Search
Monday 18 November 2019
  • :
  • :

ಶ್ರೀಕ್ಷೇತ್ರ ಕೈವಾರ

ಶ್ರೀಕ್ಷೇತ್ರ ಕೈವಾರವು ಬೆಂಗಳೂರಿನಿಂದ ೭೦ ಕಿ.ಮೀ. ದೂರದಲ್ಲಿ ಬೆಂಗಳೂರು- ಚಿಂತಾಮಣಿ ಮಾರ್ಗದಲ್ಲಿ ಬರುತ್ತದೆೆ. ಕರ್ನಾಟಕದಲ್ಲಿರುವ ಅಸಂಖ್ಯಾತ, ಆಕರ್ಷಕ ವಿಷ್ಣು ದೇವಾಲಯಗಳ ಪೈಕಿ ಇಲ್ಲಿನ ಶ್ರೀ ಅಮರನಾರಾಯಣ ಸ್ವಾಮಿ ದೇವಸ್ಥಾನವೂ ಒಂದು.

ದೇವತೆಗಳ ದೊರೆ ಇಂದ್ರನು ವೃತ್ರಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಅನಂತರ ಪಂಚ ನಾರಾಯಣರ ಪ್ರತಿಷ್ಠಾಪನೆ ಮಾಡುತ್ತಾನೆ – ಕೈವಾರ ಅಮರ ನಾರಾಯಣ, ಬೂದಿಗೆರೆ ದೇಶ ನಾರಾಯಣ, ಯದೋಕೋಡಿ ವೀರ ನಾರಾಯಣ, ಯಲ್ಲೋಡಿ ಆದಿ ನಾರಾಯಣ ಮತ್ತು ಗದಗಿನ ಲಕ್ಷ್ಮೀ ನಾರಾಯಣ. ಈ ಐದೂ ದೇವಾಲಯಗಳಲ್ಲಿ ಒಂದೇ ಮುಹೂರ್ತದಲ್ಲಿ ದೇವರ ಪ್ರತಿಷ್ಠಾಪನೆಯಾಯಿತು. ಶ್ರೀಕ್ಷೇತ್ರ ಕೈವಾರದಲ್ಲಿ ಮಾತ್ರ ಇಂದ್ರನು ತನ್ನ ಕೈಯಾರೆ ವಿಷ್ಣುವಿನ ಪ್ರತಿಷ್ಠಾಪನೆ ಮಾಡಿದನೆಂದು ಪ್ರತೀತಿ. ಆದ್ದರಿಂದ ಇಲ್ಲಿನ ನಾರಾಯಣನಿಗೆ `ಅಮರ’ ಎಂಬ ತನ್ನ ಹೆಸರನ್ನು ಸೇರಿಸಿ ಅಮರನಾರಾಯಣ ಎಂದು ಹೆಸರಿಟ್ಟಿದ್ದಾನೆ.

