Search
Monday 18 November 2019
  • :
  • :

ಶ್ರೀ ಕ್ಷೇತ್ರ ಚೆಂಡೂರು

ಹಿಮಾಲಯಂ ಸಮಾರಾಭ್ಯಾಂ ಯಾವದ್ಬಿಂದು ಸರೋವರಂ |

ತ್ವಂ ಭೂಮಿಂ ದೇವ ನಿರ್ಮಿತಂ ಪುಣ್ಯ ಭೂಮಿಂ ಪ್ರಚಕ್ಷತೇ ||

      ಎಂಬ ಬ್ರಹ್ಮಾಂಡ ಪುರಾಣದ ಆಧಾರದ ಮೇಲೆ ನಮ್ಮ ಭರತ ಭೂಮಿಯು ಕಾಶಿಯಿಂದ ಕನ್ಯಾಕುಮಾರಿಯವರೆಗೂ ಅನೇಕ ಪುಣ್ಯಕ್ಷೇತ್ರ, ಪುಣ್ಯನದಿ, ಪುಣ್ಯಸರೋವರಗಳಿಂದ ಕೂಡಿದೆ. ದೇವತೆಗಳಿಂದ ನಿರ್ಮಿತವಾದ ಪುಣ್ಯಭೂಮಿಯಾಗಿದೆ.

ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯಿಂದ ದಕ್ಷಿಣಕ್ಕೆ ಕೇವಲ ೧೨ ಕಿಲೋ ಮೀಟರುಗಳ ಅಂತರದಲ್ಲಿರುವ ಪುಟ್ಟ ಗ್ರಾಮವೇ ಶ್ರೀ ಚೆಂಡೂರು ಕ್ಷೇತ್ರ. ಇದು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು ೯೦ ಕಿಲೋ ಮೀಟರು ದೂರದಲ್ಲಿರುವ ಪವಿತ್ರ ಶ್ರೀನಿವಾಸ ಕ್ಷೇತ್ರವಾಗಿದೆ. ಇಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಆಲಯವು ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು ನೇತ್ರಾನಂದವನ್ನು ನೀಡುತ್ತದೆ. ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಈ ಭವ್ಯ ದೇವಾಲಯವು ವಿಶೇಷವಾದ ವೈಶಿಷ್ಟ್ಯವನ್ನು ಸಹಾ ಹೊಂದಿದೆ ಎಂಬುದು ಇಲ್ಲಿನ ಸ್ಥಳ ಪುರಾಣದಿಂದ ಸ್ಪಷ್ಟವಾಗುತ್ತದೆ.

