Search
Monday 18 November 2019
  • :
  • :

ಗದುಗಿನ ವೀರನಾರಾಯಣ

ಪ್ರಸಿದ್ಧ ಪುಣ್ಯ ಕೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ.

ಸ್ಥಳ ಪುರಾಣ

ಬ್ರಹ್ಮನ ಮಾನಸ ಪುತ್ರರಾದ ಕೃತಮುನಿಗಳು ಇಲ್ಲಿ ಧ್ಯಾನ, ಯಜ್ಞ ಮಾಡಿಕೊಂಡಿದ್ದರು. ಆದರೆ ದುಷ್ಟರು ಅದಕ್ಕೆ ಅಡ್ಡಿ ಉಂಟುಮಾಡುತ್ತಿದ್ದರು. ಇದನ್ನು ತಾಳಲಾರದೆ ಮುನಿಗಳು ಹಿಮಾಲಯ ಪರ್ವತಕ್ಕೆ ಹೋಗಿ ಉಗ್ರ ತಪಸ್ಸು ಕೈಗೊಂಡರು. ಗದುಗಿನ ನಾರಾಯಣನನ್ನು ಧ್ಯಾನಿಸಿದರು. ಆಗ ಗದುಗಿನ ನಾರಾಯಣ ಪ್ರತ್ಯಕ್ಷನಾಗಿ “ನಿನಗೇನು ವರ ಬೇಕು” ಎಂದು ಕೇಳಿದ. “ದುಷ್ಟರಿಂದ ನಮಗೆ ತೊಂದರೆಯಾಗಿದೆ. ನೀನೇ ಬಂದು ಸ್ವತಃ ಪರಿಹಾರ ಮಾಡು” ಎಂದು ಕೃತ ಮುನಿಗಳು ಉತ್ತರಿಸಿದರು. ಆಗ ವಿಷ್ಣುವು ಸ್ವತಃ ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ  ಅವತಾರ ತಾಳಿ ದುಷ್ಟರ ಸಂಹಾರ ಮಾಡಿ ವೀರ ನಾರಾಯಣ ಎಂದು ಪ್ರಸಿದ್ಧನಾದ. ಅಲ್ಲದೆ ದುಷ್ಟ ನಿಗ್ರಹ ಶಿಷ್ಟ ರಕ್ಷಕನಾಗಿ ಇಲ್ಲಿ ನೆಲೆಸಿದ್ದಾನೆ.

ಪೂರ್ವಜರು ಇಲ್ಲಿ ಪೂಜೆ ಮಾಡುವಾಗ ಮರಳು, ಶಂಖ ಸ್ವಾಮಿಯ ಪಾದದ ಹತ್ತಿರ ಕಾಣುತ್ತಿತ್ತಂತೆ. ಪಾದಪೂಜೆ ಮಾಡಿ ಹೋದ ಅನಂತರ ಅಲ್ಲಿ ತೇವಾಂಶ ಇರುತ್ತಿತ್ತು. ಅಂದರೆ ಇಲ್ಲಿ, ಭಗವಂತನ ಪಾದದ ಬಳಿ ಗುಪ್ತ ಗಂಗೆ ಇದ್ದಾಳೆ. ಪ್ರಭುವು ಇಲ್ಲಿಗೆ ಗಂಗಾ ಸಮೇತನಾಗಿ ಬಂದಿದ್ದಾನೆ ಎಂದು ನಂಬಲಾಗಿದೆ. ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ್ಮೀದೇವಿ ಇದ್ದಂತೆ ಇಲ್ಲೂ ಲಕ್ಷ್ಮೀದೇವಿ ಇದ್ದಾಳೆ. ಎಡಗಡೆ ಲಕ್ಷ್ಮೀದೇವಿ. ಬಲಗಡೆ ಗರುಡವಾಹನ. ಸ್ವತಃ ಬ್ರಹ್ಮ ದೇವರೇ ಪೂಜೆ ಮಾಡಿದ್ದಾರೆ. ಇಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನವಿದ್ದರೂ ವೀರ ನಾರಾಯಣನಿಗೇ ಮೊದಲ ಪೂಜೆ. ವಿಗ್ರಹವು ಸ್ವಯಂಭೂ ಮೂರ್ತಿಯಾಗಿದ್ದು ಭಗವಂತ ಇಲ್ಲಿ ಅವತರಿಸಿದ್ದು ದ್ವಾಪರ ಯುಗದಲ್ಲಿ.

