Search
Sunday 25 August 2019
  • :
  • :

ಹಲಸಿನ ವಿಶೇಷ

ಹಲಸಿನ ಹಣ್ಣು ಅತ್ಯಂತ ಪೌಷ್ಟಿಕಾಂಶ ಮತ್ತು ರುಚಿವುಳ್ಳದ್ದು. ಕಾಯಿ ಮತ್ತು ಹಣ್ಣು ಎರಡೂ ಕೂಡ. ಭಕ್ತಿವೇದಾಂತ ದರ್ಶನದ ಓದುಗರಿಗಾಗಿ ಈ ಸಂಚಿಕೆಯಲ್ಲಿ ಹಲಸಿನಹಣ್ಣು, ಕಾಯಿ, ಮತ್ತು ಬೀಜದಿಂದ ಮಾಡುವ ವಿವಿಧ ಅಡಿಗೆಗಳನ್ನು ನೀಡಿದ್ದೇವೆ. ಇವನ್ನು ಶ್ರದ್ಧೆಯಿಂದ ತಯಾರು ಮಾಡಿ, ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಹಲಸಿನ ಹಣ್ಣಿನ ಪಾಯಸ

ಬೇಕಾಗುವ ಪದಾರ್ಥಗಳು :

  • ಸಣ್ಣಗೆ ಹೆಚ್ಚಿದ ಹಲಸಿನ ಹಣ್ಣು (ಬೀಜ ತೆಗೆದದ್ದು) – ೨ ಕಪ್
  • ಬೆಲ್ಲ – ೧೫೦ ಗ್ರಾಂ
  • ಕಂಡೆನ್ಸ್‌ಡ್‌ಮಿಲ್ಕ್ (ಉದಾ: ಮಿಲ್ಕ್‌ಮೇಡ್) – ೧/೨ ಲೀಟರ್
  • ತೆಂಗಿನ ತುರಿ – ೧ ಕಪ್
  • ತೆಂಗಿನ ಹಾಲು – ೧ ಕಪ್
  • ಮೈದಾಹಿಟ್ಟು – ೧ ಚಮಚ
  • ಏಲಕ್ಕಿಪುಡಿ – ೧/೪ ಚಮಚ
  • ಗೋಡಂಬಿ – ೨೫ ಗ್ರಾಂ
  • ಒಣದ್ರಾಕ್ಷಿ – ೨೫ ಗ್ರಾಂ
  • ಲವಂಗ – ೬
  • ತುಪ್ಪ -೧/೨ ಕಪ್

ಮಾಡುವ ವಿಧಾನ : ಪಾತ್ರೆಗೆ ಹಾಲು ಮತ್ತು ಕಂಡೆನ್ಸ್‌ಡ್ ಮಿಲ್ಕ್ ಹಾಕಿ ಕುದಿಯಲು ಬಿಡಿ. ಪ್ಯಾನ್‌ಗೆ ತುಪ್ಪ ಹಾಕಿ ಬಿಸಿಮಾಡಿ ಅದರಲ್ಲಿ ಸಣ್ಣಗೆ ಹೆಚ್ಚಿದ ಹಲಸಿನ ತೊಳೆಗಳನ್ನು ಹಾಕಿ ಘಂ ಎಂದು ಪರಿಮಳ ಬರುವವರೆಗೂ ಹುರಿಯಿರಿ. ಮಿಕ್ಸಿಗೆ ತೆಂಗಿನತುರಿ, ಮೈದಾಹಿಟ್ಟು, ಬೆಲ್ಲ, ತೆಂಗಿನಹಾಲು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ. ಮತ್ತೊಂದು ಪ್ಯಾನ್‌ಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ, ಲವಂಗ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹಾಲಿಗೆ ಏಲಕ್ಕಿಪುಡಿ, ಹುರಿದ ಹಲಸಿನ ತೊಳೆ  ಹಾಕಿ ಕುದಿಸಿ. ಕೊನೆಯದಾಗಿ ಗೋಡಂಬಿ ದ್ರಾಕ್ಷಿ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ಧ.

ಹಲಸಿನ ಹಣ್ಣಿನ ಮುಳಕ

ಬೇಕಾಗುವ ಪದಾರ್ಥಗಳು :

  • ತುಂಬಾ ಹಣ್ಣಾದ ಹಲಸಿನ ತೊಳೆ – ೧೫
  • ತೆಂಗಿನ ತುರಿ – ೧ ಕಪ್
  • ಅಕ್ಕಿ – ೧ ಕಪ್
  • ಬೆಲ್ಲ – ೨೦೦ ಗ್ರಾಂ
  • ಏಲಕ್ಕಿ – ೪
  • ಎಣ್ಣೆ – ಕರಿಯಲು

