು, ದಾನಕೊಡಬೇಕೆಂಬ ಅಭಿಲಾಷೆಯಿಂದ ಯಾದೃಚ್ಛಿಕವಾಗಿ ನಿರ್ಣಯಿಸಲಾದದ್ದು ಎಂದು ಪರಿಗಣಿಸಲಾಗಿದೆ. ಆದರೂ ಕೂಡ ಅದನ್ನು ಮುಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಅದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಚಿಕ್ಕನು ದರೋಡೆ ಮಾಡಿದ್ದು ತಾನು ಹಣವನ್ನು ಗಳಿಸಬೇಕು ಎಂಬ ಆಸೆಯ ಕಾರಣದಿಂದ. ಆದರೆ ಅವನು ನೈತಿಕವಾಗಿ ದಂಡನೀಯನಾಗಿ ಉಳಿಯುತ್ತಾನೆ. ಏಕೆಂದರೆ ಅವನನ್ನು ಅವನ ಆಶಯಕ್ಕೆ ವಿರುದ್ಧವಾಗಿ ವರ್ತಿಸಲು ಬಲಾತ್ಕರಿಸಲಾಗಿಲ್ಲ.

ಬಿಡಿ ವ್ಯಕ್ತಿಗಳನ್ನು ಅವರ ನಡವಳಿಕೆಯೊಡನೆ ಸಂಲಗ್ನ ಮಾಡುವ ಒಂದು ಸಿದ್ಧಾಂತವು ಹ್ಯೂಮ್‌ನ ಸೌಮ್ಯ ನಿಯತಿವಾದದಿಂದ ಕಡೆಗೂ ನಮಗೆ ದೊರಕಿದೆಯಾದರೂ, ಅವರಿಗೆ ವಾಸ್ತವಿಕವಾದ ಸ್ವಾತಂತ್ರ್ಯವನ್ನು ಕೊಡುವ ರೀತಿಯಲ್ಲಿ ಅದು ಕೆಲಸ ಮಾಡುತ್ತದೆಯೇ ಎನ್ನುವುದು ಪ್ರಶ್ನಾರ್ಹ. ಕಟ್ಟುನಿಟ್ಟಾದ ನಿಯತಿವಾದದ ದುರ್ಭರವಾದ ಅವೈಯಕ್ತಿವಾದ ಮತ್ತು ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪಗಳನ್ನು ಅದು ನಿರಾಕರಿಸುತ್ತದೆಂದು ಭಾವಿಸಿಕೊಂಡರೂ ಅದು ದಿಟವಾಗಿಯೂ ಮಾನವರಿಗೆ ಪ್ರಜ್ಞಾಪೂರ್ವಕವಾದ ಆಯ್ಕೆಯನ್ನು ಅನುಗ್ರಹಿಸುತ್ತಿದೆಯೇ? ವಿಮರ್ಶಕರು ಇಲ್ಲ ಎಂದು ಹೇಳಿದ್ದಾರೆ. ಹ್ಯೂಮ್‌ನ ಸಿದ್ಧಾಂತದ ಪ್ರಕಾರ ಬಿಡಿ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ಕ್ರಿಯೆಯಲ್ಲಿ ತೊಡಗಿದರೂ, ಅವರು ಮುಕ್ತವಾಗಿ ವರ್ತಿಸುವುದಿಲ್ಲ ಎಂದು ಈ ವಿಮರ್ಶಕರು ಗುರುತಿಸಿದ್ದಾರೆ. ಇದು ಏಕೆಂದರೆ ಅವರ ಕ್ರಿಯೆಗಳಿಗೆ ಕಾರಣವಾದ ಆಂತರಿಕ ಅಭಿಲಾಷೆಗಳು ಅವರ ಪ್ರಜ್ಞೆಯ ನಿಯಂತ್ರಣದಲ್ಲಿಲ್ಲ. ಉದಾಹರಣೆಗೆ ಸೂರಿ ಸ್ವಯಂ ಪ್ರೇರಣೆಯಿಂದ ದೇಣಿಗೆಯನ್ನು ಕೊಡಬೇಕೆಂಬ ತನ್ನ ಅಭಿಲಾಷೆಗೆ ಅನುಸಾರವಾಗಿ ನಡೆದುಕೊಂಡಿದ್ದಾನೆ (ಆದ್ದರಿಂದ ತಾನು ಮುಕ್ತವಾಗಿ ವರ್ತಿಸಿದ್ದೇನೆ ಎಂದು ಭಾವಿಸಿದ್ದಾನೆ), ಆದರೆ ಈ ಅಭಿಲಾಷೆ ಬಂದದ್ದಾದರೂ ಎಲ್ಲಿಂದ? ದಾನ ಕೊಡಲು ಒಲವಿರುವಂತಹ ವ್ಯಕ್ತಿತ್ವವನ್ನು ಅವನು ಆರಿಸಿಕೊಂಡಿದ್ದನೇ?

