Search
Friday 18 October 2019
  • :
  • :

ಮಾವಿನ ರುಚಿ

ಮಾವಿನ ಹಣ್ಣಿನ ಕಾಲ ಬಂತೆಂದರೆ ಊಟ ತಿಂಡಿಗಳಲ್ಲಿ ಮಾವಿನದೇ ಕಾರುಬಾರು. ವಸಂತ ಕಾಲದೊಂದಿಗೆ ಬರುವ ಮಾವಿನ ಆಕರ್ಷಣೆಯೇ ಅಂತಹುದು. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮಾವಿನ ಹಣ್ಣೆಂದರೆ ತುಂಬಾನೇ ಇಷ್ಟ. ಹೀಗಾಗಿ ಮಾವು ಹಣ್ಣುಗಳ ರಾಜ ಎಂದು ಹೇಳಲಾಗುತ್ತದೆ.

ಭಕ್ತಿವೇದಾಂತ ದರ್ಶನದ ಈ ಸಂಚಿಕೆಯಲ್ಲಿ ಮಾವಿನ ಹಣ್ಣಿನಿಂದ ಮಾಡಿದ ತಿನಿಸುಗಳನ್ನು ಶ್ರದ್ಧೆಯಿಂದ ತಯಾರು ಮಾಡಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಮಾವಿನ ಹಣ್ಣಿನ ಕಲಶ್

ಬೇಕಾಗುವ ಪದಾರ್ಥಗಳು :

  • ದೊಡ್ಡದಾದ ಚೆನ್ನಾಗಿ ಮಾಗಿದ ಮಾವಿನ ಹಣ್ಣು – ೬
  • ಸಕ್ಕರೆ – ೨ ಕಪ್
  • ಮೈದಾ – ೧ ಕಪ್
  • ತೆಂಗಿನಕಾಯಿ ಹಾಲು – ೧ ಕಪ್
  • ತುಪ್ಪ ಅಥವಾ ಡಾಲ್ಡ – ೧/೨ ಕಪ್
  • ಗೋಡಂಬಿ – ೧೦
  • ಏಲಕ್ಕಿ – ೪

ಮಾಡುವ ವಿಧಾನ : ಮೊದಲು ಮಾವಿನ ಹಣ್ಣಿನ ಸಿಪ್ಪೆತೆಗೆದು ಚೆನ್ನಾಗಿ ಕಿವುಚಿ ರಸ ಹಿಂಡಿ ಗೊರಟು ಬಿಸಾಡಿ. ತೆಂಗಿನಕಾಯಿ ತುರಿದು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲು ತೆಗೆದಿಟ್ಟುಕೊಳ್ಳಿ. ಮೈದಾಹಿಟ್ಟನ್ನು ತುಪ್ಪದಲ್ಲಿ ಹುರಿದಿಡಿ. ಬಾಣಲೆಯಲ್ಲಿ ಮಾವಿನ ಹಣ್ಣಿನ ರಸ, ತೆಂಗಿನಕಾಯಿ ಹಾಲು, ಸಕ್ಕರೆ ಹಾಕಿ ಕುದಿಯಲು ಇಡಿ. ಈ ಮಿಶ್ರಣದ ಪಾಕ ಸ್ವಲ್ಪ ಮಂದವಾಗುತ್ತಿರುವಾಗ ತುಪ್ಪದಲ್ಲಿ ಹುರಿದಿಟ್ಟ ಮೈದಾಹಿಟ್ಟನ್ನು ಹಾಕಿ ಕೈಯಾಡಿಸಿ. ಈ ಮಿಶ್ರಣವು ಕಂದು ಬಣ್ಣಕ್ಕೆ ಬರುವಾಗ ಗೋಡಂಬಿ ಚೂರು, ಏಲಕ್ಕಿಪುಡಿ ಹಾಕಿ. ಗಟ್ಟಿಯಾಗುತ್ತಿದ್ದಂತೆ ಸ್ಟವ್ ಆಫ್ ಮಾಡಿ. ಸ್ಟೀಲ್ ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ತಟ್ಟೆಯ ಮೇಲೆ ಹರಡಿ. ಆರಿದ ಮೇಲೆ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ಬರ್ಫಿ ಅಥವಾ ಮಾವಿನ ಹಣ್ಣಿನ ಕಲಶ್ ಸವಿಯಲು ಸಿದ್ಧ.