ಮಾಡುವ ವಿಧಾನ : ಅಕ್ಕಿಯನ್ನು ೬ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಹಲಸಿನ ತೊಳೆಗಳನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಬೆಲ್ಲವನ್ನು ಕುಟ್ಟಿ ಬೆರೆಸಿಡಿ. ನೆಂದ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ತೆಂಗಿನತುರಿ, ಏಲಕ್ಕಿ, ಹಲಸಿನತೊಳೆ, ಬೆಲ್ಲವನ್ನು ಹಾಕಿ ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಇಡಿ. ಕಾದ ಎಣ್ಣೆಗೆ ರುಬ್ಬಿದ ಮಿಶ್ರಣವನ್ನು ಗೋಲಿಗಾತ್ರದ ಉಂಡೆ ಮಾಡಿ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಈಗ ಬಿಸಿಯಾದ ಮುಳಕ ಸಿದ್ಧ.

ಹಲಸಿನ ಕಾಯಿ ಪಲ್ಯ

ಬೇಕಾಗುವ ಪದಾರ್ಥಗಳು :

  • ಹಲಸಿನಕಾಯಿ (ಸಿಪ್ಪೆ ತೆಗೆದದ್ದು) – ೧/೪ ಕೆ.ಜಿ.
  • ತೆಂಗಿನತುರಿ – ೧/೨ ಕಪ್
  • ಕೆಂಪು ಮೆಣಸಿನಕಾಯಿ – ೨
  • ಹಸಿರುಮೆಣಸಿನಕಾಯಿ – ೨
  • ಅರಿಶಿನ – ೨ ಚಿಟಿಕೆ
  • ಎಣ್ಣೆ – ೨ ಚಮಚ
  • ಸಾಸಿವೆ – ೧/೨ ಚಮಚ
  • ಉದ್ದಿನಬೇಳೆ – ೧ ಚಮಚ
  • ಜೀರಿಗೆ – ೧/೨ ಚಮಚ
  • ಕರಿಬೇವು – ೨ ಎಸಳು
  • ಉಪ್ಪು – ರುಚಿಗೆ

ಮಾಡುವ ವಿಧಾನ : ಹಲಸಿನ ಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಉಪ್ಪು, ಅರಿಶಿನ, ಸ್ವಲ್ಪ ನೀರನ್ನು ಹಾಕಿ ಕುಕ್ಕರಿನಲ್ಲಿ ಬೇಯಿಸಿ. ಆರಿದ ಮೇಲೆ ಸ್ವಲ್ಪ ಜಜ್ಜಿ ತೆಂಗಿನ ತುರಿ, ಜೀರಿಗೆ, ಹಸಿರು ಮೆಣಸಿನಕಾಯಿ ರುಬ್ಬಿ ಬೆಂದ ಹಲಸಿನಕಾಯಿ ತುಂಡುಗಳಿಗೆ ಬೆರೆಸಿ. ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಮಾಡಿ, ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಕೆಂಪುಮೆಣಸಿನಕಾಯಿ, ಉದ್ದಿನಬೇಳೆ ಹಾಕಿ ಬಾಡಿಸಿ. ಇದಕ್ಕೆ ಹಲಸಿನ ಕಾಯಿ ತುಂಡುಗಳನ್ನು ಮಿಶ್ರಮಾಡಿ ಸ್ವಲ್ಪ ನೀರು ಹಾಕಿ ಕುದಿಸಿದರೆ ಹಲಸಿನಕಾಯಿ ಪಲ್ಯ ಸಿದ್ಧ.

ಹಲಸಿನ ಬೀಜದ ಹುಳಿ

ಬೇಕಾಗುವ ಪದಾರ್ಥಗಳು :

  • ಹಲಸಿನ ಬೀಜ ಸಿಪ್ಪೆ ತೆಗೆದದ್ದು – ೧೫
  • ತೊಗರಿಬೇಳೆ – ೧ ಕಪ್
  • ಕ್ಯಾರೆಟ್, ಆಲೂಗಡ್ಡೆ – ತಲಾ ೧
  • ಟೊಮೆಟೊ – ೨
  • ಹುಣಸೆರಸ -೨ ಚಮಚ
  • ಅರಿಶಿನ – ಸ್ವಲ್ಪ
  • ಬೆಲ್ಲ ಮತ್ತು ಉಪ್ಪು – ರುಚಿಗೆ ತಕ್ಕಷ್ಟು
  • ರುಬ್ಬುವುದಕ್ಕೆ:
  • ತೆಂಗಿನತುರಿ – ೧/೨ ಕಪ್
  • ಕೆಂಪು ಮೆಣಸಿನಕಾಯಿ – ೬ (ಬ್ಯಾಡಗಿ, ಗುಂಟೂರು)
  • ಉದ್ದಿನಬೇಳೆ – ೧ ಚಮಚ
  • ಕಡಲೆಬೇಳೆ – ೧ ಚಮಚ
  • ಕೊತ್ತಂಬರಿ ಬೀಜ – ೧ ದೊಡ್ಡ ಚಮಚ
  • ಜೀರಿಗೆ – ೧/೨ ಚಮಚ
  • ಮೆಂತ್ಯ – ೧/೪ ಚಮಚ (೧೦-೧೨ ಕಾಳು)