ಇಲ್ಲ. ನಾವು ಅದರ ಬೆಳವಣಿಗೆಯನ್ನು ಅವನ ಅನುಭವಗಳು, ಶಿಕ್ಷಣ, ಹೆತ್ತವರು ಬೆಳೆಸಿದ ಕ್ರಮಗಳಲ್ಲಿ ಗುರುತಿಸಬಹುದು ಅಥವಾ “ಅವನು ಹುಟ್ಟಿದ್ದೇ ಆ ರೀತಿಯಲ್ಲಿ” ಎಂಬ ಸರಳ ನಿರ್ಣಯಕ್ಕೆ ಬರಬಹುದು

ಎರಡೂ ಪ್ರಸಂಗಗಳಲ್ಲಿಯೂ ನಾವು ಒಪ್ಪಿಕೊಳ್ಳಬೇಕಾದ ಸಂಗತಿಯೆಂದರೆ, ಅನಾಥಾಲಯಕ್ಕೆ ಸಹಾಯ ಮಾಡಬೇಕು ಎಂದು ಸೂರಿ ಅಪೇಕ್ಷೆಪಡುವಂತೆ ಮಾಡಿದ ಅವೇ ಅಂಶಗಳೇ ಅವನ ಪ್ರಜ್ಞಾಪೂರ್ವಕ ನಿಯಂತ್ರಣಕ್ಕೆ ಸ್ಪಷ್ಟವಾಗಿ ಒಳಪಟ್ಟಿಲ್ಲ. ಅದಕ್ಕಿಂತ ಹೆಚ್ಚಾಗಿ, ಅವನ ಅಭಿಲಾಷೆಯು ಅವನ ಹಿನ್ನೆಲೆಯ ನಿರ್ಣಾಯಕ ಸಂಗತಿಯಾಗಿದೆ. ಅದರ ಪ್ರಕಾರ ವರ್ತಿಸುವಂತೆ ಅದು ಅವನನ್ನು ನಿರ್ಬಂಧಪಡಿಸುತ್ತದೆ. ಬೇರೆ ರೀತಿಯಲ್ಲಿ ನಡೆದುಕೊಳ್ಳಲು ಅವನು ಸ್ವತಂತ್ರನಲ್ಲ. ಹೀಗೆ ಸೂರಿ ಮತ್ತು ಚಿಕ್ಕ ಅವರ ಅನುಕ್ರಮ ಕ್ರಿಯೆಗಳನ್ನು ನಾವು ಮುಕ್ತವೆಂದು ಕರೆಯುವುದಾಗಲಿ ಮತ್ತು ಅದಕ್ಕನುಗುಣವಾಗಿ ಅವನ್ನು ಪ್ರಶಂಸಿಸುವುದಾಗಲಿ ಅಥವಾ ಖಂಡಿಸುವುದಾಗಲಿ ಸಮರ್ಥನೀಯವಲ್ಲ. ದಿಟದಲ್ಲಿ, ಸೌಮ್ಯ ನಿಯತಿವಾದವು ಕಟ್ಟುನಿಟ್ಟಾದ ನಿಯತಿವಾದದಂತೆಯೇ ಅಂತಿಮವಾಗಿ ನಮ್ಮನ್ನು ಅದೇ ಕುರುಡೋಣಿಯ ಕಡೆಗೇ ಕರೆದುಕೊಂಡು ಹೋಗುತ್ತದೆ. ಆದಾಗ್ಯೂ ಸ್ವಲ್ಪ ಹೆಚ್ಚು ದೃಶ್ಯಾವಳಿಗಳು ಸಾಗುವ ಹಾದಿಯಲ್ಲಿ ಕಾಣಿಸಬಹುದು.

ಕಟ್ಟುನಿಟ್ಟಾದ ನಿಯತಿವಾದ ಮತ್ತು ಮುಚ್ಚುಮರೆಯಿಲ್ಲದ ಮುಕ್ತ ಸಂಕಲ್ಪಗಳನ್ನು ತಿರಸ್ಕರಿಸುವುದು ಸುಲಭವಾದರೂ (ಈ ಲೇಖನದಲ್ಲಿ ಹೇಗೋ ಹಾಗೆಯೇ ಪಾಶ್ಚಾತ್ಯ ತತ್ತ್ವಜ್ಞಾನದ ವಾರ್ಷಿಕ ಬಖೈರುಗಳಲ್ಲೂ), ಸೌಮ್ಯ ನಿಯತಿವಾದವು ಹೆಚ್ಚು ಭರವಸೆ ನೀಡುವಂತಹುದೆಂದು ನೀವು ಒಪ್ಪುವ ಸಂಭವವಿದೆ. ಆದರೆ ಇನ್ನೂ ಕೂಡ ಅದರಲ್ಲಿ ನಾವು ಏನನ್ನು ಅರಸುತ್ತಿದ್ದೇವೆಯೋ ಅದರ ಕೊರತೆಯು ಕಂಡುಬರುತ್ತದೆ: ಮಾನವನ ವರ್ತನೆಯ ಕಾರಣವೇನು ಎನ್ನುವುದಕ್ಕೆ ಒಂದು ಕಾರ್ಯಸಾಧ್ಯವಾದ ವಿವರಣೆ. ಖಂಡಿತವಾಗಿಯೂ ಇದರ ಉತ್ತರವು ನಿಯತಿವಾದ ಮತ್ತು ಮುಕ್ತಸಂಕಲ್ಪದ ಒಂದು ಬಗೆಯ ಸಂಶ್ಲೇಷಣೆಯಲ್ಲಿ ನೆಲೆಸಿದೆ, ಆದರೆ ಪಾಶ್ಚಾತ್ಯ ತತ್ತ್ವಜ್ಞಾನವು ಈ ನಿಟ್ಟಿನಲ್ಲಿ ನಮ್ಮನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾರದು. ಆದ್ದರಿಂದ ನಾವು ಈಗ ಪ್ರಾಚೀನ ಭಾರತದ ತತ್ತ್ವಜ್ಞಾನವನ್ನು ಪರಿಗಣಿಸುತ್ತೇವೆ. ವೈದಿಕ ಧರ್ಮಗ್ರಂಥಗಳ ಪರಿಮಿತಿಯಲ್ಲಿಯೇ ನಾವು ಕಂಡುಕೊಳ್ಳುವ ಪರಿಪ್ರೇಕ್ಷ್ಯೆಯು ನಮ್ಮ ಮಿದುಳಿಗೆ ಅರ್ಥಪೂರ್ಣವಾಗಿಯೂ ಮತ್ತು ನಮ್ಮ ಹೃದಯಕ್ಕೆ ಸ್ವೀಕಾರಯೋಗ್ಯವಾಗಿಯೂ ಇರುವ ರೀತಿಯಲ್ಲಿ ನಿಯತಿವಾದ ಮತ್ತು ಮುಕ್ತ ಸಂಕಲ್ಪಗಳನ್ನು ಪ್ರಾಮಾಣಿಕವಾಗಿ ರಾಜಿ ಮಾಡಿಸುತ್ತದೆ.

