Search
Wednesday 3 June 2020
  • :
  • :

ಹಾರಾಡುವ ರಾಕ್ಷಸ

‘ವೂಶ್!’  ಕೃಷ್ಣ ಮತ್ತು ಅವನ ಮಿತ್ರರ ತಲೆಯ ಮೇಲೆ ಏನೋ ದೊಡ್ಡದು ಹಾರಾಡಿದಂತಾಯಿತು. ಅವರು ಮೈದಾನದಲ್ಲಿ ಆಟವಾಡುತ್ತಿದ್ದರು. ಅದು ಎಷ್ಟು ರಭಸದಿಂದ ಸಾಗಿತ್ತೆಂದರೆ ಅದೇನೆಂದು ಅವರಿಗೆ ತಿಳಿದುಕೊಳ್ಳಲಾಗಲಿಲ್ಲ. ಮಕ್ಕಳು ತಮ್ಮ ಆಟದಲ್ಲಿ ಯಾರು ಪೊಲೀಸ್, ಕಳ್ಳ, ಕುರಿಕಾಯುವವ, ಕುರಿಗಳು ಎಂದು ಆಗಷ್ಟೇ ನಿರ್ಧರಿಸಿದ್ದರು. ಕೃಷ್ಣ  ಬಲರಾಮ ಪೊಲೀಸರು, ಸುಬಾಲ ಕಳ್ಳ, ಶ್ರೀಧಾಮ ಕುರಿಕಾಯುವವ, ಮಧುಮಂಗಲ ಮತ್ತಿತರರು ಕುರಿಗಳು. ತಿನಿಸು ಸಿಕ್ಕೀತೆಂಬ ಆಸೆಯಿಂದ ಮಧು ಸ್ವತಃ ಕುರಿಯಾಗಲು ಮುಂದೆ ಬಂದಿದ್ದ. ಆದರೆ ಹುಲ್ಲು ತಿನ್ನುವುದು ಅಮ್ಮ ಮಾಡಿದ ತಿನಿಸಿನಂತಲ್ಲ ಎಂದು ಅವನಿಗೆ ಅರ್ಥವಾಗಿರಲಿಲ್ಲ.

ಕುರಿಗಳು ಮರದ ಕೆಳಗೆ ಹುಲ್ಲು ತಿನ್ನುತ್ತಿದ್ದವು, ಶ್ರೀಧಾಮ ಕುರಿ ಕಾಯುತ್ತಿದ್ದ. ಸುಬಾಲ ಪೊದೆಯ ಹಿಂದೆ ಅವಿತುಕೊಂಡಿದ್ದ, ಕುರಿ ಕದಿಯಲು ಹೊಂಚು ಹಾಕುತ್ತ.  ಕೃಷ್ಣ ಬಲರಾಮರು, ಈ ಸ್ಥಳದಿಂದ ಸ್ವಲ್ಪ ದೂರದಲ್ಲಿ, ‘ಕೋರ್ಟ್’ ನಲ್ಲಿ ಕಾಯುತ್ತ ನಿಂತರು. ಮಧುಮಂಗಲ ಹಿಡಿಯಷ್ಟು ಹುಲ್ಲು ಸೇವಿಸಿದ ಕೂಡಲೇ ಕುಸಿದು ಬಿದ್ದ. ಹುಲ್ಲು ಅವನ ನಾಲಗೆಯನ್ನು ಚುಚ್ಚುತಿತ್ತು. ಅವನು ಹೊರಳಾಡತೊಡಗಿದ. ಅವನ ರಕ್ಷಣೆಗೆ ಧಾವಿಸಿದ ಶ್ರೀಧಾಮ, ಈ ಗಡವ ‘ಕುರಿ’ ತಿಂದ ಹುಲ್ಲು ಹೊರಬರುವಂತೆ ಮಾಡಿದ. ಇಂತಹ ಅವಕಾಶಕ್ಕೇ ಕಾಯುತ್ತಿದ್ದ ಕಳ್ಳ ಸುಬಾಲ, ಪೊದೆಯಿಂದ ಧುಮುಕಿ ಎರಡು ಕುರಿಗಳನ್ನು (ಹುಡುಗರನ್ನು) ಹೊಡೆದುಕೊಂಡು ಹೋದ. ಆದರೆ, ಅವುಗಳನ್ನು ಹಿಡಿದುಕೊಂಡ ಕೂಡಲೇ ಅವು ಮಾಯವಾದವು ! ತಾನು ಮಾಡಿದ್ದು ವಿಳಂಬವಾಯಿತು, ಅವು ತಪ್ಪಿಸಿಕೊಂಡವೆಂದು ಅವನು ಭಾವಿಸಿ ಮತ್ತೆ ಪೊದೆಗೆ ಬಂದ, ಮತ್ತೊಂದು ಅವಕಾಶಕ್ಕೆ ಕಾಯುತ್ತ.

