Search
Sunday 25 August 2019
  • :
  • :

ಹಲಸಿನ ಹಲವು ಖಾದ್ಯಗಳು

ಬೇಸಿಗೆ ಕಾಲ ಬಂತೆಂದರೆ ಎಲ್ಲರೂ ಎದುರು ನೋಡುವ ಮಾವಿನಷ್ಟೇ ಜನಪ್ರಿಯವಾದುದು ಹಲಸು. ಕರ್ನಾಟಕದಲ್ಲಿ ಹಲಸು ಸಮೃದ್ಧವಾಗಿ ಬೆಳೆಯುತ್ತದೆ. ಹಲಸಿನ ಕಾಯಿಯಿಂದ ಹಪ್ಪಳ, ಪಲ್ಯ, ಚಿಪ್ಸ್ ಮೊದಲಾದ ನಾನಾ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಇದು ವಿಟಮಿನ್ `ಸಿ’ ಮತ್ತು `ಎ’ಗಳನ್ನು ಒಳಗೊಂಡಿದ್ದು ಕಬ್ಬಿಣ, ಪೊಟಾಷಿಯಂ, ಮೆಗ್ನೀಷಿಯಂ ಮೊದಲಾದ ಖನಿಜಾಂಶಗಳಿಂದ ಕೂಡಿದೆ. ಹಲಸು ಉತ್ತಮ ಜೀರ್ಣಕ್ರಿಯೆಗೆ ನೆರವಾಗುವುದಲ್ಲದೆ ಆರೋಗ್ಯಯುತ ಕಣ್ಣು ಮತ್ತು ತ್ವಚೆಗೆ ಸಹಕಾರಿಯಾಗಿದೆ.

ಹಲಸಿನ ಕಾಯಿ ಪಲ್ಯ

ಬೇಕಾಗುವ ಪದಾರ್ಥಗಳು :

  • ಹಲಸಿನ ಕಾಯಿ ತೊಳೆ – ೨೦ (ಬೀಜ ರಹಿತ)
  • ಹಸಿ ಮೆಣಸಿನಕಾಯಿ – ೫
  • ಕರಿಬೇವು – ೧ ಎಸಳು
  • ಉದ್ದಿನ ಬೇಳೆ – ೨ ಚಮಚ
  • ಸಾಸಿವೆ – ೧/೨ ಚಮಚ
  • ಅರಿಶಿನ – ಚಿಟಿಕೆ
  • ಇಂಗು – ಚಿಟಿಕೆ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಒಗ್ಗರಣೆಗೆ ತಕ್ಕಷ್ಟು

ಮಾಡುವ ವಿಧಾನ: ಪ್ರತಿಯೊಂದು ತೊಳೆಯನ್ನು ೨-೩ ಭಾಗಗಳಾಗಿ ಉದ್ದಕ್ಕೆ ಕತ್ತರಿಸಿ. ಅನಂತರ ದಪ್ಪ ತಳದ ಪಾತ್ರೆಯಲ್ಲಿ ತೊಳೆಗಳನ್ನು ನೀರಿನೊಂದಿಗೆ ಬೇಯಿಸಿ. ಪಾತ್ರೆಯ ತಳಕ್ಕೆ ಮೊದಲೇ ಸ್ವಲ್ಪ ಎಣ್ಣೆ ಹಚ್ಚಿದರೆ ತಳ ಹಿಡಿಯುವುದನ್ನು ತಡೆಯುತ್ತದೆ. ತೊಳೆಗಳನ್ನು ಬೇಯಿಸುವಾಗ ಆಗಾಗ ಕದಡುತ್ತಿರಿ. ತೊಳೆಗಳು ಬೇಯುವಾಗ ಹೆಚ್ಚು ನೀರನ್ನು ಹೀರಿಕೊಂಡರೆ ಇನ್ನಷ್ಟು ನೀರನ್ನು ಸೇರಿಸಿ. ತೊಳೆಗಳು ಮುಕ್ಕಾಲು ಭಾಗ ಬೆಂದಾಗ ಉಪ್ಪು ಸೇರಿಸಿ, ಅನಂತರ ಹಸಿ ಮೆಣಸಿನಕಾಯಿ, ಕರಿಬೇವು, ಉದ್ದಿನಬೇಳೆ, ಸಾಸಿವೆ, ಅರಿಶಿನ ಮತ್ತು ಇಂಗಿಗೆ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ತೊಳೆಗಳು ಪೂರ್ತಿಯಾಗಿ ಬೆಂದ ಅನಂತರ ಒಗ್ಗರಣೆ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ತಿರುವಿರಿ.