ಆತ್ಮದ ಮುಕ್ತ ಸಂಕಲ್ಪ

ನಾವು ಈ ಸಮೀಕರಣದ ನಿಯತಿವಾದದ ಪಾರ್ಶ್ವವನ್ನು ಪರಿಶೀಲಿಸುವ ಮೂಲಕ ಪ್ರಾರಂಭಿಸುತ್ತೇವೆ. ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸುವುದೇನೆಂದರೆ ಎಲ್ಲ ಜೀವಿಗಳಿಗೂ ಶಾಶ್ವತವಾದ ಆಧ್ಯಾತ್ಮಿಕ ರೂಪಗಳಿವೆ, ನಾವು ನೋಡುತ್ತಿರುವ ಅವುಗಳ ಭೌತಿಕ ಕಾಯಗಳು ಕೇವಲ ತಾತ್ಕಾಲಿಕವಾದ ಆವರಣಗಳಷ್ಟೆ. ಈ ಆವರಿಸಿರುವಿಕೆಗೆ ಮೂಲ ಕಾರಣವನ್ನು ಸಂಸ್ಕೃತದಲ್ಲಿ ಅಹಂಕಾರ ಎಂದು ಕರೆಯುತ್ತೇವೆ. ಈ ಶಬ್ದವನ್ನು ಸಾಮಾನ್ಯವಾಗಿ ಮಿಥ್ಯಾ ಅಹಂಕಾರ ಎಂದು ಅನುವಾದಿಸಲಾಗುತ್ತಿದ್ದರೂ ಅದರ ಅಕ್ಷರಶಃ ಅರ್ಥವು “ನಾನೇ ಮಾಡುವವನು”. ನಾವು ಜಡವಸ್ತುವಿನಿಂದ ಮಾಡಿದವರಲ್ಲ, ಚೇತನದಿಂದ ಮಾಡಿದವರು ಎಂಬ ಕಾರಣದಿಂದಾಗಿ ಸ್ವತಂತ್ರವಾಗಿ ಜಡವಸ್ತುವನ್ನು ನಿರ್ವಹಿಸುವ ಸಾಮರ್ಥ್ಯ ನಮಗಿಲ್ಲ, ಮತ್ತು ನಾವು ಮಾಡುತ್ತೇವೆ ಎಂದು ಯೋಚಿಸುವುದೇ ಆತ್ಯಂತಿಕವಾದ ಬಂಸುವ ಭ್ರಮೆ. ನಿಯಂತ್ರಕರಾಗುವುದು ದೂರ ಉಳಿಯಿತು, ಒಂದು ಭೌತಿಕವಾದ ದೇಹದಲ್ಲಿ ವಾಸ ಮಾಡುತ್ತಿರುವುದರಿಂದ ನಾವೇ ಪ್ರಕೃತಿಯ ನಿಯಂತ್ರಣಕ್ಕೆ ಬರುತ್ತೇವೆ. ಏಕೆಂದರೆ ದೇಹವು ಜಡವಸ್ತುವಾದ್ದರಿಂದ ಪ್ರಕೃತಿಯ ನಿಯಮಗಳ ಪ್ರಕಾರ ವರ್ತಿಸುತ್ತದೆ. ಐಹಿಕ ಜಗತ್ತಿನ ಚಲನವಲನಗಳ ಪ್ರಕಾರ ವರ್ತಿಸುತ್ತದೆ. ಐಹಿಕ ಜಗತ್ತಿನ ಚಲನವಲನಗಳ ಹಿಂದಿರುವ ನಿಜವಾದ ಸೂತ್ರಧಾರನೆಂದರೆ ದೇವರ ಶಕ್ತಿ, ಅದು ಮೂರು ಪ್ರಕೃತಿಗುಣಗಳ ರೂಪದಲ್ಲಿರುತ್ತದೆ: ಸ್ಥಿತಿ ಪಾಲನೆ (ಸತ್ತ್ವಗುಣ), ಸೃಷ್ಟಿ  (ರಜೋಗುಣ) ಮತ್ತು ಲಯ (ತಮೋಗುಣ). ಕೃಷ್ಣನು ಈ ಇಡೀ ಕ್ರಿಯಾಶಕ್ತಿಯನ್ನು ಹೀಗೆ ಸಂಗ್ರಹರೂಪದಲ್ಲಿ ಹೇಳುತ್ತಾನೆ, “ಚೇತನಾತ್ಮವು ಮಿಥ್ಯಾ ಅಹಂಕಾರದ ಪ್ರಭಾವದಿಂದ ದಿಗ್ಭ್ರಾಂತಿಗೊಳ್ಳುತ್ತದೆ ಮತ್ತು ತಾನೇ ಈ ಚಟುವಟಿಕೆಗಳ ಕರ್ತೃ ಎಂದು ಭಾವಿಸುತ್ತದೆ. ಆದರೆ ವಾಸ್ತವದಲ್ಲಿ ಪ್ರಕೃತಿಯ ತ್ರಿಗುಣಗಳು ಅವುಗಳನ್ನು ಮಾಡಿರುತ್ತವೆ.” ಹೀಗೆ, ನಮ್ಮ ಸ್ವಾತಂತ್ರ್ಯವು ಜಡವಸ್ತುವಿನ ಸ್ಪರ್ಶಗ್ರಾಹ್ಯವಾದ ಆಪತ್ಯದಲ್ಲಿ ಬರುವುದಿಲ್ಲ.

