Search
Wednesday 3 June 2020
  • :
  • :

ಮುತ್ತಿನ ಕಥೆ

ಅದೊಂದು ಮಧ್ಯಾಹ್ನ. ರಾಧಾ, ವಿಶಾಖ, ಲಲಿತಾ ಮತ್ತಿತರ ಗೋಪಿಯರು ವೃಂದಾವನದ ಆಚೆ, ಮರದ ಕೆಳಗೆ ಕೂತರು. ಮುಂಬರುವ  ಹಬ್ಬಕ್ಕಾಗಿ ಹೂವು ಕೀಳಲು ಬಂದಿದ್ದರು. ಅವರ ಮುಂದೆ ಹೂವು ತುಂಬಿದ್ದ ಬುಟ್ಟಿಗಳಿದ್ದವು. ಜೊತೆಗೆ ಸುಂದರವಾದ ಮುತ್ತುಗಳು ತುಂಬಿದ್ದ ತಟ್ಟೆ. ಬಾಲಕಿಯರು ಮುತ್ತುಗಳನ್ನು ಪೋಣಿಸುತ್ತ ಕಂಠಹಾರ ಮಾಡುತ್ತಿದ್ದರು. `ಈ ಕೊರಳ ಹಾರಗಳಿಂದ ಹಬ್ಬದ ಉತ್ಸವದಲ್ಲಿ ನಾವು ಅತ್ಯಂತ ಸುಂದರವಾಗಿ ಕಾಣುತ್ತೇವೆ!’ ಎಂದು ಲಲಿತಾ ಉದ್ಗರಿಸಿದಳು.

ಅವರ ಹಿಂದೆ ಯಾರೋ ಕೆಮ್ಮಿದಂತಾಯಿತು. ಕೆಲಸದಲ್ಲಿ ತಲ್ಲೀನರಾಗಿದ್ದ ಅವರು ತಲೆ ಎತ್ತಿ ನೋಡಿದರು. ಕೃಷ್ಣನು ರಾಧೆಯ ಹಿಂದೆ ನಿಂತು ಮುತ್ತುಗಳನ್ನು ನೋಡುತ್ತಿದ್ದ. ಮುತ್ತಿನಹಾರ ತಯಾರಿಸುವುದರಲ್ಲಿ ನಿರತರಾಗಿದ್ದ ಅವರಿಗೆ ಕೃಷ್ಣ ಮೆಲ್ಲನೆ ತಮ್ಮ ಹಿಂದೆ ಬಂದದ್ದು ಗಮನಕ್ಕೆ ಬರಲಿಲ್ಲ.

`ಮಹಿಳೆಯರೇ, ನಿಮ್ಮ ಬಳಿ ಇರುವ ಮುತ್ತುಗಳಲ್ಲಿ  ಸ್ವಲ್ಪ ಕೊಡುವ ಕೃಪೆ ತೋರುವಿರಾ? ನಾನು ಹಂಸಿ ಮತ್ತು ಹರಿಣಿಯನ್ನು ಶೃಂಗರಿಸಬೇಕು.’ ಕೃಷ್ಣ ಕೋರಿದ.

`ನಮಗೆ ಸ್ಪರ್ಧೆಯಲ್ಲಿ ಆಸಕ್ತಿ ಇಲ್ಲ’, ವಿಶಾಖ ಮಾರ್ನುಡಿದಳು, `ನಿನ್ನ ಮಿತ್ರರು ಸ್ವತಃ ಮುತ್ತಿನ ಹಾರ ಮಾಡಿ ಹಾಕಿಕೊಳ್ಳಲಿ!’

ಕೃಷ್ಣ  ಮುಸಿ ನಕ್ಕ , `ಓ! ಚಿಕ್ಕ ಕರುಗಳು ತಮಗಾಗಿ ಹಾರ ಮಾಡುವುದನ್ನು ನಾನು ಎಲ್ಲಿಯೂ ಕೇಳಿಲ್ಲ! ನನ್ನ ಕರುಗಳಲ್ಲಿ ಹಂಸಿ ಮತ್ತು ಹರಿಣಿ ಅತ್ಯಂತ ಚಿಕ್ಕ ಕರುಗಳು.’

ತನ್ನ  ತಪ್ಪಿನಿಂದ ಪೇಚಿಗೆ ಒಳಗಾದರೂ ವಿಶಾಖ ಉತ್ತರಿಸಿದಳು, `ಹಾಗಾದರೆ ನಿನಗೆ ಬೇಕಾದ ಮುತ್ತುಗಳನ್ನು ನೀನೇ ಸಂಗ್ರಹಿಸಿಕೋ ಮತ್ತು ಅವುಗಳಿಗೆ ಹಾರ ಮಾಡಿಕೋ. ನಮಗೆ ಸಮಯವಿಲ್ಲ.’

`ನನ್ನ ಬಳಿ ಮುತ್ತುಗಳಿಲ್ಲ. ಆದರೆ ಹಬ್ಬಕ್ಕೆ ಮುನ್ನ ಸ್ವಲ್ಪ ಬೆಳೆಯುವೆ’ ಕೃಷ್ಣನೆಂದ.

ಅವನು ವಾಪಸಾಗಲು ತಿರುಗಿದಾಗ, ಬಾಲಕಿಯರು ಕಿಸಿಕಿಸಿ ನಕ್ಕರು. `ಎಂತಹ ಭ್ರಮೆ! ಗಿಡಗಳಿಂದ ಮುತ್ತು ಬೆಳೆಯುವುದು! ಕೃಷ್ಣ, ನೀನು ಕೆಲವು ಬಾರಿ ವಿಚಿತ್ರವಾಗಿ ಮಾತನಾಡುವೆ.’

