Search
Monday 18 November 2019
  • :
  • :

ಶ್ರೀ ಕ್ಷೇತ್ರ ಗಡಿದಂ

ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯಿಂದ ಪೂರ್ವಕ್ಕೆ ಕೇವಲ ೩ ಕಿಲೋ ಮೀಟರುಗಳ ಅಂತರದಲ್ಲಿರುವ ಪುಟ್ಟ ಗ್ರಾಮವೇ ಶ್ರೀ ಗಡಿದಂ ಕ್ಷೇತ್ರ. ಇದು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು ೯೦ ಕಿಲೋ ಮೀಟರು ದೂರದಲ್ಲಿರುವ ಪವಿತ್ರ ವಿಷ್ಣು ಕ್ಷೇತ್ರವಾಗಿದೆ. ಇಲ್ಲಿ ಶ್ರೀ ಭೂನೀಳಾ ಸಮೇತನಾಗಿರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಆಲಯವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು ನೇತ್ರಾನಂದವನ್ನು ನೀಡುತ್ತದೆ.

ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಈ ಭವ್ಯ ದೇವಾಲಯವು ವಿಶೇಷವಾದ ವೈಶಿಷ್ಟ್ಯವನ್ನು ಸಹಾ ಹೊಂದಿದೆ ಎಂಬುದು ಇಲ್ಲಿನ ಸ್ಥಳ ಪುರಾಣದಿಂದ ಸ್ಪಷ್ಟವಾಗುತ್ತದೆ. ದ್ವಾಪರ ಯುಗದಲ್ಲಿ ಭಗವದ್ ಭಕ್ತರಾದ ಪಾಂಡವರನ್ನು ಹಾಗೂ  ಅವರ ಏಕೈಕ ಕುಡಿಯಾದ ಪರೀಕ್ಷಿತ್ ಮಹಾರಾಜನನ್ನು ಕಾಪಾಡಿದ ಶ್ರೀಕೃಷ್ಣನು ತನ್ನ ಧಾಮಕ್ಕೆ ಹಿಂದಿರುಗುತ್ತಾನೆ. ಕಾಲಾಂತರದಲ್ಲಿ ರಾಜನಾದ ಪರೀಕ್ಷಿತನು ಬೇಟೆಗೆಂದು ಅರಣ್ಯ ಹೊಕ್ಕು ದಾಹವನ್ನು ತೀರಿಸಿಕೊಳ್ಳಲು ಸಮೀಪದ ಆಶ್ರಮವನ್ನು ಪ್ರವೇಶಿಸುತ್ತಾನೆ. ಅಲ್ಲಿ ತಪೋಮಗ್ನರಾಗಿದ್ದ ಶಮೀಕ ಮಹರ್ಷಿಯು ರಾಜನ ಆಗಮನವನ್ನು ಅರಿಯದೆ ಹೋಗಲು ಅಸಂತೃಪ್ತನಾದ ರಾಜಾ ಪರೀಕ್ಷಿತನು ಅಲ್ಲಿಯೇ ಗತಪ್ರಾಣವಾಗಿ ಬಿದ್ದಿದ್ದ ಸರ್ಪವೊಂದನ್ನು ಆ ಋಷಿಯ ಕೊರಳಿಗೆ ಹಾಕಿ ಅಲ್ಲಿಂದ ನಿರ್ಗಮಿಸುತ್ತಾನೆ. ಇದನ್ನರಿತ ಋಷಿ ಕುಮಾರ ಶೃಂಗಿಯು ಪರೀಕ್ಷಿತ್ ಮಹಾರಾಜನು ಆ ದಿನದಿಂದ ಏಳನೇ ದಿನದಂದು ಸರ್ಪದಿಂದ ಕಚ್ಚಲ್ಪಟ್ಟು  ಸಾಯಬೇಕು ಎಂದು ಶಾಪ ನೀಡುತ್ತಾನೆ.