ಕೆಲವರಿಗೆ ಅಂತಹ ಸಾಕ್ಷ್ಯಾಧಾರದ ಸೂಚ್ಯಾರ್ಥವು೨ ಏನೆಂದರೆ ಮುಕ್ತ ಸಂಕಲ್ಪವೆನ್ನುವುದು ಕೇವಲ ಭ್ರಮೆ ಮತ್ತು ಜ್ಞಾನೋದಯವೆಂದರೆ ನಾವು ಈ ನಿಯತಿವಾದದ ಜಗತ್ತಿನಲ್ಲಿ ಶಕ್ತಿಹೀನವಾದ ಚದುರಂಗದ ಕಾಯಿಗಳು. ಐತಿಹಾಸಿಕವಾಗಿ, ಪಾಶ್ಚಾತ್ಯ ತತ್ತ್ವಜ್ಞಾನಿಗಳನ್ನು , ವೈದಿಕ ಜೀವನ ದರ್ಶನವನ್ನು ಇತರ ಪೌರಸ್ತ್ಯ ತತ್ತ್ವಜ್ಞಾನಗಳೊಡನೆ ಒಟ್ಟು ಮಾಡಿ ‘ಏಷಿಯಾಟಿಕ್ ನಿಯತಿವಾದ’ ಎಂಬ ಅನುಗ್ರಹಪೂರ್ವಕ ತಲೆಚೀಟಿಯಡಿಯಲ್ಲಿ ತಳ್ಳಿಹಾಕಲು ಕರೆದೊಯ್ಯಲಾಗಿದೆ. ಆದರೆ ಇದು ವೈದಿಕ ಸಮೀಕರಣದ ಅರ್ಧಭಾಗ ಮಾತ್ರ. ಅಷ್ಟೇ ಗಮನವನ್ನು ಕೆರಳಿಸುವಂತಹ ಸಂಗತಿಯೆಂದರೆ (ಮತ್ತು ವಾದಯೋಗ್ಯವಾಗಿ ಇನ್ನೂ ಹೆಚ್ಚು ಮುಖ್ಯವಾದುದೆಂದರೆ)ಸ್ವಾತಂತ್ರ್ಯ ಮತ್ತು ಪ್ರಜ್ಞಾಪೂರ್ವಕ ಆಯ್ಕೆಯ ಅಕಾರವನ್ನು ಕುರಿತ ವೈದಿಕ ಸಾಕ್ಷ್ಯಾಧಾರ.