ಚೋಳರ ಕಾಲದಲ್ಲಿ ದೇವಸ್ಥಾನವು ಅಭಿವೃದ್ಧಿ ಕಂಡಿತು. ದೇವಸ್ಥಾನವು ಭವ್ಯ ಪ್ರಾಂಗಣವನ್ನು ಹೊಂದಿದೆ. ಭೂ ನೀಳಾ ಸಮೇತನಾಗಿರುವ ಶ್ರೀ ಅಮರ ನಾರಾಯಣ ಸ್ವಾಮಿಗೆ ಪ್ರತಿನಿತ್ಯವೂ ಇಲ್ಲಿ ಭಕ್ತರು ವೈಭವೋಪೇತವಾದ ಸೇವಾ ಕೈಂಕರ್ಯಗಳನ್ನು ಸಮರ್ಪಿಸಿ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಪ್ರತಿ ವರ್ಷ ಫಾಲ್ಗುಣ ಮಾಸದ ಪೌರ್ಣಮಿಯಂದು ವಿಜೃಂಭಣೆಯಿಂದ ನಡೆಯುವ ಬ್ರಹ್ಮ ರಥೋತ್ಸವವು ಭಕ್ತ‌ರ ಕಂಗಳಿಗೆ ಹಬ್ಬ.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಆಗ ಅವನ ಅರ್ಧಾಂಗಿ ಸೀತಾದೇವಿ ಮತ್ತು ಸಹೋದರನಾದ ಲಕ್ಷಣ ಇಬ್ಬರೂ ಅವನನ್ನು ಅನುಸರಿಸುತ್ತಾರೆ. ವಾಲ್ಮೀಕಿ ರಾಮಾಯಣದ ಅರಣ್ಯಕಾಂಡದಲ್ಲಿ ಬರುವ `ಅಗ್ರತಃ  ಪ್ರಯಯೌ ರಾಮಃ  ಸೀತಾ ಮಧ್ಯೇ ಸು ಶೋಭನಾ ಪೃಷ್ಠತಸ್ತು ಧನುಷ್ಪಾಣಿಃ ಲಕ್ಷಣಃ ಅನುಜಗಾಮಹ’ ಎಂಬ ಶ್ಲೋಕದಲ್ಲಿ ವನವಾಸದ ಪ್ರಸಂಗವನ್ನು ಸುಂದರವಾಗಿ ಬಣ್ಣಿಸಲಾಗಿದೆ. ಇದಕ್ಕೆ ಪೂರಕವಾಗಿ ಅಮರ ನಾರಾಯಣ ದೇವಸ್ಥಾನದ ಪ್ರಾಂಗಣದಲ್ಲಿರುವ ಒಂದು ಪುಟ್ಟ ದೇವಸ್ಥಾನದಲ್ಲಿ  ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರ ಸುಂದರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ತಮ್ಮ ವನವಾಸದ ಸಮಯದಲ್ಲಿ ಬೆಟ್ಟಗುಡ್ಡಗಳನ್ನು ದಾಟಿ ಹೋಗುವಾಗ ರಾಮ-ಸೀತೆ-ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರೆಂದೂ ಸೀತಾಮಾತೆಗೆ ಬಾಯಾರಿಕೆಯಾದಾಗ ಲಕ್ಷ್ಮಣನು ಬಾಣಪ್ರಯೋಗ ಮಾಡಿ ಭೂಮಿಯಿಂದ ನೀರು ತರಿಸಿದ್ದನೆಂದೂ ಪ್ರತೀತಿ. ಅಂದು ಲಕ್ಷ್ಮಣನು ನೀರು ಬರುವಂತೆ ಮಾಡಿದ ಸ್ಥಳವೇ ಇಂದು `ಲಕ್ಷ್ಮಣತೀರ್ಥ’ ಎಂದು ಪ್ರಸಿದ್ಧವಾಗಿದೆ. ಇಲ್ಲಿ ದೊರೆಯುವ ನೀರು ಇಂದಿಗೂ ಸಿಹಿಯಾಗಿರುವುದು ನಿಜಕ್ಕೂ ವಿಶೇಷ.

ಶ್ರೀಕ್ಷೇತ್ರ ಕೈವಾರಕ್ಕೆ ಇರುವ ಇನ್ನೊಂದು ಇತಿಹಾಸವೆಂದರೆ, ದ್ವಾಪರ ಯುಗದಲ್ಲಿ ಈ ಪುಣ್ಯಕ್ಷೇತ್ರವು `ಏಕಚಕ್ರನಗರ’ ಎಂದು ಪ್ರಸಿದ್ಧವಾಗಿತ್ತು. ಇಲ್ಲಿನ ಬೆಟ್ಟವೊಂದರ ಮೇಲೆ ಬಕಾಸುರ ಎಂಬ ರಾಕ್ಷಸನು ವಾಸವಾಗಿದ್ದನು. ಅವನು ಊರಿನವರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಊರಿನವರು ಪ್ರತಿದಿನವೂ ಅವನಿಗೆ ತಿನ್ನಲು ಒಂದು ಬಂಡಿಯ ತುಂಬ ಆಹಾರವನ್ನೂ ಅದರೊಂದಿಗೆ ಒಬ್ಬ ಮನುಷ್ಯನನ್ನೂ ಕಳುಹಿಸಿಕೊಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಭೀಮಸೇನನು ತನ್ನ ಅಪಾರ ಬಲದಿಂದ ಆ ರಾಕ್ಷಸನೊಂದಿಗೆ ಸೆಣಸಾಡಿ ಅವನನ್ನು ಸಂಹರಿಸಿದನು. ಬಕಾಸುರನು ಶಿವಭಕ್ತನಾಗಿದ್ದರಿಂದ ಅವನ ವಧೆಯ ದೋಷ ಪರಿಹಾರಾರ್ಥವಾಗಿಯೇ ಪಾಂಡವರು ಬೆಟ್ಟದ ಹತ್ತಿರವೇ ಪಂಚ ಶಿವಲಿಂಗಗಳ ಪ್ರತಿಷ್ಠಾಪನೆ ಮಾಡಿದರು. ಈ ಸುಂದರ ದೇವಸ್ಥಾನದಲ್ಲಿ ವಿಶೇಷವಾಗಿ ಭೀಮೇಶ್ವರನ ಪೂಜೆಯು ವಿಜೃಂಭಣೆಯಿಂದ ನಡೆಯುತ್ತದೆ.
Leave a Reply

Your email address will not be published. Required fields are marked *