ಮ್ಯಾಂಗೊ ಹಲ್ವ

ತುಂಬಾ ಮಾಗಿರುವ ಹಣ್ಣನ್ನು ಮ್ಯಾಂಗೊ ಹಲ್ವ ಮಾಡಲು ಉಪಯೋಗಿಸಬಹುದು.

ಬೇಕಾಗುವ ಪದಾರ್ಥಗಳು :

  • ಮಾವಿನ ಹಣ್ಣು – ೨ (ಮಲ್ಗೋಬ, ರಸಪುರಿ ಅಥವಾ ಬಾದಾಮಿ)
  • ಸಕ್ಕರೆ – ಹಣ್ಣಿನ ಸಿಹಿಗೆ ಅನುಗುಣವಾಗಿ
  • ಬಾದಾಮಿ – ೧೦
  • ಗೋಡಂಬಿ – ೧೦
  • ಏಲಕ್ಕಿ – ೩
  • ತುಪ್ಪ – ೩ ಚಮಚ

ಮಾಡುವ ವಿಧಾನ : ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಮಾಡಿ. ಅನಂತರ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿದ ಮಾಗಿದ ಮಾವಿನ ಹಣ್ಣುಗಳ ಚೂರುಗಳನ್ನು ಹಾಕಿ ಹುರಿಯಿರಿ. ಏಲಕ್ಕಿಪುಡಿ, ಸಕ್ಕರೆಯನ್ನು ಬೆರೆಸಿ ತಳ ಅಂಟದಂತೆ ಕೈಯಾಡಿಸುತ್ತಿರಿ. ಸಕ್ಕರೆ ಕರಗಿದ ಮೇಲೆ ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ ಚೂರುಗಳನ್ನು ಹಾಕಿದರೆ, ಕಡಮೆ ಸಮಯದಲ್ಲಿ ರುಚಿಯಾದ ಮ್ಯಾಂಗೊ ಹಲ್ವ ರೆಡಿ.

ಮಾವಿನ ಮಾಂಬಳ

ಬೇಕಾಗುವ ಪದಾರ್ಥಗಳು :

  • ಮಾವಿನ ಹಣ್ಣು – ೧ ಕೆ.ಜಿ.
  • ಉಪ್ಪು – ಬೇಕಿದ್ದಲ್ಲಿ

ಮಾಡುವ ವಿಧಾನ : ಮಾವಿನ ಹಣ್ಣುಗಳ ಸಿಪ್ಪೆ ತೆಗೆದು ಗೊರಟುಗಳನ್ನು ಪ್ರತ್ಯೇಕಿಸಿ. ರಸಭರಿತ ಮಾವಿನ ಹಣ್ಣುಗಳ ಚೂರುಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ರುಬ್ಬಿದ ರಸವನ್ನು ಒಲೆ ಮೇಲೆ ಇಟ್ಟು ಕುದಿಸಿ. ಬೇಕೆನಿಸಿದ್ದಲ್ಲಿ ಈ ರಸಕ್ಕೆ ಸ್ವಲ್ಪ ಉಪ್ಪನ್ನು ಹಾಕಬಹುದು.

ಕುದಿಸಿ ಸ್ವಲ್ಪ ಮಂದವಾಗಿರುವ ರಸವನ್ನು ಶುದ್ಧವಾಗಿರುವ ಚಾಪೆ ಅಥವಾ ಅಡಕೆ ಹಾಳೆಯ ಮೇಲೆ ಹರಡಿ. ಕಾವಲಿಯ ಮೇಲೆ ದೋಸೆ ಹೊಯ್ದಂತೆ ಸ್ವಲ್ಪ ದಪ್ಪಗೆ ಹರಡಿ, ಈ ಹಾಳೆಯನ್ನು  ಎರಡು ಅಥವಾ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಈಗ ಮಾಂಬಳ ತಯಾರು. ಹಾಳೆಗೆ ಅಂಟಿರುವ ಮಾಂಬಳವನ್ನು ನಿಧಾನವಾಗಿ ತೆಗೆದು ಸುರುಳಿ ಸುತ್ತಿ ಎತ್ತಿಡಿ. ಬೇಕೆನಿಸಿದಾಗ ಕತ್ತರಿಸಿ ತಿನ್ನಬಹುದು. ಇದನ್ನು ಸಲಾಡ್‌ನಲ್ಲಿ ಸಹ ಬಳಸಬಹುದು.