ಮಧು ಮಂಗಲನಿಗೆ ಸರಿಹೋದ ಮೇಲೆ, ಕುರಿಗಳು ಪುನಃ ಮೇಯತೊಡಗಿದವು. ಶ್ರೀಧಾಮನ ಗಮನ ಬೇರೆ ಕಡೆ ಇದ್ದಾಗ, ಸುಬಾಲ ಮತ್ತೆ ಪೊದೆಯಿಂದ ಆಚೆ ಬಂದು ಕುರಿಗಳನ್ನು ಅಪಹರಿಸಲೆತ್ನಿಸಿದ . ಅವನೇ ಆಶ್ಚರ್ಯಪಡುವಂತೆ ಈ ಕುರಿಗಳೂ ಮಾಯವಾದವು!  ತನ್ನ ಕುರಿಗಳು ಕಳುವಾಗಿವೆ ಎಂದು ದೂರು ನೀಡಲು ಶ್ರೀಧಾಮನು ಪೊಲೀಸರಾದ ಕೃಷ್ಣ ಬಲರಾಮರ ಬಳಿಗೆ ಧಾವಿಸಿದ. ವಿಚಾರಣೆ ನಡೆಯಿತು. ಕದ್ದ ಕುರಿಗಳನ್ನು ವಾಪಸು ಮಾಡಲು ಪೊಲೀಸರು ಕಳ್ಳನಿಗೆ ಆದೇಶಿಸಿದರು. ಕಳ್ಳನಾಗಿದ್ದ  ಸುಬಾಲ, ‘ಯಾವ ಕುರಿ? ನಾನು ಎರಡು ಬಾರಿ ಕದಿಯಲು ಯತ್ನಿಸಿದರೂ ಅವು ಮಾಯವಾದವು!’ ಎಂದು ಹೇಳಿದ.

‘ಸುಳ್ಳು ಹೇಳಬೇಡ, ಏ ಕಳ್ಳ !’ ಎಂದು ಪೊಲೀಸ್ ಕೃಷ್ಣ ಗುಡುಗಿದ. ‘ತತ್‌ಕ್ಷಣ ಕುರಿ ವಾಪಸು ಮಾಡು, ಇಲ್ಲವಾದರೆ ನಿನಗೆ ಶಿಕ್ಷೆ ವಿಸಲಾಗುವುದು’ ಎಂದ ಪೊಲೀಸಿನವ. ಪಾಪ! ಸುಬಾಲ. ಅವನು ನಿಜ ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ. ಅವನು ಅಳಲಾರಂಭಿಸಿದ.