ಒಗ್ಗರಣೆಗೆ :

  • ಎಣ್ಣೆ – ೨ ಚಮಚ
  • ಸಾಸಿವೆ – ೧ ಚಮಚ
  • ಕರಿಬೇವು – ೨ ಎಸಳು
  • ಇಂಗು – ಚಿಟಿಕೆ

ಮಾಡುವ ವಿಧಾನ : ಮೊದಲು ಪ್ರೆಷರ್ ಕುಕ್ಕರಿನಲ್ಲಿ ಹಲಸಿನಬೀಜ, ತೊಗರಿಬೇಳೆ, ತರಕಾರಿ, ಉಪ್ಪು, ಅರಿಶಿನ ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ಬೇಯಿಸಿಕೊಳ್ಳಿ. ಉದ್ದಿನಬೇಳೆ, ಕಡಲೆಬೇಳೆ, ಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಬೀಜ, ಮೆಂತ್ಯವನ್ನು ಹುರಿದುಕೊಳ್ಳಿ. ಇದನ್ನೆಲ್ಲಾ ತೆಂಗಿನ ತುರಿಯ ಜೊತೆಗೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅನಂತರ ಬೇಯಿಸಿದ ಬೇಳೆ ತರಕಾರಿ ಮಿಶ್ರಣಕ್ಕೆ ರುಬ್ಬಿದ ಮಸಾಲೆ, ಬೆಲ್ಲ, ಹುಣಸೆರಸ ಹಾಕಿ ಚೆನ್ನಾಗಿ ಕುದಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಕರಿಬೇವು, ಇಂಗನ್ನು ಹಾಕಿ ಬೆರೆಸಿದರೆ ಹಲಸಿನ ಬೀಜದ ಹುಳಿ ಸಿದ್ಧ. ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ಸವಿಯಲು ಕೊಡಿ.

ಹಲಸಿನ ಚಿಪ್ಸ್

ಬೇಕಾಗುವ ಪದಾರ್ಥಗಳು :

  • ತೀರ ಹಣ್ಣಾಗದ ಹಲಸಿನ ತೊಳೆಗಳು – ೨೦
  • ಉಪ್ಪು – ರುಚಿಗೆ
  • ಅರಿಶಿನ – ೧/೨ ಚಮಚ
  • ಎಣ್ಣೆ – ಕರಿಯಲು

ಮಾಡುವ ವಿಧಾನ : ತೊಳೆಗಳನ್ನು ಉದ್ದುದ್ದವಾಗಿ ಕತ್ತರಿಸಿ. (ಅರ್ಧ ಸೆಂಟಿಮೀಟರ್‌ಅಗಲ). ಒದ್ದೆ ಇದ್ದರೆ ತೆಳುವಾದ ಬಟ್ಟೆಯ ಮೇಲೆ ಹರಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಹೊಗೆ ಬರುವ ತನಕ ಕಾಯಿಸಿ. ಕಾದ ಎಣ್ಣೆಗೆ ಒಂದು ಹಿಡಿ ಕತ್ತರಿಸಿದ ಹಲಸಿನ ತೊಳೆಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಒಂದಕ್ಕೊಂದು ಅಂಟದಂತೆ ಬೇಯಿಸಿ. ಬೆಂದ ಹಲಸಿನ ಚಿಪ್ಸ್ ಅನ್ನು ಎಣ್ಣೆ ಹೀರಿಕೊಳ್ಳುವ ಪೇಪರ್‌ಮೇಲೆ ಹರಡಿ. ಮೇಲೆ ಉಪ್ಪು, ಅರಿಶಿನ ಹಾಕಿ ಕಲೆಸಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕೆನಿಸಿದಾಗ ಬಳಸಿ.