೧೨ನೇ ಶತಮಾನದಲ್ಲಿ, ರಾಜ ವಿಷ್ಣುವರ್ಧನನ ಕಾಲದಲ್ಲಿ ಮಂದಿರ ನಿರ್ಮಾಣವಾಯಿತು. ರಾಜನ ಹೆಂಡತಿಗೆ ಕುಷ್ಠರೋಗ ಬಂದಾಗ, ಗುರುಗಳ ಆಣತಿಯಂತೆ ದೊರೆ ವಿಷ್ಣುವರ್ಧನನು ಐದು ದೇವಸ್ಥಾನ ಕಟ್ಟಿಸಲು ಮುಂದಾದನು. ಆಗ ಗದುಗಿನ ವೀರ ನಾರಾಯಣ, ಮೇಲುಕೋಟೆ ಚಲುವ ನಾರಾಯಣ, ಬೇಲೂರಿನ ಚನ್ನಕೇಶವ, ತಲಕಾಡು ಕೀರ್ತಿನಾರಾಯಣ, ತೊಂಡನೂರಿನ ನಂಬಿನಾರಾಯಣ ದೇವಾಲಯಗಳು ನಿರ್ಮಾಣವಾದವು.

ಈ ಮಂದಿರವು ವಿವಿಧ ವಾಸ್ತುಶಿಲ್ಪದ ಶೈಲಿಯನ್ನು ಹೊಂದಿದೆ. ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರ ಕಾಲದ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು. ವೀರ ನಾರಾಯಣನ ವಿಗ್ರಹವು ಅತ್ಯಂತ ಸುಂದರವಾಗಿದ್ದು, ನಿಂತ ಭಂಗಿಯಲ್ಲಿದೆ. ನಾಲ್ಕು ಕರಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ. ವೀರ ಕಚ್ಚೆಯು ಯುದ್ಧಕ್ಕೆ ಹೊರಟ ಶೈಲಿಯನ್ನು ಬಿಂಬಿಸುತ್ತದೆ.

ಕುಮಾರವ್ಯಾಸ ಭಾರತ

ಖ್ಯಾತ ಕವಿ ಕುಮಾರವ್ಯಾಸ ಗದುಗಿನ ವೀರ ನಾರಾಯಣನಷ್ಟೇ ಪ್ರಸಿದ್ಧ. ನಾರಣಪ್ಪ ಎಂಬ ಹೆಸರಿದ್ದರೂ ಕುಮಾರವ್ಯಾಸ ಎಂದೇ ಜನಪ್ರಿಯ. ಇಲ್ಲಿ ೧೪ನೇ ಶತಮಾನದಲ್ಲಿ ನೆಲೆಸಿದ್ದ ಅವನು ಭಗವಂತನ ಧ್ವನಿಯನ್ನು ಆಲಿಸಿ ಭಾರತ ಬರೆದನೆಂದು ಪ್ರತೀತಿ ಇದೆ. ವೀರ ನಾರಾಯಣನು ಮಹಾ ಭಾರತದ ಕತೆ ಹೇಳುತ್ತಾ ಹೋದ ಹಾಗೆಯೇ ಕುಮಾರವ್ಯಾಸನು ಬರೆಯುತ್ತಿದ್ದನಂತೆ. ಭಗವಂತನ ವಿಗ್ರಹದ ಹಿಂದಿನಿಂದ ಧ್ವನಿ ಬರುತ್ತಿತ್ತಂತೆ. ದೇವರು ಒಂದು ಷರತ್ತು ಹಾಕಿದ್ದನಂತೆ. ಕುಮಾರವ್ಯಾಸನು ಧ್ವನಿ ಮಾತ್ರ ಕೇಳಬೇಕು, ಅದು ಯಾರೆಂದು ನೋಡುವ ಸಾಹಸ ಮಾಡಬಾರದು. ಹೀಗೆ ಕತೆ ಬರೆಯುವ ಕೈಂಕರ್ಯ ಅನೇಕ ವರ್ಷಗಳ ಕಾಲ ನಡೆಯಿತು. ೧೦ ಪರ್ವ ಪೂರ್ಣಗೊಂಡಿತು. ಕುಮಾರವ್ಯಾಸನಿಗೆ ಕುತೂಹಲ ತಡೆಯಲಾಗಲಿಲ್ಲ. ಅವನು ಕತೆ ಹೇಳುತ್ತಿದ್ದವನನ್ನು ನೋಡಲು ಮುಂದಾದ. ಭಗವಂತನೇ ಕತೆ ಹೇಳುತ್ತಿದ್ದನಂತೆ! ಅಷ್ಟೇ ಅಲ್ಲ, ಮಹಾ ಭಾರತ ಯುದ್ಧದ ದೃಶ್ಯವನ್ನೂ ಅವನು ಕಂಡನಂತೆ! ಆದರೆ ಕವಿಯು ಷರತ್ತು ಉಲ್ಲಂಘಿಸಿದ್ದರಿಂದ ದೇವರು ಕಣ್ಮರೆಯಾದನಂತೆ. ಹೀಗಾಗಿ ಕತೆ ಅಲ್ಲಿಗೇ ನಿಂತಿತು.