ಉದಾಹರಣೆಗೆ, ವೈದಿಕ ಸಾಹಿತ್ಯವು ಅತ್ಯಕವಾದ ವಿ ನಿಯಮಗಳು ಮತ್ತು ಮತಧರ್ಮಾಚರಣೆಗಳನ್ನು ಒಳಗೊಂಡಿದೆ. ಕಟ್ಟುನಿಟ್ಟಾದ ನಿಯತಿವಾದವನ್ನು ಸೋಲಿಸಲು ನಾವು ಹಿಂದೆ ಬಳಸಿದ ಅದೇ ತರ್ಕವನ್ನೇ ಅನೇಕ ಪ್ರಮುಖ ವೈಷ್ಣವ ತತ್ತ್ವಜ್ಞಾನಿಗಳು ಬಳಸಿದ್ದಾರೆ ಮತ್ತು ಅವರು ವಾದ ಮಾಡುವುದೇನೆಂದರೆ ಅಂತಹ ಆಧ್ಯಾತ್ಮಿಕ ಕಟ್ಟಳೆಗಳಿಗೆ (ಮತ್ತು ಅವುಗಳೊಡನೆ ಬರುವ ಪ್ರತಿಫಲಗಳು ಮತ್ತು ಶಿಕ್ಷೆಗಳಿಗೆ) ಅರ್ಥ ಬರುವುದು ಜೀವಿಗೆ ಕೆಲಮಟ್ಟಿನ ವಾಸ್ತವವಾದ ಸ್ವಾತಂತ್ರ್ಯವಿದ್ದಾಗ ಮಾತ್ರ. ವಾಸ್ತವದಲ್ಲಿ, “ದೇವೋತ್ತಮ ಪರಮ ಪುರುಷನು ಮಾನವನ ನಡವಳಿಕೆಗೆ ಸಂಬಂಸಿದಂತೆ ಪ್ರತಿಫಲ ಮತ್ತು ಶಿಕ್ಷೆಯನ್ನು ನೀಡುವ ಐಹಿಕ ಪ್ರಕೃತಿಯ ನಿಯಮಗಳನ್ನು ಎಷ್ಟು ದಕ್ಷತೆಯಿಂದ ರೂಪಿಸಿ ಅಳವಡಿಸಿದ್ದಾನೆಂದರೆ ಜೀವಿಗೆ ಪಾಪವನ್ನು ಮಾಡಲು ನಿರುತ್ತೇಜನವನ್ನೂ ಮತ್ತು ಸತ್ತ್ವಗುಣದ ಕಡೆಗೆ ಸಾಗಲು ಉತ್ತೇಜನವನ್ನೂ ನೀಡಲಾಗಿದೆ. ಶಾಶ್ವತ ಆತ್ಮನಾದ ಅವನ ಮುಕ್ತ ಸಂಕಲ್ಪಕ್ಕೆ ಯಾವುದೇ ಗಮನಾರ್ಹವಾದ ಅಡಚಣೆಯನ್ನೂ ಉಂಟುಮಾಡದೆ ಇದನ್ನು ಸಾಸಲಾಗಿದೆ.” (ಶ್ರೀಮದ್ ಭಾಗವತಮ್ ೧೦.೨೪.೧೪ ಪ್ರಭುಪಾದರ ಶಿಷ್ಯರಿಂದ ಭಾವಾರ್ಥ).

ಹೇಗಾದರೂ, ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ವೈದಿಕ ತಿಳಿವಳಿಕೆಯಲ್ಲಿ ಮನಸ್ಸನ್ನು ಜಡವಸ್ತು ಎಂದು ಪರಿಗಣಿಸಲಾಗಿದೆ. ದೇಹಕ್ಕೆ ಕಟ್ಟು ನಿಟ್ಟಾದ ಯಾವ ನಿಯಂತ್ರಣವನ್ನು ಒಳಪಡಿಸಲಾಗಿದೆಯೋ ಮನಸ್ಸಿಗೂ ಅದನ್ನೇ ಒಳಪಡಿಸಲಾಗಿದೆ. ಜೀವಿಯ ಮುಕ್ತ ಸಂಕಲ್ಪವು ಭೌತಿಕ ದೇಹ ಮತ್ತು ಇಂದ್ರಿಯಗಳ ಕ್ರಿಯೆಗಳಿಗೆ ಹೇಗೆ ವಿಸ್ತರಿಸಲಾಗದೋ ಹಾಗೆಯೇ ಅದು ಮನಸ್ಸು ಅಥವಾ ಬುದ್ಧಿಶಕ್ತಿಯ ಕ್ರಿಯೆಗಳಿಗೂ ವಿಸ್ತರಿಸಲಾರದು. ಆದ್ದರಿಂದ ಪ್ರಭುಪಾದರು ಹೇಳುವ ಮುಕ್ತ ಸಂಕಲ್ಪವನ್ನು ಸಹಜವಾದ ಚೇತನಾತ್ಮನ ಸರಹದ್ದಿಗೆ ಪರಿಮಿತಿಗೊಳಿಸಬೇಕು, ಮತ್ತು ಅವರು ಹೇಳುವ ನಾನಾ ಬಗೆಯ ಪ್ರತಿಫಲಗಳು ಮತ್ತು ಶಿಕ್ಷೆಗಳು ಈ ಚೇತನಾತ್ಮದ ಕಾರ್ಯಗಳಿಗೆ ತಟ್ಟಬೇಕು. ಆದರೆ ಆತ್ಮವು ಹೇಗೆ ವರ್ತಿಸುತ್ತದೆ? ಪ್ರಭುಪಾದರು ಅಭಿಲಾಷೆಯ ಮೂಲಕ ಅದು ವರ್ತಿಸುತ್ತದೆಂದು ವಿವರಿಸುತ್ತಾರೆ. ಅಷ್ಟೇ ಅಲ್ಲ, ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ದೇವರಿಗೆ ಶರಣಾಗಬೇಕೇ ಅಥವಾ ಬೇಡವೇ ಎನ್ನುವುದು ನಮ್ಮ ಮುಕ್ತ ಸಂಕಲ್ಪದ ಅತ್ಯಾವಶ್ಯಕವಾದ ಅಭಿವ್ಯಕ್ತಿ” ಎಂಬ ಅಭಿಲಾಷೆಯನ್ನು ಅನಾವರಣಗೊಳಿಸುತ್ತಾರೆ.