ಹಲಸಿನ ಕಾಯಿ ಹಪ್ಪಳ

ಬೇಕಾಗುವ ಪದಾರ್ಥಗಳು :

  • ಹಲಸಿನಕಾಯಿ ತೊಳೆ – ೨೦ (ಬೀಜ ರಹಿತ)
  • ಮೆಣಸಿನಕಾಯಿ ಪುಡಿ – ೩ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ

ಮಾಡುವ ವಿಧಾನ : ಕತ್ತರಿಸಿದ ಹಲಸಿನಕಾಯಿ ತೊಳೆಗಳನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಿ. ಅನಂತರ ಬೆಂದ ತೊಳೆಗಳು, ಮೆಣಸಿನಕಾಯಿ ಮತ್ತು ಉಪ್ಪನ್ನು ಮಿಕ್ಸಿಗೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ತಿರುವಿ. ಈ ಮಿಶ್ರಣದಿಂದ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿ.ಉಂಡೆಯನ್ನು ಎರಡು ಪ್ಲಾಸ್ಟಿಕ್ ಹಾಳೆಗಳ ಮಧ್ಯ ಇಟ್ಟು ಲಟ್ಟಿಸಿ. ಲಟ್ಟಿಸುವಾಗ ಹಿಟ್ಟು ಪ್ಲಾಸ್ಟಿಕ್ ಹಾಳೆಗೆ ಅಂಟದಂತೆ ಎಣ್ಣೆ ಹಚ್ಚಿರಿ. ಹೀಗೆ ಲಟ್ಟಿಸಿದ ಹಪ್ಪಳಗಳನ್ನು ಹಸಿಯಾಗಿರುವಾಗಲೇ ಪ್ಲಾಸ್ಟಿಕ್ ಹಾಳೆಯ ಸಮೇತ ಒಂದು ದೊಡ್ಡ ಚಾಪೆಯ ಮೇಲೆ ಹಾಕಿ, ಹಲವಾರು ಹಪ್ಪಳಗಳನ್ನು ಎರಡು/ಮೂರು ದಿನ ಜೋರು ಬಿಸಿಲಿನಲ್ಲಿ ಒಣಗಿಸಿರಿ. ಚೆನ್ನಾಗಿ ಒಣಗಿದ ಮೇಲೆ ಈ ಹಪ್ಪಳಗಳನ್ನು ಹಲವಾರು ತಿಂಗಳು ಇಡಬಹುದು. ಬೇಕೆನಿಸಿದಾಗ ಎಣ್ಣೆಯಲ್ಲಿ ಕರಿದು ಅಥವಾ ಬೆಂಕಿಯ ಮೇಲೆ ಸುಟ್ಟು ತಿನ್ನಬಹುದು.

ಹಲಸಿನ ಕಾಯಿ ಪೋಡಿ

ಬೇಕಾಗುವ ಪದಾರ್ಥಗಳು :

  • ಹಲಸಿನ ಕಾಯಿ (ಎಳೆಯದು) – ೧
  • ಕೆಂಪು ಮೆಣಸಿನಕಾಯಿ – ೨೦
  • ಅಕ್ಕಿ – ೧ ಕಪ್
  • ಧನಿಯಾ – ೧ ದೊಡ್ಡ ಚಮಚ
  • ಹುಣಸೆ  ಹಣ್ಣಿನ ರಸ – ೧/೨ ಟೀ ಚಮಚ
  • ಎಣ್ಣೆ – ಕರಿಯಲು
  • ಇಂಗು – ಚಿಟಿಕೆ
  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಅಕ್ಕಿಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ. ಹಲಸಿನ ಕಾಯಿಯ ತೊಳೆಗಳನ್ನು (ಬೀಜ ರಹಿತ) ೩-೪ ಅಂಗುಲ ಅಗಲವಾದ ಹೋಳುಗಳನ್ನಾಗಿ ಹೆಚ್ಚಿರಿ. ಮಿಕ್ಸಿಯ ಜಾರ್‌ನಲ್ಲಿ ಧನಿಯಾ, ಕೆಂಪು ಮೆಣಸಿನಕಾಯಿ, ಹುಣಸೆ ರಸ, ಉಪ್ಪು, ಇಂಗು ಹಾಕಿ ಸ್ವಲ್ಪ ಪುಡಿಮಾಡಿಕೊಳ್ಳಬೇಕು. ನೆನೆಸಿಟ್ಟ ಅಕ್ಕಿಯ ನೀರನ್ನು ಬಸಿದು ಪುಡಿ ಮಾಡಿದ ಮಿಶ್ರಣಕ್ಕೆ ಸೇರಿಸಿ. ಅಕ್ಕಿಯೊಂದಿಗೆ ಪೇಸ್ಟ್ ತರ ಮಿಕ್ಸಿಯಲ್ಲಿ ಮಾಡಿಕೊಳ್ಳಬೇಕು. ತೀರಾ ನಯವಾಗಿಯೂ ಅಥವಾ ನೀರಾಗಿಯೂ ಇರಬಾರದು; ಸ್ವಲ್ಪ ತರಿತರಿಯಾಗಿರಬೇಕು.