ಪೂರ್ವದಲ್ಲಿ  ಭೃಗುಋಷಿಗೆ ವೈಕುಂಠವಾಸಿ ಶ್ರೀನಿವಾಸನು ಮಾಡಿದ ಆತಿಥ್ಯವನ್ನು ಲಕ್ಷೀದೇವಿಯು ಸ್ವೀಕರಿಸದೆ ಸ್ವಾಮಿಯನ್ನು ಕುರಿತು ನಾನು ಈಗಲೇ ಕರವೀರಪುರಕ್ಕೆ ಹೋಗುತ್ತೇನೆ, ಅಲ್ಲಿ ನೆಲೆಸುತ್ತೇನೆ ಎಂದು ಶ್ರೀ ವಿಷ್ಣುವಿನೊಡನೆ ಪ್ರೇಮಕಲಹವನ್ನು ಮಾಡಿ ಕರವೀರಪುರಕ್ಕೆ ಹೊರಟು ಅಲ್ಲಿಯೇ ನೆಲೆಸುತ್ತಾಳೆ. ಲಕ್ಷೀದೇವಿಯ ಅಗಲಿಕೆಯಿಂದ ಬೇಸರಗೊಂಡ ಶ್ರೀನಿವಾಸನು ವೈಕುಂಠದಿಂದ ಬಂದು ಶ್ರೀ ವೆಂಕಟಾದ್ರಿ ಪರ್ವತದಲ್ಲಿನ ಒಂದು ಹುತ್ತದಲ್ಲಿ ನೆಲೆಸುತ್ತಾನೆ. ಆ ಹುತ್ತದಲ್ಲಿದ್ದ ಶ್ರೀನಿವಾಸನಿಗೆ ರಾಜನ ಮನೆಯ ಹಸು ಬಂದು ದಿನ ನಿತ್ಯ ಹಾಲು ಕರೆಯುತ್ತಿರುತ್ತದೆ. ಇದನ್ನು ಕಂಡ ಗೋಪಾಲಕ ಆ ಹಸುವನ್ನು ಕೊಡಲಿಯಿಂದ ಹೊಡೆಯಲು ಹೋಗುತ್ತಾನೆ. ಹಸು ತಪ್ಪಿಸಿಕೊಳ್ಳುತ್ತದೆ. ಆ ಪೆಟ್ಟು ಶ್ರೀನಿವಾಸನಿಗೆ ಬೀಳುತ್ತದೆ ಎಂಬ ಮಾಹಿತಿಯು ಭವಿಷ್ಯೋತ್ತರ ಪುರಾಣದಲ್ಲಿರುವಂತೆ ಚೆಂಡೂರಿನಿಂದ ೨ ಕಿ.ಮೀ. ದೂರದಲ್ಲಿರುವ ಕೋರೇನಹಳ್ಳಿ ಎಂಬ ಗ್ರಾಮದ ಒಬ್ಬ ರೈತನ ಹೊಲದಲ್ಲಿರುವ ಹುತ್ತದಲ್ಲಿ ಶ್ರೀ ವೆಂಕಟೇಶ್ವರನು ಸಾಲಿಗ್ರಾಮರೂಪದಲ್ಲಿ  ಇದ್ದನು ಎಂದು ಪ್ರತೀತಿ. ಆ ರೈತನ ಮನೆಯ ಹಸು ಹುತ್ತದಲ್ಲಿರುವ ಸ್ವಾಮಿಗೆ ನಿತ್ಯ ಹಾಲು ಕೊಡುತ್ತಿರುತ್ತದೆ. ಇದನ್ನು ಗಮನಿಸಿದ ರೈತ ಆ ಹಸುವಿಗೆ ಹೊಡೆಯುತ್ತಾನೆ. ಹಸು ಪೆಟ್ಟಿನಿಂದ ತಪ್ಪಿಸಿಕೊಂಡು ಆ ಪೆಟ್ಟು ಸಾಲಿಗ್ರಾಮಕ್ಕೆ ಬಿಳುತ್ತದೆ. ಏಟು ಬಿದ್ದ ಜಾಗವನ್ನು ಸಾಲಿಗ್ರಾಮದಲ್ಲಿ ಗಮನಿಸಬಹುದು. ಆ ದಿನ ರಾತ್ರಿ ಚೆಂಡೂರಿನ ಬ್ರಾಹ್ಮಣನೊಬ್ಬನಿಗೆ ಶಾಲಿಗ್ರಾಮ ರೂಪದಲ್ಲಿರುವ ಶ್ರೀವೆಂಕಟೇಶ್ವರನು ಕನಸಾಗಿ ತಾನಿರುವ ಹುತ್ತದ ಜಾಗವನ್ನು ಹೇಳಿ ಬೆಳಗ್ಗೆ ಬಂದು ಊರಿನೊಳಗೆ ತೆಗೆದುಕೊಂಡು ಹೋಗುವಂತೆ ಸೂಚಿಸುತ್ತಾನೆ. ಆ ಬ್ರಾಹ್ಮಣ ತಾನು ಕಂಡ ಕನಸನ್ನು ಊರಿನ ಹಿರಿಯರಿಗೆ ಹೇಳುತ್ತಾನೆ. ಬೆಳಗ್ಗೆ ಊರಿನ ಹಿರಿಯರ ತಂಡ ಆ ಹುತ್ತದೆಡೆಗೆ ಹೋಗುತ್ತದೆ. ಹುತ್ತದ ಒಳಗಿರುವ ಸಾಲಿಗ್ರಾಮವನ್ನು  ತೆಗೆದು ಎತ್ತಿನಗಾಡಿಯಲ್ಲಿ ಇಟ್ಟುಕೊಂಡು ಚೆಂಡೂರಿನೆಡೆಗೆ ಬರುತ್ತಾರೆ. ಚೆಂಡೂರಿನ ಪಶ್ಚಿಮ ಭಾಗದಲ್ಲಿ ಆ ಗಾಡಿಯು ನಿಂತು ಹೋಗುತ್ತದೆ. ಆಗ ಆ ಸಾಲಿಗ್ರಾಮವನ್ನು ಅಲ್ಲಿಯೇ ಇಟ್ಟುಬಿಡುತ್ತಾರೆ. ಒಂದೇ ರಾತ್ರಿಯಲ್ಲಿ ಗರ್ಭಗುಡಿಯನ್ನು ನಿರ್ಮಿಸಿ ಮಾಧ್ವಮನೆತನಕ್ಕೆ ಪೂಜೆಯನ್ನು ಒಪ್ಪಿಸುತ್ತಾರೆ. ಇದು ಊರಿನ ಹಿರಿಯರು ಹೇಳುವ ಇತಿಹಾಸ. ಈ ಸಾಲಿಗ್ರಾಮದ ವಿಶೀಷ ಏನೆಂದರೆ ಇದು ದಿನೇ ದಿನೇ ಬೆಳೆಯುತ್ತಾ ಇರುವುದು. ಸಾಲಿಗ್ರಾಮದಲ್ಲಿ ಕಣ್ಣು ಮೂಗು ಬಾಯಿಯನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ನಾವು ಗರ್ಭಗುಡಿಯ ಹೊರಗೆ ಜಯ ವಿಜಯ ದ್ವಾರಪಾಲಕರನ್ನೂ, ಮೂಲ ದೇವರ ಕೆಳಗೆ ಗರುಡ ಹಾಗೂ ದೇವರ ಬಲಭಾಗಕ್ಕೆ ಮುಖ್ಯಪ್ರಾಣದೇವರನ್ನೂ. ಒಂದು ಗಣಪತಿ ವಿಗ್ರಹವನ್ನೂ, ದೇವಾಲಯದ ಹೊರಾಂಗಣದಲ್ಲಿ  ಶೇಷ ದೇವರ ಹುತ್ತವನ್ನು ಕಾಣಬಹುದು.  ವ್ಯಾಸರಾಯ ಸ್ವಾಮಿಗಳು ತಾವು ಸಂಚಾರ ಮಾಡುತ್ತಿರುವಾಗ ಚೆಂಡೂರಿಗೆ ಬಂದು ಇಲ್ಲಿ ನೆಲೆಸಿ ಶ್ರೀ ಸಾಲಿಗ್ರಾಮ ರೂಪ ಶ್ರೀನಿವಾಸನನ್ನು ತಾವೇ ಕೆಲಕಾಲ ಅರ್ಚಿಸಿ ಅನಂತರ ತಮ್ಮ ಶಿಷ್ಯರಾದ ಕಾಶೀ ವಲ್ಲಭಾಚಾರ್ಯರನ್ನು ಇಲ್ಲಿ ಸ್ಥಿರವಾಗಿ ನೆಲೆಸುವಂತೆ ಅನುಕೂಲಗಳನ್ನು ಮಾಡಿಕೊಟ್ಟು ಸಂಚಾರ ಮುಂದುವರಿಸುತ್ತಾರೆ. ಈ ದೇವಸ್ಥಾನವು ವ್ಯಾಸರಾಯರ ಕಾಲದ್ದು ಎಂದರೆ ಸುಮಾರು ೪೮೦-೫೦೦ ವರ್ಷಗಳ ಹಿಂದಿನದು. ಒಟ್ಟಿನಲ್ಲಿ ಈ ಶ್ರೀನಿವಾಸದೇವರು ಭಕ್ತಕೋಟಿಯನ್ನು ಉದ್ಧಾರಮಾಡುತ್ತಾ ನಿತ್ಯ ಪೂಜಾ ಕೈಂಕರ್ಯಗಳನ್ನು ಮಾಧ್ವ ಸಂಪ್ರದಾಯದಂತೆ ನಡೆಸಿಕೊಂಡು ಶ್ರೀ ಚೆಂಡೂರು ಕ್ಷೇತ್ರದಲ್ಲಿ ನೆಲೆಸಿದ್ದಾನೆ.
Leave a Reply

Your email address will not be published. Required fields are marked *