ಅಂತೂ ಕೊನೆಗೂ, ನಿಯತಿವಾದದ ವಿರುದ್ಧ ಮುಕ್ತ ಸಂಕಲ್ಪದ ಸಮಸ್ಯೆಗೆ ವೈದಿಕ ಪರಿಹಾರವನ್ನೊಳಗೊಂಡ ಉತ್ತರ ನಮಗೆ ಅಲ್ಲಿ ದೊರಕಿತು. ಮಾನವ ಜೀವಿಗಳಾಗಿ ನಮ್ಮ ಸ್ವಾತಂತ್ರ್ಯವು ದೇವರ ಸಮೀಪಕ್ಕೆ ಬರುವುದು ಅಥವಾ ಅವನಿಂದ ಮತ್ತಷ್ಟು ದೂರಕ್ಕೆ ಹೋಗುವುದನ್ನು ಬಯಸುವಷ್ಟಕ್ಕೆ ಸೀಮಿತವಾಗಿದೆ. ದೇವರ ಮೇಲುಸ್ತುವಾರಿಯಲ್ಲಿ ಐಹಿಕ ಪ್ರಕೃತಿಯು ಉಳಿದ ಸಂಗತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ನಮ್ಮ ಹಿಂದಿನ ಅಭಿಲಾಷೆಗಳಿಗೆ ಅನುಗುಣವಾಗಿ ಜನನ ಸಮಯದಲ್ಲಿ ನಮಗೆ ಒಂದು ಸೂಕ್ತವಾದ ದೇಹವನ್ನು ನೀಡಲಾಗುತ್ತದೆ. ಅದರ ಮೂಲಕ ಪ್ರಕೃತಿ ಗುಣಗಳು ಆ ಅಭಿಲಾಷೆಗಳಿಗೆ ಅನುಗುಣವಾಗಿ ಕ್ರಿಯೆಗಳನ್ನು ನಡೆಸಲು ನಮಗೆ ಸಹಾಯ ಮಾಡುತ್ತವೆ. ಈ ದೇಹದ ಪರಿಮಿತಿಗಳೊಳಗೆ (ಅವು ನಮ್ಮ ಮಾನಸಿಕ ಸ್ವಭಾವದಿಂದ ಹಿಡಿದು, ಅದರೊಳಗಿರುತ್ತ ನಮಗೆ ಪ್ರಾಪ್ತವಾಗುವ   ಕರ್ಮಫಲಗಳವರೆಗೆ   ಹಬ್ಬುತ್ತವೆ),  ಹೊಸ ಅಭಿಲಾಷೆಗಳನ್ನು ರೂಪಿಸಿಕೊಳ್ಳಲು ನಮಗೆ ಅವಕಾಶವಿದೆ. ಈ ಅಭಿಲಾಷೆಗಳು ಅನೇಕ ರೂಪಗಳನ್ನು ತಾಳಬಹುದು. ಆದರೆ ಅವುಗಳನ್ನು ಯಾವಾಗಲೂ ಎರಡು ವಿಶಾಲ ಶ್ರೇಣಿಗಳ ಪೈಕಿ ಒಂದಕ್ಕೆ ಇಳಿಸಬಹುದು: ದೇವರ ಸಮೀಪವಾಗಬೇಕೆಂಬ ಆಸೆಗಳು ಅಥವಾ ಅವನಿಂದ ಮತ್ತಷ್ಟು ದೂರಕ್ಕೆ ಹೋಗಬೇಕೆಂಬ ಆಸೆಗಳು. ನಮ್ಮ ಹೊಸ ಆಸೆಗಳು ಅನಂತರ ಕರ್ಮದ ಪ್ರತಿಫಲಗಳನ್ನು ಸೃಷ್ಟಿಸುತ್ತವೆ, ಅ ವು ನಮ್ಮ ಮುಂದಿನ ದೇಹವನ್ನು ನಿರ್ಧರಿಸುತ್ತವೆ.

ನಿಯತಿವಾದದ ಕುರುಡೋಣಿ ಇಲ್ಲ

ಸೌಮ್ಯ ನಿಯತಿವಾದವು ನಮ್ಮನ್ನು ಕರೆದೊಯ್ಯುವಂತಹ ಕುರುಡೋಣಿಯಿಂದ ಮುಕ್ತ ಸಂಕಲ್ಪದ ವೈದಿಕ ತಿಳಿವಳಿಕೆಯು ನಮ್ಮನ್ನು ಹೀಗೆ ರಕ್ಷಿಸುತ್ತದೆ. ಒಬ್ಬ  ವ್ಯಕ್ತಿಯ ಪ್ರಸ್ತುತ ಜೀವನದ ಪಾಲನೆಯಿಂದ ಅವನ ಜನನ ಸಮಯದ ಸ್ವಭಾವಕ್ಕೆ ಹಿಂದಕ್ಕೆ ಚಲಿಸುವಂತೆ ಮಾಡಲು ಕಾರಣವಾದ ಪರಿಪರಿಯ ಅಭಿಲಾಷೆಗಳನ್ನು ನಾವು ಗುರುತಿಸಬಹುದು. ಅಲ್ಲಿಂದ ಅವನ ಹಿಂದಿನ ಜನ್ಮದ ಅಭಿಲಾಷೆಗಳನ್ನು ಗುರುತಿಸಬಹುದು. ಇವೆಲ್ಲದರ ಅಡಿಯಲ್ಲಿರುವ ದೇವರಿಗೆ ಶರಣಾಗುವ ಅಥವಾ ಅವನ ವಿರುದ್ಧ ಬಂಡೇಳುವ ಅವನ ಪುರೋಗಾಮಿಯಾದ ಅಭಿಲಾಷೆಯನ್ನು ಗುರುತಿಸಬಹುದು. ಅಂತಿಮವಾದ ಈ ಪ್ರಮುಖ ಹಂತದಲ್ಲಿ ಸ್ವಾತಂತ್ರ್ಯವು ಆಪತ್ಯ ನಡೆಸುತ್ತದೆ. ಹೀಗಿರುತ್ತ ನಿಯತಿವಾದವು ಈ ಸರಪಳಿಯಲ್ಲಿರುವ ಮುಂದಿನ ಎಲ್ಲ ಕೊಂಡಿಗಳ ಮೇಲೆ ಆಪತ್ಯವನ್ನು ಸಾಸುತ್ತದೆ. ಇದನ್ನು ನಾವು ಒಂದು ಬಗೆಯ ದ್ವಿಮಾನ ಮುಕ್ತ ಸಂಕಲ್ಪದ ವೈದಿಕ ಮಾದರಿ ಎಂದು ಕರೆಯಬಹುದು.

ಉದಾಹರಣೆಗೆ, ಸೂರಿ ತನ್ನ ಹಿಂದಿನ ಜನ್ಮದಲ್ಲಿ ದೈವಿಕವಾದ ಅಭಿಲಾಷೆಗಳನ್ನು ಹೊಂದಿದ್ದಿರಬೇಕು. (ಉದಾ: ಒಂದು ಉನ್ನತ ಉದ್ದೇಶಕ್ಕಾಗಿ ಉಪಭೋಗಗಳನ್ನು ಪರಿತ್ಯಾಗ ಮಾಡುವ ನಿಃಸ್ವಾರ್ಥ ಅಭಿಲಾಷೆಗಳು). ಇದರ ಫಲವಾಗಿ ಅವನು ಪ್ರಾಯಃ ಜನ್ಮಸಿದ್ಧವಾದ ಔದಾರ್ಯದೊಡನೆ ಹುಟ್ಟಿರಬಹುದು. ತನ್ನ ತಂದೆ ತಾಯಿಗಳಿಂದ ಮತ್ತು ಆರಂಭಕಾಲದ ಉಪಾಧ್ಯಾಯರಿಂದ ಉತ್ತಮ ತರಬೇತಿಯನ್ನು ಪಡೆದಿರಬಹುದು. ಈ ಎರಡೂ ಅವನಿಗೆ ದೇವರೆಡೆಗೆ ಪ್ರಗತಿ ಸಾಸಲು ಅವಕಾಶ ನೀಡಿರಬಹುದು. ಇತ್ತ ಚಿಕ್ಕನು ಅದೈವಿಕವಾದ ಅಭಿಲಾಷೆಗಳನ್ನು ಹೊಂದಿದ್ದಿರಬಹುದು (ಉದಾ: ಬೇರೆಯವರ ಲೆಕ್ಕದಲ್ಲಿ ತನ್ನದೇ ಯೋಗಕ್ಷೇಮದ ಮೇಲೆ ಕೇಂದ್ರೀಕೃತವಾದ ಸ್ವಾರ್ಥಪರ ಅಭಿಲಾಷೆಗಳು). ಅವು ಅವನು ಕೆಳಹಂತದ ಸನ್ನಿವೇಶದಲ್ಲಿ ಜನ್ಮತಾಳಲು ಕಾರಣವಾದವು. ಅಂತಹ ಅಭಿಲಾಷೆಗಳನ್ನು ವ್ಯಕ್ತಪಡಿಸುವ ಮತ್ತು ಕಾರ್ಯಪ್ರವೃತ್ತಗೊಳಿಸುವ ಅನುಕೂಲಕರ ಸನ್ನಿವೇಶ ಅದಾಯಿತು. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಸುಳಿವು ಇರುವುದು ಕರ್ಮವು ಸ್ಥೂಲವೂ ಸೂಕ್ಷ್ಮವೂ ಆದ ನೆಲೆಗಳಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದರಲ್ಲಿ. ಉತ್ತಮ ಕಾರ್ಯಗಳು ಕೇವಲ ಉತ್ತಮ ಸನ್ನಿವೇಶಗಳನ್ನಷ್ಟೇ ಸೃಷ್ಟಿಸುವುದಿಲ್ಲ. ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವ ಅಭಿಲಾಷೆಯನ್ನೂ ಸೃಷ್ಟಿಸುತ್ತವೆ. ಇದಕ್ಕೆ ಪ್ರತಿಕ್ರಮವೂ ಅಷ್ಟೇ ಸತ್ಯ (ಕೆಟ್ಟ ಕಾರ್ಯಗಳು ಮತ್ತಷ್ಟು ಕೆಟ್ಟ ಕಾರ್ಯಗಳನ್ನು ಮಾಡುವ ಅಭಿಲಾಷೆಯನ್ನು ಸೃಷ್ಟಿಸುತ್ತವೆ).