ಆಮ ರಸ

ಬೇಕಾಗುವ ಪದಾರ್ಥಗಳು :

  • ಬೇಯಿಸಿದ ಮಾವಿನಕಾಯಿ -೨
  • ತೆಂಗಿನತುರಿ – ೧ ಕಪ್
  • ಕೊತ್ತಂಬರಿ ಸೊಪ್ಪು – ೧/೪ ಕಟ್ಟು
  • ಕರಿಬೇವು – ೪ ಎಸಳು
  • ಹಸಿಮೆಣಸಿನಕಾಯಿ – ೫
  • ಬ್ಯಾಡಗಿ ಮೆಣಸಿನಕಾಯಿ – ೨
  • ಜೀರಿಗೆ – ೨ ಚಮಚ
  • ಕರಿಮೆಣಸು – ೧/೨ ಚಮಚ
  • ತುಪ್ಪ – ೨ ಚಮಚ
  • ಇಂಗು – ೧/೪ ಚಮಚ
  • ಸಾಸಿವೆ – ೧ ಚಮಚ
  • ಉಪ್ಪು, ಬೆಲ್ಲ – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಬಾಣಲೆಯಲ್ಲಿ ಜೀರಿಗೆ, ಕರಿಮೆಣಸು ಹಾಕಿ ಹುರಿದು ಮಿಕ್ಸಿಗೆ ಹಾಕಿ, ಹಸಿಮೆಣಸಿನಕಾಯಿ, ತೆಂಗಿನ ತುರಿಯನ್ನು ಸ್ವಲ್ಪ ಹುರಿದು ನುಣ್ಣಗೆ ರುಬ್ಬಿಕೊಳ್ಳಿ. ಬೇಯಿಸಿದ ಮಾವಿನಕಾಯಿಯ ಸಿಪ್ಪೆ ತೆಗೆದು ಹಿಸುಕಿ ರಸ ತೆಗೆದು ಶೋಸಿಕೊಳ್ಳಿ. ಇದಕ್ಕೆ ಒಂದು ಲೀಟರ್ ನೀರು ಮತ್ತು ರುಬ್ಬಿದ ಮಿಶ್ರಣ, ಬೆಲ್ಲ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕುದಿಸಿ. ತುಪ್ಪದಲ್ಲಿ  ಇಂಗು, ಸಾಸಿವೆ, ಬ್ಯಾಡಗಿ ಮೆಣಸಿನಕಾಯಿಯ ಒಗ್ಗರಣೆ ಹಾಕಿ ಮಿಕ್ಸ್ ಮಾಡಿದರೆ ಆಮರಸ ಸವಿಯಲು ಸಿದ್ದ.

ಎಳೆ ಮಾವಿನಕಾಯಿ ಚಟ್ನಿ

ಬೇಕಾಗುವ ಪದಾರ್ಥಗಳು :