ರಾಧಾ ಅವನತ್ತ ಕೂಗು ಹಾಕಿದಳು.

ಆದರೆ ತಾನು ಮುತ್ತು ಬೆಳೆಯಬಲ್ಲೆ ಎಂಬ ವಿಶ್ವಾಸ ಕೃಷ್ಣನಿಗೆ ಇತ್ತು. ಆದುದರಿಂದ ಅವನು ತನ್ನ ತಾಯಿ ಯಶೋದೆ ಬಳಿಗೆ ಹೋಗಿ ಸ್ವಲ್ಪ ಮುತ್ತುಗಳನ್ನು ಬೇಡಿದ, ಅದನ್ನು ಬಿತ್ತುವುದಾಗಿ ಹೇಳಿದ. ಯಶೋದಾಗೆ ಇದು ತಮಾಷೆಯಾಗಿ ಕಂಡರೂ ಅವಳು ಮಗನಿಗೆ ಏನನ್ನೂ ನಿರಾಕರಿಸದ ಕಾರಣ ತನ್ನ ಕೆಲವು ಮುತ್ತುಗಳನ್ನು ಕೃಷ್ಣನಿಗೆ ನೀಡಿದಳು.

ಕೃಷ್ಣ ಮತ್ತು ಅವನ ಮಿತ್ರರಾದ ಮಧುಮಂಗಳ ಹಾಗೂ ಸುಬಾಲ ಇಡೀ ಮಧ್ಯಾಹ್ನ  ಹೊಲದಲ್ಲಿ ಮುತ್ತು ಬಿತ್ತುವ ಕಾರ್ಯದಲ್ಲಿ ತೊಡಗಿದರು. ಮುತ್ತು ಬಿತ್ತಿ ಹಾಲು ಹಾಕಿದರು! ಅದೇ ನೀರುಣಿಸುವ ಕೆಲಸ!

ಬಾಲಕರು ಹೊಲದಲ್ಲಿ, ಕೆಲಸದಲ್ಲಿ ನಿರತರಾಗಿದ್ದನ್ನು ನೋಡಿದ ರಾಧಾ ಮತ್ತವಳ ಗೆಳತಿಯರು ತಾವೂ ಅದನ್ನೇ ಮಾಡಲು ನಿರ್ಧರಿಸಿದರು. ತಮ್ಮ ತಮ್ಮ ತಾಯಂದಿರಿಂದ ಮುತ್ತು ಪಡೆದು ಬಾಲಕರ ಕ್ಷೇತ್ರದ ಪಕ್ಕದಲ್ಲೇ ತಮ್ಮ ಮುತ್ತಿನ ತೋಟ ಮಾಡಿದರು! ಬೆಣ್ಣೆ ಮತ್ತು ಮೊಸರು ಹಾಕಿದರೆ ತಮ್ಮ ಮುತ್ತಿನ ಗಿಡಗಳು ಹೆಚ್ಚು ತ್ವರಿತವಾಗಿ ಬೆಳೆಯುವುದೆಂದು ಅವರು ಧಾರಾಳವಾಗಿ ಮೊಸರು ಬೆಣ್ಣೆ ಸುರಿದರು!

ಕೆಲವು ದಿನಗಳು ಕಳೆದವು. ತನ್ನ ಭೂಮಿಯಲ್ಲಿ ಏನು ಬೆಳೆದಿದೆ ಎಂಬುದನ್ನು ತೋರಿಸಲು ಕೃಷ್ಣನು ತನ್ನ ತಂದೆ ತಾಯಿಯರನ್ನು ಕರೆ ತಂದ. ಅವರಿಗೆ ಅಚ್ಚರಿ, ಹೊಳೆಯುವ ಮುತ್ತುಗಳಿದ್ದ ಗಿಡಗಳು! ನಂದ ಮಹಾರಾಜನು ಅಲ್ಲಿ ಬೆಳೆದಿದ್ದ ಮುತ್ತುಗಳನ್ನು ಪರೀಕ್ಷಿಸಿದ. ಅವು ಅತ್ಯುನ್ನತ ಗುಣಮಟ್ಟದ್ದಾಗಿದ್ದವು. ಎಲ್ಲರೂ ಬೆರಗಾದರು.

ಬಾಲಕಿಯರು ತಮ್ಮ ಮುತ್ತಿನ ತೋಟಕ್ಕೆ ಹೋದರು. ಅವರು ಅಲ್ಲಿಗೆ ಯಾರನ್ನೂ ಕರೆಯುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ ಅಲ್ಲಿ ಮುಳ್ಳಿನ ಪೊದೆಗಳಿದ್ದವು! ಬಾಲಕರು ರಾಧಾ, ವಿಶಾಖ ಮತ್ತು ಲಲಿತಾ ಅವರುಗಳನ್ನು ಚುಡಾಯಿಸಿದರು. ಕೊನೆಗೆ, ಬಾಲಕಿಯರು ವಿನಮ್ರದಿಂದ ತಮ್ಮ ಸೋಲು ಒಪ್ಪಿಕೊಂಡರು. ಬಿತ್ತಲು ತಮ್ಮ ತಾಯಿಯರಿಂದ ಪಡೆದಿದ್ದ ಮುತ್ತುಗಳನ್ನು ವಾಪಸು ಮಾಡಲು ಒಂದಷ್ಟು ಮುತ್ತುಗಳನ್ನು ನೀಡಬೇಕೆಂದು ಅವರು ಕೃಷ್ಣನಲ್ಲಿ ಬೇಡಿದರು.
Leave a Reply

Your email address will not be published. Required fields are marked *