ಜನಮೇಜಯ ಮಹಾರಾಜನು ಪರೀಕ್ಷಿತನ ಮಗ. ಈ ಘಟನೆಯಿಂದ ಕ್ರುದ್ಧನಾದ ಜನಮೇಜಯನು ಇಡೀ ಸರ್ಪಕುಲದ ನಾಶಕ್ಕಾಗಿ ಪಣತೊಟ್ಟು ಮುಂದೆ ಸರ್ಪ ಸತ್ರಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಲ್ಲಿ ಅಗಣಿತ ಸಂಖ್ಯೆಯ ಸರ್ಪಗಳು ಗುಂಪುಗುಂಪಾಗಿ ಅಗ್ನಿಗೆ ಆಹುತಿಯಾಗುತ್ತವೆ. ನಂತರದಲ್ಲಿ ಈ  ಸರ್ಪಹತ್ಯಾ ದೋಷದ ನಿವಾರಣೆಗಾಗಿ ಜನಮೇಜಯ ಮಹಾರಾಜನಿಂದ ನಿರ್ಮಿಸಲ್ಪಟ್ಟ ೧೦೧ ವಿಷ್ಣು ದೇಗುಲಗಳ ಪೈಕಿ ಶ್ರೀ ಗಡಿದಂ ಕ್ಷೇತ್ರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯವು ಒಂದು ಎಂಬುದು ಈ ಸ್ಥಳದ ಮಹಾತ್ಮೆಯಾಗಿದೆ.

ಇಲ್ಲಿನ ಇನ್ನೊಂದು ಸ್ಥಳ ಪುರಾಣದ ಪ್ರಕಾರ ಈ ಪ್ರದೇಶವು ಹಿಂದೆ ದಂಡಕಾರಣ್ಯವಾಗಿತ್ತು. ಕುರುವಂಶಸ್ಥನೂ ಪಾಂಡವರಲ್ಲೊಬ್ಬನೂ ಆದ ಭೀಮಸೇನನ ಪುತ್ರ ಘಟೋತ್ಕಚನು ಇಲ್ಲಿನ ಬೆಟ್ಟದಲ್ಲಿ ವಾಸವಾಗಿದ್ದನು. ಬೋಳಾದ ಅವನ ತಲೆಯು ಗಡಿಗೆಯಂತಿದ್ದುದರಿಂದ ಆ ಸ್ಥಳವು `ಗಡಿದಂ’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು ಎಂದೂ ಹೇಳುತ್ತಾರೆ.

ಪಂಚರಾತ್ರಾಗಮಗಳ ಪ್ರಕಾರ ನಿತ್ಯ ಪೂಜೆಗಳನ್ನು ಶ್ರೀ ಲಕ್ಷ್ಮೀ ವೆಂಕಟೇಶ್ವರನ ರೂಪದಲ್ಲಿ ಭಗವಂತನು ಇಲ್ಲಿ ಸ್ವೀಕರಿಸುತ್ತಾ ಅನುದಿನವೂ ಅನೇಕ ಭಕ್ತರ ಅಭೀಷ್ಟೆಗಳನ್ನು ನೆರವೇರಿಸುತ್ತಾನೆ. ವೈಶಾಖ, ಆಷಾಢ, ಕಾರ್ತಿಕ ಹಾಗೂ ಶ್ರಾವಣ ಮಾಸಗಳಲ್ಲಿ ವಿಶೇಷ ರೀತಿಯ ಪೂಜಾ ಕೈಂಕರ್ಯಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಇಲ್ಲಿನ ಭೂದೇವಿ ಹಾಗೂ ನೀಳಾದೇವಿಯರ ವಿಗ್ರಹಗಳನ್ನು ಚೋಳ ಹಾಗೂ ಹೊಯ್ಸಳ ರಾಜರು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದ್ದು ದೇವಾಲಯದ ಗೋಡೆಗಳ ಮೇಲೆ  ಇದಕ್ಕೆ ಸಂಬಂಸಿದ ಶಿಲಾಶಾಸನಗಳು ಇಂದಿಗೂ ಸಹಾ ಕಂಡುಬರುತ್ತವೆ.

ಪ್ರಶಾಂತ ವಾತಾವರಣದಲ್ಲಿರುವ ಈ ದೇವಾಲಯವು ಒಟ್ಟಿನಲ್ಲಿ ಭಕ್ತರ ಭಾವನೆಗಳಿಗೆ ಮುದ ನೀಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
Leave a Reply

Your email address will not be published. Required fields are marked *