ಈ ಮಸಾಲೆಯನ್ನು ಹೆಚ್ಚಿದ ಹಲಸಿನ ತೊಳೆಗಳಿಗೆ ಚೆನ್ನಾಗಿ ಹಚ್ಚಿ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಸಾಲೆ ಹಚ್ಚಿದ ತೊಳೆಗಳನ್ನು ಚೆನ್ನಾಗಿ ಕರಿದರೆ ಗರಿಗರಿಯಾದ ಹಲಸಿನ ಕಾಯಿ ಪೋಡಿ ಸಿದ್ಧ.

ಹಲಸಿನ ಕಾಯಿಯ ಕಬಾಬ್

ಬೇಕಾಗುವ ಪದಾರ್ಥಗಳು :

  • ಹಲಸಿನ ಕಾಯಿ – ೧
  • (ಎಳೆ ತೊಳೆಗಳಿರಬೇಕು)
  • ಬೇಳೆ – ೧/೨ ಕಪ್
  • ಚೆಕ್ಕೆ – ೧/೨ ಅಂಗುಲ
  • ಲವಂಗ – ೪
  • ಕಡಲೆ ಹಿಟ್ಟು – ೧/೨ ಕಪ್
  • ಅಚ್ಚ ಖಾರದ ಪುಡಿ – ೧ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಕರಿಯಲು
  • ಶುಂಠಿ – ೨ ಅಂಗುಲ
  • ಅರಿಶಿನ – ೧/೪ ಚಮಚ
  • ಇಂಗು – ಚಿಟಿಕೆ

ಮಾಡುವ ವಿಧಾನ : ಹಲಸಿನ ಕಾಯಿಯ ಮೇಲಿರುವ ಮುಳ್ಳಿನ ಸಿಪ್ಪೆಯನ್ನು ತೆಗೆದುಹಾಕಿ. ಈಗ ಒಳ ಭಾಗವನ್ನು ದಪ್ಪ ಹೋಳುಗಳನ್ನಾಗಿ ಕತ್ತರಿಸಿ, ಬೇಳೆಯ ಜೊತೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ಚೆನ್ನಾಗಿ ಬೆಂದ ಮೇಲೆ ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ (ಹೆಚ್ಚು ನುಣ್ಣಗಿರಬಾರದು). ಈ ರುಬ್ಬಿದ ಮಿಶ್ರಣಕ್ಕೆ ಅಚ್ಚ ಖಾರದ ಪುಡಿ, ಅರಿಶಿನ, ಜಜ್ಜಿದ ಶುಂಠಿ ಹಾಕಿ ಚೆನ್ನಾಗಿ ಕಲೆಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿ, ಅದನ್ನು ಚಪ್ಪಟೆಯಾಗಿ ಕೈಯಲ್ಲಿ ತಟ್ಟಿ. ಇದನ್ನು ಕಡಲೆ ಹಿಟ್ಟು ಮತ್ತು ನೀರಿನಿಂದ ಮಾಡಿದ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಕರಿದರೆ ಹಲಸಿನ ಕಾಯಿ ಕಬಾಬ್ ಸಿದ್ಧ.

ಹಲಸಿನ ಕಾಯಿಯ ಉಪ್ಪೇರಿ

ಬೇಕಾಗುವ ಪದಾರ್ಥಗಳು :

  • ಹದವಾಗಿ ಬಲಿತ ಹಲಸಿನಕಾಯಿ ತೊಳೆಗಳು (ಬೀಜ ರಹಿತ)
  • ಎಣ್ಣೆ – ಕರಿಯಲು
  • ಉಪ್ಪು – ರುಚಿಗೆ ತಕ್ಕಷ್ಟು
  • ಖಾರದ ಪುಡಿ – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ತೊಳೆಗಳನ್ನು ಉದ್ದಕ್ಕೆ ಸೀಳಿ (ಎರಡು ಸೆಂ.ಮೀ. ಅಗಲ). ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಸೀಳಿಟ್ಟುಕೊಂಡ ತೊಳೆಗಳನ್ನು ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಅನಂತರ ಅದನ್ನು ಎಣ್ಣೆಯಿಂದ ತೆಗೆದು ಒಂದು ಪಾತ್ರೆಯೊಳಗೆ ಹಾಕಿ ಉಪ್ಪು ಮತ್ತು ಖಾರದ ಪುಡಿ ಹಾಕಿ ಚೆನ್ನಾಗಿ ಕುಲುಕಿ. ತಣ್ಣಗಾದ ಮೇಲೆ ಗರಿ-ಗರಿಯಾಗಿ ತಿನ್ನಲು ಸಿದ್ಧ.




Leave a Reply

Your email address will not be published. Required fields are marked *