  • ತುರಿದ ಮಾವಿನಕಾಯಿ ತಿರುಳು – ೧ ಕೆ.ಜಿ.
  • ಸಕ್ಕರೆ – ೧ ಕಪ್
  • ಒಣಶುಂಠಿ – ೧/೨ ಇಂಚು
  • ಏಲಕ್ಕಿ – ೮
  • ಚೆಕ್ಕೆ – ೪
  • ಕರಿಬೇವು – ೪ ಎಸಳು
  • ಕರಿಮೆಣಸಿನಪುಡಿ – ೨ ಚಮಚ
  • ಕೆಂಪು ಮೆಣಸಿನಕಾಯಿ ಪುಡಿ – ೩ ಚಮಚ
  • ಕೊಬ್ಬರಿ ತುರಿ -೧/೪ ಕಪ್
  • ಒಣದ್ರಾಕ್ಷಿ, ಗೋಡಂಬಿ ಚೂರು,ಬಾದಾಮಿ – ತಲಾ ೧/೪ ಕಪ್
  • ವಿನಿಗರ್ – ೧ ಕಪ್
  • ಜೀರಿಗೆ – ೨ ಚಮಚ
  • ಕಲ್ಲಂಗಡಿ ಬೀಜ – ೧/೨ ಕಪ್
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮೊದಲು ಬಾಣಲೆಯಲ್ಲಿ ಕಲ್ಲಂಗಡಿ ಬೀಜಗಳನ್ನು ಹುರಿದು ಪಕ್ಕಕ್ಕಿಡಿ. ಬಾದಾಮಿ, ಗೋಡಂಬಿ ಚೂರುಗಳನ್ನು ಸ್ವಲ್ಪ ಬಣ್ಣ ಬರುವಂತೆ ಹುರಿಯಿರಿ. ಎಳೆ ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತುರಿಯಿರಿ. ಸ್ವಲ್ಪ ದಪ್ಪ ತಳವಿರುವ ಬಾಣಲೆಯಲ್ಲಿ ತುರಿದ ಮಾವಿನಕಾಯಿ, ಸಕ್ಕರೆ ಹಾಕಿ ೧೦ ನಿಮಿಷ ಬೇಯಿಸಿ. ಜೀರಿಗೆ, ಶುಂಠಿ, ಏಲಕ್ಕಿ, ಚೆಕ್ಕೆ, ಕರಿಮೆಣಸು ಕುಟ್ಟಿ ಪುಡಿಮಾಡಿ ಹಾಕಿ. ಕರಿಬೇವಿನ ಸೊಪ್ಪು ಮತ್ತು ಮೆಣಸಿನಕಾಯಿ ಪುಡಿ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೇಯಿಸಿ ಅನಂತರ ಉಪ್ಪನ್ನು ಸೇರಿಸಿ

ಈ ಮಿಶ್ರಣ ೨೦ ನಿಮಿಷಕ್ಕೆಲ್ಲಾ ಸ್ವಲ್ಪ ಗಟ್ಟಿಯಾಗುತ್ತದೆ. ಅನಂತರ ವಿನಿಗರ್ ಸೇರಿಸಿ ಇನ್ನೈದು ನಿಮಿಷ ಬೇಯಿಸಿ. ಆಮೇಲೆ ಒಣದ್ರಾಕ್ಷಿ, ಕಲ್ಲಂಗಡಿ ಬೀಜ, ಗೋಡಂಬಿ, ಬಾದಾಮಿ ಚೂರು ಮತ್ತು ಕೊಬ್ಬರಿ ತುರಿಯನ್ನು ಈ ಮಿಶ್ರಣಕ್ಕೆ ಬೆರೆಸಿ ಕುದಿಸಿದರೆ ಎಳೆಮಾವಿನಕಾಯಿ ಚಟ್ನಿ ತಿನ್ನಲು ಸಿದ್ಧ.

ಮಾವಿನಕಾಯಿ ತಂಬುಳಿ

ಬೇಕಾಗುವ ಪದಾರ್ಥಗಳು :

  • ತೋತಾಪುರಿ ಮಾವಿನಕಾಯಿ – ೨
  • ತೆಂಗಿನಕಾಯಿತುರಿ – ೧ ಕಪ್
  • ಕಾಳುಮೆಣಸು – ೬
  • ಉಪ್ಪು – ರುಚಿಗೆ ತಕ್ಕಷ್ಟು
  • ಒಗ್ಗರಣೆಗೆ :
  • ಎಣ್ಣೆ – ೨ ಚಮಚ
  • ಸಾಸಿವೆ – ೧/೨ ಚಮಚ

ಮಾಡುವ ವಿಧಾನ : ಮೊದಲು ಮಾವಿನ ಕಾಯನ್ನು ಸಣ್ಣ ಸಣ್ಣ ಚೂರುಗಳಾಗಿ ಹೆಚ್ಚಿಕೊಳ್ಳಿ. ತೆಂಗಿನಕಾಯಿತುರಿ, ಕಾಳುಮೆಣಸು, ಉಪ್ಪು ಮತ್ತು ಮಾವಿನಕಾಯಿ ಚೂರುಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ. ಇದಕ್ಕೆ ಒಗ್ಗರಣೆಯನ್ನು ಹಾಕಿ ಬೆರೆಸಿದರೆ ಮಾವಿನಕಾಯಿ ತಂಬುಳಿ ಸವಿಯಲು ಸಿದ್ಧ.

ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿದರೆ ಕುಡಿಯಲು ಚೆನ್ನ.

ಮಾವಿನ ಮೊರಬ್ಬ

ಬೇಕಾಗುವ ಪದಾರ್ಥಗಳು :

  • ಮಾವಿನಕಾಯಿ – ೧ ಕೆ.ಜಿ.
  • ಸಕ್ಕರೆ – ೧ ೧/೪ ಕೆ.ಜಿ.
  • ಸಿಟ್ರಿಕ್ ಆಸಿಡ್ – ೧/೨  ಚಮಚ
  • ಏಲಕ್ಕಿ ಪುಡಿ – ೧ ಚಮಚ
  • ಹಳದಿ ಬಣ್ಣ – ಸ್ವಲ್ಪ

ಮಾಡುವ ವಿಧಾನ : ಹೆಚ್ಚು ಹುಳಿಯಿಲ್ಲದ ಗಿಣಿಮೂತಿ ಮಾವಿನಕಾಯಿಗಳನ್ನು ಆರಿಸಿ. ಕಾಯಿ ಗಟ್ಟಿಯಾಗಿ, ಬಲಿತದ್ದಾಗಿರಬೇಕು. ಇದನ್ನು ತೆಳುವಾಗಿ ಉದ್ದ ಚೂರುಗಳಾಗಿ ಕತ್ತರಿಸಿ. ಸ್ವಲ್ಪ ನೀರನ್ನು ಕುದಿಸಿ ಅದಕ್ಕೆ ಮಾವಿನ ಚೂರುಗಳನ್ನು ಹಾಕಿ ಕೆಳಗಿಳಿಸಿ. ಇದನ್ನು ೫ ನಿಮಿಷ ಮುಚ್ಚಿ ಇಡಿ. ಅನಂತರ ನೀರನ್ನೆಲ್ಲಾ ಬಸಿದು ಇಡಿ. ಇದೇ ನೀರನ್ನು ಸಕ್ಕರೆಗೆ ಹಾಕಿ ಕುದಿಸಿ. ಇದಕ್ಕೆ ಮಾವಿನ ಚೂರುಗಳನ್ನು ಹಾಕಿ, ಪಾಕ ಗಟ್ಟಿಯಾದಾಗ ಹಳದಿಬಣ್ಣ, ಏಲಕ್ಕಿಪುಡಿ, ಸಿಟ್ರಿಕ್ ಆಸಿಡ್ ಹಾಕಿ ಕೆಳಗಿಳಿಸಿ. ಆರಿದ ಮೇಲೆ ತೇವವಿಲ್ಲದ ಬಾಟಲಿಯಲ್ಲಿ ತುಂಬಿಡಿ.

ಮಾವು  ಕೊಳ್ಳಲು, ಸಂರಕ್ಷಿಸಲು…

  • ಸಂಪೂರ್ಣ ಹಸಿರು ಮಾವು ಬೇಡ. ಅವು ಮಾಗದೇ ಇರಬಹುದು.
  • ಬುಟ್ಟಿ ಅಥವಾ ಚೀಲದಿಂದ ಮಾವನ್ನು ಹೊರಗೆ ತೆಗೆದಿಡಿ. ಅದನ್ನು ಪ್ಯಾಕ್ ಮಾಡಿದ್ದ ಹುಲ್ಲಿನೊಂದಿಗೆ ಇಡಿ.
  • ಮಾವು ಬೇಗ ಹಣ್ಣಾಗಬೇಕೆ? ಅದನ್ನಿಟ್ಟ ಹುಲ್ಲಿನ ಮೇಲೆ ಹತ್ತಿ ಬಟ್ಟೆ ಹರಡಿ.
  • ನೇರವಾಗಿ ನೆಲದ ಮೇಲೆ ಮಾವು ಇಡಬೇಡಿ.
  • ಪೂರ್ತಿ ಹಣ್ಣಾಗುವವರೆಗೂ ಮಾವನ್ನು ತೊಳೆಯಬೇಡಿ. ತತ್‌ಕ್ಷಣ ಸವಿಯಬೇಕೆಂದಿದ್ದರೆ ಮಾತ್ರ ತೊಳೆಯಿರಿ.

 




Leave a Reply

Your email address will not be published. Required fields are marked *