ಕುಮಾರವ್ಯಾಸನ ಕಥಾಮಂಜರಿಯಲ್ಲಿ ಗದಾಯುದ್ಧದವರೆಗೆ ಮಾತ್ರವಿದೆ. ಅವನ ನಿಧನಾನಂತರ, ಅನೇಕ ವರ್ಷಗಳ ಬಳಿಕ ಹುಟ್ಟಿದ ಶ್ರೇಷ್ಠ ಕವಿ ಲಕ್ಮೀಶನು ಅಶ್ವಮೇಧ ಪರ್ವವನ್ನು ತನ್ನ ‘ಜೈಮಿನಿ ಭಾರತ’ ದಲ್ಲಿ ಪೂರ್ಣಗೊಳಿಸಿದ ಎನ್ನಲಾಗಿದೆ.

ಮಂದಿರದಲ್ಲಿ ಕುಮಾರವ್ಯಾಸ ಸ್ತಂಭವಿದೆ. ಇದು ಕುಮಾರವ್ಯಾಸ ಮಹಾಭಾರತವನ್ನು ಬರೆದಂತಹ ಸ್ಥಳ. ಮೂಲ ಮಹಾಭಾರತವನ್ನು ವ್ಯಾಸರು ಸಂಸ್ಕೃತದಲ್ಲಿ ಬರೆದಿದ್ದಾರೆ. ಇವರು ಹಳಕನ್ನಡದಲ್ಲಿ  ಬರೆದಿದ್ದಾರೆ. ಕುಮಾರವ್ಯಾಸ ವಿಶೇಷ ದಿನಗಳಲ್ಲಿ ಬಂದು ದೇವಾಲಯದ ಹಿಂಭಾಗದಲ್ಲಿರುವ ಹೊಂಡದಲ್ಲಿ ಸ್ನಾನ ಮಾಡಿ ಒದ್ದೆಯಲ್ಲೇ ಮಹಾಭಾರತ ಬರೆಯುತ್ತಿದ್ದನಂತೆ. ಈಗ ಹೊಂಡ ಬತ್ತಿದೆ.

ಉತ್ಸವ ವಿಶೇಷ : ಇಲ್ಲಿ ನವರಾತ್ರಿ ಉತ್ಸವದಲ್ಲಿ ಪ್ರತಿ ದಿನವೂ ಬೇರೆ ಬೇರೆ ವಾಹನೋತ್ಸವಗಳು ನಡೆಯುತ್ತವೆ. ಗೋಕುಲಾಷ್ಟಮಿಯನ್ನು ವಿಶೇಷವಾಗಿ ಆಚರಿಸಲಾಗುವುದು. ವಿಶೇಷ ಪ್ರಸಾದ ವಿನಿಯೋಗ ನಡೆಯುತ್ತದೆ. ಪ್ರತಿದಿನ ದೇವರಿಗೆ ಅಭಿಷೇಕ ಉಂಟು.

ಮಂದಿರದ ಸಮಯ : ಪ್ರತಿದಿನ ಬೆಳಗ್ಗೆ ೬-೧೨ ಮತ್ತು  ಸಂಜೆ ೫-೮ ಗಂಟೆವರೆಗೆ.

ದೇವರ ಪ್ರಣಾಮ ಮಂತ್ರ : ಶ್ರೀ ವೀರನಾರಾಯಣ ದೇವಮ್, ಲಕ್ಷ್ಮೀ ಗರುಡ ಶೋಭಿತಮ್, ಚಕ್ರ ಶಂಖ ಅಂಬುಜಾದಾರಮ್, ವನಮಾಲ ವಿಭೂಷಿತಮ್.

ಹುಬ್ಬಳ್ಳಿಯಿಂದ ೬೦ ಕಿ.ಮೀ. ದೂರದಲ್ಲಿರುವ ಗದಗಕ್ಕೆ ರೈಲು ಮತ್ತು ಬಸ್‌ಗಳಿಂದ ಹೋಗಬಹುದು.
Leave a Reply

Your email address will not be published. Required fields are marked *