ಏನೋ ನಡೆದಿದೆ ಎಂದು ಬಲರಾಮನಿಗೆ ಅರ್ಥವಾಯಿತು. ‘ಸುಬಾಲ, ಏನದು? ನೀನಲ್ಲದಿದ್ದರೆ ಯಾರು ಕುರಿಗಳನ್ನು ಕದ್ದರು?’ ಎಂದು ಬಲರಾಮ ಕೇಳುತ್ತಿದ್ದಾಗಲೇ ‘ವೂಶ್!’ ಎಂಬ ಶಬ್ದ ಮತ್ತೆ ಅವರ ಕಿವಿಗೆ ಅಪ್ಪಳಿಸಿತು. ಈ ಬಾರಿ ಅದು ಅವರ ಮುಂದೆಯೇ ಪ್ರತ್ಯಕ್ಷವಾಯಿತು. ಅದೇನು? ಮಕ್ಕಳು ತಮ್ಮ ಮುಂದೆ ಅತ್ಯಂತ ಕುರೂಪಿಯಾದ ರಾಕ್ಷಸನನ್ನು ಕಂಡರು. ಅವನ ಮುಖ ಬಾವಲಿಯಂತಿತ್ತು ಮತ್ತು ಕೈಕಾಲುಗಳ ಉಗುರು ಚೂಪಾಗಿತ್ತು. ಅವನು ಗಟ್ಟಿಯಾಗಿ ನಕ್ಕ: ‘ನಾನು ವ್ಯೋಮಾಸುರ. ನಿಮ್ಮ ಮಿತ್ರರನ್ನು ಕದ್ದದ್ದು ನಾನೇ! ಬೆಟ್ಟದ ಮೇಲೆ ಗುಹೆಯಲ್ಲಿ ಅವರನ್ನು ಅಡಗಿಸಿಟ್ಟಿರುವೆ!’  ಅವನು ಪುನಃ  ಹಾರಲು ಪ್ರಯತ್ನಿಸಿದ. ಆದರೆ ಈ ಬಾರಿ ಕೃಷ್ಣ  ಚುರುಕಾಗಿದ್ದ.  ರಾಕ್ಷಸನು ಮೇಲೇಳುತ್ತಿದ್ದಾಗ, ಕೃಷ್ಣನು ಅವನ ಕಾಲುಗಳನ್ನು ಹಿಡಿದು ತಿರುಗಿಸುತ್ತ ನೆಲಕ್ಕೆ ಹಾಕಿದ.

ಹಾರುವ ರಾಕ್ಷಸ ವ್ಯೋಮಾಸುರನಿಗೆ ತಲೆ ತಿರುಗುವಂತಾದರೂ ಅವನು ಮೇಲೆದ್ದು, ಕೃಷ್ಣನೊಂದಿಗೆ ಕಾಳಗಕ್ಕೆ ನಿಂತ. ಇವರಿಬ್ಬರ ಸಮರದಿಂದ ಭೂಮಿ ನಡುಗತೊಡಗಿತು. ಬಲರಾಮ ಅದನ್ನು ಅದುಮಿ ಹಿಡಿಯಬೇಕಾಯಿತು. ಕೃಷ್ಣ  ಪುನಃ ವ್ಯೋಮಾಸುರನನ್ನು ಎತ್ತಿ ಕೊಂಡು ವೇಗವಾಗಿ ತಿರುಗಿಸಿದ. ರಾಕ್ಷಸನ ಪ್ರಾಣ ಪಕ್ಷಿ ಹಾರಿ ಹೋಯಿತು. ಅವನ ದೇಹವನ್ನು ಕೆಳಗೆ ಹಾಕಿ ಬಲರಾಮನೊಂದಿಗೆ ಮಿತ್ರರನ್ನು ರಕ್ಷಿಸಲು ಬೆಟ್ಟದ ಮೇಲೆ ಧಾವಿಸಿದ.

ಗುಹೆಯೊಳಗಿದ್ದ ಮಿತ್ರರು ತಮ್ಮನ್ನು ಕಾಪಾಡಲು ಕೃಷ್ಣ ಬಲರಾಮರನ್ನು ಕೂಗುತ್ತಿದ್ದರು. ವ್ಯೋಮಾಸುರನು ಗುಹೆ ಬಾಗಿಲಿಗೆ ದೊಡ್ಡ ಬಂಡೆ ಅಡ್ಡ ಇಟ್ಟಿದ್ದ. ಮಿತ್ರರು ಒಳಗೆ ಸಿಕ್ಕಿಹಾಕಿಕೊಂಡಿದ್ದರು. ಕೃಷ್ಣನು ಬಂಡೆಯನ್ನು ಸುಲಭವಾಗಿ ಬದಿಗೆ ತಳ್ಳಿದ; ಮಿತ್ರರು ಗುಹೆಯಿಂದ ಹೊರಗೆ ಬರಲು ನೆರವಾದ. ಅವರೆಲ್ಲ ಬೆಟ್ಟದಿಂದ ಕೆಳಗೆ ಇಳಿಯುತ್ತ ಮತ್ತೊಬ್ಬ ರಾಕ್ಷಸನಿಂದ ಪಾರಾಗಿದ್ದಕ್ಕೆ ಹರ್ಷೋದ್ಗಾರ ಮಾಡಿದರು.
Leave a Reply

Your email address will not be published. Required fields are marked *