ಹಲಸಿನ ಹಣ್ಣಿನ ಕಡುಬು

ಬೇಕಾಗುವ ಪದಾರ್ಥಗಳು :

  • ಹಲಸಿನ ತೊಳೆ – ೨ ಕಪ್
  • ಇಡ್ಲಿರವೆ – ೧ ಕಪ್
  • ಬೆಲ್ಲ – ೧/೪ ಕಪ್
  • ತೆಂಗಿನ ತುರಿ – ೧/೪ ಕಪ್
  • ಏಲಕ್ಕಿಪುಡಿ – ೧/೨ ಚಮಚ
  • ಉಪ್ಪು – ಚಿಟಿಕೆ

ಮಾಡುವ ವಿಧಾನ: ಬಾಣಲೆಯಲ್ಲಿ ಇಡ್ಲಿರವೆಯನ್ನು ಹಾಕಿ ೧೦ರಿಂದ ೧೫ ನಿಮಿಷದವರೆಗೆ ಮಂದ ಉರಿಯಲ್ಲಿ ಹುರಿಯಿರಿ. ಅನಂತರ ಹಲಸಿನತೊಳೆ ಮತ್ತು ಬೆಲ್ಲವನ್ನು ಸೇರಿಸಿ ಗ್ರೈಂಡ್ ಮಾಡಿ. ದಪ್ಪ ತಳದ ಪಾತ್ರೆಗೆ ಇಡ್ಲಿರವೆ, ಹಲಸಿನ ತೊಳೆ, ಬೆಲ್ಲ, ತೆಂಗಿನತುರಿ, ಏಲಕ್ಕಿಪುಡಿ, ಉಪ್ಪನ್ನು ಹಾಕಿ ೫ರಿಂದ ೧೦ ನಿಮಿಷ ಬೇಯಿಸಿ.

ಕಡುಬು ಮಾಡಲು ಬಾಳೆ ಎಲೆಯನ್ನು ತೆಗೆದುಕೊಂಡು ಅದನ್ನು ಕೋನಿನ ಆಕಾರ ಮಾಡಿ ಅದರಲ್ಲಿ ೨ ಚಮಚ ಇಡ್ಲಿ ಮಿಶ್ರಣವನ್ನು ಹಾಕಿ ಕೊನೆಯನ್ನು ದಾರದಿಂದ ಕಟ್ಟಿ ಇದನ್ನು ಇಡ್ಲಿ ಕುಕ್ಕರಿನಲ್ಲಿ ಇಟ್ಟು ೨೦ ನಿಮಿಷ ಬೇಯಿಸಿದರೆ ರುಚಿಯಾದ ಹಲಸಿನ ಕಡುಬು ಸಿದ್ಧ

ಹಲಸಿನ ಹಪ್ಪಳ

ಬೇಕಾಗುವ ಪದಾರ್ಥಗಳು :

  • ಹಲಸಿನ ತೊಳೆ -೫೦
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಲಸಿನ ತೊಳೆಗಳನ್ನು ಕುಕ್ಕರಿನಲ್ಲಿ ಉಪ್ಪು ಹಾಕಿ ಬೇಯಿಸಿ. ಬೇಯಿಸಿದ ಹಲಸಿನ ಹಣ್ಣನ್ನು ಪೇಸ್ಟ್ ಆಗುವಂತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ಸಿದ್ಧವಾದ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಂದೊಂದೇ ಉಂಡೆಯನ್ನು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ಒತ್ತಿ ಹಪ್ಪಳದ ರೀತಿ ಲಟ್ಟಿಸಿ. ಇದನ್ನು ಹತ್ತಿಯ ಬಟ್ಟೆಯ ಮೇಲೆ ೨-೩ ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ಗಾಳಿ ಹೋಗದಂತೆ ಡಬ್ಬದಲ್ಲಿ ತುಂಬಿಡಿ. ಬೇಕೆನಿಸಿದಾಗ ಕಾದ ಎಣ್ಣೆಯಲ್ಲಿ ಕರಿದು ಸವಿಯಿರಿ.

 

ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು:

  1. ಮೃದುವಾದ ಮತ್ತು ಸುವಾಸನೆಭರಿತ ಹಣ್ಣನ್ನೇ ಖರೀದಿಸಿ, ಬಲಿತ ಹಣ್ಣಲ್ಲಿ ಮುಳ್ಳಿನ ಭಾಗವು ಮೃದುವಾಗಿರುತ್ತದೆ.
  2. ಹಣ್ಣು ಕತ್ತರಿಸುವಾಗ ಬಿಳಿ ಅಂಟು ಹೊರಸೂಸುತ್ತದೆ. ಸ್ವಲ್ಪ ಕೊಬ್ಬರಿ ಎಣ್ಣೆ ಕೈಗೆ ಮತ್ತು ಚಾಕುವಿಗೆ ಸವರಿಕೊಂಡರೆ ಕೈ ಅಂಟಾಗುವುದಿಲ್ಲ ಮತ್ತು ಹೆಚ್ಚಲು ಸುಲಭ.
  3. ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ ಒಂದಕ್ಕೊಂದು ಉಜ್ಜಿ ನೀರಿಗೆ ಹಾಕಿ ಉಪಯೋಗಿಸಿದರೆ ನಿಮ್ಮ ಕೈ ಅಂಟಾಗುವುದಿಲ್ಲ.



Leave a Reply

Your email address will not be published. Required fields are marked *