Search
Friday 18 October 2019
  • :
  • :

ಕೂರ್ಮ ಅವತಾರ

ಒಂದಾನೊಂದು ಕಾಲದಲ್ಲಿ ದೇವತೆಗಳು ಮತ್ತು ರಾಕ್ಷಸರು ಸಮುದ್ರದಿಂದ ಅಮೃತ ಉತ್ಪಾದಿಸಲು ನಿರ್ಧರಿಸಿದರು. `ಅಮೃತ ಸೇವಿಸಿ ಅಮರರಾಗೋಣ’ ಎಂದು ಇಬ್ಬರೂ ಹೇಳಿಕೊಂಡರು. ಇದಕ್ಕಾಗಿ ಅವರು ಸಮುದ್ರ ಮಂಥನ ಮಾಡಬೇಕಾಗಿತ್ತು.  ಸಮುದ್ರವನ್ನು ಕಡೆಯಲು ಅವರು ಮಂದಾರ ಪರ್ವತವನ್ನು ಕಡೆಗೋಲಾಗಿ ಮಾಡಿಕೊಂಡರು.  ವಾಸುಕಿ ಸರ್ಪವನ್ನು ಹಗ್ಗವಾಗಿ ಬಳಸಿಕೊಂಡರು. ಈ ರೀತಿ ಕ್ಷೀರ ಸಾಗರವನ್ನು ಕಡೆಯಲು ಅವರು ಮುಂದಾದರು. ಕಡೆದೂ ಕಡೆದೂ ಸುಸ್ತಾದರು. `ಎಲ್ಲಿ ಅಮೃತ?’ ಎಂದು ಪರಸ್ಪರ ಕೇಳಿಕೊಂಡರು.

ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ ಮಂದಾರ ಪರ್ವತವು ಕುಸಿಯುತ್ತ ಬಂದಿತು. ಆಧಾರವಿಲ್ಲದೆ ಅದು ಸಮುದ್ರದ ತಳಕ್ಕೆ ಜಾರತೊಡಗಿತು. `ಅಯ್ಯೋ!  ಪರ್ವತವೇ ಸಮುದ್ರದ ಪಾಲಾಗುವುದೋ ಏನೋ’ ಎಂದು ಎಲ್ಲರೂ ಭಯಭೀತರಾದರು. ಆಗ ವಿಷ್ಣುವು ಆಮೆ (ಕೂರ್ಮ) ರೂಪ ತಾಳಿದ. ಸಮುದ್ರದಲ್ಲಿ ಇಳಿದ. ` ಪಾಪ, ದೇವತೆಗಳಿಗೆ ಅಮೃತ ಸಿಗಲಿ. ಪರ್ವತವನ್ನು ನನ್ನ ಬೆನ್ನ ಮೇಲೆ ಇರಿಸಿಕೊಂಡು ಅವರಿಗೆ ಸಮುದ್ರ ಕಡೆಯಲು ಸಹಾಯ ಮಾಡುವೆ’ ಎಂದು ಆಮೆರೂಪದ ವಿಷ್ಣು ಸಾರಿದ. ದೇವತೆಗಳು ಮತ್ತು ರಾಕ್ಷಸರು ಸಮುದ್ರ ಕಡೆಯುವಾಗ, ಪರ್ವತವು ಅಲ್ಲಾಡುತ್ತಿತ್ತು. ಆಗ ಆಮೆ ರೂಪದ ಭಗವಂತನಿಗೆ ತರಚಿದ ಮಧುರ ಅನುಭವವಾಯಿತು. ಅಮೃತ ಸಿಗುವವರೆಗೂ ಅವನು ತನ್ನ ಈ ನೆರವು ಮುಂದುವರಿಸಿದ.

ಕೊನೆಗೆ ಅಮೃತದ ಕೊಡ ಕಂಡಿತು. ದೇವತೆಗಳು ಮತ್ತು ರಾಕ್ಷಸರು ಇಬ್ಬರೂ `ನಮಗೇ ನಮಗೇ’ ಎಂದು ಅಮೃತದ ಕೊಡದತ್ತ ಓಡಿದರು. ಅಮೃತದ ಪಾತ್ರೆ ಪಡೆಯಲು ಇಬ್ಬರ ನಡುವೆ ಹೋರಾಟ ಶುರುವಾಯಿತು. ಆಗ ವಿಷ್ಣು ಪ್ರತ್ಯಕ್ಷನಾದ. ಮೋಹಿನಿ ರೂಪದಲ್ಲಿ ಬಂದ ಭಗವಂತನು ರಾಕ್ಷಸರತ್ತ ತನ್ನ ಕುಡಿನೋಟ ಹರಿಸಿದ. `ಅಬ್ಬಾ, ಎಂತಹ ಅದ್ಭುತ ಸೌಂದರ್ಯ, ಈ ಮೋಹಿನಿಯದು!’ ಎಂದು ಅವರು ಅವಳತ್ತಲೇ ನೋಡತೊಡಗಿದರು. `ಅಮೃತಕ್ಕಿಂತ ಮೋಹಿನಿಯೇ ಚೆಂದ’ ಎಂದು ಅವರು ಮೋಹಿನಿಯತ್ತ ಆಕರ್ಷಿತರಾದರು. ಆಗ ವಿಷ್ಣುವು ಅಮೃತದ ಪಾತ್ರೆಯನ್ನು ದೇವತೆಗಳಿಗೆ ಹಂಚಿಬಿಟ್ಟ.




Leave a Reply

Your email address will not be published. Required fields are marked *