ಮುಕ್ತ ಸಂಕಲ್ಪದ ಅಥವಾ ನಿಯತಿವಾದದ ನಿರ್ದಿಷ್ಟ ಪಥದ ಖಾಲಿ ಸ್ಲೇಟಿನಂತಲ್ಲದೆ, ಈ ಎರಡರ ಹದ ಮಿಶ್ರಣವನ್ನು ಒಂದು ಅಂತರಕ್ರಿಯೆಯ ಚಲನಚಿತ್ರಕ್ಕೆ ಹೋಲಿಸಬಹುದು; ಅದು ಪ್ರಮುಖವಾದ ಸನ್ನಿವೇಶಗಳಲ್ಲಿ ನಮಗೆ ಆಯ್ಕೆಯ ಅವಕಾಶ ಕೊಡುತ್ತದೆ ಮತ್ತು ಮುಂದಿನ ತೀರ್ಮಾನದ ಹಂತ ಬರುವವರೆಗೂ ತನ್ನಷ್ಟಕ್ಕೆ ತಾನೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಸೂರಿಯ ಹಾಗೆ ದೇವರೊಡನೆ ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸಲು ಅನುಕೂಲವಾದಂತಹ ಆಯ್ಕೆಗಳನ್ನು ನಾವು ಮಾಡಿದರೆ ಮುಂದಿನ ಸಲ ನಮಗೆ ಈ ಬಗೆಯ ಹೆಚ್ಚು ಹೆಚ್ಚಾದ ಮತ್ತು ಉತ್ತಮವಾದ ಆಯ್ಕೆಗಳು ಸಿಗುತ್ತವೆ. ಚಿಕ್ಕನ ಹಾಗೆ ದೇವರೊಡನೆ ನಮಗಿರುವ ಸಂಪರ್ಕಕ್ಕೆ ಅಡಚಣೆಯುಂಟುಮಾಡುವಂತಹ ಆಯ್ಕೆಗಳನ್ನು ನಾವು ಮಾಡಿದರೆ, ದೈವಿಕವಾದ ಆಯ್ಕೆಗಳ ವ್ಯಾಪ್ತಿ ಮತ್ತು ಗುಣಮಟ್ಟ ಕ್ಷೀಣಿಸುತ್ತಾ ಹೋಗುತ್ತದೆ. ಎರಡು ಸಂದರ್ಭಗಳಲ್ಲೂ ನಿರ್ಣಾಯಕ ಬಿಂದುಗಳ ನಡುವೆ ಏನು ಸಂಭವಿಸುತ್ತದೆ ಎನ್ನುವುದು, ಅಸಂಖ್ಯಾತವಾದ ಭೂತಕಾಲದ ಆಯ್ಕೆಗಳ, ವರ್ತಮಾನದ ಉತ್ಪನ್ನವಾಗಿದೆ.

ಮುಚ್ಚುಮರೆಯಿಲ್ಲದೆ ಮತ್ತು ಅಡೆತಡೆಯಿಲ್ಲದೆ ದೇವರಿಗೆ ಸಮೀಪವಾಗಿರಬೇಕು ಎಂಬ ಏಕಮಾತ್ರ ಅಭಿಲಾಷೆಯ ಬಿಂದುವಿಗೆ ನಾವು ಅಂತಿಮವಾಗಿ ವಿಕಾಸ  ಹೊಂದಿದರೆ, ಆಗ ನಾವು ಎಡೆಬಿಡದ ಭೌತಿಕ ದೇಹಗಳ ಸರಪಳಿಯನ್ನು ತುಂಡರಿಸುತ್ತೇವೆ ಮತ್ತು ದಿವ್ಯಧಾಮಕ್ಕೆ ಹಿಂತಿರುಗಬಲ್ಲವರಾಗುತ್ತೇವೆ. ಅಲ್ಲಿ, ನಮ್ಮ ಮೂಲ ಆಧ್ಯಾತ್ಮಿಕ ದೇಹಗಳನ್ನು ಮತ್ತೆ ಪಡೆದುಕೊಂಡವರಾಗಿ, ಈ ಲೋಕದಲ್ಲಿ ನಮ್ಮನ್ನು ತುಂಬ ನಿಷ್ಠುರವಾಗಿ ನಿಯಂತ್ರಿಸುತ್ತಿದ್ದ ಪ್ರಕೃತಿಯ ನಿಯಮಗಳಿಂದ ನಾವು ಸಂಪೂರ್ಣವಾಗಿ ವಿಮುಕ್ತರಾಗುತ್ತೇವೆ. ಹೀಗೆ ನಾವು ಮುಕ್ತ ಸಂಕಲ್ಪದ ಅಂತಿಮ ವಿರೋಧಾಭಾಸಕ್ಕೆ ಬರುತ್ತೇವೆ. ಅಲ್ಲಿ ನಾವು  ಪ್ರತಿ ಕ್ಷಣದಲ್ಲೂ ನಮ್ಮ ಮುಕ್ತ ಸಂಕಲ್ಪವನ್ನು ದೇವರ ಅಡಿಯಲ್ಲಿ ಪ್ರೀತಿಪೂರ್ವಕವಾಗಿ ಅರ್ಪಿಸುತ್ತಿರುತ್ತೇವೆ. ಅದು ಅವನ ಸಂತೋಷಕ್ಕಾಗಿಯೇ ವಿನಾ ನಮ್ಮ ಸಂತೋಷಕ್ಕಾಗಿ ಅಲ್ಲ. ಆಗ ಮಾತ್ರ ನಾವು ಅತ್ಯಂತ ಸ್ವತಂತ್ರರಾಗಿರುತ್ತೇವೆ.
Leave a Reply

Your email address will not be published. Required fields are marked *